– ದೀಕ್ಷಿತ್ ನಾಯರ್, ಮಂಡ್ಯ

(ಗೋವಿಂದ ಪೈ ಅವರ ಜನ್ಮದಿನದ ಸವಿ ನೆನಪಿನಲ್ಲಿ ಈ ವಿಶೇಷ ಲೇಖನ)

ಅವರದ್ದು ಬೆಳ್ಳಿ ಬಣ್ಣದ ಕೂದಲು, ದಪ್ಪ ಮೀಸೆ, ಅಗಲ ಕನ್ನಡಕ ಮತ್ತು ಮಂದಸ್ಮಿತ ಮುಖ. ಅವರು ಕನ್ನಡದ ಮೊದಲ ರಾಷ್ಟ್ರಕವಿ ಎನಿಸಿಕೊಂಡವರು. ಮಾತೃಭಾಷೆ ಕೊಂಕಣಿಯಾದರೂ ಕನ್ನಡವನ್ನು ಹೃದಯದ ಭಾಷೆಯಾಗಿಸಿಕೊಂಡವರು. ಕನ್ನಡದ ಸಾಹಿತ್ಯ ಲೋಕವನ್ನು ಸಮರ್ಥವಾಗಿ ಆಳಿದವರು. ತಮ್ಮ ಹದ ಬೆರೆತ ಕವಿತೆಗಳಿಂದಲೇ ಕಾವ್ಯ ವಿದಗ್ಧ ರಸಿಕರ ಮನಸ್ಸನ್ನು ಗೆದ್ದವರು. ಕನ್ನಡಮ್ಮನ ಕೈಗೆ ಚಿನ್ನದ ಬಳೆಯನ್ನು ತೊಡಿಸಿದವರು. ಅವರು ಮತ್ತ್ಯಾರೂ ಅಲ್ಲ;
“ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ” ಎನ್ನುತ್ತಲೇ ತಮ್ಮ ಬದುಕಿನುದ್ದಕ್ಕೂ ಕನ್ನಡವನ್ನು ಓಂಕಾರವಾಗಿಸಿಕೊಂಡು ಸ್ತುತಿಸಿದ ಕನ್ನಡದ ಕಟ್ಟಾಳು ಗೋವಿಂದ ಪೈ.

ಗೋವಿಂದ ಪೈ ಅವರು ಕನ್ನಡಾಂಬೆಗೆ ಮತ್ತು ಕನ್ನಡಕ್ಕೆ ಸಿಕ್ಕಿದ ವರಪ್ರಸಾದ. ಕನ್ನಡವನ್ನು ಆಳಿದ ಬಹುತೇಕ ಕವಿಗಳಲ್ಲಿ ಗೋವಿಂದ ಪೈ ಗಟ್ಟಿಗರು ಹೌದು. ಶತಮಾನದ ಹಿಂದೆಯೇ ಪ್ರಾಸದ ಹಂಗಿಗೆ ಒಳಗಾಗದೆ ಲೀಲಾಜಾಲವಾಗಿ ಕವಿತೆಯನ್ನು ಕಟ್ಟಿ ಕನ್ನಡ ಕಾವ್ಯ ಲೋಕಕ್ಕೆ ಹೊಸ ದಿಕ್ಕು ತೋರಿದವರು. ಅಷ್ಟೇ ಅಲ್ಲ ಜಗತ್ತಿನ ಇತರೆ ಭಾಷೆಗಳೊಂದಿಗೆ ಕನ್ನಡದ ಸಂಸರ್ಗವನ್ನು ಬೆಳೆಸಿದವರಲ್ಲಿ ಪೈ ಮೊದಲಿಗರು. ಮತ್ತೂ ವಿಶೇಷವೆಂದರೆ; ಗೋವಿಂದ ಪೈ ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಪಾಂಡಿತ್ಯವನ್ನು ಸಾಧಿಸಿದ್ದರು. ಕನ್ನಡದ ಕವಿಗಳ ಮಟ್ಟಿಗೆ ಗೋವಿಂದ ಪೈ ಒಬ್ಬರೇ ಈ ಪರಿಯ ಭಾಷಾ ಜ್ಞಾನವನ್ನು ಸಂಪಾದಿಸಿದ್ದರು ಎಂಬುದನ್ನು ಘಂಟಾಘೋಷವಾಗಿ ಹೇಳಬಹುದು. ಪೈ ಅವರ ವಿಪುಲವಾದ ಸಾಹಿತ್ಯ ರಚನೆಗೆ ಅವರು ಸಿದ್ದಿಸಿಕೊಂಡಿದ್ದ ಇತರೆ ಭಾಷೆಗಳು ಕೂಡ ಪ್ರಭಾವ ಬೀರಿದ್ದಿರಬಹುದು.ಆದರೆ ಅವರ ಭಾಷಾ ಪಾಂಡಿತ್ಯ ಎಂದಿಗೂ ಅವರೊಳಗಿನ ಕನ್ನಡತನಕ್ಕೆ ಧಕ್ಕೆ ತರಲಿಲ್ಲ. ಕನ್ನಡವನ್ನು ರಕ್ತಗತವಾಗಿಸಿಕೊಂಡು, ಕನ್ನಡಕ್ಕಾಗಿ ದನಿಯಾಗಿ, ಕನ್ನಡವನ್ನು ಎತ್ತಿ ಹಿಡಿದು, ಕನ್ನಡಕ್ಕಾಗಿ ತುಡಿದು ಮತ್ತು ಮಿಡಿದು ಅಪ್ಪಟ ಕನ್ನಡಿಗನಾಗಿಯೇ ಉಳಿದುಕೊಂಡವರು.

