ಭಾರತದ ಯೌವನವನ್ನು ಜಗತ್ತಿನ ಉತ್ಥಾನಕ್ಕಾಗಿ ಬಳಸಿಕೊಳ್ಳಬೇಕಾದರೆ ಇಲ್ಲಿನ ಯುವಕರಿಗೆ ನಾಡಿನ ಸ್ವತ್ವದ ಆಧಾರಿತ ಕರ್ತವ್ಯ ಪ್ರಜ್ಞೆಯ ಅರಿವಾಗಬೇಕು. ಈ ನಿಟ್ಟಿನಲ್ಲಿ ಸಾಂಸ್ಥಿಕ ಹಾಗೂ ಜನರೇ ರೂಪಿಸಿದ ಹಲವು ಪ್ರಯತ್ನಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಅಂತಹ ಪ್ರಯತ್ನಗಳಲ್ಲಿ 2005ರಿಂದ ಬೆಂಗಳೂರಿನ ಶೈಕ್ಷಣಿಕ ಸಂಸ್ಥೆ ದಿಶಾ ಭಾರತ್ ಮಾಡಿಕೊಂಡು ಬಂದಿರುವ ಕಾರ್ಯಗಳು ಪ್ರೇರಣಾದಾಯಕವಾಗಿವೆ. ಕಳೆದ ೪ ನಾಲ್ಕು ವರ್ಷಗಳಿಂದ ‘ನನ್ನ ಭಾರತ’(MyBHARAT) ಎಂಬ ರಾಷ್ಟ್ರಮಟ್ಟದ ಯುವ ಅಭಿಯಾನವನ್ನು ಆಯೋಜಿಸಲಾಗಿದ್ದು ಯುವಕರಲ್ಲಿ ರಾಷ್ಟ್ರದ ಸಂಸ್ಕೃತಿ, ಗತವೈಭವ, ನೈಜ ಇತಿಹಾಸವನ್ನು ತಿಳಿಸುವ ಕಾರ್ಯಕ್ರಮಗಳನ್ನು ಇದರಲ್ಲಿ ಜೋಡಿಸಿಕೊಳ್ಳಲಾಗಿದೆ. ಪ್ರತಿನಿತ್ಯ ಸಂಜೆ ತಜ್ಞರಿಂದ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮ ವಿಶೇಷವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದಕ್ಕೆ ಕಾರಣ ಅವುಗಳಲ್ಲಿ ಪ್ರಸ್ತಾಪಗೊಂಡ ಸಂಶೋಧನಾತ್ಮಕ ಹಾಗೂ ಭಾರತೀಯ ಗುಣಧರ್ಮವನ್ನು ಪ್ರಸ್ತುತಪಡಿಸುವ ವಾಸ್ತವಾಂಶಗಳು. ಈ ಬಾರಿಯ ನನ್ನ ಭಾರತ ಅಭಿಯಾನವು ಅಗಸ್ಟ್ 1 ರಿಂದ 15 ರತನಕ ನಡೆಯಿತು. 15 ದಿನಗಳ 15 ಮಂದಿ ತಜ್ಞರಿಂದ ಸಂಗ್ರಹಯೋಗ್ಯ, ಮಾಹಿತಿಯುಕ್ತ ಉಪನ್ಯಾಸಗಳು ಮೂಡಿಬಂದವು. ಅವಗಳನ್ನು ಸಂಕ್ಷಿಪ್ತಗೊಳಿಸುವ ಪ್ರಯತ್ನ ಇಲ್ಲಿದೆ.

ನಾಲಂದಾ ಎಂಬ ಜ್ಞಾನದ ಬಾಗಿಲು: ನಾಲಂದಾ ವಿಶ್ವವಿದ್ಯಾನಿಲಯದ ಶ್ರೇಷ್ಠತೆಯ ಕುರಿತು ಮಾತನಾಡಿದ ನಾಲಂದಾ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ಸುನೈನಾ ಸಿಂಗ್ “ಜಗತ್ತಿಗೆ ಭಾರತದ ಸಾಂಸ್ಕೃತಿಕ ಪರಂಪರೆಯ ಕೊಡುಗೆ ನಾಲಂದಾ ವಿಶ್ವವಿದ್ಯಾನಿಲಯ. ಜಗತ್ತಿನ ವಿದ್ಯಾರ್ಥಿಗಳನ್ನು ಆಹ್ವಾನಿಸಿದ ವಿಶ್ವದ ಮೊದಲ ವಿಶ್ವವಿದ್ಯಾನಿಲಯ ಎಂಬ ಖ್ಯಾತಿಯನ್ನು ಪಡೆದಿತ್ತು. ಪ್ರಪಂಚದ ನಾನಾ ಭಾಗದ ಜ್ಞಾನಾರ್ಥಿಗಳನ್ನು ನಾಗರಿಕರನ್ನಾಗಿದ ಶ್ರೇಯಸ್ಸು ಈ ವಿಶ್ವವಿದ್ಯಾನಿಲಯಕ್ಕಿದೆ. ವಿಶಿಷ್ಟ ರೀತಿಯ ವಿದ್ಯಾದಾನವನ್ನು ನೀಡಿ ವೈಚಾರಿಕ ಸಂಸ್ಕೃತಿಯ ಉಗಮಕ್ಕೆ ಕಾರಣವಾಗಿತ್ತು. 1600 ವರ್ಷಗಳ ಹಿಂದೆಯೇ ಇಂದಿನ ಅಗತ್ಯತೆಯಾಗಿರುವ ಅಂತರ್‌ಶಿಸ್ತು ಮತ್ತು ಬಹುಶಿಸ್ತೀಯ ಶಿಕ್ಷಣದ ಮಾದರಿಯನ್ನು ನಾಲಂದಾ ಅಳವಡಿಸಿಕೊಂಡಿತ್ತು. ಅಲ್ಲಿನ ಶಿಕ್ಷಣ ಪದ್ಧತಿ, ಜ್ಞಾನಾರ್ಥಿಗಳ ಆಯ್ಕೆ ಮತ್ತು ಆತ್ಮಸಾಕ್ಷಾತ್ಕಾರಕ್ಕಾಗಿ ನಿರ್ಮಿಸಿದ್ದ ವಾತಾವರಣವೆಲ್ಲವೂ ಭಾರತೀಯ ಜ್ಞಾನ ಪರಂಪರೆಯನ್ನು ರಕ್ಷಿಸುವ ಧ್ಯೇಯವನ್ನು ಹೊಂದಿತ್ತು” ಎಂಬುದಾಗಿ ತಿಳಿಸಿ ನಾಲಂದಾ ವಿಶ್ವವಿದ್ಯಾನಿಲಯದ ಹಿರಿಮೆ – ಗರಿಮೆಗಳನ್ನು ಮೆಲುಕು ಹಾಕಿದರು.


“ನಮ್ಮ ಸಂಸ್ಕೃತಿ, ಸಾಮರಸ್ಯ ಮತ್ತು ಶಾಂತಿಯ ಧ್ಯೇಯವನ್ನಿಟ್ಟುಕೊಂಡು ವಿಶ್ವವನ್ನು ಮುನ್ನಡೆಸುವಲ್ಲಿ ಭಾರತ ಮೊದಲಿನಿಂದಲೂ ನಿರಂತರತೆಯನ್ನು ಕಾಯ್ದುಕೊಂಡಿದೆ. ಇಂದು ನಾಲಂದಾದಂತಹ ವಿಶ್ವವಿದ್ಯಾನಿಲಯಗಳ ಮೂಲಕ ಭಾರತ ಪುನಃ ಜ್ಞಾನದ ಸೇತುವೆಯಂತೆ ಅದೇ ಮೌಲ್ಯಕ್ಕಾಗಿ ಕಾರ್ಯನಿರ್ವಹಿಸಬೇಕಿದೆ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವುದು ಜ್ಞಾನಪರಂಪರೆಯ ಆಶಯವಾಗಿತ್ತು ಎನ್ನುವುದನ್ನು ಅರಿತು ಮನುಕುಲದ ಉಪಯುಕ್ತತೆಗಾಗಿ ಭಾರತದ ಅಭಿವೃದ್ಧಿಗೆ ನಾವೆಲ್ಲರೂ ಮುಂದಾಗಬೇಕಿದೆ. ನಾಲಂದಾ ವಿಶ್ವದ ಒಳಿತೆಲ್ಲಾ ಒಂದೆಡೆಗೆ ಹರಿದು ಬರಲಿ ಎಂಬ ಭಾರತದ ಮೌಲ್ಯದ ಪ್ರತಿರೂಪವಾಗಿದ್ದರಿಂದಲೇ ವಿದೇಶಿಗರ ದಾಳಿಗೆ ತುತ್ತಾಗಿ ೮೦೦ ವರ್ಷಗಳೇ ಕಳೆದರೂ ನಮ್ಮ ಸ್ಮೃತಿಪಟಲದಲ್ಲಿ ಸ್ಥಾನ ಪಡೆದುಕೊಂಡಿದೆ.” – ಎಂದರು ಡಾ. ಸುನೈನಾ ಸಿಂಗ್

ಭಾರತದ ಏಕತೆಯಲ್ಲಿ ಮಹಿಳೆಯ ಪಾತ್ರ ಅದ್ವಿತೀಯ: ನವದೆಹಲಿಯ ‘ದಿ ಚರ್ನ್’ ಸಂಸ್ಥೆಯ ಸಂಸ್ಥಾಪಕಿ ಹಾಗೂ ಚಿಂತಕಿ ಶುಭ್ರಸ್ಥಾ ಭಾರತದ ಸಾಂಸ್ಕೃತಿಕ, ಸಾಮಾಜಿಕ ಏಕತೆಯಲ್ಲಿ ಮಹಿಳೆಯ ಪಾತ್ರದ ಕುರಿತು ಬೆಳಕು ಚೆಲ್ಲಿದರು. ಭಾರತದ ಏಕತೆಯನ್ನು ಮತ್ತು ಅಸ್ಮಿತೆಯನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ಗುರುತರವಾದದ್ದು. ರಾಷ್ಟ್ರವ್ಯಾಪಿಯಾಗಿ ಅಖಂಡ ಭಾರತದ ಸಂಕೇತವಾಗಿ ನಿರ್ಮಿಸಲಾಗಿರುವ 52 ಶಕ್ತಿಪೀಠಗಳು ರಾಷ್ಟ್ರವನ್ನು ಏಕತೆಯಿಂದಿರಿಸುವಲ್ಲಿ ಮಹಿಳೆಯ ಅಗತ್ಯತೆಯನ್ನು ತಿಳಿಸುತ್ತದೆ. ಭಾರತೀಯ ಸಂಸ್ಕೃತಿಯ ಅನೇಕ ಆಚರಣೆಗಳು ಮಹಿಳೆ ಸಕಲ ಸೃಷ್ಟಿಯ ಸಾಕಾರಮೂರ್ತಿಯಾಗಿದ್ದಾಳೆ ಎನ್ನುವುದನ್ನು ಸಾಕ್ಷೀಕರಿಸುತ್ತದೆ. ನಮ್ಮ ಸಂಸ್ಕೃತಿ ಸೃಷ್ಟಿ ಮತ್ತು ಲಯದ ಶಕ್ತಿ ನಾರಿಗೆ ಇದೆ ಎನ್ನುವುದನ್ನು ಸೂಚಿಸುತ್ತದೆ. ದುರ್ಗಸಪ್ತಶತಿಯಲ್ಲಿ ಪುರುಷ ಮತ್ತು ಸ್ತ್ರೀಯ ಸ್ಥಾನಮಾನ ಸಮಾನವಾದದ್ದು ಎನ್ನುವುದನ್ನು ಶಿವ ಮತ್ತು ಶಕ್ತಿಯ ಸಂಭಾಷಣೆಯ ಮೂಲಕ ತಿಳಿಸಲಾಗಿದೆ.

ನಮ್ಮ ಋಷಿಮುನಿಗಳು ಕೂಡ ಮಹಿಳೆಯರ ಗುರುತ್ವಕ್ಕೆ ತಲೆಬಾಗಿದ ನಿದರ್ಶನಗಳು ನಮ್ಮ ಪುರಾತನ ಸಾಹಿತ್ಯಗಳಿಂದ ದೊರಕುತ್ತವೆ. ಈ ನಿದರ್ಶನಗಳು ಮಹಿಳೆಯರ ಶ್ರೇಷ್ಠತೆಯ ಕುರಿತು ತಿಳಿಸುತ್ತದೆ.
ಸಾವಿರಾರು ವರ್ಷಗಳ ಸಂಘರ್ಷದ ಇತಿಹಾಸವನ್ನು ಹೊಂದಿರುವ ಭಾರತದಲ್ಲಿ ಸಂಸ್ಕೃತಿಯ ರಕ್ಷಣೆಗೆ ಬಹುದೊಡ್ಡ ಕೊಡುಗೆಯನ್ನು ಮಹಿಳೆಯರು ತಮ್ಮ ಮನೆಯಲ್ಲಿನ ಆಚರಣೆಗಳ ಮೂಲಕ ನೀಡಿದ್ದಾರೆ. ರಾಷ್ಟ್ರದ ಸ್ವಾತಂತ್ರ್ಯ ಯಜ್ಞದಲ್ಲಿ ಅಗಣಿತ ಮಹಿಳೆಯರು ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಅನೇಕ ಸ್ವಾತಂತ್ರ್ಯ ಹೋರಾಟಗಾರರ ರಾಷ್ಟ್ರ ಕಾರ್ಯಕ್ಕೆ ಬಹುದೊಡ್ಡ ಬೆಂಬಲವಾಗಿ ನಿಂತಿದ್ದಾರೆ. ಅಂತಹ ವೀರವನಿತೆಯರನ್ನು ನಾವು ಸ್ಮರಿಸಿಕೊಳ್ಳದೇ ಇರುವುದು ವಿಪರ್ಯಾಸದ ಸಂಗತಿ. ವಿದೇಶಿಗರ ನಿರಂತರ ದಾಳಿಗೆ ಸಿಲುಕಿ ಬೌದ್ಧಿಕ ದಾಸ್ಯಕ್ಕೆ ಒಳಗಾಗಿರುವ ನಾವು ಇಲ್ಲಿನ ಸಮಸ್ಯೆಗಳಿಗೆ ವಿದೇಶಿ ನೆಲೆಗಟ್ಟಿನಲ್ಲಿ ಉತ್ತರವನ್ನು ಹುಡುಕುತ್ತಿರುವುದು ವಿಷಾದನೀಯ ಸಂಗತಿ. ಈ ಮಾನಸಿಕತೆಯೇ ಇಂದು ಅನೇಕ ಕೃತ್ಯಗಳಿಗೆ ಕಾರಣವಾಗಿದೆ. ಇಲ್ಲಿನ ಮಹಿಳೆಯರು ಭಾರತೀಯ ಚಿಂತನೆಗಳಾಧಾರಿತವಾಗಿ ಕಾರ್ಯಪ್ರವೃತ್ತರಾಗಲು ಮುಂದಾದರೆ ರಾಷ್ಟ್ರದಲ್ಲಿ ಬದಲಾವಣೆಯ ಅದ್ಭುತ ಕ್ರಾಂತಿಯನ್ನೇ ಮಾಡಬಹುದು ಎನ್ನುವುದು ಶುಭ್ರಸ್ಥಾರ ಮನದಾಳದ ಮಾತು.

