– ಶ್ರೀದೇವಿ ನಾಗರಾಜ ಭಟ್
ವನವಾಸಿ ಕಲ್ಯಾಣ ಕರ್ನಾಟಕ – ಮಂಗಳೂರು ವಿಭಾಗ,
ನಗರೀಯ ಮಹಿಳಾ ಟೋಳಿ ಸದಸ್ಯೆ

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ವೀರ ರಮಣಿಯರ ವಿಚಾರಗಳನ್ನು ನಾವು ತಿಳಿದಿದ್ದೇವೆ. ಆದರೆ ಅದೆಲ್ಲೋ ದೂರದ ಒಂದಷ್ಟು ಬೆಟ್ಟ ಗುಡ್ಡ ಕಾಡು ಕಣಿವೆಗಳೇ ರಾಜ್ಯವಾಗಿರುವ ಈಶಾನ್ಯ ರಾಜ್ಯದ ಮಣಿಪುರದ ತರುಣಿ ತನ್ನ ಬುಡಕಟ್ಟು ಜನಾಂಗದ ಸಂಸ್ಕೃತಿಯ ಅಸ್ಮಿತೆಗಾಗಿಯೂ, ಬ್ರಿಟಿಷರನ್ನು ಭಾರತದಿಂದಲೇ ತೊಲಗಿಸುವಲ್ಲಿಯೂ ಹೋರಾಟದ ರಾಣಿ ಆಗಿದ್ದ ಗಾಯಿಡಿನ್ ಲೂ ಎಲೆ ಮರೆಯ ಕಾಯಿಯಂತೆ ನಮಗೆಲ್ಲರಿಗೂ ಅಪರಿಚಿತರಾಗಿ ಉಳಿದಿದ್ದಾಳೆ. ಸ್ವಾತಂತ್ರ್ಯಕ್ಕೋಸ್ಕರ ತನ್ನ ಸರ್ವಸ್ವವನ್ನು ಪಣಕ್ಕಿಟ್ಟು ವನವಾಸಿ ಜನರನ್ನು ಸಂಘಟಿಸಿ ಧಾರ್ಮಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ಮಾಡಿದ ಇವರು ಅಲ್ಲಿನ ಜನರಿಗೆ ರಾಣಿ ಮಾ ಆಗಿದ್ದಾರೆ.

ಮಣಿಪುರದ ವಾಯುವ್ಯ ಭಾಗದ ತಮಂಗ್ಲಾಂಗ್ ಜಿಲ್ಲೆಯ ಬರಾಕ್ ನದೀತೀರದ,ದಟ್ಟ ಕಾಡಿನಲ್ಲಿರುವ ಲಂಗ್ಕಾವ್ ಗ್ರಾಮದ ಸಾಮಾನ್ಯ ನಾಗಾ ಕುಟುಂಬದಲ್ಲಿ 1915ಜನವರಿ 26ರಂದು, ತಂದೆ ಲೋಥೋನಾಂಗ್ ತಾಯಿ ಕೆಲುವತ್ಲಿನ್ ಲಿಯೂ ದಂಪತಿಗಳ ಎಂಟು ಮಂದಿ ಮಕ್ಕಳಲ್ಲಿ ಏಳನೆಯವಳು, ಇವಳು ಹುಟ್ಟುವ ಮೊದಲು ಪವಾಡವನ್ನು ನಡೆದಿತ್ತು. ತಂದೆಯ ಕನಸಿನಲ್ಲಿ ದೇವದೂತನೊಬ್ಬ ಬಂದು ನಿಮಗೆ ಒಂದು ಹೆಣ್ಣು ಮಗು ಜನಿಸುವುದು, ಆ ಮಗುವಿನಿಂದ ನಿಮ್ಮ ಜಾತಿ ಕುಲದ ರಕ್ಷಣೆಯಾಗುವುದು ಎಂದು ಭವಿಷ್ಯ ನುಡಿದಿದ್ದನಂತೆ. ಕಾಕತಾಳೀಯವೆಂಬಂತೆ ಈ ಮುದ್ದಾದ ಹೆಣ್ಣು ಮಗು ಜನಿಸಿದ ಕೆಲವೇ ದಿನಗಳಲ್ಲಿ ಗ್ರಾಮಸ್ಥರಿಗಿದ್ದ ಒಂದೊಂದೇ ಆತಂಕ, ಸಮಸ್ಯೆ ಪರಿಹಾರಗೊಳ್ಳತೊಡಗಿತು. ಹೀಗಾಗಿ ಗ್ರಾಮದ ಜನ ಆಕೆಗೆ ಗಾಯಿಡಿನ್ ಲೂ ಅಂದರೆ ಒಳ್ಳೆಯ ಮಾರ್ಗ ತೋರಿಸುವವರು ಎಂದು ಹೆಸರಿಟ್ಟರು. ಬಾಲ್ಯದಲ್ಲಿಯೇ ವಿಶೇಷ ಪ್ರತಿಭಾವಂತೆ ಆಗಿದ್ದ ಈಕೆಗೆ, ಬಡವರು, ನಿರ್ಗತಿಕರನ್ನು ಕಂಡರೆ ವಿಶೇಷ ಕರುಣೆ. ಶಾಂತ ಸ್ವಭಾವದ ಗಾಯಿಡಿನ್ ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದಳು.