“ನಾನು ಎರಡು ತಾಯಂದಿರ ಕೂಸು. ಕೊಂಕಣಿ ನನ್ನ ಹೆತ್ತ ತಾಯಿ, ಕನ್ನಡ ಸಾಕು ತಾಯಿ. ಆದರೆ ತಾಯಿಯ ಮೊಲೆಯಲ್ಲಿ ಹಾಲಿಲ್ಲ. ಕೊಂಕಣಿಯಲ್ಲಿ ಸಾಹಿತ್ಯವಿಲ್ಲ. ಆಕೆ ಆ ಬಗ್ಗೆ ನನ್ನನ್ನು ಕನ್ನಡದ ಮೊರೆಯಲ್ಲಿ ಹಾಕಿದಳು. ಈ ದಾಯಿಯಾದರೆ ಪಯಸ್ವಿನಿ. ಅಷ್ಟು ಕಾಲದಿಂದ ಎಷ್ಟೋ ಕವಿಗಳನ್ನು ಊಡಿಸಿಯೂ ಮತ್ತೂ ಬತ್ತದ, ದೇವರ ದ್ಯೆಯಿಂದ ಸರ್ವದಾ ಬತ್ತಬಾರದ ಸದಾಸ್ನುಹಿ. ತನ್ನ ಮೊಲೆಯನ್ನು ಆಕೆ ತಾಯಿಗೂ ಮಿಕ್ಕ ಅಳ್ತಿಯಿಂದ ನನಗೆ ಉಣಿಸಿದಳು. ಆಕೆಯ ಅಕ್ಕರೆಯ ಸಾಲವನ್ನೂ ಏಳೇಳು ಜನ್ಮಕ್ಕೂ ತೆತ್ತು ತೀರಿಸಲಾರೆ”.

ಗೋವಿಂದ ಪೈ ಅವರು ಕನ್ನಡವನ್ನು ಎಷ್ಟರಮಟ್ಟಿಗೆ ಪ್ರೀತಿಸಿದರು ಮತ್ತು ಆರಾಧಿಸಿದರು ಎಂಬುದಕ್ಕೆ ಅವರ ಮೇಲಿನ ಮಾತುಗಳೇ ಸಾಕ್ಷಿ. ಎಂದೂ ಬತ್ತದ ಅವರ ಕನ್ನಡದ ಪ್ರೇಮದಿಂದಾಗಿಯೇ ಏನೋ ಅವರು ಇಂದಿಗೂ ಕನ್ನಡ ಸಾಹಿತ್ಯ ಲೋಕದೊಳಗೆ ಚಿರಸ್ಥಾಯಿಯಾಗಿದ್ದಾರೆ. ಪೈ ಅವರನ್ನು ಪಕ್ಕಕ್ಕೆ ಸರಿಸಿ ಕನ್ನಡ ಸಾಹಿತ್ಯವನ್ನು ಅಭ್ಯಸಿಸುವುದು ನಿಜಕ್ಕೂ ಕಷ್ಟ ಸಾಧ್ಯ. ಏಕೆಂದರೆ ಗೋವಿಂದ ಪೈ ಕನ್ನಡ ಸಾಹಿತ್ಯದ ಒಂದು ಸುವರ್ಣ ಅಧ್ಯಾಯವಾಗಿದ್ದಾರೆ. ಯುಗ ಯುಗಗಳು ಕಳೆದರೂ ಪೈ ಅವರು ರಚಿಸಿದ ಕವಿತೆಗಳು ಕನ್ನಡಿಗರ ನಾಲಿಗೆಗಳ ಮೇಲೆ ನಲಿದು ನುಲಿದಾಡುತ್ತವೆ.

