ಆರೆಸ್ಸೆಸ್ ಕ್ಷೇತ್ರೀಯ ಸಂಘಚಾಲಕ ಶ್ರೀ ವಿ ನಾಗರಾಜ್ ಇಂದು ಬೆಂಗಳೂರಿನ ಆರೆಸ್ಸೆಸ್ ಪ್ರಾಂತ ಕಾರ್ಯಾಲಯ ಕೇಶವಕೃಪಾದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು

ಬೆಂಗಳೂರು ಮಾರ್ಚ್ 24, 2017: ಆರೆಸ್ಸೆಸ್ ಕ್ಷೇತ್ರೀಯ ಸಂಘಚಾಲಕ ಶ್ರೀ ವಿ ನಾಗರಾಜ್ ಇಂದು ಬೆಂಗಳೂರಿನ ಆರೆಸ್ಸೆಸ್ ಪ್ರಾಂತ ಕಾರ್ಯಾಲಯ ಕೇಶವಕೃಪಾದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಇತ್ತೀಚಿಗೆ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ನೀತಿ-ನಿರ್ಣಯಗಳನ್ನುನಿರೂಪಿಸುವ ಮಹತ್ವದ ವಾರ್ಷಿಕ ಸಭೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ದಲ್ಲಿ ಅಂಗೀಕರಿಸಿದ ನಿರ್ಣಯಗಳು, ಸಂಘದ ಶಾಖಾ ಸ್ಥಿತಿ-ಗತಿ ಕುರಿತು ವಿ ನಾಗರಾಜ್ ವಿವರ ನೀಡಿದರು. ಪ್ರಾಂತ ಪ್ರಚಾರ ಪ್ರಮುಖ್ ಶ್ರೀ ವಾದಿರಾಜ್ ಉಪಸ್ಥಿತರಿದ್ದರು. ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೆಸ್ಸೆಸ್ ಪ್ರಾಂತ ಸಹಕಾರ್ಯವಾಹ ಮ ಪಟ್ಟಾಭಿರಾಮ ಮಾತನಾಡಿದರು.

ಆರೆಸ್ಸೆಸ್ ಕ್ಷೇತ್ರೀಯ ಸಂಘಚಾಲಕ ಶ್ರೀ ವಿ ನಾಗರಾಜ್ ಇಂದು ಬೆಂಗಳೂರಿನ ಆರೆಸ್ಸೆಸ್ ಪ್ರಾಂತ ಕಾರ್ಯಾಲಯ ಕೇಶವಕೃಪಾದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ

ನಂ. 74, ಕೇಶವಕೃಪಾ , ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು 560004.

************************************************************

:: ಪತ್ರಿಕಾ ಪ್ರಕಟಣೆ ::

ಮಾರ್ಚ್ 24, 2017.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ನೀತಿ-ನಿರ್ಣಯಗಳನ್ನುನಿರೂಪಿಸುವ ಮಹತ್ವದ ವಾರ್ಷಿಕ ಸಭೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ತಮಿಳುನಾಡು ರಾಜ್ಯದ ಕೊಯಮತ್ತೂರಿನ ಶ್ರೀ ಅಮೃತಾ ವಿಶ್ವ ವಿದ್ಯಾಶ್ರಮದ ಆವರಣದಲ್ಲಿ ಮಾರ್ಚ್ 19, 20 ಹಾಗೂ 21, 2017ರಂದು ಜರುಗಿತು. ಆರ್‌ಎಸ್‍ಎಸ್‍ನ ಸರಸಂಘಚಾಲಕರಾದ ಮೋಹನ್ ಭಾಗವತ್, ಸರಕಾರ್ಯವಾಹರಾದ ಸುರೇಶ್ ಭಯ್ಯಾಜಿ ಜೋಶಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ-ರಾಜ್ಯ ಮಟ್ಟದಲ್ಲಿ ಜವಾಬ್ದಾರಿ ಹೊಂದಿದ ಸಂಘ ಪರಿವಾರದ ವಿವಿಧ ಸಂಸ್ಥೆಗಳ ಸುಮಾರು 1400 ಪ್ರಮುಖರು ಈ ಮೂರು ದಿನದ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಂಘ ಕಾರ್ಯ:

