ಚಿಕ್ಕವಯಸ್ಸಿನಲ್ಲೇ ಲೆಫ್ಟಿನೆಂಟ್ ಆಗಿ ಗುರುತಿಸಿಕೊಂಡಿದ್ದವರು ಸೆಕೆಂಡ್ ಲೆಫ್ಟಿನೆಂಟ್ ಅರುಣ್ ಖೇತರ್ ಪಾಲ್. ಮಹಾಭಾರತದ ಅಭಿಮನ್ಯುವಿನಂತೆಯೇ ಅರುಣ್ ಖೇತರ್ ಪಾಲ್ ಅವರು ಶತ್ರುಗಳ ವಿರುದ್ಧ ಏಕಾಂಗಿಯಾಗಿ ಹೋರಾಡಿದ ಮಹಾನ್ ವೀರ ಎಂಬ ಹೆಗ್ಗಳಿಕೆಯನ್ನು ಗಳಿಸಿದವರು. 1971ರ ಇಂಡೋ-ಪಾಕ್ ಯುದ್ಧದಲ್ಲಿ ಶತ್ರುವಿನ ವಿರುದ್ಧ ಕಾಲಭೈರವನಂತೆ ಹೋರಾಡಿ ದೇಶದ ರಕ್ಷಣೆಗಾಗಿ ಪ್ರಾಣವನ್ನೇ ಒತ್ತೆ ಇಟ್ಟ ಮಹಾವೀರನೀತ. ತನ್ನ ನಿರ್ಭೀತ ನಡೆ ಹಾಗೂ ಹೋರಾಟದ ಕಿಚ್ಚಿನ ಮೂಲಕ ಪಾಕಿಸ್ತಾನದ ಸೇನಾಧಿಕಾರಿಗಳನ್ನು ಬೆರಗಾಗುವಂತೆ ಮಾಡಿದ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಅವರ ಪುಣ್ಯಸ್ಮರಣೆ ಇಂದು.

ಪರಿಚಯ:

ಅರುಣ್ ಖೇತರ್ ಪಾಲ್ ಅವರು ಅಕ್ಟೋಬರ್ 14, 1950 ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದವರು. ಅವರ ತಂದೆ ಎಂ.ಎಲ್ ಖೇತರ್ ಪಾಲ್ ಅವರು ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಆಗಿದ್ದರು. ಇನ್ನು ಅರುಣ್ ಅವರು ಬಾಲ್ಯದಿಂದಲೇ ಮಿಲಿಟರಿಯತ್ತ ಒಲವು ತೋರಿದ್ದರು. ಹೀಗಾಗಿ ಪುಣೆಯ ಸೇನಾ ಶಾಲೆಯಲ್ಲಿ ಶಿಕ್ಷಣ ಮುಗಿಸಿದರು. ಶಾಲೆಯಲ್ಲಿ ಓದಿನಲ್ಲೂ ಕ್ರೀಡೆಯಲ್ಲೂ ಮುಂದಿದ್ದ ಇವರು ಶಾಲಾ ಅತ್ಯುತ್ತಮ ವಿದ್ಯಾರ್ಥಿಯೂ ಆಗಿದ್ದರು. 1967 ರಲ್ಲಿ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ಸೇರುತ್ತಾರೆ. ಜೂನ್ 13, 1971ರಲ್ಲಿ ಪೂನಾ ಹಾರ್ಸ್ ರೆಜಿಮೆಂಟ್ ನಲ್ಲಿ ಕರ್ತವ್ಯಕ್ಕೆ ಹಾಜಾರಾದರು. ಅವರು ಸೇನೆಗೆ ಸೇರಿದ ಕೆಲವೇ ತಿಂಗಳಲ್ಲಿ ಯುದ್ಧದಲ್ಲಿ ಪಾಲ್ಗೊಳ್ಳುವಂತಾಯಿತು.


1971ರ ಯುದ್ಧ:
1971 ರ ಇಂಡೋ –ಪಾಕಿಸ್ತಾನ ಯುದ್ಧದ ಸಮಯದಲ್ಲಿ ‘ಬಿ’ ಸ್ಕ್ವಾಡ್ರನ್‌ನ ಕಮಾಂಡರ್ ಪಾಕಿಸ್ತಾನ ಸೇನೆಯನ್ನು ಎದುರಿಸಲು ಸೇನೆಯನ್ನು ಬಲಪಡಿಸಲು ಕೇಳಿಕೊಂಡರು. ರೇಡಿಯೋ ಪ್ರಸರಣದ ಮೂಲಕ ಈ ಸುದ್ದಿಯನ್ನು ಕೇಳಿದ ‘ಎ’ ಸ್ಕ್ವಾಡ್ರನ್‌ನಲ್ಲಿದ್ದ ಎರಡನೇ ಲೆಫ್ಟಿನೆಂಟ್ ಅರುಣ್ ಖೇತರ್‌ಪಾಲ್ ಶಾಕರ್ ಗರ್ ಸೆಕ್ಟರ್ ನಲ್ಲಿದ್ದ ಬಿ ಸ್ಕ್ವಾಡ್ರನ್‌ಗೆ ಸಹಾಯ ಮಾಡಲು ಸ್ವಯಂಪ್ರೇರಣೆಯಿಂದ ತನ್ನ ಸೈನ್ಯದೊಂದಿಗೆ ತೆರಳಿದರು. ಮಾರ್ಗಮಧ್ಯೆ ಬಸಂತರ್ ನದಿಯನ್ನು ದಾಟುತ್ತಿರುವಾಗ, ಎರಡನೇ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಮತ್ತು ಅವರ ಸೈನ್ಯವು ಶತ್ರುಗಳ ಪ್ರಬಲ ದಾಳಿಯನ್ನು ಎದುರಿಸಬೇಕಾಯಿತು. ಶತ್ರುಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ಬಿ ಸ್ಕ್ವ್ಯಾಡ್ರನ್ ನ ಸ್ಥಳವನ್ನು ತಲುಪಿ ಅಲ್ಲಿಂದ ಮತ್ತೆ ಯುದ್ಧದಲ್ಲಿ ತೊಡಗಿಕೊಂಡರು.


