Delegation met Karnataka CM Sri B S Yeddyurappa today

28 ಜೂನ್ 2020, ಬೆಂಗಳೂರು: ಭಾರತೀಯ ಕಿಸಾನ್ ಸಂಘ , ಸ್ವದೇಶಿ ಜಾಗರಣ ಮಂಚ್ ಮತ್ತು ಕೃಷಿ ಪ್ರಯೋಗ ಪರಿವಾರ ಈ 3 ಸಂಘಟನೆಗಳು ಇಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಭೂ ಸುಧಾರಣಾ ತಿದ್ದುಪಡಿ ಬಗ್ಗೆ ತಮ್ಮ ಆಕ್ಷೇಪಣೆ ಸಲ್ಲಿಸದರು. ನಿಯೋಗದ ಅಭಿಪ್ರಾಯ ಆಲಿಸಿದ ಮುಖ್ಯಮಂತ್ರಿಗಳು ನೀರಾವರಿ ಕೃಷಿ ಭೂಮಿ, ಮಳೆ ಆಧಾರಿತ ಕೃಷಿ ಭೂಮಿ ಮತ್ತು ಮುಂದಿನ ಐದು ವರ್ಷಗಳಲ್ಲಿ ನೀರಾವರಿ ಯೋಜನೆಗಳಿಂದ ಲಾಭ ಪಡೆಯುವ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ನೀಡದಂತೆ ತಿದ್ದುಪಡಿ ತರಲಾಗುವುದು ಎಂದು ಆಶ್ವಾಸನೆ ನೀಡಿದರು.

ನಿಯೋಗದಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಾಸರಘಟ್ಟ, ಸ್ವದೇಶಿ ಜಾಗರಣ ಮಂಚ್ ನ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಜಗದೀಶ್ ಮತ್ತು ಅಖಿಲ ಭಾರತ ಸಂಯೋಜಕ್ ಪ್ರೊ ಬಿ ಎಂ ಕುಮಾರಸ್ವಾಮಿ, ಕೃಷಿ ಪ್ರಯೋಗ ಪರಿವಾರದ ಅರುಣ ಉಪಸ್ಥಿತರಿದ್ದರು.

ನಿಯೋಗದ ಪರವಾಗಿ ಪ್ರೊ ಬಿ ಎಂ ಕುಮಾರಸ್ವಾಮಿಯವರ ವಿಡಿಯೋ ಇಲ್ಲಿ ನೋಡಬಹುದಾಗಿದೆ.

 

ನಿಯೋಗದ ಮನವಿ ಈ ಕೆಳಗೆ ನೀಡಲಾಗಿದೆ.

೧. ೭೯ ಎ , ಬಿ ತಿದ್ದುಪಡಿ ಮೂಲಕ ರೈತರಲ್ಲದವರಿಗೆ ಕೃಷಿ ಭೂಮಿ ಖರೀಧಿಸಲು ಅವಕಾಶ ಕೊಡುವುದು , ಸ್ವಾಗತಾರ್ಹ . ಕೃಷಿಗೆ ಹೊಸಬರು , ವಿದ್ಯಾವಂತರು ಬರುವುದು ಒಳ್ಳೆಯದೇ ಆದರೆ ಹಾಗೆ ಕೃಷಿ ಭೂಮಿ ಪಡೆದವರು ಅಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಯನ್ನೇ ಮಾಡಬೇಕು ಕೈಗಾರಿಕಾ ಉದ್ದೇಶಕ್ಕೆ ಈ ಭೂಮಿಯನ್ನು ಬಳಸಬಾರು ಮತ್ತು ಮುಂದೆ ಸದರಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಮಾರುವ ಅವಕಾಶವೂ ಇರಬಾರದು ಎಂಬುದು ನಮ್ಮ ಆಗ್ರಹ.