ಸಂಘದ ಶಾಖೆಗಳು ಗಣನೀಯವಾಗಿ ಏರಿಕೆ ಕಾಣುತ್ತಿವೆ. ಕಳೆದ ಹತ್ತು ವರ್ಷದಿಂದ ಹಂತ ಹಂತವಾಗಿ ಸಂಘದ ಕಾರ್ಯ ಏರುಗತಿಯಲ್ಲಿ ನಡೆಯುತ್ತಿದೆ. ಸಂಘ ಕಾರ್ಯವನ್ನು ವಿಸ್ತರಿಸುವುದಲ್ಲದೇ, ಅವುಗಳ ಕ್ರೂಢೀಕರಣವೂ ನಡೆಯುತ್ತಿದೆ. ಸಂಘದ ಅಂಗಳಕ್ಕೆ ಕಾಲಿಡುತ್ತಿರುವ ಯುವಕರ ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಿದೆ. ಕಳೆದ ವರ್ಷದ ಪ್ರಾಥಮಿಕ ಶಿಕ್ಷಾ ವರ್ಗದಲ್ಲಿ ದೇಶದಾದ್ಯಂತ 1 ಲಕ್ಷ ತರುಣರು ಪಾಲ್ಗೊಂಡರು. ದೇಶದಾದ್ಯಂತ 17,500 ಶಿಕ್ಷಾರ್ಥಿಗಳು 20 ದಿವಸದ ಶಿಬಿರದಲ್ಲಿ ಭಾಗವಹಿಸಿದ್ದಾರೆ. 4130 ಶಿಕ್ಷಾರ್ಥಿಗಳು ದ್ವಿತೀಯ ವರ್ಷದ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ನಾಗಪುರದಲ್ಲಿ ನಡೆದ ತೃತೀಯ ವರ್ಷದ ಶಿಬಿರದಲ್ಲಿ 973 ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದಾರೆ.

ದೇಶದಾದ್ಯಂತ 57233 ನಿತ್ಯ ಶಾಖೆಗಳು, 14,896 ಸಾಪ್ತಾಹಿಕ ಮಿಲನ್‍ಗಳು, 8226 ಸಂಘ ಮಂಡಳಿಗಳು ದೇಶದಲ್ಲಿ ಪ್ರಸ್ತುತ ಚಾಲ್ತಿಯಲ್ಲಿವೆ. 19121 ಸೇವಾ ಬಸ್ತಿಗಳಲ್ಲಿ ಸ್ವಯಂಸೇವಕರು ಸೇವಾ ಕಾರ್ಯವನ್ನು ನಡೆಸುತ್ತಿದ್ದಾರೆ. ದೇಶದಾದ್ಯಂತ ಶಿಕ್ಷಣ, ಆರೋಗ್ಯ, ಆರ್ಥಿಕ ಸ್ವಾವಲಂಬನೆ ಮತ್ತು ಇತರ ಕ್ಷೇತ್ರಗಳಲ್ಲಿ ಒಟ್ಟು 1,70,700 ಸೇವಾ ಚಟುವಟಿಕೆಗಳು ನಡೆಯುತ್ತಿವೆ.

ಕರ್ನಾಟಕದಲ್ಲಿ:

ಕರ್ನಾಟಕದಲ್ಲಿ ಪ್ರಸ್ತುತ ವರ್ಷದಲ್ಲಿ ಒಟ್ಟು 4356 ನಿತ್ಯ ಶಾಖೆಗಳು, 756 ಸಾಪ್ತಾಹಿಕ ಮಿಲನ್ ಗಳು, 420 ಮಾಸಿಕ ಸಂಘಮಂಡಳಿಗಳು ನಡೆಯುತ್ತಿವೆ. ಕಳೆದ 4 ವರ್ಷಗಳಲ್ಲಿ 30 ಸಾವಿರಕ್ಕೂ ಹೆಚ್ಚು ಯುವಕರು ಸಂಘದ ಪ್ರಾಥಮಿಕ ಶಿಕ್ಷಾ  ವರ್ಗದ ಮೂಲಕ ಸಂಘದ ಶಿಕ್ಷಣ ಪಡೆದಿದ್ದಾರೆ. 1350 ಗ್ರಾಮಗಳಲ್ಲಿ ಗ್ರಾಮವಿಕಾಸ ಯೋಜನೆಯ ಅಡಿಯಲ್ಲಿ ಹಲವಾರು ಚಟುವಟಿಕೆಗಳು ನಡೆಯುತ್ತಿವೆ.