ಭಾರತದಲ್ಲಿ ಬ್ರಿಟಿಷರು ಶಾಶ್ವತವಾಗಿ ನೆಲೆಯೂರಲು,ಸ್ವಾತಂತ್ರ್ಯ ಹೋರಾಟಗಾರರನ್ನು ದಮನಗೊಳಿಸುವ ಧೋರಣೆ ಮಾತ್ರವಲ್ಲದೆ, ಭಾರತೀಯರನ್ನು ಅವರ ಮೂಲ ಸಂಸ್ಕೃತಿಯಿಂದ ದೂರಗೊಳಿಸಿ ಬ್ರಿಟಿಷರೇ ಶ್ರೇಷ್ಠರು ಎಂಬ ಭಾವ ಮೂಡಿಸಲು, ಅವರನ್ನು ಕ್ರೈಸ್ತ ಮತಕ್ಕೆ ಮತಾಂತರಿಸುವ ಕಾರ್ಯ ಚಟುವಟಿಕೆ, ಈಶಾನ್ಯ ಭಾರತದಲ್ಲಿ, ಅಂದಿನ ಸರಕಾರದ ನೇತೃತ್ವದಲ್ಲೇ ವ್ಯವಸ್ಥಿತವಾಗಿ ನಡೆದಿತ್ತು.

ದಟ್ಟವಾದ ಕಾಡು,ಗುಡ್ಡ ಬೆಟ್ಟ ಕಣಿವೆಯಲ್ಲಿ ದೇಶದ  ಇತರ ಭೂಭಾಗದೊಂದಿಗೆ ಸತತ ಸಂಪರ್ಕವಿಲ್ಲದ 192 ರೀತಿಯ ಬುಡಕಟ್ಟು ಜನಾಂಗಗಳಲ್ಲಿ ಪ್ರತಿಯೊಂದು ಪಂಗಡಕ್ಕೂ ಅವರದೇ ಆದ ಭಾಷೆ, ಪರಿಸರ ಇತ್ಯಾದಿ ಭಿನ್ನತೆ ಇದ್ದುದರಿಂದ, ಮತೀಯ ಪ್ರಚಾರಕರಿಂದ ಅವರ ಸಂಸ್ಕೃತಿಯ ಮೇಲಿನ ಧಾಳಿಯನ್ನು ಒಗ್ಗಟ್ಟಾಗಿ ಎದುರಿಸಲು ಕಷ್ಟವಾಗಿತ್ತು. ಇದರ ಲಾಭ ಪಡೆದು, ಆಸೆ ಆಮಿಷ ಮೋಸಕ್ಕೆ ಬಲಿಯಾಗಿಸಿ, ಸಾವಿರಾರು ಬುಡಕಟ್ಟು ಜನರನ್ನು, ತಮ್ಮ ಈಶಾನ್ಯ ಭಾಗದೊಂದಿಗೆ ರಾಷ್ಟ್ರದ ಮುಖ್ಯ ವಾಹಿನಿಯಿಂದ ಬೇರೆಯಾಗಿ ನಿಲ್ಲಲು ಅಣಿಗೊಳಿಸಲಾಗುತ್ತಿತ್ತು. ಕ್ರೈಸ್ತ ಪ್ರಚಾರಕರ ಹೊರತಾಗಿ, ಬೇರಾರಿಗೂ ಪ್ರವೇಶಿಸಿದಂತಹ ನಿರ್ಬಂಧ ಅಲ್ಲಿ  ಹೇರಲಾಗಿತ್ತು.

