Bhagavadwaj , the GURU of RSS

ಗುರುವ ಸ್ಮರಿಸಿ ಗುರಿಯ ನೆನೆಸಿ

Bhagavadwaj , the GURU of RSS

ಒಂದು ಸುವ್ಯವಸ್ಥಿತ, ವೈಭವಶಾಲಿ ಸಮಾಜ ನಿರ್ಮಾಣಗೊಳ್ಳುವುದು ಆ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಚಿಂತನೆಯಿಂದ ಮತ್ತು ಆ ಚಿಂತನೆಗಳಿಗನುಗುಣವಾದ ಆತನ ಜೀವನ ಪದ್ಧತಿಯಿಂದ. ಹೀಗೆ ಸುಸಂಪನ್ನ ರಾಷ್ಟ್ರದ ನಿರ್ಮಿತಿಗಾಗಿ ಪರಂಪರಾಗತ ಮೌಲ್ಯಗಳ ಅರಿವುಳ್ಳ ಪ್ರತಿವ್ಯಕ್ತಿಯ ಕೊಡುಗೆಯೂ ಮಹತ್ವ ಪೂರ್ಣ. ಆದರೆ ಮನುಷ್ಯನು ಯಾವಗಲೂ ಭಿನ್ನ ಭಿನ್ನ ಪರಿಸ್ಥಿತಿಗಳಿಂದ ಸುತ್ತುವರಿಯಲಪಟ್ಟಿರುತ್ತಾನೆ. ಸುಖದುಖಃಗಳ ಅನೇಕ ಪ್ರಸಂಗಗಳನ್ನು ಆತ ಎದುರಿಸಬೇಕಾಗುತ್ತಿರುತ್ತದೆ. ಇಂತಹ ವಿಷಮ ಸಂಧರ್ಭಗಳಲ್ಲಿ ಧೀರತೆಯಿಂದ ಅಪಾಯಗಳನ್ನು ನಿವಾರಿಸಿಕೊಳ್ಳುತ್ತಾ  ತನ್ನ ಜೀವನವನ್ನು ಉನ್ನತ ಉದ್ದೇಶಗಳಿಗಾಗಿಯೇ ಮೀಸಲಿಸಿರಿಕೊಳ್ಳುವ ಯೋಗ್ಯತೆ ಆತನಲ್ಲಿರುವುದಿಲ್ಲ. ತನ್ನಲ್ಲಿಯೇ ಅಂತಹ ಯೋಗ್ಯತೆ ಇದೆಯೆಂದು ಯಾವನು ಭಾವಿಸುತ್ತಾನೋ ಆತನ ಅಧಃಪತನ ನಿಶ್ಚಿತವೆಂದು ತಿಳಿಯಬಹುದು. ಪ್ರತಿ ವ್ಯಕ್ತಿಯ, ತನ್ಮೂಲಕ ಇಡೀ ಸಮಾಜದ ಪತನವನ್ನು ತಡೆದು ಪರಿಪೂರ್ಣ ವಿಕಾಸದೆಡೆಗೆ ಸಾಗಲು ಬೇಕಾದ ಬಲವಾದ ಶ್ರದ್ಧಾ ಕೇಂದ್ರವೇ ’ಗುರು’.

ಪೂರ್ಣತೆಯೇ ಗುರು

ನಮ್ಮ ಪರಂಪರೆಯಲ್ಲಿ ಗುರುವಿಗೆ ಭಗವಂತನ ಸ್ಥಾನವನ್ನು ನೀಡಿದ್ದೇವೆ. ಮನುಷ್ಯನ ಬದುಕನ್ನು ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಪಶುತ್ವದಿಂದ ದೈವತ್ವದೆಡೆಗೆ ನಡೆಸುವವನೆ ಗುರು. ಅದಕ್ಕೆಂದೇ ಗುರುನಾನಕರು ’ನನ್ನ ಮುಂದೆ ಗುರು ಮತ್ತು ಗೋವಿಂದ (ಭಗವಂತ) ಇಬ್ಬರೂ ಒಮ್ಮೆಗೆ ಬಂದರೆ ನನ್ನ ಗುರುವಿಗೆ ಮೊದಲು ವಂದಿಸುತ್ತೇನೆ ನಂತರ ಭಗವಂತನಿಗೆ ನಮಸ್ಕರಿಸುತ್ತೇನೆ, ಏಕೆಂದರೆ ಗುರುವಿಂದಲೇ ಅರಿವು, ಅರಿವಿನಿಂದಲೇ ಭಗವಂತನ ಪ್ರಾಪ್ತಿ’ ಎಂದು ಹಾಡಿದ್ದಾರೆ. ಯೋಗ್ಯ ಗುರು ಮತ್ತು ಸ್ಪಷ್ಟ ಗುರಿಯುಳ್ಳ ವ್ಯಕ್ತಿ ನಿಸ್ಸಂದೇಹವಾಗಿ ಪರಿಪೂರ್ಣತೆಯೆಡೆಗೆ ಸಾಗಬಲ್ಲ.