ಪಶ್ಚಿಮ ಬಂಗಾಳದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಜಿಹಾದಿ ಹಿಂಸಾಚಾರ:

ಪಶ್ಚಿಮ ಬಂಗಾಳದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಜಿಹಾದಿ ಹಿಂಸಾಚಾರದ ಕುರಿತು ಆರೆಸ್ಸೆಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಮಹತ್ವದ ನಿರ್ಣಯವೊಂದನ್ನು ಅಂಗೀಕರಿಸಿದೆ.

ಪಶ್ಚಿಮ ಬಂಗಾಳದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಜಿಹಾದಿ ಹಿಂಸಾಚಾರ, ಅಟ್ಟಹಾಸ, ಹಾಗೂ ದೇಶದ್ರೋಹಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಅಲ್ಲಿನ ರಾಜ್ಯ ಸರಕಾರ, ಮುಸ್ಲಿಮ್ ಮತ ಬ್ಯಾಂಕ್ ದೃಷ್ಟಿಯಿಂದ ನಡೆಯುತ್ತಿರುವ ತುಷ್ಟೀಕರಣ, ಹಾಗೂ ಹಿಂದೂ ಜನಗಣತಿ ಇಳಿಮುಖವಾಗುತ್ತಿರುವ ಬಗ್ಗೆ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್) ತೀವ್ರ ಆತಂಕ ವ್ಯಕ್ತಪಡಿಸಿದೆ.

ಬಾಂಗ್ಲಾದೇಶದ ಗಡಿಭಾಗದಿಂದ ಕೇವಲ 8 ಕಿಮಿ ದೂರದಲ್ಲಿರುವ ಮಾಳ್ಡಾ ಜಿಲ್ಲೆಯ ಕಾಲಿಯಾಚಕ್ ಪೋಲೀಸ್ ಠಾಣೆಯ ಮೇಲೆ ನಡೆದ ದಾಳಿ, ಅಪರಾಧದ ದಾಖಲೆಗಳನ್ನು ಸುಡುವ ದೇಶದ್ರೋಹಿ ಚಟುವಟಿಕೆಗಳು, ಭದ್ರತಾ ಸಿಬ್ಬಂದಿಯ ಮೇಲಿನ ಹಲ್ಲೆಗಳು ಇತ್ಯಾದಿಯಾಗಿ ಜಿಹಾದಿ ಗುಂಪುಗಳು ನಡೆಸಿಕೊಂಡು ಬರುತ್ತಿವೆ. ಇವೆಲ್ಲವೂ ದೇಶದ ಭದ್ರತೆಗೆ, ಕಾನೂನಿಗೆ ಧಕ್ಕೆಯನ್ನುಂಟುಮಾಡಬಹುದಾಗಿದೆ. ಮೂಲಭೂತವಾದಿ ಮೌಲ್ವಿಗಳು ಫ಼ತ್ವಾ ಹೊರಡಿಸುವ ಮುಖಾಂತರ ಗುಂಪುಗಳ ನಡುವೆ ಘರ್ಷಣೆ ನಡೆಸುವುದಲ್ಲದೇ ಹಿಂಸಾಚಾರದ ಪ್ರಮಾಣವನ್ನು ಹೆಚ್ಚಿಸುತ್ತಿದ್ದಾರೆ. ಮುಸ್ಲಿಮ್ ಮೂಲಭೂತವಾದಿಗಳು ಕೋಲ್ಕತ್ತಾದ ಕಟ್ವಾ, ಕಾಲಿಗ್ರಾಮ, ಇಲಾಂ ಬಜಾರ್, ಮೇಟಿಯಾಬುರ್ಜ್ ಮುಂತಾದ ಕಡೆಗಳಲ್ಲಿ ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇಂತಹ ಮೂಲಭೂತವಾದಿಗಳ ಗುಂಪುಗಳ ಭಯದಿಂದಾಗಿಯೇ ಗಡಿಪ್ರದೇಶದಲ್ಲಿ ವಾಸಿಸುತ್ತಿರುವ ಹಿಂದೂಗಳು ಸುರಕ್ಷಿತ ಜಾಗಗಳಿಗೆ ವಲಸೆ ಹೋಗುತ್ತಿದ್ದಾರೆ. ನಕಲಿ ನೋಟುಗಳ ಹಾವಳಿ, ಗೋವು ಸಾಗಣಿಕೆಯಂತಹ ದುಷ್ಟ ಚಟುವಟಿಕೆಗಳು ಈ ಗುಂಪುಗಳಿಂದ ನಡೆಯಲ್ಪಟ್ಟಿವೆ. ಬರ್ದವಾನ್ ಬಾಂಬ್ ಸ್ಫೋಟದ ಸಂದರ್ಭದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ)ದ ತನಿಖೆಯ ಪ್ರಕಾರ ಪಶ್ಚಿಮ ಬಂಗಾಳದೆಲ್ಲೆಡೆ ಈ ತರಹದ ಭಯೋತ್ಪಾದಕ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ ಹಾಗೂ ಜಿಹಾದೀ ಉಗ್ರವಾದಿಗಳು ಎರಡೂ ದೇಶದ ಗಡಿ ಭಾಗಗಳಲ್ಲಿ ಚುರುಕುಗೊಂಡಿವೆ.

