Gopal Bakrey

ಗೋಪಾಲ್ ಬಾಕ್ರೆ ವಿಧಿವಶ

ಸ್ವಾತಂತ್ರ್ಯ ಪೂರ್ವದಲ್ಲೇ ಮಂಗಳೂರಿನ ಸಂಘದ ಪ್ರಚಾರಕರಾಗಿ ಕಡಲತಡಿಯಲ್ಲಿ ಆರೆಸ್ಸೆಸ್‌ನ ಬೇರುಗಳನ್ನ ಬಲಪಡಿಸಿದ್ದ ಹಿರಿಯ ಪ್ರಚಾರಕರಾದ ಗೋಪಾಲ್ ಬಾಕ್ರೆ (90) ನಿನ್ನೆ ವಿಧಿವಶರಾಗಿದ್ದಾರೆ.

Gopal Bakrey

1922ರಲ್ಲಿ ನಾಗಪುರದಲ್ಲಿ ಜನಿಸಿದ್ದ ಗೋಪಾಲ ಬಾಕ್ರೆಯವರು ಸಂಘದ ಪ್ರಾರಂಭದ ವರ್ಷಗಳ ಕಿಶೋರ ಸ್ವಯಂಸೇವಕರಲ್ಲೊಬ್ಬರಾಗಿದ್ದವರು.

ಮಂಗಳೂರಿನ ಜಿಲ್ಲಾ ಪ್ರಚಾರಕರ ಹೊಣೆಯನ್ನು ೧೯೪೫ರ ಜೂನ್‌ನಲ್ಲಿ ಶ್ರೀ ಗೋಪಾಲ ಬಾಕ್ರೆಯವರು ವಹಿಸಿದರು. ನಾಗಪುರ ಮೂಲದವರಾದ ಇವರು ಮ್ಯಾಟ್ರಿಕ್ ನಂತರ ಎಲ್.ಎಂ.ಪಿ. ಶಿಕ್ಷಣಕ್ಕಾಗಿ ಸೇರಿದ್ದರು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರಕರು ಬೇಕಾಗಿದ್ದಾರೆ ಎಂದು ೧೯೪೨ ರಲ್ಲಿ ಶ್ರೀ ಗುರೂಜಿಯವರು ನೀಡಿದ್ದ ವಿಶೇಷ ಕರೆಗೆ ಓಗೊಟ್ಟು ನಾಗಪುರದಿಂದ ಹೊರಟಿದ್ದ ದೊಡ್ಡ ಪ್ರಮಾಣದ ತರುಣ ಪ್ರಚಾರಕರ ತಂಡದಲ್ಲಿ ಇವರೂ ಒಬ್ಬರು. ಪ್ರಚಾರಕರಾಗಿ ಇವರು ಹೊರಟಿದ್ದುದು ಸ್ವಪರಿವಾರದಲ್ಲಿ ತೀವ್ರ ಅಸಮಾಧಾನ, ವಿರೋಧಕ್ಕೆ ಕಾರಣವಾಗಿದ್ದವು. ಆದರೆ ಅದನ್ನು ಅಲಕ್ಷಿಸಿ ಹೊರಟಿದ್ದ ಅವರನ್ನು ಕಾರವಾರಕ್ಕೆ ಪ್ರಚಾರಕರಾಗಿ ನಿಯುಕ್ತಿಸಲಾಗಿತ್ತು. ಶ್ರೀ ನೀಲಕಂಠ ಜಾಮದಾರ ಸಹ ಇದೇ ತಂಡದಲ್ಲಿದ್ದವರು.

