ಅಮರ್ತ್ಯಸೇನ್ ದೇಶದ ಪ್ರತಿಷ‍್ಠಿತ ಯೋಜನೆಗಳಿಗೆ ಹಳ್ಳ ಹಿಡಿಸಿರುವುದಕ್ಕೇ ಹೆಸರುವಾಸಿ. ಯಾವುದೇ ಅರ್ಹತೆ ಇಲ್ಲದಿದ್ದರೂ ಪ್ರತಿಷ್ಠಿತ ಹುದ್ದೆಗಳು ಅಮರ್ತ್ಯಸೇನ್ ಗೆ ದೊರಕುತ್ತಿದ್ದವು. ಅಮರ್ತ್ಯಸೇನ್ ಅವರಿದ್ದ ಏಕೈಕ ಅರ್ಹತೆ ಅವರು ಗಾಂಧಿ ಕುಟುಂಬ ಅದರಲ್ಲಿಯೂ ಮುಖ್ಯವಾಗಿ ಸೋನಿಯಾ ಗಾಂಧಿಯವರಿಗೆ ನಿಕಟವರ್ತಿಯಾಗಿದ್ದರು ಎಂಬುದು.

ಇದಕ್ಕೆ ತಾಜಾ ಉದಾಹರಣೆ ನಾಲಂದಾ ವಿಶ್ವವಿದ್ಯಾಲಯದ ಪುನರುಜ್ಜೀವನದಂತಹ ಉದಾತ್ತ ಯೋಜನೆ ಅಮರ್ತ್ಯಸೇನರಂತಹ ಅಡಕಸಬಿಗಳ ಕೈಯಲ್ಲಿ ಸಿಲುಕಿ ನಲುಗುತ್ತಿರುವುದು. ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಕನಸಿನ ಈ ಯೋಜನೆಯನ್ನು ಅಮರ್ತ್ಯಸೇನ್ ಹೇಗೆ ಕುಲಗೆಡಿಸಿದರು ಎಂದು ತಿಳಿದಲ್ಲಿ ಅಮರ್ತ್ಯಸೇನ್ ಯಾರು ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ.

ನಲಂದಾ ವಿಶ್ವವಿದ್ಯಾಲಯ:

ಹಿಂದೂಧರ್ಮ, ಬೌದ್ಧಧರ್ಮ – ಎರಡೂ ಉಚ್ಛ್ರಾಯಸ್ಥಿತಿಯಲ್ಲಿದ್ದ ಕಾಲದಲ್ಲಿ ಭಾರತದ ಪ್ರಮುಖ ಮಹಾವಿದ್ಯಾಲಯವಾಗಿ ಏರ್ಪಟ್ಟಿದ್ದುದು ಬಿಹಾರದ ನಾಲಂದಾ. ಎಲ್ಲ ಆಸಕ್ತರಿಗೆ ವಸತಿಸಹಿತ ನಿಃಶುಲ್ಕ ಶಿಕ್ಷಣ ಅಲ್ಲಿ ಲಭ್ಯವಿತ್ತು. ಭಾರತದೆಲ್ಲೆಡೆಯಿಂದ ಮಾತ್ರವಲ್ಲದೆ ಟಿಬೆಟ್, ಚೀನಾ, ಜಪಾನ್, ಶ್ರೀಲಂಕಾ, ಜಾವಾ, ಸುಮಾತ್ರಾ, ಕೋರಿಯಾ, ಇಂಡೊನೇಷಿಯ, ಇರಾನ್, ಟರ್ಕಿ, ಗ್ರೀಸ್ ಮೊದಲಾದ ದೇಶಗಳಿಂದಲೂ ವಿದ್ಯಾರ್ಥಿಗಳು ನಾಲಂದಾಕ್ಕೆ ಬರುತ್ತಿದ್ದರು. ಸಂಸ್ಕೃತ ಮಾಧ್ಯಮದಲ್ಲಿ ಅಲ್ಲಿ ಬೋಧಿಸಲ್ಪಡುತ್ತಿದ್ದ ಪ್ರಮುಖ ವಿಷಯಗಳು ವ್ಯಾಕರಣ, ತರ್ಕ, ಖಗೋಳಶಾಸ್ತ್ರ, ಜ್ಯೌತಿಷ, ವೈದ್ಯಕೀಯ, ಗಣಿತ, ವೇದ-ವೇದಾಂಗಳು, ಯೋಗ, ದರ್ಶನಶಾಸ್ತ್ರ.

