ಗೋರಕ್ಷ  ಪ್ರಾಂತ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್‌ರವರು  ಕುಟುಂಬ ಪ್ರಬೋಧನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ “ಕುಟುಂಬದ ಸಂರಚನೆಯು ಪ್ರಕೃತಿಯಿಂದ ಬಂದಿದೆ, ಆದ್ದರಿಂದ ಅದನ್ನು ಸುರಕ್ಷಿತವಾಗಿರಿಸುವುದು ಮತ್ತು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಕುಟುಂಬವು ಮಾನವ ನಿರ್ಮಿಸಿದ ಸಾಮಾಜಿಕ ಘಟಕವಲ್ಲ, ಈ ರಚನೆಯು ಪ್ರಕೃತಿಯಿಂದ ಬಂದಿರುವಂಥದ್ದು. ಹಾಗಾಗಿ ಅದನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಇಂದು ನಾವು ಈ ಬಗ್ಗೆ ಪರ್ಯಾಲೋಚಿಸಲು ಸೇರಿದ್ದೇವೆ. ನಮ್ಮ ಸಮಾಜದ ಘಟಕವೆಂದರೆ ಕುಟುಂಬ, ವ್ಯಕ್ತಿಯಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ನಾವು ವ್ಯಕ್ತಿಯನ್ನು ಒಂದು ಘಟಕವೆಂದು ಪರಿಗಣಿಸುತ್ತೇವೆ, ಆದರೆ ಇಲ್ಲಿ ನಾವು ವ್ಯಕ್ತಿಯಲ್ಲ ಸಮಷ್ಟಿಯಾಗಿದ್ದೇವೆ”ಎಂದರು.

ತಾರಾಮಂಡಲ್‌ದಲ್ಲಿರುವ ಬಾಬಾ ಗಂಭೀರ್ ನಾಥ್ ಸಭಾಂಗಣದಲ್ಲಿ ಸ್ವಯಂಸೇವಕರನ್ನು ಮತ್ತು ವಿಚಾರ ಪರಿವಾರದ ಕಾರ್ಯಕರ್ತರನ್ನು ಉದ್ದೇಶಿಸಿ ನಡೆದ ಕುಟುಂಬ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸರಸಂಘಚಾಲಕರು ಮಾತನಾಡಿದರು.

“ಭಾಷೆ, ಆಹಾರ, ಭಜನೆ, ವಿಹಾರ, ವೇಷಭೂಷಣ ಮತ್ತು ಕಟ್ಟಡದ ಮೂಲಕ ಕುಟುಂಬದೊಂದಿಗೆ ಸಂಪರ್ಕದಲ್ಲಿರಬೇಕಿದೆ. ನನ್ನ ಕುಟುಂಬ ಆರೋಗ್ಯವಾಗಿರಲಿ, ಸಂತೋಷವಾಗಿರಲಿ ಎಂಬ ಚಿಂತನೆಗಳಿಲಿ ಹಾಗೆಯೇ ಸಮಾಜವನ್ನೂ ಆರೋಗ್ಯಕರವಾಗಿ ಮತ್ತು ಸಂತೋಷವಾಗಿಡಲು ನಾವು ಚಿಂತಿಸಬೇಕಾಗಿದೆ.ಇಂದು ಇಲ್ಲಿ ಕುಟುಂಬ ಪ್ರಬೋಧನ ನಡೆಯುತ್ತಿದೆ, ಅದೇ ರೀತಿ ಒಂದು ವಾರದಲ್ಲಿ ಒಂದು ದಿನ ಎಲ್ಲ ಕುಟುಂಬಗಳು ಕುಟುಂಬ ಪ್ರಬೋಧನೆಯನ್ನು ನಡೆಸಬೇಕಿದೆ,ಅಂದರೆ ವಾರದ ಒಂದು ದಿನ ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಊಟ ಮಾಡಬೇಕು, ಆ ಸಮಯದಲ್ಲಿ ಕುಟುಂಬದ ಸಂಪ್ರದಾಯಗಳು, ಪದ್ಧತಿಗಳು, ಮೌಲ್ಯಗಳ ಬಗ್ಗೆ ತಿಳಿಹೇಳಬೇಕು‌. ನಂತರ ಪರಸ್ಪರ ಈ ವಿಚಾರದ ಕುರಿತು ಚರ್ಚೆ ನಡೆಸಿ ಒಮ್ಮತಕ್ಕೆ ಬಂದು, ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ” ಎಂದು ಕರೆ ನೀಡಿದರು.

