NH-17

by ಸಂತೋಷ್ ತಮ್ಮಯ್ಯ  (ಇಂದಿನ ಹೊಸದಿಗಂತ ದಲ್ಲಿ ಪ್ರಕಟಗೊಂಡ ಲೇಖನ )

ತನ್ನ ಪಾಡಿಗೆ ತಾನು ಹೊದ್ದು ಮಲಗಿರುವಂತೆ ಕಾಣುವ ಹೆದ್ದಾರಿಗಳಿಗೆ ಒಂದೊಮ್ಮೆ ಮಾತು ಬಂದುಬಿಟ್ಟರೆ, ಅವೂ ಬಾಯಿಬಿಟ್ಟು ಮಾತಾಡಲಾರಂಭಿಸಿದರೆ ಅವು ಎಷ್ಟೊಂದು ರಟ್ಟು ಮಾಡಬಹುದು? ತಾನು ಬಚ್ಚಿಟ್ಟುಕೊಂಡಿದ್ದನ್ನು ಹೇಗೆಲ್ಲಾ ಬಿಚ್ಚಿಡುತ್ತಾ ಹೋಗಬಹುದು? ಏಕೆಂದರೆ ಹೆದ್ದಾರಿಗಳಿಗೆ ಎಲ್ಲವೂ ಗೊತ್ತಿರುತ್ತವೆ. ಎಲ್ಲರ ಬದುಕಿನ ಚಿತ್ರಣವನ್ನೂ ಅದು ಒಡಲಲ್ಲಿಟ್ಟುಕೊಂಡಿರುತ್ತದೆ. ಒಂದು ಸಮಾಜದ ವ್ಯವಸ್ಥೆಯ ಅಂತರಾಳವನ್ನೇ ಅದು ತಿಳಿದಿರುತ್ತದೆ. ಎಲ್ಲರ ಸತ್ಯವನ್ನೂ ಅದು ತಿಳಿದಿರುತ್ತದೆ. ಏಕೆಂದರೆ ಎಲ್ಲರೂ ಅದರಲ್ಲಿ ಹಾದು ಹೋಗಿರುವವರೇ. ಒಂದರ್ಥದಲ್ಲಿ ಹೆದ್ದಾರಿ ಎಂಬುವುದು ನಾಗರಿಕತೆ ಎಂಬುದರ ಪರ್ಯಾಯ ಪದವೇ. ಹೇಗೆ ಗಡಿ ಎಂಬುವುದು ದಾಟುವ ಪ್ರಕ್ರಿಯೆಯೋ ಹಾಗೆಯೇ ಹೆದ್ದಾರಿ ಎಂಬುವುದು ಸಾಗಿ ಬೆಳೆಯುವ, ಗುರಿ ಮುಟ್ಟಿಸುವ ಪ್ರಕ್ರಿಯೆ. ಈ ಅರ್ಥದಲ್ಲಿ ದಾರಿಗಳು , ಹೆದ್ದಾರಿಗಳು ಎಲ್ಲವೂ ಒಂದೇ. ಎಲ್ಲದಕ್ಕೂ ಒಂದು ಕೊನೆ ಇದೆ. ಕೊನೆಯಾಗದ ದಾರಿಗಳೆಂಬುದೇ ಇಲ್ಲ. ಹಾಗಾಗಿ ದಾರಿಗಳು ಯಾವತ್ತಿಗೂ ಜೀವನ ನಿರ್ಧಾರಕಗಳಾಗಿರುತ್ತವೆ. ಇವೆಲ್ಲವೂ ತತ್ತ್ವ ಶಾಸ್ತ್ರ ಸಂಬಂಧೀ ವಿಚಾರಗಳು.