ಇಂತಹ ಮೂಲಭೂತವಾದಿಗಳನ್ನು ಬಗ್ಗುಬಡಿಯುವ ಬದಲು ಅವರನ್ನು ಪೋಷಿಸುವವರಿಗೆ ಸರಕಾರದ ಮಂತ್ರಿಗಿರಿ, ರಾಜಕೀಯ, ಲಾಭವುಳ್ಳ ಸರಕಾರಿ ಸಂಸ್ಥೆಗಳಲ್ಲಿ ಸ್ಥಾನಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಅಲ್ಲದೇ ರಾಜ್ಯ ಸರಕಾರವೇ ಹಿಂದೂ ಉತ್ಸವಗಳನ್ನು ಆಚರಿಸಲು ಅಡ್ಡಗಾಲು ಹಾಕುತ್ತಿದೆ. ಮುಸ್ಲಿಮರ ಮೊಹರಮ್ ಹಬ್ಬಕ್ಕೆ ಅನುಕೂಲವಾಗುವಂತೆ ನವರಾತ್ರಿಯ ಸಂದರ್ಭದಲ್ಲಿ ದುರ್ಗಾಮಾತೆಯ ವಿಸರ್ಜನೆಯ ಸಮಯವನ್ನು  ಮೊಟಕುಗೊಳಿಸಿತ್ತಾದರೂ ಕೋಲ್ಕತ್ತಾ ಹೈಕೋರ್ಟ್ ಸರಕಾರಕ್ಕೆ ಛೀಮಾರಿ ಹಾಕಿದೆ.

