Vatican City, Oct 30 (ANI): Prime Minister Narendra Modi and Pope Francis during a meet, in Vatican City on Saturday. (ANI Photo)

ಮೋದಿ ಮತ್ತು ಪೋಪ್ ಚರ್ಚೆಯಲ್ಲಿನ ರಾಜಕೀಯ ಮತ್ತು ತಾತ್ವಿಕ ನೆಲೆಗಳು

ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ. ನರೇಂದ್ರಮೋದಿಯವರು ಅಕ್ಟೋಬರ್ ಕೊನೆಯ ವಾರದಲ್ಲಿ ಜಾಗತಿಕ ಸಭೆಯೊಂದರಲ್ಲಿ ಭಾಗವಹಿಸಲು ಇಟಲಿದೇಶಕ್ಕೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ ಕ್ಯಾಥೋಲಿಕ್ ಕ್ರೈಸ್ತರ ನೇತೃತ್ವ ವಹಿಸಿರುವ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾದರು. ಸುಮಾರು ೩೦ ನಿಮಿಷಗಳ ಯೋಜಿತ ಭೇಟಿಯು ಮುಂದುವರೆದು ಒಂದು ಘಂಟೆಗೂ ಮೀರಿ ನಡೆಯಿತು.

ಪ್ರಧಾನ ಮಂತ್ರಿ ಮೋದಿಅವರು ಪೋಪ್ ಭೇಟಿಗೆ ಬಂದಾಗ ಅವರನ್ನು ಸ್ವಾಗತಿಸಲು ವ್ಯಾಟಿಕನ್ ನಿಯೋಜಿತ ಹಿರಿಯ ಅಧಿಕಾರಿಗಳ ಸಾಲೇ ನಿಂತಿತ್ತು. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುತ್ತಾ ಪ್ರತಿಯೊಬ್ಬರಿಗೂ ಕೈಮುಗಿದು ನಮಸ್ಕರಿಸಿದರು. ವಿಚಿತ್ರವೆಂದರೆ, ಅವರಲ್ಲಿ ಯಾರೂ ಪ್ರತಿಯಾಗಿ ಮೋದಿಯವರಿಗೆ ನಮಸ್ಕರಿಸದೆ, ಹಸ್ತಲಾಘವಕ್ಕಾಗಿ ತಮ್ಮ ಹಸ್ತವನ್ನು ಮುಂದೆ ಚಾಚುತ್ತಿದ್ದರು. ಪ್ರಧಾನಿ ಮೋದಿ ಅವರೆಲ್ಲರಿಗೂ ಹಸ್ತ ಲಾಘವ ಮಾಡಿದರು. ಪೋಪ್ ಭೇಟಿಯ ನಂತರವೂ ಸಹ ಅಧಿಕಾರಿಗಳನ್ನು ಬೀಳ್ಕೊಡುವ ಸಂದರ್ಭದಲ್ಲೂ ಸಹ ಪ್ರಧಾನಿ ಮೋದಿ ಅವರು ಹಲವಾರು ಬಾರಿ ಕೈ ಎತ್ತಿ ಮುಗಿಯುತ್ತಿರುವ ವಿಡಿಯೋ ಮಾಧ್ಯಮಗಳಲ್ಲಿ ಬಿತ್ತರವಾಯಿತು. ಈ ಎಲ್ಲಾ ವ್ಯಾಟಿಕನ್ ಅಧಿಕಾರಿಗಳೂ ಸಹ ಕ್ಯಾಥೋಲಿಕ್ ಮತದ ನಾಯಕರೂ ಹೌದು. ಕರ್ತವ್ಯವೆಂದು ಭಾವಿಸಿ ತಮ್ಮ ಮತವನ್ನು ಯುದ್ಧದಲ್ಲಿ ನಿರತರಾಗಿರುವಂತೆ ಪ್ರಸರಿಸುತ್ತಿರುವ ಇವರು ಸೌಹಾರ್ದಯುತ ಭೇಟಿಯಲ್ಲೂ ಮತದ ಪರಿಧಿಯಲ್ಲೇ ವ್ಯವಹರಿಸುತ್ತಿರುವುದು ಗೋಚರವಾಯಿತು. ಪಾಗನ್ ಪ್ರತಿವಂದನೆ ಕ್ರೈಸ್ತ ನಾಯಕರಿಂದ ಸೌಜನ್ಯರೂಪದಲ್ಲೂ ಬಂದಂತೆ ಕಾಣಲಿಲ್ಲ.

ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಪೋಪ್ ಅವರಿಗೆ ಬೆಳ್ಳಿ ಲೋಹದ ದೀಪವನ್ನು ಉಡುಗೆಯಾಗಿ ನೀಡಿದರು. ಭಾರತ ಸರ್ಕಾರವು ಪರಿಸರ ರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳನ್ನು ತಿಳಿಸುವ ಒಂದು ಪುಸ್ತಕವನ್ನೂ ನೀಡಿದರು. ಪೋಪ್ ಅವರು ತಮ್ಮ ಮಧ್ಯ ಏಷ್ಯಾದ ಭೇಟಿಯಲ್ಲಿ ಮುಸ್ಲಿಂ ಮತೀಯ ನಾಯಕರ ಜೊತೆ ಸಹಿಹಾಕಿದ ಒಂದು ಜಂಟಿ ಹೇಳಿಕೆಯ ಪ್ರತಿಯನ್ನು ಮೋದಿಯವರಿಗೆ ನೀಡಿದರು. ಈ ಹೇಳಿಕೆಯು ಸೆಮಿಟಿಕ್ ಮತಗಳಾದ ಕ್ರೈಸ್ತ ಮತ್ತು ಮುಸ್ಲಿಂ ಮತಗಳ ನಾಯಕರು ಸೆಮಿಟಿಕ್ ಮತಗಳ ಪರಿಧಿಯೊಳಗೇ ಮಾಡಿಕೊಂಡ ಒಪ್ಪಂದವಾಗಿದ್ದು ಒಂದು ಅಲ್ಪಕಾಲೀನ ದೃಷ್ಟಿಯ ಸೀಮಿತ ಪರಿಣಾಮವನ್ನಷ್ಟೇ ಬೀರುತ್ತದೆ. ಜಾಗತಿಕ ಮತೀಯ ಸೌಹಾರ್ದವನ್ನು ಕಾಪಾಡುವ ರೂಪುರೇಷೆಗಳು ಈ ಜಂಟಿಹೇಳಿಕೆಯಲ್ಲಿ ಅಡಕವಾಗಿಲ್ಲ. ಭಾರತದ ಸನ್ನಿವೇಶಕ್ಕೆ ಈ ಜಂಟಿಹೇಳಿಕೆ ಕೊಡಬಹುದಾದದ್ದು ಏನು ಎಂಬುದೇ ಪ್ರಶ್ನಾರ್ಹವಾಗಿದೆ. ನಂತರ, ಪೋಪ್ ಅವರು ತಮ್ಮ ಪದಗ್ರಹಣದ ಒಂಬತ್ತನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಿಡುಗಡೆ ಮಾಡಿದ ನಾಣ್ಯರೂಪದ ಮೆಡಲ್ ಒಂದನ್ನು ಭೇಟಿಯ ಜ್ಙಾಪಕಾರ್ಥಕವಾಗಿ ಮೋದಿ ಅವರಿಗೆ ನೀಡಿದರು. ಆ ಮೆಡಲ್ ನಲ್ಲಿ ಕ್ರೈಸ್ತ ಮತದ ಹಲವು ಚಿಹ್ನೆಗಳು ಎರಡೂ ಕಡೆಗಳಲ್ಲಿ ಮುದ್ರಿತವಾಗಿದೆ. ಇನ್ನೊಂದು ಮೆಡಲ್ ಅನ್ನು ಹೆಚ್ಚುವರಿಯಾಗಿ ಅವರಿಗೆ ನೀಡಿ ಇದು ‘ನಿಮ್ಮ ತಾಯಿ ಅವರಿಗೆ’ ಎಂಬ ಅಚ್ಚರಿ ನೀಡಿದರು. ಭಾರತದಲ್ಲಿ ಇದನ್ನು ನೋಡಿದವರ ಮನದಲ್ಲಿ ಕೆಲತಿಂಗಳ ಹಿಂದೆ ಕರ್ನಾಟಕದಲ್ಲಿ ನಡೆದ ಘಟನೆಯನ್ನೂ, ಕರ್ನಾಟಕದ ಮಾಜಿ ಮಂತ್ರಿಗಳಾಗಿದ್ದ ಶ್ರೀ ಗೂಳಿಹಟ್ಟಿ ಅವರ ತಾಯಿಯವರನ್ನೂ ನೆನಪಿಗೆ ತಂದವು.