NH-17

ಆದರೆ ಹೆದ್ದಾರಿಯೊಂದು ಬಾಯಿ ಬಿಟ್ಟಿದ್ದೇ ಆದರೆ ಎಂದಾಗ ಮೊದಲಿಗೆ ನೆನಪಿಗೆ ಬರುವುದು ಎನ್. ಹೆಚ್  17 ಎಂಬ ಹೆದ್ದೆರೆಯಂಚಿನ ಹೆದ್ದಾರಿ. ಸಾವಿರಾರು ಕಿ. ಮೀ ದೂರಕ್ಕೆ ಸಾಗುವ ಅಥವಾ ಸಾಗಿಸುವ ಈ ಹೆದ್ದಾರಿ ಬಹುತೇಕ ನೇರಾನೇರ. ಪಶ್ಚಿಮ ಕರಾವಳಿಯ ಉದ್ದಕ್ಕೆ ಸಮುದ್ರದಂಚಿನಲ್ಲಿ ಹರಿಯುವ ನದಿಯಂತೆ ಕಾಣುವ ರಾಜಮಾರ್ಗ ಈ ಎನ್. ಹೆಚ್ ೧೭. ಪಶ್ಚಿಮ ಘಟ್ಟದ ಬದಿಯಲ್ಲೇ ಸಾಗಿ ಭಾರತದ ಉತ್ತರ ಮತ್ತು ದಕ್ಷಿಣವನ್ನು ಜೋಡಿಸುವ ಕೊಂಡಿ 17 ನೇ ನಂಬರಿನ ಈ ರಾಷ್ಟ್ರೀಯ ಹೆದ್ದಾರಿ. ಉದ್ದ ಬರೋಬ್ಬರಿ 1299 ಕಿ. ಮೀ. ಕೇರಳದ ಕೊಚ್ಚಿನ್ ಸಮೀಪದ ಎಡಪಳ್ಳಿಯಿಂದ ಆರಂಭವಾಗಿ ಕರ್ನಾಟಕವನ್ನು ದಾಟಿ, ಗೋವಾವನ್ನು ಸ್ಪರ್ಶಿಸಿ, ಮಹಾರಾಷ್ಟ್ರದ ಪನ್‌ವೇಲ್ ಅನ್ನು ಮುಟ್ಟುವ ಈ ಹೆದ್ದಾರಿ ದೇಶದಲ್ಲೇ 7 ನೇ ಅತೀ ಉದ್ದದ ರಾಷ್ಟ್ರೀಯ ಹೆದ್ದಾರಿ. ಅದರ ಉದ್ದ -ಅಗಲಗಳು, ಸೌಂದರ್ಯಗಳೂ ಅದರ ಮಹತ್ತ್ವವನ್ನು ಖಂಡಿತಾ ಹೇಳಲಾರವು. ಅದು ಅರ್ಥವಾಗುವುದು ಹೆದ್ದಾರಿ ಹೇಳಬಹುದಾದ ಕಥೆಗಳ ಹಿಂದೋಡುವುದರಿಂದ. ಏಕೆಂದರೆ ಅದು ಸಾಗುವ ದಾರಿಯುದ್ದಕ್ಕೂ ಸಾಲು ಸಾಲು ಕಥೆಗಳಿವೆ. ಚಿತ್ರ ವಿಚಿತ್ರವಾದ, ಬೀಭತ್ಸವಾದ ಕಥೆಗಳೇ ಈ ಎನ್. ಹೆಚ್ 17ನ ಬದಿಯಲ್ಲಿವೆ. ಈ ಹೆದ್ದಾರಿ ತನ್ನ ದಾರಿಯುದ್ದಕ್ಕೂ ವಿಪರೀತವಾದ ಸಾಮಾಜಿಕ, ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಉಂಟುಮಾಡುತ್ತಾ ಸಾಗುತ್ತದೆ. ಹಾಗಾಗಿ ಹದಿನೇಳನೆ ನಂಬರಿನ ಈ ಹೆದ್ದಾರಿ ಉಳಿದ ಹೆದ್ದಾರಿಗಳಂತಲ್ಲ ಎಂದೇ ಅನಿಸುತ್ತದೆ. ಎಡಪಳ್ಳಿ – ಕೊಚ್ಚಿನ್ – ಪಳ್ಳಿಪುರಂ – ತ್ರಿಶ್ಯೂರ್- ಪೊನ್ನಾನಿ – ವಳಕ್ಕುಳಂ– ಕೋಯಿಕ್ಕೋಡ್- ವಡಕ್ಕರ – ತಲಶ್ಯೇರಿ- ಕಣ್ಣೂರು – ಕಾಸರಗೋಡು – ಮಂಗಳೂರು- ಮುಲ್ಕಿ – ಕುಂದಾಪುರ – ಭಟ್ಕಳ – ಹೊನ್ನಾವರ – ಕುಮಟಾ – ಗೋವಾದಾಚೆಗೆ ಸಾಗುವ ಈ ಹೆದ್ದಾರಿಗೂ ಅದರ ಬದಿಯ ಊರುಗಳಿಗೂ ಅವಿನಾಭಾವ ಸಂಬಂಧ.

