ಭಾರತ ಸ್ವಾತಂತ್ರ್ಯ ಹೋರಾಟದ ಕೆಚ್ಚು ಹೆಚ್ಚಿಸಿದ ಘಟನೆ ‘ಜಲಿಯನ್ ವಾಲಾಬಾಗ್’ ಹತ್ಯಾಕಾಂಡ. ಇದು ಭಾರತದಲ್ಲಿ ನಡೆದ ಅತ್ಯಂತ ಘೋರ ಹಾಗೂ ಅಮಾನವೀಯ ದುರಂತ ಘಟನೆಗಳಲ್ಲೊಂದು. ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಭಾರತೀಯ ಜನರ ಮೇಲೆ ಮಾಡಿದ ದೌರ್ಜನ್ಯದ ಸಂಕೇತವಾಗಿ ಉಳಿದಿದೆ. ಈ ಘಟನೆಗೆ ಅಮೃತಸರ ಹತ್ಯಾಕಾಂಡ ಎಂದೂ ಕರೆಯತ್ತಾರೆ.  ಅಮೃತಸರ್‌ ನ ಮೈದಾನದಲ್ಲಿ ಜನರೆಲ್ಲ ಬೈ

ಸಾಕಿ ಎಂಬ ಹಬ್ಬದ ಖುಷಿಯಲ್ಲಿದ್ದರು. ಆದರೆ ಕ್ರೂರ ಬ್ರಿಟಿಷ್ ಸೇನಾಧಿಕಾರಿಗಳು ಹಾರಿಸಿದ ಗುಂಡಿನ ದಾಳಿಗೆ ತುತ್ತಾಗಿ ಜನರ ರಕ್ತಪಾತವೇ ಹರಿದಿತ್ತು. ಈ ಕಾರಣಕ್ಕಾಗಿ ಹುತಾತ್ಮರನ್ನು ನೆನೆಯಲು ಹಾಗೂ ಅವರಿಗೆ ಗೌರವ ವಂದನೆ ಸಲ್ಲಿಸಲು ಪ್ರತಿವರ್ಷ ಏಪ್ರಿಲ್‌ 13ರಂದು ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ಸ್ಮರಣಾ ದಿನವನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತದೆ.


ಘಟನೆ ಹಿನ್ನೆಲೆ
ಭಾರತದ ಇತಿಹಾಸದಲ್ಲಿ ಏಪ್ರಿಲ್‌ 13 ಮರೆಯಲಾಗದ ದಿನ. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೇಳುತ್ತಿದ್ದ ಭಾರತೀಯರ ಕೂಗಿಗೆ ಪ್ರತೀಕಾರವಾಗಿ ಬ್ರಿಟಿಷರು ಜಲಿಯನ್‌ ವಾಲಾಬಾಗ್‌ನಲ್ಲಿ ಹತ್ಯಾಕಾಂಡ ನಡೆಸಿದರು.


