– ವಿಜಯ್ ಭರ್ತೂರ್(ಭ ರಾ ವಿಜಯಕುಮಾರ), ವಿದ್ಯಾರಣ್ಯಪುರ, ಬೆಂಗಳೂರು

ಶೀರ್ಷಿಕೆಯ ವಾಕ್ಯದಲ್ಲಿ ಎರಡು ಭಾಗ. ಆರಂಭದ ಎರಡು ಪದಗಳನ್ನು ಮಾತ್ರ ಉದ್ದೇಶಿಸಿದರೆˌ ಭಾಷಾತಜ್ಞರಿಂದ ಹಿಡಿದು ಬಹುತೇಕರ ಉತ್ತರ “ಸರಿ ˌ ಹಾಗೇ ಇರಬೇಕು” ಎಂದಾದೀತು. (ಶಿಕ್ಷಣ ಮಾಧ್ಯಮ ‘ಮಾತೃಭಾಷೆ’ ಎಂದರೆ ಪ್ರಾದೇಶಿಕ ಭಾಷೆ ಎಂಬುದನ್ನು ಗಮದಲ್ಲಿಟ್ಟುಕೊಂಡು). ಮುಂದಿನ ಎರಡು ಪದಗಳನ್ನು ಸೇರಿಸಿಕೊಂಡಾಗ ಉತ್ತರಗಳು ಒಂದೇ ತೆರನಾಗುವುದಿಲ್ಲ. ಕಾರಣ ಬದುಕು ಬಹು ವೇಗದಲ್ಲಿ ಬದಲಾಗಿದೆ. ಇಂದು ನಾವಿರುವ ಸ್ಥಿತಿಯಲ್ಲಿ ಭಾವನಾತ್ಮಕವಾಗಿ ಮಾತನಾಡುವುದು ಕಷ್ಟ. ವಸ್ತುನಿಷ್ಠವಾಗಿ ಮಾತನಾಡಿದಾಗ ಮತ್ತು ನಮ್ಮ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿದಾಗ, ನಮ್ಮ ಚಿಂತನೆಯಲ್ಲೂ ಸ್ವಲ್ಪ ಬದಲಾವಣೆಯ ಅಗತ್ಯ ಕಂಡೀತು.

ಮೊದಲಿಗೆ ಶಿಕ್ಷಣದ ಅಗತ್ಯದ ಬಗ್ಗೆ ಯಾರದೂ ಎರಡು ಮಾತಿಲ್ಲ. ಯಾವುದೇ ದೇಶಕಾಲದಲ್ಲೂ ಇದು ಒಂದಲ್ಲಾ ಒಂದು ರೂಪದಲ್ಲಿ ಅಸ್ತಿತ್ವದಲ್ಲಿದ್ದೇ ಮುಂದುವರೆದಿದೆ. ನಮಗೆ ಬೇಕೋ ಬೇಡವೋ ಹುಟ್ಟಿನಿಂದಲೇ ಇದು ಆರಂಭವಾಗಿರುತ್ತದೆ. ಆಗ ಮಾಧ್ಯಮದ ಪ್ರಶ್ನೆಯಿರುವುದಿಲ್ಲ. ಬಹುತೇಕ ಮಾತೃಭಾಷೆಯಲ್ಲಿಯೂ ಜತೆಗೆ ಪರಿಸರದ ಭಾಷೆಯಲ್ಲಿಯೂ ನಡೆಯುತ್ತಿರುತ್ತದೆ. ಸಂವಹನ ಹಾಗೂ ಸಂಪರ್ಕಗಳು ಸೀಮಿತವಾಗಿದ್ದಾಗ ಪ್ರಾಂತ ಭಾಷೆಗೇ ಮೊದಲ ಮಣೆ. ಈಗ ಚಿತ್ರಣ ಬದಲಾಗಿದೆ. ಇಂದಿನ ‘ಜಾಗತಿಕ ಹಳ್ಳಿ’ಯ(global village) ಚಿತ್ರಣವನ್ನು ಕಣ್ಮುಂದೆ ತಂದುಕೊಂಡರೆ ಭಾಷೆ ಎಲ್ಲಿ , ಎಷ್ಟು ಬೇಕಾದೀತು ಎಂಬ ಚಿಂತನೆಗೆ ತೊಡಗಲೇಬೇಕು. ನಗರ ˌ ಜಿಲ್ಲೆ ˌ ತಾಲೂಕು ಹಾಗೂ ಹಳ್ಳಿಗಳ ನಡುವೆಯೂ ಅಂತರ ಕಡಿಮೆಯಾಗುತ್ತಿದೆ. ಕಳೆದ ಎರಡು ಮೂರು ದಶಕದೀಚೆಗಂತೂ ನಮ್ಮ ಬದುಕಿನ ಶೈಲಿಗಳೇ ಹೊಸತಾಗಿದೆ. ವರ್ಣವೆತ್ಯಾಸ ˌ ವರ್ಗವೆತ್ಯಾಸಗಳೇ ಮೊದಲಾದುವು ಸಂಕರಗೊಂಡಿವೆ. ಅರಿವಿಲ್ಲದಂತೆ ಭಾಷಾಸಂಕರವೂ ಇದರಲ್ಲಿ ಸೇರಿಹೋಗಿದೆ.
ಕನ್ನಡದ ಮಟ್ಟಿಗೆ ಗಮನಿಸಿದರೆˌ ಬಹುತೇಕ ಶಿಕ್ಷಿತ ಕನ್ನಡಿಗರು ಮಾತನಾಡುವುದು ಅರೆಗನ್ನಡದಲ್ಲಿಯೇ ! ಬಳಸುವ ಒಂದು ವಾಕ್ಯದಲ್ಲಿ ಅರ್ಧಾಂಶಕ್ಕೂ ಮಿಕ್ಕಿ ಇಂಗ್ಲಿಷಿನ ಪದಗಳೇ ಇರುತ್ತದೆ. ಮಾಧ್ಯಮದ ಮಾತುಕತೆˌ ಕಾರ್ಯಕ್ರಮಗಳಲ್ಲೂ ಇದರ ಅವತಾರವಿದೆ. ತ್ರಿಭಾಷಾ ಸೂತ್ರವಿದ್ದರೂ ಅದು ಬಹುತೇಕ ದ್ವಿಭಾಷಾ ಮತ್ತು ಕೆಲವೆಡೆ ಇಂಗ್ಲಿಷೇ ಪ್ರಧಾನವಿರುವದು ಕಾಣುತ್ತದೆ. ಪತ್ರ ಲೇಖನದಲ್ಲಿ ˌ ವಿಳಾಸ ಬರೆಯುವಲ್ಲಿ ಕನ್ನಡ ಹಿಂದುಳಿದಿದೆ. ಹತ್ತಾರು ಭಾಷೆಗಳ ಕುಟುಂಬ ಒಟ್ಟಿಗೆ ವಾಸಿಸುವ ನಗರದ ಸಂಕೀರ್ಣಗಳಲ್ಲಿನ ಮಕ್ಕಳಿಗಂತೂ ಸಂಪರ್ಕ ಭಾಷೆಯೇ ಪರಿಸರದ ಯಾ ಪ್ರಾದೇಶಿಕ ಭಾಷೆಯಾಗಿಬಿಟ್ಟಿದೆ (ಹೆಚ್ಚಾಗಿ ಇಂಗ್ಲಿಷ್). ಈ ಸನ್ನಿವೇಶದಲ್ಲಿ ಮಾತೃಭಾಷೆಯ ಅಥವಾ ಪ್ರಾದೇಶಿಕ ಭಾಷೆಯ ಬಗ್ಗೆ ಅಕ್ಕರೆ ಬೆಳೆಯುವುದೆಂತು?