ಯೂರೋಪಿನಲ್ಲಿ ಕ್ರೈಸ್ತಮತದ ಪ್ರಭಾವ ಅಧಿಕಗೊಂಡಂತೆ ಅಧ್ಯಯನ ಹಿಂದೆ ಬಿದ್ದಿತ್ತು. ಅಲೆಕ್ಸಾಂಡ್ರಿಯದ ಅಪಾರ ಗ್ರಂಥಸಂಗ್ರಹದ ದಹನ, ಹಿಪೇಶಿಯಾಳಂತಹ ಜಗದ್ವಿಖ್ಯಾತ ವಿದುಷಿಯನ್ನು ಕ್ರೈಸ್ತರು ಅವಮಾನಿಸಿ ಕೊಂದದ್ದು – ಇವೆಲ್ಲ ಪ್ರಸಿದ್ಧ ಸಂಗತಿಗಳು. ಇಂತಹ ಕ್ರೈಸ್ತ ಮತಾವೇಶದಿಂದಾಗಿ ಹಲವು ಶತಮಾನಗಳ ಕಾಲ ವಿದ್ವತ್ತೆಯ ದೃಷ್ಟಿಯಿಂದ ಯೂರೋಪ್ ಅಂಧಕಾರಮಯವಾಗಿತ್ತು.

ಸುವರ್ಣಯುಗ

ಭಾರತದಲ್ಲಾದರೋ ಅದು ಸಾರಸ್ವತೋಪಾಸನೆಯ ದೃಷ್ಟಿಯಿಂದ ಸುವರ್ಣಯುಗವೇ ಆಗಿದ್ದಿತು. ಬಿಹಾರದಲ್ಲಿ ನಾಲಂದಾ, ವಿಕ್ರಮಶೀಲ, ಓದಂತಪುರಿ; ಬಂಗಾಳದಲ್ಲಿ ಜಗದ್ದಲ ಮತ್ತು ಸೋಮಪುರ; ಒಡಿಶಾದಲ್ಲಿ ಪುಷ್ಪಗಿರಿ; ಉತ್ತರಪ್ರದೇಶದಲ್ಲಿ ವಾರಾಣಸಿ; ಆಂಧ್ರಪ್ರದೇಶದಲ್ಲಿ ನಾಗಾರ್ಜುನಕೊಂಡ; ತಮಿಳುನಾಡಿನಲ್ಲಿ ಕಂಚಿ; ಕರ್ನಾಟಕದಲ್ಲಿ ಮಾನ್ಯಖೇಟ; ಗುಜರಾತಿನಲ್ಲಿ ವಲ್ಲಭೀ; ಕಶ್ಮೀರದಲ್ಲಿ ಶಾರದಾ; ತಕ್ಷಶಿಲಾ (ಈಗಿನ ಪಾಕಿಸ್ತಾನ); ಹೀಗೆ ಭಾರತದೆಲ್ಲೆಡೆ ವಿದ್ಯಾಕೇಂದ್ರಗಳು ವಿಜ್ಯಂಭಿಸಿದ್ದವು. ಅವುಗಳಿಗೆ ಮಕುಟಪ್ರಾಯವಾಗಿದ್ದದ್ದು ಬಿಹಾರದಲ್ಲಿ ಪಟ್ನಾಕ್ಕೆ ೯೫ ಕಿ.ಮೀ ಆಗ್ನೇಯದಿಕ್ಕಿನಲ್ಲಿ ಕ್ರಿ.ಶ. ೫ನೇ ಶತಮಾನದಲ್ಲಿ ಸ್ಥಾಪನೆಗೊಂಡಿದ್ದ ನಾಲಂದಾ. ಅಲ್ಲಿಂದಾಚೆಗೆ ಆರುನೂರು ವರ್ಷಗಳೇ ಅದು ಉತ್ತುಂಗಸ್ಥಿತಿಯಲ್ಲಿ ಮುಂದುವರಿದಿತ್ತು. ಇಂತಹ ಭವ್ಯ ಶಿಕ್ಷಣಸಂಕೀರ್ಣವು ವಿಧ್ವಂಸಕ ಬಖ್ತಿಯಾರ್ ಖಿಲ್ಜಿಗೆ ಕ್ರಿ.ಶ. ೧೧೯೭ರಲ್ಲಿ ಆಹುತಿಯಾದದ್ದು ಇತಿಹಾಸ.