Hindu temples were targeted, Buffalo skull was thrown in Temple premises recently at Kasaragod City

ಈ ಹೆದ್ದಾರಿಯಲ್ಲಿ ಸಂಚಲನಗಳು ಆರಂಭವಾಗದೆ ಈ ಊರುಗಳ ಜನಜೀವನ ಪ್ರಾರಂಭವಾಗುವುದಿಲ್ಲ. ಅಂದರೆ ಕೆಲವು ಊರುಗಳಿಗೆ ಎನ್. ಹೆಚ್ ೧೭ ಬೆಳಗು ಮಾಡುವ ಕೋಳಿಯಂತೆ. ಹಾಗಾಗಿ ಇದಕ್ಕೆ ಬಾಯಿ ಬಂದುಬಿಟ್ಟರೆ ಕಥೆ ಹೇಳಲು ವರ್ಷಗಳೇ ಬೇಕಾಗಬಹುದು. ಕೇರಳದಿಂದೊಮ್ಮೆ ಈ ಹೆದ್ದಾರಿಯಲ್ಲಿ ಪಯಣಿಸಿ ಹೆದ್ದಾರಿಯೊಡನೆ ಮೂಕವಾಗಿ ಸಂಭಾಷಿಸಿದರೆ ಅದು ಏನನ್ನೋ ಹೇಳಲು ಹವಣಿಸುತ್ತಿರುವಂತೆ ಭಾಸವಾಗದಿರದು. ಹೆದ್ದಾರಿ ಆರಂಭವಾಗುವ ಎಡಪಳ್ಳಿಯಿಂದಲೇ ಹಳೆಯದಾದ ಹಾಡೊಂದು ಹೆದ್ದಾರಿಗೆ ಕೇಳುತ್ತವೆ. ಅದು ಹೆದ್ದೆರೆಗಳ ಹೇಶಾರವಕ್ಕಿಂತಲೂ ಭೀಕರವಾದುದು. ಹೆದ್ದೆರೆಯ ಸದ್ದುಗಳ ನಡುವೆಯೇ ಅದು ದಾಟಿ ಬರುವುದು. “ ನಮ್ಮಳ್ ಕೊಯ್ಯುಂ ವಯಲೆಲ್ಲಾಂ ನಮ್ಮುಡೆದಾವು ಪೈಂಗಿಳಿಯೇ” ಎಂಬ ಆ ಕಮ್ಯುನಿಸ್ಟ್ ಗೀತೆ ಇನ್ನೂ ಕೀರಲು ಕೀರಲಾಗಿ ಹೆದ್ದಾರಿಯವರೆಗೂ ಕೇಳಿಬರುತ್ತಲೇ ಇದೆ. ಈ ಕಮ್ಯುನಿಸ್ಟರು ಗದ್ದೆಯನ್ನು ಕೊಯ್ದರೋ ಬಿಟ್ಟರೋ ದಾಖಲೆಯಿಲ್ಲ. ಆದರೆ ತನ್ನನ್ನೊಪ್ಪದವರ ಕುತ್ತಿಗೆಯನ್ನಂತೂ ಸಲೀಸಾಗಿ ಕೊಯ್ದರು. ಚಿಲ್ಲನೆ ಚಿಮ್ಮಿದ ರಕ್ತ ಇದೇ ಹೆದ್ದಾರಿಯಲ್ಲಿ ಹರಿಯಿತು. ಇಂಥ ನರಮೇಧಕ್ಕೆ ಕಮ್ಯುನಿಸ್ಟರು ಪೈಂಗಿಳಿಯ ರೂಪಕವನ್ನು ಕೊಟ್ಟುಬಿಟ್ಟಿದ್ದರು. ಕೊಚ್ಚಿನ್, ತ್ರಿಶ್ಯೂರ್ ಮತ್ತು ಕಣ್ಣೂರು ಜಿಲ್ಲೆಗಳ ಉದ್ದಕ್ಕೂ ಹೆದ್ದಾರಿ ಕಾಣುವುದು ಇಂಥ ರಕ್ತದ ಕಲೆಗಳನ್ನೇ. ದಾರಿ ಬದಿಯಲ್ಲಿ ಬೃಹತ್ತಾದ ಕತ್ತಿ ಕುಡುಗೋಲು ಚಿತ್ರದ ಕೆಂಪು ಬಾವುಟಗಳು. ಐಶಾರಾಮಿ ಮಹಲುಗಳಂತಿರುವ ಕಮ್ಯುನಿಸ್ಟ್ ಕಚೇರಿಗಳು. ಅದಕ್ಕೆ ಬಂದು ಹೋಗುವುದು ಎರಡೇ ಎರಡು ವಿಧದ ಜನರು. ಒಬ್ಬರು ಬಡ ಬೀಡಿ ಕಾರ್ಮಿಕರು, ಇನ್ನೊಬ್ಬರು ನಿರಂತರ ತಿರುವನಂತಪುರ ಪ್ರವಾಸ ಮಾಡುತ್ತಿರುವ ದೊಡ್ಡ ಹೊಟ್ಟೆಯ ಪಕ್ಷದ ವರಿಷ್ಠರು ವೈಭವೋಪೇತವಾದ ಕಾರುಗಳಲ್ಲಿ ಬಂದಿಳಿಯುವವರು. ದೊಡ್ಡವರೆಲ್ಲರೂ ವಿನಾ ಕಾರಣ ಉರಿಕಾರುತ್ತಾ ಭಾಷಣ ಮಾಡುತ್ತಾರೆ. ಕತ್ತು ಕುಯ್ಯಲು ಪ್ರಚೋದನೆ ನೀಡುತ್ತಾರೆ. ವೃತ್ತಿಪರ ಗೂಂಡಾಗಳು ಅದನ್ನು ನೆರವೇರಿಸುತ್ತಾರೆ. ಇವನ್ನೆಲ್ಲಾ ಮೌನವಾಗಿ ದಿಟ್ಟಿಸುವ ಹೆದ್ದಾರಿ ‘ಇವರೆಲ್ಲಾ ಬಿತ್ತಿರುವುದೇನನ್ನು? ಬೆಳೆಯುತ್ತಿರುವುದೇನನ್ನು?’ ಎಂದು ಸಂಶಯ ಪಡುತ್ತದೆ. ಆದರೆ ಹೆದ್ದಾರಿಗೆ ಬಾಯಿ ಇಲ್ಲ. ಅದು ಪ್ರಶ್ನೆ ಕೇಳುವುದಿಲ್ಲ. ಪ್ರಶ್ನೆ ಕೇಳುವ ಯಾರನ್ನೇ ಆದರೂ ಕೆಂಪು ಬಾವುಟದವರು ಸುಮ್ಮನೆ ಬಿಡುವುದೂ ಇಲ್ಲ. ಹಾಗಾಗಿ ಬಾಯಿ ಇಲ್ಲದ ಹೆದ್ದಾರಿ ಉಳಿದುಕೊಂಡಿದೆ.