ಸಾಮಾನ್ಯ ಜನರು ತಮ್ಮ ಮೂಲ ಸಂಸ್ಕೃತಿಯಿಂದ ದೂರವಾಗುತ್ತಿದ್ದುದನ್ನು ಮನಗಂಡ ಜಾದೋನಾಂಗ್ ಎಂಬ ಯುವಕ ಬ್ರಿಟಿಷರ ವಿರುದ್ಧ ಸಂಘಟಿತ ಪಡೆ ರಚಿಸಿ ಹೋರಾಡುತ್ತಿದ್ದ. ಆತನ ಈ ಸ್ವಾತಂತ್ರ್ಯ ಹೋರಾಟ ಗಾಯಿಡಿನ್ ಳಲ್ಲಿ ಆಸಕ್ತಿ ಮೂಡಿಸಿದ್ದಲ್ಲದೆ,ಅವನ ಅನುಯಾಯಿಯಾಗಿ ಹೋರಾಟದ ಜೀವನ ನಡೆಸುವ ಸಂಕಲ್ಪ ಕೈಗೊಂಡಳು.ನಾಗ ಸಂಸ್ಕೃತಿಯ ರಕ್ಷಣೆಯಲ್ಲಿ ಮಹಿಳೆಯರ ಪಾತ್ರವು ಹಿರಿದೆಂದು ಮನಗಂಡು, ಅವರನ್ನು ಒಗ್ಗೂಡಿಸತೊಡಗಿದಾಗ ಆಕೆಗಿನ್ನೂ ಕೇವಲ 14 ವರ್ಷ ಪ್ರಾಯ. ತಮ್ಮವರಿಂದಲೇ ತಮ್ಮ ಧರ್ಮದ ನಿಂದನೆ, ಪರಕೀಯ ಮತದ ಪ್ರಶಂಸೆ, ಕೇಳಿ ವ್ಯಥೆ ಪಟ್ಟ ಆಕೆ,ಕಾಡು- ಮೇಡು,ಗ್ರಾಮ- ನಗರಗಳಲ್ಲಿ, ಜನರನ್ನು ಒಗ್ಗೂಡಿಸಿ ಅವರಲ್ಲಿ ನಾಗ ಸಂಸ್ಕೃತಿ ಪರಂಪರೆಗಳ ಬಗ್ಗೆ ಆಳವಾದ ಜಾಗೃತಿ ಮೂಡಿಸತೊಡಗಿದಳು. 1928ರಲ್ಲಿ ಜಾದೋನಾಂಗ್ ಜೊತೆ, ಮಹಾತ್ಮ ಗಾಂಧೀಜಿಯವರನ್ನು ಗುವಾಹಾಟಿಯಲ್ಲಿ ಭೇಟಿ ಮಾಡಿ,ಆಶೀರ್ವಾದ ಪಡೆದಳು.

ಬುಡಕಟ್ಟು ನಾಗಾ ಜನಾಂಗದ ಮೂರು ಪ್ರಮುಖ ಪಂಗಡಗಳಾದ ಜಿಮಿ, ರೆಂಗ್ ಮಾಯ್ ಮತ್ತು ಝೆಲಿಯಂಗ್ ಜನರನ್ನು ಒಗ್ಗೂಡಿಸಿ ಝೆಲಿಯೆಗ್ ರಾಂಗ್ ಎಂದು ಹೆಸರಿಸಿ, ಏಕ ಸೂತ್ರದಲ್ಲಿ ಪೋಣಿಸಿ ಹರಕ್ಕಾ ಎಂದರೆ, ಪರಿಶುದ್ಧಧರ್ಮ ಎಂಬ ಸಂಸ್ಥೆಯನ್ನು ರೂಪಿಸಿ, ನಾಗಾ ಸಂಸ್ಕೃತಿ, ಆಚಾರ ವಿಚಾರಗಳ ಸಂರಕ್ಷಣೆಗೆ, ಚಳುವಳಿಯ ಸ್ವರೂಪ ನೀಡಿದಳು. ಈಗಿನ ಮಣಿಪುರ,ಅಸ್ಸಾಂ ಮತ್ತು ನಾಗಾಲ್ಯಾಂಡ್ ಭಾಗಗಳಲ್ಲಿ ಹರಡಿರುವ ಗುಡ್ಡಗಾಡು ಪ್ರದೇಶಗಳನ್ನು ಬ್ರಿಟಿಷರಿಂದ ಮುಕ್ತಗೊಳಿಸಲು- ಚಳುವಳಿಯನ್ನೂ , ಧಾರ್ಮಿಕ ಜಾಗೃತಿಗಾಗಿ- ಧರ್ಮ ಯಾತ್ರೆಗಳನ್ನು ನಡೆಸಿ, ಮಿಷಿನರಿ ದೌರ್ಜನ್ಯಗಳ ಬಗೆಗೆ ಅರಿವು ಮೂಡಿಸಿದ ಚಳುವಳಿಯೇ ಮುಂದೆ ಸಶಸ್ತ್ರ ರೂಪ ಪಡೆದು, ವಿವಿಧ ರೀತಿಯ ತೆರಿಗೆ ವಿಧಿಸಿದ್ದರ ವಿರುದ್ಧ, ಹಳ್ಳಿ ಜನ ಒಂದಾಗಲು ಕಾರಣವಾಯಿತು.

