20.08.2026
ಶ್ರೀ ಛಲವಾದಿ ಟಿ ನಾರಾಯಣ ಸ್ವಾಮಿ ಅವರು ಕರ್ನಾಟಕದ ವಿಧಾನ ಪರಿಷತ್ ನಲ್ಲಿ ಕೇಳಿದ ಆರೆಸ್ಸೆಸ್ ಸಂಬಂಧಿತ ಪ್ರಶ್ನೆಗೆ ಉತ್ತರ ನೀಡಿದ ಗೃಹಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರ ಲಿಖಿತ ಹೇಳಿಕೆ
ರಾಷ್ಟ್ರೀಯ ಸ್ವಯಂಸೇವಕ ಸಂಘವು ಯಾವುದಾದರೂ ಗಲಭೆ ಪ್ರಕರಣಗಳಲ್ಲಿ ಭಾಗಿಯಾಗಿದೆಯೇ? ಎಂದು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಶ್ರೀ ಛಲವಾದಿ ಟಿ ನಾರಾಯಣಸ್ವಾಮಿ ಅವರು ಕೇಳಿದ ಪ್ರಶ್ನೆಗೆ “ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಟನೆಯ ಪಥಸಂಚಲನ ಮತ್ತು ಶಾಖೆ ನಡೆಸುವ ಸಂದರ್ಭಗಳಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ” ಎಂದು ಗೃಹಸಚಿವ ಶ್ರೀ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

09.12.2025
ಶ್ರೀ ಸುನೀಲ್ ಕುಮಾರ್ ವಿ (ಕಾರ್ಕಳ) ಅವರು ಆರೆಸ್ಸೆಸ್ ಕುರಿತಾಗಿ ವಿಧಾನಸಭೆಯಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದ ಆಗಿನ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಲಿಖಿತ ಹೇಳಿಕೆ
09.12.2025ರಂದು ಕರ್ನಾಟಕ ವಿಧಾನಸಭೆಯಲ್ಲಿ ಶ್ರೀ ಸುನೀಲ್ ಕುಮಾರ್ ವಿ (ಕಾರ್ಕಳ) ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಮೂರು ಪ್ರಶ್ನೆಗಳನ್ನು ಕೇಳಿದ್ದರು.
ರಾಜ್ಯದಲ್ಲಿ 2025ನೇ ವರ್ಷದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ವತಿಯಿಂದ ಪಥಸಂಚಲನ ಕಾರ್ಯಕ್ರಮಗಳು ನಡೆದಿವೆಯೇ? ಎಂದು ಕೇಳಿದ ಪ್ರಶ್ನೆಗೆ ಆಗಿನ ಗೃಹಸಚಿವ ಡಾ.ಜಿ.ಪರಮೇಶ್ವರ್ “ಹೌದು ನಡೆದಿವೆ” ಎಂದು ಉತ್ತರಿಸಿದ್ದರು.
ಮುಂದುವರೆದು “ಹಾಗಿದ್ದಲ್ಲಿ, ಎಷ್ಟು ಸ್ಥಳಗಳಲ್ಲಿ ಈ ಪಥಸಂಚಲನದ ಕಾರ್ಯಕ್ರಮಗಳು ನಡೆದಿವೆ; ಈ ಪಥಸಂಚಲನದಲ್ಲಿ ಪಾಲ್ಗೊಂಡ ಸ್ವಯಂಸೇವಕರ ಸಂಖ್ಯೆ ಎಷ್ಟು;? (ಜಿಲ್ಲಾವಾರು, ಸ್ಥಳವಾರು ವಿವರ ನೀಡುವುದು) ಎಂದು ಪ್ರಶ್ನಿಸಿದ್ದರು. ಅದಕ್ಕೆ “ರಾಜ್ಯದ ಒಟ್ಟು 518 ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ಕಾರ್ಯಕ್ರಮಗಳು ನಡೆದಿವೆ. ಸದರಿ ಪಥಸಂಚಲನದಲ್ಲಿ ಪಾಲ್ಗೊಂಡ ಜಿಲ್ಲಾವಾರು ಸ್ವಯಂಸೇವಕರ ಸಂಖ್ಯೆಯನ್ನು ಅನುಬಂಧದಲ್ಲಿ ನೀಡಲಾಗಿದೆ.” ಎಂದು ಉತ್ತರಿಸಿದ್ದರು.
ಇದರ ಜೊತೆಗೆ ಕೇಳಲಾದ “ಇದುವರೆಗೂ ನಡೆದಿರುವ ಈ ಪಥಸಂಚಲನದ ಸಂದರ್ಭದಲ್ಲಿ ಗಲಾಟೆ, ದೊಂಭಿಗಳು, ಕೋಮುಗಲಭೆಗಳು ನಡೆದಿವೆಯೇ? | (ವಿವರ ನೀಡುವುದು)” ಪ್ರಶ್ನೆಗೆ ಉತ್ತರಿಸಿದ್ದ ಗೃಹಸಚಿವರು “ಇದುವರೆಗೂ ನಡೆದಿರುವ ಪಥಸಂಚಲನದ ಈ ಸಂದರ್ಭದಲ್ಲಿ ಯಾವುದೇ ಗಲಾಟೆ, ದೊಂಭಿಗಳು, ಕೋಮುಗಲಭೆಗಳು ನಡೆದಿರುವುದಿಲ್ಲ.” ಎಂದು ಲಿಖಿತ ದಾಖಲೆಯ ಮೂಲಕ ತಿಳಿಸಿದ್ದರು.
