ನನ್ನ ಹಾಗೆಂದು ನೀನಾಗದಿರು ಗೆಳತಿ
ನಾ ಬೇರೆ ನೀ ಬೇರೆ ಹಾಗೇ ಇರು
ನಿನ್ನತನದಾಕರ್ಶದಲಿ ಹಿಡಿದಿರು |
ನಿನ್ನ ಸ್ಪರ್ಷದ ಹರ್ಷ ನನ್ನ ಸೆಳೆತಕೆ ಪರುಷ
ನೀನು ಸ್ತ್ರೀ ನಾ ಪುರುಷ ಅಂತೇ ಇರು
ಪ್ರೀತಿ ವರ್ಷದ ಧಾರೆ ಸುರಿಸುತ್ತಿರು |
ನೀ ನಾಚಿಕೆಯ ಹೂವು ಪರಿಮಳಕೆ ನಾ ಕಾವು
ಸಂತೈಸುತಾಗಾಗ ಸಖಿಯಾಗಿರು
ನಿನ್ನತನದೊಡನೆಯೇ ಸುಖಿಯಾಗಿರು |
ನಾನೆಂದು ಮೇಲಲ್ಲ ನೀನೆಂದು ಕೀಳಲ್ಲ
ಆದರೂ ಭಿನ್ನತೆಯು ಸೊಗಸುತಿರಲಿ
ಖಿನ್ನತೆಯನಳಿಸಲದು ಜತೆಯಲಿರಲಿ |
ನನ್ನೊಲವು ನನ್ನ ಪರಿ, ನಿನ್ನದೋ? ಅದೂ ಸರಿ
ಬೇರೆಯಾದರು ಕೂಡ ಬೆರೆಯುತಿರಲಿ
ಬೇರಿಗೆಂದಿಗು ನೀರನುಣಿಸುತಿರಲಿ
ಭ ರಾ ವಿಜಯ ಕುಮಾರ್