ಧಾರ್ಮಿಕ ಜಾಗೃತಿಗಾಗಿ ಊರ ಜನರ ಸಹಕಾರದೊಂದಿಗೆ  ಲಂಗ್ ಕಾವ್ ನಲ್ಲಿ ಒಂದು ಮಂದಿರ ನಿರ್ಮಿಸಿದಳು. ಇವಳ ಧಾರ್ಮಿಕ ಪ್ರವೃತಿ ಮತ್ತು ಸದ್ವಿಚಾರದ  ಪ್ರಭಾವದಿಂದ, ಬುಡಕಟ್ಟು ಜನಾಂಗ, ಆಕೆಯಲ್ಲಿ ದೇವಿ ಸ್ವರೂಪವನ್ನೇ ಕಾಣುತ್ತಿತ್ತು. ತಾನು ಭೇಟಿ ಕೊಟ್ಟ ಸ್ಥಳದಲ್ಲೆಲ್ಲ ಧರ್ಮ, ಸಂಸ್ಕೃತಿ ರಕ್ಷಣೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಅರಿವು ಮೂಡಿಸಿ, ಹೋರಾಟದ ತರಬೇತಿ ನೀಡಿ, ಮಹಿಳಾ ಸೈನ್ಯವೊಂದನ್ನು ಕಟ್ಟಿದಳು. ಅನೇಕ ರೋಗಿಗಳಿಗೆ ಸ್ಥಳೀಯ ರೀತಿಯಲ್ಲಿ ಔಷಧೋಪಚಾರಗಳನ್ನು ನೀಡುತ್ತಾ ಜನಸಾಮಾನ್ಯರಿಗೆ ಆಪ್ತಳಾಗಿ, ಇವಳ ಪ್ರಭಾವ ಹೆಚ್ಚುತ್ತಿರುವುದು ಬ್ರಿಟಿಷ್ ಸರಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಇವಳ ಆಧ್ಯಾತ್ಮ ಗುರು, ಜಾದೋನಾಂಗ್ ನನ್ನು ಬ್ರಿಟಿಷರು ಮೋಸದಿಂದ ಬಂಧಿಸಿ ಸುಳ್ಳು ಆಪಾದನೆ ಹೊರಿಸಿ ಗಲ್ಲಿಗೇರಿಸಿದರು. ಜಾದೋನಾಂಗ್ ನನ್ನು ಜೈಲಿನಲ್ಲಿ ಭೇಟಿಯಾಗಿದ್ದ ಗಾಯಿಡಿನ್ ಅವನ ಕಾರ್ಯವನ್ನು ತಾನೇ ಉತ್ತರಾಧಿಕಾರಿಯಾಗಿ ಮುನ್ನಡೆಸುವ ಶಪಥ ಮಾಡಿದ್ದಳು.