ಒಂದೊಮ್ಮೆ ಏಕಕಾಲದಲ್ಲಿ ೧೦,೦೦೦ ವಿದ್ಯಾರ್ಥಿಗಳೂ ೩,೦೦೦ ಆಚಾರ್ಯರೂ ವಾಸಿಸುತ್ತಿದ್ದು ಅನೇಕ ಸಭಾಗೃಹಗಳೂ ಅಧ್ಯಯನಕಕ್ಷಗಳೂ ಮಾತ್ರವಲ್ಲದೆ ೮ ವಿಶಾಲ ಉದ್ಯಾನಗಳು, ೧೦ ಭವ್ಯ ಮಂದಿರಗಳು, ಜಗತ್ತಿನಲ್ಲಿಯೆ ಪ್ರತಿಷ್ಠಿತವೆನಿಸಿದ್ದ ಗ್ರಂಥಭಂಡಾರ ಮೊದಲಾದವುಗಳಿಂದ ವಿರಾಜಮಾನವಾಗಿದ್ದುದು ನಾಲಂದಾ.

`ಧರ್ಮಗಂಗಾ’ ಎಂಬ ಹೆಸರಿನ ೯ ಅಂತಸ್ತಿನ ಗ್ರಂಥಭಂಡಾರದಲ್ಲಿ ಎಲ್ಲ ಜ್ಞಾನಾಂಗಗಳಿಗೆ ಸಂಬಂಧಿಸಿದ ಲಕ್ಷಾಂತರ ಗ್ರಂಥಗಳು ಸಂಗ್ರಹಗೊಂಡಿದ್ದವು. ಖಿಲ್ಜಿಯಿಂದ ದಹಿಸಲ್ಪಟ್ಟ ಗ್ರಂಥಭಂಡಾರ ತಿಂಗಳುಗಳ ಕಾಲ ಉರಿಯುತ್ತಿತ್ತೆಂಬ ಹೇಳಿಕೆಗಳಿವೆ.

ವಿದ್ಯಾರ್ಥಿಗಳ ಆಯ್ಕೆ ಎಷ್ಟು ಕಟ್ಟುನಿಟ್ಟಾಗಿ ಇರುತ್ತಿತ್ತೆಂದರೆ ಅವರಿಗೆ ಕನಿಷ್ಠ ಸಂಸ್ಕೃತಜ್ಞಾನ ಇದೆಯೆ ಎಂಬುದನ್ನು ದ್ವಾರಪಾಲಕರೇ ಪರೀಕ್ಷಿಸಿ ನಿರ್ಣಯಿಸುತ್ತಿದ್ದರು.

ಬಿಹಾರದಲ್ಲಿಯೆ ಇದ್ದ ವಿಕ್ರಮಶೀಲ, ಓದಂತಪುರಿ ವಿದ್ಯಾಲಯಗಳಲ್ಲಿಯೂ ನಾಲ್ಕಾರು ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಇವೂ ಮುಸ್ಲಿಂ ಆಕ್ರಮಕರ ದಾಂಧಲೆಗೆ ಗುರಿಯಾದವು.

ಆ ಭವ್ಯ ನಾಲಂದಾ ವಿದ್ಯಾಲಯದ ಪುನರುಜ್ಜೀವನ ಪ್ರಯತ್ನವನ್ನು ನಗೆಪಾಟಲಾಗಿಸಿದ ಕೀರ್ತಿಗೆ ಅಮರ್ತ್ಯಸೇನ್ ಭಾಜನರಾಗಿದ್ದಾರೆ.