ಆಂಗ್ಲರು ಆಡಳಿತ ನಡೆಸಲು ಆರಂಭಿಸಿದ ಮೊದಲಿಗೇ ಶಿಕ್ಷಣದೆಡೆಗೆ ಗಮನ ಕೇಂದ್ರೀಕರಿಸಿದರು. 1835 ರ ಮೆಕಾಲೆಯ ಟಿಪ್ಪಣಿಯಲ್ಲಿ ಭಾರತೀಯ ಶಿಕ್ಷಣದ ಬೋಧನಾ ಮಾಧ್ಯಮವಾಗಿ ಇಂಗ್ಲಿಷ್ ಇರಬೇಕು ಎಂಬ ಅಂಶವಿತ್ತು. ಅದು ವಾಣಿಜ್ಯ ಭಾಷೆಯೂ ಆಗಬೇಕು ˌ ಇದರಿಂದ ಭಾರತೀಯರು ನಾಗರಿಕರಾಗುತ್ತಾರೆ ಎಂದಿತ್ತು. ಭಾರತೀಯರಲ್ಲಿ ಅರ್ಧಕ್ಕೂ ಹೆಚ್ಚು ಜನ ಇಂಗ್ಲಿಷ್ ಕಲಿಯಬಯಸಿದ್ದಾರೆ ಎಂಬ ಅಂಶಕ್ಕೆ ರಾಜಾರಾಂ ಮೋಹನರಾಯ್ ಸಹ ಬೆಂಬಲವಿತ್ತಿದ್ದರು. ನಂತರದ 1854ರ ವುಡ್ಡನ ವರದಿಯು (wood’s despatch) ಇಂಗ್ಲಿಷ್ ಹಾಗೂ ದೇಸೀ ಭಾಷೆಗಳನ್ನು ಜೊತೆಯಾಗಿ ಬಳಸಬೇಕೆಂದು ಸಲಹೆ ನೀಡಿತು. 1882 ರ ಹಂಟರ್ ಆಯೋಗ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯ ಮೂಲಕ ನೀಡಬೇಕೆಂದು ಉಲ್ಲೇಖಿಸಿತ್ತು. 1944 ರ ಸಾರ್ಜೆಂಟ್ ವರದಿಯಲ್ಲಿ ಪ್ರೌಢಶಾಲೆಗಳಲ್ಲಿ ಮಾತೃಭಾಷೆಯು ಬೋಧನಾ ಮಾಧ್ಯಮವಾಗಿದ್ದು ಇಂಗ್ಲಿಷ್ ದ್ವಿತೀಯ ಭಾಷೆಯಾಗಬೇಕೆಂದು ಟಿಪ್ಪಣಿ ನೀಡಿತು.

