ರಾಮಕೃಷ್ಣ ಆಶ್ರಮದಲ್ಲಿ ವಿವೇಕಾನಂದ ೧೫೦ಜನ್ಮ ಸಂವತ್ಸರ ಕಾರ್ಯಕ್ರಮ:

ಮಂಗಳೂರು: ಶಿಕ್ಷಣ ವ್ಯತ್ಯಾಸದಿಂದ ದೇಶದ ನೈಜ ಸಾಂಸ್ಕೃತಿಕ ಮೌಲ್ಯ ಕಳೆಗುಂದಿದೆ. ಯುವ ಸಮೂಹದಲ್ಲಿ ಭಾರತದ ಭವಿಷ್ಯ ಅಡಗಿದ್ದು, ವಿಶ್ವದ ಜನ-ಜೀವನದ ಜಾಗರಣೆಗೆ ವಿವೇಕಾನಂದರ ಸಂದೇಶ ಅಗತ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಸಾಂಸ್ಕೃತಿಕ ಹಾಗೂ ಜೀವನ ಮೌಲ್ಯಗಳ ಕೊಡುಗೆಯನ್ನು ವಿಶ್ವ ಎದುರು ನೋಡುತ್ತಿದ್ದು, ವಿವೇಕಾನಂದರ ಪ್ರೇರಣೆಯಂತೆ ಜಾಗತಿಕ ಶಿಕ್ಷಣದಲ್ಲಿ ಭಾರತೀಯ ಮೌಲ್ಯಗಳ ಸೇರ್ಪಡೆ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಅವರು ಶನಿವಾರ ರಾಮಕೃಷ್ಣ ಆಶ್ರಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ರಾಮಕೃಷ್ಣ ಮಠದ ಆಶ್ರಯದಲ್ಲಿ ಅಳಸಿಂಗ್ ಪೆರುಮಾಳ್ ಸಭಾಂಗಣದಲ್ಲಿ ನಡೆದ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮ ಸಂವತ್ಸರದ ಅಂಗವಾಗಿ ರಾಷ್ಟ್ರೀಯ ಯುವ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಹಣ, ಅಧಿಕಾರ ಶಾಶ್ವತವಾಗಿರದೆ ಸಾಮಾಜಿಕ ಹೊಣೆಗಾರಿಕೆಯ ಅಗತ್ಯವಿದ್ದು, ಅದುವೇ ಶಾಶ್ವತವಾಗಿರುತ್ತದೆ. ಜೀವನ ನಿರ್ವಹಣೆಗೆ ಹಣವೇ ಮುಖ್ಯವಾದರೂ, ಅದುವೇ ಜೀವನವಲ್ಲ ಎನ್ನುವ ಅಂಶ ಮನಗಾಣಬೇಕಿದೆ. ಜೀವನದಲ್ಲಿ ನಿರ್ದಿಷ್ಟ ಗುರಿ ಸಾಧಿಸಲು ಶಿಕ್ಷಣ ಮುಖ್ಯವಾಗಿದ್ದು, ಈ ಸಂದರ್ಭದಲ್ಲಿ ಹಣವೊಂದೇ ಎಲ್ಲವೂ ಆದರೆ ಜೀವನ ಸರ್ವನಾಶವಾಗುತ್ತದೆ ಎಂದರು.

ದೇಶದಲ್ಲಿನ ಅಸ್ಪೃಶ್ಯತೆ, ಭ್ರಷ್ಟಾಚಾರ, ಹಿಂಸೆ, ಅತ್ಯಾಚಾರ ಇತ್ಯಾದಿ ಸಾಮಾಜಿಕ ಅಸ್ತಿತ್ವಕ್ಕೆ ಧಕ್ಕೆ ತರುವ ಚಟುವಟಿಕೆಗಳ ನಿಯಂತ್ರಣಕ್ಕೆ ವಿವೇಕಾನಂದರ ಆದರ್ಶಗಳೇ ರಾಮ ಬಾಣವಾಗಿದೆ. ಆಂತರ್ಯದಲ್ಲಿರುವ ಶಕ್ತಿಯನ್ನು ಜಾಗೃತಗೊಳಿಸಿ, ಯಶಸ್ಸಿನತ್ತ ಸಾಗಲು ನಿರಂತರ ಪ್ರಯತ್ನಕ್ಕೆ ವಿವೇಕರ ಆದರ್ಶಗಳೇ ಪ್ರೇರಣೆ ಎಂದ ಸಚಿವರು, ವಿವೇಕಾನಂದರು ಸಾಂಸ್ಕೃತಿಕ ಭಾರತದ ರಾಯಭಾರಿಯಾಗಿದ್ದರು ಎಂದರು.