ನಿರೀಕ್ಷೆ; ಭ್ರಮನಿರಸನ

ಭಾರತೀಯ ಸಂಸ್ಕೃತಿಯ ಮತ್ತು ಇಡೀ ಜಗತ್ತಿನ ಶಿಕ್ಷಣಪರಂಪರೆಯ ಒಂದು ಅತ್ಯುನ್ನತ ಪ್ರತೀಕವೆಂದು ವಿಶ್ವಮಾನ್ಯತೆಗೆ ಪಾತ್ರವಾಗಿದ್ದ ನಾಲಂದಾ ವಿಶ್ವವಿದ್ಯಾಲಯವನ್ನು ಒಂದು ಜಾಗತಿಕ ಮಟ್ಟದ ವಿದ್ಯಾಕೇಂದ್ರವಾಗಿ ಪುನರುಜ್ಜೀವಿಸುವ ಯೋಜನೆ ಘೋಷಿತವಾದಾಗ ಸಹಜವಾಗಿ ಭಾರತದೆಲ್ಲೆಡೆ ಉತ್ಸಾಹದ ಅಲೆಯೆದ್ದಿತ್ತು. ಕ್ರಿ.ಶ. ೧೨ನೇ ಶತಮಾನದ ಅಂತ್ಯದಲ್ಲಿ ಧ್ವಂಸಗೊಳ್ಳುವುದಕ್ಕೆ ಹಿಂದಿನ ಕಾಲದಲ್ಲಿ ಜಪಾನ್, ಕೋರಿಯಾ ಮೊದಲಾದ ಅನೇಕ ದೇಶಗಳಿಂದಲೂ ದೊಡ್ಡಸಂಖ್ಯೆಯಲ್ಲಿ ಶಿಕ್ಷಾರ್ಥಿಗಳನ್ನು ಆಕರ್ಷಿಸುತ್ತಿದ್ದ ನಾಲಂದಾ ವಿಶ್ವವಿದ್ಯಾಲಯದ ಹಿರಿಮೆಯ ಬಗೆಗೆ ಚೀನೀ ಪ್ರವಾಸಿಗ ಹ್ಯೂಯನ್‌ತ್ಸಾಂಗ್ ದಾಖಲೆ ಮಾಡಿರುವ ವಿವರಗಳು ಪ್ರಸಿದ್ಧವಾದುವು. ನಾಲಂದಾ ಪುನರುತ್ಥಾನ ಯೋಜನೆಗೆ ಆಸ್ಟ್ರೇಲಿಯ, ಜಪಾನ್, ವಿಯೆಟ್ನಾಂ ಮೊದಲಾದ ದೇಶಗಳಿಂದ ಉತ್ಸಾಹಪೂರ್ವಕ ಪ್ರತಿಕ್ರಿಯೆ ಬಂದಿತು. ಇಂತಹ ಉದಾತ್ತವೂ ಪ್ರತಿಷ್ಠಿತವೂ ಆದ ಯೋಜನೆ ಆರಂಭ ದಶೆಯಿಂದಲೇ ವಿವಾದಕ್ಕೆ ಸಿಲುಕಿದುದು ವಿಷಾದನೀಯ. ಪಾರಂಪರಿಕ ಜ್ಞಾನಾಂಗಗಳ ಅಧ್ಯಯನ-ಅಧ್ಯಾಪನಗಳೇ ಹೃದಯವಾಗಿದ್ದ ಜಗತ್ಪ್ರಸಿದ್ಧ ವಿದ್ಯಾಕೇಂದ್ರದ ಪುನರವತರಣಕ್ಕೆ ಪಾರಂಪರಿಕ ಜ್ಞಾನಾಂಗಗಳ ಎಷ್ಟು ಮಾತ್ರ ಹಿನ್ನೆಲೆಯೂ ಇಲ್ಲದ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರನ್ನು ಉಪಕುಲಪತಿಯಾಗಿ ನಿಯುಕ್ತಿ ಮಾಡಿದಾಗಲೇ ಈ ಯೋಜನೆಯ ಬಗೆಗೆ ಸಾರ್ವಜನಿಕರಲ್ಲಿ ಭ್ರಮನಿರಸನ ಶುರುವಾಯಿತು.

ಅಮರ್ತ್ಯಸೇನ್ ಅನೇಕ ವರ್ಷಗಳಿಂದ ಪಾರಂಪರಿಕವಾದದ್ದನ್ನೆಲ್ಲ ಭರ್ತ್ಯನೆ ಮಾಡುವ ಜಾಯಮಾನದವರೆಂಬುದು ಸುವಿದಿತವೇ ಆಗಿದೆ. ಈ ಹಿನ್ನೆಲೆಯಲ್ಲಿ ಅವರು ನೂತನ ವಿಶ್ವವಿದ್ಯಾಲಯ ಯೋಜನೆಯನ್ನು ತಮ್ಮ ಎಂದಿನ `ಅಜೆಂಡಾ’ಕ್ಕಾಗಿ ಬಳಸಿಕೊಂಡರು ಎಂಬ ಆಪಾದನೆ ನಿರಾಧಾರವೆನಿಸದು.

ಮುಸ್ಲಿಮರ ಹಿಂಸಾಪ್ರವಣತೆಯನ್ನು `ಇದು ಅವರ ರಕ್ತಗತ ಸ್ವಭಾವ’ ಎಂದು ಅಮರ್ತ್ಯಸೇನ್ ಸಮರ್ಥಿಸಿದ್ದಿದೆ. ಆದರೆ ಅದಕ್ಕೆ ಪ್ರತೀಕಾರವೆಸಗುವ ಅಧಿಕಾರ ಹಿಂದೂಗಳಿಗೆ ಇಲ್ಲವೆಂಬುದು ಅಮರ್ತ್ಯಸೇನ್ ಅವರ ಪ್ರಾಜ್ಞ ಮಂಡನೆ. ವಿವರಣೆ ಅನಾವಶ್ಯಕ. ತಮ್ಮ `ರಕ್ತಗತ ಸ್ವಭಾವ’ದ ಬಗೆಗೆ ಹೆಮ್ಮೆಪಡುವ ಅಧಿಕಾರವನ್ನು ಅಮರ್ತ್ಯಸೇನ್ ಮುಸ್ಲಿಮರಿಗೆ ಮಾತ್ರ ನೀಡಿದ್ದಾರೆ.

