ಪ್ರದೇಶವೊಂದು ಜನವಸತಿಯನ್ನೂ ಇನ್ನಿತರ ಪ್ರಾಕೃತಿಕ ಸಂಪತ್ತನ್ನೂ ಹೊಂದಿದ್ದರೂ ರಾಜ್ಯವೆನಿಸುವುದು ರಾಜಕೀಯ ಸಂಬಂಧಿತ ಆಡಳಿತ ವ್ಯವಸ್ಥೆಯನ್ನು ಹೊಂದಿದಾಗ. ನೋಡಿ , ರಾಜ್ಯ ಎಂದರೆ ರಾಜನಿಗೆ ಸಂಬಂಧಿಸಿದ್ದು ಎಂಬುದು ಧ್ವನಿ. ರಾಜಕೀಯ ಎಂಬ ಪದದಲ್ಲಿಯೂ ‘ರಾಜ’ನಿದ್ದಾನೆ. ಆದರೆ ಇಂದಿನ ಹೆಚ್ಚಿನೆಡೆಗಳ ರಾಜಕೀಯ ವ್ಯವಸ್ಥೆಯಲ್ಲಿ ರಾಜನಿಲ್ಲ.

ರಾಜನಿಂದ ಬಂದುದು ರಾಜಕೀಯ. ಆಡಳಿತ ಸಂಬಂಧಿಯಾಗಿ ಆತ ಗೈವ ಪ್ರಕ್ರಿಯೆಗಳೆಲ್ಲ ರಾಜಕೀಯವೇ. ಜಗತ್ತಿನ ಹಲವೆಡೆ ರಾಜಪ್ರಭುತ್ವವು ಹೋಗಿ ಪ್ರಜಾಪ್ರಭುತ್ವವು ಕಾಲಿಟ್ಟಾಗ ರಾಜನೂ ತನ್ನ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು.

ರಾಜನೇನೋ ಆಧಿಕಾರಿಕವಾದ ತನ್ನ ಅಸ್ತಿತ್ವವನ್ನು ಕಳಕೊಂಡ. ಆದರೆ ಆತನನ್ನು ಕೇಂದ್ರೀಕರಿಸಿ ಹುಟ್ಟಿಕೊಂಡಿದ್ದ ಪದಗಳು ಅಸ್ತಿತ್ವವನ್ನು ಕಳಕೊಳ್ಳಲಿಲ್ಲ! ರಾಜಕೀಯ, ರಾಜಕಾರಣ ಇತ್ಯಾದಿ.

ಹೆಚ್ಚೇಕೆ, ರಾಜಕೀಯ ಕ್ಷೇತ್ರದಲ್ಲಿ ತೊಡಗುವ ಮಂದಿಯನ್ನು ಗುರುತಿಸುವುದೇ ರಾಜಕಾರಣಿ ಎಂದಲ್ಲವೇ! ಆದರೆ ಆತ ‘ರಾಜ’ನಂತಾಗಕೂಡದೆಂದೇ ಪ್ರಜಾಪ್ರಭುತ್ವದ ಹಂಬಲ!

ಪ್ರಾರಂಭಬಿಂದು

ಇರಲಿ. ಶಾಸನ ಸಂಬಂಧಿಯಾದ ಈಯೆಲ್ಲ ಪದಗಳೂ ‘ರಾಜ’ ಪದದಿಂದಲೇ ಬಂದುದಾದರೂ ಅವುಗಳಿಗೂ ರಾಜನಿಗೂ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ ಎನ್ನುವುದು ವರ್ತಮಾನದ ಸತ್ಯ.

ರಾಜನಿಲ್ಲವಾಗುವುದಕ್ಕೂ ಆತನೇ ಕಾರಣವಾದನೇನೋ! ಆತ ನಿರಂಕುಶಮತಿ ಆಗದೇ ಇರುತ್ತಿದ್ದರೆ ಆತನಿಲ್ಲವಾಗುತ್ತಿರಲಿಲ್ಲ. ನಿರಂಕುಶನಾದನಷ್ಟೆ ಅಲ್ಲ, ತಾನು ಪ್ರೀತಿಯಿಂದ ನೋಡಿಕೊಳ್ಳಬೇಕಿದ್ದ ಪ್ರಜೆಗಳ ಹಿತವನ್ನು ಇನ್ನಿಲ್ಲದಂತೆ ಕಡೆಗಣಿಸಿದ. ಒಂದೆಡೆ ಆಹಾರವಿಲ್ಲದೆ ಪ್ರಜೆಗಳು ಸಂಕಟಪಡುತ್ತಿದ್ದರೆ, ಇನ್ನೊಂದೆಡೆ ರಾಜ ಮೋಜುಮಸ್ತಿಯಲ್ಲಿ ಕಾಲಕಳೆದ. ಜನರ ರೊಚ್ಚಿಗೆ ದಿಕ್ಕುದೆಸೆಗಳು ಒದಗಿ ಪ್ರಜಾಪ್ರಭುತ್ವದಲ್ಲದು ಪರ್ಯವಸಾನವಾಯಿತು.