ಕರ್ಣಾಟಕ ಬ್ಯಾಂಕ್‌ನ ಚೇರಮೆನ್ ಅನಂತಕೃಷ್ಣ ಮಾತನಾಡಿ, ವಿವೇಕಾನಂದರು ವೈವಿಧ್ಯತೆಯಲ್ಲಿ ಏಕತೆ ಹೊಂದಿದ ಭಾರತದಲ್ಲಿ ಸಂಸ್ಕಾರದ ವಿದ್ಯೆಯೊಂದಿಗೆ ಆತ್ಮಬಲವನ್ನು ಹೆಚ್ಚಿಸಿದ್ದಾರೆ. ಗುರು-ಶಿಷ್ಯ ಪರಂಪರೆಯೊಂದಿಗೆ ಗುಣದೊಂದಿಗೆ ಕಲಿತ ವಿದ್ಯೆಯು ಜೀವನ ರಕ್ಷಣೆಗೆ ಸಹಕಾರಿ ಎನ್ನುವುದನ್ನು ಬಿಂಬಿಸಿದ್ದಾರೆ ಎಂದರು.

ನಿಟ್ಟೆ ಶಿಕ್ಷಣ ಸಂಸ್ಥೆಯ ಕುಲಪತಿ ಎನ್.ವಿನಯ್ ಹೆಗ್ಡೆ ಮಾತನಾಡಿ, ಕನಿಷ್ಠ ೧೦೦ ಮಂದಿ ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿನ ಬಡವರಿಗೆ ಹಾಗೂ ಸೌಲಭ್ಯಗಳಿಂದ ವಂಚಿತರ ಬದುಕಿಗಾಗಿ ಮಿಸಲಿಡಬೇಕು. ಮನದಲ್ಲಿ ಅಚಲ ನಿರ್ಧಾರದೊಂದಿಗೆ ಪರಿಶುದ್ಧತೆ ಉಳಿಸಿಕೊಂಡು ಬದಲಾವಣೆಯ  ಕಾರ್ಯದತ್ತ ಯುವಜನತೆ ಮನಮಾಡಬೇಕಿದೆ ಎಂದು ಕರೆ ನೀಡಿದರು.

ಆರ್‌ಎಸ್‌ಎಸ್‌ನ ಸಹ ಪ್ರಾಂತ ಪ್ರಚಾರಕ ಸುಧೀರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿವೇಕಾನಂದರಂತೆ ಬಂಗಾಳದಲ್ಲಿ ಜನಿಸಿದ ಅನೇಕ ಪುಷ್ಪಗಳು ಜಗತ್ತಿಗೆ ತಮ್ಮ ಕೊಡುಗೆ ನೀಡಿವೆ. ಜಗತ್ತನ್ನು ಆಕರ್ಷಿಸಿದ ವ್ಯಕ್ತಿ ವಿವೇಕಾನಂದರು ವಿಚಾರಧಾರೆಗಳ ಮೂಲಕ ಚಿರಂಜೀವಿಯಾಗಿದ್ದಾರೆ. ದ್ವಂದ್ವ, ಸಂಕುಚಿತ ಭಾವನೆಯಿಲ್ಲದ  ಹಿಂದು ಧರ್ಮವೇ ಭಾರತದ ಆತ್ಮ ಎನ್ನುವ ಸಂದೇಶವನ್ನು ಸಾರಿ ಎಲ್ಲರಿಗೂ ಆದರ್ಶರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎನ್.ಪ್ರಕಾಶ್, ಜಿಪಂ ಸಿಇಒ ಡಾ.ಕೆ.ಎನ್.ವಿಜಯಪ್ರಕಾಶ್, ಸೆಂಚುರಿ ಗ್ರೂಪ್‌ನ ಚೇರಮೆನ್ ಪಿ.ದಯಾನಂದ ಪೈ, ಡಾ.ಜೀವರಾಜ್ ಸೊರಕೆ ಉಪಸ್ಥಿತರಿದ್ದರು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಸ್ವಾಗತಿಸಿದರು. ಸಂತೋಷ್ ವಂದಿಸಿದರು.