ಹೀಗೇ ಒಮ್ಮೆ ಪೈಂಗಿಳಿಯ (ಅರಗಿಣಿ) ಹಾಡುಗಾರರ ಬಗ್ಗೆ ಎಚ್ಚರದಿಂದಿರಿ ಎಂದಿದ್ದ ಒಬ್ಬರ ಕಾಲನ್ನೇ ಗರಗಸದಿಂದ ಕತ್ತರಿಸಲಾಗಿತ್ತು. ತೊಡೆಯಿಂದ ಬೇರ್ಪಟ್ಟ ಕಾಲನ್ನು ಇದೇ ಎನ್. ಹೆಚ್ ೧೭ ರ ದೊರಗು ಡಾಂಬರು ರಸ್ತೆಗೆ ನಿಷ್ಕಾರುಣವಾಗಿ ಗರಗರ ಉಜ್ಜಲಾಗಿತ್ತು. ತುಂಡಾಗಿ ಬೇರ್ಪಟ್ಟ ಕಾಲು ಮತ್ತೆ ಜೊತೆಯಾಗಲೇಬಾರದೆಂದು. ಗಿಣಿ ಹಾಡುಗಾರರೆಂದರೆ ಹಾಗೆಯೇ. ಅವರು ಮನುಷ್ಯ ಜೀವವನ್ನೂ ಬಾಲ್ ಪೆನ್ನಿನ ನಿಬ್ ಎಂದೇ ತಿಳಿದುಬಿಡುತ್ತಾರೆ. ಉಜ್ಜಿದ ಕಾಲುಗಳಿಂದ ಹರಿದ ರಕ್ತದ ಮೇಲೆ ಎಷ್ಟೋ ವಾಹನಗಳು ಹಾದುಹೋಗಿವೆ. ರಕ್ತದ ಕಲೆಗಳೂ ಇಂದಿಲ್ಲ. ಆದರೆಅಂದಿನ ಕ್ರೌರ್ಯವನ್ನು ಹೆದ್ದಾರಿ ಎಂದಾದರೂ ಮರೆತೀತೇ? ಇನ್ನೊಮ್ಮೆ ಇದೇ ಹೆದ್ದಾರಿಯಲ್ಲಿ ಅದೇ ಗಿಣಿ ಹಾಡುಗಾರರನ್ನು ವಿರೋಧಿಸುತ್ತಿದ್ದ ಒಬ್ಬರನ್ನು ಹಿಡಿದು ಕೈಕಾಲು ಕಟ್ಟಲಾಯಿತು. ಕೆಂಪು ಬಾವುಟದ ಕಚೇರಿಯಿಂದ ತರಲಾದ ಕಾರ್ಕೋಟಕದಂಥ ವಿಷವನ್ನು ಅವರ ಮೂಗನ್ನು ಹಿಡಿದು ಬಾಯಿಗೆ ಸುರಿಯಲಾಯಿತು. ಅರ್ಧ ತಾಸು ದೇಹ-ಪ್ರಾಣ-ಆತ್ಮಗಳ ಒದ್ದಾಟವನ್ನು ನೋಡಿ ಗಿಣಿ ಹಾಡುಗಾರ ಕೆಂಪು ಜನರು ಖುಷಿ ಪಟ್ಟರು. ಆ ರಾಷ್ಟ್ರೀಯವಾದಿಯ ದೇಹ ನಿಶ್ಚಲವಾದ ಮೇಲೆ ಇದೇ ಹೆದ್ದಾರಿಯ ಚರಂಡಿಗೆ ಎಸೆಯಲಾಯಿತು. ಪೊಲೀಸರು ಇದು ವಿಷ ಸೇವಿಸಿ ಮಾಡಿಕೊಂಡ ಆತ್ಮಹತ್ಯೆ ಎಂದರು. ಆದರೆ ಹೆದ್ದಾರಿಗೆ ಎಲ್ಲವೂ ಗೊತ್ತಿತ್ತು.