ಇದು ಹದಿನೆಂಟನೆಯ ಶತಮಾನದ ಅಂತ್ಯದಲ್ಲಿಯ ಫ್ರೆಂಚ್ ರಾಜ ಲೂಯಿಸ್ ಆಡಳಿತದ ಬಗೆಗಿನ ಒಂದು ತುಣುಕುಚಿತ್ರ. ಅಂದರೆ; ಫ್ರೆಂಚ್ ಗಣರಾಜ್ಯ ಸ್ಥಾಪನೆಯ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯು 1799ರಲ್ಲೇ ಬಂತು ಎಂದು ಭಾವಿಸಬೇಕಿಲ್ಲ. ಪ್ರಾಚೀನ ಅಥೆನ್ಸಿನಲ್ಲಿಯೇ ಅದಿತ್ತು ಎಂದು ಉಲ್ಲೇಖಗಳಿವೆ. ಆಧುನಿಕ ಸಂದರ್ಭದಲ್ಲಿ ಅದರ ಪ್ರವೇಶವನ್ನು ಈ ಫ್ರೆಂಚ್ ಕ್ರಾಂತಿಯ ಮೂಲಕ ಕಾಣಬಹುದು.

ಚುನಾವಣೆಯೆಂಬ ಪ್ರವೇಶಿಕೆ

ಪ್ರಜೆಗಳ ಸರಕಾರ, ಅಂದರೆ, ಪ್ರಜೆಗಳು ಮತನೀಡಿ ಚುನಾಯಿಸಿದ ಸರಕಾರ ಆಡಳಿತ ಮಾಡುವ ವ್ಯವಸ್ಥೆಯು ಪ್ರಜಾಪ್ರಭುತ್ವ. ಪದವೇ ಸೂಚಿಸುವಂತೆ ಇದರಲ್ಲಿ ಪ್ರಜೆಗಳೇ ಪ್ರಭುಗಳು! ಎಲ್ಲರೂ ಪ್ರಭುಗಳಾಗುವುದು ಅಸಾಧ್ಯವಷ್ಟೆ. ಎಲ್ಲರೂ ಎಂದಷ್ಟೇ ಏಕೆ, ಆಡಳಿತದ ಮುಖ್ಯರೆನಿಪ ಇಬ್ಬರಿರಲೂ ಅಸಾಧ್ಯವೇ. ಒಂದು ದೇಶಕ್ಕೆ ಇಬ್ಬರು ಅಧ್ಯಕ್ಷರೋ ಪ್ರಧಾನಿಗಳೋ ಇರಲು ಸಾಧ್ಯ ಹೇಗೆ? ಒಬ್ಬರಷ್ಟೇ ಇರಲಿಕ್ಕೆ ಬೇಕು. ಹಾಗೆ ಪ್ರಭುಗಳಾಗಲು ಇಬ್ಬರು ಪೈಪೋಟಿ ನಡೆಸಬಹುದು. ಹೆಚ್ಚು ಜನರೂ ಪೈಪೋಟಿ ನಡೆಸಬಹುದು. ಈ ರೀತಿ ಪೈಪೋಟಿ ಏರ್ಪಟ್ಟಾಗ ಒಬ್ಬರನ್ನು ಆಯ್ಕೆಮಾಡುವುದಾಗುತ್ತದೆ. ಅದಕ್ಕಾಗಿ ಇರುವುದು ಚುನಾವಣೆ.

ಚುನಾವಣೆಯು ಪ್ರಜಾಪ್ರಭುತ್ವವನ್ನು ಆಗುಮಾಡುವ ಪ್ರಾರಂಭಿಕ ಸಾಧನ. ಮತಹಾಕುವ ಮೂಲಕ ತಮ್ಮ ಪ್ರಭುವನ್ನು ಪ್ರಜೆಗಳು ಆಯ್ಕೆಮಾಡುತ್ತಾರೆ. ಪ್ರಜೆಗಳೇ ಪ್ರಭುಗಳು ಅಂತನಿಸುವ ಸಂದರ್ಭ ಚುನಾವಣೆ. ಅವರ ಪ್ರಭುಶಕ್ತಿ ಮತ. ಪ್ರಜೆಯು ಪ್ರಭುವಾಗುವುದು ಚುನಾವಣೆಯಿಂದ ಚುನಾವಣೆಗೆ. ಪ್ರಜೆಗಳಿಂದ ಆಯ್ಕೆಗೊಂಡವ ಪ್ರಭುವಾಗುವುದು ಚುನಾವಣೆಯಿಂದ ಚುನಾವಣೆಯವರೆಗೆ.

