ಇಂದು ಪ್ರವಾಸಿ ಭಾರತೀಯರ ದಿನ
ದೇಶದ ಅಭಿವೃದ್ಧಿಯಲ್ಲಿ ಪ್ರವಾಸಿ ಭಾರತೀಯ ಸಮುದಾಯದ ಕೊಡುಗೆ ಅಪಾರ. ಪ್ರಪಂಚದ ವಿವಿಧ ಭಾಗಗಳಲ್ಲಿದ್ದುಕೊಂಡು ಭಾರತವನ್ನು ಪ್ರತಿನಿಧಿಸುವ ಅನಿವಾಸಿಗರನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಜನವರಿ 9 ರಂದು ಪ್ರವಾಸಿ ಭಾರತೀಯ ದಿನ ಅಥವಾ ಎನ್ ಆರ್ ಐ (Non – Resident Indian)  ದಿವಸ್ ಎಂದು ಆಚರಿಸಲಾಗುತ್ತದೆ. 


ಈ ಆಚರಣೆ 2003 ರಲ್ಲಿ ಪ್ರಾರಂಭವಾದಾಗ ಮೊದಲು ದೆಹಲಿಯಲ್ಲಿ ಅನಿವಾಸಿ ಭಾರತೀಯ ಸಮಾವೇಶ ನಡೆಸಲಾಗಿತ್ತು. ನಂತರದ ಸಮಾವೇಶ ವಾರಣಾಸಿಯಲ್ಲಿ ನಡೆದಿತ್ತು. 2017ರಲ್ಲಿ ಬೆಂಗಳೂರಿನಲ್ಲೂ ಅನಿವಾಸಿ ಭಾರತೀಯರ ಸಮಾವೇಶ ನಡೆದಿತ್ತು. ಈವರಗೆ ಒಟ್ಟು 15 ಸಮಾವೇಶಗಳು ನಡೆದಿವೆ. ಭಾರತವಲ್ಲದೇ ಅಮೆರಿಕ, ಸಿಂಗಾಪುರ, ಬ್ರಿಟನ್ ಸೇರಿದಂದತೆ ವಿವಿಧ ದೇಶಗಳಲ್ಲಿ ಒಟ್ಟು 10 ಸಮಾವೇಶಗಳನ್ನು ನಡೆಸಲಾಗಿದೆ. ಇದರಿಂದಾಗಿ ವಿದೇಶಗಳಲ್ಲಿರುವ ಇನ್ನಿತರ ಭಾರತೀಯರ ಪರಸ್ಪರ ಭೇಟಿಗೂ ವೇದಿಕೆ ಕಲ್ಪಿಸಿದಂತಾಗಿದೆ.


ಇತಿಹಾಸ
2003ರಲ್ಲಿ ಅನಿವಾಸಿ ಭಾರತೀಯರ ಕೊಡುಗೆಯನ್ನು ಗೌರವಿಸುವ ಸಲುವಾಗಿ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ವಾಣಿಜ್ಯ ಮಂಡಳಿ ಒಕ್ಕೂಟ, ಭಾರತೀಯ ಕೈಗಾರಿಕಾ ಒಕ್ಕೂಟ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ ಸಹಯೋಗದಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಪ್ರತೀ ವರ್ಷಕ್ಕೊಮ್ಮೆ ನಡೆಸಲಾಗುತ್ತಿದ್ದ ಈ ಆಚರಣೆ 2015ರ ಬಳಿಕ ಪ್ರತೀ ಎರಡು ವರ್ಷಕ್ಕೊಮ್ಮೆ ಆಯೋಜಿಸಲಾಗುತ್ತಿದೆ. ಈ ದಿನ ನಡೆಯುವ ಸಮಾವೇಶದಲ್ಲಿ ಅನಿವಾಸಿಗಳಿಗೆ ಭಾರತ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.