ಸಾಮಾಜಿಕ ಜಾಲತಾಣದಲ್ಲಿ ಯುವಶಕ್ತಿಯ ಸದ್ಬಳಕೆಯಾಗಲಿ: ಬೆಂಗಳೂರಿನ ಸಾಮಾಜಿಕ ಜಾಲತಾಣಗಳ ವಿಶ್ಲೇಷಕ ಕೆ.ಎಸ್. ಕಿರಣ್ “ಸುದ್ದಿಗಳಲ್ಲಿ ನಾವು ಕಾಣುವ ನಕಾರಾತ್ಮಕತೆಗಿಂತಲೂ ಹೆಚ್ಚು ಸಕಾರಾತ್ಮವಾಗಿ ಭಾರತ ಬೆಳೆಯುತ್ತಿದೆ. ಅನಾವಶ್ಯಕವಾಗಿ ನಮ್ಮ ನಾಡು, ನುಡಿಯ ಕುರಿತು ಹಬ್ಬಿಸಲಾಗುತ್ತಿರುವ ಸುಳ್ಳು ಸುದ್ದಿಗಳಿಗೆ ನಮ್ಮ ಅಧ್ಯಯನಾಧಾರಿತ ಧನಾತ್ಮಕ ಉತ್ತರಗಳನ್ನು ನೀಡುವ ಮೂಲಕ ಸಾಮಾಜಿಕ ಜಾಲತಾಣದ ವಾತಾವರಣವನ್ನು ಸಾತ್ವಿಕಗೊಳಿಸುವ ಪ್ರಯತ್ನ ನಮ್ಮಿಂದಾಗಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಭವಿಷ್ಯವನ್ನು ಕಣ್ಣ ಮುಂದಿರಿಸಿಕೊಂಡು ಭರವಸೆಯ ನಾಳೆಗಳನ್ನು ನಿರ್ಮಿಸುವುದಕ್ಕೆ ಸಾಮಾಜಿಕ ಜಾಲತಾಣವನ್ನು ಸಮರ್ಥ ವೇದಿಕೆಯನ್ನಾಗಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣವನ್ನು ನಾವು ಯಾಕಾಗಿ ಬಳಸುತ್ತಿದ್ದೇವೆ? ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು. ಜಾಲತಾಣದ ಬಳಕೆ ಸಮಯವನ್ನು ವ್ಯರ್ಥಗೊಳಿಸುವುದಕ್ಕಾಗಿಯಲ್ಲ, ಬದಲಾಗಿ ಸಮಯದ ಸದುಪಯೋಗಕ್ಕಾಗಿ ಎನ್ನುವ ಮನೋಭಾವ ನಮ್ಮೆಲ್ಲರಲ್ಲೂ ಮೂಡಬೇಕು. ನಮ್ಮ ಸಾಮಾಜಿಕ ಜಾಲತಾಣಗಳು ನಮ್ಮ ನಿಯಂತ್ರಣದಲ್ಲಿರಬೇಕೇ ಹೊರತು, ಅವುಗಳು ನಮ್ಮನ್ನು ನಿಯಂತ್ರಿಸುವ ವಿಪರೀತಕ್ಕೆ ನಾವು ಎಡೆಮಾಡಿಕೊಡಬಾರದು. ಸಾಮಾಜಿಕ ಜಾಲತಾಣ ಜಗತ್ತಿನ ಜನರನ್ನು ಒಳಗೊಂಡಿರುವುದರಿಂದ ಜಾಗತಿಕವಾಗಿ ಉತ್ತಮ ಸ್ನೇಹಿತರನ್ನು ಪಡೆಯುವುದಕ್ಕೆ, ಸಾತ್ವಿಕ ವಿಚಾರಗಳನ್ನು, ಆಲೋಚನೆಗಳನ್ನು ತಿಳಿಯುವುದಕ್ಕೆ ಸಹಕಾರಿಯಾಗುತ್ತದೆ. ಹಾಗೆಯೇ ನಿಮ್ಮ ಸುತ್ತಲಿನ ಜನ ಎಂತವರಿರಬೇಕು ಎನ್ನುವುದನ್ನು ಜಾಗ್ರತೆಯಿಂದ ಆಯ್ಕೆ ಮಾಡುವ ಮೂಲಕ ನಕಾರಾತ್ಮಕ ಸಂಗತಿಗಳನ್ನು ಹರಡುವವರಿಂದ ದೂರವಿರಬೇಕಾಗುತ್ತದೆ. ನಮ್ಮ ಪ್ರವೃತ್ತಿಯ ಆಧಾರಿತವಾದ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತಪಡಿಸುವಾಗ ಮೌಲ್ಯಗಳನ್ನು ಜೊತೆಗಿರಿಸಿಕೊಂಡಾಗ ಅದು ಸಾತ್ವಿಕ ವಾತಾವರಣವನ್ನು ಹೆಚ್ಚಿಸುತ್ತದೆ” ಎಂದು ಕೆ.ಎಸ್. ಕಿರಣ್ ಯುವಕರಿಗೆ ಹೇಳಿದ ಕಿವಿಮಾತುಗಳು ಸಾವಿರಾರು ಮಂದಿ ಉತ್ಸಾಹದಿಂದ ಸ್ವೀಕರಿಸಿದ್ದಾರೆ.


ನವ ಭಾರತವೇ ಆತ್ಮನಿರ್ಭರ ಭಾರತ: ಕೊಲ್ಕತ್ತಾದ ಚಿಂತಕ, ಖ್ಯಾತ ವಿಶ್ಲೇಷಕ ರಿಷಿ ಬಾಗ್ರಿ ಕಳೆದ ದಶಕದಿಂದೀಚೆ ಭಾರತ ಆತ್ಮನಿರ್ಭರತೆಯನ್ನು ಹೊಂದುತ್ತಿರುವ ಪರಿಯನ್ನು ವಿವರಿಸಿದ್ದಾರೆ. ಭಾರತ ಕಳೆದ ೧೦ ವರ್ಷಗಳಲ್ಲಿ ಪ್ರತಿಯೊಬ್ಬ ಭಾರತೀಯನಿಗೆ ಬ್ಯಾಂಕ್ ಖಾತೆ ವ್ಯವಸ್ಥೆ, ಮುದ್ರಾ ಲೋನ್, ಮೇಕ್ ಇನ್ ಇಂಡಿಯಾ ಯೋಜನೆ, ಆಧಾರ್ ಕಾರ್ಡ್ ವ್ಯವಸ್ಥೆ ಮುಂತಾದ ಯೋಜನೆಗಳ ಮೂಲಕ ವಿಶ್ವದ ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿ ಮುಂಚೂಣಿಗೆ ಬಂದಿದೆ. ಅತ್ಯುತ್ತಮ ಅಂತರ್ಜಾಲ ವ್ಯವಸ್ಥೆ, ಐPಉ ಅನಿಲ ಸರಬರಾಜು, ವಸತಿ ನಿರ್ಮಾಣ, ಸ್ವಚ್ಚ ಭಾರತದ ಕಲ್ಪನೆಯ ಅಡಿಯಲ್ಲಿ ಪ್ರತಿ ಮನೆಗೆ ಶೌಚಾಲಯ ನಿರ್ಮಾಣ, ವಿದ್ಯುತ್ ಸರಬರಾಜು, ಪ್ರತಿ ಮನೆಗೂ ನೀರಿನÀ ವ್ಯವಸ್ಥೆ, ಆರೋಗ್ಯದ ದೃಷ್ಟಿಯಲ್ಲಿ ಆಯುಷ್ಮಾನ್ ಕಾರ್ಡ್ ಮೂಲಕ ವೈದ್ಯಕೀಯ ಸೌಲಭ್ಯಗಳು ಪ್ರತಿಯೊಬ್ಬರಿಗೂ ಕೈಗೆಟುಕುವಷ್ಟು ವ್ಯವಸ್ಥೆ ಸರಳವಾಗಿದೆ.

ಸಾರಿಗೆ ಕ್ಷೇತ್ರದಲ್ಲಿ ಫಾಸ್ಟ್ ಟ್ಯಾಗ್ ತಂದಿರುವ ಕ್ರಾಂತಿ, ಅಭಿವೃದ್ದಿಯ ನಿಟ್ಟಿನಲ್ಲಿ ದೇಶದಲ್ಲಿ ಅನೇಕ ವಿದ್ಯಾಸಂಸ್ಥೆ, ಮೆಡಿಕಲ್ ಕಾಲೇಜು, ವೃತ್ತಿಪರ ಕಾಲೇಜುಗಳ ಸಂಖ್ಯೆ ಹೆಚ್ಚಳವಾಗಿದೆ. ಕ್ರೀಡೆ, ಪ್ರವಾಸೋದ್ಯಮ, ಸಾರಿಗೆ ವ್ಯವಸ್ಥೆಯಲ್ಲಿ ಮುಂದಿರುವ ಭಾರತ, ಡಿಜಿಟಲ್ ಟ್ರಾನ್ಸ್ಯಾಕ್ಷನ್‌ನಲ್ಲಿಯೂ ಮುಂಚೂಣಿಯಲ್ಲಿದೆ. ಗಡಿ ಭದ್ರತೆಯ ಜೊತೆಗೆ ಆಂತರಿಕ ಭದ್ರತೆಯಲ್ಲಿ ಭಾರತ ಸಮರ್ಥಗೊಳ್ಳುತ್ತಿದೆ ಎನ್ನುವುದಕ್ಕೆ ಕಾಶ್ಮೀರದ ಇಂದಿನ ಧನಾತ್ಮಕ ಬದಲಾವಣೆ, ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ನಿದರ್ಶನಗಳು. ಪ್ರತಿ ಮನೆಯಲ್ಲೂ ಮೊಬೈಲ್ ಸಹಜವಾದ್ದರಿಂದ ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನೆ ಪ್ರಾರಂಭವಾಗಿದ್ದು, ಉದ್ಯೋಗ್ಯವನ್ನು ಕಲ್ಪಿಸಿಕೊಟ್ಟಿದೆ. ಸಾರಿಗೆ ವ್ಯವಸ್ಥೆಯಲ್ಲಿ ಮೆಟ್ರೋ ಮಹತ್ತರ ಬೆಳವಣಿಗೆಯನ್ನು ಕಂಡಿದ್ದು, ವಿಮಾನ ನಿಲ್ದಾಣದ ಸಂಖ್ಯೆ ಹೆಚ್ಚಳವಾಗಿದೆ, ವಾಣಿಜ್ಯ ವಿಮಾನದ ಸಂಖ್ಯೆಯೂ ಹೆಚ್ಚಳವಾಗಿದೆ. ಸ್ವಾವಲಂಬಿಯಾಗಿ ಸರ್ವಾಂಗೀಣ ಅಭಿವೃದ್ಧಿ ಕಾಣುತ್ತಿರುವ ಭಾರತ ಕಷ್ಟದಲ್ಲಿರುವ ಅನೇಕ ರಾಷ್ಟ್ರಗಳಿಗೆ ಸಹಾಯವನ್ನು ಮಾಡುವ ಮಟ್ಟಕ್ಕೆ ಬೆಳೆದಿದೆ ಎನ್ನುವುದನ್ನು ಪರಿಣಾಮಕಾರಿಯಾಗಿ ವಿವರಿಸಿದ ರಿಷಿ ಬಾಗ್ರಿ ಭಾರತದ ಆರ್ಥಿಕತೆ ಅತ್ಯಂತ ಸುಭದ್ರವಾದದ್ದು ಎಂದು ವಿಶ್ವಾಸದಿಂದ ಹೇಳುತ್ತಾರೆ.

ಭಾರತೀಯ ನೆಲೆಗಟ್ಟಿನಲ್ಲೇ ಉತ್ತರ ಹುಡುಕುವ ಪ್ರಯತ್ನವಾಗಲಿ: ‘ಜ್ಞಾನಾಧಾರಿತ ಭಾರತ – ಇಂದಿನ ನಾಗರಿಕತೆಯ ಕನಸು’ ಎಂಬ ವಿಷಯದ ಕುರಿತಾದ ಉಪನ್ಯಾಸವನ್ನು ಹರಿಯಾಣದ ರಿಶಿ ಹುಡ್ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಹಾಗೂ ಸಿಇಒ ಸಾಹಿಲ್ ಅಗರ್ವಾಲ್ ನೀಡಿದರು. ಭಾರತದ ನಾಗರಿಕತೆಯ ಕನಸು ಜ್ಞಾನದಲ್ಲಿ ಸಾರ್ವಭೌಮತ್ವವನ್ನು ಸಾಧಿಸುವುದಾಗಬೇಕು ಎಂದು ಅಭಿಪ್ರಾಯಪಟ್ಟರು. ಈ ಗುರಿಯನ್ನು ತಲುಪುವುದಕ್ಕಾಗಿ ಭಾರತ ಮೊದಲು ತನ್ನ ಜ್ಞಾನವನ್ನು ಅರಿತುಕೊಳ್ಳುವ ಆಸಕ್ತಿಯನ್ನು, ಇಚ್ಛೆಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ನಂತರ ನಮ್ಮ ಜ್ಞಾನ ಪರಂಪರೆಯನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು. ಈ ಎರಡೂ ಪ್ರಾಥಮಿಕವಾಗಿ ರೂಪುಗೊಂಡ ನಂತರ ಈ ಪ್ರಕ್ರಿಯೆಗೆ ಸಹಕಾರಿಯಾಗುವ ವ್ಯವಸ್ಥೆಯನ್ನು ರಚಿಸಬೇಕು. ಹಾಗೂ ನಮ್ಮ ಜ್ಞಾನಪರಂಪರೆಯ ಶ್ರೇಷ್ಠತೆಯ ಪ್ರತೀಕವಾಗಿ ಸಂಗ್ರಹಿಸಲ್ಪಟ್ಟ ವಸ್ತುಗಳ ಕುರಿತು ಮಾಹಿತಿ ಸಂಗ್ರಹ ಮಾಡಬೇಕು ಎಂದರು.

ನಮ್ಮ ರಾಷ್ಟ್ರದ ಯುವಜನತೆ ನಮ್ಮ ಅತ್ಯಂತ ಪ್ರಬಲ ಶಕ್ತಿ. ಅವರನ್ನು ನಮ್ಮ ಜ್ಞಾನಪರಂಪರೆಯ ಕುರಿತು ಅರಿಯುವ ಅಧ್ಯಯನಶೀಲರನ್ನಾಗಿಸಿ ಕಾರ್ಯಪ್ರವೃತ್ತರಾಗುವಂತೆ ಮಾಡುವುದು ನಮ್ಮ ಮುಂದಿರುವ ಜವಾಬ್ದಾರಿ. ನಮ್ಮ ಜ್ಞಾನದ ರಕ್ಷಣೆಯಲ್ಲಿ ಆಸಕ್ತಿಯಿರುವಂತಹ ವ್ಯಕ್ತಿಗಳಿಗೆ ಸರಿಯಾದ ಪ್ರೋತ್ಸಾಹವನ್ನು, ಯುವಕರಿಗೆ ಆಸಕ್ತಿ ವಹಿಸುವಂತೆ ಪ್ರೇರಣೆಯನ್ನು ನೀಡಬೇಕಾಗಿದೆ. ನೀತಿ ರಚನೆಯನ್ನು ಮಾಡುವುದರಲ್ಲಿಯೂ ಮತ್ತು ಈ ವಿಷಯದಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಸರ್ಕಾರಗಳು ಗಮನವಹಿಸಬೇಕು. ಜಾಗತಿಕ ಮಟ್ಟದಲ್ಲಿ ಇರುವ ಅವಕಾಶಗಳ ಬೆನ್ನತ್ತಿ ಹೊರಟ ಯುವ ಪ್ರತಿಭೆಗಳಿಗೆ ಪ್ರಾದೇಶಿಕವಾಗಿಯೇ ಅವಕಾಶಗಳ ಸೃಷ್ಟಿಗೆ ಮತ್ತು ನಮ್ಮ ವಿಚಾರಧಾರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಂತೆ ಮುಂದಾಳತ್ವವನ್ನು ವಹಿಸಬೇಕು. ಕೊನೆಯದಾಗಿ ಭಾರತೀಯ ಸಮಸ್ಯೆಗಳಿಗೆ ಭಾರತೀಯ ನೆಲೆಗಟ್ಟಿನಲ್ಲಿ ಉತ್ತರವನ್ನು ಹುಡುಕುವ ಪ್ರಕ್ರಿಯೆ ಆರಂಭಗೊಂಡು ಅನುಷ್ಠಾನವಾಗಬೇಕು. ಜ್ಞಾನಾಧಾರಿತ ಆರ್ಥಿಕತೆ, ರಾಜತಾಂತ್ರಿಕತೆ ಮತ್ತು ಸಮಾಜ ನಿರ್ಮಾಣದಿಂದ ಭಾರತ ಬೆಳಗುವಂತೆ ಆಗಬೇಕು ಎಂದು ನುಡಿದಿದ್ದಾರೆ ಸಾಹಿಲ್ ಅಗರ್‌ವಾಲ್.

ರಾಷ್ಟ್ರೀಯತೆಯ ಪ್ರಖರ ಪ್ರಸ್ತುತಿ ಮಾಧ್ಯಮ ಸಿನೆಮಾ: ಖ್ಯಾತ ಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿಯವರ ಉಪನ್ಯಾಸ ಸಮಕಾಲೀನ ಸಿನೆಮಾ ಕ್ಷೇತ್ರದಲ್ಲಿ ರಾಷ್ಟ್ರೀಯತೆಯ ಭಾವ ಪ್ರಸರಣದ ಅಡ್ಡಿ ಆತಂಕಗಳನ್ನು ತೆರೆದಿಟ್ಟರು. ಭಾರತದ ಅತ್ಯಂತ ಜನಪ್ರಿಯ ಸಿನೆಮಾಗಳು ಬಾಲಿವುಡ್‌ನದ್ದಾಗಿತ್ತು. ಆದರೆ ಬಾಲಿವುಡ್ ಸಿನೆಮಾಗಳ ಕಥಾವಸ್ತುವನ್ನು ಗಮನಿಸಿದಾಗ ಅವು ಪಾಶ್ಚಾತ್ಯ ನರೆಟಿವ್‌ಗಳ ಚಿತ್ರರೂಪವಾಗಿದ್ದವು. ಆದ್ದರಿಂದ ಹಾಲಿವುಡ್, ಬಾಲಿವುಡ್, ಮಾಲಿವುಡ್ ಇತ್ಯಾದಿ ‘ವುಡ್’ ಸಂಸ್ಕೃತಿಯಿಂದ ಹೊರಬಂದು ಅತ್ಯಂತ ಬೃಹತ್ ಮಾಧ್ಯಮವಾಗಿರುವ ಸಿನೆಮಾದ ಮೂಲಕ ಜನರಿಗೆ ದೇಶದಲ್ಲಿ ನಡೆಯುತ್ತಿರುವ ವಾಸ್ತವದ ಅಂಶಗಳನ್ನು ತಿಳಿಸಿ, ಯುವಕರಲ್ಲಿ ಜಾಗೃತಿ ಮೂಡಿಸುವುದು ಪ್ರತಿ ನಿರ್ದೇಶಕನ ಕರ್ತವ್ಯವಾಗಿದೆ. ಅದಕ್ಕೆ ಬದ್ಧರಾಗಿ ತಾನು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.

ಸಮಾಜದಲ್ಲಿ ಕ್ರಾಂತಿಯನ್ನು ತರಬೇಕಾದರೆ ಅದಕ್ಕೆ ಸಹಕಾರಿಯಾಗುವ ಅತ್ಯಂತ ಶಕ್ತಿಶಾಲಿ ಮಾಧ್ಯಮ ಇಂದು ಸಿನೆಮಾ. ಆದರೆ ಈ ಸಿನೆಮಾಗಳಲ್ಲಿ ನಮ್ಮ ಸಾಹಿತ್ಯದ ಸತ್ವ ಮತ್ತು ಸ್ವತ್ವವನ್ನು, ಭಾರತೀಯ ಚಿಂತನೆಗಳನ್ನು ಪ್ರತಿನಿಧಿಸುವ ಹಾಗೂ ಭಾರತದ ಮೇಲಿನ ವಿಶ್ವದ ಸುಳ್ಳು ಆರೋಪಗಳನ್ನು ಬಟಾಬಯಲು ಮಾಡುವ ಭಾರತದ ಕಥನ (ನರೇಟಿವ್) ಆಧಾರಿತ ಸಿನೆಮಾಗಳು ಬರುವುದು ಬಹಳ ಕಡಿಮೆಯಾಗಿದೆ. ಭಾರತೀಯ ಕಥನದ ಸಿನೆಮಾಗಳ ಮೂಲಕ ಭಾರತದ ಜಾಗತಿಕ ಅಸ್ತಿತ್ವವನ್ನು ತಿಳಿಸುವುದಕ್ಕೆ, ಆರ್ಥಿಕತೆಗೆ ಸಹಕಾರಿಯಾಗುವಂತೆ, ಎಲ್ಲದಕ್ಕಿಂತ ಹೆಚ್ಚಾಗಿ ಸತ್ಯವನ್ನು ನುಡಿಯುವುದಕ್ಕೆ ಸಿನೆಮಾ ಸಹಕಾರಿಯಾಗುತ್ತದೆ. ಹೆಚ್ಚು ಜನರಿಗೆ ಭಾರತೀಯ ಮೌಲ್ಯಗಳನ್ನು ತಲುಪುವ ಮೂಲಕ ಭಾರತದ ಹಿರಿಮೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವಿದೆ.

ಸಿನಿಮಾಕ್ಕಿಂತ ದೊಡ್ಡ ಪರಿಣಾಮಕಾರಿ ಮಾಧ್ಯಮ ಮತ್ತೊಂದಿಲ್ಲವೆಂದು ನಂಬಿರುವ ವಿವೇಕ್ ಅಗ್ನಿಹೋತ್ರಿ ಅವರು ಭಾರತದ ಕಥನವನ್ನು, ಎಡಚರರು ಸಾರುತ್ತಿರುವ ಸತ್ಯಕ್ಕೆ ದೂರವಾದ ಸಂಗತಿಗಳನ್ನು, ಇದರಿಂದ ಉಂಟಾಗುತ್ತಿರುವ ಇಂದಿನ ಸಮಸ್ಯೆಗಳ ಕುರಿತು ದೇಶ -ವಿದೇಶಗಳಲ್ಲಿ ತಿಳಿಸುತ್ತಿದ್ದಾರೆ. ಜಗತ್ತಿನ ಅನೇಕ ಸಂಪ್ರದಾಯಗಳ ಕುರಿತು, ಜನಪದ ಕಲೆಗಳ ಕುರಿತು ಓದಿಕೊಂಡು, ತಿಳಿದಿರುವ ಅವರು ಭಾರತದ ಹಿರಿಮೆಯ ಕುರಿತು ತಿಳಿಸುವ ಕಾರ್ಯವನ್ನು ಸಿನೆಮಾಗಳ ಮೂಲಕ ಮಾಡುತ್ತೇನೆ ಎಂದರು.70 ವರ್ಷಗಳಲ್ಲಿ ನಡೆದ ಘಟನೆಗಳು, ಇಂದು ನಡೆಯುತ್ತಿರುವ ಘಟನೆಗಳನ್ನು ಜನರ ಮುಂದೆ ಬಿಚ್ಚಿಡುವ ಮೂಲಕ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತೇನೆ ಎಂದು ನುಡಿದಿದ್ದಾರೆ.

ಅದ್ಯಮ ನಾಗರಿಕತೆಯ ಭಾರತ: ‘ಭಾರತ: ಗೆಲ್ಲಲಾರದ ಮೃತ್ಯುಂಜಯ ನಾಗರಿಕತೆ’ಯ ಕುರಿತ ಉಪನ್ಯಾಸದಲ್ಲಿ ಚಿಂತಕ ಸಂದೀಪ್ ಬಾಲಕೃಷ್ಣ ಅವರು ಭಾರತೀಯ ಗತವೈಭವದ ಶ್ರೇಷ್ಠತೆ ಮತ್ತು ವಿದೇಶಿಗರು ರಚಿಸಿದ ಕಟ್ಟುಕಥೆಗಳ ಕುರಿತು ಯುವಜನರೊಂದಿಗೆ ಮಾಹಿತಿಗಳನ್ನು ಹಂಚಿಕೊಂಡರು. ನಾವು ಭಾರತೀಯ ಇತಿಹಾಸ ಎಂದು ಓದುವ ಇತಿಹಾಸ ಭಾರತೀಯರು ರಚಿಸಿದ್ದಲ್ಲ ಎನ್ನುವುದು ವಿಪರ್ಯಾಸದ ಸಂಗತಿ. ನಮ್ಮ ರಾಷ್ಟ್ರದ ಇತಿಹಾಸ ವಿದೇಶಿಗರು ರಚಿಸಿದ ಕಟ್ಟುಕಥೆಗಳು. ವಿದೇಶಿಗರು ಕಟ್ಟಿಕೊಟ್ಟ ಐತಿಹಾಸಿಕ ಕಥನಗಳು ಭಾರತೀಯ ಇತಿಹಾಸ, ನಾಗರಿಕ ಪರಂಪರೆ ಹಾಗೂ ಸಮಾಜದ ಕುರಿತು ಹಲವು ಸುಳ್ಳಗಳನ್ನು ಸಾರಿವೆ. ಅವುಗಳನ್ನು ಬದಿಗಿಟ್ಟು ಸತ್ಯಾಂಶದ ಐತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಅಗತ್ಯತೆ ಇದೆ. ಭಾರತವು ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದ್ದು, ಇಲ್ಲಿ ನಾಲ್ಕು ಸಾವಿರ ವರ್ಷಗಳಿಗಿಂತ ಹಿಂದೆಯೇ ಸಮೃದ್ಧವಾದ ನಾಗರಿಕತೆ ಸಿಂಧೂ ಬಯಲಿನಲ್ಲಿ ವ್ಯಾಪಿಸಿತ್ತು. ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಹಲವಾರು ಸಂಪ್ರದಾಯಗಳನ್ನು ಒಳಗೊಂಡಿದ್ದಲ್ಲದೇ ಆ ಸಂಪ್ರದಾಯಗಳ ಸಮ್ಮಿಲನಕ್ಕೆ ಸಾಕ್ಷಿಯಾಗಿದೆ.