ಬಂಗಾಳದಲ್ಲಿ ಬಾಂಬ್ ಸ್ಫೋಟಗಳು, ದಂಗೆಗಳು, ಅಗ್ನಿದಾಳಿಗಳು, ಮಹಿಳೆಯರ ಮೇಲಿನ ಅತ್ಯಾಚಾರಗಳು ಈಗ್ಗೆ ಕೆಲ ವರ್ಷಗಳಿಂದ ವರದಿಯಾಗುತ್ತಿವೆ. ಹಿಂದೂಗಳಲ್ಲಿ ಅನುಸೂಚಿತ ಜಾತಿಯವರೇ ಅತಿ ಹೆಚ್ಚು ಕಿರುಕುಳಗಳಿಗೆ ಬಲಿಯಾಗಿದ್ದಾರೆ. ಜುರನ್ಪುರ, ವೈಷ್ಣವನಗರ, ಖರಗ್ಪುರ, ಮಲ್ಲರಪುರಗಳಲ್ಲಿ ಆರು ಮಂದಿ ದಲಿತರನ್ನು ಕೊಲ್ಲಲಾಯಿತು. ಕಳೆದ ವರ್ಷದ ದುರ್ಗಾ ಪೂಜೆಯ ಸಂದರ್ಭದಲ್ಲಿ 17 ವರ್ಷದ ದಲಿತ ಬಾಲಕಿಯ ಮೇಲೆ ಆಸಿಡ್ ದಾಳಿ ಮಾಡಲಾಗಿತ್ತು. ಧೌಲಘಡದಲ್ಲಿ 13-14 ಡಿಸೆಂಬರ್ 2016 ರಂದು ಹಿಂದೂಗಳ ಮೇಲೆ ಪೂರ್ವ ನಿಯೋಜಿತ ದಾಳಿ ನಡೆದು ಮನೆಗಳನ್ನು ಲೂಟಿಗೈದು, ಸುಟ್ಟು, ಮಹಿಳೆಯರನ್ನು ಅತ್ಯಾಚಾರವೆಸಗಿದ ಹೀನ ಕೃತ್ಯ ನಡೆಯಿತು. ಉಗ್ರವಾದಿಗಳನ್ನು ನಿಯಂತ್ರಿಸುವುದನ್ನು ಲೆಕ್ಕಿಸದೇ ಇಡೀ ಪ್ರಕರಣವನ್ನೇ ಮುಚ್ಚಿಹಾಕಲು ಸರಕಾರ ಪ್ರಯತ್ನಿಸಿತು. ಕೆಲ ನಿಷ್ಪಕ್ಷಪಾತ ಪತ್ರಕರ್ತರು ಈ ಬಗ್ಗೆ ಬೆಳಕು ಚೆಲ್ಲಿದ್ದಕ್ಕೆ ಅವರ ಮೇಲೆ ಪೊಲೀಸ್ ಕೇಸುಗಳನ್ನು ದಾಖಲಿಸಲಾಗಿದ್ದು ದುರದೃಷ್ಟಕರ.

ದೇಶಭಕ್ತಿಯನ್ನು ಜಾಗೃತಗೊಳಿಸುವ ಶಾಲೆಗಳನ್ನು ಮುಚ್ಚಿಸುವ ಬೆದರಿಕೆಯನ್ನು ರಾಜ್ಯ ಸರಕಾರವೇ ಹಾಕುತ್ತಿದೆ. ಆದರೆ ವಿಪರ್ಯಾಸವೆಂದರೆ ಜಿಹಾದಿ, ಮೂಲಭೂತವಾದಿ ಶಿಕ್ಷಣ ಒದಗಿಸುತ್ತಿರುವ ಸಿಮುಲಿಯಾ ಮದರಾಸದ ಬಗ್ಗೆ ತಿಳಿದೂ ತಿಳಿಯದೇ ಇರುವ ಹಾಗೆ ಇದ್ದು ಕುರುಡು ವರ್ತನೆಯನ್ನು ಸರ್ಕಾರ ತೋರುತ್ತಿದೆ. ಮೂಲಭೂತವಾದಿಗಳ ಅಣತಿಯಂತೆ ಬಾಂಗ್ಲಾ ಭಾಷೆಯ ಶಬ್ದಗಳನ್ನು ಶಾಲಾ ಪುಸ್ತಕಗಳಲ್ಲಿ ಬದಲಿಸಹೊರಟಿದೆ. ಶಾಲೆಗಳಲ್ಲಿ ನಡೆಯುವ ಸರಸ್ವತಿ ಪೂಜೆಯನ್ನೂ ನಿಲ್ಲಿಸುವ ಹುನ್ನಾರ ನಡೆಯುತ್ತಿದೆ. ಮಿಲಾದ್-ಉನ್-ನಬಿಯ ನೆಪ ಒಡ್ಡಿ ರಾಜ್ಯ ಸರಕಾರ ಶಿಕ್ಷಣವನ್ನು ಇಸ್ಲಾಮೀಕರಣಗೊಳಿಸುತ್ತಿದೆ.