ಜನವರಿ 9 ರಂದೇ ಏಕೆ ಆಚರಿಣೆ?
ದಕ್ಷಿಣ ಆಫ್ರಿಕಾದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿ, ಕಪ್ಪು ಜನಾಂಗದವರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಹೋರಾಟ ಮಾಡಿ ಭಾರತಕ್ಕೆ ಮಹಾತ್ಮ ಗಾಂಧಿ ಮರಳಿದ ದಿನವನ್ನೇ ಪ್ರವಾಸಿ ಭಾರತೀಯ ದಿನವನ್ನಾಗಿ ಆಚರಿಸಲಾಗುತ್ತದೆ. 1915 ರ ಜನವರಿ 9 ರಂದು ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಹಿಂದಿರುಗಿದ್ದರು. ಅವರ ಆ ಐತಿಹಾಸಿಕ ಮರಳುವಿಕೆಯ ನೆನಪಿಗೋಸ್ಕರ ಪ್ರವಾಸಿ ಭಾರತೀಯ ದಿನವನ್ನು ಆಚರಿಸಲಾಗುತ್ತದೆ.

ಅನಿವಾಸಿ ಭಾರತೀಯರ ಮಹತ್ವ
ಭಾರತದ ಬೆಳವಣಿಗೆಯ ಪಥವನ್ನು ಸಕ್ರಿಯವಾಗಿ ರೂಪಿಸಲು ಮತ್ತು ಪ್ರಭಾವಿಸಲು ಭೌಗೋಳಿಕ ಗಡಿಗಳನ್ನು ಮೀರಿ ವಿಸ್ತರಿಸಿರುವ ಅನಿವಾಸಿ ಭಾರತೀಯರು ವಹಿಸುವ ಪ್ರಮುಖ ಪಾತ್ರಕ್ಕೆ ಈ ದಿನವು ಸಾಕ್ಷಿಯಾಗಿದೆ.


ಆರ್ಥಿಕ ವೇಗವರ್ಧಕ: ವಿದೇಶಿ ನೇರ ಹೂಡಿಕೆಗಳು, ಹಣ ರವಾನೆ ಮತ್ತು ವ್ಯಾಪಾರ ಉದ್ಯಮಗಳು ಸೇರಿದಂತೆ ವಿವಿಧ ವಿಧಾನಗಳ ಮೂಲಕ ಅನಿವಾಸಿ ಭಾರತೀಯರು ಭಾರತದ ಆರ್ಥಿಕ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುತ್ತಾರೆ. ಅವರ ಹಣಕಾಸು ಹೂಡಿಕೆಗಳು ಮತ್ತು ಉದ್ಯಮಶೀಲತಾ ಪ್ರಯತ್ನಗಳು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತವೆ.


ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಿಣಾಮ: ಆರ್ಥಿಕ ಕ್ಷೇತ್ರವನ್ನು ಮೀರಿ, ಎನ್ಆರ್ ಐ ದಿನವು ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಿಣಾಮವನ್ನು ಗುರುತಿಸುತ್ತದೆ. ಅನಿವಾಸಿ ಭಾರತೀಯರು ಸಾಂಸ್ಕೃತಿಕ ವಿನಿಮಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ, ಭಾರತೀಯ ಕಲೆ, ಸಂಗೀತ, ಸಾಹಿತ್ಯ ಮತ್ತು ಸಂಪ್ರದಾಯಗಳನ್ನು ಜಾಗತಿಕ ವೇದಿಕೆಯಲ್ಲಿ ಉತ್ತೇಜಿಸುತ್ತಾರೆ. ಅವರ ಪ್ರಯತ್ನಗಳು ವಿಶ್ವಾದ್ಯಂತ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ವೈವಿಧ್ಯತೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಲು ಕೊಡುಗೆ ನೀಡುತ್ತವೆ.


ರಾಜತಾಂತ್ರಿಕ ಸಂಪರ್ಕಗಳು: ಭಾರತ ಮತ್ತು ವಿವಿಧ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ವಲಸಿಗರ ಪಾತ್ರವನ್ನು ಗುರುತಿಸಲು ಎನ್ಆರ್ ಐ ದಿನವು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಅನಿವಾಸಿ ಭಾರತೀಯರು ಹೆಚ್ಚಾಗಿ ಸಾಂಸ್ಕೃತಿಕ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.