ಪ್ರಭುವಾಗಿ ಮತದಾನ

ಪ್ರಜೆಗಳೇ ಪ್ರಭುಗಳು ಎಂಬ ಕಲ್ಪನೆ ರೋಮಾಂಚನ ನೀಡುವಂಥದ್ದು.ತಾನೇ ಪ್ರಭುವಾಗಬಲ್ಲ ಸಾಧ್ಯತೆಯನ್ನು ಯಾರು ಬಿಟ್ಟುಕೊಡುತ್ತಾರೆ, ಹೇಳಿ! ತನ್ನನ್ನು ಪ್ರಭು ಅಂತ ಭಾವಿಸುವ ವ್ಯವಸ್ಥೆಯನ್ನು ಯಾರು ಸಮರ್ಥಿಸುವುದಿಲ್ಲ, ಹೇಳಿ! ಒಂದು ಮತದ ಚಲಾವಣೆಮಾತ್ರದಿಂದಲೇ ಪ್ರಭುವಾಗಿಬಿಡುವ ಸುಲಭಕಾರ್ಯದಿಂದ ಯಾರು ಮುಕ್ತರಾಗುತ್ತಾರೆ, ಹೇಳಿ!

ತನ್ನನ್ನು ಪ್ರಭುವಾಗಿ ಪರಿಗಣಿಸುವ ವ್ಯವಸ್ಥೆ ಪ್ರಜಾಪ್ರಭುತ್ವ. ತನ್ನನ್ನು ಪ್ರಭುವಾಗಿಸುವ ಸಾಧನ ಮತ. ತಾನು ಪ್ರಭುವಾಗಿ ಬೀಗುವ ಸಂದರ್ಭ ಚುನಾವಣೆ. ಮತ ಚಲಾಯಿಸುವುದೆಂದರೆ ಅಧಿಕಾರ ಚಲಾಯಿಸುವುದೆಂದೇ ಅರ್ಥ.‌ ಅದು ಪ್ರಭುವಾಗಿ ಚಲಾಯಿಸುವ ಅಧಿಕಾರ. ಹೀಗೆ ಪ್ರಜಾಪ್ರಭುತ್ವದ ಮಹತ್ತ್ವವನ್ನು ತಿಳಿದ ಯಾರೂ ಮತದಾನದಿಂದ ಹೊರಗುಳಿಯಲು ಅಸಾಧ್ಯ. ಆದರೆ; ಭಾರತದಲ್ಲಿ ಮತದಾನದಿಂದ ದೊಡ್ಡ ಪ್ರಮಾಣದಲ್ಲಿ ಹೊರಗುಳಿಯುವ ಮಂದಿಯೆಂದರೆ ಶಿಕ್ಷಿತರೆನಿಸಿಕೊಂಡವರೇ. ಚುನಾವಣೆಯ ಸಂದರ್ಭದಲ್ಲಿ ಮೋಜುಮಸ್ತಿಯಲ್ಲಿ ತೊಡಗಿಕೊಳ್ಳುವ ಬಹುತೇಕರು ತಥಾಕಥಿತ ಶಿಕ್ಷಿತರು!

ಹಿತದ ಮತ

ರಾಜ್ಯವು ಒಂದು ಸಮಷ್ಟಿವ್ಯವಸ್ಥೆ. ಅದನ್ನು ನಿರ್ವಹಿಸುವ ಪ್ರಜಾಪ್ರಭುತ್ವವು ಸಾಧ್ಯವಾಗುವುದು ವೈಯಕ್ತಿಕ ಮತಚಲಾವಣೆಯಿಂದ. ಪ್ರತಿಯೊಬ್ಬನೂ ಮತಚಲಾಯಿಸುವುದು ವೈಯಕ್ತಿಕ ಅಭಿಮತದ ಆಧಾರದ ಮೇಲೆಯೇ. ಮತಚಲಾಯಿಸುವಾಗ ಮತದಾರನ ಮತಿಯ ಮೇಲೆ ಯಾವುದೇ ಅನ್ಯಪ್ರಭಾವ ಆಗಕೂಡದು. ಯಾವುದೇ ಪ್ರಭಾವವಿಲ್ಲದೆ ಎಲ್ಲರೂ ಮತಚಲಾಯಿಸಲು ಸಾಧ್ಯವಾದಾಗ ನಿಜವಾದ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದೀತು. ಹೀಗಾಗಲು ಮತದಾರನಿಗೆ ಕೆಲವು ಅರ್ಹತೆಗಳು ಅವಶ್ಯ ಬೇಕಾಗುತ್ತವೆ. ಆತ ಪ್ರಜಾಪ್ರಭುತ್ವದ ಸ್ವರೂಪ – ಮಹತ್ತ್ವಗಳನ್ನೂ ತಿಳಿದಿರಬೇಕು, ರಾಜ್ಯದ ಸ್ವರೂಪ – ಮಹತ್ತ್ವಗಳನ್ನೂ ತಿಳಿದಿರಬೇಕು. ರಾಜ್ಯದ ಪ್ರಸಕ್ತ ಸನ್ನಿವೇಶ – ಆಗುಹೋಗುಗಳನ್ನೂ ತಿಳಿದಿರಬೇಕು, ರಾಜಕೀಯ ಪಕ್ಷಗಳ ಮತ್ತು ರಾಜಕಾರಣಿಗಳ ನಿಲುವು – ಸಾಮರ್ಥ್ಯಗಳನ್ನೂ ತಿಳಿದಿರಬೇಕು. ಎಲ್ಲವನ್ನೂ ಚೆನ್ನಾಗಿ ಅವಲೋಕಿಸಿ ರಾಜ್ಯದ ಹಿತದ ದೃಷ್ಟಿಯಿಂದ ಮತವನ್ನು ಚಲಾಯಿಸಬೇಕು. ಹೀಗೆ ಮತಚಲಾಯಿಸಲು ಎಲ್ಲರಿಗೂ ಸಾಧ್ಯವಾದಾಗ ಪ್ರಜಾಪ್ರಭುತ್ವ ಯಶಃಪ್ರದವಾದೀತು.