ಗೋವಿಂದ ಪೈ ಅವರ ಬಾಲ್ಯ, ಶಿಕ್ಷಣ ಮತ್ತು ಸಾಹಿತ್ಯ

ಗೋವಿಂದ ಪೈ ಅವರು ಕೇರಳದ ಕಾಸರಗೋಡಿನಲ್ಲಿ 1883 ರ ಮಾರ್ಚ್ 23 ರಂದು ಜನಿಸಿದರು (ಕಾಸರಗೋಡನ್ನು ಕರ್ನಾಟಕದೊಳಗೆ ವಿಲೀನಗೊಳಿಸಬೇಕು ಎಂಬುದು ಗೋವಿಂದ ಪೈ ಅವರ ಕನಸಾಗಿತ್ತು; ಅವರ ಕನಸು ಕನಸಾಗಿಯೇ ಉಳಿದದ್ದು ಕನ್ನಡಿಗರೆಲ್ಲರ ದೌರ್ಭಾಗ್ಯ)

ಅಂದಿನ ಕಾಲಕ್ಕೆ ಆಗರ್ಭ ಶ್ರೀಮಂತರಾಗಿದ್ದ ಸಾಹುಕಾರ ತಿಮ್ಮಪ್ಪ ಪೈ ಮತ್ತು ದೇವಕಿಯಮ್ಮ ಗೋವಿಂದ ಪೈ ಅವರ ತಂದೆ-ತಾಯಿ. ಮಂಗಳೂರಿನಲ್ಲಿಯೇ ಪ್ರಾಥಮಿಕ ಮತ್ತು ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಬಿ.ಎ ಪದವಿಯನ್ನು ಅಂದಿನ ಮದ್ರಾಸಿನಲ್ಲಿ(ಈಗ ಚೆನ್ನೈ) ಪಡೆಯಲು ಹೋದರು. ನೆನಪಿಡಬೇಕಾದ ಮತ್ತೊಂದು ವಿಷಯವೆಂದರೆ; ಎಂಟು ಹತ್ತು ವರ್ಷದೊಳಗೆಯೇ ಗೋವಿಂದ ಪೈ ಅವರು ಬರಹವನ್ನು ಒಲಿಸಿಕೊಂಡಿದ್ದರು. ಅವರ ಬಹುತೇಕ ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು ಕೂಡ. ಈಗಾಗಲೇ ಹೇಳಿರುವಂತೆ ಮಾತೃಭಾಷೆ ಕೊಂಕಣಿ, ನಿಸರ್ಗದ ಭಾಷೆ ತುಳುವಾದರೂ ಪೈ ಅವರಿಗೆ ಕನ್ನಡ ಭಾಷೆಯ ಬಗ್ಗೆ ಅಪಾರ ಭಕ್ತಿ ಭಾವ. ಕನ್ನಡ ಸಾಹಿತ್ಯದ ಓದಿನ ಪ್ರಭಾವದಿಂದಾಗಿಯೇ ಅವರು ಪೂರ್ಣಾವಧಿಯ ಕನ್ನಡದ ಸಾಹಿತಿಯಾಗಿಯೇ ಗುರುತಿಸಿಕೊಂಡರು.
ಕಾವ್ಯ, ನಾಟಕ, ಸಂಶೋಧನೆ ಅಷ್ಟೇ ಅಲ್ಲದೆ ಬೇರೆ ಭಾಷೆಗಳ ನಾಟಕಗಳನ್ನು ಅನುವಾದಿಸಿ ಕನ್ನಡಕ್ಕೆ ತಂದರು. ಅವರು ಅನುವಾದ ಮಾಡಿದ ನಾಟಕಗಳಲ್ಲಿ ಜಪಾನಿ ಭಾಷೆಯ ನಾಟಕಗಳೇ ಹೆಚ್ಚು.

