– ಡಾ. ಗೀತಾ ಕುಮಾರಿ ಟಿ. ಪುತ್ತೂರು

ಪುತ್ತೂರಿನ ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಮನಮೋಹನ ಯಂ. ಇವರ ಮೊದಲ ಕೃತಿ ‘ತಿರಿ’ ನೆಲಮುಖಿ ಕಾಳಜಿಯನ್ನು ಹೊರಸೂಸುವ ವಿಮರ್ಶಾ ಲೇಖನಗಳ ಸಂಕಲನವಾಗಿದೆ.‌ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಇವರು ತುಳು ಸಾಂಸ್ಕೃತಿಕ ಬದುಕಿನೊಂದಿಗೆ ಅವಿನಾಭಾವವಾಗಿ ಬೆಸೆದುಕೊಂಡ ಕೃಷಿ ಅನುಭವವನ್ನು ತೆರೆದಿಡುತ್ತಾ ಸಂಸ್ಕೃತಿಯೊಂದರ ನಾಶಕ್ಕೆ ಕಾರಣವಾಗಬಹುದಾದ ಅಂಶಗಳನ್ನು ಚರ್ಚಿಸುತ್ತಾರೆ. ತುಳುನಾಡಿನಲ್ಲಿ ಭತ್ತದ ಬೇಸಾಯವು ಅಳಿವಿನ ಅಂಚಿಗೆ ಸರಿದ ಪರಿಣಾಮ ಕೃಷಿಗೆ ಪೂರಕವಾದ ಜೀವನಕ್ರಮದಲ್ಲಾದ ಪರಿವರ್ತನೆ, ಕೃಷಿ ಪದಸಂಪತ್ತು ಹೇಗೆ‌ ವಿಸ್ಮೃತಿಗೆ ಸರಿಯಿತು ಎಂಬುದನ್ನು ವಿಷಾದದಿಂದ‌ ವಿವರಿಸುತ್ತಾ ಇವುಗಳನ್ನು ಉಳಿಸಕೊಳ್ಳಬೇಕಾದ ಅಗತ್ಯವನ್ನು ಮನದಟ್ಟುಮಾಡುತ್ತಾರೆ. ಕೃಷಿ ಸಾಂಸ್ಕೃತಿಕ ಪದಕೋಶವನ್ನು ರಚಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಕಾಡು, ನೀರು ಮುಂತಾದ ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ಅನಾದಿಕಾಲದಿಂದಲೂ ಪ್ರಭುತ್ವದ ಕೈವಾಡ ಇರುವುದನ್ನು ಗುರುತಿಸುತ್ತಾ ಮಾನವನ ಹಸ್ತಕ್ಷೇಪದಿಂದಾಗಿ ನಿಸರ್ಗ ಬರಡಾಗುವ ಅಂಶಗಳನ್ನು ಉಲ್ಲೇಖಿಸುವುದರ ಜೊತೆಗೆ ನೆಲ ಸಂಸ್ಕೃತಿಗೆ ಮರಳಬೇಕೆಂಬ ಮಹತ್ವದ ಕರೆ ನೀಡಿದ್ದಾರೆ.