ಭಾರತ ಇತಿಹಾಸವು ಭಾರತೀಯರು ಹೇಗೆ ವಿದೇಶಿ ಆಕ್ರಮಣಕ್ಕೆ ಒಳಗಾದರು ಎನ್ನುವುದನ್ನು ತಿಳಿಸುವ ಕಥೆಯಲ್ಲ. ಬದಲಾಗಿ ವಿದೇಶಿ ಆಕ್ರಮಣಕಾರರನ್ನು ಭಾರತೀಯರು ಹೇಗೆ ವಿರೋಧಿಸಿ, ಅಂತಿಮವಾಗಿ ಅವರ ವಿರುದ್ಧ ಜಯಗಳಿಸಿದರು ಎನ್ನುವುದನ್ನು ತಿಳಿಸುವ ಸತ್ಯಾಧಾರಿತ ದಾಖಲೆಯಾಗಬೇಕು. ಆರ್ಯರ ಆಕ್ರಮಣ ಕೂಡ ವಿದೇಶಿಗರು ಸೃಷ್ಟಿಸಿದ ಕಟ್ಟುಕಥೆಗಳಲ್ಲೊಂದು. ಏಕೆಂದರೆ ಇಡೀ ಭಾರತೀಯ ನಾಗರಿಕತೆಯನ್ನು ಇದುವರೆಗೂ ಯಾವುದೇ ವಿದೇಶಿಗನು ಸಂಪೂರ್ಣವಾಗಿ ಆಕ್ರಮಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ನಮ್ಮ ನಾಗರಿಕತೆ ಇಂದಿಗೂ ಜೀವಂತವಾಗಿ ಉಳಿಯಲು ಸಾಧ್ಯವಾಗಿದೆ. ಈಗಿನ ಯುವ ಜನತೆಗೆ ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಮುಡಿಪಾಗಿಟ್ಟ ನಿದರ್ಶನವನ್ನು ಮತ್ತು ಅವರು ಪಟ್ಟಂತ ಕಷ್ಟಗಳನ್ನು ತಿಳಿಸಿ ಹೇಳಬೇಕಾಗಿದೆ. ಸಮಾಜದ ಬೆಳವಣಿಗೆಗೆ, ದೇಶದ ಅಭಿವೃದ್ಧಿಗೆ ಯುವಕನಿಂದ ಕೂಡುಗೆಯಾಗುವ ರೀತಿಯಲ್ಲಿ ನಮ್ಮ ನಾಗರಿಕತೆ, ಸಂಸ್ಕೃತಿಯನ್ನು ತಿಳಿಸಬೇಕಿದೆ ಎಂದರು.

ಚಂದ್ರಯಾನ ಭಾರತದ ಹೆಮ್ಮೆ: ರಾಷ್ಟ್ರವ್ಯಾಪಿ ಸುದ್ದಿಯಾದ ಈ ಉಪನ್ಯಾಸವನ್ನು ಇಸ್ರೋ ಅಧ್ಯಕ್ಷರಾದ ಡಾ|ಎಸ್ .ಸೋಮನಾಥ್ ಅವರೇ ಸ್ವತಃ ನೀಡಿದರು. ವಿಶೇಷವೆಂದರೆ ಇಸ್ರೋ ಮುಖ್ಯಕಛೇರಿಯಿಂದಲೇ ಈ ಉಪನ್ಯಾಸ ನೇರಪ್ರಸಾರಗೊಂಡಿತು. ಚಂದ್ರಯಾನ-3 ಭಾರತದ ಹೆಮ್ಮೆಯ ಬಾಹ್ಯಾಕಾಶ ಯೋಜನೆ. ಜಗತ್ತಿನ ಕೆಲವು ರಾಷ್ಟ್ರಗಳು ಸಹ ಚಂದ್ರನ ಹೆಚ್ಚಿನ ಅಧ್ಯಯನಕ್ಕೆ ಮುಂದಾಗಿರುವ ಹೊತ್ತಿನಲ್ಲಿ ಭಾರತವೂ ಈ ನಿಟ್ಟಿನಲ್ಲಿ ತನ್ನ ಹೆಜ್ಜೆಯನ್ನಿರಿಸಿದೆ. ಚಂದ್ರಯಾನ-2 ಪ್ರಯತ್ನದಿಂದ ಕಲಿತ ಪಾಠದ ಫಲವಾಗಿ ಚಂದ್ರಯಾನ-3 ತಯಾರಾಗಿದೆ. ಚಂದ್ರಯಾನ-3 ನೌಕೆಯಲ್ಲಿರುವ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ತುಂಬ ಕ್ಲಿಷ್ಟಕರವಾಗಿದ್ದು, ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲು ಪೂರ್ಣ ಪ್ರಮಾಣದಲ್ಲಿ ತಯಾರಿ ನಡೆಸಲಾಗಿದೆ. ಚಂದ್ರಯಾನ- 3 ನೌಕೆಯ ಎಂಜಿನ್‌ಗಳು ಹಾಗೂ ಸೆನ್ಸಾರ್‌ಗಳು ವಿಫಲವಾದರೂ ಕೂಡ ವಿಕ್ರಂ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಅಂಗಳದ ಮೇಲೆ ಸುರಕ್ಷಿತವಾಗಿ ಇಳಿಸಲು ಅವಕಾಶವಿದೆ. ಅದಕ್ಕಾಗಿ ಬಾಹ್ಯಾಕಾಶ ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ ಎಂದು ವಿಶ್ವಾಸದ, ಅನುಭವದ ಹಿನ್ನೆಲೆಯಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡರು.

ಚಂದ್ರಯಾನ-3 ನಂತಹ ವೈಜ್ಞಾನಿಕ ಸಂಶೋಧನೆಗಳು ಭವಿಷ್ಯವನ್ನು ಕಣ್ಣಮುಂದಿರಿಸಿಕೊಂಡು ಕೈಗೊಳ್ಳುವ ಪ್ರಯತ್ನಗಳಾಗಿವೆ. ಸಮಾಜದ ಮೇಲೆ ವೈಜ್ಞಾನಿಕ ಸಂಶೋಧನೆಗಳ ಪ್ರತಿಫಲವನ್ನು ಆಯಾ ಸಂಶೋಧನೆಯ ಆರಂಭಿಕ ಹಂತದಲ್ಲೇ ಹೇಳುವುದು ಬಹಳ ಕ್ಲಿಷ್ಟಕರ ಸಂಗತಿ. ಏಕೆಂದರೆ ಪ್ರತಿ ವೈಜ್ಞಾನಿಕ ಸಂಶೋಧನೆಯ ಉಪಯುಕ್ತತೆಯನ್ನು ಅರಿಯಲು ಸಮಯ ಬೇಕಾಗುತ್ತದೆ.

ಒಬ್ಬ ವಿಜ್ಞಾನಿ ತನ್ನ ಅಂತರಾತ್ಮದ ಕುರಿತು ಅರಿತುಕೊಳ್ಳುವ ಪ್ರಕ್ರಿಯೆ ತಪ್ಪಲ್ಲ. ಭಾರತದಲ್ಲಿ ಜನಿಸಿದ ನಮಗೆ ಅಧ್ಯಾತ್ಮದೆಡೆಗಿನ ಒಲವು ಸಹಜವಾಗಿಯೇ ಇರುತ್ತದೆ. ಒಬ್ಬ ಅಧ್ಯಾತ್ಮಿಕ ಆಸಕ್ತಿಯುಳ್ಳ ವ್ಯಕ್ತಿಗೆ ತನ್ನನ್ನು ಕಾಡುವ ಅನೇಕ ಪ್ರಶ್ನೆಗಳಿಗೆ ಉತ್ತರಗಳಿದ್ದರೂ ಅದರ ಅನುಭವವನ್ನು ಪಡೆಯುವುದು ಮುಖ್ಯವಾಗುತ್ತದೆ. ನಾವು ಅನುಭವಿಸದೆ ಕೇಳಿರುವ ಸಂಗತಿಗಳು ನಂಬಿಕೆ ಎನಿಸುತ್ತವೆ. ಹಾಗೆಯೇ ವಿಜ್ಞಾನದಲ್ಲೂ ನಾವು ಹಲವು ಸಂಗತಿಗಳ ಕುರಿತು ತಿಳಿದಿದ್ದೇವೆ. ಆದರೆ ನಮ್ಮ ನಂಬಿಕೆಯನ್ನು ಸಂಶೋಧನೆಯ ಮೂಲಕ ಅನುಭವವನ್ನಾಗಿಸಿಕೊಳ್ಳಲು ಮುಂದಾಗುತ್ತೇವೆ. ಹಾಗಾಗಿ ವಿಜ್ಞಾನ ಮತ್ತು ಅಧ್ಯಾತ್ಮ ಎರಡೂ ಅಸ್ತಿತ್ವದಲ್ಲಿದೆ.

ಪ್ರಸ್ತುತ ಅನ್ವಯಿಕ ಕೋರ್ಸ್ಗಳು ಮತ್ತು ಹೆಚ್ಚು ಉದ್ಯೋಗಾವಕಾಶವನ್ನು ಸೃಜಿಸಬಲ್ಲಿ ವಿಭಾಗಗಳಿಗೆ ವಿದ್ಯಾರ್ಥಿಗಳು ಸಹಜವಾಗಿಯೇ ಆಸಕ್ತಿ ವಹಿಸುತ್ತಿದ್ದಾರೆ. ಇದರಲ್ಲಿ ಕೇವಲ ವಿದ್ಯಾರ್ಥಿಗಳ ಆಸಕ್ತಿಯನ್ನು ಪ್ರಶ್ನಿಸದೇ, ಅವರ ಆಸಕ್ತಿಗೆ ಅನುಕೂಲವಾದ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವಲ್ಲಿ ಮತ್ತು ವಿಜ್ಞಾನದಲ್ಲಿ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆಯೇ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ಇದಕ್ಕೆ ಪರಿಹಾರವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಂಶೋಧನೆ ಮತ್ತು ಅಭಿವೃದ್ಧಿಯ ಕುರಿತಾಗಿ ಪ್ರೇರೇಪಿಸುವ ಆಯಾಮಗಳ ಸೃಷ್ಟಿಯಾಗಬೇಕಿದೆ ಎಂದರು ಡಾ|ಎಸ್.ಸೋಮನಾಥ್

ರಾಷ್ಟ್ರದ ಏಕತೆಯ ಆಧಾರ ದೇವಾಲಯಗಳು: ಖ್ಯಾತ ಲೇಖಕಿ ಹಾಗೂ ಚಿಂತಕಿ ಶೆಫಾಲಿ ವೈದ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ “ದೇವಾಲಯಗಳು ನಮ್ಮ ಆಧ್ಯಾತ್ಮ ಮತ್ತು ಲೌಕಿಕ ಜೀವನದ ಬಹುಮುಖ್ಯ ಭಾಗವಾಗಿದೆ. ದೇವಾಲಯಗಳು ನಮ್ಮ ಧರ್ಮದ ವೈಶಿಷ್ಯವನ್ನು ಪ್ರತಿನಿಧಿಸುವ ಜೊತೆಗೆ ಎಲ್ಲಾ ಪುರುಷಾರ್ಥಗಳನ್ನು ಪ್ರತಿನಿಧಿಸುವ ಕೇಂದ್ರವಾಗಿದೆ” ಎಂದಿದ್ದಾರೆ. ದೇವಾಲಯದ ನಿರ್ಮಾಣವೂ ಅತ್ಯಂತ ವೈಜ್ಞಾನಿಕ ಮತ್ತು ಸಾಂಕೇತಿಕ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ದೇವಾಲಯದ ಗರ್ಭಗುಡಿಯನ್ನು ತಲುಪುವುದಕ್ಕೆ ಏರುವ ಮೆಟ್ಟಿಲುಗಳು ನಾವು ನಮ್ಮ ಅಧ್ಯಾತ್ಮ ಜೀವನದಲ್ಲಿ ಉತ್ತುಂಗಕ್ಕೇರುವ ಸಂಕೇತವಾದರೆ, ಗರ್ಭಗುಡಿಯ ಮುಂಬದಿಯಲ್ಲಿ ನಿಂತು ಮಾಡುವ ಪ್ರಾರ್ಥನೆ ಜೀವಾತ್ಮವನ್ನು ಪರಮಾತ್ಮನಲ್ಲಿ ಒಂದಾಗಿಸುವಲ್ಲಿ ತಯಾರಾದ ನಮ್ಮ ಮನಸ್ಥಿತಿಯ ಸಂಕೇತವಾಗಿದೆ. ಜೊತೆಗೆ ದೇವಾಲಯದ ಅನ್ಯಾನ್ಯ ನಿರ್ಮಾಣ ಕಾರ್ಯಗಳಿಗೆ ಸಮಾಜದ ಎಲ್ಲಾ ವರ್ಗಗಳು ಜೊತೆಗೂಡುತ್ತಿದ್ದರಿಂದ ಸಾಮಾಜಿಕ ಸಾಮರಸ್ಯದ ಸಂಕೇತವೂ ಆಗಿತ್ತು.