ಕಳೆದ ವರ್ಷ ಕೋಲ್ಕತ್ತಾದಿಂದ 40ಕಿಮಿ ದೂರದ ತೆಹತ್ತಾದ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಿಲಾದ್-ಉನ್-ನಬಿ ಯನ್ನು ಆಚರಿಸಲು ನಿರಾಕರಿಸಿದ ಶಾಲಾ ಆಡಳಿತವರ್ಗವನ್ನು ಮೂಲಭೂತವಾದಿಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, 1750 ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಶಾಲೆಯನ್ನು ಒಂದು ತಿಂಗಳ ಕಾಲ ಮುಚ್ಚಿಸಿಬಿಟ್ಟರು. ಅಲ್ಲದೇ ಶಾಲೆಯ ಮಹಿಳಾ ಶಿಕ್ಷಕರನ್ನು ಬಲವಂತವಾಗಿ ಕೂಡಿಹಾಕಲಾಗಿತ್ತು.

ಭಾರತ ವಿಭಜನೆಯ ಹೊತ್ತಿಗೆ, ಹಿಂದೂ ಬಾಹುಳ್ಯದ ಬಂಗಾಳವನ್ನು ಪಶ್ಚಿಮ ಬಂಗಾಳವೆಂದು ಕರೆಯಲಾಗಿತ್ತು. ಆಗಿನ ಪೂರ್ವ ಪಾಕಿಸ್ತಾನ – ಇಂದಿನ ಬಾಂಗ್ಲಾದೇಶದಲ್ಲಿ ಅತಿಯಾದ ಕೋಮುಗಲಭೆ, ಅತ್ಯಾಚಾರಗಳಿಂದ ಹೆದರಿ ಹಿಂದೂಗಳು ಪಶ್ಚಿಮ ಬಂಗಾಳಕ್ಕೆ ವಲಸೆ ಬಂದರು. ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ವಸಲೆ ಬಂದಾಗಿಯೂ, 78.45 ಶೇಕಡ ಇದ್ದ ಹಿಂದೂ ಜನಸಂಖ್ಯೆ ಇಂದು 70.54 ಶೇಕಡಕ್ಕೆ ಇಳಿದಿದೆ. ದೇಶದ ಏಕತೆ ಹಾಗೂ ಸಮಗ್ರತೆಗೆ ಇದು ಮಾರಕವಾಗಿದೆ.

ಎಬಿಪಿಎಸ್ ಇಂತಹ ಉಗ್ರವಾದದ ಹಿಂಸಾಚಾರವನ್ನು ಹಾಗೂ ರಾಜ್ಯ ಸರಕಾರದ ಮುಸ್ಲಿಮ್ ತುಷ್ಟೀಕರಣದ ನೀತಿಯನ್ನು ಖಂಡಿಸುತ್ತದೆ. ಹಾಗೂ ದೇಶದ ನಾಗರಿಕರು ಜಿಹಾದಿ ಅಟ್ಟಹಾಸ, ಜಾತಿವಾದಿ ರಾಜಕೀಯದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕೆಂಬ ಕರೆ ನೀಡುತ್ತದೆ. ದೇಶದ ಮಾಧ್ಯಮಗಳು ಇಂತಹ ಹೀನ ಕೃತ್ಯಗಳನ್ನು ಜನರ ಮುಂದಿಡಬೇಕೆಂದು, ನಿಷ್ಪಕ್ಷಪಾತವಾಗಿ ನಿರ್ವಹಿಸಬೇಕಾಗಿ ಆಗ್ರಹಿಸುತ್ತದೆ. ಬಂಗಾಳದ ರಾಜ್ಯ ಸರ್ಕಾರ ಕೀಳು ಮಟ್ಟದ ಮುಸ್ಲಿಮ್ ಮತ ಬ್ಯಾಂಕ್‍ನಿಂದ ಮೇಲೆದ್ದು ಸಾಂವಿಧಾನಿಕ ಬಾಧ್ಯತೆಗಳನ್ನು ಆಚರಿಸಲಿ ಎಂದು ಎಬಿಪಿಎಸ್ ಕರೆ ನೀಡುತ್ತದೆ. ದೇಶದ ಭದ್ರತೆಯ ದೃಷ್ಟಿಯಿಂದ ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುವ ಜಿಹಾದಿ ಗುಂಪುಗಳನ್ನು ನಿಗ್ರಹಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಬಿಪಿಎಸ್ ಕೇಂದ್ರ ಸರಕಾರವನ್ನು ಆಗ್ರಹಿಸುತ್ತದೆ.