  •  ವಿವೇಕಾನಂದರ ೧೫೦ನೇ ಜನ್ಮ ದಿನಾಚರಣೆಯಂದು ವಿವೇಕರ ಆದರ್ಶಗಳೇ ಪ್ರೇರಣೆಯಾಗಬೇಕಿತ್ತು. ಆದರೆ ಕಾಂಗ್ರೆಸ್ ಕಾರ್ಯಕ್ರಮ ಬಹಿಷ್ಕರಿಸಿ ರಾಜಕೀಯ ಬೆರೆಸುವ ಅಗತ್ಯ ಇರಲಿಲ್ಲ. ರಾಷ್ಟ್ರಪ್ರೇಮದ ಜಾಗೃತಿ ಬೆಳೆಸುವ ಕಾರ್ಯಕ್ರಮವನ್ನು ಕಾಂಗ್ರೆಸ್ ಸಂಕುಚಿತ ಭಾವನೆಗೆ ಸೀಮಿತಗೊಳಿಸಿದೆ. ಬಿಜೆಪಿಗೆ ರಾಷ್ಟ್ರಹಿತ ಮುಖ್ಯವೇ ಹೊರತು ರಾಜಕಾರಣವಲ್ಲ. ಅದಕ್ಕೆ ಎಲ್ಲೂ ಆಸ್ಪದ ನೀಡಿಲ್ಲ. –ಸಿ.ಟಿ.ರವಿ-ಜಿಲ್ಲಾ ಉಸ್ತುವಾರಿ ಸಚಿವರು.
  • ವಿವಿಧ ಸಮುದಾಯಗಳಿದ್ದರೂ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತ. ವಿವೇಕಾನಂದರು ವೇದಗಳಲ್ಲಿನ ‘ಸರ್ವದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ’ ಎಂಬ ಸಂದೇಶವನ್ನು ಸಾರಿದ್ದರು.  ಕುರಾನ್‌ನಲ್ಲಿ ಕೂಡಾ ಈ ಆಶಯವನ್ನು ಹೇಳಲಾಗಿದೆ.ಇಂದು ವಿವೇಕಾನಂದರ  ಪ್ರೇರಣೆಯೇ ಜಗತ್ತನ್ನು ಒಂದು ಗೂಡಿಸಲು ಇರುವ ಏಕೈಕ ಮೂಲಮಂತ್ರ.- ಅನ್ವರ್ ಮಾಣಿಪ್ಪಾಡಿ-ಅಧ್ಯಕ್ಷರು , ರಾಜ್ಯಅಲ್ಪ ಸಂಖ್ಯಾತ ಆಯೋಗ
  • ಭಾರತ-ಪಾಕ್ ಕ್ರಿಕೆಟ್ ಪಂದ್ಯ ಕುರಿತಂತೆ ತೋರುವ ಆಸಕ್ತಿಯನ್ನು ಜನ ಗಡಿಯಲ್ಲಿ ತನ್ನ ಪ್ರಾಣವನ್ನು ಪಣವಾಗಿಟ್ಟು ಹೋರಾಟ ಮಾಡಿದ ಸೈನಿಕ ಮಡಿದಾಗ ದುಃಖಿಸುವುದಿಲ್ಲ. ಈ ವರ್ಷವಾದರೂ ನಾವೆಲ್ಲರೂ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಧಾರಣೆ ಮಾಡಿಕೊಳ್ಳುವ ಸಂಕಲ್ಪ ತಾಳಬೇಕು.- ಕ್ಯಾ.ಗಣೇಶ್ ಕಾರ್ಣಿಕ್-ವಿಧಾನ ಪರಿಷತ್ ಸದಸ್ಯ.
  • ವಿವೇಕಾನಂದರ ೧೫೦ನೇ ವರ್ಷದಂದು ಯುವ ಮನಸುಗಳನ್ನು ಭಾರತದೊಂದಿಗೆ ಜೋಡಿಸುವ ಕೆಲಸ ಶಿಕ್ಷಣದಿಂದಾಗಬೇಕು. ೨೦೧೩ರಲ್ಲಿ ಮೆಕಾಲೆ ಶಿಕ್ಷಣಕ್ಕೆ ಮಹತ್ವ ನೀಡದೆ ವಿವೇಕಾನಂದ ಪ್ರೇರಣೆಯ ಶಿಕ್ಷಣದ ಸಂಕಲ್ಪವಾಗಬೇಕು. ದೇಶದಲ್ಲಿ ಗುಣಮಟ್ಟ ಹಾಗೂ ಉದ್ಯೋಗ ಸೃಷ್ಟಿಸುವಂತ ಶಿಕ್ಷಣ ವ್ಯವಸ್ಥೆ ನಿರ್ಮಾಣದ ಅಗತ್ಯವಿದೆ. ವಿವೇಕರು ಅಸಮಾನತೆಯನ್ನು ತೊಲಗಿಸಿ, ಸಮಾನತೆಯ ತತ್ವಕ್ಕೆ ಪ್ರೇರಣೆಯಾಗುವುದರೊಂದಿಗೆ ಹೆಣ್ಣುಮಕ್ಕಳಿಗೂ ಶಿಕ್ಷಣ ನೀಡಬೇಕೆಂದು ಪ್ರತಿಪಾದಿಸಿದ ಚಿಂತಕರಾಗಿದ್ದರು. ಪ್ರಾಚೀನ ಮತ್ತು ಆಧುನಿಕ ಸನಾತನ ಮೌಲ್ಯದ ವಿಚಾರಗಳ ಹಿನ್ನೆಲೆ ಭಾರತಕ್ಕಿದೆ. ಧರ್ಮಗಳು ಸಂಘರ್ಷಕ್ಕಿರುವುದಲ್ಲ, ಸಮನ್ವಯಕ್ಕೆ ಎಂಬುದನ್ನು ಸಾರಿ ಹೇಳಿದ್ದವರು ವಿವೇಕಾನಂದರು ತೇಜಸ್ವಿ ಸೂರ್ಯ -ಯುವ ವಾಗ್ಮಿ 

