ರಾಷ್ಟ್ರೋತ್ಥಾನ ಸಾಹಿತ್ಯಾಂದೋಲನದ ಅಧ್ಯಯನವಾಗಬೇಕು

ಬೆಂಗಳೂರು ಡಿಸೆಂಬರ್ 7:  “ರಾಷ್ಟ್ರಕವಿ ಕುವೆಂಪುರವರು, ಒಂದು ದೇಶವನ್ನು ಒಟ್ಟುಗೂಡಿಸುವ ಸಾಹಿತ್ಯವೇ ದೈವೀ ಸಾಹಿತ್ಯ ಹಾಗೂ ದೇಶವನ್ನು ಒಡೆಯುವ ಸಾಹಿತ್ಯ ರಾಕ್ಷಸೀ ಸಾಹಿತ್ಯ. ದೇಶವನ್ನು ಒಡೆಯುವ ಸಾಹಿತ್ಯವನ್ನು ತಿರಸ್ಕರಿಸಬೇಕು ಹಾಗೂ ದೇಶವನ್ನು ಕೂಡಿಸುವ ಸಾಹಿತ್ಯ  ಹೆಚ್ಚುಹೆಚ್ಚು ಪ್ರಕಟವಾಗಬೇಕು ಎಂದಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದ ಸಂಗತಿಗಳನ್ನು ಪ್ರತಿಭಾವಂತ ಲೇಖಕರಿಂದ ಬೆಳಕು ಕಾಣಿಸಬೇಕು ಎಂಬುದು ಕುವೆಂಪು ಅವರ ಕನಸಾಗಿತ್ತು. ರಾಷ್ಟ್ರೋತ್ಥಾನ ಸಾಹಿತ್ಯ, ಅಂತಹ ಕನಸನ್ನು ಅನೇಕ ನೆಲೆಗಳಲ್ಲಿ ನನಸು ಮಾಡುತ್ತಾ ಬಂದಿದೆ. ಕನ್ನಡದಲ್ಲಿ ಹೇಗೆ ನವೋದಯ, ದಲಿತ, ಬಂಡಾಯ ಸಾಹಿತ್ಯವನ್ನು ಅಧ್ಯಯನಕ್ಕೆ, ಚರ್ಚೆಗೆ ಹಚ್ಚಿರುವಂತೆ ಕಳೆದ 49 ವರ್ಷಗಳಿಂದ ಪುಸ್ತಕ ಪ್ರಕಟಣೆಯಲ್ಲಿ ತೊಡಗಿರುವ ರಾಷ್ಟ್ರೋತ್ಥಾನದ ಸಾಹಿತ್ಯದ ಆಂದೋಲನದ ಕುರಿತು ಚರ್ಚೆ ನಡೆಯಬೇಕಾದ ಅಗತ್ಯವಿದೆ” ಎಂದು ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಜ್ಯ ಉಪಾಧ್ಯಕ್ಷ ಬಿ.ವಿ. ವಸಂತ್‌ಕುಮಾರ್ ಅವರು ಅಭಿಪ್ರಾಯಪಟ್ಟರು.

LLV_3139

ರಾಷ್ಟ್ರೋತ್ಥಾನ ಸಾಹಿತ್ಯ ಬೆಂಗಳೂರಿನ ಆರ್ ವಿ ಟೀಚರ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ನೌಕಾಘಾತ’ ಮತ್ತು ‘ಗದರ್ ಚಳವಳಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

“ಶತ್ರುಗಳ ಜೊತೆ ಸೇರಿದ ಸ್ವದೇಶಿಯರಿಂದಾಗಿಯೇ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾರತೀಯರಿಗೆ ಹಲವು ಬಾರಿ ಸೋಲುಂಟಾಯಿತು. ಅಲೆಗ್ಸಾಂಡರ್ ಕಾಲದಿಂದಲೂ ಕಂಡುಬರುತ್ತಿರುವುದು ಭಾರತದ ದುರಂತಗಳಲ್ಲೊಂದು. ಅಲೆಕ್ಸಾಂಡರ್‌ನನ್ನು ಎದುರಿಸುವ ಶಕ್ತಿ ಪುರೂರವನಿಗಿತ್ತು. ಆದರೆ ಅಂಬಿ ಎನ್ನುವ ಭಾರತೀಯ ಅಲೆಕ್ಸಾಂಡರ್‌ಗೆ ಸಹಾಯ ಮಾಡಿದ್ದರಿಂದ ಪುರೂರವ ಸೋಲುಂಡ, ಇಂತಹ ಅನೇಕ ಘಟನೆಗಳನ್ನು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಣಬಹುದು. ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕೋಮಗಾತ ಮರು ಮತ್ತು ಗದರ್ ಚಳವಳಿಗಳಲ್ಲಿಯೂ ಇಂತಹದ್ದೇ ಸ್ಥಿತಿಯಿತ್ತು. ಕೃಪಾಳ್ ಸಿಂಗ್ ದ್ರೋಹವೆಸಗಿದ. ಇಂತಹ ದ್ರೋಹಿಗಳು ತಲತಲಾಂತರಗಳಿಂದಲೂ ಹುಟ್ಟಿಕೊಳ್ಳುತ್ತಿರುವುದು ಭಾರತದ ದುರಂತ” ಎಂದರು.

