ನಮ್ಮ ಇತಿಹಾಸವನ್ನು ಅರಿಯುವುದಕ್ಕೆ ಪುಸ್ತಕಗಳು, ವಿವಿಧ ಐತಿಹಾಸಿಕ ಸ್ಥಳಗಳು ಸಹಕಾರಿಯಾಗುವಂತೆ ಆ ಕಾಲಘಟ್ಟಕ್ಕೆ ನಮ್ಮನ್ನು ಕೊಂಡೊಯ್ಯವಂತೆ ಮಾಡುವ ಸ್ಥಳವೇ ವಸ್ತುಸಂಗ್ರಹಾಲಯಗಳು.ಇಂದಿನ ದಿನಗಳಲ್ಲಿ ಗತಕಾಲದ ವಸ್ತುಗಳ ಪರಿಚಯವನ್ನು ಪಡೆಯಬೇಕಾದರೆ ನಮಗಿರುವ ಅದ್ಭುತ ವ್ಯವಸ್ಥೆಯೇ ವಸ್ತುಸಂಗ್ರಹಾಲಯಗಳು. ಇದರ ಬಗ್ಗೆ ಇಂದಿನ ಯುವಜನತೆಗೆ , ಮಕ್ಕಳಿಗೆ ಇತಿಹಾಸದ ಚಿತ್ರಣವನ್ನು ಕಟ್ಟಿಕೊಡಲು ವಸ್ತುಸಂಗ್ರಹಾಲಯಗಳು ಸಹಕಾರಿ. ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ಈ ನಾಡಿನ ಪರಂಪರೆಯ ಕುರಿತು ಪರಿಚಯಿಸುವ ದೃಷ್ಟಿಯಿಂದ ಮತ್ತು
ನಮ್ಮ ಸಾಮಾಜಿಕ ಸ್ಥಿತ್ಯಂತರಗಳನ್ನು ಅರಿಯುವ ಭಾಗವಾಗಿ ವಸ್ತುಸಂಗ್ರಹಾಲಯಗಳನ್ನು ಅವಲೋಕಿಸಬೇಕಿದೆ.

ವಸ್ತುಸಂಗ್ರಹಾಲಯದ ವಸ್ತುಗಳ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ತಿಳಿಯುವುದಕ್ಕೆ ಸಾಧ್ಯವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಇತಿಹಾಸವನ್ನು ಗಟ್ಟಿಯಾಗಿ ಕಟ್ಟಿಕೊಡಬಲ್ಲ ಶಕ್ತಿಯನ್ನು ವಸ್ತುಸಂಗ್ರಹಾಲಯ ಹೊಂದಿದೆ. ವಸ್ತುಸಂಗ್ರಹಾಲಯಗಳು ಸಾಂಸ್ಕೃತಿಕ ವಿನಿಮಯದ ಪ್ರಮುಖ ಭಾಗವಾಗಿದೆ. ಸಂಸ್ಕೃತಿಗಳ ಪುಷ್ಟೀಕರಣ ಮತ್ತು ಪರಸ್ಪರ ಅರ್ಥ ಮಾಡಿಕೊಳ್ಳುವಿಕೆಯ ಸಲುವಾಗಿ ಪ್ರತಿ ವರ್ಷ ಮೇ 18ರಂದು ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನಾಗಿ ಆಚರಿಸಲಾಗುತ್ತದೆ. ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯಗಳ ಮಂಡಳಿಯು ವಸ್ತುಸಂಗ್ರಹಾಲಯಗಳ ಪ್ರಮುಖ ಪಾತ್ರವನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವಸ್ತು ಸಂಗ್ರಹಾಲಯವೆಂದರೆ ಬರಿ ನಿರ್ಜೀವ ವಸ್ತುಗಳಿರುವ ಸ್ಥಳವಲ್ಲ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ಈ ದಿನದ ಮೂಲಕ ತಿಳಿಸಲಾಗುತ್ತದೆ. ಈ ವರ್ಷದ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯದ ದಿನದ ಥೀಮ್‌ “Museums and Environment.”


