ಲೇಖನ: ನಾರಾಯಣ ಶೇವಿರೆ

ಸಮಾಜ, ಸಂಸ್ಕೃತಿ, ಪರಂಪರೆ ಇತ್ಯಾದಿಗಳು ಒಂದಕ್ಕೊಂದು ಬೆಸೆದುಕೊಂಡಿರುವ, ಯಾವುದೇ ರೀತಿಯಲ್ಲಿ ಪ್ರತ್ಯೇಕಿಸಲಾಗದ ಪಾರಸ್ಪರಿಕ ಅಸ್ತಿತ್ವಗಳು. ಪ್ರಸ್ತುತ ನಾವೊಂದು ಸಮಾಜವಾಗಿ; ಪಶ್ಚಿಮದ ಗುಲಾಮಗಿರಿಗೆ ತುತ್ತಾಗಿ, ಅಲ್ಲಿಯ ವಿಚಾರಭ್ರಮೆಯಿಂದ ಕೀಳರಿಮೆಗೀಡಾಗಿ, ರಿಲಿಜನ್ ಮತ್ತು ಆಧುನಿಕ ವಿಜ್ಞಾನ ಆಧಾರಿತ ಅಪಕಲ್ಪನೆಗಳ ರಾಷ್ಟ್ರ ಮತ್ತಿತರ ವಾದವೈಭವಕ್ಕೆ ಮತಿವಿಭ್ರಮಿತವಾಗಿ ನಮ್ಮೀ ಮೂಲಚಿಂತನೆಗಳಿಂದ ದೂರವಾಗಿದ್ದೇವಷ್ಟೆ. ಹಾಗಾಗಿ, ನಾವು ರಕ್ಷಣೆಯ ಕುರಿತು ಯೋಚಿಸುವಾಗ ಈಯೆಲ್ಲ ನೆಲೆಗಳಿಂದ ಯೋಚಿಸಬೇಕೆನಿಸುತ್ತದೆ.

ರಕ್ಷಣೆಯ ಸಮಗ್ರದೃಷ್ಟಿ

ಮನುಷ್ಯನ ಭೀತಿಗೆ ಜೈವಿಕ ಆಯಾಮ ಇದ್ದೇ ಇದೆ ಎನ್ನೋಣ. ಆತ ಆ ಆಯಾಮದಿಂದಷ್ಟೆ ಚಿಂತಿಸಿ ರಕ್ಷಣೆಗೆ ತೊಡಗಿದರೆ ಪ್ರಾಣಿಗಳಿಗಿಂತ ಖಂಡಿತಾ ಭಿನ್ನನಾಗಲಾರ. ಆತನ ವ್ಯಕ್ತಿತ್ವಕ್ಕೆ ಕುಟುಂಬದಿಂದ ತೊಡಗಿ ರಾಷ್ಟ್ರೀಯತೆಯವರೆಗೆ ಒಂದು ಸಮಷ್ಟಿ ಆಯಾಮವಿದೆ. ಇದಕ್ಕೆ ಎದುರಾಗಬಲ್ಲ ಸವಾಲುಗಳನ್ನು ನಿಷ್ಕ್ರೃಷ್ಟವಾಗಿ ಚಿಂತಿಸಿ ಸಮರ್ಥವಾಗಿ ನಿರ್ವಹಿಸಿದಾಗಷ್ಟೆ ಆತನ ಜೈವಿಕ ಅಸ್ತಿತ್ವಕ್ಕೊಂದು ಧನ್ಯತೆ. ಇಲ್ಲದಿರೆ; ‘ಉತ್ತಮ ಗುಣಮಟ್ಟದ ಬದುಕ’ನ್ನು ಬದುಕುವ ಮನುಷ್ಯನೂ ಒಂದೇ, ಮಾಂಸ-ಸೊಪ್ಪುಗಳನ್ನು ತಿಂದು ಉಸಿರಾಡುವ ಪ್ರಾಣಿಯೂ ಒಂದೇ. ಈಗ ನಮ್ಮದೇ ನೆಲೆಯಲ್ಲಿ ನಿಂತು ನೋಡುವುದಾದರೆ; ಇಲ್ಲಿ ಲಾಗಾಯ್ತಿನಿಂದ ನಾವೊಂದು ಸಮಾಜವಾಗಿದ್ದೇವೆ. ಬಹುಶಃ ಸುದೀರ್ಘ ಕಾಲದ ಸಮಾಜ ಜೀವನದ ಕಾರಣದಿಂದಾಗಿ ಅದರಲ್ಲಿ ಒಂದಷ್ಟು ಜಾತೀಯತೆ – ಅಸ್ಪೃಶ್ಯತೆ ಇತ್ಯಾದಿ ಅನಿಷ್ಟ ಕೊಳೆ ಅಂಟಿಕೊಂಡಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೆಂದರೆ ಈ ಕೊಳೆಯಿಂದ ಮುಕ್ತರಾಗುವುದೆನ್ನುವುದೂ ಹೌದು.