1945ರ ಶಿಕ್ಷಾ ವರ್ಗದ ನಂತರ ಕರಾವಳಿಯ ಎರಡೂ ಜಿಲ್ಲೆಗಳನ್ನು ಸೇರಿಸಿ ಸಂಘದ ಒಂದೇ ಘಟಕವಾಗಿ ಮಾಡಲಾಯಿತು. ಕರ್ನಾಟದಲ್ಲಿ ಆಗ ಇನ್ನೂ ಸಂಘದ ವಿಭಾಗಗಳ ರಚನೆ ಆಗಿರಲಿಲ್ಲ. ಆದರೂ ಇವೆರಡೂ ಜಿಲ್ಲೆಗಳನ್ನು ಮಾತ್ರ ಒಂದು ವ್ಯವಸ್ಥೆಗೆ ಒಳಪಡಿಸಿ, ಮಂಗಳೂರು ವಿಭಾಗವಾಗಿ ಮಾಡಿ ಶ್ರೀ ಗೋಪಾಲ ಬಾಕ್ರೆಯವರು ಸುಪರ್ದಿಗೆ ವಹಿಸಲಾಯಿತು. ಹೀಗಾಗಿ ಅವರ ಕೇಂದ್ರ ಕಾರವಾರದಿಂದ ಮಂಗಳೂರಿಗೆ ಬದಲಾಯಿತು. ಹೊಸ ವ್ಯವಸ್ಥೆಯಲ್ಲಿ ಅವರ ಜತೆಯಲ್ಲಿ ದಕ್ಷಿಣ ಕನ್ನಡದಲ್ಲಿದ್ದ ಇನ್ನಿತರ ಪ್ರಚಾರಕರೆಂದರೆ ವಿನಾಯಕ ಶೆಣೈ, ಕೇಶವ ಶೆಣೈ ಮತ್ತು ಮಾಂಬಾಡಿ ವೆಂಕಟ್ರಮಣ ಭಟ್ ಅವರು. ಆ ವರ್ಷ ಮಂಗಳೂರಿನಿಂದ ಹೊರಡ ಇನ್ನೋರ್ವ ಪದವಿ ಶಿಕ್ಷಿತ ಮೊಟ್ಟಮೊದಲ ಪ್ರಚಾರಕ ಶ್ರೀ ಅಚ್ಯುತ ಪ್ರಭು ಅವರು ಗೋಪಾಲ ಬಾಕ್ರೆ ಅವರಿಗೆ ಸಹಾಯಕರಾಗಿ ಕಾರವಾರ ಜಿಲ್ಲೆಯಲ್ಲಿ ನಿಯುಕ್ತರಾಗಿದ್ದರು.

ಶ್ರೀ ಗೋಪಾಲ ಬಾಕ್ರೆಯವರು ಮಂಗಳೂರಿಗೆ ಮೊದಲು ಬಂದಿದ್ದುದು 1944 ರ ಪ್ರಾಂತೀಯ ಬೈಠಕ್ ಸಂದರ್ಭದಲ್ಲಿ. ಈ ಬೈಠಕ್‌ನಲ್ಲಿದ್ದಾಗಲೇ ಟೈಫಾಡ್ ಪೀಡಿತರಾದ ಅವರು ಮುಂದೆ ಒಂದೆರಡು ತಿಂಗಳ ಕಾಲ ಮಂಗಳೂರಲ್ಲೇ ಇದ್ದು ವಿಶ್ರಾಂತಿ ಪಡೆಯಬೇಕಾಯಿತು. ಹೀಗೆ ದಕ್ಷಿಣ ಕನ್ನಡದ ಜತೆ ಆರಂಭವಾದ ಅವರ ಸಂಬಂಧ ಮುಂದೆ ೧೯೫೩ ರ ಸಂಘ ಶಿಕ್ಷಾ ವರ್ಗದವರೆಗೆ ಮುಂದುವರೆಯಿತು.

1958ರಲ್ಲಿ ಪಾಟ್ನಾಕ್ಕೆ ಪ್ರಚಾರಕರಾಗಿ ತೆರಳಿದ ಗೋಪಾಲಬಾಕ್ರೆಯವರು, 1960ರ ವೇಳೆ ಪ್ರಚಾರಕ್ ಜವಾಬ್ದಾರಿಯಿಂದ ನಿವೃತ್ತರಾಗಿ ಗೃಹಸ್ಥಾಶ್ರಮ ಸ್ವೀಕರಿಸಿದ್ದರು. ಅಹಮ್ಮದಾಬಾದ್-ಪುಣೆಯಲ್ಲಿ ನೆಲೆಸಿದ್ದ ಗೋಪಾಲ್ ಬಾಕ್ರೆಯವರು ಕರ್ನಾಟಕದಲ್ಲಿ ಸಂಘಕಾರ‍್ಯ ಪ್ರಾರಂಭದಲ್ಲಿ ನೀಡಿದ ಕೊಡುಗೆಗಾಗಿ ಸ್ವರಣೀಯರು.

ಆರೆಸ್ಸೆಸ್ ಮುಖಂಡರಾದ ಕೃ.ಸೂರ‍್ಯನಾರಾಯಣರಾವ್, ಮೈ.ಚ.ಜಯದೇವ್, ಚಂದ್ರಶೇಖರ ಭಂಡಾರಿ, ನಾಗಭೂಷಣ ಭಾಗವತ್, ಮಂಗೇಶ್ ಭೇಂಡೆ ಮೊದಲಾದವರು ಶೋಕ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published.

This site uses Akismet to reduce spam. Learn how your comment data is processed.