ತಿರಿಯ ಲೇಖನಗಳಲ್ಲಿ ಸಿಂಹಪಾಲು ತುಳುನಾಡಿನ ಕುರಿತಾದುದೇ ಆಗಿದೆ. ನೆಲಮುಖಿ ಸಂಸ್ಕೃತಿಯ ಅನಾವರಣದಿಂದ ತೊಡಗುವ ಇವರ ವಿಚಾರಗಳು ನಿಧಾನವಾಗಿ ನಾಡು ನುಡಿಯ ವಿಚಾರಗಳಿಗೆ ತೆರೆದುಕೊಳ್ಳುತ್ತದೆ. ತುಳುನಾಡಿನ ಸಾಹಿತ್ಯಕ, ಸಾಂಸ್ಕೃತಿಕ, ಭಾಷಿಕ ವಿಸ್ತಾರವನ್ನು, ತುಳುವಿನ ಅನನ್ಯತೆಯನ್ನು ತಿಳಿಸುವ ಸುದೀರ್ಘ ಲೇಖನಗಳು ಇಲ್ಲಿನ ಭಾಷೆ ಮತ್ತು ಬದುಕು ಸುದೀರ್ಘ ಪರಂಪರೆಯನ್ನು ಹೊಂದಿರುವ ಅಂಶವನ್ನು ತಿಳಿಸಲು ಸಹಾಯಕವಾಗಿದೆ. ತುಳು ಭಾಷಿಕ ಇತಿಹಾಸ, ತುಳು ಲಿಪಿಯ ವಿಚಾರದ ಮೂಲಕ ತುಳುವರ ಸಾಂಸ್ಕೃತಿಕ ಹಿನ್ನೆಲೆಯನ್ನು ಗುರುತಿಸಲು ಪ್ರಯತ್ನಿಸಿದ್ದಾರೆ. ತುಳು ಭಾಷೆಯಲ್ಲಿ ಪ್ರಚಲಿತದಲ್ಲಿರುವ ಮೌಖಿಕ ಸಾಹಿತ್ಯದ ಶ್ರೀಮಂತಿಕೆಯನ್ನು ಉಲ್ಲೇಖಿಸುತ್ತಾ ಇಲ್ಲಿನ ಸಾಹಿತ್ಯ ಪರಂಪರೆಗೆ ವಿದೇಶಿ ವಿದ್ವಾಂಸರು ನೀಡಿದ ಕೊಡುಗೆಗಳನ್ನು ಪರಿಶೀಲಿಸಿದ್ದಾರೆ. ಇಲ್ಲಿನ ದೇವ, ದೈವ, ನಾಗ, ಸಾಂಸ್ಕೃತಿಕ ವೀರರ ಕುರಿತ ನೂರಾರು ಪಾಡ್ದನಗಳು, ಭಾಷಾಧ್ಯಯನ, ಪಠ್ಯ ರಚನೆ, ನಿಘಂಟು ರಚನೆ, ಜನಪದ ಅಧ್ಯಯನ ಮುಂತಾದ ವಿಷಯಗಳ ಕುರಿತು ವಿದೇಶಿ ವಿದ್ವಾಂಸರು ಅಧ್ಯಯನ ನಡೆಸಿದ ಪರಿಣಾಮವಾಗಿ ತುಳು ಇಂದು ಅನನ್ಯವಾಗಿ ಗುರುತಿಸಿಕೊಂಡರೂ ತುಳು ಪಠ್ಯವಾಗಿ ರೂಪುಗೊಳ್ಳುವಲ್ಲಿ ಸೋತಿರುವ ಅಂಶವನ್ನು ವಿವರಿಸುತ್ತಾ ತುಳುವಿನ ಕುರಿತು ಇನ್ನಷ್ಟು ಅಧ್ಯಯನಗಳಾಗಬೇಕಾದ ಮಹತ್ವವನ್ನೂ, ತುಳು ಭಾಷೆಗೆ ಮನ್ನಣೆ ಸಿಗಬೇಕೆಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.

ನಾಡುನುಡಿಯ ವಿಚಾರಕ್ಕೆ ಪೂರಕವಾಗಿ ಕರ್ನಾಟಕ ಏಕೀಕರಣದ ಹಿನ್ನೆಲೆಯಲ್ಲಿ ರೂಪುಗೊಂಡ ನವೋದಯ ಸಾಹಿತ್ಯದ ತಾತ್ವಿಕತೆಯನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಮುಂದುವರಿದು ನವೋದಯ ಸಾಹಿತ್ಯದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಗಳು ಹೇಗೆ ಒಡಮೂಡಿವೆ ಎಂಬುದನ್ನು ಪ್ರಮುಖ ನವೋದಯ ಸಾಹಿತಿಗಳ ಬರಹದ ಹಿನ್ನೆಲೆಯಲ್ಲಿ ಚರ್ಚಿಸಿದ್ದಾರೆ. ಭಿನ್ನ ಪ್ರಾದೇಶಿಕ ವಲಯದಲ್ಲಿ ರಾಷ್ಟ್ರದ ಪರಿಕಲ್ಪನೆಯು ಬೇರೆಬೇರೆ ನೆಲೆಗಳಲ್ಲಿ ಮೂಡಿಬಂದಿರುವ ಸಂಗತಿಯನ್ನು ವಿಷದಪಡಿಸಿದ್ದಾರೆ.