ಮುಖ್ಯವಾಗಬೇಕು ರಾಜ್ಯಹಿತ

ಅಂದಹಾಗೆ ಮತದಾರ ಮತಚಲಾಯಿಸಬೇಕಾದುದು ರಾಜ್ಯದ ಹಿತವನ್ನು ಲಕ್ಷಿಸಿ; ಪ್ರಜಾಪ್ರಭುತ್ವದ ಹಿತವನ್ನೋ ರಾಜಕೀಯ ಪಕ್ಷ ಇಲ್ಲವೇ ರಾಜಕಾರಣಿಗಳ ಹಿತವನ್ನೋ ಲಕ್ಷಿಸಿ ಅಲ್ಲ. ರಾಜಕೀಯ ಪಕ್ಷ ಇಲ್ಲವೇ ರಾಜಕಾರಣಿಗಳ ಹಿತವು ಮತದಾರನ ಲಕ್ಷ್ಯವಾಗಕೂಡದು ಎನ್ನುವ ಮಾತು ಸುಲಭದಲ್ಲಿ ಒಪ್ಪಿಗೆಯಾಗುತ್ತದೆ. ಪ್ರಜಾಪ್ರಭುತ್ವದ ಹಿತ?ಈಗಂತೂ ಪ್ರಜಾಪ್ರಭುತ್ವವನ್ನು ಉಳಿಸುವ ಕುರಿತ ಅದೆಷ್ಟು ಕೂಗು ಕೇಳುತ್ತಿಲ್ಲ! ಪ್ರಜಾಪ್ರಭುತ್ವದ ಹೆಸರಿನಲ್ಲಿ ಅದೆಷ್ಟು ಸಂಸ್ಥೆ – ಸಂಘಟನೆಗಳಿಲ್ಲ! ಪ್ರಜಾಪ್ರಭುತ್ವ ಪದವನ್ನು ತಮ್ಮ ಹೆಸರಿನಲ್ಲಿ ಹೊತ್ತ ಪಕ್ಷ ಇಲ್ಲವೇ ಪಕ್ಷಗಳ ಒಕ್ಕೂಟವು ಕೆಲಸಮಾಡುತ್ತಿರುವ ಸಂದರ್ಭದಲ್ಲಿ ನಾವಿದ್ದೇವೆ. ಹೀಗಿರುವಲ್ಲಿ, ಪ್ರಜಾಪ್ರಭುತ್ವದ ಹಿತವನ್ನು ಲಕ್ಷಿಸಬೇಕಿಲ್ಲ ಎಂದುಬಿಟ್ಟರೆ ಭೂಮಿ-ಭಾನು ಒಂದಾದಾವು. ಪ್ರಜಾಪ್ರಭುತ್ವದ ಹಿತವಿರುವುದು ರಾಜ್ಯದ ಹಿತದಲ್ಲಿ. ರಾಜ್ಯದ ಹಿತವನ್ನು ಅಲಕ್ಷಿಸಿ ಪ್ರಜಾಪ್ರಭುತ್ವದ ಹಿತವನ್ನು ಲಕ್ಷಿಸುವುದು ವಿವೇಕವಾಗಲಾರದು. ಅಸಲಿಗೆ, ಪ್ರಜಾಪ್ರಭುತ್ವವಿರುವುದೇ ರಾಜ್ಯದ ಹಿತವನ್ನು ಕಾಪಾಡುವುದಕ್ಕಾಗಿ.