ಸಾವಿರಾರು ವಿದ್ಯಾರ್ಥಿಗಳು…

ರಾಮಕೃಷ್ಣ ಮಠ, ಮಂಗಳಾದೇವಿ ಮತ್ತು ಜಿಲ್ಲಾಡಳಿತದ ಆಶ್ರಯದಲ್ಲಿ ನಡೆಯುತ್ತಿರುವ ಸ್ವಾಮಿ ವಿವೇಕಾನಂದರ ೧೫೦ನೇ ವರ್ಷಾಚರಣೆ ಕಾರ್ಯಕ್ರಮದ ಅಂಗವಾಗಿ ಶನಿವಾರ ನಡೆದ ಯುವಜನ ಜಾಥಾದಲ್ಲಿ ೮-೧೦ಸಾವಿರ ವಿದ್ಯಾರ್ಥಿಗಳು ಉತ್ಸಾಹದಿಂದ ಸೇರಿದ್ದರು. ಅನಂತರ ನಡೆದ ಕಾರ್ಯಕ್ರಮದಲ್ಲೂ ಪ್ರೇರಣಾದಾಯಿ ಉಪನ್ಯಾಸಗಳನ್ನು ಶ್ರದ್ಧೆಯಿಂದ ಆಲಿಸಿದ ವಿದ್ಯಾರ್ಥಿಗಳು , ಸ್ವಾಮಿ ವಿವೇಕಾನಂದರ ಜೀವನಾದರ್ಶಗಳನ್ನು ತಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು ಎಂಬಂತಹ ಸ್ಫೂರ್ತಿ ತುಂಬಿಕೊಂಡರು.

ರಾಮಕೃಷ್ಣ ಮಠವು ಕೆಲವು ದಿನಗಳ ಹಿಂದೆ ನಗರದ ಸಂಘನಿಕೇತನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ಸಮ್ಮೇಳನದಲ್ಲೂ ವಿದ್ಯಾರ್ಥಿಗಳು ರಾಜ್ಯದೆಲ್ಲೆಡೆಯಿಂದ ಉತ್ಸಾಹದಿಂದ ಪಾಲ್ಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಕುರಿತಂತೆ ಸಾವಿರಾರು ಪುಸ್ತಕಗಳ ಮಾರಾಟ-ಪ್ರದರ್ಶನ , ಸ್ವಾಮಿ ವಿವೇಕಾನಂದರ ಕುರಿತಂತೆ ಭಾವಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು. 

Leave a Reply

Your email address will not be published.

This site uses Akismet to reduce spam. Learn how your comment data is processed.