ದೇವಾಲಯಗಳು ಕೇವಲ ನಮ್ಮ ಅಧ್ಯಾತ್ಮ ಕೇಂದ್ರಗಳಾಗಿರದೆ ಅದೊಂದು ಸಾಮಾಜಿಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಕೇಂದ್ರಗಳಾಗಿಯೂ ದೇವಾಲಯಗಳು ಕಾರ್ಯನಿರ್ವಹಿಸುತ್ತಿತ್ತು. ಎಲ್ಲಾ ಹಬ್ಬಗಳು ದೇವಾಲಯ ಕೇಂದ್ರಿತವಾಗಿರುತ್ತಿತ್ತು. ಮದುವೆ, ಶಿಕ್ಷಣ, ಪಟ್ಟಾಭಿಷೇಕ, ನ್ಯಾಯತೀರ್ಮಾನ, ಜ್ಞಾನಾರ್ಥಿಗಳ ಸಂವಾದ ಕೇಂದ್ರ, ವಿವಿಧ ಕಲೆಗಳ ಪ್ರಸ್ತುತಿಯ ಸ್ಥಳವಾಗಿ ದೇವಾಲಯಗಳು ಗುರುತಿಸಿಕೊಂಡಿದ್ದವು. ಊರಿಗೆ ಬರಗಾಲ ಎದುರಾದಾಗ ದೇವಾಲಯಗಳು ಇಡೀ ಗ್ರಾಮಕ್ಕೆ ನೀರು, ಆಹಾರವನ್ನು ಪೂರೈಸುವ ಕೇಂದ್ರವಾಗಿತ್ತು.

ಇಂತಹ ದೇವಾಲಯಗಳು ತಮಿಳುನಾಡಿನೊಂದರಲ್ಲೇ 75,000ಕ್ಕೂ ಹೆಚ್ಚು ದೇವಾಲಯಗಳಿವೆ ಎಂದರೆ ಇಡೀ ರಾಷ್ಟ್ರದಲ್ಲಿ ಏಕತೆಯನ್ನು ಮೂಡಿಸುವ ದೇವಾಲಯಗಳ ಸಂಖ್ಯೆಯ ಅಗಾಧತೆಯನ್ನು ಗಮನಿಸಬೇಕು. ಈ ದೇವಾಲಯಗಳು ಇಸ್ಲಾಂ ಆಕ್ರಮಣಕಾರರ ದಾಳಿಗೆ ತುತ್ತಾಗಿ ನಾಶವಾದ 40,000ಕ್ಕೂ ಹೆಚ್ಚು ದೇವಾಲಯಗಳನ್ನು ಹೊರತುಪಡಿಸಿ ಉಳಿದಿರುವಂತವುಗಳು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದರೆ ಇಂದು ಈ ಬಹುತೇಕ ದೇವಾಲಯಗಳು ಸರ್ಕಾರದ ಅಧೀನದಲ್ಲಿರುವುದರಿಂದ ದೇವಾಲಯಗಳು ಕೇವಲ ಶ್ರದ್ಧಾಕೇಂದ್ರಗಳಾಗಿವೆ. ದೇವಾಲಯಗಳು ಅದಕ್ಕೆ ಸಂಬಂಧಪಟ್ಟ ಹಿಂದುಗಳ ನೇತೃತ್ವದಲ್ಲಿ ಮುನ್ನಡೆಸಲ್ಪಟ್ಟಾಗ ಅವುಗಳಿಂದ ಹಿಂದೂ ಸಮಾಜಕ್ಕೆ ಅತ್ಯಂತ ಹೆಚ್ಚು ಉಪಯೋಗವಾಗುತ್ತದೆ ಎಂದು ನುಡಿದರು. ಶೆಫಾಲಿ ವೈದ್ಯ ಪ್ರವೃತ್ತಿಯಿಂದ ದೇಗುಲಗಳ ಸಂದರ್ಶನ, ಅವುಗಳ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಲಕ್ಷಾಂತರ ನೆಟ್ಟಿಗರಿಗೆ ಸುಪರಿಚಿತರಾಗಿದ್ದಾರೆ ಶೆಫಾಲಿ.

ವಿಶ್ವನಾಯಕತ್ವದೆಡೆಗೆ ಭಾರತ: ‘ಜಗತ್ತಿನ ಶ್ರೇಯಸ್ಸಿಗಾಗಿ ಭಾರತದ ರಾಜತಾಂತ್ರಿಕ ನಾಯಕತ್ವ’ ಎಂಬ ವಿಷಯದ ಕುರಿತು ಮಾತನಾಡಿದ ಲಂಡನ್‌ನಲ್ಲಿರುವ ಲೇಖಕಿ ಹಾಗೂ ಚಿಂತಕಿ ಸೌಮ್ಯ ಚತುರ್ವೇದಿ “ಜಾಗತಿಕವಾಗಿ ಅಮೇರಿಕಾ ಮತ್ತು ರಷ್ಯಾದಂತಹ ಎರಡು ಶಕ್ತಿಗಳು ಪ್ರಭಾವಿಯಾಗಿದ್ದ ಸಂದರ್ಭದಲ್ಲಿ ಅದರ ಬೆಂಬಲಕ್ಕೆ ನಿಲ್ಲಲೇಬೇಕಾದ ಪ್ರಭಾವಲಯದಿಂದ ತಪ್ಪಿಸಿಕೊಳ್ಳಲು ಅಂದಿನ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಮತ್ತು ಅಭಿವೃದ್ಧಿ ಹೊಂದದೆ ಇರುವಂತಹ ರಾಷ್ಟ್ರಗಳಿಗೆ ಬಹಳ ಕಠಿಣವಾಗಿತ್ತು. ಆದರೆ ಭಾರತ ಆ ಸಂದರ್ಭದಲ್ಲೂ ತನ್ನ ಸ್ಪಷ್ಟವಾದ ತಟಸ್ಥ ನಿಲುವನ್ನು ತಿಳಿಸುವಲ್ಲಿ ಯಶಸ್ವಿಯಾಯಿತು. ತನ್ನ ವಿಶ್ವಪರ ನಿಲುವುಗಳಿಂದ ಜಗತ್ತಿನ ವಿಶ್ವಾಸಾರ್ಹ ಸ್ನೇಹಿತನಾಗಿ ಮುನ್ನುಗ್ಗುತ್ತಿರುವ ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಯಾವುದೇ ಹಸ್ತಕ್ಷೇಪಗಳಿಗೆ ಒಳಗಾಗದೆ ಸೂಪರ್ ಪವರ್ ರಾಷ್ಟ್ರವಾಗಿ ಮುನ್ನುಗ್ಗುತ್ತಿದೆ.” ಎಂದಿದ್ದಾರೆ.

ತನ್ನ ಸ್ವಂತ ಬಲದಿಂದ ಜಾಗತಿಕವಾಗಿ ಮುನ್ನೆಲೆಗೆ ಬಂದಿರುವ ಭಾರತ ಜಾಗತಿಕ ನಾಯಕನಾಗಿ, ಸ್ವಾಯತ್ತತೆಯನ್ನು ಪಡೆಯುವಲ್ಲಿ ಮತ್ತು ತನ್ನ ಸಾಮರ್ಥ್ಯವನ್ನು ಜವಾಬ್ದಾರಿಯುತವಾಗಿ ಬಳಸುವ ನಿಟ್ಟಿನಲ್ಲಿ ವಿಶ್ವದ ಗಮನಸೆಳೆಯುತ್ತಿದೆ. ಜಾಗತಿಕ ದಕ್ಷಿಣ (ಗೋಬಲ್ ಸೌತ್) ದ ನಾಯಕತ್ವವನ್ನು ಭಾರತ ವಹಿಸಬೇಕು ಎನ್ನುವ ಅಪೇಕ್ಷೆಗಳಿವೆ. ಸುಸ್ಥಿರ ಅಭಿವೃದ್ಧಿಯಲ್ಲಿ ಇತರೆ ದೇಶಗಳ ಜೊತೆಗೆ ಭಾರತ ಕೈಜೋಡಿಸಿ ಮಹತ್ತರದ ಕೊಡುಗೆ ನೀಡುತ್ತಿದೆ. ತಂತ್ರಜ್ಞಾನದ ಬಳಕೆ ಮತ್ತು ಡಿಜಿಟಲ್ ಪಬ್ಲಿಕ್ ಇನ್ ಫ್ರಾಸ್ಟ್ರಕ್ಚರ್ ನಲ್ಲಿ ವಿಶ್ವ ನಿಬ್ಬೆರಗಾಗುವಂತೆ ಭಾರತ ಮೋಡಿಯನ್ನು ಮಾಡುತ್ತಿದೆ. ಇವುಗಳ ಜೊತೆಗೆ ಜಿ-20ಯಂತಹ ವಿಶ್ವದ ಪ್ರಭಾವಿ ಒಕ್ಕೂಟಗಳ ನೇತೃತ್ವವನ್ನು ವಹಿಸುವಷ್ಟು ಭಾರತ ಸಮರ್ಥವಾಗುತ್ತಿದೆ. ಭಾರತದ ಈ ಎಲ್ಲಾ ಬೆಳವಣಿಗೆಗಳು ಜಾಗತಿಕ ವೇದಿಕೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದ ರಾಷ್ಟ್ರಗಳ ಧ್ವನಿಯಾಗುವಲ್ಲಿ ಸಹಕರಿಸುತ್ತಿದೆ. ಈ ರಾಷ್ಟ್ರಗಳ ನಾಯಕತ್ವದ ಜೊತೆಗೆ ಬಲಿಷ್ಠ ರಾಷ್ಟ್ರಗಳ ಕಾರಣಕ್ಕಾಗಿ ಉದ್ಭವಗೊಂಡ ವಿದ್ಯಮಾನಗಳ ಪರಿಹಾರಕ್ಕೆ ಜಗತ್ತು ಭಾರತದತ್ತ ಮುಖಮಾಡುವಂತೆ ಮಾಡುತ್ತಿದೆ ಎಂದು ತಿಳಿಸಿದರು. ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಇಂಟರ್‌ನ್ಯಾಷನಲ್ ರಿಲೇಷನ್ಸ್ ವಿದ್ಯಾರ್ಥಿಯಾಗಿರುವ ಸೌಮ್ಯ ಅವರು ಜಾಗತಿಕ ಶಕ್ತಿಯಾಗಿ ಭಾರತ ಮೂಡಿಬರುತ್ತಿರುವ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಸವಾಲುಗಳನ್ನೆದುರಿಸಲು ಸದಾಶಕ್ತ ಭಾರತ: ಚಿಂತಕ ರಜತ್ ಸೇಥಿ “ಭಾರತ ತನ್ನ ಮೌಲ್ಯಗಳನ್ನು ಉಳಿಸಿಕೊಂಡೇ ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಕೋವಿಡ್ ಸಂದರ್ಭದಲ್ಲಿ ಭಾರತ ವಹಿಸಿದ ನಾಯಕತ್ವದ ಶೈಲಿಯೇ ಇದಕ್ಕೆ ಉತ್ತಮ ಉದಾಹರಣೆ. ಭಾರತ ಪ್ರಸ್ತುತ ಜಗತ್ತಿನ ಪ್ರಮುಖ ಯುವರಾಷ್ಟ್ರ. ಆದರೆ ಯಾವುದೇ ರಾಷ್ಟ್ರದ ಯೌವನ ಸುದೀರ್ಘ ಕಾಲ ಉಳಿಯುವುದಿಲ್ಲ. ತನ್ನ ಯೌವನವನ್ನು ಕಳೆದುಕೊಳ್ಳುವ ಮುನ್ನ ಜಗತ್ತಿನ ಆರ್ಥಿಕ ಶಕ್ತಿಯಾಗಿ ಬೆಳೆದುನಿಲ್ಲಬೇಕಾಗಿರುವುದು ಪ್ರತಿ ರಾಷ್ಟ್ರದ ಕರ್ತವ್ಯ. ಅದೇ ಹಾದಿಯಲ್ಲಿ ಭಾರತ ಮುನ್ನುಗ್ಗುತ್ತಿದೆ. ಆದರೆ ಈ ಗುರಿಯನ್ನು ತಲುಪುವ ಹಾದಿಯಲ್ಲಿ ಭಾರತ ಹಲವು ಅಡಚಣೆಗಳನ್ನು ಕಾಣುತ್ತಿದೆ. ಅಮೃತಕಾಲದಲ್ಲಿರುವ ಭಾರತ ಎಲ್ಲರೂ ರಾಷ್ಟ್ರದ ಆರ್ಥಿಕತೆಗೆ ಕೊಡುಗೆ ನೀಡುವಂತೆ ವ್ಯವಸ್ಥೆಯನ್ನು ರೂಪಿಸಿ ಅಭಿವೃದ್ಧಿಯ ಪಥದತ್ತ ಸಾಗಬೇಕಿದೆ. ಯುವಶಕ್ತಿಯ ಸಾಮರ್ಥ್ಯವನ್ನು ಅರಿತು, ಪರಿಸರಕ್ಕೆ ಮಹತ್ವವನ್ನು ಕೊಟ್ಟು, ಮೂಲಭೂತ ಸೌಕರ್ಯಗಳ ಲಭ್ಯತೆಗೆ ಗಮನವಹಿಸಿ 2047 ಕ್ಕೆ ಅಂದುಕೊಂಡ ಗುರಿಯನ್ನು ಸಾಧಿಸುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ”. ಎಂದು ತಮ್ಮ ಉಪನ್ಯಾಸದ ಸಂದರ್ಭದಲ್ಲಿ ಹೇಳಿದರು.

