ಶಿಲಾಂಗ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಅವರು ಮೇಘಾಲಯದ ರಾಜಧಾನಿ ಶಿಲಾಂಗ್‌ನ ಮೆ.ಯೂ.ಸೋಸೋ ಥಾಮ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಪಾರಂಪರಿಕವಾದ ಸಾಖಿ ಜನಜಾತಿಯವರ ಆಚರಣೆಯಂತೆ ಸ್ವಾಗತಿಸುವ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸರಸಂಘಚಾಲಕರು ಅಲ್ಲಿನ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ನಡೆಸಿಕೊಟ್ಟರು.

ಸರಸಂಘಚಾಲಕರು ಮಾತನಾಡಿ – ” ಭಾರತದ ಏಕತೆಯ ಅದರ ತಾಕತ್ತು.ಭಾರತ ಯಾವ ವಿವಿಧತೆಯನ್ನು ಹೊಂದಿದೆಯೋ ಅದರ ಕುರಿತು ಹೆಮ್ಮೆಯಿದೆ. ಆದರೆ ಆಕ್ರಮಣಕಾರರು ಇದನ್ನು ಬೇರೆ ರೀತಿಯಲ್ಲೇ ನೋಡಿದರು.ಇಡಿಯ ಜಗತ್ತು ನಾವು ಬೇರೆ ಬೇರೆ ಎಂದುಕೊಳ್ಳುತ್ತದೆ,ಆದರೆ ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ.ಇದು ಭಾರತದ ವಿಶೇಷತೆಯಾಗಿದೆ, ಇದು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ನಾವು ಎಂದಿನಿಂದಲೂ ಒಂದಾಗಿಯೇ ಇದ್ದೇವೆ. ಯಾವಾಗೆಲ್ಲ ಇತಿಹಾಸದಲ್ಲಿ ನಮ್ಮ ಚಿರಂತನ ಮೌಲ್ಯಗಳನ್ನು ಮರೆತಿದ್ದೇವೆಯೋ,ಆಗೆಲ್ಲ ನಾವು ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದೇವೆ. ನಾವು ಒಂದಾಗಿದ್ದು,ನಮ್ಮ ದೇಶವನ್ನು ಮತ್ತಷ್ಟು ಬಲಿಷ್ಠವಾಗಿಸುವ, ಮತ್ತಷ್ಟು ಆತ್ಮನಿರ್ಭರವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಕಡೆಗೆ ನಮ್ಮನ್ನು ತೊಡಗಿಸಿಕೊಳ್ಳುವುದು ಸುನಿಶ್ಚಿತವೆಂದು ಖಾತ್ರಿಪಡಿಸಿಕೊಳ್ಳಬೇಕಿದೆ. ನಾವೆಲ್ಲರೂ ಕೂಡ ಈ ರೀತಿಯ ಏಕತೆಗಾಗಿ ದುಡಿಯಬೇಕಿದೆ” ಎಂದರು.

ಅವರು ಮಾತನಾಡುತ್ತಾ, “ಸಂಘದ ಸಂಸ್ಥಾಪಕರಾದ ಡಾ.ಹೆಡ್ಗೆವಾರ್ ಅವರು ತಮ್ಮ ಜೀವನವನ್ನು ರಾಷ್ಟ್ರದ ಸೇವೆಗಾಗಿ ಸಮರ್ಪಣೆಗೊಳಿಸಿದರು. ಅವರು ಜನ್ಮಜಾತವಾಗಿ ದೇಶಭಕ್ತರಾಗಿದ್ದರು” ಎನ್ನುತ್ತಾ ಅವರ ಜೀವನದ ಅನೇಕ ಪ್ರಸಂಗಗಳನ್ನು ಉಲ್ಲೇಖಿಸಿದರು.