ನಾಯಕನ ಸಾವಿನಿಂದ ಕಳೆಗುಂದಿದ್ದ ನಾಗಾಗಳಿಗೆ, ಹೊಸ ಚೈತನ್ಯ ತುಂಬುತ್ತಾ.. “ನಾವು ನಾಗಾಗಳು, ನಾಗಾಗಳಾಗಿಯೇ ಬದುಕುತ್ತೇವೆ, ವಿದೇಶಿಯರು ನಮ್ಮ ಮೇಲೆ ಅಧಿಕಾರ ಚಲಾಯಿಸಲು ಬಿಡೆವು, ತೆರಿಗೆ ಕಟ್ಟಲು ನಾವು ಬ್ರಿಟಿಷರ ಸೇವಕರಲ್ಲ, ಗಲ್ಲುಗಂಬಕ್ಕೆ ಎಂದೂ ಹೆದರಲಾರೆವು, ನಮ್ಮ ದೇಹದಲ್ಲಿ ಜೀವ ಇರುವ ತನಕ ನಮ್ಮ ನಾಡಿನಿಂದ ಮೋಸದ ಬಿಳಿ ಜನರನ್ನು ಹೊರಹಾಕಲು ಹೋರಾಡುತ್ತೇವೆ” ಎಂದು ಘರ್ಜಿಸಿದಳು. ಗಾಯಿಡಿನ್ ಬಂಧನಕ್ಕೂ ಬ್ರಿಟಿಷ್ ಸೇನೆ ವ್ಯೂಹ ರಚಿಸಿತ್ತು. ಅನೇಕ ಬಾರಿ ಬ್ರಿಟಿಷರ ಮುಖಾಮುಖಿಯಾದರೂ ಆಕೆ ತನ್ನ ಚಾಣಕ್ಯ ನಡೆಯಿಂದ ತಪ್ಪಿಸಿಕೊಳ್ಳುತ್ತಿದ್ದಳು. ಅವಳಿಂದ ಪ್ರೇರಿತರಾಗಿ ಬಂದ 500ಕ್ಕೂ ಅಧಿಕ ಮಂದಿಗೆ ತಾನೇ ಸ್ವತಃ ಮುಂದೆ ನಿಂತು,ಬಂದೂಕು ಹಾಗೂ ಸಾಂಪ್ರದಾಯಿಕ ಮದ್ದು ಗುಂಡು ಚಲಾವಣೆ ಮತ್ತು ತಯಾರಿಯ ಬಗ್ಗೆ ತರಬೇತಿ ನೀಡುತ್ತಿದ್ದಳು. ತನ್ನ ಕಡೆಯ ಒಬ್ಬ ಸೈನಿಕನಿಗೂ ಹಾನಿಯಾಗದೇ, ಶಿವಾಜಿ ಮಹಾರಾಜರ ಗೆರಿಲ್ಲಾ ಯುದ್ಧ ಮಾದರಿಯಂತೆ, ಚತುರತೆಯಿಂದ ಯುದ್ಧ ತಂತ್ರ ಹಾಗೂ ಧಾಳಿ ನಡೆಸುತ್ತಿದ್ದಳು. ತಮ್ಮನ್ನು ರಕ್ಷಿಸುವ ಆಕೆಗೆ, ಬಡ ಹಳ್ಳಿಗರು, ನಗದು ಸೇರಿದಂತೆ ತಮ್ಮ ಕೈಲಾದ ಎಲ್ಲಾ ನೆರವು ನೀಡುತ್ತಿದ್ದರು.
ತನ್ನ ಅಡಗುದಾಣವನ್ನು ಆಗಾಗ ಬದಲಾಯಿಸುತ್ತಾ, ಹೆಸರನ್ನೂ ಕಿರಾಂಗಲೇ ಎಂದು ಬದಲಾಯಿಸಿ ಬ್ರಿಟಿಷರನ್ನು ಓಡಿಸಲು ಹರಕ್ಕಾ ಚಳುವಳಿಗೆ ತೀವ್ರ ಸ್ವರೂಪ ನೀಡಿದಳು. ಅವಳ ಬಂಧನವಾಗದಿದ್ದರೆ ಎದುರಿಸಬೇಕಾದ ವಿಪತ್ತನ್ನು ಮನಗಂಡ ಬ್ರಿಟಿಷರು, ಅವಳ ಸ್ವಂತ ಊರಾದ ಲಂಗ್ ಕಾಮ್ ಮೇಲೆ ಮನಸೋ ಇಚ್ಛೆ ಧಾಳಿ ನಡೆಸಿ, ಧಾನ್ಯ  ಸಂಗ್ರಹಕ್ಕೆ  ನೀರೆರೆದು ಹಾಳುಗೆಡವಿದ್ದಲ್ಲದೆ, ಅನೇಕರಿಗೆ ಲಾಠಿ ಪ್ರಯೋಗಿಸಿ, ಬಂಧಿಸಿ, ಹಿಂಸಿಸಿ,ಅವಳು ಸಿಗದಿದ್ದಾಗ ಅನೇಕ ಮನೆಗಳಿಗೆ ಬೆಂಕಿ ಹಚ್ಚಿದರು.

ಅವಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ ಬ್ರಿಟಿಷ್ ಸರಕಾರ, ಸುಳಿವು ನೀಡಿದವರಿಗೆ 400 ರೂಪಾಯಿ ಬಹುಮಾನದೊಂದಿಗೆ, ಅನೇಕ ವಿನಾಯಿತಿಗಳನ್ನು ಘೋಷಿಸಿತು. ಪ್ರಾಣಾಪಾಯವನ್ನು ಲೆಕ್ಕಿಸದೆ ಗುಪ್ತ ಮಾರ್ಗದಲ್ಲಿ ಗ್ರಾಮದಿಂದ ಗ್ರಾಮಕ್ಕೆ ಸಂಚರಿಸುತ್ತಾ ಆಂದೋಲನಕಾರರಿಗೆ ಮಾರ್ಗದರ್ಶನ ನೀಡುತ್ತಿದ್ದ ಅವಳ ಮೇಲೆ,ಇಲ್ಲಸಲ್ಲದ ಅಪಪ್ರಚಾರ ನಡೆಸಿದ ಮಿಷಿನರಿ ಅಸ್ಸಾಂ ರೈಫಲ್ಸ್ ಗೆ ಅವಳ ಬಂಧನದ ಹೊಣೆ ನೀಡಿತು. ಎತ್ತರದ ಕೋಟೆಯಲ್ಲಿ ಬೀಡು ಬಿಟ್ಟಿದ್ದ ಅವಳನ್ನು ಹೊರ ತರಲು ಸೇನೆ ಮುಗ್ಧ ಜನರನ್ನು ಹಿಂಸಿತೊಡಗಿತು ಅಸ್ಸಾಂ ರೈಫಲ್ಸ್ ಸೈನ್ಯಕ್ಕೂ ಗಾಯಿಡಿನ್ ಸೇನೆಗೂ ಯುದ್ಧ ನಡೆದು ಎರಡೂ ಕಡೆಯ ಅನೇಕ ಸೈನಿಕರು ಹುತಾತ್ಮರಾದರು.

ಇದರಿಂದ ಕ್ರೋಧಗೊಂಡ ಬ್ರಿಟಿಷರು ಮೂರನೇ ಅಸ್ಸಾಂ ರೈಫಲ್ಸ್ ಕಮಾಂಡೋ, ಮ್ಯಾಕ್ ಡೊನಾಲ್ಡ್ ಗೆ ಇವಳ ಬಂಧನದ ಕಾರ್ಯಾಚರಣೆಯ ಜವಾಬ್ದಾರಿ ನೀಡಿತು. ತನಗಾಗಿ ಗ್ರಾಮವಾಸಿಗಳು ಅನುಭವಿಸುತ್ತಿದ್ದ ಕಷ್ಟ ಸಹಿಸದ ಆಕೆ ಕೋಟೆಯಿಂದ ಹೊರಬಂದು ಆಧುನಿಕ ಶಸ್ತ್ರಾಸ್ತ್ರ ಹಾಗೂ ಅಪಾರ ಸೈನ್ಯದ ಬ್ರಿಟಿಷರನ್ನು ಎದುರಿಸಿ, ಬಂಧಿತಳಾದಳು.ಆಗ ಅಕೆಗಿನ್ನೂ 17ವರ್ಷ!

ಎರಡು ತಿಂಗಳುಗಳ ಕಾಲ ಕೊಹಿಮಾ ಜೈಲಿನಲ್ಲಿ ವಿಚಾರಣೆಯ ನಾಟಕವಾಡಿ, ಗಾಯಿಡಿನ್ ಗೆ ಜೀವಾವಧಿ ಶಿಕ್ಷೆಯ ತೀರ್ಪು ನೀಡಲಾಯಿತು. ಅವಳು ಕಟ್ಟಿದ ಸಂಘಟನೆ ಅಸಾಂವಿಧಾನಿಕ ಎಂದು ಘೋಷಿಸಿ ಪ್ರತಿಬಂಧ ಹೇರಲಾಯಿತು.1937 ರಲ್ಲಿ ಜೈಲಿನಲ್ಲಿ ಆಕೆಯನ್ನು ಭೇಟಿಯಾದ ನೆಹರೂ ಅವಳ ಸಾಹಸ ತಿಳಿದು, ಆಕೆಯನ್ನು ರಾಣಿ ಎಂದು ಬಣ್ಣಿಸಿದರು. ಮುಂದೆ ಬ್ರಿಟಿಷ್ ಸರಕಾರ ರಾಣಿ ಎಂದು ಉಲ್ಲೇಖಿಸದಂತೆ ಕಟ್ಟಾಜ್ಞೆ ಹೊರಡಿಸಿದ್ದರೂ ಆಕೆ, ರಾಣಿ ಗಾಯಿಡಿನ್ ಲೂ ಎಂದೇ ಪ್ರಸಿದ್ಧಳಾದಳು.
ಹಿಂದೂಸ್ತಾನ್ ಟೈಮ್ಸ್- ರಾಣಿಯನ್ನು “ಕಣಿವೆಯಲ್ಲೊಬ್ಬ ಪರ್ವತದ ಮಗಳು” ಎಂದು ಗುಣಗಾನ ಮಾಡಿತು