ಹೀಗೆ ಸಕಲ ಅನುಯಾಯಿಗಳನ್ನು ಮುನ್ನಡೆಸುತ್ತಿದ್ದ ಆದರ್ಶ ಗುರುಪರಂಪರೆಯೇ ನಮ್ಮಲ್ಲಿದೆ. ಧರ್ಮದ ರಕ್ಷಣೆಗಾಗಿ ತನ್ನ ಜೀವವನ್ನೇ ಪರಿತ್ಯಜಿಸಿದ ಮಹರ್ಷಿ ದಧೀಚಿಯಿಂದ ಹಿಡಿದು ಗುರು ತೇಗ ಬಹಾದ್ದೂರರ ವರೆಗೆ, ದುಷ್ಟ ಮರ್ದನಕ್ಕಾಗಿ ರಾಮ ಲಕ್ಷ್ಮಣರನ್ನು ತರಬೇತಿಗೊಳಿಸಿದ ವಶಿಷ್ಠ-ವಿಶ್ವಾಮಿತ್ರರಿಂದ ಮೊದಲ್ಗೊಂಡು, ಹಿಂದೂ ಸಾಮ್ರಾಜ್ಯ ಸ್ಥಾಪಸಲೆಂದು ಶಿಷ್ಯರಿಗೆ ರ್ಸ್ಪೂತಿ ನೀಡಿದ ವಿದ್ಯಾರಣ್ಯ-ಸಮರ್ಥ ರಾಮದಾಸರವರೆಗೆ ಸಾವಿರಾರು ಸಂಖ್ಯೆಯಲ್ಲಿ ಯೋಗ್ಯ ಗುರುಗಳ ಉದಾಹರಣೆಗಳು ನಮ್ಮಲ್ಲಿವೆ.