೨. ಆದರೆ ಸರ್ಕಾರದ ಈ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಕೈಗಾರಿಕೆಗಳಿಗೆ , ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪೂರಕವಾಗಿದೆ ಎಂಬ ವಾದ ಕೇಳಿ ಬರುತ್ತಿದೆ . ಸರ್ಕಾರವು ರೈತ ಪರವಾಗಿ ಸ್ಪಷ್ಟ ನಿಲುವು ಪ್ರಕಟಿಸದಿರುವುದು ನಮ್ಮ ಆತಂಕಕ್ಕೆ ಕಾರಣವಾಗಿದೆ . ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ವೀರೇಂದ್ರ ಪಾಟೀಲರು , ದೇವೇಗೌಡರ ನಂತರ ರೈತ ಕುಟುಂಬದಿಂದ ಅಧಿಕಾರಕ್ಕೆ ಬಂದ ವ್ಯಕ್ತಿ ನೀವು ಮಾತ್ರ . ಕೇವಲ ರೈತ ಕುಟುಂಬದಿಂದ ಬಂದದ್ದು ಮಾತ್ರವಲ್ಲ , ರೈತಾಪಿ ಗೇಣಿದಾರರ ಪರವಾಗಿ ಬೆಂಗಳೂರಿನ ತನಕ ಹೋರಾಟದ ಪಾದಯಾತ್ರೆ ಮಾಡಿ ಅಂದಿನ ಸರ್ಕಾರಗಳನ್ನು ನಡುಗಿಸಿದವರು ನೀವು . ಇಂತಹ ಹಿನ್ನೆಲೆಯ ನಿಮ್ಮ ನೇತೃತ್ವದ ಸರ್ಕಾರ ಕೃಷಿ ಭೂಮಿಯ ಕಾಯ್ದೆ ತಿದ್ದುಪಡಿ ವಿಷಯದಲ್ಲಿ ರೈತರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರಕ್ಕೆ ಬಂದಿರುವುದನ್ನು ಒಪ್ಪಲು ಸಾಧ್ಯವಿಲ್ಲ.

೩. ಹೀಗಾಗಿ ಕಾಯ್ದೆಗೆ ತಿದ್ದುಪಡಿಗೆ ತರುವ ಮೊದಲು ನೀವು ರೈತ ಸಂಘಟನೆಗಳೊಂದಿಗೆ ಚರ್ಚಿಸಬೇಕು . ವಿಷಯ ಪರಿಣಿತರ ಸಮಿತಿ ರಚಿಸಿ ಸಲಹೆ ಪಡೆಯಬೇಕು.

೪. ಹೊಸದಾಗಿ ಕೃಷಿ ಭೂಮಿ ಖರೀಧಿಸುವರಿಗೆ ಗರಿಷ್ಠ ಮಿತಿಯನ್ನು ಹಿಂದಿನಂತೆಯೇ ೫೪ ಎಕರೆಗೆ ಮುಂದುವರಿಸುವುದು ಮತ್ತು ಹೊಸದಾಗಿ ಕೃಷಿ ಭೂಮಿ ಖರೀಧಿಸಿದವರು ಕನಿಷ್ಟ ೮ ವರ್ಷ ಮಾರುವಂತಿಲ್ಲ ಎಂಬ ಷರತ್ತಿರಲಿ.

೫. ಕೃಷಿ ಭೂಮಿಯಲ್ಲಿ ರೈತರಿಗೆ ಮನೆ , ಕೊಟ್ಟಿಗೆ , ಕೃಷಿ ಸಂಸ್ಕರಣಾ ಘಟಕ , ಗೋದಾಮು , ಹೋಮ್ಸ್ಟೇ , ಇಂತಹ ಕೃಷಿ ಪೂರಕ ಘಟಕಗಳನ್ನು ನಿರ್ಮಿಸಲು ಕಂದಾಯ ಇಲಾಖೆಯ ಅನುಮತಿಯ ಅಗತ್ಯ ಇರಕೂಡದು. ಒಂದು ಎಕರೆಗಿಂತ ಹೆಚ್ಚಿನ ಜಾಗದಲ್ಲಿ ಘಟಕಗಳು ಬಂದಲ್ಲಿ ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯ ಎಂದು ನಮೂದಿಸಬೇಕು.