ದೇಶ ಎಂದರೆ ಅನೇಕರಿಗೆ ಉಂಡು ಮಲಗುವ ಛತ್ರ, ವಸತಿ ನಿಲಯ ಹಾಗೂ ಮಣ್ಣಿನ ತುಂಡು. ಆದರೆ ದೇಶವೆಂದರೆ ಜಗಜ್ಜನನಿ, ಜಗನ್ಮಾತೆ, ತಮ್ಮದೇ ವ್ಯಕ್ತಿತ್ವ ಎಂದು ಭಾವಿಸಿದವರಿಂದಲೇ ಸ್ವಾತಂತ್ರ್ಯ ಹೋರಾಟಗಳು ನಡೆದವು. ಬರಗಾಲ, ಪ್ಲೇಗ್‌ಮಾರಿ ಹಾಗೂ ಬ್ರಿಟಿಷರ ದಬ್ಬಾಳಿಕೆಗಳ ನಡುವೆ ನಡೆದ ಕೆಚ್ಚಿನ ಹೋರಾಟಗಳ ಕಥನವನ್ನು ಎರಡೂ ಪುಸ್ತಕಗಳು ಹೊಂದಿವೆ. ಗುಲಾಮರಿಗೆ ಯಾವ ದೇಶದಲ್ಲೂ ಬೆಲೆಯಿಲ್ಲ ಎಂಬುದನ್ನು ನೌಕಾಘಾತ ಪುಸ್ತಕ ಸಾರಿ ಹೇಳುತ್ತದೆ. ಗುರುದೀತ ಸಿಂಗ್‌ನನ್ನು ಜೈಲಿಗಟ್ಟಲು ಕರೆದೊಯ್ಯುವಾಗ 2 ಲಕ್ಷ ಜನರು ಸೇರುತ್ತಾರೆ ಎಂದರೆ ಕೋಮಗಾತ ಎಂಬುದು ವ್ಯಕ್ತಿಯೋರ್ವನ ಹುಂಬತನದ ಸಾಹಸವಲ್ಲ, ಬ್ರಿಟಿಷರ ಸೋಗಲಾಡಿತನವನ್ನು ಹೊರಹಾಕಲು ನಡೆಸಿದ ದಿಟ್ಟತನ ಹಾಗೂ ಪ್ರಜ್ಞಾಪೂರ್ವಕ ಪ್ರಯೋಗ ಎಂಬುದು ದೃಢವಾಗುತ್ತದೆ ಎಂದು ಈ ಎರಡು ಪುಸ್ತಕಗಳ ವಿಶೇಷತೆಗಳನ್ನು ವಿವರಿಸಿದರು.

ಕಾಂಗ್ರೆಸ್, ಗಾಂಧೀ, ನೆಹರೂ ಅವರೇ ಸ್ವಾತಂತ್ರ್ಯ ತಂದುಕೊಟ್ಟರು ಎಂಬುದೇ ಇಂದಿಗೂ ಚಾಲ್ತಿಯಲ್ಲಿದೆ. ರಕ್ತಚೆಲ್ಲಿದ ಅನೇಕ ಕ್ರಾಮತಿಕಾರಿಗಳೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲುಗಾರಿಕೆ ಹೊಂದಿದ್ದಾರೆ ಎಂಬುದು ಮನವರಿಕೆಯಾಗಬೇಕು. ದೇಶ್ಕಾಗಿ ದುಡಿದವರಾರು, ದೇಶದ ವಿರುದ್ಧ ಕೆಲಸಮಾಡಿದವರು ಯಾರು ಎಂಬುದನ್ನು ತಿಳಿಸುವಲ್ಲಿ ಇಂತಹ ಪುಸ್ತಕಗಳು ನೆರವಾಗುತ್ತವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೋ. ಆರ್. ಎಲ್.ಎಂ. ಪಾಟೀಲ್ ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಎಸ್.ಆರ್. ರಾಮಸ್ವಾಮೀ ಅವರು, ದೇಶದೊಳಗಿನ ಅನೇಕ ಸಾಹಸಗಾಥೆಗಳೇ ಭಾರತೀಯ ಯುವಪೀಳಿಗೆಗೆ ಇಂದು ತಿಳಿದಿಲ್ಲ. ಇನ್ನು ವಿದೇಶೀ ನೆಲದಲ್ಲಿ ನಡೆದ ಗದರ್ ಹಾಗೂ ಕೋಮಗಾತ ಮರು ನೌಕಾಪ್ರಕರಣದಂತಹ  ಹೋರಾಟಗಳ ಅರಿವಂತೂ ದೂರದ ಮಾತೇ ಸರಿ ಎಂದು ವಿಷಾದ ವ್ಯಕ್ತಪಡಿಸಿದರು. ಈ ಕೊರತೆಯನ್ನು ತುಂಬುವ ಪ್ರಯತ್ನವನ್ನು ಈ ಪುಸ್ತಕಗಳಲ್ಲಿ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಮೈ.ಚ. ಜಯದೇವ್, ಲೇಖಕ ಚಕ್ರವರ್ತಿ ಸೂಲಿಬೆಲೆ, ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಉತ್ಥಾನ ಮಾಸಪತ್ರಿಕೆಯ ಸಂಪಾದಕ ಕಾಕುಂಜೆ ಕೇಶವ ಭಟ್ಟ್, ರಾಷ್ಟ್ರೋತ್ಥಾನ ಸಾಹಿತ್ಯದ ವಿಘ್ನೇಶ್ ಭಟ್, ಅರುಣ್ ಶೌರಿ ಸಾಹಿತ್ಯ ಮಾಲೆ ಹಾಗೂ ವಾಯ್ಸ್ ಆಫ್ ಇಂಡಿಯಾ ಸಂಚಿಕೆಯ ಗೌರವ ಸಂಪಾದಕ ಮಂಜುನಾಥ ಅಜ್ಜಂಪುರ, ವಿಕ್ರಮ ಮಾಸಪತ್ರಿಕೆಯ ಸಂಪಾದಕ ದು.ಗು. ಲಕ್ಷ್ಮಣ್, ಮಲ್ಲಾರ ಪತ್ರಿಕೆಯ ಸಂಪಾದಕ ಬಾಬು ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.