ಸಲ್ಲದ ಮೌನ

ಹಿತದಿಂದ ಕೂಡಿದ ರಾಜ್ಯವು ಪ್ರಜಾಪ್ರಭುತ್ವದ ಹಿತವನ್ನೂ ಸಾಧಿಸೀತು, ಪ್ರಜೆಗಳ ಹಿತವನ್ನೂ ಸಾಧಿಸೀತು, ಒಟ್ಟಾರೆ ಚರಾಚರಹಿತವನ್ನೂ ಸಾಧಿಸೀತು. ನಿಜಕ್ಕಾದರೆ, ಹಿತದ ಈ ಒಟ್ಟೈಕೆಯಲ್ಲಿ ಕೊನೆಯಲ್ಲಿ ನಿಲ್ಲಬೇಕಾದುದು ಪ್ರಜಾಪ್ರಭುತ್ವದ ಹಿತವೇ. ಪ್ರಜಾಪ್ರಭುತ್ವವನ್ನು ರಕ್ಷಿಸುವ ಕೂಗೆಬ್ಬಿಸುವವರು ರಾಜ್ಯವನ್ನು ರಕ್ಷಿಸುವ, ಪ್ರಜೆಗಳನ್ನು ರಕ್ಷಿಸುವ, ಸಂಸ್ಕೃತಿ-ಕಲೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮೌನದಿಂದಿರುವುದು; ಇವೆಲ್ಲವುಗಳ ರಕ್ಷಣೆಯ ಘೋರಸವಾಲು ಕಾಡುತ್ತಿರುವ ಸನ್ನಿವೇಶದಲ್ಲಿಯೂ ಮೌನದಿಂದಿರುವುದು ವಿಶೇಷವೇ ಸರಿ. ಯಾವುದರ ಹಿತವನ್ನು ಕಾಪಾಡಿದರೆ ಉಳಿದೆಲ್ಲದರ ಹಿತವನ್ನು ಕಾಪಾಡಿದಂತಾಗುವುದೋ ಅದರ ಹಿತವನ್ನು ಕಾಪಾಡಬೇಕಾದುದೇ ಪರಮಲಕ್ಷ್ಯವಾಗಬೇಕಾದುದು.

ಋಣಾತ್ಮಕ ಭರವಸೆ

ಸರಿ, ಈಗ ಪ್ರಜಾಪ್ರಭುತ್ವದ ಹಿತವನ್ನೇ ಸಾಧಿಸೋಣವಾಗಲಿ ಎಂದೇ ತೊಡಗಿದರೂ ಅದಕ್ಕೆ ತೊಡಕಾಗಿರುವುದೆಲ್ಲಿ ಎಂದು ಹುಡುಕಹೊರಟರೆ ಹಾಗೆ ಹುಡುಕುವ ನೋಟವು ಸೋಕುವುದು ‘ಪ್ರಜಾಪ್ರಭುತ್ವರಕ್ಷಕ’ರ ಬುಡವನ್ನೇ. ನೋಡಿ; ಪ್ರಜಾಪ್ರಭುತ್ವವು ಸಾಧ್ಯವಾಗುವುದು ನಿಷ್ಪ್ರಭಾವಿತ ಮತದಾರನ ಮತಚಲಾವಣೆಯಿಂದಷ್ಟೆ. ಯಾವ ಪಕ್ಷ ಇಲ್ಲವೇ ರಾಜಕಾರಣಿ ಮತದಾರರನ್ನು ಹಾಗೆ ನಿಷ್ಪ್ರಭಾವಿತ ಸ್ಥಿತಿಯಲ್ಲಿ ಇಡಲು ಯತ್ನಿಸಿದೆ? ಬದಲಿಗೆ, ಪ್ರಭಾವಿಸಲು ಯತ್ನಿಸಿದ ದೃಷ್ಟಾಂತಗಳೇ ಅಧಿಕ.

ಹಣ ಹೆಂಡ ಸೀರೆ ಇತ್ಯಾದಿಗಳ ಮೂಲಕ ಮತದಾರರನ್ನು ಪ್ರಭಾವಿಸುವ ಕೆಲಸವನ್ನು ಹಿಂದೆ ಅಧಿಕಾರದಲ್ಲಿದ್ದ ಪಕ್ಷವಷ್ಟೆ ಮಾಡುತ್ತಿತ್ತು, ಇದೀಗ ಬಹುತೇಕ ಎಲ್ಲ ಪಕ್ಷಗಳೂ ಮಾಡುತ್ತಿವೆ. ಅಷ್ಟೋ ಇಷ್ಟೋ ಎಲ್ಲರಿಂದಲೂ ಸ್ವೀಕರಿಸಿದವ ಸ್ವತಂತ್ರವಾಗಿ ಯೋಚಿಸುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಆಮಿಷಗಳನ್ನು ಎಲ್ಲರೂ ಒಡ್ಡಿದರೆ ಅದಕ್ಕೆ ಬಲಿಯಾಗುವವರ ಪ್ರಮಾಣ ಕಡಿಮೆಯಾಗುತ್ತ ಹೋಗಲು ಸಾಧ್ಯ. ಇದೊಂದು ಋಣಾತ್ಮಕ ಭರವಸೆ. ಭರವಸೆಯೇ ಆದರೂ ಋಣಾತ್ಮಕ.