ಅರ್ಥೈಸಿ ಉತ್ತರಿಸಬೇಕಾದ ಬಾಹ್ಯ ಸವಾಲು

ಪಶ್ಚಿಮದಿಂದ ಇಲ್ಲಿಗೆ, ಇಲ್ಲಿಗೆ ಸಲ್ಲದ ರೀತಿರಿವಾಜುಗಳ, ಇಲ್ಲಿಯ ಶ್ರದ್ಧೆಗೆ ಅವಿಧೇಯವಾಗಿ ಅಪಾಯಕಾರಿಯಾಗಿ ನಡಕೊಳ್ಳುವ ರಿಲಿಜನ್ನುಗಳು ಬಂದಿವೆ. ವಿಶ್ವದ ಯಾವುದೇ ಸಮುದಾಯವನ್ನು ತನ್ನಂತೆ ಮಾಡುವ ಸ್ವಭಾವವಿಕೃತಿಯುಳ್ಳ ಆ ರಿಲಿಜನ್ನುಗಳು ನಮ್ಮ ಸಮಾಜದ ಒಂದಷ್ಟು ಭಾಗವನ್ನು ಮತಾಂತರದ ಮೂಲಕವೋ ಭಯೋತ್ಪಾದನೆಯ ಮೂಲಕವೋ ಆಪೋಷಣ ತಗೊಂಡಿವೆ. ಇಂಥ ಬಾಹ್ಯ ಸವಾಲುಗಳನ್ನು ಕೂಡ ಯಾವುದೇ ವಿಚಾರವಿಕೃತಿ ಇಲ್ಲದೆ ಚಿಂತಿಸಿ, ಮಾಡಬೇಕಾದ ಸರಿಯಾದ ನಿಭಾವಣೆಯು ರಕ್ಷಣೆಯ ಪಟ್ಟಿಯಲ್ಲಿ ಆದ್ಯವಾಗಿಯೇ ಬರಬೇಕಾದುದು. ಈ ಬಗೆಯಲ್ಲಿ, ನಮ್ಮ ಸಮಷ್ಟಿವ್ಯಕ್ತಿತ್ವದ ರಕ್ಷಣೆಯನ್ನು ಅವಶ್ಯ ಮಾಡಬೇಕಾಗಿದೆ. ಮತ್ತು ದಿನೇದಿನೇ ನಮ್ಮೀ ವ್ಯಕ್ತಿತ್ವಕ್ಕೆ ಎದುರಾಗುವ ಸವಾಲುಗಳೂ ವಿಶಿಷ್ಟವೂ ವಿಪರೀತವೂ ಆಗಿ ವಕ್ಕರಿಸುತ್ತಿವೆ. ಅವುಗಳ ನೈಜ ಪರಿಚಯವನ್ನು ಮಾಡಿಕೊಳ್ಳುವಲ್ಲಿ ಪಶ್ಚಿಮದ ಭಿನ್ನ ಭಿನ್ನ ಬಗೆಯ ಪ್ರಭಾವಕ್ಕೊಳಗಾದ ನಮಗೆ ತುಸು ತ್ರಾಸೂ ಆಗುತ್ತಿದೆ. ಮುಖ್ಯವಾಗಿ, ಪಶ್ಚಿಮದ ತದ್ವಿರುದ್ಧವೆನಿಸಬಲ್ಲ ಎಲ್ಲ ಸಿದ್ಧಾಂತಗಳೂ ಮೂಲತಃ ವ್ಯಕ್ತಿವಾದವನ್ನು ಆತುಕೊಂಡವು. ನಮ್ಮೆಲ್ಲ ಚಿಂತನೆಗಳು ಸಮಷ್ಟಿಗತವಾಗಿ ತೊಡಗುವಂಥವು. ನಮ್ಮ ವ್ಯಕ್ತಿತ್ವವನ್ನೂ ಸಮಷ್ಟಿಗತವಾಗಿ ಉಳಿಸಿ ವಿಕಾಸಗೊಳಿಸಬೇಕಾದಂತಹದು.

