ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಿಲಿಂದ್ ಪರಾಂಡೆಯವರ ಪತ್ರಿಕಾ ಹೇಳಿಕೆ

೨೭ ಆಗಸ್ಟ್ ೨೦೨೦, ಬೆಂಗಳೂರು: ಇಂದು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಸಭಾಂಗಣದಲ್ಲಿ ವಿಶ್ವ ಹಿಂದೂ ಪರಿಷದ್ ನ ಕೇಂದ್ರೀಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಿಲಿಂದ್ ಪರಾಂಡೆಯವರು ಪ್ರತ್ರಕರ್ತರನ್ನು ಉದ್ದೇಶಿಸಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಖ್ಯಾತ ವೈದ್ಯರು, ವಿಶ್ವ ಹಿಂದೂ ಪರಿಷದ್ ನ ಅಖಿಲ ಭಾರತ ಉಪಾಧ್ಯಕ್ಷರಾದ ಡಾ. ವಿಜಯಲಕ್ಷ್ಮಿ ದೇಶಮಾನೆ, ಅಖಿಲ ಭಾರತ ಸಹ ಕಾರ್ಯದರ್ಶಿಗಳಾದ ಶ್ರೀ ಕೋಟೇಶ್ವರ ಶರ್ಮ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದ ಗುಂಪೊಂದರಿಂದ ನಡೆದ ಗಲಭೆ, ಆಸ್ತಿಪಾಸ್ತಿಗಳ ಹಾನಿ ಬಗ್ಗೆ ಕರ್ನಾಟಕ ಸರ್ಕಾರವು ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಒಳ್ಳೆಯ ಸಂಗತಿ ಎಂದು ವಿಶ್ವ ಹಿಂದೂ ಪರಿಷತ್ತು ಭಾವಿಸುತ್ತದೆ. ಸಾಕಷ್ಟು ವಾಹನಗಳು, ಮನೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿಗೆ ಗಲಭೆಕೋರರಿಂದಲೇ ಪರಿಹಾರವನ್ನು ವಸೂಲಿ ಮಾಡುವುದು ಸೂಕ್ತವೆಂದು ವಿಶ್ವ ಹಿಂದೂ ಪರಿಷತ್ತು ಭಾವಿಸುತ್ತದೆ. ಇದೇ ತರಹ ದೆಹಲಿ ಮತ್ತು ಇನ್ನಿತರ ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯದ ಗುಂಪುಗಳು ಅಥವಾ ಸಂಘಟನೆಗಳು ಹಿಂದೂ ಸಮಾಜದ ಮೇಲೆ ನಡೆಸುತ್ತಿರುವ ದೊಂಬಿ, ಗಲಭೆ ಮತ್ತು ಆಕ್ರಮಣಗಳನ್ನು ಅತ್ಯುಗ್ರವಾಗಿ ಶಿಕ್ಷಿಸಬೇಕಾಗಿದೆ. ಈ ಗಲಭೆಗಳ ಹಿಂದಿರುವ ಶಕ್ತಿಗಳು ಮತ್ತು ವ್ಯಕ್ತಿಗಳ ಮೇಲೆ ಸರ್ಕಾರಗಳು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಕರೋನಾ ಪೀಡಿತ ಇಡೀ ಸಮುದಾಯದ ಸೇವೆಗೆ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ತಮ್ಮನ್ನು ತಾವೇ ಸಮರ್ಪಿಸಿಕೊಂಡಿದ್ದು, ಇದುವರೆಗೆ 1,74,00,000 ಕ್ಕಿಂತಲೂ ಹೆಚ್ಚು ಜನರಿಗೆ ಊಟ, ಸುಮಾರು 40 ಲಕ್ಷ ಕುಟುಂಬಗಳಿಗೆ ಕನಿಷ್ಟ 15 ದಿನಗಳಿಗಾಗುವಷ್ಟು ದಿನಸಿ ಸಾಮಾನು, ಸುಮಾರು 40 ಲಕ್ಷ ಜನರಿಗೆ ಮಾಸ್ಕ್ ವಿತರಿಸಲಾಗಿದೆ. ಸುಮಾರು ಎರಡು ಲಕ್ಷ ದನಕರುಗಳಿಗೆ ಹುಲ್ಲು ಮತ್ತು ನೀರು ಒದಗಿಸಲಾಗಿದೆ.