ಸ್ವಾತಂತ್ರ್ಯಾನಂತರದ ಭಾರತದಲ್ಲಿ 1948 ರ ರಾಧಾಕೃಷ್ಣನ್ ವಿಶ್ವವಿದ್ಯಾಲಯ ಆಯೋಗವು ಭಾಷಾ ನೀತಿಗೆ ಸಂಬಂಧಿಸಿ ತ್ರಿಭಾಷಾ ಸೂತ್ರವನ್ನು ಸಲಹೆ ಮಾಡಿತು. ಅವುಗಳೆಂದರೆ ಹಿಂದಿ ˌ ಪ್ರಾದೇಶಿಕ ಭಾಷೆ ಹಾಗೂ ಅನ್ಯ ಭಾಷೆ(ಇಂಗ್ಲಿಷ್). ಮುಂದಿನ 1952 -53 ರ ಡಾ||ಮೊದಲಿಯಾರ್ ಆಯೋಗವು ಮಾಧ್ಯಮಿಕ ಶಿಕ್ಷಣದಲ್ಲಿ ಮಾಧ್ಯಮವು ಮಾತೃಭಾಷೆ ಅಥವಾ ರಾಜ್ಯಭಾಷೆಯಾಗಿರಬೇಕೆಂದು ಶಿಫಾರಸು ಮಾಡಿತು. ನಂತರದ ಕೊಠಾರಿ ಶಿಕ್ಷಣ ಆಯೋಗವೂ(1964 – 66) ಇದನ್ನೇ ಒತ್ತಿ ಹೇಳಿತು. ಇವುಗಳಲ್ಲಿ ಭಾಷಾನೀತಿಯ ಕುರಿತಾದ ಅಂಶವನ್ನು ಮಾತ್ರ ತಿಳಿಸಿದ್ದೇನೆ. ವಿಶೇಷವಾಗಿ ಶಿಕ್ಷಣ ಮಾಧ್ಯಮ ಕುರಿತಾಗಿ ವಿವೇಕಾನಂದರುˌಗಾಂಧೀಜಿˌ ರಾಧಾಕೃಷ್ಣನ್ ˌ ರವೀಂದ್ರನಾಥ ಠಾಗೂರ್ ಮೊದಲಾದ ಭಾರತೀಯ ಚಿಂತಕರಲ್ಲದೆ ಪಾಶ್ಚಾತ್ಯ ಶಿಕ್ಷಣ ತಜ್ಞರೂ ಸಹ ಮಾತೃಭಾಷೆಯಲ್ಲಿಯೇ ಆರಂಭದ ಶಿಕ್ಷಣ ಇರಬೇಕೆಂದು ಪ್ರತಿಪಾದಿಸಿದ್ದಾರೆ.

ಇತ್ತೀಚಿನ 2009 ರ ಶಿಕ್ಷಣದ ಹಕ್ಕು ನೀತಿ ಹಾಗೂ 2020 ಮತ್ತು 2022 ರ ರಾಷ್ಟ್ರೀಯ ಶಿಕ್ಷಣ ನೀತಿಗಳೂ ಸಹ ಮಾತೃಭಾಷೆ / ಪ್ರಾದೇಶಿಕ ಭಾಷೆಗಳಿಗೇ ಮಣೆ ಹಾಕಿರುವುದು. ಶಿಕ್ಷಣವನ್ನು ಕುರಿತಾದ ಉಳಿದ ವಿಷಯಗಳು (ಪಠ್ಯಕ್ರಮˌ ಶಿಕ್ಷಕರ ನೇಮಕˌ ಸೌಲಭ್ಯಗಳು…ಇತ್ಯಾದಿ) ಏನೇ ಇರಲಿ ಬೋಧನಾ ಮಾಧ್ಯಮವನ್ನು ಕುರಿತಾಗಿ ಮಾತ್ರ ವಸ್ತುನಿಷ್ಠವಾಗಿ ನೋಡೋಣ.