ಪಾರಸ್ಪರಿಕ ರಕ್ಷಾತತ್ತ್ವ

ಪ್ರಾಣಿಗಳಿಂದ ಪ್ರಾರಂಭಿಸಿದೆವಲ್ಲ, ಅಲ್ಲಿಗೇ ತೆರಳಿ ಮುಗಿತಾಯಕ್ಕೆ ಬರುವುದಾದರೆ; ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವುದು ಪ್ರಾಣಿಪ್ರಪಂಚಕ್ಕೆ ಸಹಜ. ಧಾರ್ಮಿಕನೆನಿಸಬೇಕಾದ ಮನುಷ್ಯನದು ಭಿನ್ನ ದಾರಿ. ಆತ ತನ್ನ ರಕ್ಷಣೆಯನ್ನು ತಾನಲ್ಲ, ಇತರರ ರಕ್ಷಣೆಯನ್ನು ತಾನು ಮಾಡಬೇಕಾದವ. ಮಹಾಭಾರತದ ಶಾಂತಿಪರ್ವದಲ್ಲಿ ಬರುವ ಕೃತಯುಗದ ಕಲ್ಪನೆಯೂ ಇದನ್ನೇ ಧ್ವನಿಸುತ್ತದೆ. ಅದರ ಪ್ರಕಾರ; ಆ ಯುಗದಲ್ಲಿ ರಾಜರೂ ಇರಲಿಲ್ಲ, ರಾಜ್ಯಗಳೂ ಇರಲಿಲ್ಲ, ಅಪರಾಧಿಯೂ ಇರಲಿಲ್ಲ, ಶಿಕ್ಷಿಸುವವನೂ ಇರಲಿಲ್ಲ, ಪರಸ್ಪರ ರಕ್ಷಿಸಿಕೊಂಡು ಜನ ಧರ್ಮದಿಂದ ಬದುಕುತ್ತಿದ್ದರು. ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳಬೇಕಾದ ಸ್ಥಿತಿ ಅಧಾರ್ಮಿಕವಾದುದು. ಪರಸ್ಪರರ ರಕ್ಷಣೆಯನ್ನು ಮಾಡಿಕೊಳ್ಳುವ ಸ್ಥಿತಿ ಧಾರ್ಮಿಕವಾದುದು. ಪರಸ್ಪರರ ರಕ್ಷಣೆ ಮಾಡಿಕೊಳ್ಳುವುದು ಎಂದರೆ ಯಾರೂ ರಕ್ಷಣೆ ಮಾಡುವ ಕ್ರಿಯೆಯಿಂದ ಮುಕ್ತರಾಗದಿರುವುದೂ ಹೌದು, ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳದಿರುವುದೂ ಹೌದು. ಅದೇ ವೇಳೆ ಅದು ನಾನಾ ಮುಖಗಳಲ್ಲಿ ಸಾಗಬೇಕಾದುದು. ದೃಷ್ಟಾಂತಕ್ಕೆ; ಬೌದ್ಧಿಕ ಸಮರ್ಥರು ಇತರರ ರಕ್ಷಣೆಯನ್ನು ಬೌದ್ಧಿಕವಾಗಿ ಮಾಡಿದರೆ, ದೈಹಿಕ ಸಮರ್ಥರು ಅದನ್ನು ಶಾರೀರಿಕವಾಗಿ ಮಾಡಬಲ್ಲರು. ಸವಾಲುಗಳು ಹಲವು ಮುಖಗಳಲ್ಲಿರಲು ರಕ್ಷಣೆಯೂ ಬಹುಮುಖಗಳಲ್ಲಿ ಆಗಬೇಕಾದುದು ಅವಶ್ಯ. ನಮ್ಮ ಸಮಷ್ಟಿವ್ಯಕ್ತಿತ್ವದ ರಕ್ಷಣೆಗೆ ಇದಕ್ಕಿಂತ ಇನ್ನ್ಯಾವ ಸಮ್ಯಕ್ ದಾರಿ ಇದ್ದೀತು! ಮತ್ತು, ಶ್ರಾವಣ ಹುಣ್ಣಿಮೆಯಂದು ನಾವೆಲ್ಲ ಆಚರಿಸುವ ರಕ್ಷಾಬಂಧನಕ್ಕೆ ನಿರ್ದಿಷ್ಟವಾಗಿ ಒಂದಷ್ಟು ಐತಿಹಾಸಿಕ, ಸಾಂಸ್ಕೃತಿಕ ಹಿನ್ನೆಲೆಗಳು ಇದ್ದೇ ಇವೆ. ಜತೆಗೆ, ಅದನ್ನು ಈ ನೆಲೆಯಲ್ಲಿಯೂ ಗ್ರಹಿಸಬಹುದೆಂಬುದು ಇಲ್ಲಿಯ ಭಿನ್ನಹ.

(ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ.)

Leave a Reply

Your email address will not be published.

This site uses Akismet to reduce spam. Learn how your comment data is processed.