ಬೆಂಗಳೂರು : ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತು ರಾಜರಾಜೇಶ್ವರಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ‘ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರ’ ವನ್ನು ಸೋಮವಾರ ಸಂಜೆ ಜ್ಯೋತಿ ಉದ್ದೀಪನಗೊಳಿಸಿ ಉದ್ಘಾಟಿಸಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಮಾತನಾಡಿ, ಸಮಾಜದ ಆರೋಗ್ಯ ಸಂರಕ್ಷಣೆಯಲ್ಲಿ ರಾಷ್ಟ್ರೋತ್ಥಾನ ನಿರ್ವಹಿಸುತ್ತಿರುವ ಅಮೂಲ್ಯ ಕೊಡುಗೆಗೆ ಜನರ ಸ್ವಾಥ್ಯ ನಿರ್ವಹಣೆಯ ನಿಟ್ಟಿನಲ್ಲೂ ತೊಡಗಿಕೊಂಡಿರುವುದು ಈ ಮೂಲಕ ಸಾಕಾರಗೊಂಡಿದೆ. ಸೇವೆ, ಶಿಕ್ಷಣ, ಜಾಗೃತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೋತ್ಥಾನ ಪರಿಷತ್ತು, ಅದರ ಚೇತನರಾಗಿದ್ದ ಮೈ.ಚ ಜಯದೇವರ ಸ್ಮರಣಾರ್ಥ ಆರಂಭಿಸಲಾದ ಈ ಆಸ್ಪತ್ರೆ ವ್ಯಾಪಕ ಕ್ರಾಂತಿ ಸೃಷ್ಟಿಸಲಿದೆ ಎಂದರು. ವಿವಿಧ ಸಂಸ್ಥೆಗಳ ಧ್ಯೇಯದ ಸಾಕಾರಕ್ಕೆ, ಸಮಾಜದ ಏಳ್ಗೆಗಾಗಿ ನಿರ್ದೇಶಿಸಿ, ಶಿಸ್ತು, ಚೌಕಟ್ಟು ರೂಪಿಸಿದ ವ್ಯಕ್ತಿ ಮಾತ್ರವಲ್ಲ ಶಕ್ತಿಯಾಗಿದ್ದವರು ಜಯದೇವರು ಎಂದು ನೆನಪಿಸಿದರು. ಸಂಘದ ಇತಿಹಾಸದಲ್ಲಿ ವ್ಯಕ್ತಿಯನ್ನು ಸ್ಮಾರಕವಾಗಿಸುವ ಕ್ರಮವಿಲ್ಲ. ಆದರೆ ಅದಕ್ಕೆ ಅಪವಾದವೆಂಬಂತೆ ಮನನೀಯ ಮೈ.ಚ ಜಯದೇವರ ಹೆಸರಿಗೆ ಅಂತಹದೊಂದು ಅವಕಾಶ ಮೂಡಿಬಂದಿರುವುದು ಆ ವ್ಯಕ್ತಿತ್ವ, ಸಮಾಜಕ್ಕೆ ನೀಡಿದ ಯೋಗದಾನದ ಪ್ರತೀಕ ಎಂದು ವಿಶ್ಲೇಶಿಸಿದರು. ತನ್ನನ್ನು ತಾನೇ ರೂಪಿಸಿ, ನೂರಾರು ಇತರ ವ್ಯಕ್ತಿತ್ವಗಳನ್ನು ಸಾಮಾಜಿಕ ಪ್ರತಿಬದ್ದತೆಯೊಂದಿಗೆ ರೂಪಿಸಿದ ಜಯದೇವರ ಸ್ಮರಣಾರ್ಥ ಆರಂಭಿಸಲಾದ ಈ ವಿಶೇಷ ಪರಿಕಲ್ಪನೆಯ ಆಸ್ಪತ್ರೆ, ಆರೋಗ್ಯ ಪೂರ್ಣ ವ್ಯವಸ್ಥೆ ನಿರ್ಮಾಣದ ಹೊಸ ದಿಶೆಯೊಂದು ಈ ಮೂಲಕ ಸಾಕಾರಗೊಳ್ಳುತ್ತಿದೆ ಎಂದರು. ಆಸ್ಪತ್ರೆ, ಚಿಕಿತ್ಸೆ ಪಡೆಯುವಂತ ಸಮಾಜ ನಿರ್ಮಾಣವಾಗದೆ, ಸ್ವಾಥ್ಯದ ಜನಜೀವನ ರೂಪಿಸುವಲ್ಲಿ ಬದುಕಿನ ತಪ್ಪು ದಾರಿಗಳಿಂದ ದೂರವಿರೋಣ. ಅದೇ ಲಕ್ಷ್ಯವಾಗಿರಲಿ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ರಾಷ್ಟ್ರೋತ್ಥಾನ ಪರಿಷತ್ತು ಸಾಮಾಜಿಕ ಪರಿಕಲ್ಪನೆಯಲ್ಲಿ ಸಮಾಜಕ್ಕೆ ನೀಡುತ್ತಿರುವ ಬಹುಆಯಾಮಗಳ ಕೊಡುಗೆಗಳು ಎಂದಿಗೂ ಸ್ತುತ್ಯರ್ಹವಾದುದು. ಈ ಮೂಲಕ ರೂಪುಗೊಂಡ ಹಲವಾರು ಮಹತ್ತರ ರಾಷ್ಟ್ರಾರಾಧಕರ ಪೈಕಿ ಮೈ.ಚ ಜಯದೇವ ಅವರು ಪೂರ್ಣ ಬದುಕನ್ನು ರಾಷ್ಟ್ರ ಸೇವೆಗೆ ಮುಡಿಪಾಗಿಟ್ಟವರು. ಸರಳ ಬದುಕು, ವ್ಯಕ್ತಿತ್ವದ ಮೂಲಕ ಮಾದರಿಯಾಗಿದ್ದವರು. ಯುವ ಸಮಾಜದಲ್ಲಿ ರಾಷ್ಟ್ರಪ್ರೇಮ ಉದ್ದೀಪನಗೊಳಿಸುವಲ್ಲಿ ಅವರ ಸೇವೆ ಮಹತ್ತರ. ಅವರ ಸ್ಮರಣಾರ್ಥ ಈ ಆಸ್ಪತ್ರೆ ರೂಪುಗೊಂಡಿರುವುದು ಸ್ತುತ್ಯರ್ಹ ಎಂದವರು ಈ ಸಂದರ್ಭ ತಿಳಿಸಿದರು. ಈ ಸಂದರ್ಭ ಆಯುಷ್ಮಾನ್ ಭಾರತ ಯೋಜನೆಯ ಮೂಲಕ ರೋಗಿಗಳ ಆಯ್ಕೆಯ ಆಸ್ಪತ್ರೆಯ ಸೌಲಭ್ಯ ಪಡೆಯುವ ಕಾನೂನಿಗೆ ಬದಲಾಗುವ ಮೂಲಕ ಜನಸಾಮಾನ್ಯರಿಗೂ ಸುಲಲಿತ ಚಿಕಿತ್ಸೆ ಲಭಿಸುವಂತಾಗಬೇಕು ಎಂದು ಶ್ರೀಗಳು ಕರೆನೀಡಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಇನ್ಪೋಸಿಸ್ ಫೌಂಡೇಶನ್ ನ ಸಂಸ್ಥಾಪಕಿ, ಮೂರ್ತಿ ಫೌಂಡೇಶನ್ ಅಧ್ಯಕ್ಷೆ, ಶ್ರೀಮತಿ ಸುಧಾಮೂರ್ತಿ ಮಾತನಾಡಿ, ರಾಷ್ಟ್ರೋತ್ಥಾನದ ಹತ್ತು ಹಲವು ಯೋಜನೆಗಳು ಸ್ತುತ್ಯರ್ಹವಾದುದು. ಕಳೆದ 35 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಂದ ರಾಷ್ಟ್ರೋತ್ಥಾನದೊಂದಿಗಿನ ಸಂಬಂಧ ಗಮನಾರ್ಹ. ಮೈ.ಚ ಜಯದೇವರ ಆತ್ಮ ತೃಪ್ತಿಹೊಂದುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಅದರಲ್ಲೂ ಮಹಿಳೆಯರ ಆರೋಗ್ಯ ಸಂರಕ್ಷಣೆಗೆ ನೆರವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಳಿಕೆಯ ಒಂದಂಶವನ್ನು ದಾನ ಮಾಡುವ ಮನೋಭಾವ ಬೆಳೆಸಬೇಕು ಎಂದು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರು ನಾರಾಯಣ ಹೆಲ್ತ್ ನ ಸ್ಥಾಪಕ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಆಸ್ಪತ್ರೆ ನಿರ್ಮಾಣ, ಆರೋಗ್ಯ ಕ್ಷೇತ್ರದ ನಿರ್ವಹಣೆ ಜಗತ್ತಿನ ಅತೀ ಸವಾಲಿನ ಮತ್ತು ಮಹತ್ತರ ವಿಆಗವಾಗಿ ಬೆಳೆದಿದೆ. ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಭಾರತ ಜಗತ್ತಿನ ಅತ್ಯುತ್ತಮ ಸ್ವಾವಲಂಬಿ ಚಿಕಿತ್ಸಾ ಸೌಲಭ್ಯಗಳ ರಾಷ್ಟ್ರವಾಗಿ ಮೂಡಿಬರಲಿದೆ. ಜಗತ್ತಿನಾದ್ಯಂತ ಭಾರತೀಯ ಮೂಲದ ನಿಪುಣ ವೈದ್ಯರು ಅದ್ವಿತೀಯ ಸೇವೆ ನೀಡುತ್ತಿರುವುದು ಭಾರತೀಯ ಜ್ಞಾನಪರಂಪರೆ, ಸಂಶೋಧನೆ, ಸಂವೇದನೆಯ ಸಂಕೇತ. ಆರೋಗ್ಯ ಕ್ಷೇತ್ರದ ದಾದಿಯರ ಸೇವಾ ನಿರತರೆಲ್ಲ ಬಹುಪಾಲು ಭಾರತೀಯರೆಂಬುದು ಹೆಮ್ಮೆ ತಂದಿದೆ. ಆಯುಷ್ಮಾನ್ ಭಾರತ ಯೋಜನೆಯ ಮೂಲಕ ಸಾಮಾನ್ಯ ರೋಗಿಗಳಿಗೂ ಅತ್ಯುತ್ತಮ ಚಿಕಿತ್ಸೆ ಸೌಲಭ್ಯಗಳು ಲಭಿಸುತ್ತಿದೆ ಎಂದು ಅವರು ತಿಳಿಸಿದರು.

ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಶ್ರೀ ಎಂ.ಪಿ ಕುಮಾರ್, ಆಡಳಿತ ಸಮಿತಿಯ ಪದಾಧಿಕಾರಿಗಳಾದ ಶ್ರೀ ಸುಧೀರ್ ಪೈ, ಡಾ. ಸಂಧ್ಯಾ ರವಿ, ಡಾ. ಕಿಶೋರ್, ಎಸ್. ವಿ.ಎಸ್ ಸುಬ್ರಹ್ಮಣ್ಯ ಗುಪ್ತ, ಡಾ. ಶ್ರೀನಾಥ್, ಸಲಹಾ ಮಂಡಳಿ ಸದಸ್ಯ, ಡಾ. ಎಚ್ ಆರ್ ನಾಗೇಂದ್ರ, ಡಾ. ಬಿ ಎನ್ ಗಂಗಾಧರ್, ಡಾ. ನರೇಶ್ ಭಟ್, ಡಾ. ಸರಳರೇಖ, ಡಾ. ಆರ್ ನಾಗರತ್ನ, ಡಾ. ಸಂಧ್ಯಾ ನಂಜುಡಯ್ಯ, ಡಾ. ಲತಾ ವೆಂಕಟರಾಮನ್, ಡಾ. ತಿಮ್ಮಪ್ಪ ಹೆಗಡೆ, ಡಾ. ರವೀಶ್, ಡಾ. ಟಿ ಎನ್ ಶ್ರೀಧರ್, ಡಾ. ಕೆ ಎಸ್ ಸತೀಶ್, ಡಾ. ಶೇಖರ ಪಾಟೀಲ್, ಡಾ. ವತ್ಸಲ, ಡಾ. ದೀಪಕ್ ಹಳದೀಪುರ್, ಮಹದೇವ ಅಯ್ಯರ್, ಡಾ. ಗಿರಿಧರ ಕಜೆ, ಡಾ. ಬಿ ಟಿ ರುದ್ರೇಶ್, ಸಂಘದ ಪ್ರಮುಖರಾದ ಶ್ರೀ ಮುಕುಂದ, ಶ್ರೀ ವಿ. ನಾಗರಾಜ್, ಶ್ರೀ ನಾ ತಿಪ್ಪೇಸ್ವಾಮಿ, ಶ್ರೀ ಸುಧೀರ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್ ಯುಡಿಯೂರಪ್ಪ, ಸಚಿವ ಶ್ರೀ ಸುಧಾಕರ್, ಶ್ರೀ ಅರಗ ಜ್ಞಾನೇಂದ್ರ, ಡಾ. ಅಶ್ವತ್ಥನಾರಾಯಣ, ಶ್ರೀ ಮುನಿರತ್ನ, ರಾಷ್ಟ್ರೋತ್ಥಾನ ಪರಿಷತ್ತಿನ ಹಿರಿಯ, ಉತ್ಥಾನ ಮಾಸಪತ್ರಿಕೆಯ ಗೌರವ ಸಂಪಾದಕ ನಾಡೋಜ ಎಸ್ ಆರ್ ರಾಮಸ್ವಾಮಿ, ಪ್ರಮುಖರಾದ ಶ್ರೀ ಅಶೋಕ್, ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶ್ರೀ ನಾ. ದಿನೇಶ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್ತು ಸಾಗಿಬಂದ ಸುದೀರ್ಘ ಪಥದ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಶ್ರೀ ಎಂ.ಪಿ. ಕುಮಾರ್ ಉದ್ಘಾಟನೆಗೊಂಡ ರಾಷ್ಟ್ರೋತ್ಥಾನ ಆಸ್ಪತ್ರೆ ಮೂಡಿಬಂದ ಪರಿಕಲ್ಪನೆ, ಉದ್ದೇಶಗಳ ಬಗ್ಗೆ ವಿವರಿಸಿದರು. ಶ್ರೀ ಸುಧೀರ್ ಪೈ ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ವಿವರಿಸಿದರೆ, ಸಮಗ್ರ ಚಿಕಿತ್ಸೆಯ ಬಗ್ಗೆ ಡಾ. ಸಂಧ್ಯಾ ರವಿ ಮಾಹಿತಿ ನೀಡಿದರು. ಶೃಂಗೇರಿ ಮಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಹಾಗೂ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳ ಅನುಗ್ರಹ ಸಂದೇಶಗಳ ವೀಡಿಯೋಗಳನ್ನು ಪ್ರದರ್ಶಿಸಲಾಯಿತು.

ರಾಷ್ಟ್ರೋತ್ಥಾನ ಪರಿಷತ್ತಿನ ಕೋಶಾಧ್ಯಕ್ಷ ಶ್ರೀ ಕೆ.ಎಸ್. ನಾರಾಯಣ ಸ್ವಾಗತಿಸಿ, ಡಾ. ಕಿಶೋರ್ ಕುಮಾರ್ ವಂದಿಸಿದರು. ರಾಷ್ಟ್ರೋತ್ಥಾನ ಸಾಹಿತ್ಯದ ಶ್ರೀ ವಿಘ್ನೇಶ್ವರ ಭಟ್ ನಿರೂಪಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.