ಜಗದ್ಗುರು ಭಾರತ

ಬರೀ ವ್ಯಕ್ತಿಗಳು ಮಾತ್ರವಲ್ಲ ಸಂಪೂರ್ಣ ಭಾರತ ದೇಶವೇ ಇಡೀ ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿ ನಿಂತದ್ದನ್ನು ನಮ್ಮ ಇತಿಹಾಸದಲ್ಲಿ ಕಾಣಬಹುದು. ಜಗತ್ತಿನ ಎಲ್ಲಾ ಮೂಲೆಗಳಿಂದ ಜ್ಞಾನಾರ್ಜನೆಗಾಗಿ ನಮ್ಮ ದೇಶಕ್ಕೆ ಬರುತ್ತಿದ್ದರು. ಗಣಿತ, ವಿಜ್ಞಾನ, ಲಲಿತ ಕಲೆ, ನಾಟ್ಯ, ಸಂಗೀತ, ವ್ಯಾಕರಣ, ಶಿಲ್ಪಕಲೆ, ಆಯುರ್ವೇದ ಹೀಗೆ ಜ್ಞಾನದ ಯಾವುದೇ ಶಾಖೆಯಿರಲಿ ಅದರ ಮೂಲ ಅರಿಯಬೇಕೆಂದರೆ ಭಾರತಕ್ಕೇ ಬರಬೇಕಿತ್ತು. ಇಲ್ಲಿನ ಪ್ರಾಚೀನ ನಲಂದ, ತಕ್ಷಶಿಲಾ, ವಿಕ್ರಮಶಿಲಾ ಇತ್ಯಾದಿ ವಿಶ್ವವಿದ್ಯಾಲಗಳಲ್ಲಿ ಪ್ರವೇಶ ಪಡೆಯಲು ಲಕ್ಷಾಂತರ ವಿದೇಶೀಯರು ಧಾವಿಸಿ ಬರುತ್ತಿದ್ದರು. ಮಾತ್ರವಲ್ಲ ದೇಶದಾಚೆಯ ದೂರದ ನಾಡಿಗೂ ನಮ್ಮ ಪೂರ್ವಜರು, ಋಷಿ ಮುನಿಗಳು, ಸಾಧು ಸಂತರು ಯಾವುದೇ ಪ್ರತಿಫಲಾಕ್ಷೆಯಿಲ್ಲದೇ ಜ್ಞಾನ ಪ್ರಸಾರಕ್ಕಾಗಿ ತೆರಳುತ್ತಿದ್ದರು.  ಹೀಗೆ ಹೊರಟವರು ಸೆಮೆಟಿಕ್ ಮತಗಳಂತೆ ಸ್ಥಳೀಯ ಮತ, ಪಂಥ ಸಂಪ್ರದಾಯಗಳನ್ನು ನಾಶಗೊಳಿಸಲಿಲ್ಲ, ಅಲ್ಲಿನ ಸಂಪತ್ತನ್ನು ದೋಚಲಿಲ್ಲ, ಮಾನವ ಹತ್ಯೆಗೆ ಮುಂದಾಗಲಿಲ್ಲ ಬದಲಾಗಿ ಆ ಸಮಾಜಗಳು ವಿನಾಶದಿಂದ ಪೂರ್ಣತೆಯೆಡೆಗೆ ಸಾಗಲು ಸಹಕರಿಸಿದರು. (ಉದಾಹರಣೆಗೆ ಬೋಧಿ ಧರ್ಮ ಚೀನಾಕ್ಕೆ, ಕಂಬು ಮಹರ್ಷಿ ಕಾಂಬೋಡಿಯಾಕ್ಕೆ ತೆರಳಿದ್ದು)

ಗುರು ಪೂರ್ಣಿಮಾ

ಪ್ರತಿಯೊಬ್ಬನೂ ಪವಿತ್ರತಮ ಜೀವನವನ್ನು ಮುನ್ನಡೆಸುವಂತಾಗಲು ತನ್ನಿಡೀ ಜೀವನವನ್ನೇ ಮುಡಿಪಿಡುವ ಗುರುವನ್ನು ಗೌರವಿಸಲು ಆಷಾಢ ಪೂರ್ಣಿಮೆಯಂದು ಗುರುಪೂಜೆಯನ್ನು ಮಾಡುವ ಸಂಪ್ರದಾಯ ನಮ್ಮಲ್ಲಿದೆ. ಪ್ರಪಂಚದ ಅತಿ ಪ್ರಾಚೀನ ಜ್ಞಾನ ಸಂಪದವಾದ ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಭಾರತೀಯ ಸಂಸ್ಕೃತಿಯ ಹರಿವನ್ನು ಸರಾಗಗೊಳಿಸಿದ ಮಹರ್ಷಿ ವೇದವ್ಯಾಸರ ನೆನಪಿನಲ್ಲಿ ಈ ದಿನವನ್ನು ವ್ಯಾಸ ಪೂರ್ಣಿಮೆಯೆಂದೂ ಸಹ ಕರೆಯಲಾಗುತ್ತದೆ. ಭಗದ್ಗೀತೆಯಂತಹ ಮನೋವೈಜ್ಞಾನಿಕ ಕೃತಿಯನ್ನೊಳಗೊಂಡ ಮಹಾಭಾರತದಂತಹ ಇತಿಹಾಸವನ್ನು, ಪುರಾಣಗಳನ್ನು, ಭಾಗವತವನ್ನು ರಚಿಸಿ ಸನಾತನ ಧರ್ಮಕ್ಕೊಂದು ಭದ್ರ ಬುನಾದಿಯನ್ನು ನಿರ್ಮಿಸಿದವರು ಮಹರ್ಷಿ ವೇದವ್ಯಾಸರೇ. ಹೀಗಾಗಿ ಗುರುಪೂಜೆಯ ಸಂದರ್ಭದಲ್ಲಿ ಅವರನ್ನು ಸ್ಮರಿಸುವುದು ಅತ್ಯಂತ ಸೂಕ್ತವೆನಿಸಿದೆ.