ಇನ್ನೊಮ್ಮೆ ಒಬ್ಬಾಕೆ ಅಮ್ಮ ಸಂಘದ ಶಾಖೆಗೆ ತೆರಳಿದ ಮಕ್ಕಳು ಮರಳಿ ಬಂದು ತಿನ್ನಲಿ ಎಂದು ಮರಗೆಣಸು ತರಲು ಇದೇ ಹೆದ್ದಾರಿ ಬದಿಯ ಅಂಗಡಿಗೆ ಹೋಗಿದ್ದಳು. ಆಕೆಯನ್ನೂ ಬಿಡಲಿಲ್ಲ ಈ ಗಿಣಿ ಹಾಡುಗಾರರು. ಜೀಪೊಂದನ್ನು ರಭಸದಿಂದ ನುಗ್ಗಿಸಿದರು. ಉಪ್ಪಿಟ್ಟು ಮಾಡಬೇಕಾಗಿದ್ದ ಮರಗೆಣಸು ಹೆದ್ದಾರಿಯಲ್ಲಿ ಉರುಳಿತ್ತು. ಪೊಲೀಸರು ಬಂದರು. ಭೀಕರ ರಸ್ತೆ ಅಪಘಾತ ಎಂದು ಬರೆದುಕೊಂಡುಹೋದರು. ಆದರೆ ಹೆದ್ದಾರಿಗೆ ಎಲ್ಲವೂ ಗೊತ್ತಿತ್ತು. ಇನ್ನೊಬ್ಬರು ಹೆದ್ದಾರಿ ಬದಿಯ ಊರೊಂದರಲ್ಲಿ ಸಂಘದ ಶಾಖೆಯ  ಕಾರ್ಯವಾಹರಂತೆ. ಊರ ಮಕ್ಕಳನ್ನು ಸೇರಿಸಿ ನಾರಾಯಣಗುರುಗಳ ಕಥೆ ಹೇಳುತ್ತಿದ್ದರಂತೆ. ಅವರೋ ಕೂಲಿಮಾಡಿ ಬದುಕುತ್ತಿದ್ದ ಮಹಾತ್ಮರಂತೆ. ಗಿಣಿ ಹಾಡನ್ನು ಹಾಡುವವರು ಸಂಘಸ್ಥಾನಕ್ಕೆ ನುಗ್ಗಿದವರೇ ಯದ್ವಾತದ್ವಾ ಕತ್ತಿ ಬೀಸಿದರಂತೆ. ದುಂಡುಮುಖದ ಅವರ ಕೆನ್ನೆ ಹಾಳೆಯಂತೆ ಸುಲಿದುಹೋಯಿತಂತೆ. ಅವರದೇ ಪೈಂಗಿಳಿಯ ರೆಕ್ಕೆಗಳಂತೆ. ಆಗಲೂ ಕೂಡಾ ಏನೂ ಆಗಲಿಲ್ಲವಂತೆ. ಆದರೆ ಹದಿನೇಳನೇ ನಂಬರಿನ ಹೈವೇಗೆ ಎಲ್ಲವೂ ಗೊತ್ತಿತ್ತು. ಇಷ್ಟೆಲ್ಲಾ ನಡೆದರೂ ಹೆದ್ದಾರಿಯಂಚಿನಲ್ಲಿ ಭಗವಾ ಇನ್ನೂ ಹಾರಾಡುತ್ತಲೇ ಇದೆ. ಕೊಚ್ಚುವುದರಿಂದ ಇರಿಯುವುದರಿಂದ ಅಲ್ಲಿ ಶಾಖೆಗೆ ಹೋಗುವವರೇನೂ ಕಡಿಮೆಯಾಗಿಲ್ಲ.