ಮುಂದೆ ಸುಭಾಷ್ ಚಂದ್ರ ಬೋಸ್ ಅಧ್ಯಕ್ಷತೆಯ ಕಾಂಗ್ರೆಸ್ ಅಧಿವೇಶನದಲ್ಲಿ ರಾಣಿಯ ಬಿಡುಗಡೆಗೆ ಆಗ್ರಹಿಸಿ ನಿರ್ಣಯ ಕೈಗೊಂಡರೂ, ಬ್ರಿಟಿಷ್ ಪ್ರಭುತ್ವ ಮಣಿಯಲಿಲ್ಲ.

15 ವರ್ಷಗಳ ಸುದೀರ್ಘ ಸೆರೆಮನೆ ವಾಸದ ನಂತರ ಭಾರತದ ಸ್ವಾತಂತ್ರ್ಯ ಪ್ರಾಪ್ತಿಯ ಜೊತೆ ಜೊತೆಗೆ ರಾಣಿಯ ಬಿಡುಗಡೆಯಾಯಿತು. ನಂತರವೂ ಅವ್ಯಾಹತವಾಗಿ ಸಾಗುತ್ತಿದ್ದ ಬಲಾತ್ಕಾರದ ಮತಾಂತರದ ವಿರುದ್ಧ ಮತ್ತೆ ಧ್ವನಿ ಎತ್ತಿದರೂ,ನೆಹರು ನೇತೃತ್ವದ ಸ್ವತಂತ್ರ ಭಾರತ ಸರಕಾರ, ರಾಣಿಯ ವಿರುದ್ಧವೇ ನಿಂತದ್ದು ದುರ್ದೈವವೆಂದೇ ಹೇಳಬೇಕಷ್ಟೆ.
ನಮ್ಮದೇ ಸರಕಾರ ರಾಣಿಯ ಚಲನವಲನನ್ನು ನಿರ್ಬಂಧಿಸಿತು.ಮತ್ತೆ ನಾಗಾ ಜನರ ರಕ್ಷಣೆಗೆ ನಿಂತ ರಾಣಿ, ಏಳು ವರ್ಷ ಭೂಗತಳಾಗಿ 500 ಮಂದಿ ರೈಫಲ್ಸ್ ಧಾರಿಗಳೂ ಸೇರಿದಂತೆ ಒಂದು ಸಾವಿರ ಸೈನಿಕರ ಪಡೆಯನ್ನು  ಕಟ್ಟಿ ವಿವಿಧ ರೀತಿಯ ಹೋರಾಟ ಕೈಗೊಂಡಳು. ಮಿಷಿನರಿಗಳು ಆಕೆಯ ಹತ್ಯೆಯ ಸಂಚನ್ನು ರೂಪಿಸಿತ್ತು.

ರಾಣಿ 1966 ರಲ್ಲಿ ಭೂಗತ ಚಟುವಟಿಕೆಯನ್ನು ಸರಕಾರದ ಕೋರಿಕೆಯ ಮೇರೆಗೆ ಸಮಾಪ್ತಿಗೊಳಿಸಿ, ಶಸ್ತ್ರಾಸ್ತ್ರ ಒಪ್ಪಿಸಿದಳು ನಂತರದ ದಿನಗಳಲ್ಲಿ ಅನೇಕ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ರಾಣಿ1979ರಲ್ಲಿ ಪ್ರಯಾಗದಲ್ಲಿ ನಡೆದ ವಿಶ್ವ ಹಿಂದೂ ಸಮ್ಮೇಳನಕ್ಕೆ ತನ್ನ ನಿಷ್ಠಾವಂತ ಅನುಯಾಯಿಗಳೊಂದಿಗೆ ಪಾಲ್ಗೊಂಡು ಭಾವಪೂರ್ಣ ಮಾತುಗಳನ್ನಾಡಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಪೂರ್ವಾನ್ಚಲದ ಜನರ ಅಪಾರ ತ್ಯಾಗವನ್ನು ತೆರೆದಿಟ್ಟರು. ನಾಗಾ ಜನರಿಗೆ  ಭಾರತದ ಬಗ್ಗೆ ಇದ್ದ ಒಲವನ್ನು ಪ್ರಚುರಪಡಿಸಲು ದೇಶಾದ್ಯಂತ ಪ್ರವಾಸ ಮಾಡಿದಳು.