ಗುರು – ಸಂಘದ ನಿಲುಮೆ

ಸಂಪೂರ್ಣವಾಗಿ ಅರಳಿದ, ಕ್ರಿಮಿಕೀಟಗಳಿಂದ ಹಾಳಾಗದ ಹೂವು ಮಾತ್ರ ವಿಕಸಿತ ಪುಷ್ಪವೆನಿಸಿಕೊಳ್ಳುತ್ತದೆ. ಹಾಗೆಯೇ ವ್ಯಕ್ತಿಯೊಬ್ಬ ಪರಿಪಕ್ವವಾಗಲು ಮನುಷ್ಯ ಜೀವನವೆಂಬ ಪುಷ್ಪದ ದಳದಳವೂ ಸಂಪೂರ್ಣವಾಗಿ ಅರಳಬೇಕಾಗುತ್ತದೆ.  ಒಬ್ಬ ವ್ಯಕ್ತಿಯ ಶ್ರೇಷ್ಠತೆಯನ್ನು ಮುಂಬರುವ ಪೀಳಿಗೆ ಅಳೆಯಲು ಬಿಡಬೇಕು. ಸಕಲ ಸದ್ಗುಣಗಳನ್ನು ಹೊಂದಿರುವ, ರಾಷ್ರದ ಪ್ರಾಚೀನ ಗೌರವ, ಸಭ್ಯತೆ ಹಾಗು ಐತಿಹಾಸಿಕ ಪರಂಪರೆಗಳ ಪ್ರತೀಕವಾಗಿರುವ ಮತ್ತು ಅದಕ್ಕಾಗಿ ಜೀವನ ಪೂರ್ತಿ ಮುಡಿಪಾಗಿಟ್ಟಿರುವ ವ್ಯಕ್ತಿಯನ್ನು ಗುರುವೆಂದು ಒಪ್ಪಬಹುದು.

ಯಾವುದೇ ವ್ಯಕ್ತಿಯ ಕೆಲವೊಂದು ವಿಶೇಷ ಗುಣಗಳನ್ನು ಅವಲೋಕಿಸಿದಾಗ ಆತನ ಸಂಬಂಧವಾಗಿ ನಮ್ಮ ಮನಸ್ಸಿನಲ್ಲಿ ಆದರದ ಭಾವನೆಗಳು ಉಂಟಾಗುತ್ತದೆ. ಆದರೆ ಕಾಲ ಕಳೆದಂತೆ ಆ ವ್ಯಕ್ತಿಯ ಬೇರೆ ಬೇರೆ ಗುಣಾವಗುಣಗಳ ಪರಿಚಯವಾದಾಗ ಆತನ ವಿಷಯವಾಗಿ ತಿರಸ್ಕಾರದ ಭಾವನೆಯೂ ಮೂಡುವುದು. ತಮ್ಮದೇ ದ್ಯೇಯ ಮಾರ್ಗದಿಂದ ಪತಿತರಾದ ಮಹಾಪುರುಷರು, ಸಿದ್ದಾಂತ, ಆದರ್ಶ, ಉದ್ದೇಶಗಳಿಂದ ಬದಿಗೆ ಸರಿದ ಸುಧಾರಕರು, ತಪೋಮಾರ್ಗದಿಂದ ದೂರ ಸರಿದ ಸಾಧಕರು, ಕಾಲಕ್ರಮೇಣ ನೀತಿಯ ಅಂಚನ್ನು ದಾಟಿ ಅನೀತಿಯೆಡೆಗೆ ಸಾಗಿದ ಅನೇಕ ನಾಯಕರುಗಳು ನಮಗೆ ಕಾಣಸಿಗುತ್ತಾರೆ. ಆದ್ದರಿಂದ ಯಾವುದೇ ವ್ಯಕ್ತಿಯನ್ನು ಗುರುಸ್ಥಾನದಲ್ಲಿರಿಸಿದರೆ, ಮುಂದೊಮ್ಮೆ ಪಶ್ಚಾತ್ತಾಪ ಪಡುವಂತಹ ಪ್ರಸಂಗ ಬಂದೀತು.

