ಇಂದು ಪುಣ್ಯ ಸ್ಮರಣೆ


ಅನತಂಚಿ ಯಶೋಧಾ( ಅನಾಥರ ಸಂರಕ್ಷಕಿ – ತಾಯಿ) ಎಂದೇ ಹೆಸರುವಾಸಿಯಾಗಿದ್ದ ಸಿಂಧೂತಾಯಿ ಸಪ್ಕಾಲ್ ಅವರು ಅನಾಥ ಹಾಗೂ ನಿರ್ಗತಿಕರ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಸಮಾಜ ಸೇವೆಯಿಂದಲೇ ಇವರು ಹೆಚ್ಚು ಜನಮನ್ನಣೆ ಗಳಿಸಿದವರು. ಅನೇಕ ಕಷ್ಟಕರ ಸಂದರ್ಭಗಳನ್ನು ಎದುರಿಸುತ್ತಿದ್ದಾಗಲೂ ಸಾವಿರಾರು ಅನಾಥ ಮಕ್ಕಳನ್ನು ಆರೈಕೆ ಮಾಡಿ ಮೆಚ್ಚುಗೆಗೆ ಪಾತ್ರರಾದವರು. ಇಂದು ಅವರ ಪುಣ್ಯಸ್ಮರಣೆ.


ಪರಿಚಯ
ಸಿಂಧೂತಾಯಿ ಅವರು ನವೆಂಬರ್ 14, 1948ರಲ್ಲಿ ಮಹಾರಾಷ್ಟ್ರದ ವರ್ಧಾ ಜಿಲ್ಲೆಯಲ್ಲಿ ಜನಿಸಿದರು. ಇವರು 4ನೇ ತರಗತಿಗೆ ಶಾಲೆಯನ್ನು ತ್ಯಜಿಸಬೇಕಾಯಿತು. ನಂತರ ತಮ್ಮ 12 ನೇ ವಯಸ್ಸಿನಲ್ಲಿ 32 ವರ್ಷದ ವ್ಯಕ್ತಿಯೊಂದಿಗೆ ವಿವಾಹವಾಗಿ ಮೂರು ಮಕ್ಕಳಿಗೆ ಜನ್ಮ ನೀಡಿದರು. ಆದರೆ ನಾಲ್ಕನೇ ಮಗು ಹೊಟ್ಟೆಯಲ್ಲಿದ್ದಾಗ ಪತಿ ಇವರನ್ನು ಅನುಮಾನಿಸಿ, ಹಲ್ಲೆಗೈದು ಮನೆಯಿಂದ ಹೊರಹಾಕಿದರು. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ತವರು ಮನೆಯವರೂ ಸಹ ಕೈ ಹಿಡಿಯಲಿಲ್ಲ, ಬದಲಾಗಿ ಭಿಕ್ಷೆ ಬೇಡುವಂತೆ ಹೇಳಿ ಹೊರಗಟ್ಟಿದ್ದರು. ಆದರೆ ನಂತರ ಇದೆಲ್ಲ ಕಷ್ಟಗಳನ್ನು ಎದುರಿಸಿ, ತಮ್ಮದೇ ದಾರಿ ಕಂಡುಕೊಂಡರು.


ಜೀವನ
ಸಿಂಧೂತಾಯಿ ಸಪ್ಕಾಲ್ ಅವರು ತಮ್ಮ ಮಕ್ಕಳ ಹಸಿವು ನೀಗಿಸುವ ಸಲುವಾಗಿ ರೈಲ್ವೆ ನಿಲ್ದಾಣಗಳಲ್ಲಿ ಹಾಡುತ್ತ ಭಿಕ್ಷೆ ಬೇಡುತ್ತಿದ್ದರು. ರಾತ್ರಿ ರಸ್ತೆ ಪಕ್ಕದಲ್ಲಿ ಮಲಗಿದರೆ ದುಷ್ಟರಿಂದ ತೊಂದರೆಯಾಗಬಹುದು ಎಂದು ಹೆದರಿ ಸ್ಮಶಾನದಲ್ಲಿ ರಾತ್ರಿವಿಡೀ ಕಳೆಯುತ್ತಿದ್ದರು. ಒಂದೆರಡು ದಿನ ಅಲ್ಲಿ, ಇಲ್ಲಿ ಭಿಕ್ಷೆ ಬೇಡಿದರು. ಬದುಕುವುದು ಅಂದುಕೊಂಡಷ್ಟು ಸುಲಭವಿರಲಿಲ್ಲ. ಸಾಕು ಈ ಜೀವನ ಎಂದು ಒಮ್ಮೆ ಸಾಯುವುದಕ್ಕೆ ನಿರ್ಧರಿಸಿ, ಮರದ ಕೆಳಗೆ ನಿಂತಿದ್ದರು. ಆ ಮರವೇ ಅವರಿಗೆ ಬದುಕಲು ಆದರ್ಶವಾಯಿತು. ಮರದಂತೆ ಅದೆಷ್ಟೋ ಜನರಿಗೆ ನೆರಳು ನೀಡಲು ನಿರ್ಧರಿಸಿದರು. ಅಲ್ಲಿಂದ ಪ್ರಾರಂಭವಾಯಿತು ಈ ತಾಯಿಯ ಯಶೋಗಾಥೆ. ನೆರಳು ಬಯಸಿ ಬಂದವರಿಗೆಲ್ಲಾ ಆಲದ ಮರದಂತೆ ಆಶ್ರಯದಾತೆಯಾದರು.


