ಬೆಂಗಳೂರು: ಸಾವರ್ಕರ್ ಈ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಪ್ರತೀಕ. ಭಾರತ ಅನುಭವಿಸಿದ ಮತ್ತು ಇಂದು ಅನುಭವಿಸುತ್ತಿರುವ ಬಾಹ್ಯ ಮತ್ತು ಆಂತರಿಕ ಭದ್ರತೆಯ ಸಮಸ್ಯೆಗಳ ಕುರಿತು ಹಲವು ದಶಕಗಳ ಹಿಂದೆಯೇ ಮುನ್ನೆಚ್ಚರಿಕೆಯನ್ನು ನೀಡಿದ್ದರಿಂದ ಭಾರತದ ರಾಷ್ಟ್ರೀಯ ಭದ್ರತೆಯ ಪಿತಾಮಹ ಎಂದು ಗುರುತಿಸಬೇಕಾದ ಕರ್ತವ್ಯ ನಮ್ಮದು ಎಂದು ಲೇಖಕ ಮತ್ತು ಚಿಂತಕ ಉದಯ್ ಮಹುರ್ಕರ್ ಹೇಳಿದರು.
ದಿಶಾಭಾರತ್ ಸಂಸ್ಥೆಯ ‘ನನ್ನ ಭಾರತ’ ಅಭಿಯಾನದ ಅಂಗವಾಗಿ ಆಯೋಜಿಸಲಾಗಿರುವ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮದ ಹದಿಮೂರನೇ ದಿನ ‘ಸಾವರ್ಕರ್ : ದೇಶ ವಿಭಜನೆಯನ್ನು ತಡೆಬಹುದಾಗಿದ್ದ ವ್ಯಕ್ತಿ’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಬುದ್ದ ಮತ್ತು ಮಹಾವೀರರೂ ಕೂಡ ರಾಷ್ಟ್ರದ ಮೇಲೆ ದಾಳಿಯಾದಾಗ ಕೇವಲ ರಕ್ಷಣಾತ್ಮಕ ನೀತಿಯನ್ನು ನಾವು ಪಾಲಿಸಬೇಕು ಎಂದು ಬೋಧಿಸಿಲ್ಲ. ಹಾಗಾಗಿ ಸೈನಿಕ ಶಕ್ತಿಯನ್ನು ಸದೃಢವಾಗಿರಿಸಿಕೊಳ್ಳದೇ ಸಮರ್ಥ ರಾಷ್ಟ್ರವಾಗಿ ಬೆಳೆಯಲು ಭಾರತಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಅರಿತಿದ್ದ ಸಾವರ್ಕರ್ 1938ರಲ್ಲಿ ಹಿಂದೂ ಸೈನಿಕೀಕರಣಕ್ಕೆ ಕರೆ ನೀಡುತ್ತಾರೆ. 1939 ರಲ್ಲಿ ಸ್ವತಃ ಬ್ರಿಟಿಷರೂ ಕೂಡ ತಮ್ಮ ಅಗತ್ಯತೆಯ ದೃಷ್ಟಿಯಿಂದ ಹೆಚ್ಚು ಹಿಂದುಗಳನ್ನು ಸೇನೆಗೆ ಸೇರ್ಪಡೆಗೊಳಿಸಿಕೊಂಡರು. ಆದರೆ ಬ್ರಿಟಿಷರ ಈ ನಿಲುವಿನ ವಿರುದ್ಧ ಮುಸ್ಲಿಂ ಲೀಗ್ 1939 ರಿಂದ 1945ರ ವರೆಗೆ 4 ಬಾರಿ ಎಚ್ಚರಿಕೆಯ ಪತ್ರವನ್ನು ಬರೆದು ಹೆಚ್ಚು ಹಿಂದೂ ಸೈನಿಕೀರಣದಿಂದ ಮುಸ್ಲಿಂ ಲೀಗ್ ಗೆ ಆಗಬಹುದಾದ ತೊಂದರೆಯನ್ನು ಪ್ರಸ್ತುತಪಡಿಸುತ್ತದೆ. ಮುಸ್ಲಿಂ ಲೀಗ್ ಗೆ ಹಿಂದೂ ಸೈನಿಕೀಕರಣದ ಹೇಗೆ ತನ್ನ ವಿರುದ್ಧ ನಿಲ್ಲಬಹುದು ಎನ್ನುವುದು ತಿಳಿದಿತ್ತು, ಆದರೆ ಕಾಂಗ್ರೆಸ್ ಗೆ ಅದರ ಮಹತ್ವದ ಅರಿವಾಗಲಿಲ್ಲ ಎಂದರು.