ಪ್ರೇರಣಾ ಚಿಹ್ನೆಯೇ ಗುರು

ಸಂಘದಲ್ಲಿ ವ್ಯಕ್ತಿ ಪೂಜೆಯಿಲ್ಲ, ಹಾಗೆಂದ ಮಾತ್ರಕ್ಕೆ ಅವ್ಯಕ್ತವೂ, ಅಮೂರ್ತವೂ, ನಿರಾಕಾರವೂ ಆಗಿರುವಂತಹದನ್ನು ಗುರುವಾಗಿ ಸ್ವೀಕರಿಸಲು ಎಲ್ಲರಿಗೂ ಸಾದ್ಯವಿಲ್ಲ. ಒಂದು ವೇಳೆ ವ್ಯಕ್ತಿ ಅಲ್ಲದಿದ್ದರೆ, ಯಾವುದಾದರೊಂದು ಪ್ರತೀಕ, ಚಿಹ್ನೆ ಅಥವ ವಸ್ತುವನ್ನು ಗುರುವೆಂದು ಸ್ವೀಕರಿಸಬೇಕು. ಹಿಂದೆ ರಾಷ್ಟ್ರಕ್ಕಾಗಿಯೇ ಜೀವವನ್ನು ಮುಡಿಪಿಟ್ಟ ವೀರ ಸಿಖ್ ಯೋಧರ ಹತ್ತನೇ ಗುರು ಗೋವಿಂದಸಿಂಗರು ತನ್ನ ನಂತರ ವ್ಯಕ್ತಿಯ ಬದಲಾಗಿ ’ಗುರು ಗ್ರಂಥಸಾಹೀಬ್’ ಅನ್ನೇ ಗುರುವನ್ನಾಗಿ ಸ್ವೀಕರಿಸಬೇಕೆಂದು ಆದೇಶಿಸಿದ್ದರು. ಸಂಘಸ್ಥಾಪಕರಾದ ಪರಮಪೂಜನೀಯ ಡಾಕ್ಟರಜೀಯವರು ಸಹ ವ್ಯಕ್ತಿಗತ ಅಭಿಮಾನಕ್ಕೆ ಆಸ್ಪದವಿಲ್ಲದಂತಹ ಶ್ರೇಷ್ಠತೆಯನ್ನೇ ಸ್ವಯಂಸೇವಕರ ಮುಂದೆ ಆದರ್ಶವಾಗಿಸಲು, ಅವರ ಗುರುವನ್ನಾಗಿ ರೂಪಿಸಲು ಚಿಂತಿಸಿದರು. sಸಂಘದ ಗುರು ರಾಷ್ಟ್ರೀಯ ಜೀವನದ  ಪುನರ್ನಿಮಾಣದ ಸಂಕಲ್ಪಕ್ಕೆ ಬೇಕಾಗುವಂತಹ ಶ್ರೇಷ್ಠಗುಣಗಳನ್ನು ಸಂಚಯಿಸಲು ಸ್ಪೂರ್ತಿ ನೀಡುವಂತಿರಬೇಕು. ಅನೇಕ ವ್ಯಕ್ತಿಗಳನ್ನು ಸಂಘಟನೆಯ ಸೂತ್ರದಲ್ಲಿ ಪೋಣಿಸುವ ಶಕ್ತಿ ನೀಡಬೇಕು. ಸ್ವಯಂಸೇವಕರ ಜೀವನ ಕಾರ್ಯಕ್ಕೆ ಸದಾ ಪ್ರೇರಣೆ ನೀಡುವಂತಹ, ವಂದನೀಯವೂ, ಶ್ರೇಷ್ಠವೂ ಆದಂತಹ ಪ್ರತೀಕವನ್ನೇ ನಾವು ಗುರು ಸ್ವರೂಪಿಯಾಗಿ ಸ್ವೀಕರಿಸಬೇಕು. ಗುರುವು ನಮ್ಮ ಭವ್ಯ ಪೂರ್ವಪರಂಪರೆಯನ್ನು ಪ್ರಕಟಗೊಳಿಸಬೇಕು. ಇದು ಡಾಕ್ಟರಜೀಯವರ ಆಳ ಚಿಂತನೆಯ ಮುಖ್ಯಾಂಶಗಳು. ಅದರ ಪರಿಣಾಮವೇ ಸಂಘಕ್ಕೆ ಭಗವಾ ಧ್ವಜ ಗುರುವಾಗಿ ದೊರೆತದ್ದು.

ಭಗವಾ ದ್ವಜ – ಸಂಘದ ಗುರು

ಡಾಕ್ಟರಜೀಯವರ ಎಲ್ಲಾ ಕಲ್ಪನೆಗಳ ಮೂರ್ತರೂಪವೇ ಕೇಸರಿ ಪತಾಕೆ. ಅತ್ಯಂತ ಪ್ರಾಚೀನ ಕಾಲದಿಂದಲೂ ನಮ್ಮ ರಾಷ್ಟ್ರದಲ್ಲಿ ನಡೆದ ಭವ್ಯ ಕಾರ್ಯಗಳ, ದೇಶಭಕ್ತ ವೀರರು ತೋರಿದ ಪರಾಕ್ರಮಗಳ, ಹಾಗೂ ತೇಜಃಪೂರ್ಣ ಸಂಗತಿಗಳನ್ನು ನೆನಪಿಸುವುದು ಈ ಭಗವಾಧ್ವಜ. ಸಂಘವೇ ರಾಷ್ಟ್ರ, ಹೀಗಾಗಿ ವೇದಗಳಲ್ಲೂ ಉಲ್ಲೇಖಗೊಂಡಿರುವ ಪ್ರಾಚೀನ ರಾಷ್ಟ್ರಧ್ವsಜವೇ ನಮ್ಮ ಧ್ವಜ. ಇದು ಯಜ್ಞದ ಜ್ವಾಲೆಯ ಪ್ರತೀಕ, ರಾತ್ರಿಯ ಕತ್ತಲನ್ನು ಹೊಡೆದೋಡಿಸುವ ಅರುಣೋದಯದ ಬಣ್ಣವೂ ಕೇಸರಿಯೇ ಹೀಗಾಗಿ ನಮಗಿದು ಜ್ಞಾನದ ಸಂಕೇತ. ಸಮಾಜಕ್ಕಾಗಿಯೇ ಬದುಕನ್ನು ಮುಡಿಪಿಟ್ಟ ಸಂನ್ಯಾಸಿ, ಸಾಧುಸಂತರ ಬಟ್ಟೆಯ ಬಣ್ಣವೂ ಖಾವಿಯೇ. ರಾಷ್ಟಧರ್ಮ ರಕ್ಷಣೆಗಾಗಿ ಹೋರಾಡಿದವರು, ಪ್ರಭು ಶ್ರೀರಾಮನಿಂದ ಹಿಡಿದು, ಶಿವಾಜಿಯವರೆಗೂ ಎಲ್ಲ ವೀರಪುರುಷರು, ಸಾಮ್ರಾಜ್ಯ ನಿರ್ಮಾಪಕರುಗಳು ಮೇಲೆತ್ತಿ ಹಿಡಿದದ್ದು ಇದೇ ಕೇಸರಿ ಧ್ವಜವನ್ನೇ.

ಹೀಗೆ ಎಲ್ಲ ಶಕ್ತಿಗಳ ಶಕ್ತಿಯಾಗಿರುವ ಭಗವಾದ್ವಜಕ್ಕೆ ನಮ್ಮಲ್ಲಿ ಉಚ್ಚತಮ ಸ್ಥಾನವಿದೆ. ಇದರೆದುರು ತಲೆಬಾಗುತ್ತೇವೆ. ಇದಕ್ಕೋಸ್ಕರವೇ ನಮ್ಮ ಜೀವನವನ್ನು ಸಮರ್ಪಿಸಿಕೊಳ್ಳುತ್ತೇವೆ. ಈ ಧ್ವಜವನ್ನು ನೋಡಿದರೆ ಸಾಕು ಹಿಂದೂ ರಾಷ್ಟ್ರ ನಿರ್ಮಾಣದ, ತಾಯಿ ಭಾರತಿಯನ್ನು ಪರಮ ವೈಭವದ ಸ್ಥಿತಿಗೆ ಕೊಂಡೊಯ್ಯುವ ಚಿತ್ರಣವು ಕಣ್ಮುಂದೆ ಬಂದು ನಿಲ್ಲುತ್ತವೆ. ಜಗದ್ಗುರುವಿನ ಸ್ಥಾನವನ್ನಲಂಕರಿಸಲು ಸಿದ್ಧಗೊಂಡ ರಾಷ್ಟರಪುರುಷನ ಬಗ್ಗೆ ನಮ್ಮ ಅಂತಃಕರಣಗಳಲ್ಲಿ ಶ್ರದ್ಧೆ ಜಾಗೃತಗೊಳ್ಳುತ್ತದೆ. ಪರಮಾತ್ಮ ಸ್ವರೂಪಿಯಾದ ಧ್ವಜದೆದುರು ನಮ್ಮಿಡೀ ಜೀವನವನ್ನು ಯಜ್ಞಜ್ವಾಲೆಯಂತೆ ಸಮರ್ಪಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತದೆ.