ಅಮರ್ತ್ಯಸೇನ್ ಸೋನಿಯಾಗಾಂಧಿಯವರಿಗೂ ಮನಮೋಹನ್ಸಿಂಗ್ರವರಿಗೂ ನಿಕಟವರ್ತಿಯಾಗಿದ್ದುದು ಹುದ್ದೆಗೆ ಅವರ ಏಕೈಕ ಅರ್ಹತೆಯಾಗಿತ್ತು

ನಾಲಂದಾದಂತಹ ವಿಶ್ವವಿದ್ಯಾಲಯದ ಕುಲಪತಿ ಉಪಕುಲಪತಿ ಸ್ಥಾನಗಳಿಗೆ ಇಡೀ ದೇಶದಲ್ಲಿಯೆ ವಿದ್ವತ್ತಿಗಾಗಿ ಪ್ರತಿಷ್ಠಿತರಾದಂತಹವರನ್ನು ನೇಮಿಸಬೇಕು – ಎಂದು ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ೪ನೇ ಜುಲೈ ೨೦೧೧ರಷ್ಟು ಹಿಂದೆಯೆ ಆಗಿನ ಕೇಂದ್ರ ಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಪತ್ರ ಬರೆದಿದ್ದರು. ಅಮರ್ತ್ಯಸೇನ್ ನಡವಳಿಗಳಿಂದ ಡಾ| ಅಬ್ದುಲ್ ಕಲಾಂ ಎಷ್ಟು ನಿರಾಶರಾಗಿದ್ದರೆಂದು ಇದರಿಂದ ಊಹಿಸಬಹುದು. (ನಾಲಂದಾ ವಿಶ್ವವಿದ್ಯಾಲಯ ಪುನರುತ್ಥಾನ ಯೋಜನೆಗೆ ೨೦೦೬ರಲ್ಲಿ ಜನ್ಮವಿತ್ತಿದ್ದವರೇ ಡಾ|| ಕಲಾಂ.) ಹಲವಾರು ಶ್ರೇಷ್ಠ ವಿದ್ವಾಂಸರು ಲಭ್ಯವಿರುವಾಗ ವಿದ್ವತ್ತಿನ ಹಿನ್ನೆಲೆಯಿಲ್ಲದ ಅಮರ್ತ್ಯಸೇನ್ ಅಂತಹವರನ್ನು ಪ್ರಮುಖರನ್ನಾಗಿ ನೇಮಿಸಿದುದನ್ನು ಡಾ|| ಕಲಾಂ ಹಲವು ಬಾರಿ ಟೀಕಿಸಿದ್ದರು.

ಸ್ವೈರಾಚಾರ; ನಿಯಮೋಲ್ಲಂಘನ ಸರಣಿ

೨೦೧೦ರ ಮೇ ತಿಂಗಳಿನಷ್ಟು ಹಿಂದೆಯೆ ಸರ್ಕಾರವು ವಿಧಿಬದ್ಧವಾಗಿ ಅಧಿನಿಯಮವನ್ನು ರಚಿಸಿದ್ದು ಅದೇ ವರ್ಷ ಸೆಪ್ಟೆಂಬರ್ ೨೧ರಂದು ಅದಕ್ಕೆ ರಾಷ್ಟ್ರಪತಿಗಳು ಅನುಮೋದನೆಯ ಅಂಕಿತ ಮಾಡಿದ್ದರು. ಆ ಸೂಚನಾವಳಿಯನ್ನು ಅಮರ್ತ್ಯಸೇನ್ ಅವರಾಗಲಿ ಯಾರೇ ಆಗಲಿ ಅಲಕ್ಷಿಸುವುದನ್ನು ಸಮರ್ಥನೀಯ ಎನ್ನಬಹುದೆ?