1919 ರಲ್ಲಿ ಬ್ರಿಟಿಷ್‌ ಸರ್ಕಾರ ರೌಲತ್‌ ಕಾಯ್ದೆ ಜಾರಿಗೆ ತಂದಿತ್ತು. ರಾಜಕೀಯ ಚಟುವಟಿಕೆಗಳನ್ನು ನಿಗ್ರಹಿಸಲು ಸರ್ಕಾರಕ್ಕೆ ಅಧಿಕಾರ ನೀಡಿತ್ತು. ‌ಬ್ರಿಟಿಷರಿಗೆ ಯಾವುದೇ ವ್ಯಕ್ತಿಗಳ ಅನುಮಾನ ಬಂದಲ್ಲಿ ವಿಚಾರಣೆಯಿಲ್ಲದೆ ಬಂಧಿಸಲು ಅವಕಾಶ ನೀಡಿತ್ತು. ಏಪ್ರಿಲ್‌ 13, 1919 ರಲ್ಲಿ ಪಂಜಾಬ್‌ ಪ್ರಾಂತದ ಅಮೃತ್‌ ಸರ್‌ ನ ಬಳಿ ಜಲಿಯನ್‌ ವಾಲಾ ಬಾಗ್‌ ಎಂಬ ಮೈದಾನದಲ್ಲಿ ಬ್ರಿಟಿಷ್‌ ಸರ್ಕಾರ ಜಾರಿಗೆ ತಂದ ರೌಲಟ್ ಕಾಯ್ದೆ ವಿರುದ್ಧ ಸಾವಿರಾರು ಜನರು ಶಾಂತಿಯುತ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಅದರ ಜೊತೆಗೆ ಸುತ್ತಲೂ ಎತ್ತರದ ಗೋಡೆಯಿಂದ ಆವೃತ್ತಗೊಂಡಿದ್ದ ಒಂದೇ ಪ್ರವೇಶದ್ವಾರವನ್ನು ಹೊಂದಿದ್ದ ಈ ಮೈದಾನದಲ್ಲಿ ಅಮೃತಸರ್‌ ನ ಸುತ್ತಮುತ್ತಲಿನ ಜನರು ಬೈಸಾಕಿ ಹಬ್ಬದಲ್ಲಿ ತೊಡಗಿಕೊಂಡಿದ್ದರು. ಶಾಂತಿಯುತವಾಗಿ ನಡೆಯುತ್ತಿದ್ದ ಈ ಪ್ರತಿಭಟನೆಯನ್ನು ಹತ್ತಿಕ್ಕಲು ಬಂದ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಹೊರಹೋಗಲಿದ್ದ ಒಂದೇ ಒಂದು ನಿರ್ಗಮನದ ದ್ವಾರವನ್ನು ಅಡ್ಡಗಟ್ಟಿ ಅಲ್ಲಿದ್ದ ಸಾವಿರಾರು ಜನರ ಮೇಲೆ ಗುಂಡಿಟ್ಟು ಕೊಲ್ಲಲು ತನ್ನ ಸೇನೆಗೆ ಸೂಚನೆ ನೀಡಿದ್ದನು. ನೋಡು ನೋಡುತ್ತಿದ್ದಂತೆ ಜನರಲ್ ಡಯರ್ ಎನ್ನುವ ಅಧಿಕಾರಿಯ ಆಜ್ಞೆಯ ಅನುಸಾರ ನಡೆಸಿದ ಗುಂಡಿನ ದಾಳಿಯಲ್ಲಿ ನೂರಾರು ಜನ ಸ್ಥಳದಲ್ಲೇ ಸಾವನ್ನಪ್ಪಿದರು. ಇನ್ನುಳಿದವರು ಕಾಲ್ತುಳಿತಕ್ಕೆ ತುತ್ತಾದರು. ಸಾವಿರಾರು ಜನ ಗಾಯಗೊಂಡರು. ಇದರಿಂದ ಹಿರಿಯರು, ಹೆಂಗಸರು ಮಕ್ಕಳೆಲ್ಲರ ಆಕ್ರಂದನ ಮುಗಿಲು ಮುಟ್ಟಿತು. ಅನೇಕರು ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಅಲ್ಲಿದ್ದ ಬಾವಿಗೂ ಹಾರಿದರು. ಈ ಘಟನೆಯನ್ನು ಅಮೃತಸರ ಹತ್ಯಾಕಾಂಡ ಅಥವಾ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಎಂದು ಕರೆಯಲಾಗುತ್ತದೆ.


ಭಾರತೀಯ ಕ್ರಾಂತಿಕಾರಿಗಳು ಮತ್ತು ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಗೌರವ ಸೂಚಿಸುವ ಸಲುವಾಗಿ 1951ರಲ್ಲಿ ಭಾರತ ಸರ್ಕಾರ ಸ್ಮಾರಕ ಸ್ಥಾಪಿಸಿತು. ಇದು ಹೋರಾಟ ಮತ್ತು ತ್ಯಾಗದ ಸಂಕೇತವಾಗಿದ್ದು, ಯುವಜನತೆಯಲ್ಲಿ ದೇಶಪ್ರೇಮವನ್ನು ಹುಟ್ಟುಹಾಕುತ್ತಿದೆ. ಘಟನೆಯ ನೆನಪಿನಲ್ಲಿ ‘ಯಾದ್-ಇ-ಜಲಿಯನ್’ ಎಂಬ ವಸ್ತು ಸಂಗ್ರಹಾಲಯವನ್ನೂ ಸ್ಥಾಪಿಸಲಾಗಿದೆ.