ಮಾತೃಭಾಷೆ ಎನ್ನುವುದರಲ್ಲಿ ಕಳೆದ 50 -60 ವರುಷಗಳ ಹಿಂದೆ ಅಂಥಹ ಗೊಂದಲವಿರಲಿಲ್ಲ. ಬಹುತೇಕರು ಪ್ರಾಥಮಿಕ ಹಾಗೂ ಮಾಧ್ಯಮಿಕ ತರಗತಿಗಳನ್ನು ಕನ್ನಡ ಮಾಧ್ಯಮಗಳಲ್ಲೇ ಓದಿˌ ಪ್ರೌಢಶಾಲೆಗಳಿಂದ ಇಂಗ್ಲೀಷ್ ಮಾಧ್ಯಮಕ್ಕೆ ತೊಡಗುತ್ತಿದ್ದರು. ಬೆಂಗಳೂರಿನಂತಹಾ ನಗರದಲ್ಲೂ ತಮಿಳರುˌ ತೆಲುಗರೇ ಮೊದಲಾದವರು ಕನ್ನಡ ಶಾಲೆಗಳಲ್ಲಿಯೇ ಕಲಿತದ್ದು. ಅಂದಿನ ಹಲವು ಸಾಹಿತಿಗಳ ಮನೆಮಾತು ತೆಲಗು ಅಥವಾ ತಮಿಳಾಗಿದ್ದರೂ ಅವರ ಕನ್ನಡದ ಮೇಲಿನ ಪ್ರಭುತ್ವ ಪ್ರಶ್ನಾತೀತ. ನಂತರ ಆರಂಭವಾದ ಇಂಜಿನಿರಿಂಗ್ ಮತ್ತು ಮೆಡಿಕಲ್ ವ್ಯಾಮೋಹˌ ಕಾಲೇಜುಗಳ ಹೆಚ್ಚಳಾತಿ ಮೊದಲಾದುವು ಪೋಷಕರಿಗೆ ತಮ್ಮ ಮಕ್ಕಳು ಹೆಚ್ಚು ಹೆಚ್ಚು ಇಂಗ್ಲಿಷ್ ಕಲಿಯಬೇಕುˌ ಉದ್ಯೋಗದಲ್ಲಿ ಹೆಚ್ಚು ಹಣ ಪಡೆಯಬೇಕು ಎಂದೂ ಜತೆಗೆ ಕ್ರಮೇಣ ವಿದೇಶಗಳಿಗೆ ಹೋಗುವ ಅವಕಾಶ ಹೆಚ್ಚುತ್ತಾ ಅದರ ಆಕರ್ಶಣೆ ಸೆಳೆಯಿತು. ಇದೇ ಕಾರಣವಾಗಿ ಇಂಗ್ಲಿಷ್ ಕಲಿಸುವ ಖಾಸಗಿ ಶಾಲೆಗಳುˌ ಟ್ಯೂಶನ್ ಗಳು ಹೆಚ್ಚುತ್ತಾ ಹೋಯಿತು. ವಿಶೇಷವಾಗಿ ದೊಡ್ಡ ನಗರಗಳಲ್ಲಿ ಇದು ದಂಧೆಯಾಗುತ್ತಾ ಶಿಕ್ಷಣ ಉದ್ಯಮವೇ ಆಯಿತು. ಇದು ಪ್ರಾದೇಶಿಕ ಭಾಷೆಯ ಮೇಲೆ ಪರಿಣಾಮ ಬೀರುತ್ತಾ ದಶಕಗಳುರಿಳಿದಂತೆ ಇಂಗ್ಲಿಷ್ ಬಳಕೆ ಹೆಚ್ಚುತ್ತಾ ನಮ್ಮ ಭಾಷಾ ಪದಗಳನ್ನು ಮರೆಯುವ ಜನಾಂಗ ಸೃಷ್ಟಿಯಾಗತೊಡಗಿತು. ಇದರ ಶೇಕಡಾವಾರು ಸಂಖ್ಯೆ ಹೆಚ್ಚುತ್ತಾ ಇಂದು ಕಣ್ಣಿಗೆ ರಾಚುವಂತಿದೆ. ಗಣಕ ಯಂತ್ರಗಳ ಉನ್ನತೀಕರಣವಾಗುತ್ತ ಅದಕ್ಕೆ ಬೇಕಾದ ಉದ್ಯೋಗಿಗಳನ್ನು (software – hardware) ತಯಾರಿಸುವ ಉದ್ದೇಶವೇ ಮೇಲುಗೈಯಾಯ್ತು. ಕನ್ನಡವೂ ಸೇರಿದಂತೆ ನಮ್ಮ ಸೋದರ ಭಾಷೆಗಳಿಗೂ ಹೊಡೆತ ಬಿತ್ತು. ಒಳ್ಳೆಯ ಶಿಕ್ಷಣ ಹಾಗೂ ನಗರ ಕೇಂದ್ರಿತ ಉದ್ಯೋಗಗಳಿಂದಾಗಿ ಕುಟುಂಬಗಳ ವಲಸೆ ಅಧಿಕವಾಯ್ತು. ಅಂತರ್ಭಾಷಾ ವಿವಾಹಗಳೂ ಹೆಚ್ಚಿ ಮುಂದಿನ ಪೀಳಿಗೆಯ ‘ಮಾತೃಭಾಷೆ’ ಯಾವುದು ಎಂಬ ಸ್ಥಿತಿ ನಿರ್ಮಾಣವಾಯ್ತು. ಇಂದು ರಾಜಧಾನಿ ಹಾಗೂ ಪ್ರಮುಖ ಜಿಲ್ಲಾಕೇಂದ್ರಗಳಲ್ಲಿ ಹತ್ತಾರು ಭಾಷೆಯ ಕುಟುಂಬಗಳು ಒಂದೆಡೆ ವಾಸಿಸುವ ವಸತಿ ಸಂಕೀರ್ಣಗಳು ಹೆಚ್ಚುತ್ತಾ ಯಾವೊಂದು ಭಾಷೆಯೂ ಬೆಳೆಯದೆ ಶಿಕ್ಷಣಮಾಧ್ಯಮವಾಗಿ ಕೇವಲ ಇಂಗ್ಲಿಷ್ ಮತ್ತು ಸಂಪರ್ಕ ಮಾಧ್ಯಮವಾಗಿ ಹಿಂದಿ ಗೋಚರಿಸುತ್ತಿದೆ. ಬೆಂಗಳೂರಿಂತಾ ನಗರಗಳಲ್ಲಂತೂ ಇದು ಪೆಡಂಭೂತವೇ ಆಗಿದೆ. ವಿಶೇಷವಾಗಿ ನಮ್ಮ ಮುಂದಿನ ಪೀಳಿಗೆ ಈ ಸನ್ನಿವೇಶದಲ್ಲಿದೆ. ಹೀಗಾಗಿ ‘ಅರೆಗನ್ನಡ’ದ ಯುವಪೀಳಿಗೆ ಮತ್ತು ‘ಇಂಗ್ಲಿಷ್ ಸಂಸ್ಕೃತಿ’ಯ ನವಪೀಳಿಗೆಯನ್ನು ಕಾಣುತ್ತಿದ್ದೇವೆ. ಇದು ವಸ್ತುಸ್ಥಿತಿ.

ಮೇಲೆ ಹೇಳಿದ ಸ್ಥಿತಿ ಏಕಾಏಕಿ ಉದ್ಭವವಾದುದಲ್ಲ. ಹಲವು ದಶಕಗಳ ಬೆಳವಣಿಗೆ. ಆದ್ದರಿಂದ ಇದನ್ನು ಬದಲಿಸಲೂ ಸಹ ದಶಕಗಳೇ ಬೇಕಾದೀತು. ಅಂತೆಯೇ ಬದಲಾವಣೆ / ಸಂಕ್ರಮಣ ಕಾಲದಲ್ಲಿ ಒಂದಷ್ಟು ಗೊಂದಲವೂ ಮೂಡೀತು. ಆದರೆ ಒಂದು ಭಾಷೆಯ ಹಾಗೂ ಸಂಸ್ಕೃತಿಯ ಉಳಿವಿಗೆ ಅದು ಅನಿವಾರ್ಯ. ಮೊದಲಿಗೆ ಕೌಟುಂಬಿಕ ವಾತಾವರಣ ಹಾಗೂ ವಾಸಸ್ಥಳದ ಪರಿಸರದಲ್ಲಿ ಮಾತೃಭಾಷೆ ˌ ವಿಶೇಷವಾಗಿ ಪ್ರಾದೇಶಿಕ ಭಾಷೆಯನ್ನು ಹೆಚ್ಚಾಗಿ ಬಳಸಬೇಕು. ನಂತರ ಈ ಮೊದಲಿನಿಂದ ಎಲ್ಲರೂ ಹೇಳಿರುವಂತೆ ಶಿಕ್ಷಣದಲ್ಲಿ ಮೊದಲ ಹಂತಗಳಲ್ಲಿ (ಶಿಶುವಿಹಾರ – LKGˌ ಪ್ರಾಥಮಿಕ ಹಂತ) ಕಡ್ಡಾಯವಾಗಿ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲೇ ಬೋಧಿಸಬೇಕುˌ (ಅದು ಸರ್ಕಾರಿ ಅಥವಾ ಖಾಸಗಿ ಶಾಲೆಯಾದರೂ ಸರಿ ). ದ್ವಿತೀಯ ಭಾಷೆಯಾಗಿ ಇಂಗ್ಲಿಷನ್ನು ಕಲಿಸಬೇಕು. ಉನ್ನತ ಶಿಕ್ಷಣಕ್ಕೆ ತೊಡಗಿದಂತೆ ಭಾಷೆಯ ಆಯ್ಕೆಯಿರಲಿ. ಈ ರೀತಿ ಜಗತ್ತಿನ ಅನೇಕ ದೇಶಗಳಲ್ಲಿದೆ. ಇಂಗ್ಲಿಷೇ ಅವರ ಮಾತೃಭಾಷೆಯಿದ್ದಾಗ ಬೇರೆ ಮಾತುˌ ಆದರೆ ಆ ನೆಲದ ಭಾಷೆಯೆಂಬುದು ಇದ್ದಾಗ ಹಾಗೂ ಅಲ್ಲಿನ ಸಂಸ್ಕೃತಿಯ ಬೇರುಗಳು ಅದರಲ್ಲಿದ್ದಾಗ ಅದನ್ನು ಉಳಿಸಿಕೊಳ್ಳಲೇಬೇಕು. ಇದಕ್ಕಾಗಿ ಕ್ರಮಗಳು ಅನಿವಾರ್ಯ. ಸರ್ಕಾರ ಮಾತ್ರದಿಂದ ಇದು ಕಷ್ಟಸಾಧ್ಯ. ಪೋಷಕರೂ ಅರಿತು ಸಹಕರಿಸಬೇಕು. ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕು. ಆಗ ಪ್ರಾದೇಶಿಕ ನೆಲೆಗಟ್ಟಿನೊಂದಿಗೆ ವೈಶ್ವಿಕ ಸ್ಥಿತಿಯನ್ನೂ ನಿಭಾಯಿಸಬಹುದು. ಇಂಗ್ಲಿಷನ್ನು ಹೆಚ್ಚು ಬಳಸದೆಯೂ ತಮ್ಮದೇ ಭಾಷೆಯಲ್ಲಿ ಓದಿ ˌ ವ್ಯವಹರಿಸಿಯೂ ಅಭಿವೃದ್ಧಿಗೊಂಡ ಅನೇಕ ದೇಶಗಳಿಲ್ಲವೇ? ನಮಗೇಕೆ ಸಾಧ್ಯವಿಲ್ಲ? ನಾವು ಮೊದಲು ನಾವಾಗಿ ಉಳಿದು ಬೆರೆಯೋಣˌ ಬೆಳೆಯೋಣ.

(ವಿಜಯ್ ಕುಮಾರ್ ಅವರು ಬೆಂಗಳೂರಿನ ವಿದ್ಯಾರಣ್ಯಪುರದ ನಿವಾಸಿಗಳಾಗಿದ್ದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನಲ್ಲಿ ತಮ್ಮನ್ನು ತಾವು ಸಕ್ರಿಯರಾಗಿ ತೊಡಗಿಸಿಕೊಂಡಿದ್ದು, ಅನೇಕ ಉತ್ತಮವಾದ ಕವಿತೆಗಳನ್ನೂ ಬರೆದಿದ್ದಾರೆ)

Leave a Reply

Your email address will not be published.

This site uses Akismet to reduce spam. Learn how your comment data is processed.