ಭಾರತದ ಕರ್ನಾಟದ ರಾಜ್ಯದಲ್ಲಿ ರಾಜ್ಯದ ಮಾಜಿ ಮಂತ್ರಿಗಳಾದ ಶ್ರೀ.ಗೂಳಿಹಟ್ಟಿ ಶೇಖರ್ ಅವರಿಗೆ ಅವರ ತಾಯಿಯ ವಿಚಾರದಲ್ಲಿ ಕ್ರೈಸ್ತ ಮತಾಂತರಿಗಳು ಒಂದು ಅಚ್ಚರಿಯನ್ನು ಕೆಲ ತಿಂಗಳ ಹಿಂದೆ ನೀಡಿದ್ದರು. ಹಿಂದೂ ಗಳಾದ ಅವರ ಕುಟುಂಬದ ಹಿರಿಯ ಸದಸ್ಯೆಯಾದ ಅವರ ತಾಯಿಯನ್ನು ಕ್ರೈಸ್ತ ಮತಕ್ಕೆ ಮಾಜಿ ಸಚಿವರ ಅರಿವಿಲ್ಲದಂತೆ ಮತಾಂತರಿಸಲಾಗಿತ್ತು. ಇದು ಬಹಿರಂಗವಾಗುತ್ತಿದ್ದಂತೆ, ಸಾಮಾಜಿಕ ಚರ್ಚೆ ಕ್ರೈಸ್ತ ಮತಾಂತರದ ಸುತ್ತಾ ಎದ್ದಿತ್ತು. ಅಕ್ರಮ ಮತಾಂತರವನ್ನು ತಡೆಯುವಲ್ಲಿ ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ ಪ್ರಶ್ನೆಗಳು ಎದ್ದವು. ಸರ್ಕಾರವು ಈ ಕಡೆ ಗಮನ ಹರಿಸುತ್ತಿದ್ದಂತೆ, ಕ್ರೈಸ್ತ ಗುಂಪುಗಳು ತಮ್ಮ ದನಿ ಎತ್ತಿ ತಮ್ಮ ಮತೀಯ ಸ್ವಾತಂತ್ರ್ಯದ ಹಕ್ಕನ್ನು ಪ್ರತಿಪಾದಿಸಿದವು. ಕ್ರೈಸ್ತ ಮತೀಯ ನಾಯಕರ ನೇತೃತ್ವದಲ್ಲಿ ನಿಯೋಗಗಳು ಸರ್ಕಾರದ ಮುಖ್ಯಸ್ಥರನ್ನೂ, ಅಧಿಕಾರಿಗಳನ್ನೂ ಭೇಟಿಮಾಡಿದವು. ಕ್ರಿಸ್ತನ ಸಂದೇಶವನ್ನು ಸಾರುವ ಕ್ರೈಸ್ತರ ಜವಾಬ್ದಾರಿಯು ವಿಕೃತ ರೂಪವನ್ನು ತಾಳಿ ಹಿಂದೂ ಸಮಾಜದಲ್ಲಿ ಎಬ್ಬಿಸುತ್ತಿರುವ ವಿಪ್ಲವಗಳಿಗೆ ಕ್ರೈಸ್ತರ ಸಾಂತ್ವನದ ಪ್ರತಿಸ್ಪಂದನದ ಅಭಾವ ಇದೆ. ಇದು ಕ್ರೈಸ್ತ ಮತದ ಮತೀಯ ವಿಸ್ತರಣಾನೀತಿಯ ಪ್ರತಿಫಲನವಾಗಿದೆ ಎಂಬುದು ಹಿಂದೂಗಳ ಈಗಿನ ಅಭಿಮತ. ಈ ಹಿನ್ನೆಲೆಯಲ್ಲಿ ಪೋಪ್ ಅವರು ಮೋದಿಅವರ ತಾಯಿಗೆ ಸದಾಭಿಪ್ರಾಯದಿಂದ ನೀಡಿರಬಹುದಾದ ಮೆಡಲ್, ಭಾರತದಲ್ಲಿ ಶ್ರೀ ಗೂಳಿಹಟ್ಟಿ ಅವರ ತಾಯಿಯವರ ಬಳಿ ಮಿಷನರಿಗಳು ತಪ್ಪಾಗಿ ನಡೆದುಕೊಂಡ ರೀತಿಯನ್ನು ನೆನಪಿಸಿತು.

ಪೋಪ್-ಮೋದಿ ಅವರ ನಡುವೆ ಆದ ಚರ್ಚೆಯಲ್ಲಿ ಜಾಗತಿಕ ಪರಿಸರದ ರಕ್ಷಣೆ, ಮತ್ತು ಬಡತನಗಳ ವಿಷಯಗಳು ಸೇರಿದ್ದವು ಎಂದು ವರದಿಯಾಗಿದೆ. ಭಯೋತ್ಪಾದನೆ ಮತ್ತು ಭಾರತದಲ್ಲಿನ ಕ್ರೈಸ್ತರ ಸ್ಥಿತಿಗತಿಗಳೂ ಕೂಡ ಚರ್ಚೆಯ ವಸ್ತುಗಳಾಗಿತ್ತೆಂದು ಹಲವು ಮಾಧ್ಯಮಗಳ ವರದಿಗಳಿವೆ.

ಬಡತನ ನಿವಾರಣೆಯನ್ನು ಕ್ರಿಶ್ಚಿಯನ್ನರು ಪ್ರಮುಖವಾಗಿ ಪ್ರಸ್ತಾಪಿಸುತ್ತಾರೆ. ಕ್ರೈಸ್ತನ ಸಂದೇಶವನ್ನು ಸಾರುವ ಅವರ ಜವಾಬ್ದಾರಿಯನ್ನು ನಿರ್ವಹಿಸುವ ಯೋಜನೆಯ ಅಂಗವಾಗಿ ಬಡತನ ನಿರ್ಮೂಲನೆಯ ಕಾರ್ಯಕ್ರಮವು ರೂಪುಗೊಂಡಿದೆ ಎನ್ನುವುದೇ ಸೂಕ್ತ. ಏಕೆಂದರೆ, ಬಡತನ ನಿರ್ಮೂಲನವು ಕ್ರೈಸ್ತ ಧರ್ಮದ ಮೂಲ ಉಪದೇಶಗಳಲ್ಲಿ ಇದ್ದಂತೆ ಕಾಣುವುದಿಲ್ಲ. ಜೊತೆಗೆ, ಬಡತನವು ಜಾಗತಿಕ ಸಮಸ್ಯೆಯಾಗಿದ್ದರೂ, ಕ್ರೈಸ್ತ ಮತವನ್ನು ವೇಗವಾಗಿ ಪ್ರಸರಿಸುವ ಸಾಧ್ಯತೆ ಇರುವ ದೇಶಗಳಲ್ಲಿ ಮಾತ್ರ ವ್ಯಾಟಿಕನ್ ಬಡತನ ನಿರ್ಮೂಲನದ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿರುವುದು ಅಸಹಜವಾಗಿ ಕಾಣುತ್ತಿದೆ. ಭಾರತದಲ್ಲಿ ಬಡತನದ ನಿರ್ಮೂಲನದ ಚರ್ಚೆ ಮತಾಂತರದ ನೆಲೆಯಲ್ಲೇ ನಡೆಯುತ್ತಿರುವುದು ಗಮನಿಸಬಹುದು. ಹಿಂದೂಗಳಿಗೆ ಮತೀಯ ನೆಲೆಯಲ್ಲಿ ಸಹಾಯ ಮಾಡುವ ಸಮರ್ಥನೆ ಮತ್ತು ಬಡತನದಲ್ಲಿಟ್ಟ ಹಿಂದೂ ರೀತಿ-ನೀತಿಗಳನ್ನು ದೂಷಿಸಲು ಬೇಕಾದ ಸಮರ್ಥನೆ ಎರಡನ್ನೂ ಬಡತನ ನಿರ್ಮೂಲನಾ ಕಾರ್ಯಕ್ರಮ ನೀಡುತ್ತದೆ.