ಜಾಗತಿಕವಾಗಿ ಮುಂಚೂಣಿಗೆ ಬರುತ್ತಿರುವ ಭಾರತಕ್ಕೆ ಸಹಜವಾಗಿಯೇ ಅಡೆಚಣೆಗಳಿವೆ. ಚುನಾವಣೆಗಾಗಿ ರಾಜಕೀಯ ಪ್ರೇರಿತ ಹಲವು ಘಟನೆಗಳು, ಭಾರತವನ್ನು ಹಳಿಯುವ ವಿದೇಶಿ ಕೈವಾಡವಿರುವ ಸೂಚ್ಯಾಂಕ ಪಟ್ಟಿಗಳು, ಅಭಿವ್ಯಕ್ತಿ ಸ್ವಾತಂತ್ರ‍್ಯದ ಹೆಸರಿನಲ್ಲಾಗುತ್ತಿರುವ ವೈಪರಿತ್ಯಗಳು, ಜಾತಿಬೇಧ, ಉತ್ತರ ಭಾರತ-ದಕ್ಷಿಣ ಭಾರತವನ್ನು ಪ್ರತ್ಯೇಕವಾಗಿ ಬಿಂಬಿಸುತ್ತಿರುವ ಪ್ರಯತ್ನಗಳು, ಕೋಮುವಾದ, ನಮ್ಮ ಆರ್ಥಿಕ ಗುರಿಯನ್ನು ತಲುಪದಂತೆ ಮಾಡುವ ಹುನ್ನಾರಗಳೆಲ್ಲವೂ ಅಭಿವೃದ್ಧಿಯ ವೇಗವನ್ನು, ನಾಡಿನ ಶಾಂತಿಯನ್ನು ಕುಂಟಿತಗೊಳಿಸುತ್ತಿವೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳಿಗೆ ಪ್ರತಿಯಾಗಿ ರಾಷ್ಟ್ರದ ಯುವಕರು ವಿನೂತನ ಆಲೋಚನೆಗಳಿಂದ ರಾಷ್ಟ್ರವನ್ನು ಕಟ್ಟುವ ಕಾಯಕಕ್ಕೆ ಮುಂದಾಗಬೇಕು. ನಮ್ಮ ವೈಚಾರಿಕ ವಲಯ ಭಾರತದ ವಿರೋಧವಾಗಿ ಕೇಳಿ ಬರುವ ಸಂಗತಿಗಳಿಗೆ ಸಮರ್ಥವಾಗಿ ಉತ್ತರಿಸಬೇಕು. ಎಲ್ಲದಕಿಂತ ಮುಖ್ಯವಾಗಿ ಹಿಂದೂಗಳು ಸಂಘಟಿತರಾಗಿದ್ದರೆ ಹಲವು ಸಮಸ್ಯೆಗಳು ತನ್ನಿಂದ ತಾನೇ ಶಮನಗೊಳ್ಳುತ್ತವೆ. ಎಂದು ನುಡಿದರು ರಜತ್ ಸೇಥಿ.

ಜ್ಞಾನವೇ ಶಕ್ತಿ: ಪ್ರತಿಷ್ಠಿತ ಜೆಎನ್‌ಯು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಶಾಂತಿಶ್ರೀ ಧುಲಿಪುಡಿ ಪಂಡಿತ್ ಅವರು ‘2047: ಭಾರತದ ಶೈಕ್ಷಣಿಕ ಭವಿಷ್ಯ’ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮದು 1947ರ ನಂತರ ಬೆಳೆದ ನಾಗರಿಕತೆಯಲ್ಲ. ನಮ್ಮ ನಾಗರಿಕತೆಗೆ 5000 ವರ್ಷಗಳಿಗೂ ಮಿಗಿಲಾದ ಅಭೂತಪೂರ್ವ ಇತಿಹಾಸವಿದೆ. ಜ್ಞಾನವನ್ನು ಪವಿತ್ರವೆಂದು ಭಾವಿಸಿದ ನಮ್ಮ ನಾಗರಿಕತೆಯ ಭಾಗವಾದ ಜ್ಞಾನಪರಂಪರೆಯ ಆಧಾರಿತವಾಗಿ ನಮ್ಮ ಶಿಕ್ಷಣ ವ್ಯವಸ್ಥೆ ರಚನೆಯಾಗಬೇಕಿದೆ. ಇಂದು ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ನಮ್ಮತನದ ಆಧಾರದ ಮೇಲೆ ವೈಚಾರಿಕತೆಯನ್ನು ಸೃಜಿಸುವ ಕಾರ್ಯವಾಗಬೇಕಿದೆ. ಸತ್ಯ ಪವಿತ್ರವಾದದ್ದು ಮತ್ತು ವೈಚಾರಿಕತೆ ಸೃಷ್ಟಿಯಾಗಿರುವುದು. ಆದರೆ ವೈಚಾರಿಕತೆಯೇ ಪವಿತ್ರವಾದದ್ದು ಎಂಬ ನಿಟ್ಟಿನಲ್ಲಿ ಇಂದಿನ ಶೈಕ್ಷಣಿಕ ಕ್ಷೇತ್ರ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿಯೇ ನಮ್ಮದು ಸೋಲಿನ ಇತಿಹಾಸ ಎಂದು ಬಿಂಬಿಸಲಾಗುತ್ತಿದೆ. ಆದರೆ ನಮ್ಮದು ಶೌರ್ಯದ ಇತಿಹಾಸ ಎನ್ನುವುದನ್ನು ತಿಳಿಸುವ ನಿಟ್ಟಿನಲ್ಲಿ ಭಾರತೀಯ ಸತ್ಯಕಥನವನ್ನು ತಿಳಿಸಬೇಕಿದೆ ಎಂದು ನುಡಿದರು.

ಭಾರತೀಯ ಜ್ಞಾನಪರಂಪರೆಯ ಆಧಾರಿತವಾಗಿ ನಮ್ಮ ಶಿಕ್ಷಣ ವ್ಯವಸ್ಥೆ ರಚನೆಯಾಗಬೇಕು. ನಮ್ಮ ಪ್ರಾಚೀನರು ಉಪಯೋಗಿಸಿದ ಜ್ಞಾನವನ್ನು ಅರಿತುಕೊಳ್ಳುವಲ್ಲಿ ನಾವು ಸೋತಿದ್ದೇವೆ. ಭಾರತೀಯತೆಯ ಪ್ರಾಮುಖ್ಯತೆಯನ್ನು ಜಗತ್ತಿಗೆ ತಿಳಿಸಲು ಸಂಶೋಧನೆ ಕ್ಷೇತ್ರದಲ್ಲಿ ಹೆಚ್ಚು ಕೆಲಸವಾಗಬೇಕಿದೆ. ನಮ್ಮ ಮೌಲ್ಯಾಧಾರಿತವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸೆಟೆದು ನಿಲ್ಲುವ ಧೈರ್ಯ ನಮಗೆ ಇಂದು ಬೇಕಾಗಿದೆ. ಭಾರತೀಯ ನಾಗರಿಕತೆ ಯಾವುದರಲ್ಲೂ ಬೇಧಭಾವವನ್ನು ಕಾಣಲಿಲ್ಲ ಮತ್ತು ಒಂದೇ ವೈಚಾರಿಕ ಸಂಗತಿ ಸತ್ಯ ಎನ್ನುವುದನ್ನು ಒಪ್ಪಲಿಲ್ಲ. ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲೂ ಎಲ್ಲಾ ವಿಷಯಗಳನ್ನು ಸಮಗ್ರವಾಗಿ, ಸಮಾನವಾಗಿ ಅಧ್ಯಯನ ಮಾಡುವ ಜೊತೆಗೆ ಸತ್ಯಾಧಾರಿತವಾದ ಎಲ್ಲಾ ವೈಚಾರಿಕ ಸಂಗತಿಗಳ ಅಧ್ಯಯನ ಸಾಧ್ಯವಾಗಬೇಕು. ಆಧುನಿಕತೆಯ ಜಗತ್ತಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ತಂತ್ರಜ್ಞಾನಕ್ಕೆ ಯಾವುದೇ ವೈಚಾರಿಕತೆಯ ಲೇಪ ಇಲ್ಲದಿರುವುದರಿಂದ ಅವುಗಳನ್ನು ಜಾಗರೂಕವಾಗಿ ಬಳಸಿಕೊಂಡು ವಿಶ್ವವೇ ಮೆಚ್ಚುವಂತಹ ವಿಷಯಗಳನ್ನು ಸಂಶೋಧನೆಯ ಮೂಲಕ ನೀಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ರಾಷ್ಟ್ರದ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಬದಲಾವಣೆಯಾಗುತ್ತಿದೆ. ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆ ತರುವುದು ಕೇವಲ ಸರ್ಕಾರದ ಮತ್ತು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಮಾತ್ರವಲ್ಲ. ಬದಲಾಗಿ ಪ್ರತಿ ನಾಗರಿಕನೂ ನಮ್ಮ ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆಗೆ ಬೆಂಬಲವಾಗಿ ನಿಲ್ಲುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಜ್ಞಾನವೇ ಶಕ್ತಿ, ಶಕ್ತಿಯೇ ಜ್ಞಾನವಾಗಿರುವುದರಿಂದ ಜ್ಞಾನನೀಡುವ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನಗಳು ಸಿಗುವಂತಾಗಿ, ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ನಮ್ಮ ಶಿಕ್ಷಣ ವ್ಯವಸ್ಥೆ ಬೆಳೆಯಬೇಕು ಎಂದು ಆಶಿಸಿದರು.

ಸಾವರ್ಕರ್ ನೇತೃತ್ವದಲ್ಲಿದ್ದಿದ್ದರೆ ಭಾರತ ವಿಭಜನೆಯಾಗುತ್ತಿರಲಿಲ್ಲ: ಈ ಉಪನ್ಯಾಸದಲ್ಲಿ ಲೇಖಕ ಉದಯ್ ಮಹುರ್ ಕರ್ ಅವರು ಸಾವರ್ಕರ್ ಅವರ ಕುರಿತು ಮಾತನಾಡಿದರು. ಸಾವರ್ಕರ್ ಈ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಪ್ರತೀಕ. ಭಾರತ ಅನುಭವಿಸಿದ ಮತ್ತು ಇಂದು ಅನುಭವಿಸುತ್ತಿರುವ ಬಾಹ್ಯ ಮತ್ತು ಆಂತರಿಕ ಭದ್ರತೆಯ ಸಮಸ್ಯೆಗಳ ಕುರಿತು ಹಲವು ದಶಕಗಳ ಹಿಂದೆಯೇ ಮುನ್ನೆಚ್ಚರಿಕೆಯನ್ನು ನೀಡಿದ್ದರಿಂದ ಭಾರತದ ರಾಷ್ಟ್ರೀಯ ಭದ್ರತೆಯ ಪಿತಾಮಹ ಎಂದು ಗುರುತಿಸಬಹುದು.

ಬುದ್ಧ ಮತ್ತು ಮಹಾವೀರರೂ ಕೂಡ ರಾಷ್ಟ್ರದ ಮೇಲೆ ದಾಳಿಯಾದಾಗ ಕೇವಲ ರಕ್ಷಣಾತ್ಮಕ ನೀತಿಯನ್ನು ನಾವು ಪಾಲಿಸಬೇಕು ಎಂದು ಬೋಧಿಸಿಲ್ಲ. ಹಾಗಾಗಿ ಸೈನಿಕ ಶಕ್ತಿಯನ್ನು ಸದೃಢವಾಗಿರಿಸಿಕೊಳ್ಳದೇ ಸಮರ್ಥ ರಾಷ್ಟ್ರವಾಗಿ ಬೆಳೆಯಲು ಭಾರತಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಅರಿತಿದ್ದ ಸಾವರ್ಕರ್ 1938ರಲ್ಲಿ ಹಿಂದೂ ಸೈನಿಕೀಕರಣಕ್ಕೆ ಕರೆ ನೀಡುತ್ತಾರೆ. 1939ರಲ್ಲಿ ಸ್ವತಃ ಬ್ರಿಟಿಷರೂ ಕೂಡ ತಮ್ಮ ಅಗತ್ಯತೆಯ ದೃಷ್ಟಿಯಿಂದ ಹೆಚ್ಚು ಹಿಂದುಗಳನ್ನು ಸೇನೆಗೆ ಸೇರ್ಪಡೆಗೊಳಿಸಿಕೊಂಡರು. ಆದರೆ ಬ್ರಿಟಿಷರ ಈ ನಿಲುವಿನ ವಿರುದ್ಧ ಮುಸ್ಲಿಂ ಲೀಗ್ 1939 ರಿಂದ 1945ರ ವರೆಗೆ 4 ಬಾರಿ ಎಚ್ಚರಿಕೆಯ ಪತ್ರವನ್ನು ಬರೆದು ಹೆಚ್ಚು ಹಿಂದೂ ಸೈನಿಕೀರಣದಿಂದ ಮುಸ್ಲಿಂ ಲೀಗ್‌ಗೆ ಆಗಬಹುದಾದ ತೊಂದರೆಯನ್ನು ಪ್ರಸ್ತುತಪಡಿಸುತ್ತದೆ. ಮುಸ್ಲಿಂ ಲೀಗ್‌ಗೆ ಹಿಂದೂ ಸೈನಿಕೀಕರಣ ಹೇಗೆ ತನ್ನ ವಿರುದ್ಧ ನಿಲ್ಲಬಹುದು ಎನ್ನುವುದು ತಿಳಿದಿತ್ತು, ಆದರೆ ಕಾಂಗ್ರೆಸ್‌ಗೆ ಅದರ ಮಹತ್ವದ ಅರಿವಾಗಲಿಲ್ಲ.