“ನಾವೆಲ್ಲರೂ ಸಂಘದ ಕಾರ್ಯಕರ್ತರ ಮನೆಯಿಂದ ಬಂದವರು ಹಾಗಾಗಿ ನಾವೆಲ್ಲರೂ ವ್ರತವನ್ನು ಹಿಡಿದವರು. ಈ ವ್ರತ ಕುಟುಂಬದ ಯಾವುದೇ ಒಬ್ಬ ವ್ಯಕ್ತಿಯದಲ್ಲ,ಬದಲಾಗಿ ಇಡೀ ಕುಟುಂಬದ ವ್ರತ. ಸಂಘವು ನಮ್ಮ ಕುಲನೀತಿಯಾಗಬೇಕಿದೆ, ಸಂಘವು ಸಮಾಜವನ್ನು ಕಟ್ಟುವ ಕಾರ್ಯವಾಗಿದೆ.  ಒಟ್ಟಿಗೆ ಬದುಕುವುದು ಹೇಗೆ ಎಂಬುದನ್ನು ಧರ್ಮ ಕಲಿಸುತ್ತದೆ.ಹಾಗಾಗಿ ಅದು ಧರ್ಮವೂ ಕೂಡ ಹೌದು. ಪರಸ್ಪರ ಸಂಘರ್ಷ ಬೇಡ ನಾವು ನಮ್ಮ ಸ್ವಂತ ಹಿತಾಸಕ್ತಿಗಳನ್ನು ನೋಡಿಕೊಳ್ಳಬೇಕು, ಆದರೆ ಅದು ಇತರರಿಗೆ ಅಹಿತವನ್ನುಂಟು ಮಾಡಬಾರದು. ಇದೇ ಸನಾತನ ಧರ್ಮ, ಇದೇ ಮಾನವ ಧರ್ಮ ಮತ್ತು ಇದೇ ಇಂದಿನ ಹಿಂದೂ ಧರ್ಮವೂ ಹೌದು. ಇದು ಇಡೀ ಜಗತ್ತನ್ನು ಉಳಿಸುವ ಧರ್ಮವಾಗಿದೆ.ಇದಕ್ಕಾಗಿ ನಾವು ನಮ್ಮದನ್ನೂ ತ್ಯಾಗ ಮಾಡಬೇಕಾಗುತ್ತದೆ‌.”

ಮಣಿಪುರದ ಉದಾಹರಣೆಯನ್ನು ನೀಡುತ್ತಾ, “ಕಡೆಯ ಪಕ್ಷ ಧಾರ್ಮಿಕ ವಿಧಿವಿಧಾನಗಳ ಸಂದರ್ಭಗಳಲ್ಲಿ ನಾವು ನಮ್ಮ ಸಾಂಪ್ರದಾಯಿಕ ಉಡುಗೆಯನ್ನು ಧರಿಸಬೇಕು. ನಾವು ಏನಾಗಿದ್ದೇವೆ, ನಮ್ಮ ತಂದೆ ತಾಯಿಯರು ಎಲ್ಲಿಯವರು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಾವು ನಮ್ಮ ಪೂರ್ವಜರ ಆಚಾರ-ವಿಚಾರಗಳನ್ನು ಪಾಲಿಸುತ್ತಿದ್ದೇವೋ ಇಲ್ಲವೋ ಎಂಬುದನ್ನು ನಾವು ಚಿಂತನೆ ಮಾಡಬೇಕಿದೆ‌.ಇದನ್ನು ನಾವು ಇಡೀ ಕುಟುಂಬದೊಂದಿಗೆ ಕುಳಿತು ಆಲೋಚಿಸಬೇಕು. ಮಕ್ಕಳೊಂದಿಗೆ ಮುಕ್ತವಾಗಿ ಈ ಕುರಿತು ಮಾತನಾಡಿ. ಅದೇ ಸಮಯದಲ್ಲಿ ಸಮಾಜಕ್ಕಾಗಿ ನಾನೇನು ಮಾಡುತ್ತಿದ್ದೇನೆ ಎಂಬುದನ್ನೂ ನಾವು ಯೋಚಿಸಬೇಕು.” ಎಂದರು.

ಸಂಘದ ಕುರಿತು ಚರ್ಚಿಸುತ್ತಾ, “ಸಂಘವನ್ನು ಎರಡು ಬಾರಿ ನಿಷೇಧಿಸಲಾಗಿದೆ. ಆದಾಗ್ಯೂ, ಯಾವುದೇ ಸ್ವಯಂಸೇವಕರು ಕ್ಷಮೆಯಾಚಿಸಲಿಲ್ಲ ಏಕೆಂದರೆ ಇಡೀ ಕುಟುಂಬ ಸ್ವಯಂಸೇವಕರೊಂದಿಗೆ ನಿಂತಿತ್ತು, ಕುಟುಂಬವು ಸದಾ ಅವನ ಬೆನ್ನ ಹಿಂದೆ ದೃಢವಾಗಿ ನಿಂತಿರುವ ಕಾರಣಕ್ಕಾಗಿಯೇ ಸಂಘದ ಕೆಲಸ ನಿರಂತರವಾಗಿ ನಡೆಯುತ್ತಿದೆ. ಸ್ವಯಂಸೇವಕರ ಬಂಧುಗಳಾದ ನಾವು ಸಂಘವನ್ನು ತಿಳಿದುಕೊಳ್ಳಬೇಕು ಮತ್ತು ಸಂಘದ ಕಾರ್ಯವು ಎಷ್ಟು ಗಂಭೀರವಾಗಿದೆ ಎಂಬುದನ್ನು ಸಹ ಆಲೋಚಿಸಬೇಕು. ಈ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಭಾಗಿಯಾಗಲು ನಾವು ತುಂಬಾ ಅದೃಷ್ಟ ಪಡೆದಿರಬೇಕು. ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ” ಎಂದರು.

ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ವೇದಿಕೆಯಲ್ಲಿ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್  ಅವರೊಂದಿಗೆ ಪ್ರಾಂತ್ಯದ ಸಂಘಚಾಲಕರಾದ ಡಾ. ಪೃಥ್ವಿರಾಜ್ ಸಿಂಗ್, ಸಹ ಸಂಘಚಾಲಕರಾದ ಡಾ. ಮಹೇಂದ್ರ ಅಗರ್ವಾಲ್ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಸ್ಕಾರ ಭಾರತಿಯ ಕಲಾವಿದರಿಂದ ಭಜನೆ, ಹೋಳಿ ಗೀತೆ, ಚೈತ್ರ ಗೀತೆ, ಹಾಗು ವಿದ್ಯಾಭಾರತಿ ವಿದ್ಯಾರ್ಥಿಗಳಿಂದ ರಾಮಕಥೆ ನಡೆಸಲಾಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.