ಇಂದು ಪುಣ್ಯಸ್ಮರಣೆ

19ನೇ ಶತಮಾನದ ಪ್ರಮುಖ ಸಮಾಜ ಸುಧಾರಕರ ಸಾಲಿನಲ್ಲಿ ನಿಲ್ಲುವ ಧೀಮಂತ ಮಹಿಳೆ ಸಾವಿತ್ರಿಬಾಯಿ ಫುಲೆ. ಅವರು ಶಿಕ್ಷಕಿಯಾಗಿ, ಸಮಾಜ ಸುಧಾರಕಿಯಾಗಿ, ಕವಯತ್ರಿಯಾಗಿ, ಶಿಕ್ಷಣತಜ್ಞರಾಗಿ ಜನಮಾನಸದಲ್ಲಿ ಗುರುತಿಸಿಕೊಂಡವರು. ಮಹಿಳಾ ಶಿಕ್ಷಣ, ಜಾತಿ ಸಮಸ್ಯೆಗಳ ವಿರುದ್ಧ ಹೋರಾಡುವ ಮೂಲಕ ಸಮಾಜದಲ್ಲಿ ಶೋಷಿತರ ಧ್ವನಿಯಾದವರು. ಮಹಿಳೆಯರಿಗೆ ಉತ್ತಮ ಬದುಕು ಕಟ್ಟಿಕೊಟ್ಟು ಅವರ ಸಬಲೀಕರಣಕ್ಕಾಗಿ ಸಾವಿತ್ರಿಬಾಯಿ ಅವರು ನೀಡಿದ ಕೊಡಗೆಗಳು ಅವಿಸ್ಮರಣೀಯ. ಇಂದು ಅವರ ಪುಣ್ಯತಿಥಿ


ಆರಂಭಿಕ ಜೀವನ
ಸಾವಿತ್ರಿಬಾಯಿ ಫುಲೆ ಅವರು ಜನವರಿ 3, 1831 ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಜನಿಸಿದವರು. 9ನೇ ವಯಸ್ಸಿನಲ್ಲೇ ಜ್ಯೋತಿಭಾಫುಲೆ ಅವರನ್ನು ವಿವಾಹವಾದರು. ನಂತರದ ದಿನಗಳಲ್ಲಿ ತಮ್ಮ ಮನೆಯಲ್ಲಿ ಪತಿಯ ಸಹಕಾರದಿಂದ ಶಿಕ್ಷಣವನ್ನು ಪಡೆದರು. ತಾನು ಕಲಿತ ವಿದ್ಯೆಯ ಮೂಲಕ ತನ್ನ ಸುತ್ತಮುತ್ತಲಿನ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಿದರು. 1847 ರಲ್ಲಿ ಸಾವಿತ್ರಿ ಬಾಯಿ ಫುಲೆ ಅವರು ಪುಣೆಯ ಮಿಸ್. ಮಿಚೆಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದರು.


ವೃತ್ತಿ ಜೀವನ
ಅವರು ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಮೊದಲ ಶಿಕ್ಷಕಿಯಾದರು. ಆ ಕಾಲಘಟ್ಟದಲ್ಲಿ ಮಹಿಳೆಯರು ಶಾಲೆಗೆ ಹೋಗಿ ಶಿಕ್ಷಣ ಕಲಿಯುವುದು ಅಪರಾಧ ಎಂದು ಭಾವಿಸಲಾಗುತ್ತಿತ್ತು. ಹೀಗಾಗಿ ಅವರು ಮೊದಲು ಶಿಕ್ಷಕಿಯಾಗಿ ಶಾಲೆಗೆ ಹೋಗುವಾಗ ಕೆಲವರು ಅಪಹಾಸ್ಯ ಮಾಡಿ ನಗುತ್ತಿದ್ದರು. ಅಷ್ಟೇ ಅಲ್ಲದೆ ಅವರ ಮೇಲೆ ಕೆಸರು, ಸೆಗಣಿ ಎರಚಿ, ಕಲ್ಲನ್ನು ತೂರುತ್ತಿದ್ದರು. ಇದ್ಯಾವುದಕ್ಕೂ ಧೃತಿಗೆಡದ ಸಾವಿತ್ರಿಬಾಯಿಯವರು ಶಾಲೆಯ ಮಕ್ಕಳಿಗೆ ಪಾಠ ಮಾಡುವುದಕ್ಕೆ ನಿರಂತರವಾಗಿ ಹೋಗುತ್ತಿದ್ದರು. 1848ರಲ್ಲಿ ಮೊದಲ ಬಾರಿಗೆ ಪುಣೆಯಲ್ಲಿ ಅಸ್ಪೃಶ್ಯರು, ಹಿಂದುಳಿದವರು ಹಾಗೂ ಮಹಿಳೆಯರಿಗಾಗಿಯೇ ಪ್ರತ್ಯೇಕ ಶಾಲೆಗಳನ್ನು ಜ್ಯೋತಿಭಾ ಫುಲೆ ಮತ್ತು ಸಾವಿತ್ರಿಬಾಯಿ ತೆರೆದರು. ಆಗ ಕೆಳವರ್ಗದವರ ವಿದ್ಯಾಭ್ಯಾಸಕ್ಕೆ ನಿರ್ಮಿಸಲಾದ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಯಾರೂ ಮುಂದೆ ಬಾರದಿದ್ದಾಗ ಜ್ಯೋತಿಬಾ ಫುಲೆ ಅವರು ತಮ್ಮ ಮಡದಿ ಸಾವಿತ್ರಿಬಾಯಿ ಫುಲೆ ಅವರನ್ನೇ ಶಿಕ್ಷಕಿಯನ್ನಾಗಿ ನೇಮಿಸಿದರು. ಸಾವಿತ್ರಿಬಾಯಿ ಹಾಗೂ ಜ್ಯೋತಿಬಾ ಫುಲೆ ಇಬ್ಬರೂ ಸೇರಿ 1848ರಿಂದ 1852ರ ಅವಧಿಯಲ್ಲಿ ಸುಮಾರು 18 ಶಾಲೆಗಳನ್ನು ತೆರೆದರು. ಈ ಶಾಲೆಗಳ ಜವಾಬ್ದಾರಿಯನ್ನು ಸ್ವತಃ ಸಾವಿತ್ರಿಬಾಯಿ ಅವರೇ ವಹಿಸಿಕೊಂಡರು.


ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು 1852ರಲ್ಲಿ ಮಹಿಳಾ ಸೇವಾ ಮಂಡಲವನ್ನು ಸ‍್ಥಾಪಿಸಿದರು. 1855ರಲ್ಲಿ ಕೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ ರಾತ್ರಿ ಪಾಳಯದ ಶಾಲೆ ಸ್ಥಾಪಿಸಿದ್ದು, ಬಾಲ್ಯವಿವಾಹ, ಸತಿ ಸಹಗಮನ ಪದ್ಧತಿ, ಮಹಿಳೆಯರ ಕೇಶ ಮುಂಡನ ಮುಂತಾದ ಅನಿಷ್ಟಗಳ ವಿರುದ್ಧ ಹೋರಾಟ ನಡೆಸಿದ್ದರು.


ನಂತರ 1854ರಲ್ಲಿ ಕಾರ್ಮಿಕರು ಹಾಗೂ ರೈತರಿಗಾಗಿ ರಾತ್ರಿ ಶಾಲೆಗಳನ್ನು ಸಹ ತೆರೆದರು. ತಾವು ಸ್ಥಾಪಿಸಿದ ಸತ್ಯಶೋಧಕ ಸಮಾಜದ ಮೂಲಕ ಹತ್ತಾರು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ತಾಯ್ತನದಿಂದ ವಂಚಿತರಾಗಿದ್ದ ಸಾವಿತ್ರಿಬಾಯಿ ಅವರು ಅಪ್ಪ-ಅಮ್ಮಂದಿರನ್ನು ಕಳೆದುಕೊಂಡು ಬೀದಿಯಲ್ಲಿದ್ದ ಮಕ್ಕಳಿಗಾಗಿ ಅನಾಥಾಶ್ರಮಗಳನ್ನು ಸ್ಥಾಪಿಸುವ ಮೂಲಕ ಆ ನಿರ್ಗತಿಕ ಮಕ್ಕಳಿಗೆ ತಾವೇ ತಾಯಿ-ತಂದೆಯಾದರು. 1874 ರಲ್ಲಿ ಬ್ರಾಹ್ಮಣ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತು ತೆಗೆದುಕೊಂಡರು.


ಕೃತಿಗಳು
1854 ರಲ್ಲಿ ‘ಕಾವ್ಯಫೂಲೆ’ , 1891ರಲ್ಲಿ ‘ಭವನಕಾಶಿ ಸುಭೋದ ರತ್ನಾಕರ್’ ಹಾಗೂ 1892 ರಲ್ಲಿ ತಮ್ಮ ಭಾಷಣಗಳ ಸಂಪಾದಿತ ಕೃತಿ ಪ್ರಕಟಿಸಿದರು. ಜ್ಯೋತಿಭಾ ಫುಲೆ ಅವರ ಭಾಷಣಗಳ ಸಂಗ್ರಹವನ್ನು ಸಾವಿತ್ರಿಬಾಯಿ ಅವರು ಸಂಗ್ರಹಿಸಿದ್ದಾರೆ.


ಪ್ರಶಸ್ತಿ
ಸಾವಿತ್ರಿಬಾಯಿ ಫುಲೆ ಅವರಿಗೆ ಬ್ರಿಟಿಷ್ ಸರ್ಕಾರ ಇಂಡಿಯನ್ ಫಸ್ಟ್ ಲೇಡಿ ಟೀಚರ್ ಎಂಬ ಬಿರುದನ್ನು ನೀಡಿದೆ. ಪುಣೆಯ ವಿಶ್ವವಿದ್ಯಾನಿಲಯವೊಂದಕ್ಕೆ ಸಾವಿತ್ರಿ ಬಾಯಿ ಫುಲೆ ಅವರ ಹೆಸರನ್ನು ಇಡಲಾಗಿದೆ. 2020ರಿಂದ ಕರ್ನಾಟಕ ಸರ್ಕಾರ ಸಾವಿತ್ರಿ ಬಾಯಿ ಫುಲೆ ಅವರ ಜಯಂತಿಯನ್ನು ಸಾರ್ವತ್ರಿಕವಾಗಿ ಆಚರಿಸಲು ಆದೇಶಿಸಿದೆ.


ಮಾರ್ಚ್ 10 , 1897ರಂದು ಪುಣೆಯಲ್ಲಿ ಪ್ಲೇಗ್ ಎಂಬ ಸಾಂಕ್ರಾಮಿಕ ರೋಗದಿಂದ ಸಾವಿತ್ರಿಬಾಯಿ ಫುಲೆ ಅವರು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.