ಸರಸಂಘಚಾಲಕರು ಮಾತನಾಡಿ “ನಾವು ಅನಾದಿ ಕಾಲದಿಂದಲೂ ರಾಷ್ಟ್ರವೆ ಆಗಿದ್ದೇವೆ. ಆದರೆ ನಾವು ನಮ್ಮ ನಾಗರಿಕತೆಯ ಶಾಶ್ವತ ಉದ್ದೇಶ ಮತ್ತು ಮೌಲ್ಯಗಳನ್ನು ಮರೆತಿದ್ದರಿಂದ ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದೇವೆ.  ನಮ್ಮ ಏಕತೆಯ ಶಕ್ತಿಯು ಆಧ್ಯಾತ್ಮಿಕತೆಯಲ್ಲಿ ಬೇರೂರಿರಿದೆ‌, ಸಾವಿರಾರು ವರ್ಷಗಳ ಪ್ರಾಚೀನ ಮೌಲ್ಯದಲ್ಲಿ ನಮಗೆ ನಂಬಿಕೆಯಲ್ಲಿದೆ. ಈ ದೇಶದ ನಾಗರಿಕತೆಯ ಈ ಮೌಲ್ಯಗಳಿಗೆ ನಮ್ಮ ದೇಶದ ಹೊರಗಿನ ಜನರು “ಹಿಂದೂ ಧರ್ಮ” ಎಂಬ ಹೆಸರನ್ನು ನೀಡಿದರು. ನಾವು ಹಿಂದೂಗಳು, ಆದರೆ ಹಿಂದೂ ಎಂಬುದಕ್ಕೆ ಯಾವುದೇ ನಿರ್ದಿಷ್ಟ ವ್ಯಾಖ್ಯಾನವಿಲ್ಲ. ಆದರೂ ಅದು ನಮ್ಮ ಗುರುತು. ಭಾರತೀಯ ಮತ್ತು ಹಿಂದೂ ಪದಗಳು ಸಮಾನಾರ್ಥಕ ಪದಗಳಾಗಿವೆ. ವಾಸ್ತವವಾಗಿ, ಇದು ಭೌಗೋಳಿಕ-ಸಾಂಸ್ಕೃತಿಕ ಗುರುತು.

ಸಂಘದ ಶಾಖೆಯ ನಿತ್ಯದ ಒಂದು ಗಂಟೆಯಲ್ಲಿ ಜನರು ನಿಸ್ವಾರ್ಥ ಮೌಲ್ಯಗಳು ಮತ್ತು ಮಾತೃಭೂಮಿಯ ಮೇಲಿನ ಕರ್ತವ್ಯದ ಬಗ್ಗೆ ತಿಳಿದುಕೊಳ್ಳುತ್ತಾರೆ. ಸಂಘ ವ್ಯಕ್ತಿಗತವಾದ ಸ್ವಾರ್ಥವನ್ನು ತೊರೆದು,ದೇಶಕ್ಕಾಗಿ ತ್ಯಾಗ ಮಾಡುವುದನ್ನು ಕಲಿಸುತ್ತದೆ. ಸಂಘವು ಈ ತ್ಯಾಗದ ಸಂಪ್ರದಾಯವನ್ನು ದೇಶದ ಪ್ರಾಚೀನ ಇತಿಹಾಸದಿಂದ ತೆಗೆದುಕೊಂಡಿದೆ. ನಮ್ಮ ಪೂರ್ವಜರು ವಿವಿಧ ದೇಶಗಳಿಗೆ ಭೇಟಿ ನೀಡಿದರು ಮತ್ತು ಜಪಾನ್, ಕೊರಿಯಾ, ಇಂಡೋನೇಷ್ಯಾ ಮತ್ತು ಇತರ ಹಲವು ದೇಶಗಳಲ್ಲಿ ನಮ್ಮ ಅತ್ಯುತ್ತಮ ಮೌಲ್ಯಗಳ ಗುರುತಾಗಿ ಬಿಟ್ಟು ಬಂದಿದ್ದಾರೆ. ನಾವು ಭಾರತೀಯರು ಇಂದಿಗೂ ಅದೇ ಸಂಪ್ರದಾಯವನ್ನು ಅನುಸರಿಸುತ್ತಿದ್ದೇವೆ. ಉದಾಹರಣೆಗೆ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ವಿವಿಧ ದೇಶಗಳಿಗೆ ಲಸಿಕೆಗಳನ್ನು ಕಳುಹಿಸುವ ಮೂಲಕ ಮಾನವೀಯತೆಗೆ ಸೇವೆ ಸಲ್ಲಿಸಿದೆ ಮತ್ತು ಕೆಲವು ತಿಂಗಳ ಹಿಂದೆ,ಭಾರತವು ಶ್ರೀಲಂಕಾದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅದರ ಜೊತೆಗೆ ನಿಂತಿದೆ.