ಸಾಹಿತ್ಯವನ್ನೇ ಉಸಿರಾಗಿಸಿಕೊಂಡಿದ್ದ ಪೈ ಅವರನ್ನು ನಂಬಿ ವರಿಸಿ ಬಾಳ ಸಂಗಾತಿಯಾದವರು ಕೃಷ್ಣಬಾಯಿ. ಆದರೆ ದುರಾದೃಷ್ಟವಶಾತ್ ಗೋವಿಂದ ಪೈ ಅವರು 45 ವರ್ಷಗಳನ್ನು ದಾಟುವುದರೊಳಗಾಗಲೇ ಕೃಷ್ಣಬಾಯಿ ಅವರನ್ನು ಕಳೆದುಕೊಂಡು ವಿಧುರರಾದರು. ಮಡುಗಟ್ಟಿದ ದುಃಖದಲ್ಲಿಯೂ ಅವರ ಸಾಹಿತ್ಯ ಕುಂಟಲಿಲ್ಲ.
ದುಃಖವನ್ನು ಮರೆಯಲಿಕ್ಕೆಂದೆ ಹೆಚ್ಚು ಹೆಚ್ಚು ಬರೆದರು. ಬರಹದಲ್ಲಿಯೇ ಬದುಕನ್ನು ಕಂಡುಕೊಂಡರು.

ಗೋವಿಂದ ಪೈ ಅವರ ಕೃತಿಗಳು

ಗಿಳಿವಿಂಡು, ನಂದಾದೀಪ ಎಂಬ ಕಾವ್ಯ ಸಂಕಲನಗಳು. ವೈಶಾಖಿ ಗೊಲ್ಗಾಥಾ ಖಂಡಕಾವ್ಯ. ಹೆಬ್ಬೆರಳು ಎಂಬ ಏಕಾಂಕ ನಾಟಕ. ಚಿತ್ರಭಾನು-ಗದ್ಯ ನಾಟಕ. ಕನ್ನಡದ ಮೊರೆ-ಪ್ರಬಂಧ ಸಂಕಲನ. ಹತ್ತಾರು ಅನುವಾದಿತ ನಾಟಕಗಳು.
ಗೋವಿಂದ ಪೈ ಅವರ ಮತ್ತೊಂದು ಪ್ರತಿಭೆಯ ಮುಖವೆಂದರೆ; ಅವರು ಕನ್ನಡದ ಶಾಸನ, ರಾಜವಂಶ ಮತ್ತು ಕವಿಗಳ ಬಗ್ಗೆ ಹೆಚ್ಚು ಸಂಶೋಧನೆ ಮಾಡಿದ್ದರು.
ಸಂಶೋಧಕನಾಗಿಯೂ ಸೈ ಎನಿಸಿಕೊಂಡವರು ನಮ್ಮ ಪೈ.

ಪ್ರಶಸ್ತಿ ಪುರಸ್ಕಾರ

ಪ್ರಶಸ್ತಿ,ಪ್ರಶಂಸೆಗಳಿಗೆ ಪೈ ಎಂದಿಗೂ ಹಂಬಲಿಸಿದವರಲ್ಲ. ವೇದಿಕೆಯಲ್ಲಿ ಮಾತನಾಡುವುದು ಕೂಡ ಅವರ ಪಾಲಿಗೆ ಅಲರ್ಜಿಯಾಗಿತ್ತು. ಕೀರ್ತಿಯ ಬೆನ್ನು ಹತ್ತದೆ ಪೈ ಅವರು ಉಳಿದುಕೊಂಡರೂ ಕನ್ನಡ ಸಾಹಿತ್ಯ ಲೋಕ ಮೇರು ಪ್ರತಿಭೆಗೆ ಸೂಕ್ತ ಗೌರವವನ್ನು ಕೊಡಲೇಬೇಕಿತ್ತು. ಹಾಗಾಗಿ;

1950 ರಲ್ಲಿ ಮುಂಬೈಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಗೋವಿಂದ ಪೈ ಅವರಿಗೆ ನೀಡಲಾಗಿತ್ತು.

ಅಂದಿನ ಮದ್ರಾಸ್ ಸರ್ಕಾರ ಗೋವಿಂದ ಪೈ ಅವರನ್ನು ಕನ್ನಡದ ಮೊದಲ ರಾಷ್ಟ್ರಕವಿ ಎಂದು ಘೋಷಿಸಿತು.

ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿಲಿಟ್ ಪ್ರಶಸ್ತಿ ನೀಡಿ ಸನ್ಮಾನಿಸಿತು.

ಒಲ್ಲೆ ಎಂದರೂ ಕನ್ನಡದ ಸಾಕ್ಷಿ ಪ್ರಜ್ಞೆಯನ್ನು ಸನ್ಮಾನಗಳು ಅರಸಿ ಬಂದಿದ್ದವು.