ರಾಷ್ಟ್ರದ ಆಗು-ಹೋಗುಗಳನ್ನು ಗಮನಿಸಿ ದೇಶವಿಭಜನೆಯಾಗಬಹುದೆಂಬ ಮೊದಲ ಸೂಚನೆಯನ್ನು ನೀಡಿದ್ದು ಸಾವರ್ಕರ್. ಸಮತೆಯನ್ನು ಕಾಪಾಡಿಕೊಂಡು ಅಖಂಡತೆಯನ್ನು ಉಳಿಸಿಕೊಳ್ಳುವ ಸಾವರ್ಕರ್ ಅವರ ನಿಲುವು ಬಹಳ ಸ್ಪಷ್ಟವಾಗಿತ್ತು. ಆದ್ದರಿಂದಲೇ ದೇಶ ವಿಭಜನೆಯ ಸುಳಿವು ಸಿಕ್ಕ ನಂತರ 1937ರಿಂದ 1945ರವರೆಗೆ ಭಾರತದ ಮೂಲೆ ಮೂಲೆಗೂ ತೆರಳಿ ಕಾಂಗ್ರೆಸ್‌ನ ಮಂದಗಾಮಿ ಪ್ರವೃತ್ತಿಯಿಂದಾಗಬಹುದಾದ ದುರಂತಗಳ ಕುರಿತು ಮುನ್ನೆಚ್ಚರಿಕೆ ನೀಡಿದ್ದರು. ಅದರಂತೆ ಮುಂದೆ ಹಲವು ದುರಂತಗಳು ನಡೆದವು. ಸಾವರ್ಕರ್ ಅವರ ಅತ್ಯಂತ ಮಹತ್ವದ ಕೊಡುಗೆಯೆಂದರೆ ‘ರಾಷ್ಟ್ರ ಮೊದಲು’ ಎಂಬ ತತ್ತ್ವ. ರಾಷ್ಟ್ರಕ್ಕೆ ಕುತ್ತು ತರುವ ಯಾವುದೇ ನಡೆಯನ್ನು ಅವರು ತೀಕ್ಷ್ಣವಾಗಿ ಖಂಡಿಸಿದ್ದಾರೆ. ಯಾವುದೇ ಧಾರ್ಮಿಕ ಆಚರಣೆಯಾಗಿರಬಹುದು ಅದು ರಾಷ್ಟ್ರದೊಳಗೆ ಅಶಾಂತಿಯನ್ನು ಸೃಷ್ಟಿಸುತ್ತದೆ ಎಂದಾದರೆ ಅವುಗಳನ್ನು ನಿಲ್ಲಿಸುವ ಜವಾಬ್ದಾರಿಯನ್ನು ಸರ್ಕಾರಗಳು ತೆಗೆದುಕೊಳ್ಳಬೇಕು. ರಾಷ್ಟ್ರದ ಸಾರ್ವಭೌಮತ್ವಕ್ಕೆ ತಡೆಯನ್ನುಂಟು ಮಾಡಬಹುದಾದ ಸ್ವಾತಂತ್ರ‍್ಯದ ನಂತರದ ನಿಲುವುಗಳನ್ನು ಕಂಠಮಟ್ಟ ಖಂಡಿಸಿದ್ದರು. ರಾಷ್ಟçದ ರಕ್ಷಣೆಯ ದೃಷ್ಟಿಯಲ್ಲಿ ಅತ್ಯಂತ ಸ್ಪಷ್ಟ ನಿಲುವನ್ನು ಹೊಂದಿದ್ದ ವ್ಯಕ್ತಿಯ ಕುರಿತು ಹಲವು ಅಸತ್ಯದ ಆರೋಪಗಳನ್ನು ಮಾಡಲಾಗುತ್ತದೆ. ಅವೆಲ್ಲವೂ ಸಾವರ್ಕರ್ ಎಂಬ ಹೆಸರೊಂದೇ ರಾಷ್ಟ್ರದಲ್ಲಿ ಉಂಟುಮಾಡಬಹುದಾದ ಏಕತೆಯ ಭಾವಜಾಗರಣದ ವಿರುದ್ಧ ಮಾಡುತ್ತಿರುವ ಷಡ್ಯಂತ್ರ ಎಂದು ಅಭಿಪ್ರಾಯಪಟ್ಟರು.

ಅಮೃತಕಾಲದಲ್ಲಿ ಭಾರತ: ಕೇಂದ್ರ ಹಣಕಾಸು ಸಚಿವಾಲಯದಿಂದಲೇ ನೇರಪ್ರಸಾರಗೊಂಡ ಈ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತದ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮಾತನಾಡಿದರು. 1700 ಸಾಮಾನ್ಯ ಶಕ ವರ್ಷದವರೆಗೆ ಭಾರತವು ಜಗತ್ತಿನ ಮೂರನೇ ಒಂದರಷ್ಟು ಒಟ್ಟು ದೇಶೀಯ ಉತ್ಪನ್ನವನ್ನು ಹೊಂದಿದ್ದ ಸಮೃದ್ಧ ರಾಷ್ಟ್ರವಾಗಿತ್ತು ಎನ್ನುವುದನ್ನು ಹಲವು ವಿದೇಶಿ ಇತಿಹಾಸಕಾರರೂ ತಿಳಿಸುತ್ತಾರೆ. ಆದರೆ ನಿರಂತರ ವಿದೇಶಿ ಲೂಟಿಕೋರರ ಆಕ್ರಮಣದ ಕಾರಣಕ್ಕಾಗಿ ಭಾರತ ತನ್ನ ಬೌದ್ಧಿಕ ಮತ್ತು ಭೌತಿಕ ಶ್ರೀಮಂತಿಕೆಯನ್ನು ಕಳೆದುಕೊಂಡು ಸ್ವಾತಂತ್ರ‍್ಯವನ್ನು ಪಡೆಯಿತು. ಇಂದು ಸರ್ಕಾರದ ಎಲ್ಲಾ ಯೋಜನೆಗಳು ಮತ್ತೊಮ್ಮೆ ಭಾರತವನ್ನು ಬೌದ್ಧಿಕ ದಾಸ್ಯತನದಿಂದ ಮುಕ್ತಿಗೊಳಿಸುವಲ್ಲಿ ಪ್ರಯತ್ನಿಸುತ್ತಿದೆ.

1947ರಿಂದ ಪ್ರತಿ ಸರ್ಕಾರದ ಯೋಜನೆಯೂ ಸಾಮಾನ್ಯ ಜನರನ್ನು ತಲುಪಬೇಕು ಎನ್ನುವುದನ್ನು ಎಲ್ಲಾ ಪ್ರಧಾನಮಂತ್ರಿಗಳು ಹೇಳಿದ್ದಾರೆ. ಆದರೆ ನರೇಂದ್ರ ಮೋದಿ ಅವರು ಮಾಡಿ ತೋರಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರ ತಂದ ಯೋಜನೆಗಳು ನಮ್ಮಲ್ಲಿ ನಾವು ಆತ್ಮನಿರ್ಭರರಾಗುವ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದೇ ಆತ್ಮವಿಶ್ವಾಸದೊಂದಿಗೆ ಭಾರತದ ಯುವಕರು ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ತಮ್ಮ ಮುಂದಿನ 25 ವರ್ಷಗಳನ್ನು ಅತ್ಯಂತ ಕ್ರಿಯಾಶೀಲರಾಗಿ ಶ್ರಮವಹಿಸುವುದಕ್ಕೆ ಪ್ರೇರಣೆ ನೀಡುತ್ತದೆ.
ಆತ್ಮನಿರ್ಭರ ಭಾರತಕ್ಕಾಗಿ 11 ಕೋಟಿ ಯುವಕರಿಗೆ ಪಿಎಂ ಕೌಶಲ್ ಯೋಜನಾ ವತಿಯಿಂದ ಕೌಶಲ್ಯ ತರಬೇತಿ ನೀಡಲಾಗಿದೆ. ನೂತನ 390 ವಿಶ್ವವಿದ್ಯಾನಿಲಯಗಳನ್ನು ಆರಂಭಿಸಲಾಗಿದೆ. ಪಿಎಂಶ್ರೀ ಯೋಜನೆ ಮೂಲಕ 27,360 ಕೋಟಿ ರೂಪಾಯಿಯನ್ನು ಗುಣಮಟ್ಟದ ಶಾಲೆಗಳ ನಿರ್ಮಾಣಕ್ಕೆ ನೀಡಲಾಗಿದೆ. 2,700 ಕೋಟಿ ಐಐಟಿಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪ್ರೋತ್ಸಾಹಿಸಲಾಗಿದೆ. ಡಿಬಿಟಿ ವ್ಯವಸ್ಥೆಯನ್ನೊಳಗೊಂಡ ಯೋಜನೆಗಳನ್ನು ಹೆಚ್ಚುಗೊಳಿಸಿದ ಕಾರಣ ೨.೭೩ ಲಕ್ಷ ಕೋಟಿ ಹಣದ ಸೋರಿಕೆಯನ್ನು ತಡೆದು, ತೆರಿಗೆ ಕಟ್ಟುವವರ ಹಣ ಉಳಿತಾಯವಾಗುತ್ತಿದೆ.

ಭಾರತ ಆತ್ಮನಿರ್ಭರಗೊಳ್ಳಲು ಮೂಲಭೂತ ಸೌಕರ್ಯ ಅನಿವಾರ್ಯ ಎನ್ನುವುದನ್ನರಿತ ಕೇಂದ್ರ ಸರ್ಕಾರ ೧೧.೭೨ ಕೋಟಿ ಶೌಚಾಲಯವನ್ನು ಸ್ವಚ್ಚಭಾರತ ಅಭಿಯಾನದ ಭಾಗವಾಗಿ ನಿರ್ಮಿಸಲಾಗಿದೆ. 39.76ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಲೋನ್ ಲಭಿಸಿದೆ. 7,351 ಕೋಟಿ ಹಣ ಎಸ್ ಸಿ ಎಸ್ ಟಿ ಮತ್ತು ಮಹಿಳೆಯರ ಸ್ವಾವಲಂಬಿತ್ವಕ್ಕಾಗಿ ಸ್ಟ್ಯಾಂಡ್ ಅಪ್ ಇಂಡಿಯಾ ಮೂಲಕ ನೀಡಲಾಗಿದೆ. ಪಿಎಂ ಆವಾಸ್ ಯೋಜನೆಯಡಿ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. 2.86 ಕೋಟಿ ಮನೆಗಳಿಗೆ ವಿದ್ಯತ್ ಸಂಪರ್ಕ ಒದಗಿಸಲಾಗಿದೆ. ಅಷ್ಟೇ ಅಲ್ಲದೇ 9.76 ಕೋಟಿ ಸಿಲಿಂಡರ್ ಗಳನ್ನು ಉಜ್ವಲ ಯೋಜನೆ ಮೂಲಕ ವಿತರಿಸಲಾಗಿದೆ ಎಂದು ತಿಳಿಸಿದ ಕೇಂದ್ರ ಹಣಕಾಸು ಸಚಿವೆ ಆರ್ಥಿಕ ಸ್ವಾವಲಂಬನೆಯತ್ತ ಭಾರತೀಯರ ದೃಢ ಹೆಜ್ಜೆಯ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತದ 80 ಕೋಟಿ ಮಂದಿ ಸ್ಮಾರ್ಟ್ಫೋನ್ ಬಳಕೆದಾರರಿಗೆ ಮಾಡಿಕೊಟ್ಟ ಅನುಕೂಲತೆಯಿಂದಾಗಿ ತಂತ್ರಜ್ಞಾನದ ಬಳಕೆ ಜನಸಾಮಾನ್ಯರ ಒಳಿತಿಗಾಗಿ ರೂಪುಗೊಂಡ ಪರಿಯನ್ನು ಜಗತ್ತು ಶ್ಲಾಘಿಸುತ್ತಿದೆ. ಈ ಕ್ಷೇತ್ರದಲ್ಲಿ ಭಾರತೀಯ ಯುವಕರು ಹೆಚ್ಚು ಕೊಡುಗೆ ನೀಡುತ್ತಿದ್ದಾರೆ. ಸರ್ಕಾರದ ಈ ಎಲ್ಲಾ ಯೋಜನೆಗಳ ಅನುಷ್ಠಾನದ ಕುರಿತು ಪ್ರಗತಿ ಆನ್ ಲೈನ್ ಕಾನ್ಫರೆನ್ಸ್ ಮೂಲಕ ಪ್ರತಿ ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಜೊತೆಗೆ ಯೋಜನೆಗಳ ಕುರಿತು ಪ್ರಧಾನಮಂತ್ರಿಗಳು ಸ್ವತಃ ಚರ್ಚಿಸುತ್ತಾರೆ. ಸಬ್ ಕಾ ಸಾಥ್ ಸಬ್ಕಾ ವಿಕಾಸ್ ಎಲ್ಲಾ ಸಾಮಾನ್ಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದೆ. ಇದರ ಜೊತೆಗೆ ಪ್ರತಿ ಭಾರತೀಯನು ರಾಷ್ಟ್ರಕ್ಕಾಗಿ ಶ್ರಮವಹಿಸಿದರೆ ಭಾರತದ ಅಮೃತಕಾಲ ಸಮೃದ್ಧವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು ನಿರ್ಮಲಾ ಸೀತಾರಾಮನ್.

ಸ್ವ ಅರಿವು – ಸ್ವರಾಜ್ಯದ ಬೆಳಗು: ‘ನನ್ನ ಭಾರತ’ ಅಭಿಯಾನದ ಸಮಾರೋಪ ಸಮಾರಂಭದ ಉಪನ್ಯಾಸದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಡಾ.ಮನಮೋಹನ್ ವೈದ್ಯ ಮಾತನಾಡಿದರು. 1945ರಲ್ಲಿ ಜರ್ಮನಿ, ಇಂಗ್ಲೆಂಡ್, ಜಪಾನ್ 2ನೇ ವಿಶ್ವಯುದ್ಧದ ಕಾರಣಕ್ಕಾಗಿ ಮತ್ತೊಮ್ಮೆ ತಮ್ಮ ರಾಷ್ಟ್ರದ ಪುನರ್ ನಿರ್ಮಾಣಕ್ಕೆ ಮುಂದಾದರು. 1948ರಲ್ಲಿ ಶತಮಾನಗಳ ಕಾಲ ಕಂಡ ಕನಸ್ಸಿನ ಪ್ರತಿಫಲವಾಗಿ ಇಸ್ರೇಲ್ ತನ್ನ ಸ್ವಂತ ರಾಷ್ಟ್ರದ ಹುಟ್ಟಿನೊಂದಿಗೆ ಪುನರ್ ಉಗಮ ಕಂಡಿತು. ಆದರೆ 1947ರಲ್ಲಿ ಅಂದರೆ ಅವುಗಳಿಗೆ ಸಮಕಾಲೀನವಾಗಿ ಸ್ವಾಧೀನತೆಯನ್ನು ಪಡೆದುಕೊಂಡ ಭಾರತ ನಮ್ಮ ಅಸ್ತಿತ್ವದ ಆತ್ಮ ಯಾವುದು ಎನ್ನುವುದನ್ನು ನಾವು ಮರೆತಿರುವ ಕಾರಣ ಅವರಷ್ಟು ಬೆಳವಣಿಗೆ ಸಾಧಿಸಲು ಆಗಲಿಲ್ಲ.