ರಿಲಿಜನ್ ಹಿತಾಸಕ್ತಿಯ ಮತ

ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಭೀಕರ ಸವಾಲಿರುವುದು ಸಾಮೂಹಿಕ ಮತನಿರ್ಣಯದಲ್ಲಿ. ಅಂದರೆ; ಒಂದು ಜನಸಮೂಹ, ಅದು ಭಾಷೆಯ ಆಧಾರದಲ್ಲಿಯೋ ಪ್ರದೇಶದ ಆಧಾರದಲ್ಲಿಯೋ ಮತೀಯ ಆಧಾರದಲ್ಲಿಯೋ ಒಂದು ನಿರ್ದಿಷ್ಟ ನಿರ್ಣಯವನ್ನು ತಳೆದು ಸಾಮೂಹಿಕವಾಗಿ ಒಂದು ಪಕ್ಷ ಇಲ್ಲವೇ ಒಬ್ಬ ರಾಜಕಾರಣಿಗೆ ಮತಚಲಾಯಿಸುವ ಸಂದರ್ಭ.

ಇಂದಿನ ಪರಿಭಾಷೆಯಲ್ಲಿ ಇದನ್ನು ವೋಟುಬ್ಯಾಂಕ್ ರಾಜಕಾರಣ ಎನ್ನಲಾಗುತ್ತಿದೆ. ನಮ್ಮ ದೇಶದಲ್ಲಿ; ವೋಟುಬ್ಯಾಂಕ್ ರಾಜಕಾರಣಕ್ಕೆ ಸಂಬಂಧಿಸಿದಂತೆ ಭಾಷೆ, ಪ್ರದೇಶ, ನದಿನೀರು ಇತ್ಯಾದಿ ಸಂಗತಿಗಳು ತೀರಾ ತೆಳುವಾಗಿ ಕೆಲಸಮಾಡಿರಬಹುದು. ಹೆಚ್ಚು ದಟ್ಟವಾಗಿ ಮತ್ತು ಅಷ್ಟೇ ಕಠೋರವಾಗಿ ಕಾರ್ಯಾಚರಣೆಯಲ್ಲಿರುವುದು ಸೆಮೆಟಿಕ್ ರಿಲಿಜನ್ನಿನ ವೋಟುಬ್ಯಾಂಕ್ ರಾಜಕಾರಣ. ಅದರಲ್ಲಿಯೂ ಹೆಚ್ಚು ನಿರ್ಣಾಯಕ ಎನಿಸುವಷ್ಟು ಕಠೋರತಮವಾಗಿರುವುದು ಮುಸ್ಲಿಂ ವೋಟುಬ್ಯಾಂಕ್ ರಾಜ್ಯಕಾರಣ.

ಈ ರಿಲಿಜನ್ ಮಂದಿ ಕೇವಲ ತಮ್ಮ ರಿಲಿಜನ್‌ಸಮೂಹದ ಹಿತವನ್ನಷ್ಟೆ ನೋಡಿಕೊಂಡು ಏಕಾಭಿಪ್ರಾಯದಿಂದ ಮತಚಲಾಯಿಸುವ ಸ್ವಭಾವವನ್ನೂ ಸಾಮರ್ಥ್ಯವನ್ನೂ ಹೊಂದಿರುವುದು ನಮ್ಮ ದೇಶದ ಅನುಭವವೇ ಆಗಿದೆ. ಇದಕ್ಕೆ ಪರ್ಯಾಯವಾಗಿ ಹಿಂದೂ ವೋಟ್‌ಬ್ಯಾಂಕ್ ಹುಟ್ಟಿಕೊಳ್ಳುವ ಪ್ರೇರಣೆಯನ್ನೂ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಆದರೆ ಹಿಂದೂ ಸಮಾಜಕ್ಕೆ ತನ್ನ ಸಂರಚನೆಯಲ್ಲಿಯೇ ಇರುವ ಅಗಾಧ ವೈವಿಧ್ಯದಿಂದಾಗಿ ಆ ರೀತಿ ವೋಟುಬ್ಯಾಂಕ್ ಆಗಿ ತೊಡಗಬಹುದಾದ ಸ್ವಭಾವವಾಗಲೀ ಸಾಮರ್ಥ್ಯವಾಗಲೀ ಇಲ್ಲ.