ರಾಷ್ಟ್ರದ ಆಗು-ಹೋಗುಗಳನ್ನು ಗಮನಿಸಿ ದೇಶವಿಭಜನೆಯಾಗಬಹುದೆಂಬ ಮೊದಲ ಸೂಚನೆಯನ್ನು ನೀಡಿದ್ದು ಸಾವರ್ಕರ್. ಸಮತೆಯನ್ನು ಕಾಪಾಡಿಕೊಂಡು ಅಖಂಡತೆಯನ್ನು ಉಳಿಸಿಕೊಳ್ಳುವ ಸಾವರ್ಕರ್ ಅವರ ನಿಲುವು ಬಹಳ ಸ್ಪಷ್ಟವಾಗಿತ್ತು. ಆದ್ದರಿಂದಲೇ ದೇಶ ವಿಭಜನೆಯ ಸುಳಿವು ಸಿಕ್ಕ ನಂತರ 1937ರಿಂದ 1945ರವರೆಗೆ ಭಾರತದ ಮೂಲೆ ಮೂಲಗೂ ತೆರಳಿ ಕಾಂಗ್ರೆಸ್ ನ ಮಂದಗಾಮಿ ಪ್ರವೃತ್ತಿಯಿಂದಾಗಬಹುದಾದ ದುರಂತಗಳ ಕುರಿತು ಮುನ್ನೆಚ್ಚರಿಕೆ ನೀಡಿದ್ದರು. ಅದರಂತೆ ಮುಂದೆ ಹಲವು ದುರಂತಗಳು ನಡೆದವು.
ಸಾವರ್ಕರ್ ಅವರ ಅತ್ಯಂತ ಮಹತ್ವದ ಕೊಡುಗೆಯೆಂದರೆ ‘ರಾಷ್ಟ್ರ ಮೊದಲು’ ಎಂಬ ತತ್ತ್ವ. ರಾಷ್ಟ್ರಕ್ಕೆ ಕುತ್ತು ತರುವ ಯಾವುದೇ ನಡೆಯನ್ನು ಅವರು ತೀಕ್ಷ್ಣವಾಗಿ ಖಂಡಿಸಿದ್ದಾರೆ. ಯಾವುದೇ ಧಾರ್ಮಿಕ ಆಚರಣೆಯಾಗಿರಬಹುದು ಅದು ರಾಷ್ಟ್ರದೊಳಗೆ ಅಶಾಂತಿಯನ್ನು ಸೃಷ್ಟಿಸುತ್ತದೆ ಎಂದಾದರೆ ಅವುಗಳನ್ನು ನಿಲ್ಲಿಸುವ ಜವಾಬ್ದಾರಿಯನ್ನು ಸರ್ಕಾರಗಳು ತೆಗೆದುಕೊಳ್ಳಬೇಕು. ರಾಷ್ಟ್ರದ ಸಾರ್ವಭೌಮತ್ವಕ್ಕೆ ತಡೆಯನ್ನುಂಟು ಮಾಡಬಹುದಾದ ಸ್ವಾತಂತ್ರ್ಯದ ನಂತರದ ನಿಲುವುಗಳನ್ನು ಕಂಠಮಟ್ಟ ಖಂಡಿಸಿದ್ದರು. ರಾಷ್ಟ್ರದ ರಕ್ಷಣೆಯ ದೃಷ್ಟಿಯಲ್ಲಿ ಅತ್ಯಂತ ಸ್ಪಷ್ಟ ನಿಲುವನ್ನು ಹೊಂದಿದ್ದ ವ್ಯಕ್ತಿಯ ಕುರಿತು ಹಲವು ಅಸತ್ಯದ ಆರೋಪಗಳನ್ನು ಮಾಡಲಾಗುತ್ತದೆ. ಅವೆಲ್ಲವೂ ಸವರ್ಕರ್ ಎಂಬ ಹೆಸರೊಂದೇ ರಾಷ್ಟ್ರದಲ್ಲಿ ಉಂಟುಮಾಡಬಹುದಾದ ಏಕತೆಯ ಭಾವಜಾಗರಣದ ವಿರುದ್ಧ ಮಾಡುತ್ತಿರುವ ಷಡ್ಯಂತ್ರ ಎಂದು ಅಭಿಪ್ರಾಯಪಟ್ಟರು.