ಭಾರತ ಸರಕಾರ ಆಕೆಯ ಸಾಧನೆಯನ್ನು ಗುರುತಿಸಿ “ಸ್ವಾತಂತ್ರ್ಯ ಹೋರಾಟಗಾರ್ತಿ” ಎಂದು ಸನ್ಮಾನಿಸಿ, ಅವರ ಭಾವಚಿತ್ರದ ಅಂಚೆ ಚೀಟಿ ಹೊರತಂದಿತು.1987ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ನೀಡಿ ಗೌರವಿಸಿತು.
1993 ಫೆಬ್ರವರಿ 17ರಂದು, ತನ್ನ 78ನೇ ವಯಸ್ಸಿನಲ್ಲಿ ತನ್ನ ತವರೂರಿನಲ್ಲಿ ಸ್ವರ್ಗಸ್ಥಳಾದ ರಾಣಿಗೆ ಮರಣೋತ್ತರವಾಗಿ 1996ರಲ್ಲಿ ಬಿರ್ಸಾಮುಂಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

1952ರಲ್ಲಿ ವನವಾಸಿ ಬಂಧುಗಳ ಸರ್ವಾಂಗೀಣ ವಿಕಾಸಕ್ಕಾಗಿ ವನಯೋಗಿ ಶ್ರೀ ಬಾಳಾಸಾಹೇಬ ದೇಶಪಾಂಡೆಯವರಿಂದ ಸ್ಥಾಪಿತಗೊಂಡ ಸಂಸ್ಥೆ, ಅಖಿಲ ಭಾರತ ವನವಾಸಿ ಕಲ್ಯಾಣ ಆಶ್ರಮದಲ್ಲಿ ರಾಣಿಯ ಜನ್ಮದಿನವನ್ನು ನಾರಿ ಶಕ್ತಿ ದಿವಸ್ ಎಂದು ಹೆಮ್ಮೆಯಿಂದ ಆಚರಿಸಲಾಗುತ್ತಿದೆ.

ಭಾರತದ ದುರಾದೃಷ್ಟ ಈ ದೇಶದ ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ಅನೇಕ ರೋಮಾಂಚಕಾರಿ ಅಧ್ಯಾಯಗಳು ಇಂದಿಗೂ ಅಪರಿಚಿತವಾಗಿಯೇ ಉಳಿದಿವೆ.ಇದಕ್ಕೆ ರಾಣಿ ನಡೆಸಿದ ಹೋರಾಟ ಹೊರತಲ್ಲ.

ಭಾರತೀಯ ಸ್ವಾತಂತ್ರ್ಯ ಸಂಘರ್ಷದ ಇತಿಹಾಸದಲ್ಲಿ ರಾಣಿಗೆ ಮಹತ್ವದ ಸ್ಥಾನವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮರಂತಹ ಅದ್ವಿತೀಯ ಹೋರಾಟಗಾರರ ಸಾಲಿನಲ್ಲಿ ನಿಲ್ಲಬಲ್ಲ ಶ್ರೇಷ್ಠ ಸ್ವಾತಂತ್ರ್ಯ ಸೇನಾನಿ ರಾಣಿ ಗಾಯಿಡಿನ್ ಲೂ.

ಅತೀ ಸಣ್ಣ ವಯಸ್ಸಿನಲ್ಲಿಯೇ, ಅಸಾಧಾರಣ ಕ್ಷಾತ್ರ ತೇಜಸ್ಸಿನಿಂದ ಭಾರತದ ಸ್ವಾತಂತ್ರ್ಯಕ್ಕಾಗಿಯೂ, ವನ ಜನರ ಸ್ವಂತ ಅಸ್ಮಿತೆಗಾಗಿಯೂ ಪ್ರಾಣವನ್ನೇ ಪಣಕ್ಕಿಟ್ಟು ಜೀವ ಸವೆಸಿದ ರಾಣಿ, ವನವಾಸಿಗಳ…ಈಶಾನ್ಯ ರಾಜ್ಯಗಳ…,ಮಾತ್ರವಲ್ಲ, ನಮ್ಮ ನಿಮ್ಮೆಲ್ಲರ ಹೆಮ್ಮೆ… ಭಾರತದ ಹೆಮ್ಮೆ…



Leave a Reply

Your email address will not be published.

This site uses Akismet to reduce spam. Learn how your comment data is processed.