ಇವೆರಡು ವೋಟುಬ್ಯಾಂಕಿನಲ್ಲಿ ಇದಕ್ಕಿಂತ ಮುಖ್ಯವಾಗಿ ಕಾಣಬೇಕಾದುದು ಸ್ವಕೀಯ ಮತ್ತು ಪರಕೀಯ ಹಿತಾಸಕ್ತಿ ಸಾಧನೆಯಾಗುವುದನ್ನು. ಹಿಂದೂ ವೋಟುಬ್ಯಾಂಕಿನಲ್ಲಿ ಏನೇ ಸಾಧನೆಯಾಗುವುದಿದ್ದರೂ ಈ ಮಣ್ಣಿಗೆ ಪೂರಕವಾಗಿಯೇ ಇರುತ್ತದೆಯಷ್ಟೆ.

ಸಲ್ಲದ ಸಮೂಹಪ್ರಭಾವ

ಎಲ್ಲೇ ಆದರೂ ವೋಟ್‌ಬ್ಯಾಂಕ್ ರಾಜಕಾರಣ ಇರುವುದು ಪ್ರಜಾಪ್ರಭುತ್ವದ ಕೊರತೆಯನ್ನಷ್ಟೆ ಸೂಚಿಸುತ್ತದೆ. ಯಾವುದೇ ಪ್ರಭಾವವಿಲ್ಲದ ವಿವೇಕಯುತ ವೈಯಕ್ತಿಕ ಅಭಿಪ್ರಾಯಕ್ಕೆ ಬೆಲೆ ಇದ್ದಾಗ ಪ್ರಜಾಪ್ರಭುತ್ವ. ಸಮೂಹದ ಪ್ರಭಾವ ವೈಯಕ್ತಿಕ ಅಭಿಪ್ರಾಯದ ಮೇಲೆ ಇದ್ದಾಗ ಪ್ರಜಾಪ್ರಭುತ್ವ ನಷ್ಟವಾಗುತ್ತದೆ. ಹಾಗಾಗಿ; ಪ್ರಜಾಪ್ರಭುತ್ವದ ದೃಷ್ಟಿಯಿಂದ ಹಿಂದೂ ವೋಟ್‌ಬ್ಯಾಂಕ್ ಕೂಡಾ ಸರಿಯಲ್ಲ, ಅದಕ್ಕೆ ಮೂಲಕಾರಣವಾದ ಮುಸ್ಲಿಂ ವೋಟ್‌ಬ್ಯಾಂಕ್ ಕೂಡಾ ಸರಿಯಲ್ಲ. ಈ ಮೂಲಕಾರಣವಾದ ಮುಸ್ಲಿಂ ವೋಟುಬ್ಯಾಂಕ್ ರಾಜಕಾರಣವನ್ನು ಪ್ರಜಾಪ್ರಭುತ್ವದ ರಕ್ಷಕರೆನಿಸಿಕೊಂಡವರು ವಿರೋಧಕ್ಕಾಗಿಯಾದರೂ ಇನಿತೂ ವಿರೋಧಿಸದಿರುವುದು ಒಂದು ಸೋಜಿಗವೇ!

ಪ್ರತಿಯೊಬ್ಬರೂ ವ್ಯಕ್ತಿಗತವಾಗಿ ಯೋಚಿಸಿದ್ದೇ ಸಮೂಹದ ಅಭಿಪ್ರಾಯವೂ ಆಗುವುದಿದೆ. ಅದು ಅಪೇಕ್ಷಿತ. ಪ್ರತಿಯೊಬ್ಬರ ಯೋಚನೆಯೂ ಒಂದೇ ಆಗಿರುವಂತೆ ಸಮೂಹದ ಒತ್ತಡ ಇರುವುದು ಅತೀವ ಅನಪೇಕ್ಷಿತ. ಮೊದಲನೆಯದು ಪ್ರಜಾಪ್ರಭುತ್ವಕ್ಕೆ ಎಡೆಮಾಡಿಕೊಟ್ಟರೆ, ಎರಡನೆಯದು ಸರ್ವಾಧಿಕಾರಕ್ಕೆ ಎಡೆಮಾಡಿಕೊಡುವ ಸಾಧ್ಯತೆಯಿರುತ್ತದೆ.