ಪಾಕಿಸ್ತಾನದ ಸೈನಿಕರಿಗೆ ಸೆಕೆಂಡ್ ಲೆಫ್ಟಿನೆಂಟ್ ಅರುಣ್ ಅವರು ತಮ್ಮ ತಂಡದ ಸಾಮರ್ಥ್ಯದ ಪರಿಚಯವನ್ನು ಬಹಳ ತೀಕ್ಷ್ಣವಾಗಿ ಮಾಡಿಕೊಟ್ಟರು. ಶತ್ರುಗಳ ಹತ್ತು ಟ್ಯಾಂಕರ್ ಗಳು ನೋಡುನೋಡುತ್ತಿದಂತೆ ಸುಟ್ಟು ಭಸ್ಮವಾದವು. ಹತ್ತರಲ್ಲಿ 4 ಟ್ಯಾಂಕರ್ ಅನ್ನು ಲೆಫ್ಟಿನಂಟ್ ಅರುಣ್ ಅವರು ಏಕಾಂಗಿಯಾಗೇ ಧ್ವಂಸಗೊಳಿಸಿದರು. ನಿರಂತರ ದಾಳಿಯ ಚಕಮಕಿಯಲ್ಲಿ ಅರುಣ್ ಅವರ ಸ್ಕ್ವಾಡ್ರ್ಯಾನ್ ನ ಕಮಾಂಡರ್ ಮರಣವನ್ನಪ್ಪಿದರು. ಏಕಾಂಗಿಯಾಗಿ ಎರಡನೇ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಶತ್ರುಗಳ ವಿರುದ್ಧ ಮುಗಿಬಿದ್ದರು. ಈ ಸಂದರ್ಭದಲ್ಲಿ ಶತ್ರುಗಳ ದಾಳಿಗೆ ಗಂಭೀರವಾಗಿ ಗಾಯಗೊಂಡ ಅರುಣ್ ಅವರಿಗೆ ಹಿಂತಿರುಗುವಂತೆ ಆದೇಶಿಸಲಾಯಿತು. ಆದರೆ ಶತ್ರುಗಳ ವಿರೋಧವನ್ನು ಜಯಿಸುವವರೆಗೂ ಪಟ್ಟುಬಿಡದೆ ದಾಳಿಯನ್ನು ಮುಂದುವರೆಸಿದರು. ತಮ್ಮ ಸೆಂಚುರಿಯನ್ ಟ್ಯಾಂಕ್ ‘ಫಮಗಸ್ತಾ’ ದ ಮೇಲೆ ಶೆಲ್ ದಾಳಿ ಆಗುವ ಮುನ್ನ ಮತ್ತೊಂದು ಶತ್ರು ಟ್ಯಾಂಕ್ ಅನ್ನು ಧ್ವಂಸಗೊಳಿಸಿ ವೀರಮರಣವನ್ನು ಹೊಂದಿದರು.


ಗೌರವ ಮತ್ತು ಪ್ರಶಸ್ತಿ:

ನ್ಯಾಶನಲ್ ಡಿಫೆನ್ಸ್ ಅಕಾಡೆಮಿ (NDA) ಯಲ್ಲಿನ ಪರೇಡ್ ಮೈದಾನಕ್ಕೆ ಖೇತರ್‌ಪಾಲ್ ಮೈದಾನ ಎಂದು ಹೆಸರಿಸಲಾಗಿದೆ. ಅರುಣ್ ಖೇತರ್ ಪಾಲ್ ಅವರ ಸೆಂಚುರಿಯನ್ ಟ್ಯಾಂಕ್ ಫಮಗಸ್ತಾ Jx 202 ಅನ್ನು ಯುದ್ಧದ ನಂತರ ಪುನಃಸ್ಥಾಪಿಸಲಾಯಿತು. ಅಷೇ ಅಲ್ಲದೇ ಅವರ ಕುರಿತು ‘ಇಕ್ಕೀಸ್’ ಎಂಬ ಬಯೋಪಿಕ್ ಸಿನಿಮಾವಾಗಿ ಬಿಡುಗಡೆಯಾಗಿತ್ತು.1971ರ ಯುದ್ಧದಲ್ಲಿ ಶೌರ್ಯ ಮೆರೆದು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಲೆಫ್ಟಿನೆಂಟ್ ಅರುಣ್ ಅವರಿಗೆ ಭಾರತೀಯ ಸೇನೆಯ ಸರ್ವೋಚ್ಚ ಪುರಸ್ಕಾರವಾದ ಪರಮವೀರ ಚಕ್ರ ಪ್ರಶಸ್ತಿಯನ್ನು ನೀಡಲಾಯಿತು.

ಅರುಣ್ ಖೇತರ್ ಪಾಲ್ ಅವರು ಡಿಸೆಂಬರ್ 16, 1971 ರಂದು ತಮ್ಮ 21ನೇ ವಯಸ್ಸಿನಲ್ಲಿ ಹುತಾತ್ಮರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.