ಇದೀಗ, ಬಿಹಾರ ರಾಜ್ಯವು ಭೀಕರ ನೆರೆಗೆ ತುತ್ತಾಗಿದ್ದು ಪರಿಷತ್ತಿನ ಕಾರ್ಯಕರ್ತರು ನೆರೆ ಹಾವಳಿಗೆ ತುತ್ತಾದ ಪ್ರದೇಶಗಳಿಗೆ ಮುಖ್ಯವಾಗಿ ಮುಜಫುರ್‍ಪುರ, ಮಧುಬಾನಿ, ಬೆಗುಸರಾಯ್, ಗೋಪಾಲ್ ಗಂಜ್ ಜಿಲ್ಲೆಗಳಿಗೆ ಧಾವಿಸಿ ಸಾವಿರಾರು ಜನರಿಗೆ ಊಟ, ಔಷಧಿ, ಸೌರದೀಪಗಳು, ಪ್ಲಾಸ್ಟಿಕ್ ಅಥವಾ ಟಾರ್ಪಾಲಿನ್ ಷೀಟ್‍ಗಳನ್ನು ವಿತರಿಸಿರುತ್ತಾರೆ.

ಭಾರತದ ಪೂರ್ವ ಲಡಾಕ್ ಪ್ರದೇಶದಲ್ಲಿ ಚೀನೀ ಆಕ್ರಮಕರು ದಾಳಿಯನ್ನು ನಡೆಸಿ, ವಿನಾಕಾರಣ ನಮ್ಮ 20 ವೀರ ಸೈನಿಕರು ಮತ್ತು ಅಧಿಕಾರಿಗಳನ್ನು ಹತ್ಯೆ ಮಾಡಿರುತ್ತಾರೆ. ಇದಕ್ಕೆ ಪ್ರತ್ಯುತ್ತರವಾಗಿ ನಮ್ಮ ಸೇನೆಯು ದಾಳಿ ನಡೆಸಿ 43 ಜನ ಚೀನೀ ಸೈನಿಕರನ್ನು ಕೊಂದು ಹಾಕಿದೆ. ನಮ್ಮ ಸೇನೆಯ ಶೌರ್ಯಸಾಹಸಗಳನ್ನು ಪ್ರಶಂಸಿಸುತ್ತಾ, ವಿನಾಕಾರಣ ಕಾಲುಕೆರೆದು ಜಗಳಕ್ಕೆ ಬರುತ್ತಿರುವ ಚೀನಾ ದೇಶಕ್ಕೆ ಬುದ್ಧಿ ಕಲಿಸಲು ಎಲ್ಲಾ ಚೀನೀ ವಸ್ತುಗಳನ್ನು ಬಹಿಷ್ಕರಿಸುವಂತೆ ವಿಶ್ವ ಹಿಂದೂ ಪರಿಷತ್ತು ಸಮಸ್ತ ಭಾರತೀಯರನ್ನು ವಿನಂತಿಸುತ್ತದೆ. ಚೀನಾ ವಸ್ತುಗಳನ್ನು ನಾವು ಖರೀದಿಸಿದರೆ ಶತ್ರುವನ್ನು ನಾವೇ ಬಲಪಡಿಸಿದಂತೆ ಆಗುತ್ತದೆ ಎಂಬುದನ್ನು ನಾವು ಗಮನಿಸಬೇಕಾಗಿದೆ.

ಇನ್ನು ಎರಡು ಮೂರು ವರ್ಷಗಳೊಳಗಾಗಿ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಸ್ಥಾನದಲ್ಲಿ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ಕಾರ್ಯವು ಪೂರ್ಣಗೊಂಡು ಭಗವಾನ್ ಶ್ರೀರಾಮನು ವಿರಾಜಮಾನನಾಗಲಿದ್ದಾನೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸವು ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡುವಂತೆ ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಕರೆ ನೀಡಿದಲ್ಲಿ ವಿಶ್ವ ಹಿಂದೂ ಪರಿಷತ್ತು ತನ್ನ ಪೂರ್ಣ ಸಂಘಟನಾಶಕ್ತಿಯನ್ನು ಬಳಸಿಕೊಂಡು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಈ ಕಾರ್ಯವನ್ನು ನೆರವೇರಿಸುತ್ತದೆ.

ಸುದ್ದಿ ಗೋಷ್ಠಿಯಲ್ಲಿ ವಿಹಿಂಪ ದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ,ಕೇಶವ ಹೆಗಡೆ, ಬಜರಂಗ ದಳದ ಸಂಘಟನಾ ಕಾರ್ಯದರ್ಶಿ ಶ್ರೀ ಸೂರ್ಯನಾರಾಯಣ, ಕರ್ನಾಟಕ ದಕ್ಷಿಣ ಪ್ರಾಂತದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಬಸವರಾಜ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.