ನಾಲಂದಾ ಯೋಜನೆಯ ಪೂರ್ವಪರಿಶೀಲನೆಗಾಗಿ ಅಮರ್ತ್ಯಸೇನ್ ಅವರನ್ನೊಳಗೊಂಡ ೧೧ ಸದಸ್ಯರ ಸಮಾಲೋಚನ ಸಮಿತಿಯೊಂದು ಯು.ಪಿ.ಎ. ಸರ್ಕಾರದಿಂದ ಘಟಿತವಾಗಿತ್ತು. ಆದರೆ ನಾಲಂದಾ ವಿಶ್ವವಿದ್ಯಾಲಯ ಅಧಿಕೃತವಾಗಿ ಉದ್ಘಾಟನೆಗೊಂಡ ಮೇಲೂ ಅಮರ್ತ್ಯಸೇನ್ ಮೇಲೆ ಪ್ರಸ್ತಾವಿಸಿದ ಸಮಾಲೋಚನ ಸಮಿತಿಯ ಪರಾಮರ್ಶನೆಯನ್ನೆ ಆಧಾರವಾಗಿರಿಸಿಕೊಂಡು ನೂತನ ವಿದ್ಯಾಲಯದ ಪಾಠ್ಯಾದಿ ಕಾರ್ಯಕ್ರಮಗಳನ್ನು ನಿರ್ಣಯಿಸತೊಡಗಿದರು. ಇದು ವಿವಾದಾಸ್ಪದವಾಯಿತು. ಆ ವೇಳೆಗೇ ಸರ್ಕಾರದಿಂದ ಪ್ರಕಟಗೊಳಿಸಲಾಗಿದ್ದ ಅಧಿನಿಯಮಗಳನ್ನು ಉಪೇಕ್ಷಿಸಲಾಗಿತ್ತು.

೯ ತಿಂಗಳೊಳಗೆ ನಾಲಂದಾಕ್ಕೆ ಸಂಬಂಧಿಸಿದ ಸವಿವರ `ಪ್ರಾಜೆಕ್ಟ್ ರಿಪೋರ್ಟ್’ ಸಲ್ಲಿಸಬೇಕಾಗಿದ್ದ ಅಮರ್ತ್ಯಸೇನ್ ೩ ವರ್ಷಗಳಾದ ಮೇಲೂ ಅದನ್ನು ಸಿದ್ಧಪಡಿಸಲಿಲ್ಲ. ಆದರೂ ಅವರದೇ ಮಂಡಳಿ ಅವರನ್ನು  ಚಾನ್ಸೆಲರ್ ಪದವಿಗೆ ೨೦೧೧ರಲ್ಲಿ ನಿಯುಕ್ತಿ ಮಾಡಿದುದು ಒಂದು ವೈಚಿತ್ರ್ಯ.

ಅಲ್ಲಿಂದೀಚೆಗೆ ನಿಯಮೋಲ್ಲಂಘನೆಗಳ ಸರಣಿಯೇ ಶುರುವಾಯಿತು. ಉಪಕುಲಪತಿ ಸ್ಥಾನಕ್ಕೆ ನಿಯುಕ್ತಿಗೊಂಡ ಗೋಪಾ ಸಬರವಾಲ್ ಅವರು ಆ ಸ್ಥಾನಕ್ಕೆ ಯಾವ ದೃಷ್ಟಿಯಿಂದಲೂ ಅರ್ಹರಾಗಿರಲಿಲ್ಲ. ಅವರು ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗದಲ್ಲಿ ರೀಡರ್ ಮಾತ್ರವಾಗಿದ್ದವರು; ನಾಲಂದಾದ ಪೂರ್ವಾಪರಗಳ ಬಗೆಗೆ ಪರಿಜ್ಞಾನ ಇರದವರು. ಯಾವುದೇ ಉಪಕುಲಪತಿ ಸ್ಥಾನದ ಅಭ್ಯರ್ಥಿಗಳಿಗೆಂದು ಯುಜಿಸಿ ವಿಧಿಸಿರುವ ಅರ್ಹತೆಗಳನ್ನೂ ಅವರು ಪಡೆದವರಲ್ಲ. ನಾಲಂದಾದಲ್ಲಿ ಅವರಿಗೆ ನೀಡಲಾದ ಮಾಸಿಕ ವೇತನ ರೂ. ೫.೬ ಲಕ್ಷ ಎಂದರೆ ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿಯ ವೇತನದ ಎರಡರಷ್ಟು.

ವಿಷಯ ಅಲ್ಲಿಗೆ ಮುಗಿಯಲಿಲ್ಲ. ಗೋಪಾ ಸಬರವಾಲ್ ಅವರು ತಮ್ಮ ಓರಗೆಯವರಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರಾಧ್ಯಾಪಕ ಅಂಜನಾ ಶರ್ಮಾ ಅವರನ್ನು ನಾಲಂದಾಕ್ಕೆ `ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ’ ಆಗಿ ಕರೆಯಿಸಿಕೊಂಡರು. (ಮಾಸಿಕ ವೇತನ ರೂ. ೩.೩ ಲಕ್ಷ. ಇದೂ ದೇಶದ ಯಾವುದೇ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿರುವುದಕ್ಕಿಂತ ಅಧಿಕ.)