80ನೇ ವಯಸ್ಸಿನಲ್ಲಿಯೂ ಅಪಾರ ಜೀವನೋತ್ಸಾಹದೊಂದಿಗೆ ಚೇತೋಹಾರಿಯಾಗಿದ್ದ
ಗೋವಿಂದ ಪೈ ಅವರು 1963 ಸೆಪ್ಟೆಂಬರ್ 6 ರಂದು ಅಸುನೀಗಿದರು.

“ಪೈಗೆ ಪೈ ಲೆಕ್ಕ ಒಪ್ಪಿಸಿದಿರಾ? ಗೋವಿಂದ
ಒಪ್ಪಿದನೆನಾ ನೆನೆವೆ ಕಸ್ತೂರಿ, ಜವ್ವಾದಿ
ಹೊರಗೆ-ಹೊಗೆ ಬೂದಿ, ಒಳಗೊಳಗೆ ಅಗ್ನಿಯ ಹಾದಿ
ನಿಮ್ಮ ಜಿಜ್ಞಾಸೆಗೆಲ್ಲಿದೆ ಮುಗಿವು? ಪದಕಾದಿ?

ಹರಿಸಿದಿರಿ ತರುಣರನು, ಆ ಅಸೂಯೆಯೆದಗ್ಧ-
ನೀವು ಕಾಲ ಜ್ಞಾನಿ ಮುಗ್ಧ, ಅಕ್ಕರಿಗ, ವಿದಗ್ಧ !”

ವರಕವಿ ಬೇಂದ್ರೆ ಗೋವಿಂದ ಪೈ ಅವರನ್ನು ಅತೀವವಾಗಿ ಗೌರವಿಸಿದವರು ಮತ್ತು ಅವರಿಂದ ಪ್ರಭಾವಿತರಾದವರು.
ಪೈ ಹೋದ ಕಾಲಕ್ಕೆ ಬೇಂದ್ರೆ ಬರೆದ ಕವಿತೆಯ ಸಾಲುಗಳು ಈ ಮೇಲಿನಂತಿವೆ;

“ಕಲೆಯ ಬಾಳ್ವೆಗೆ ಮಿಗಿಲ್ ಬಾಳ್ವೆಯ ಕಲೋಲ್ಲಾಸ/
ಕಲೆ ಸಂಸ್ಕೃತಿ ವಿಲಾಸ ಬಾಳ್ ಸೃಷ್ಟಿಗೆ ವಿಕಾಸ/ನೂರು ಕಾವ್ಯಕೆ ಸಾರವೊಂದು ಸಾಕ್ಷಾತ್ಕಾರ/
ಕವಿಯ ದರ್ಶನ ಅಗ್ನಿದರ್ಪಣ ತಪಃ ಸಂಸಾರ”

ವಿಶ್ವಮಾನವ ಕವಿ ಕುವೆಂಪು ತಮ್ಮ ಮೇಲಿನ ಕವಿತೆಯ ಸಾಲುಗಳ ಮೂಲಕ ಪೈ ಅವರನ್ನು ಹೀಗೆ ನೆನೆದಿದ್ದರು.

ಒಟ್ಟಾರೆ ನವೋದಯ ಮತ್ತು ನವ್ಯದ ಎಲ್ಲಾ ಕವಿಗಳಿಗೂ ಗೋವಿಂದ ಪೈ ಹಿರಿ ಅಣ್ಣ.
ಕನ್ನಡವನ್ನು ಪೋಷಿಸಿ ಬೆಳೆಸಿದ ಪೈ ಅವರಿಗೆ ಹೃದ್ಯ ವಂದನೆ.

“ಭಾರತಾಂಬೆಯ ಭಕ್ತಿ ನನಗಾತ್ಮ ಶಕ್ತಿ” ಎಂಬ ಅವರದ್ದೇ ಕವಿತೆಯ ಸಾಲಿನ ಮೂಲಕ ಅವರ ಜನ್ಮದಿನದ ಈ ಸವಿ ನೆನಪಿನಲ್ಲಿ ಭಕ್ತಿ ಭಾವದಿ ಅವರ ಅಡಿದಾವರೆಗಳಿಗೆ ನಮಿಸೋಣ!

ಕನ್ನಡಕ್ಕೊಬ್ಬರೇ ಪೈ!

Leave a Reply

Your email address will not be published.

This site uses Akismet to reduce spam. Learn how your comment data is processed.