ಗುರುದಕ್ಷಿಣೆ – ಜೀವನ ಸಮರ್ಪಣೆ

ಕೇವಲ ಗಂಧಾಕ್ಷತೆಯಿಂದ-ಹೂವು, ತ್ರೆಗಳಿಂದ ಗುರುವಿನ ಪೂಜೆ ಮಾಡಿದರೆ ಸಾಲದು. ಸರ್ವಸಮರ್ಪಣೆಯ ಭಾವವಿರಬೇಕು, ಹೀಗಾಗಿ ದಕ್ಷಿಣೆಯ ರೂಪದಲ್ಲಿ ಹಣ ನೀಡುವುದು ಸಹ ಪ್ರಾಮುಖ್ಯವೆನಿಸಿದೆ. ಪ್ರಪಂಚದ ಎಲ್ಲಾ ಭೋಗವಸ್ತುಗಳನ್ನು ದೊರಕಿಸಿ ಕೊಡುವ ಸಾಮರ್ಥ್ಯವಿರುವ ಹಣವನ್ನೇ ಗುರುವಿಗರ್ಪಿಸುವುದು ತನುಮನಧನ ಸಮರ್ಪಣೆಯ ವ್ಯಕ್ತ ರೂಪ. ಇದು ಚಂದಾ ಹಣವಲ್ಲ, ದಾನವೂ ಅಲ್ಲ ಹೀಗಾಗಿ ಗುರುದಕ್ಷಿಣೆ ಅರ್ಪಿಸುವವನಿಗೆ ಯಾವುದೇ ಒತ್ತಾಯವಾಗಲೀ, ತುಚ್ಛ ಭಾವನೆಯಾಗಲೀ ಬೆಳೆಯುವ ಅವಕಾಶವೇ ಇಲ್ಲ. ಜೀವನಕ್ಕೊಂದು ದೃಷ್ಠಿ ನೀಡಿದ ಮಹಾನ್ ಗುರುವಿಗೆ ಅಂತಃಕರಣ ಪೂರ್ವಕವಾಗಿ ಪ್ರಣಾಮ ಸಲ್ಲಿಸಿ ಸಮಪಣೆ ಮಾಡುವುದೇ ಗುರುದಕ್ಷಿಣೆ. ಇಲ್ಲಿ ಬಡವನ ಬೆವರಿನ ಫಲಿತವಾದ ಒಂದೊಂದು ಪೈಸೆಗೂ, ಧನಿಕನ ಲಕ್ಷಾಂತರ ರೂಪಾಯಿಗೂ ಭೇದವಿಲ್ಲ. ಹಣ ಸಮರ್ಪಣೆ ಸಾಂಕೇತಿಕವೇ. ಗುರುವಿನ ಅಪೇಕ್ಷೆಯಂತೆ, ಸಂಘಟನೆಗಾಗಿ ಬದುಕನ್ನು ಮುಡಿಪಿಡುವುದು, ಗುರಿಯನ್ನು ನೆನೆದು ರಾಷ್ಟ್ರಕಾರ್ಯಕ್ಕೆಂದು ಜೀವನವನ್ನು ರೂಪಿಸಿಕೊಳ್ಳುವುದೇ ನಿಜವಾದ ಗುರುದಕ್ಷಿಣೆ.

ಜಿ.ಆರ್. ಸಂತೋಷ್, ಬೆಂಗಳೂರು

Leave a Reply

Your email address will not be published.

This site uses Akismet to reduce spam. Learn how your comment data is processed.