ನೇಮಕಾತಿಗಳೂ ಕಲಾಪಗಳೂ ಸ್ವೇಚ್ಛೆಯಾಗಿ ನಡೆದಿದ್ದವೆನ್ನಲು ಪುರಾವೆಗಳ ಕೊರತೆಯಿಲ್ಲ. ಅಮರ್ತ್ಯಸೇನ್ ತಮ್ಮ ಸ್ವಘಟಿತ ಸಲಹಾ ಮಂಡಳಿಯಲ್ಲಿ ತತ್ಕಾಲೀನ ಪ್ರಧಾನಮಂತ್ರಿಗಳ ಪುತ್ರಿ ಉಪಂದಿರ್ ಸಿಂಹರನ್ನೂ ಸೇರಿಸಿದ್ದರು; ಆಕೆಯ ಸಹಯೋಗಿ ನಯನಜ್ಯೋತಿ ಲಾಹಿರಿ ಎಂಬಾಕೆಗೂ `ತಜ್ಞ’ ಪಟ್ಟವನ್ನು ಕೊಟ್ಟಿದ್ದರು. ಈ ಇಬ್ಬರೂ ಯಾವುದೇ ಶಾಸ್ತ್ರದ ತಜ್ಞರೆಂದು ಪ್ರತಿಷ್ಠಿತರಾದವರಲ್ಲ.

ನೂತನ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ತರುವಾಯವೂ ಅಮರ್ತ್ಯಸೇನ್ ತಮ್ಮ ಕಾರುಬಾರುಗಳನ್ನು ದೆಹಲಿಯಲ್ಲಿದ್ದುಕೊಂಡೇ ನಡೆಸಿದ್ದರು.

ದಿಶಾಹೀನತೆ

ಹಣಕಾಸಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ದೂರವಿರಿಸುವ ಆಶಯದಿಂದ ಮನಮೋಹನ್‌ಸಿಂಗ್ ಸರ್ಕಾರ ನಾಲಂದಾವನ್ನು `ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ’ ಎಂದು ಕರೆದರೂ, ವ್ಯಾವಹಾರಿಕ ಸ್ತರದಲ್ಲಿ ಅದನ್ನು ಒಂದು `ಕೇಂದ್ರೀಯ ವಿಶ್ವವಿದ್ಯಾಲಯ’ ಎಂದೇ ಸರ್ಕಾರ ಪರಿಗಣಿಸಿತ್ತು. ಅದರ ಖರ್ಚಿನ (ರೂ. ೧೦೦೦ ಕೋಟಿ) ಅಧಿಕಾಂಶವನ್ನು ನೀಡಿರುವವರು ಭಾರತದ ತೆರಿಗೆದಾರರು.

ಆರಂಭದಿಂದಲೇ ನಿರೀಕ್ಷೆ ಇದ್ದದ್ದು ನೂತನ ವಿಶ್ವವಿದ್ಯಾಲಯವು ಕೂಡಿದಮಟ್ಟಿಗೂ ಹಿಂದೆ ಎಂದರೆ ೧೨ ನೇ ಶತಮಾನದವರೆಗೆ ಇದ್ದ ಸ್ಥೂಲ ಪ್ರಾಕಾರವನ್ನು (ಉದಾ: ಬೌದ್ಧಧರ್ಮ ಅಧ್ಯಯನಕ್ಕೆ ಪ್ರಾಧಾನ್ಯ, ಇತ್ಯಾದಿ) ಉಳಿಸಿಕೊಂಡಿರಬೇಕೆಂಬುದು. ಹೀಗಿದ್ದಾಗ ನೂತನ ವಿಶ್ವವಿದ್ಯಾಲಯದ ಅಂಗವಾಗಿ ಮಾಹಿತಿ ತಂತ್ರಜ್ಞಾನ ವಿದ್ಯಾಲಯವನ್ನು ಸ್ಥಾಪಿಸಿದುದು ಅಮರ್ತ್ಯಸೇನ್ ಪಡೆಯ ದಿಶಾಹೀನತೆಯನ್ನು ಇನ್ನಷ್ಟು ಸ್ಫುಟಪಡಿಸಿತು.