Vatican City, Oct 30 (ANI): Prime Minister Narendra Modi and Pope Francis during a meet, in Vatican City on Saturday. (ANI Photo)

ಕ್ಯಾಥೋಲಿಕ್ ನಾಯಕತ್ವವು ವ್ಯಾಟಿಕನ್ ದೇಶವನ್ನು ಮುನ್ನಡೆಸುತ್ತಿದ್ದರೂ, ಪೋಪ್ ಅವರ ಪ್ರಭಾವ ಕ್ಯಾಥೋಲಿಕ್ ಸಮುದಾಯದ ಬಾಹುಳ್ಯದಿಂದ ಬಂದಿದೆಯೇ ಹೊರತು, ವ್ಯಾಟಿಕನ್ ದೇಶದ ಆರ್ಥಿಕ/ಸೈನಿಕ ಪ್ರಭಾವದಿಂದಲ್ಲ. ಇಂದು, ಪೋಪ್ ಅವರ ಸಂದೇಶಗಳಲ್ಲಿ ಹವಾಮಾನ ವೈಪರೀತ್ಯಗಳ ಬಗೆಗಿನ ಸಂದೇಶಗಳು ಪ್ರಮುಖವಾಗಿರುತ್ತವೆ. ಆದರೆ, ಅಚ್ಚರಿಯೆಂದರೆ, ತನ್ನ ಮತಾನುಯಾಯಿಗಳಿಗೆ ಪರಿಸರ ರಕ್ಷಣೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಯಾವುದೇ ಕಾರ್ಯಕ್ರಮ ಕ್ಯಾಥೋಲಿಕ್ ಚರ್ಚ್ ಇಲ್ಲಿಯವರೆಗೆ ನೀಡಿದಂತಿಲ್ಲ. ಬದಲಿಗೆ, ಬಲಿಷ್ಠ ಪಾಶ್ಚಿಮಾತ್ಯದೇಶಗಳ ಯೋಜನೆಗೆ ಕ್ಯಾಥೋಲಿಕ್ ಮತ್ತಿತರ ಕ್ರೈಸ್ತ ಸಮುದಾಯದ ಬೆಂಬಲವನ್ನು ಒದಗಿಸುವ ಉತ್ಸಾಹ ಪರಿಸರದ ಸಂದೇಶಗಳಲ್ಲಿ ಕಾಣುತ್ತಿದೆ.