ಇತಿಹಾಸ
1951 ರಂದು ರಷ್ಯಾದ ಮಾಸ್ಕೋದಲ್ಲಿ ಇಂಟರ್‌ ನ್ಯಾಷನಲ್‌ ಕೌನ್ಸಿಲ್ ಆಫ್ ಮ್ಯೂಸಿಯಮ್ಸ್( ICOM) ಸಂಘಟನೆಯು ವಸ್ತುಸಂಗ್ರಹಾಲಯ ಮತ್ತು ಶಿಕ್ಷಣ ಕುರಿತು ಒಂದು ಸಭೆಯನ್ನು ನಡೆಸಿತ್ತು. ಈ ವೇಳೆ ಒಂದು ದಿನ ವಸ್ತುಸಂಗ್ರಹಾಲಯ ದಿನದ ಆಚರಣೆಗಾಗಿ ಮೀಸಲಿಡಲು ನಿರ್ಧರಿಸಲಾಯಿತು. ನಂತರ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ವಾರ್ಷಿಕ ಆಚರಣೆಯನ್ನು 1977ರಲ್ಲಿ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಂ (ICOM) ಸಂಘಟನೆಯು ಅಧಿಕೃತವಾಗಿ ಘೋಷಿಸಿತು. ಮೊದಲ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಮೇ 18, 1978 ರಂದು ಆಚರಿಸಲಾಯಿತು. ಇದರಲ್ಲಿ 22 ದೇಶಗಳು ಭಾಗವಹಿಸಿದ್ದವು. ಅಂದಿನಿಂದ ಪ್ರತಿ ವರ್ಷ ಮೇ 18ಕ್ಕೆ ಅಂತಾರಾಷ್ಟ್ರೀಯ ಮ್ಯೂಸಿಯಂ ದಿನವನ್ನಾಗಿ ಆಚರಿಸಲಾಗುತ್ತಿದೆ.
ವರ್ಷದಿಂದ ವರ್ಷಕ್ಕೆ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. 2009ರಲ್ಲಿ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದಂದು 90 ದೇಶಗಳ ಆಚರಣೆಯ ಭಾಗವಾಗಿ ಸುಮಾರು 20,000 ವಸ್ತುಸಂಗ್ರಹಾಲಯಗಳು ಇದ್ದವು. 2012 ರಂದು 129 ದೇಶಗಳಲ್ಲಿ ವಸ್ತುಸಂಗ್ರಹಾಲಯ ದಿನದಂದು ಭಾಗವಹಿಸುವ 30,000 ವಸ್ತುಸಂಗ್ರಹಾಲಯಗಳಿಗೆ ಏರಿಕೆ ಕಂಡಿದೆ. ಕಳೆದ ವರ್ಷ 2023 ರಲ್ಲಿ 37,000 ವಸ್ತುಸಂಗ್ರಹಾಲಯಗಳು ಭಾಗವಹಿಸಿದ್ದವು.


ಮಹತ್ವ
• ವಸ್ತುಸಂಗ್ರಹಾಲದಿಂದ ವಿಭಿನ್ನ ಸಂಸ್ಕೃತಿಯ ಪರಿಚಯವನ್ನು ಅರಿಯುವುದಕ್ಕೆ ಈ ದಿನ ಪ್ರೇರೇಪಿಸುತ್ತದೆ.
• ಅಂತರರಾಷ್ಟ್ರೀಯ ಸಹಯೋಗ ಮತ್ತು ಸಾಂಸ್ಕೃತಿಕ ವಿನಿಮಯದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಈ ದಿನ ಸಹಾಯಕವಾಗಿದೆ.
• ಮುಂಬರುವ ಪೀಳಿಗೆಗೆ ನೈಸರ್ಗಿಕ ಕಲಾಕೃತಿಗಳು ಮತ್ತು ಐತಿಹಾಸಿಕ ವಸ್ತುಗಳನ್ನು ಉಳಿಸಲು ಹಾಗೂ ಅದರಲ್ಲಡಗಿದ ಜ್ಞಾನ, ಶಿಕ್ಷಣ ಕ್ಷೇತ್ರದಲ್ಲಿ ಅವುಗಳ ಮೌಲ್ಯವನ್ನು ತಿಳಿಸಲು ಸಹಾಯ ಮಾಡುತ್ತದೆ.
• ವಸ್ತುಸಂಗ್ರಹಾಲಯಗಳ ಜಾಗೃತಿ ಕಾರ್ಯಕ್ರಮಗಳಿಂದ ನಮ್ಮ ಸಂಸ್ಕೃತಿಯನ್ನು, ಅದರ ಕುರುಹುಗಳನ್ನು ಉಳಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಲು ಈ ದಿನ ಪೂರಕವಾಗಿದೆ.
• ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಹಕಾರ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ವಸ್ತುಸಂಗ್ರಹಾಲಯಗಳು ವಹಿಸುವ ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಸಹಾಯಕವಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.