ಎಂತಹವರೂ ಲಜ್ಜೆಪಡಬೇಕಾದ ರೀತಿಯಲ್ಲಿ ಸ್ವೈರವಾಗಿ ನಿಯಮಗಳನ್ನು ಗಾಳಿಗೆ ತೂರಿ ಸದುದ್ದೇಶದ ಯೋಜನೆಯನ್ನು ಪಥಭ್ರಷ್ಟಗೊಳಿಸಿರುವ ಅಮರ್ತ್ಯಸೇನ್ ಈಗಿನ ಅವಧಿಯ ನಂತರ (ಜುಲೈ ೨೦೧೫) ಸರ್ಕಾರವು ತಮ್ಮ ಚಾನ್ಸೆಲರ್ ಹುದ್ದೆಯನ್ನು ಮುಂದುವರಿಸುವ ಇಚ್ಛೆಯನ್ನು ತೋರದಿರುವಾಗ “ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮಧ್ಯಪ್ರವೇಶ ನಡೆಯುತ್ತಿದೆ” (`ದಿ ಇಂಡಿಯನ್ ಎಕ್ಸ್‌ಪ್ರೆಸ್’, ೨೦-೫-೨೦೧೫) ಎಂದೆಲ್ಲ ಹಾರಾಡಿದ್ದಾರೆ.

ಒಂದು ವಿಕಟತೆಯನ್ನು ಗಮನಿಸಬಹುದು: ಉದ್ದಿಷ್ಟ ನಾಲಂದಾ ಯೋಜನೆಗೆ ನಿರ್ದೇಶಕರಾಗಿ ಎಷ್ಟು ಮಾತ್ರವೂ ಯೋಗ್ಯತೆ ಇಲ್ಲದ ತಮ್ಮನ್ನು ಮನಮೋಹನ್‌ಸಿಂಗ್ ಸರ್ಕಾರವು ನೇಮಿಸಿದ್ದಾಗ ಅದು `ಶಿಕ್ಷಣದಲ್ಲಿ ರಾಜಕಿಯ ಹಸ್ತಕ್ಷೇಪ’ ಎಂದು ಅಮರ್ತ್ಯಸೇನ್ ಮಹಾಶಯರಿಗೆ ಅನಿಸದಿದ್ದದ್ದು ವಿಚಿತ್ರವಲ್ಲವೆ?

ಸ್ವತಂತ್ರರಾಗಿರಬೇಕಾಗಿದ್ದ ಅಮರ್ತ್ಯಸೇನ್ ಯು.ಪಿ.ಎ. ಸರ್ಕಾರದ ಹಸ್ತಕರಾಗಿಯೂ ಫಲಾನುಭವಿಯಾಗಿಯೂ ವರ್ತಿಸಿದುದು ಅವರ ಕ್ಷುದ್ರತೆಯನ್ನು ಎತ್ತಿತೋರಿಸಿತು. ಪದೇ ಪದೇ `ನನ್ನ ಮಿತ್ರ ಮನಮೋಹನ್‌ಸಿಂಗ್’ ಕುರಿತು ಮಾತನಾಡುತ್ತಿದ್ದರು. ಸದಾ ಏನೇನೊ ಹುಳುಕುಗಳನ್ನು ಅನ್ವೇಷಿಸುವ ಅಮರ್ತ್ಯಸೇನ್‌ರಿಗೆ ಯು.ಪಿ.ಎ. ಅಧಿಕಾರಾವಧಿಯಲ್ಲಿ ಆಕ್ಷೇಪಾರ್ಹವಾದ ಒಂದು ಸಂಗತಿಯೂ ಗೋಚರಿಸಲಿಲ್ಲ. ಮೊದಲಿನಿಂದ ಅವರು ಭಾಜಪಕ್ಕೂ ಮತ್ತು ನರೇಂದ್ರಮೋದಿಯವರಿಗೂ ವಿರೋಧವನ್ನು ಸತತವಾಗಿ ವ್ಯಕ್ತಪಡಿಸಿದ್ದರು. ಈ ಅಭ್ಯಾಸ ಈಗಲೂ ಮುಂದುವಿರಿದಿದೆ. ಅಮರ್ತ್ಯಸೇನ್ ಸೋನಿಯಾಗಾಂಧಿಯವರಿಗೂ ಮನಮೋಹನ್‌ಸಿಂಗ್‌ರವರಿಗೂ ನಿಕಟವರ್ತಿಯಾಗಿದ್ದುದು ಈ ಹುದ್ದೆಗೆ ಅವರ ಏಕೈಕ ಅರ್ಹತೆಯಾಗಿತ್ತು – ಎಂಬುದು ಜನಜನಿತ. ಇಂತಹ ಅನೇಕ ಹುದ್ದೆಬಿರುದುಗಳಿಗೆ ಪಾತ್ರವಾಗಿಸಿದವರ ಋಣವನ್ನು ಅವರು ತೀರಿಸಬೇಡವೇ?

ಕೃಪೆ: ಉತ್ಥಾನ ಮಾಸಪತ್ರಿಕೆ

Leave a Reply

Your email address will not be published.

This site uses Akismet to reduce spam. Learn how your comment data is processed.