ಬೆಂಗಳೂರು: ಭಾರತ ತನ್ನ ಅರ್ಥವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುವ ಆರ್ಥಿಕ ಸವಾಲು, ಈ ನೆಲದ ನಾಗರಿಕತೆ ‌ಹಿಂದು, ಇದರ ವಿರುದ್ಧ ನಡೆಯುತ್ತಿರುವ ಮತೀಯ ಹೋರಾಟ ಮತ್ತು ನಮ್ಮ ಸಾಮಾಜಿಕ ವ್ಯವಸ್ಥೆಯ ಆಧಾರ ಸ್ತಂಭವಾದ ಕೌಟುಂಬಿಕ ವ್ಯವಸ್ಥೆಯ ಮೇಲಾಗುತ್ತಿರುವ ಸಾಂಸ್ಕೃತಿಕ ಸವಾಲನ್ನು ಇಂದು ಸಮರ್ಥವಾಗಿ ಎದುರಿಸಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಕಾರ್ಯವಾಹ ಪ್ರಕಾಶ್ ಪಿ. ಎಸ್ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ದಕ್ಷಿಣ ವಿಭಾಗದ ವತಿಯಿಂದ ಚಾಮರಾಜಪೇಟೆಯ ಮರಾಠ ಹಾಸ್ಟೆಲ್ ಮೈದಾನದಲ್ಲಿ ನಡೆದ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಬುಧವಾರ ಮಾತನಾಡಿದರು.

ಸಂಘದ ಸ್ವಯಂಸೇವಕರಿಗೆ ಯುಗಾದಿ ಉತ್ಸವ ಎರಡು ಕಾರಣಗಳಿಗಾಗಿ ವಿಶೇಷವಾದ ದಿನ. ಮೊದಲನೆಯ ಕಾರಣ ಭಾರತೀಯರ ಹೊಸ ವರ್ಷ ಯುಗಾದಿ ಹಬ್ಬ. ಎರಡನೆಯದ್ದು ತನ್ನತನವನ್ನು ಮರೆತ ಸಮಾಜಕ್ಕೆ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣ ಸಾಧ್ಯ, ಹಿಂದೂ ಸಂಘಟನೆಯೊಂದೇ ಈ ದೇಶದ ಸಮಸ್ಯೆಗಳಿಗೆ ಪರಿಹಾರ ಎನ್ನುವುದನ್ನು ಅರಿತು ರಾಷ್ಟ್ರೀಯ ಸ್ವಯಂಸೇವಕ ಸಂಘವೆಂಬ ಅಪೂರ್ವ ಸಂಘಟನೆಯನ್ನು ನೀಡಿದ ಡಾ.ಕೇಶವ ಬಲಿರಾಮ ಹೆಡಗೇವಾರರ ಜನ್ಮದಿನ ಎಂದರು.

ಯುಗಾದಿ ಸದಾ ಹೊಸತನಕ್ಕೆ ತೆರೆದುಕೊಳ್ಳುವ ಹಿಂದೂ ಸಮಾಜಕ್ಕೆ ಹೊಸ ಆಲೋಚನೆಗಳ ಮೂಲಕ ವಿನೂತನ ದಿಕ್ಕನ್ನು ನೀಡುವ ಯುಗಾರಂಭದ ದಿನ. ತನ್ನ ಸಮಾಜದ ಅಂತಃಸತ್ವವಾದ ಸಂಸ್ಖೃತಿಯನ್ನು ಗೌರವಿಸಿ, ಪಾಲಿಸಿದರೆ ಮಾತ್ರ ಆ ಸಮಾಜ ಬೆಳೆಯಬಲ್ಲದು ಎನ್ನುವುದನ್ನು ಅರಿವು ಮಾಡಿಕೊಡುತ್ತದೆ. ಹೊಸ ಸಂವತ್ಸರದಲ್ಲಿ ಹೊಸ ಸಂಕಲ್ಪವನ್ನು ತೊಟ್ಟು ಕಾರ್ಯಪ್ರವೃತ್ತಾಗಬೇಕು ಎನ್ನುವುದನ್ನು ತಿಳಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ಇಂದಲ್ಲ ನಾಳೆ ನಾವು ಪಡೆಯುತ್ತೇವೆ. ಆದರೆ ಪಡೆದ ಸ್ವಾತಂತ್ರ್ಯವನ್ನು ಕಾಪಿಟ್ಟುಕೊಳ್ಳುವ ಸಂಘಟಿತ ಸಮಾಜವೊಂದರ ನಿರ್ಮಾಣವಾಗಬೇಕು ಎನ್ನುವುದನ್ನು ಅರಿತು ಡಾ.ಕೇಶವ ಬಲಿರಾಮ ಹೆಡಗೇವಾರರು(ಡಾಕ್ಟರ್ ಜಿ) ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪನೆ ಮಾಡಿದರು. ತಮ್ಮ ಅಂತಃಕರಣ ಶುದ್ಧಿಯಿಂದ ಸಂಘಟನೆಯ ಪ್ರತಿ ಸ್ವಯಂಸೇವಕನನ್ನೂ ನೋಡಿಕೊಂಡರು. ಸಂಘವನ್ನು ವ್ಯಕ್ತಿಕೇಂದ್ರಿತವಾಗಿರಿಸದೆ, ಪ್ರತಿ ಸ್ವಯಂಸೇವಕನೂ ಸಂಘದ ಪ್ರತಿಬಿಂಬ ಎನ್ನುವಂತೆ ಅವರ ವ್ಯಕ್ತಿತ್ವ ನಿರ್ಮಾಣದ ಕೆಲಸದಲ್ಲಿ ತೊಡಗಿಕೊಂಡರು. ಅದಕ್ಕಾಗಿ ಶಾಖೆಯನ್ನು ಆರಂಭಿಸಿ ಸರಳವಾದ ಮತ್ತು ಸುಂದರವಾದ ಸಂಘಟನೆಯ ಸ್ವರೂಪವನ್ನು ಕಟ್ಟಿಕೊಟ್ಟರು ಎಂದು ನುಡಿದರು.

