‘ಶಿವಶಕ್ತಿ’ಯ ಸಾರುವ ಮಹಾಶಿವರಾತ್ರಿ


ಮಹಾಶಿವರಾತ್ರಿ  ಹಿಂದೂ ಧರ್ಮದ ಪವಿತ್ರವಾದ ಹಬ್ಬಗಳಲ್ಲಿ ಒಂದಾಗಿದೆ. ಲಯಕರ್ತನಾದ ಶಿವನನ್ನು ಆರಾಧನೆ ಮಾಡಲು ಪ್ರಶಸ್ತವಾದ ದಿನವೇ ಮಹಾಶಿವರಾತ್ರಿ. ಕೈಲಾಸವಾಸಿ ಶಿವನಿಗೆ ಮಹಾಶಿವರಾತ್ರಿ ಅತ್ಯಂತ ಪ್ರಿಯಕರವಾದ ದಿನ. ಈ ಹಬ್ಬವು ಶಿವ ಮತ್ತು ಶಕ್ತಿಯ ಸಂಗಮದ ಸಂಕೇತ. ಭಾರತದ ಕಾಲಮಾನದ ಪ್ರಕಾರ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ.


ಶಿವರಾತ್ರಿ ಆಚರಣೆಯ ಹಿನ್ನೆಲೆ
ಶಿವಪುರಾಣದ ಪ್ರಕಾರ, ಶಿವ ಮತ್ತು ಪಾರ್ವತಿ (ಶಕ್ತಿ) ವರಿಸಿದ ದಿನವನ್ನು ಶಿವರಾತ್ರಿಯೆಂದು ಆಚರಿಸಲಾಗುತ್ತದೆ. ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ವರಿಸಿದ್ದರಿಂದ ಅಂದಿನ ರಾತ್ರಿ ದೇವಾನು ದೇವತೆಗಳೆಲ್ಲರೂ ಗಿರಿಜಾ ಕಲ್ಯಾಣವನ್ನು ವೀಕ್ಷಿಸಿ, ಶಿವಪಾರ್ವತಿಯರಿಬ್ಬರನ್ನೂ ಪೂಜಿಸಿದರಂತೆ. ಈ ಕಾರಣಕ್ಕಾಗಿ ಜಾಗರಣೆಯ ಆಚರಣೆ ಬಂದಿದೆ ಎನ್ನಲಾಗುತ್ತದೆ. ಇದೇ ದಿನ ಸಮುದ್ರ ಮಥನದ ಸಂದರ್ಭದಲ್ಲಿ ಅಮೃತಕ್ಕೂ ಮೊದಲು ಉದ್ಭವಿಸಿದ ಹಾಲಾಹಲವು ಜಗತ್ತನ್ನು ನಾಶಗೊಳಿಸುವ ಮುನ್ನ ತನ್ನ ಕಂಠದಲ್ಲಿ ಇರಿಸಿಕೊಂಡು ನೀಲಕಂಠನಾಗಿ ವಿಶ್ವವನ್ನು ರಕ್ಷಿಸಿದ ದಿನವೂ ಹೌದು. ಇವುಗಳ ಜೊತೆಗೆ ಅನೇಕ ವರ್ಷಗಳ ತಪಸ್ಸಿನ ಫಲವಾಗಿ ಶಿವ, ಲಿಂಗ ರೂಪಿಯಾಗಿ ಉದ್ಭವಿಸಿದ ಕಥಾನಕವನ್ನೂ ನೆನಪಿಸಲಾಗುತ್ತದೆ.

ಗಂಗಾವತರಣ:

ಶಿವ ಇಡೀ ಸೃಷ್ಟಿಯನ್ನು ಲಯಕ್ಕೆ ತರುವ ಶಕ್ತಿ. ಭಗೀರಥನ ತಪಸ್ಸಿಗೆ ಮೆಚ್ಚಿ ಭೂಮಿಗೆ ಇಳಿದು ಬಂದ ಗಂಗೆಯ ರಭಸವನ್ನು ತಡೆಯುವ ಶಕ್ತಿಯ ಹುಡುಕಾಟದಲ್ಲಿದ್ದಾಗ, ಕೊನೆಗೆ ಶಿವ ತನ್ನ ಜಟೆಯಲ್ಲಿ ಗಂಗೆಯನ್ನು ತಡೆದು ನಿಲ್ಲಿಸಲು ಒಪ್ಪಿಕೊಂಡು ಗಂಗಾಧರನಾಗುತ್ತಾನೆ. ಕೊನೆಗೆ ಗಂಗೆಯನ್ನು ಲೋಕಕಲ್ಯಾಣಕ್ಕಾಗಿ ಹರಿದು ಬಿಡುತ್ತಾನೆ. ಮಹಾಶಿವರಾತ್ರಿ ಹಬ್ಬದಂದು ಈ ಘಟನೆಯನ್ನೂ ಸ್ಮರಿಸಲಾಗುತ್ತದೆ.