೬. ಟ್ರಸ್ಟ್ , ಕಂಪನಿ , ರಾಜ್ಯದ ಕೇಂದ್ರದ ಬಹುರಾಜ್ಯ ಸಹಕಾರಿ ಕಾಯ್ದೆಗಳಲ್ಲಿ ನೋಂದಣಿ  ಮಾಡಿರುವ ಸಂಸ್ಥೆಗಳು ರೈತರಿಂದ ಭೂಮಿ ಖರೀಧಿಸುವಾಗ ಖರೀಧಿಸುವವರ ಪೂರ್ತಿ ವಿವರ ಮತ್ತು ಖರೀದಿಸುವ ಉದ್ದೇಶ ಮಾರುವ ರೈತರಿಗೂ ತಿಳಿಯುವಂತಾಗಬೇಕು.

೭. ಪ್ಲಾನ್ಟೇಷನ್ ಕಾಯ್ದೆಯ ಅಡಿಯಲ್ಲಿ ಸಾವಿರಾರು ಎಕರೆ ಭೂಮಿ ಹೊಂದಲು ಅವಕಾಶವಿದೆ . ಈ ಕಾಯ್ದೆಯನ್ನು ಮರುಪರಿಶೀಲಿಸಬೇಕು.

೮ .ನೀರಾವರಿ ಕಲ್ಪಿಸಲೆಂದೆ ಸರಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡಿದೆ , ಈಗ ಆದೆ ನೀರಾವರಿ ಭೂಮಿಯನ್ನು ಕೈಗಾರಿಕೆಗೆ ಕೊಡುವ ಬಗ್ಗೆ ಬಿಗಿ ನೀತಿ ಬೇಕು.

೯. ಭೂಸುಧಾರಣೆ ಕಾಯ್ದೆಯಲ್ಲಿ ತರುವ ಮಾರ್ಪಾಡುಗಳನ್ನು ಪುರ್ವಾನ್ವಯದಿಂದ ಜಾರಿಗೊಳಿಸುವುದು ಬೇಡ. ಹೀಗೆ ಮಾಡುವುದರಿಂದ ಸರ್ಕಾರ ಹೊಸಬರನ್ನು ಕೃಷಿ ಕ್ಷೇತ್ರಕ್ಕೆ ತರಲು ಬದ್ಧವಾಗಿದೆ , ಹಾಗಿಯೇ ರೈತರ ಹಿತರಕ್ಷಣೆಗೂ ಬದ್ಧವಾಗಿದೆ ಎಂಬ ಸಂದೇಶ ಸಮಾಜಕ್ಕೆ ಹೋಗುತ್ತದೆ .
ಈ ಬಗ್ಗೆ ನೀವು ತುರ್ತು ಗಮನ ಹರಿಸಿ , ನಮ್ಮ ಸಲಹೆಗಳನ್ನು ಪರಿಶೀಲಿಸಿ ರಾಜ್ಯದ ರೈತ ಸಮುದಾಯದ ಪರ ನೀವು ಗಟ್ಟಿಯಾದ ನಿಲುವು ಪ್ರಕಟಿಸಬೇಕೆಂಬುದು ನಮ್ಮ ಆಗ್ರಹವಾಗಿದೆ.

ಭಾರತಿಯ ಕಿಸಾನ್ ಸಂಘ ಸ್ವದೇಶಿ ಜಾಗರಣ ಮಂಚ್
ಕೃಷಿ ಪ್ರಯೋಗ ಪರಿವಾರ.

 

Leave a Reply

Your email address will not be published.

This site uses Akismet to reduce spam. Learn how your comment data is processed.