ಉಧಾಮ್ ಸಿಂಗ್ ರಿಂದ ಪ್ರತೀಕಾರ

ಜಲಿಯನ್ ವಾಲಾ ಬಾಗ್ ನರಮೇಧ ನಡೆದ ಎರಡು ದಶಕಗಳ ನಂತರ ಅದಕ್ಕೆ ಪ್ರತಿಕಾರವನ್ನು ಕ್ರಾಂತಿಕಾರಿ ಉಧಾಮ್ ಸಿಂಗ್ ತೆಗೆದುಕೊಂಡರು.ಈ ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದ ಉಧಮ್ ಸಿಂಗ್ ತನ್ನ ಕಣ್ಣೆದುರೇ ತನ್ನ ತಾಯ್ನಾಡಿನ ಮೇಲಾಗುತ್ತಿರುವ ಶೋಷಣೆಯನ್ನು ಕಂಡು ದಿಗ್ಭ್ರಮೆಗೊಂಡರು. ಇದಕ್ಕೆ ಪ್ರತಿಕಾರವನ್ನು ತೆಗೆದುಕೊಳ್ಳಲೇ ಬೇಕೆಂದು ಅಂದೇ ಶಪಥ ಮಾಡಿದರು. ಕೇವಲ ಉದ್ವೇಗದ ಶಪಥ ಅದಾಗಿರದೇ 21 ವರ್ಷಗಳ ಕಾಲ ನಿರಂತರವಾಗಿ ಆ ಶಪಥಕ್ಕಾಗಿ ಶ್ರಮಿಸಿ ಪೂರ್ಣಗೊಳಿಸಿದ ಶಪಥ ಅದಾಗಿತ್ತು.


ಮಾರ್ಚ್‌ 11, 1940 ರಂದು ಲಂಡನ್ ನ ಕಾಕ್ಸ್‌ಟನ್ ಹಾಲ್ ನಲ್ಲಿ ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ಸೆಂಟ್ರಲ್ ಏಷಿಯನ್ ಸೊಸೈಟಿಯ ಜಂಟಿ ಸಭೆ ನಡೆದಿತ್ತು. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ರೂವಾರಿಗಳಲ್ಲಿ ಒಬ್ಬನಾಗಿದ್ದ ಮೈಕಲ್‌ ಓ ಡಯರ್‌ ಅಲ್ಲಿ ಭಾರತದಲ್ಲಿ ಗವರ್ನರ್‌ ಜನರಲ್‌ ಆಗಿದ್ದ ವೇಳೆ ತಾನು ಮಾಡಿದ ಸಾಧನೆಗಳನ್ನು ಹೇಳುತ್ತಿದ್ದನು. ಅವನ ಭಾಷಣ ಮುಗಿದ ನಂತರ ಸನ್ಮಾನ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಉಧಮ್‌ ಸಿಂಗ್‌ ಸಭಾಂಗಣಕ್ಕೆ ಬಂದು ಡಯರ್‌ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಕೊಂದನು. ನಂತರ ಉಧಮ್‌ ಸಿಂಗ್‌ ನನ್ನು ಬ್ರಿಕ್ಸ್‌ ಟನ್‌ ಜೈಲಿಗೆ ಸೇರಿಸಲಾಯಿತು. ಸುಮಾರು 20 ವರ್ಷಗಳ ಹಿಂದೆ ಮದನ್‌ ಲಾಲ್‌ ಧಿಂಗ್ರಾರನ್ನು ಗಲ್ಲಿಗೇರಿಸಿದ್ದ ಪೆಂಟೋವಿನಲ್ಲೇ ಉಧಮ್‌ ಸಿಂಗ್‌ ರವರನ್ನೂ ಜುಲೈ 31, 1940 ರಲ್ಲಿ ಗಲ್ಲಿಗೇರಿಸಲಾಯಿತು.

ಅಂತಹ ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೆದೆಯ ಹೋರಾಟ ಮತ್ತು ತ್ಯಾಗದಿಂದಾಗಿ ಬ್ರಿಟಿಷರು ಆಗಸ್ಟ್ 15, 1947 ರಂದು ಭಾರತದ ಮೇಲೆ ತಮ್ಮ ಆಳ್ವಿಕೆಯನ್ನು ತ್ಯಜಿಸಬೇಕಾಯಿತು. ಹೀಗಾಗಿ ಅವರು ಮುಂಬರುವ ಶತಮಾನಗಳವರೆಗೆ ಆಳುವ ಕನಸು ಕಂಡಿದ್ದರು. ಇತಿಹಾಸದ ಈ ಅಮಾನವೀಯ ಭಾಗದ ಸ್ಮರಣೆಯು ನಮ್ಮ ಮುಂಬರುವ ಪೀಳಿಗೆಗಳು ಅನ್ಯಾಯದ ವಿರುದ್ಧ ನಿಲ್ಲಲು ಸ್ಫೂರ್ತಿದಾಯಕವಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.