ಈ ಬಗ್ಗೆ ಹೈವೇಗೆ ಸೋಜಿಗವೇನೂ ಇಲ್ಲ. ಏಕೆಂದರೆ ಅವರಾರೂ ಇನ್ನಾರನ್ನೋ ಮೆಚ್ಚಿಸಲು ಶಾಖೆಗೆ ಹೋಗುವವರಲ್ಲವೆಂಬುದೂ ಅದಕ್ಕೆ ಗೊತ್ತಿದೆ. ಕೆಂಪು ಬಾವುಟದವರ ಮಂಕು ಬುದಿಟಛಿಗೆ ಹೆದ್ದಾರಿ ವಿಷಾದದಿಂದ ನಗುತ್ತದೆ. ಇನ್ನು ಹೆದ್ದಾರಿಯುದ್ದಕ್ಕೂ ಸಿಗುವ ಕೆಂಪುಕೆಂಪಾದ ಮಹಲುಗಳ ಎದುರು ಗೂಂಡಾಗಳ ಚಿತ್ರಗಳು. ಅವರಿಗೆ ವಿನಾ ಕಾರಣ ಮಹಾತ್ಮರ ಪಟ್ಟ ಬೇರೆ. ಆದರೆ ಹೆದ್ದಾರಿಗೆ ಮಹಾತ್ಮರಾರೆಂದು ಚೆನ್ನಾಗಿ ಗೊತ್ತಿದೆ. ಅಮರರಾದವರು ಯಾರೆಂಬುದು ಎಲ್ಲರಿಗಿಂತ ಚೆನ್ನಾಗಿ ಹೆದ್ದಾರಿಗೆ ಗೊತ್ತಿದೆ.ಗಿಣಿ ಹಾಡುಗಾರರ ಆಟಾಟೋಪ ಒಂದೆಡೆ ಯಾದರೆ ವಿನಾ ಕಾರಣ ಸಿಟ್ಟಿನಿಂದ ಅಬ್ಬರಿಸುವ ಜನರದ್ದು ಇನ್ನೊಂದು ರೀತಿಯ ಕೇಸು. ಪೊನ್ನಾನಿ, ತಲಶ್ಯೇರಿ ಭಾಗದಲ್ಲಿ ವಿಧಾನ ಸೌಧದಂತೆಯೂ, ವೈಟ್ ಹೌಸಿನಂತೆಯೂ ಕಾಣುವ ಮಸೀದಿಗಳಿಗೆ ಹಣ ಎಲ್ಲಿಂದ ಬಂದಿದೆ ಎಂಬುದು ಹೆದ್ದಾರಿಗೆ ಗೊತ್ತಿದೆ. ಅವರೂ ಚೆಲ್ಲಿದ ರಕ್ತಗಳು, ಕತ್ತರಿಸಿದ ಕೈ ಕಾಲುಗಳನ್ನು ಎನ್. ಹೆಚ್ 17 ಮೂಕವಾಗಿ ನೋಡುತ್ತದೆ. ಇವರೆಲ್ಲಾ ಏಕೆ ಇಷ್ಟೊಂದು ಕೋಪಗೊಂಡಿರುತ್ತಾರೆ. ಹುಟ್ಟುವಾಗಲೇ ಕೋಪವೇ ಅಥವಾ ಬೆಳೆಯುತ್ತಾ ಹುಟ್ಟಿಕೊಂಡ ಕೋಪವೇ ಎಂಬುದಕ್ಕೆ ಬಹುಶಃ ಅದಕ್ಕಿನ್ನೂ ಉತ್ತರ ಸಿಕ್ಕಿರಲಿಕ್ಕಿಲ್ಲ. ಹೀಗೆ ಭಯಂಕರವಾದ ಇತಿಹಾಸದ ಮಲ್ಲಪುರಂ ಜಿಲ್ಲೆಯ ಒಂದು ಭಾಗವನ್ನು ಸ್ಪರ್ಶಿಸಿ ಹೊರಬಂದೊಡನೆಯೇ ಹೆದ್ದಾರಿ ಅಬ್ಬಾ ಎಂದು ಉಸಿರು ಬಿಡುತ್ತದೆ. ಆದರೆ ಅದೂ ಕೂಡಾ ಕ್ಷಣಿಕವೇ. ಅದಕ್ಕೆ ದಾರಿಯುದ್ದಕ್ಕೂ ಅದೇ ಪಾಡು. ಕಾಸರಗೋಡು ಮುಟ್ಟಿದರೇನು ಅದಕ್ಕೆ ನೆಮ್ಮದಿಯೇ? ಮಂಗಳೂರಲ್ಲೇನು ಅದಕ್ಕೆ ಸಂತಸವಿದೆಯೇ? ಇನ್ನು ಭಟ್ಕಳ…? ಹೀಗೆ ಎನ್. ಹೆಚ್ ೧೭ ದಾರಿಯುದ್ದಕ್ಕೂ ಶಾಪಗ್ರಸ್ಥವಾಗಿಯೇ ಸಾಗುತ್ತದೆ. ಸತ್ಯ ಗೊತ್ತಿದ್ದರೂ ಮೂಕವಾಗಿ, ಅಸಹಾಯಕವಾಗಿ ಮುಂದುವರಿಯುತ್ತದೆ. ಎಲ್ಲವೂ ತನ್ನ ಮೇಲೆಯೇ ನಡೆದರೂ ಅದಕ್ಕೇನೂ ಮಾಡುವಂತಿಲ್ಲ. ಕೇರಳದಿಂದ ಸಂಘಟನೆಗಳ ಸಂದೇಶವನ್ನು ಹೊತ್ತು ಬರುವವರು, ಭಟ್ಕಳದಿಂದ ಸರಕುಗಳನ್ನು ಹೊತ್ತುಬರುವವರು, ಮುಂಬೈನಿಂದ ಬಂದುಹೋಗುವ ‘ವೃತ್ತಿಪರರು’ ಎಲ್ಲರಿಗೂ ಎನ್. ಹೆಚ್ ೧೭ ಸಾಕ್ಷಿಯಾಗಿ ನಿಂತಿದೆ. ಕೇರಳದ ಪಿ.ಎಫ್. ಐ ಕರ್ನಾಟಕದಲ್ಲಿ ಮಕ್ಕಳನ್ನು ಕೊಲ್ಲುವ ಕೆ.ಎಫ್. ಡಿ ಯಾಗಿರುವುದು ಮೊದಲು ಗೊತ್ತಾಗಿದ್ದೇ ಈ ಹೈವೇಗೆ. ಏಕೆಂದರೆ ಆ ವಿಷ ಹರಿದುಬಂದಿದ್ದೇ ಎನ್. ಹೆಚ್ ೧೭ ನ ಮೂಲಕ.