ಸಾಮಾಜಿಕ ಕಾರ್ಯ
1986 ರಲ್ಲಿ ಸಿಂಧುತಾಯಿ ಹೋರಾಟದ ಅವಧಿಯಲ್ಲಿ “ವನವಾಸಿ ಗೋಪಾಲಕೃಷ್ಣ ಬಹುದೇಶೀಯ ಮಂಡಲ್” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅವರು ಸಂಸ್ಥೆಯ ಭವಿಷ್ಯದ ಸಂಪನ್ಮೂಲಗಳಿಗಾಗಿ ಒಂದು ಎಕರೆ ಭೂಮಿಯನ್ನು ಖರೀದಿಸಿದರು. ಅವರು ತನ್ನ ಭವಿಷ್ಯದ ಯೋಜನೆಯನ್ನು ಈ ಸ್ಥಳದಲ್ಲಿ ಪ್ರಾರಂಭಿಸಲು ನಿರ್ಧರಿಸಿದರು.

ಸಿಂಧುತಾಯಿ ತನ್ನ ಇಡೀ ಜೀವನವನ್ನು ಅನಾಥರಿಗಾಗಿ ಮುಡಿಪಾಗಿಟ್ಟಿದ್ದರು ಅನಾಥರ ಪಾಲಿಗೆ ಪ್ರೀತಿಯ ‘ಮಾಯಿ’ (ತಾಯಿ) ಆಗಿದ್ದರು. 1050 ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ಪೋಷಿಸಿದ್ದಾರೆ. ಅವರು ಪೋಷಿಸಿದ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದರು. ಆಶ್ರಯವಿಲ್ಲದವರಿಗೆ ಆಸರೆಯಾದ ಇವರ ಕೆಲಸವನ್ನು ಗುರುತಿಸಿ 750 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯಿಂದ ಬಂದ ಹಣವನ್ನು ತಮ್ಮ ಅನಾಥ ಮಕ್ಕಳಿಗೆ ಮನೆ ನಿರ್ಮಿಸಲು ಭೂಮಿಯನ್ನು ಖರೀದಿಸಲು ಬಳಸಿ, ಶಾಶ್ವತ ನೆಲೆಯನ್ನು ಕಲ್ಪಿಸಿದರು.


ಪ್ರಶಸ್ತಿ
ಸಿಂಧುತಾಯಿ ಅವರ ವ್ಯಾಪಕವಾದ ಸಾಮಾಜಿಕ ಕಾರ್ಯವನ್ನು ಗುರುತಿಸಿ 900ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ. 2013 ರಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಮದರ್ ತೆರೇಸಾ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. 2016 ರಲ್ಲಿ ಸಾಹಿತ್ಯದಲ್ಲಿ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. 2018 ರ ಅಂತರರಾಷ್ಟ್ರೀಯ ಮಹಿಳಾ ದಿನದಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮಹಿಳಾ ಸಾಧಕರಿಗೆ ನಾರಿ ಶಕ್ತಿ ಪುರಸ್ಕಾರವನ್ನು ನೀಡಿ ಗೌರವಿಸಿದರು. 2021 ರಲ್ಲಿ ಸಮಾಜ ಕಾರ್ಯ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು.

ಜನವರಿ 5, 2022 ರಲ್ಲಿ ಸಿಂಧುತಾಯಿ ಹೃದಯಾಘಾತದಿಂದ ವಿಧಿವಶರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.