ಸಂಘವು 1925 ರಿಂದ ಐದು ತಲೆಮಾರುಗಳಿಂದ ಸಮರ್ಪಿತ ಸ್ವಯಂಸೇವಕರ ಬಲದಿಂದ ರಾಷ್ಟ್ರ ನಿರ್ಮಾಣ ಕಾರ್ಯವನ್ನು ಮಾಡುತ್ತಿದೆ. ಸಂಘವು ತನ್ನ ಸಂಘಟನೆಯನ್ನು ಬಲಪಡಿಸಲು ಕೆಲಸ ಮಾಡುವ ಮತ್ತೊಂದು ಸಂಘಟನೆಯಲ್ಲ, ಆದರೆ ಭಾರತವು ತನ್ನ ಸರ್ವತೋಮುಖ ಅಭಿವೃದ್ಧಿಯನ್ನು ಹೊಂದಲು ಈ ಸಮಾಜವನ್ನು ಸಂಘಟಿಸುವುದು ಸಂಘದ ನಿಜವಾದ ಧ್ಯೇಯ. ಶಾಖೆಗಳಲ್ಲಿ ರಾಷ್ಟ್ರೀಯತೆ, ಸ್ವಯಂಸೇವಕತೆ ಮತ್ತು ಸಂಘ ಭಾವ ಈ ಮೂರು ವಿಷಯಗಳನ್ನು ಒತ್ತಿಹೇಳಲಾಗುತ್ತದೆ.

ಕೆಲವು ವರ್ಷಗಳ ಹಿಂದೆ ಉಗಾಂಡಾ ಬಿಕ್ಕಟ್ಟಿನ ಸಂದರ್ಭದಲ್ಲಿ, ಅಲ್ಲಿನ ಭಾರತೀಯರೂ ತಮ್ಮ ತಪ್ಪಿಲ್ಲದೆ ನರಳಬೇಕಾಯಿತು, ಏಕೆಂದರೆ ಭಾರತವು ಜಾಗತಿಕವಾಗಿ ದುರ್ಬಲವಾಗಿತ್ತು. ನಮ್ಮ ದೇಶವು ದುರ್ಬಲ ಸ್ಥಿತಿಯಲ್ಲಿದ್ದ ಕಾರಣ ನಮ್ಮ ಆಕ್ಷೇಪಣೆಗಳು,ನಮ್ಮ ಧ್ವನಿ ಆ ಸಮಯದಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಆದರೆ ಈಗ ಪರಿಸ್ಥಿತಿ ಬೇರೆಯಿದೆ. ಭಾರತ ದೇಶವು ಶಕ್ತಿಯುತವಾಗಿದ್ದರೆ, ಸಮೃದ್ಧವಾಗಿದ್ದರೆ, ಪ್ರತಿಯೊಬ್ಬ ಭಾರತೀಯನೂ ಸಹ ಶಕ್ತಿಶಾಲಿಯಾಗುತ್ತಾನೆ ಮತ್ತು ಸಮೃದ್ಧನಾಗುತ್ತಾನೆ.

ಅನೇಕ ವಿದ್ವಾಂಸರು ಆಧ್ಯಾತ್ಮಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದ ಅನೇಕ ದಿಗ್ಗಜರು ಸಭಿಕರಾಗಿ ಭಾಗವಹಿಸಿದ್ದರು. ಮೇಘಾಲಯಕ್ಕೆ ಡಾ. ಭಾಗವತ್ ಅವರ ಎರಡು ದಿನಗಳ ಭೇಟಿಯಿದ್ದು ಇದರಲ್ಲಿ ಅವರು ಎರಡನೆಯ ದಿನ ಸಂಘದ ವಿವಿಧ ಪದಾಧಿಕಾರಿಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ನಾಯಕರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.