ಭಾರತ ಜೀವನ ಧರ್ಮ ಅಧ್ಯಾತ್ಮಾಧಾರಿತವಾಗಿತ್ತು. ಅದು ಪ್ರತಿ ಭಾರತೀಯನಿಗೂ ಒಂದು ಆಕಾರವನ್ನು ನೀಡಿದೆ. ಸತ್ಯ ಒಂದೇ, ಅದನ್ನು ಅರಿಯುವ ಮಾರ್ಗ ಹಲವು ಎನ್ನುವುದನ್ನು ನಂಬಿದ್ದೇವೆ. ಜಗತ್ತಿನ ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ. ಆದರೂ ಭಾರತದಲ್ಲಿ ಅಸಹಿಷ್ಣುತೆ ಇದೆ ಎನ್ನಲಾಗುತ್ತದೆ. ಸಹಿಷ್ಣುತೆಯೆನ್ನುವುದು ಬಂದಾಗಲೇ ಅಸಹಿಷ್ಣುತೆಯ ಬೀಜ ಭಿತ್ತಲಾಗುತ್ತದೆ ಎನ್ನುವುದು ವಾಸ್ತವ. ಹಾಗಾಗಿ ಸ್ವಾಮಿ ವಿವೇಕಾನಂದರು 1893ರ ಚಿಕಾಗೋ ಉಪನ್ಯಾಸದಲ್ಲಿ ಹೇಳಿದಂತೆ ನಾವು ಸಹಿಸಿಕೊಳ್ಳುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲಾ ಮಾರ್ಗಗಳನ್ನು ಒಪ್ಪಿಕೊಳ್ಳುತ್ತೇವೆ. ಜಗತ್ತಿನ ಪ್ರತಿ ಅಂಶವೂ ದೈವಾಂಶ ಸಂಭೂತ ಎಂದು ಭಾವಿಸುತ್ತೇವೆ. ಈ ನಿಲುವುಗಳ ಅರ್ಥ ಏಕತೆಯನ್ನು ನೋಡುವ ಭಾರತದ ದೃಷ್ಟಿಯನ್ನು ತಿಳಿಸುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಪರಂಪರೆಯೇ ಆಗಿದೆ. ಆದರೆ ಭಾರತ ವಿವಿಧ ಸಂಸ್ಕೃತಿಯ ರಾಷ್ಟ್ರ ಎನ್ನಲಾಗುತ್ತದೆ. ಆದರೆ ವಾಸ್ತವದಲ್ಲಿ ಇದು ಸರಿಯಾದ ವಿಶ್ಲೇಷಣೆಯಲ್ಲ. ಭಾರತದ ಸಂಸ್ಕೃತಿ ವಿವಿಧತೆಯನ್ನು ಆಚರಿಸುವುದಾಗಿದೆ ಎನ್ನುವುದು ಸರಿಯಾದ ವಿಶ್ಲೇಷಣೆ. ನಮ್ಮ ಸಂಸ್ಕೃತಿ ಒಂದೇ. ಅದರ ಆಧಾರ ಆಧ್ಯಾತ್ಮಿಕತೆ.
ಭಾರತದ ಜೀವನಧರ್ಮ ಪ್ರತಿ ಆತ್ಮವೂ ಸಮಾನವಾಗಿ ಶಕ್ತವಾಗಿರುತ್ತದೆ ಎನ್ನುವುದನ್ನು ತಿಳಿಸುತ್ತದೆ. ಸ್ತ್ರೀಯ ಮತ್ತು ಪುರುಷ ಇಬ್ಬರೂ ಸಮಾನವಾಗಿ ಶಕ್ತರು ಎನ್ನುವುದನ್ನು ಭಾರತ ಮಾತ್ರ ಒಪ್ಪುತ್ತದೆ. ಪ್ರಕೃತಿಯನ್ನು ಆಂತರಿಕವಾಗಿ ಮತ್ತು ಬಾಹ್ಯವನ್ನು ಕಂಡುಕೊಳ್ಳುವ ಮೂಲಕ ಪ್ರತಿ ಭಾರತೀಯ ತನ್ನೊಳಗೆ ದೈವತ್ವವನ್ನು ಪ್ರಕಟೀಕರಿಸಬೇಕು ಎನ್ನುವುದೇ ನಮ್ಮ ಧರ್ಮದ ಧ್ಯೇಯವಾಗಿದೆ. ಅದಕ್ಕಾಗಿ ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ ಮತ್ತು ರಾಜಯೋಗ ಎಂಬ ನಾಲ್ಕು ಮಾರ್ಗಗಳನ್ನು ಮಾಡಲಾಗಿದೆ.

ಧರ್ಮ ಮತ್ತು ರಿಲಿಜನ್ ಬೇರೆ ಬೇರೆಯದ್ದೇ ಆಗಿವೆ. ಭಾರತ ಜನಾಧಾರಿತ ರಾಷ್ಟ್ರ ಇಲ್ಲಿನ ಜನರನ್ನು ಅವರ ಜೀವನ ಧರ್ಮಾಧಾರಿತವಾಗಿ ಹಿಂದೂ ಎಂದು ಕರೆಯಲಾಯಿತು. ಹಾಗಾಗಿ ಇದು ಹಿಂದೂರಾಷ್ಟ್ರ. ಆಂಗ್ಲ ಭಾಷೆಯಲ್ಲಿ ಈ ಕಲ್ಪನೆ ಇಲ್ಲದಿರುವುದರಿಂದ ಅದಕ್ಕೆ ಪರ್ಯಾಯ ಶಬ್ದವಿಲ್ಲ. ಧರ್ಮವೆನ್ನುವುದು ಜಗತ್ತಿನ ಬೃಹತ್ ಶಕ್ತಿಯೊಂದಿಗಿನ ಸಂಪರ್ಕಕ್ಕಿರುವ ಮಾರ್ಗ ಎನ್ನಲಾಗುತ್ತದೆ. ಎಲ್ಲಿ ಧರ್ಮವಿರುತ್ತದೋ ಅಲ್ಲಿ ಜಯವಿರುತ್ತದೆ. ಸಮಾಜದ ಎಲ್ಲಾ ಕೆಲಸಗಳನ್ನು ಧರ್ಮದ ಆಧಾರದ ಮೇಲೆ ಕೈಗೊಳ್ಳಬೇಕು, ಬೆಂಬಲಿಸಬೇಕು. ಈ ಭಾವ ಜಾಗೃತಿಯಾಗಬೇಕು. ಭಾರತದ ‘ಸ್ವ’ ಕುರಿತು ಅರಿತುಕೊಳ್ಳಬೇಕು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಭಾರತ ವೆಲ್ಫೇರ್ ಸ್ಟೇಟ್ ಅಲ್ಲ. ವೆಲ್ಫೇರ್ ಸ್ಟೇಟ್ ಕಲ್ಪನೆ ಪಾಶ್ಚಾತ್ಯರದ್ದು. ನಮ್ಮ ಸಮಾಜ ರಾಜರ ಆಧಾರಿತವಾಗಿರಲಿಲ್ಲ. ಯುದ್ಧವಾದರೆ ರಾಜರುಗಳು ಸೋಲುತ್ತಿದ್ದರು, ಸಮಾಜವಲ್ಲ. ವಿದೇಶಾಂಗ ನೀತಿ, ನ್ಯಾಯಾಂಗ, ಸೇನೆ ಮತ್ತು ರಕ್ಷಣೆ ಎಂಬ ನಾಲ್ಕು ವಿಷಯಗಳು ಮಾತ್ರ ರಾಜರುಗಳ ನಿಯಂತ್ರಣದಲ್ಲಿದ್ದವು. ಉಳದಂತೆ ಶಿಕ್ಷಣ, ಆರೋಗ್ಯ, ಕೈಗಾರಿಕೆಗಳು, ದೇವಾಲಯಗಳು, ವ್ಯಾಪಾರ, ಕಲೆ ಎಲ್ಲವೂ ಸಮಾಜದ ಮೂಲಕ ನಡೆಯುತ್ತಿತ್ತು. ಇದರ ಜೊತೆಗೆ ಭಾರತ ಕೃಷಿ ಪ್ರಧಾನ ರಾಷ್ಟ್ರವೆಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ಭಾರತ ಉದ್ಯೋಗ ಪ್ರಧಾನ ರಾಷ್ಟ್ರ ಹಾಗಾಗಿ 18ನೇ ಶತಮಾನದ ಆರಂಭದವರೆಗೂ ನಾವು ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿದ್ದೆವು.

ಅಭ್ಯುದಯ ಮತ್ತು ನಿಶ್ರೇಯಸ್ಸಿನ ಸಾಧನೆ ಧರ್ಮವೆನ್ನುತ್ತೇವೆ. ಭಾರತ ಬೌದ್ಧಿಕ ಸಮೃದ್ಧಿಗೂ ಮಹತ್ವವನ್ನು ನೀಡಿದೆ. ಅವಿದ್ಯಾ ಬೌದ್ಧಿಕ ಉನ್ನತಿಯನ್ನು ಪಡೆಯುವುದಾಗಿದ್ದರೆ, ವಿದ್ಯೆ ಆಧ್ಯಾತ್ಮಿಕ ಅಮರತ್ವವನ್ನು ಸಾಧಿಸುವುದಾಗಿದೆ. ಎರಡೂ ಬಹಳ ಮಹತ್ವವನ್ನು ಹೊಂದಿದೆ. ಭಾರತದಲ್ಲಿ ಶಾಸ್ತ್ರ ಮತ್ತು ಧ್ಯಾನಕ್ಕೆ ಮಹತ್ವವನ್ನು ನೀಡಿದಂತೆ ಶಕ್ತಿಯ ಸಾಧನೆಗೂ ಮಹತ್ವ ನೀಡಲಾಗಿದೆ. ಪ್ರಥಮವಾಗಿ ಶಾಸ್ತ್ರ ಮತ್ತು ನಂತರ ಶಕ್ತಿ ಇವೆರಡೂ ಒಂದಂಕ್ಕೊಂದು ಹೊಂದುಕೊಂಡು ಜೊತೆಗೆ ಹೋಗುತ್ತದೆ.

ಹೀಗೆ ಭಾರತಕ್ಕೆ ಹಲವು ವಿಶೇಷತೆಗಳಿವೆ. ಇವೆಲ್ಲದಕ್ಕೂ ಮೂಲ ಹಿಂದುತ್ವವೇ ಆಗಿದೆ. ಮೊದಲು ಭಾರತ ಮತ್ತು ಪಾಕಿಸ್ತಾನ ಒಂದೇ ದೇಶವಾಗಿತ್ತು. ವಿಭಜನೆಯ ನಂತರ ಪ್ರತ್ಯೇಕ ಸಂವಿಧಾನ ರಚನೆಯಾದಾಗ ಪಾಕಿಸ್ತಾನ ಸಮಾನತೆಯನ್ನು ನಿರ್ಲಕ್ಷಿಸಿತು. ನಮ್ಮಲ್ಲಿ ಸಮಾನತೆ ಪ್ರಧಾನವಾಯಿತು. ಇದು ಸಂವಿಧಾನ ರಚನೆಯಲ್ಲಿ ಹಿಂದೂ ಬಾಹುಳ್ಯ ಹೆಚ್ಚಿದ್ದರಿಂದ ಸಾಧ್ಯವಾಯಿತು.

ಸೆಕ್ಯುಲರಿಸಮ್ ಯೂರೋಪಿನಲ್ಲಿ ರೂಪುಪಡೆದ 16ನೇ ಶತಮಾನದ ಕಲ್ಪನೆ. ಎಲ್ಲಾ ಮತಗಳನ್ನು ಸಮಾನವಾಗಿ ಕಾಣುವುದು ಇದರ ಅರ್ಥ. ಹಿಂದುತ್ವದ ಕಾರಣಕ್ಕಾಗಿ ಭಾರತ ಸಹಸ್ರಾರು ವರ್ಷಗಳಿಂದ ಸರ್ವರನ್ನೂ ಸಮಾನವಾಗಿ ಕಾಣುತ್ತಲೇ ಬಂದಿದ್ದರಿಂದ ಮೂಲ ಸಂವಿಧಾನದಲ್ಲಿ ಸೆಕ್ಯುಲರಿಸಂ ಪದದ ಬಳಕೆಯ ಅವಶ್ಯಕತೆ ಇಲ್ಲ ಎಂದು ಸಂವಿಧಾನ ರಚನಾ ಸಂದರ್ಭದ ಚರ್ಚೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಯಾವುದೇ ಚರ್ಚೆ ನಡೆಸದೆ ಮುಂದೆ ಸಂವಿಧಾನದ ಪೀಠಿಕೆಗೆ ಸೋಶಿಯಲಿಸ್ಟ್, ಸೆಕ್ಯುಲರ್ ಸೇರಿಸಿರುವುದು ಸಂವಿಧಾನಕ್ಕೆ ಮಾಡಿದ ಅತ್ಯಂತ ದೊಡ್ಡ ಮೋಸ ಎಂಬುದು ಡಾ|ಮನಮೋಹನ್ ವೈದ್ಯರ ಸ್ಪಷ್ಟವಾದ ಮಾತುಗಳು.

ವಿಕ್ರಮ ವಾರಪತ್ರಿಕೆಯ ಆಗಸ್ಟ್ 27, 2023 ಸಂಚಿಕೆಯಲ್ಲಿ ಪ್ರಕಟವಾದ ಮುಖಪುಟ ಲೇಖನ

Leave a Reply

Your email address will not be published.

This site uses Akismet to reduce spam. Learn how your comment data is processed.