ರಾಷ್ಟ್ರದ ಏಕತೆಯ ಪ್ರತೀಕ 12 ಜ್ಯೋತಿರ್ಲಿಂಗಗಳು

ರಾಷ್ಟ್ರದ ವಿವಿಧ ಭಾಗಗಳಲ್ಲಿ ಇರುವ ಶಿವನ 12 ಜ್ಯೋತಿರ್ಲಿಂಗಗಳು ರಾಷ್ಟ್ರವನ್ನು ಧಾರ್ಮಿಕವಾಗಿ ಒಗ್ಗೂಡಿಸುತ್ತದೆ. ಗುಜರಾತ್‌ನ ಸೌರಾಷ್ಟ್ರದ ಸೋಮನಾಥೇಶ್ವರ, ನಾಗೇಶ್ವರ, ಮಹಾರಾಷ್ಟ್ರದ ಭೀಮಾಶಂಕರ, ತ್ರಯಂಬಕೇಶ್ವರ, ಗೃಷ್ಣೇಶ್ವರ, ಜಾರ್ಖಂಡ್‌ನ ವೈದ್ಯನಾಥೇಶ್ವರ, ಮಧ್ಯಪ್ರದೇಶದ ಮಹಾಕಾಳೇಶ್ವರ, ಓಂಕಾರೇಶ್ವರ, ಉತ್ತರ ಪ್ರದೇಶದ ಕಾಶಿ ವಿಶ್ವೇಶ್ವರ, ಉತ್ತರಾಖಂಡದ ಕೇದಾರನಾಥ, ತಮಿಳುನಾಡಿನ ರಾಮೇಶ್ವರ ಮತ್ತು ಆಂಧ್ರಪ್ರದೇಶದ ಮಲ್ಲಿಕಾರ್ಜುನ ಪುಣ್ಯಕ್ಷೇತ್ರಗಳು ಈ ರಾಷ್ಟ್ರವನ್ನು ಧಾರ್ಮಿಕವಾಗಿ ಬೆಸೆದಿವೆ.

ಶಿವರಾತ್ರಿ ಸಾರುವ ಸಂದೇಶಗಳು

ಶಿವಶಕ್ತಿ: ಶಿವಶಕ್ತಿ ಈ ರಾಷ್ಟ್ರದ ಅಸ್ಮಿತೆ. ಪ್ರತಿ ರಾಷ್ಟ್ರದ ಶಕ್ತಿ ಯುವಶಕ್ತಿ. ಯುವಜನತೆ ಸಕಾರಾತ್ಮಕತೆಯಿಂದ ನಾಡಿನ ಏಳಿಗೆಗೆ ಕಾರಣೀಭೂತರಾದಾಗ ಅವರ ಶ್ರಮವೂ ಶಿವಶಕ್ತಿಯಾಗಿ ಪರಿವರ್ತಿತಗೊಳ್ಳುತ್ತದೆ. ಈ ನಾಡಿನ ಬೌದ್ಧಿಕತೆಯ ಪ್ರತೀಕವಾಗಿ ಚಂದ್ರಯಾನ – 3 ಯಶಸ್ವಿಯಾದಾಗ ಲ್ಯಾಂಡರ್ ವಿಕ್ರಂ ಚಂದ್ರನನ್ನು ಸ್ಪರ್ಶಿಸಿದ ಸ್ಥಳವನ್ನು ‘ಶಿವಶಕ್ತಿ’ ಎಂದು ಹೆಸರಿಸಿರುವುದೂ ಅದೇ ಕಾರಣಕ್ಕೆ. ಶಿವಶಕ್ತಿ ಪದದಲ್ಲೂ, ಅರ್ಥದಲ್ಲೂ ಪರುಷ ಮತ್ತು ಸ್ತ್ರೀ ಇಬ್ಬರ ಶಕ್ತಿಯ ಸಮನ್ವಯವೂ ಇದೆ. ರಾಷ್ಟ್ರದ ಉನ್ನತಿಗೂ ಇಬ್ಬರ ಕೊಡುಗೆಯ ಮಹತ್ವವನ್ನು ಇದು ಸಾರುತ್ತದೆ.

ಜಾಗರಣೆ: ಧರ್ಮದ ವಿರುದ್ಧ ಅಧರ್ಮ ತಾಂಡವವಾಡುವಾಗಲೆಲ್ಲ ಈ ನಾಡಿನಲ್ಲಿ ಒಂದೊಂದು ಅವತಾರದಲ್ಲಿ ಒಂದೊಂದು ಶಕ್ತಿ ಅವತರಿಸಿದೆ. ಜಾಗರೂಕತೆಯಿಂದ, ಕ್ಷಾತ್ರತೇಜದಿಂದ ಧರ್ಮವನ್ನು ಸಂರಕ್ಷಿಸಿದೆ. ಪ್ರಸ್ತುತ ಜಾಗತಿಕವಾಗಿಯೂ ಈ ನಾಡಿನ ಕುರಿತು ಕೇಡನ್ನು ಬಯಸುವ ದುಷ್ಟಶಕ್ತಿಗಳು ಇರುವಾಗ ನಾಡಿನ ಯುವಶಕ್ತಿ ಜಾಗರೂಕರಾಗಿದ್ದು ಅವುಗಳನ್ನು ಹಿಮ್ಮೆಟ್ಟಿಸಲು ಸಿದ್ಧರಾಗಬೇಕೆಂಬ ಸಾಂಕೇತಿಕ ಸಂದೇಶವನ್ನು ಸಾರುತ್ತದೆ.

ಧಾರ್ಮಿಕತೆ: ಧರ್ಮದ ಹೊರತಾಗಿ ಭಾರತವಿಲ್ಲ. ಇಲ್ಲಿನ ಧರ್ಮಾಧಾರಿತ ಜೀವನಪದ್ಧತಿಯೇ ಈ ನಾಡಿನ ಶಕ್ತಿ. ಅದರ ಪಾಲನೆ ಮತ್ತು ಮುಂದಿನ ಪೀಳಿಗೆಗಾಗಿ ಪೋಷಣೆ ಮಾಡುವುದು ಇಂದಿನ ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.