ಭವಿಷ್ಯದ ಸಂಘಟನೆಯ ಹಾದಿಯ ಕುರಿತು ಸ್ವಷ್ಟತೆ ಇದ್ದ ಡಾಕ್ಟರ್ ಜಿ ಅದಕ್ಕೆ ಸೂಕ್ತವಾದ ಅದ್ಭುತ ಕಾರ್ಯಪದ್ಧತಿಯನ್ನು ಸಂಘಟನೆಯಲ್ಲಿ ಅಳವಡಿಸಿದರು. ಅದರ ಆಧಾರ ಮೇಲೆ ಇಂದು ಹೆಮ್ಮರವಾಗಿ ಬೆಳೆದು ನಿಂತಿರುವ ಸಂಘಟನೆ ಹೊರನೋಟಕ್ಕೆ ಕೇವಲ ಹಿಂದೂ ಸಂಘಟನೆ, ಪಥಸಂಚಲನದ ಮೂಲಕ ಕಾಣಿಸಿಕೊಂಡರೂ, ಅಂತರ್ಮುಖಿಯಾಗಿ ಈ ರಾಷ್ಟ್ರದ ಪ್ರತಿ ಕ್ಷೇತ್ರವನ್ನು ತಲುಪಿದೆ. ಇಂದು ಈ ಪ್ರಯತ್ನಗಳ ಫಲವಾಗಿ ಇಡೀ ರಾಷ್ಟ್ರದಲ್ಲಾಗುತ್ತಿರುವ ಸಾಮಾಜಿಕ ಬದಲಾವಣೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಾತ್ರ ಮಹತ್ವಪೂರ್ಣ ಎನಿಸಿದೆ ಎಂದು ಹೇಳಿದರು.

ಪ್ರಸ್ತುತ ದಿನಮಾನದಲ್ಲಿ ಭಾರತದ ಆಖ್ಯಾನ ಬದಲಾಗುತ್ತಿದೆ. ಯೋಗದ ಧನಾತ್ಮಕತೆಯನ್ನು ಕಂಡು ಜಗತ್ತಿನ ಜನರು ಒಪ್ಪಿಕೊಂಡರು. ಭಾರತೀಯತೆ ಎಂಬ ಸಕಾರಾತ್ಮಕ ಅಂಶವನ್ನೂ ವಿಶ್ವಕ್ಕೆ ಸಮರ್ಥವಾಗಿ ಪರಿಚಯಿಸಿದಾಗ ನಮ್ಮನ್ನು ಮಾರ್ಗದರ್ಶಕರಾಗಿ ಪ್ರಪಂಚ ಸ್ವೀಕರಿಸುವುದರಲ್ಲಿ ಸಂಶಯವಿಲ್ಲ. ಆದರೆ ಮೊದಲು ನಾವು ನಮ್ಮತನದ ಪರಿಚಯವನ್ನು ಮಾಡಿಕೊಂಡು, ನಮ್ಮ ಜೀವನ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು. ಈ ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ನಮ್ಮ ಪಾತ್ರವನ್ನು ಅರಿತು ಕಾರ್ಯಪ್ರವೃತ್ತರಾಗಬೇಕು ಎಂದು ನುಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ, ಬೆಂಗಳೂರು ದಕ್ಷಿಣ ವಿಭಾಗದ ಸಂಘಚಾಲಕ ಹರೀಶ್ ಬಾಬು ಬೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.