ಅಭಿವೃದ್ಧಿಹೊಂದಿದ ದೇಶಗಳು, ವಾತಾವರಣವನ್ನು ಉಳಿಸುವ ಉದ್ದೇಶವನ್ನು ಪ್ರಸ್ತಾಪಿಸಿ, ಆಧುನಿಕ ತಂತ್ರಜ್ಙಾನಾಧಾರಿತ ಪರಿಹಾರಗಳನ್ನು ಇತರ ದೇಶಗಳ ಮೇಲೆ ಹೇರುತ್ತಿರುವ ನಡೆಯ ಹಿಂದೆ, ಜಾಗತಿಕ ವ್ಯಾಪಾರದಲ್ಲಿ ತನ್ನ ಹಿಡಿತವನ್ನು ಮುಂದುವರೆಸುವ ಉದ್ದೇಶ ಇದೆ. ಪರಿಸರ ಸ್ನೇಹೀ ವೈಯುಕ್ತಿಕ ಜೀವನ ಶೈಲಿಯು ಜೀವನದಲ್ಲಿ ಸರಳತೆಯನ್ನು ತರುತ್ತದೆ. ಮತ್ತು ಬಡತನದ ಸಮಸ್ಯೆಯ ನಿರ್ವಹಣೆಗೂ ಸಹಕಾರಿಯಾಗುತ್ತದೆ. ಆದರೆ, ಪರಿಸರ ಸಂಬಂಧೀ ಜಾಗತಿಕ ಸಮಾವೇಶಗಳು ಈ ದಿಕ್ಕಿನಲ್ಲಿ ಸಕ್ರಿಯವಾಗಿಲ್ಲ. ಕ್ಯಾಥೋಲಿಕ್ ಮತದ ಜಾಗತಿಕ ನಾಯಕತ್ವವೂ ಸಹ ಕ್ರೈಸ್ತ ಮತೀಯರಿಗೆ ಮಾರ್ಗದರ್ಶನ ಮಾಡುವ ಬದಲು ಅಭಿವೃದ್ಧಿಹೊಂದಿದ ದೇಶಗಳಿಗೆ ಬೆಂಬಲ ನೀಡುತ್ತಿರುವುದು ತನ್ನ ಪ್ರಭಾವವನ್ನು ಅಸಮರ್ಪಕವಾಗಿ ಬಳಸುತ್ತಿರುವುದನ್ನು ತೋರಿಸುತ್ತಿದೆ. ಬಡತನ ನಿರ್ಮೂಲದ ಮಾತು ಅಕ್ರಮ ಮತಾಂತರಕ್ಕೆ ಮುಖವಾಡ ಎಂಬ ಸಂಶಯವನ್ನು ಬಲಗೊಳಿಸುತ್ತದೆ. ಬಿಜೆಪಿಯ ಮಾತೃಸಂಸ್ಥೆಯಾದ ಆರೆಸ್ಸೆಸ್ ಈ ವಿಚಾರದಲ್ಲಿ ಮುಂದಿದೆ ಎನ್ನಬಹುದು. ತನ್ನ ಕಾರ್ಯಯೋಜನೆಯಲ್ಲಿ ಪರಿಸರವನ್ನು ಅಂತರ್ಗತಗೊಳಿಸಿರುವ ಅದು ತನ್ನ ಪ್ರಭಾವ ಮತ್ತು ಜಗತ್ತಿನ ಅಗತ್ಯತೆಗಳನ್ನು ಸಮನ್ವಯಗೊಳಿಸಿಕೊಂಡಿದೆ. ತನ್ನ ಪರಿಸರ ಕಾಳಜಿಯನ್ನು ಅನುಷ್ಠಾನಗೊಳಿಸಲು ಅದು ಸರ್ಕಾರಗಳ ಮೇಲೆ ಅವಲಂಬಿತವಾಗಿಲ್ಲ.

ಕೇರಳದ ಸಿರೋ-ಮಲಂಕಾರ ಚರ್ಚ್‌ನ ಮೇಜರ್ ಆರ್ಚ್‌ಬಿಷಪ್ ಬಸೆಲಿಯೋಸ್ ಕ್ಲೀಮಿಸ್ ಅವರು ಪೋಪ್-ಮೋದಿ ಭೇಟಿಯ ಸಂದರ್ಭದಲ್ಲಿ ಸಹಕಾರದ ಮಾತುಗಳನ್ನು ಆಡಿದ್ದಾರೆ. ಕೇರಳದ ಸಂದರ್ಭದಲ್ಲಿ ಸಿರಿಯನ್ ಕ್ರಿಶ್ಚಿಯನ್ ಸಮುದಾಯವು ರಾಜಕೀಯ ಕವಲಿನಲ್ಲಿದೆ. ಪ್ರಬಲ ರಾಜಕೀಯ ಪಕ್ಷವಾದ ಬಿಜೆಪಿ ಅದರ ಹಿತಾಸಕ್ತಿಯನ್ನು ಕಾಯುತ್ತದೆಂಬ ಭರವಸೆ ಆ ಸಮುದಾಯದ ನಾಯಕರಲ್ಲಿದೆ. ಆದರೆ, ಬಿಜೆಪಿಯು ಇತರ ಪಕ್ಷಗಳಂತೆ ತುಷ್ಟೀಕರಣದ ಇಳಿಜಾರಿನಲ್ಲಿ ಇಲ್ಲ ಎಂಬ ಅಂಶವೂ ಅವರ ಪ್ರಜ್ಙೆಯಲ್ಲಿದೆ. ಮತಾಂತರದ ಕಾರ್ಯಕ್ರಮವನ್ನು ಬಿಡದೇ, ರಾಜಕೀ್ಯ ಪ್ರಾಬಲ್ಯವನ್ನು ಉಳಿಸಿಕೊಳ್ಳುವ / ಬೆಳೆಸಿಕೊಳ್ಳುವ ಸಾಧ್ಯತೆಗಳನ್ನು ಭಾರತದ ಕ್ರೈಸ್ತ ನಾಯಕತ್ವ ಪರಿಶೀಲಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಕ್ರೈಸ್ತರ ನಿಯೋಗಗಳು ಬೇಡಿಕೆ ಮತ್ತು ಪ್ರತಿಭಟನೆಗಳೊಂದಿಗೆ ಸರ್ಕಾರದ ಪ್ರತಿನಿಧಿಗಳೊಡನೆ ಭೇಟಿಮಾಡುತ್ತಲೇ, ಪೋಪ್-ಮೋದಿ ಭೇಟಿಯನ್ನು ಪ್ರಶಂಸುತ್ತಿವೆ.