ಮನಮೋಹನ ಅವರ ವಿಶಿಷ್ಟವಾದ ಲೇಖನ ‘ಕುರೂಪದೇಹ ಒಂದು ವಿವೇಚನೆ’. ದೇಹ ಮೀಮಾಂಸೆ ಎಂಬುದು ಪ್ರಸ್ತುತ ಕಾಲಘಟ್ಟದ ವಿಶೇಷವಾದ ಪರಿಕಲ್ಪನೆಯಾದರೂ ಕನ್ನಡ ಸಾಹಿತ್ಯದ ಆರಂಭದಿಂದಲೂ ಇದು ವ್ಯಕ್ತವೂ ಅವ್ಯಕ್ತವೂ ಆಗಿ ಪ್ರಚಲಿತದಲ್ಲಿದೆ. ಚಂಪೂ ಕಾವ್ಯಗಳಿಂದ ತೊಡಗಿ ವಚನಕಾರರು, ತತ್ತ್ವ ಪದಕಾರರಿಂದ ಮುಂದುವರಿದು ಕೀರ್ತನಕಾರರು, ನವೋದಯ ಸಾಹಿತಿಗಳ ಮೂಲಕ ಹಾದು ವರ್ತಮಾನದಲ್ಲಿ ವಿಶಿಷ್ಟವಾಗಿ ನಿರ್ವಚಿಸಿಕೊಳ್ಳುತ್ತಿದೆ. ಈ ಲೇಖನದಲ್ಲಿ ಜನಪದ ಕಾವ್ಯ ಮಂಟೇಸ್ವಾಮಿ, ಜನ್ನನ ಯಶೋಧರ ಚರಿತೆಯ ಅಷ್ಟಾವಂಕ, ನಳಚರಿತ್ರೆಯ ವಿಷ ಸರ್ಪದ ಕಡಿತಕ್ಕೆ ಒಳಗಾದ ನಳನ ದೇಹವಿಕಾರತೆಯನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕಾವ್ಯದ ಮಂಥರೆಯನ್ನೂ ಈ ಸಾಲಿನಲ್ಲಿ ಪರಿಗಣಿಸಬಹುದಾಗಿದೆ. ದೇಹದ ಕುರೂಪತೆಯನ್ನು ಮೀರಿ ಆಂತರಿಕ ಸೌಂದರ್ಯಕ್ಕೆ ಪ್ರಾಶಸ್ತ್ಯ ಕೊಡಬೇಕಾದುದು ಇಂದಿನ ಅಗತ್ಯವಾಗಿದೆ. ಮಾನಸಿಕ, ಭೌದ್ಧಿಕ ಕುರೂಪತೆಯನ್ನು ಮೀರುವ ಪ್ರಯತ್ನ ಬಹಳ ಮುಖ್ಯ ಎಂಬ ಅಂಶವನ್ನು ಲೇಖಕರು ನಿರೂಪಿಸಿದ್ದಾರೆ.

ತುಳುನಾಡಿನವರೇ ಆದ ಸೇಡಿಯಾಪು ಕೃಷ್ಣಭಟ್ಟರ ಪಾಂಡಿತ್ಯದ ನಿರೂಪಣೆ, ಕೆ.ಟಿ. ಗಟ್ಟಿಯವರ ‘ಪರಿಧಿ’ ಕಾದಂಬರಿಯ ವಿಶ್ಲೇಷಣೆ, ಡಾ. ನಿರಂಜನ ವಾನಳ್ಳಿಯವರ ‘ನುಡಿಚಿತ್ರಗಳು’ ಕೃತಿ ಯ ಕುರಿತು ಬರೆಯುವ ಮನಮೋಹನರವರ ವಿಮರ್ಶಾ ನೋಟದ ಆಳವನ್ನು ಅರಿಯಲು ಸಾಧ್ಯವಿದೆ. ಅವರೇ ಹೇಳುವಂತೆ ‘ಒಂದು ಕೃತಿಯನ್ನು ಓದುವಾಗ ಅಲ್ಲಿ ಬರುವ ಸಂಗತಿಗಳ ಮೌಲ್ಯಮಾಪನಕ್ಕಿಂತ ಈ ಸಂಗತಿ ಏನನ್ನು ಹೇಳುತ್ತದೆ ಎಂಬುದು ಮುಖ್ಯ.’

ನಖದಿಂದ ನಭದವರೆಗೆ ಎಂಬಂತೆ ಇಲ್ಲಿನ ಲೇಖನಗಳು ನೆಲದಿಂದ ಆರಂಭಗೊಂಡು ವ್ಯಕ್ತಿ, ನಾಡು, ರಾಷ್ಟ್ರದ ವರೆಗೆ ಚಿಂತನೆಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುವ ಪರಿ ಅನನ್ಯವಾಗಿದೆ. ಸರಳತೆಯಿಂದ ಆರಂಭಗೊಂಡು ಸಂಕೀರ್ಣಗೊಳ್ಳುವ ಮಾದರಿ ವಿಶೇಷವಾಗಿದೆ. ಇನ್ನಷ್ಟು ಚಿಂತನೆಗಳು ಮನಮೋಹನ ಅವರಿಂದ ಹೊರಹೊಮ್ಮುವ ನಿರೀಕ್ಷೆಯಲ್ಲಿದ್ದೇವೆ.

Leave a Reply

Your email address will not be published.

This site uses Akismet to reduce spam. Learn how your comment data is processed.