ಹೀಗೇ ಸಾಗುವ ಹೆದ್ದಾರಿಗೆ ಎಲ್ಲವೂ ತಿಳಿದಿದೆ. ಉಪ್ಪಳ ಪೇಟೆಯಲ್ಲಿ ಹಿಂದು ಕಾಣಲೇ ಸಿಗುತ್ತಿಲ್ಲವಲ್ಲ ಏಕೆ ಎಂಬುದು ಅದಕ್ಕೆ ಗೊತ್ತಿದೆ. ಕಾಸರಗೋಡಿನ ಗೋಡೆಗಳಲ್ಲಿ ‘ಮಸೀದಿಯಲ್ಲೇ ಕಟ್ಟುವೆವು’ ಎಂದು ಬರೆದವರಾರೆಂದೂ ಅದಕ್ಕೆ ಗೊತ್ತಿದೆ. ಗೋಸ್ಟ್ ಮದನಿಯ ಭಾಷಣದ ಹಿಂದೇನಿತ್ತು ಎಂಬುದೂ ಅದಕ್ಕೆ ಗೊತ್ತಿದೆ. ಪೊನ್ನಾನಿಯ ಮದರಸಗಳಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದೂ ಗೊತ್ತಿದೆ. ಗಿಣಿ ಹಾಡನ್ನು ಹಾಡುವವರ ಮೆಂಟಲ್‌ಗಳೂ ಗೊತ್ತಿವೆ. ಮಂಗಳೂರಿನ ಅನಿಷ್ಠಗಳು ಯಾರೆಂಬುದು, ಭಟ್ಕಳ ಹೀಗೇಕಾಯಿತು ಎಂಬುದು, ತಾನು ಮುಂಬೈ ಮುಟ್ಟಿಸಿದ ಜನರೆಲ್ಲರೂ ಈಗ ಏನೇನಾಗಿದ್ದಾರೆ ಎಂಬುದು, ಉದ್ದಕ್ಕೂ ಸಿಗುವ ಸಂಘದ ಶಾಖೆಯ ಜನರ ಕಳಕಳಿ, ಇನ್ನು ಕೆಲವರ ನಾಟಕಗಳೆಲ್ಲವೂ ಅದಕ್ಕೆ ಗೊತ್ತಿದೆ. ನಗುವಿನ ಹಿಂದಿರುವ ಲಾಭ, ವ್ಯಾವಹಾರಿಕತೆ, ಅಸಹಾಯಕನನ್ನೇ ಹುಡುಕುತ್ತಾ ತುಳಿಯುವ ಪ್ರವೃತ್ತಿ, ಅಂತರಿಕ್ಷಕ್ಕೇರಿದ ಮೇಲೆ ಅಂತರವೇತಕೆ ಎಂದು ಲೇಖನ ಬರೆದು ಅನ್ಯ ಜಾತಿಯ ಮನೆಯ ಚಕ್ಕುಲಿ ತಿನ್ನಲೂ ಹಿಂಜರಿಯುವವರ ಕಪಟತನ…

ಅಬ್ಬಾ ಇನ್ನೂ ಎಷ್ಟೊಂದು ಕಥೆಗಳು ಈ ಹೆದ್ದಾರಿಯ ಬದಿಯಲ್ಲಿ ಬಿದ್ದುಕೊಂಡಿವೆ.

 

Leave a Reply

Your email address will not be published.

This site uses Akismet to reduce spam. Learn how your comment data is processed.