ಇನ್ನು ಭಯೋತ್ಪಾದನೆಯ ಚರ್ಚೆ ಮುಸ್ಲಿಂ ಸಮುದಾಯದಲ್ಲಿರುವ ಅಸಹಿಷ್ಣುತೆಯ ಹಿನ್ನೆಲೆಯಲ್ಲಿ ನಡೆದಿದೆ. ಈ ವಿಚಾರದಲ್ಲಿ ಜಂಟಿಹೇಳಿಕೆಯಂಥಾ ಸಾಂಕೇತಿಕ ನಡೆಗಳನ್ನು ಬಿಟ್ಟರೆ, ಕ್ರೈಸ್ತ ದೇಶಗಳ ಘರ್ಷಣಾ ಮನೋಭಾವನೆಯನ್ನು ಬದಲಿಸುವ ಯೋಚನೆ/ಯೋಜನೆ ವ್ಯಾಟಿಕನ್ ದೇಶದಿಂದ ಬಂದಿಲ್ಲ ಮತ್ತು ಬರುವ ಸೂಚನೆಗಳೂ ಇಲ್ಲ. ಈ ಅಂಶಗಳನ್ನು ಗಮನಿಸಿದರೆ, ಭಾರತದಲ್ಲಿ ಸಮುದಾಯಗಳ ನಡುವೆ ನಡೆಯುತ್ತಿರುವ ತಿಕ್ಕಾಟಗಳ ಮೂಲ ಭಾರತದಲ್ಲಿ ಇಲ್ಲ ಎಂದೇ ಹೇಳಬೇಕಾಗುತ್ತದೆ. ಆದರೆ, ಭಾರತದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವತ್ತ ಮೋದಿ ಸರ್ಕಾರ ಗಮನ ಹರಿಸುತ್ತಿದೆ. ಪೋಪ್ ಭಾರತ ಭೇಟಿ ಇದಕ್ಕೆ ಸಹಕಾರಿಯಾಗುವುದಾದರೆ, ಅದು ನಂತರದಲ್ಲಿ ಹಲವು ಇತರ ಜಾಗತಿಕ ಸಮಸ್ಯೆಗಳಿಗೂ ಪರಿಹಾರ ನೀಡುವತ್ತಲೂ ಸಹಕಾರಿಯಾಗುತ್ತದೆ.

1 thought on “ಮೋದಿ ಮತ್ತು ಪೋಪ್ ಚರ್ಚೆಯಲ್ಲಿನ ರಾಜಕೀಯ ಮತ್ತು ತಾತ್ವಿಕ ನೆಲೆಗಳು

  1. ತುಂಬಾ ಚೆನ್ನಾಗಿ,ವಿವರಿಸಿದ್ದೀರಿ.
    ನಾಣ್ಯ ಕೊಟ್ಟ ವಿಷಯ, ಪರಿಸರ ಸಂರಕ್ಷಣೆ ಬಗ್ಗೆ ಹುಸಿ ಮಾತು,ಕಾಳಜಿ.. ಹಾಗೂ ಕೊನೆಯಲ್ಲಿ ಬರೆದ ಆ ಒಂದು ಸಾಲು…

    “ಭಾರತದಲ್ಲಿ ಸಮುದಾಯಗಳ ನಡುವೆ ನಡೆಯುತ್ತಿರುವ ತಿಕ್ಕಾಟಗಳ ಮೂಲ ಭಾರತದಲ್ಲಿ ಇಲ್ಲ ಎಂದೇ ಹೇಳಬೇಕಾಗುತ್ತದೆ.”

    ನಿಜವಾಗಲೂ ಎಂಥವರಿಗದರೂ ಕಣ್ಣು ತೆರೆಸುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.