ಒಂದು ರಿಲಿಜನ್‌ಮಂದಿ ಹೀಗೆ ತಮ್ಮ ವೋಟುಬ್ಯಾಂಕ್ ಸಾಮರ್ಥ್ಯದಿಂದ ತಾವು ನಿರ್ಣಯಿಸಿದ ಪಕ್ಷವನ್ನೇ ಅಧಿಕಾರಕ್ಕೆ ತರುವಂತಾದರೆ, ಮುಂದೆ ಅದೇ ರಿಲಿಜನ್‌ಮಂದಿ ತಮ್ಮವರದೇ ಸರಕಾರವನ್ನು ರಚಿಸುವಂತಾದರೆ, ಆಗ ಉಳಿಯುವುದು ಪ್ರಜಾಪ್ರಭುತ್ವದ ಅವಸಾನಕ್ಕೆ ಕ್ಷಣಗಣನೆ ಮಾಡುವುದಷ್ಟೆ. ಯಾಕೆಂದರೆ ಸೆಮೆಟಿಕ್ ರಿಲಿಜನ್ನಿನಲ್ಲಿ ವೈಯಕ್ತಿಕ ಅಭಿಮತಕ್ಕೆ ಅವಕಾಶವಿಲ್ಲವಷ್ಟೆ!

ಪ್ರಜಾಪ್ರಭುತ್ವದ ದಾರಿ

ಈಗ ಇಲ್ಲಿಗೆ ಪೂರಕವಾಗಿ ರಾಮಾಯಣದ ವಿವರವನ್ನು ತುಸು ಅವಲೋಕಿಸುವುದಾದರೆ; ರಾಮನ ಪಟ್ಟಾಭಿಷೇಕದ ಬಗೆಗೆ ಪ್ರಜಾಮುಖ್ಯರ ಅಭಿಪ್ರಾಯ ಕೇಳಿದಾಗ ದಶರಥನ ಮುಂದೆ ಎಲ್ಲರೂ ಒಕ್ಕೊರಳಿನಿಂದ ‘ಆಗಬೇಕು’ ಎಂದರು. ಅದು ಎಲ್ಲರೂ ಸೇರಿ ನಿಶ್ಚಯಿಸಿ ಹೇಳಿದ್ದಲ್ಲ. ಅದರಲ್ಲಿ ಇರುವುದು ಪ್ರಜಾಪ್ರಭುತ್ವ. ಸೀತೆಯ ಶೀಲದ ಬಗ್ಗೆ ಪ್ರಜೆಗಳು ಮಾತನಾಡಹತ್ತಿದಾಗ ರಾಮ ಬೆಲೆನೀಡಿದ. ಪ್ರಜೆಗಳು ಹಾಗೆ ಮಾತನಾಡಿದ್ದು ಸರಿಯೋ ತಪ್ಪೋ ಅನ್ನುವುದು ಬೇರೆಯದೇ ಚರ್ಚೆಯ ವಿಷಯ. ಆದರೆ ರಾಮ ಪ್ರಜೆಗಳ ಮಾತನ್ನು ಮಾನಿಸಿದ್ದು ಪ್ರಜಾಪ್ರಭುತ್ವದ ದಾರಿಯಾಯಿತು.

ಪ್ರಜೆಗಳಿಗೆ ರಾಜನ ವಿರುದ್ಧವೇ ಮಾತನಾಡುವ ಹಕ್ಕು ನೀಡುವುದು ಪ್ರಜಾಪ್ರಭುತ್ವ. ಅದಿತ್ತು ರಾಮರಾಜ್ಯದಲ್ಲಿ. ಹಕ್ಕು ನೀಡಿದ್ದಷ್ಟೆ ಅಲ್ಲದೆ ಸುಳ್ಳೆಂದು ಗೊತ್ತಿದ್ದೂ ಪ್ರಶ್ನಿಸದೆ ಅದಕ್ಕೆ ತನ್ನ ಬದುಕಿನ ಬೆಲೆ ತೆತ್ತು ಮೌಲ್ಯ ನೀಡಿದ್ದು ಪ್ರಜಾಪ್ರಭುತ್ವದ ಅತ್ಯಂತ ಉತ್ತುಂಗ ಸ್ಥಿತಿ. ಇದಕ್ಕಿಂತ ಹೆಚ್ಚಿನ ಉತ್ತುಂಗ ಸ್ಥಿತಿ ಇರಲಾರದು. ರಾಮರಾಜ್ಯದ ಕುರಿತು ಗಾಂಧಿ ಆಗ್ರಹಿಸಿದ್ದು ಈ ಕಾರಣಕ್ಕೂ ಇರಬಹುದು. ಅಂದಹಾಗೆ; ‘ಪ್ರಜಾಪ್ರಭುತ್ವದ ರಕ್ಷಕ’ರಿಗೆ ಗಾಂಧಿ ಅತ್ಯಂತ ಹತ್ತಿರ, ರಾಮ ಮತ್ತು ರಾಮರಾಜ್ಯ ಎಂದರೆ ಅತೀವ ಹೇವರಿಕೆ.

ಹೀಗೆ ಯಾಕೋ!

“ವಿಕ್ರಮ”ದ ವಿಜಯದಶಮಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ

Leave a Reply

Your email address will not be published.

This site uses Akismet to reduce spam. Learn how your comment data is processed.