ಶ್ರದ್ಧಾಂಜಲಿ

ಸಭೆಯಲ್ಲಿ ಕಳೆದ ವರ್ಷ ನಮ್ಮನ್ನಗಲಿದ ಮಹನೀಯರಿಗೆ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪ್ರಚಾರಕರಾಗಿದ್ದ ಶ್ರೀ ಸೂರ್ಯನಾರಾಯಣ ರಾವ್, ಶ್ರೀ ಮೈ ಚ ಜಯದೇವ, ಮಧ್ಯಪ್ರದೇಶದ  ಮಾಜಿ ರಾಜ್ಯಪಾಲರಾಗಿದ್ದ ಡಾ. ಭಾಯಿ ಮಹಾವೀರ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಶ್ರೀ ಸುಂದರಲಾಲ್ ಪಟ್ವಾ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ  ಶ್ರೀ ರಾಮ ನರೇಶ್, ಮಾಜಿ ಕೇಂದ್ರ ಸಚಿವರಾಗಿದ್ದ ಶ್ರೀಮತಿ ಜಯವಂತಿಬೆನ್ ಮೆಹ್ತಾ, ಶ್ರೀಮತಿ ಶಶಿಕಲಾ ಕಕೋಡ್ಕರ್, ಕುಮಾರಿ ಜಯಲಲಿತಾ, ಪಂಜಾಬಿನ ಮಾಜಿ ಮುಖ್ಯಮಂತ್ರಿಗಳಾಗಿದ್ದ ಶ್ರೀ ಸುರಜಿತ್ ಸಿಂಗ್ ಬರ್ನಾಲಾ, ಮಾಜಿ ಕೇಂದ್ರ ಸಚಿವರಾದ ಶ್ರೀ ಪಿ ಶಿವಶಂಕರ್, ಸಿಬಿಐನ ಮಾಜಿ ನಿರ್ದೇಶಕರಾಗಿದ್ದ ಶ್ರೀ ಜೋಗಿಂದರ್ ಸಿಂಗ್, ಖ್ಯಾತ ಸಿನಿಮಾ ಕಲಾವಿದರಾದ ಓಂ ಪುರಿ, ಇಸ್ರೋನ ಮಾಜಿ ಅಧ್ಯಕ್ಷರಾದ ಶ್ರೀ ಜಿ ಕೆ ಮೆನನ್, ಕರ್ನಾಟಕ ಸಂಗೀತದ ದಿಗ್ಗಜ ಶ್ರೀ ಎಂ ಬಾಲಮುರಳಿಕೃಷ್ಣ, ಹಿರಿಯ ಪತ್ರಕರ್ತ ಹಾಗೂ ಟೈಮ್ಸ್ ಆಫ್ ಇಂಡಿಯಾದ ಮಾಜಿ ಸಂಪಾದಕರಾದ ದಿಲೀಪ್ ಪಡಗಾಂವ್ಕರ್, ತಮಿಳು ಸಾಪ್ತಾಹಿಕ ತುಘಲಕ್ ನ ಸಂಪಾದಕರಾದ ಶ್ರೀ ಚೋ ರಾಮಸ್ವಾಮಿ, ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಅಲ್ತಮಸ್ ಕಬೀರ್, ಆರ್‌ಎಸ್‍ಪಿ ನಾಯಕರಾದ ಶ್ರೀ ವಿ ಪಿ ರಾಮಕೃಷ್ಣ ಪಿಳ್ಳೈ, ಕೇರಳದ ಸಮಾಜವಾದಿ ನಾಯಕರಾದ ಶ್ರೀ ವಿಶ್ವಾಂಭರಣ, ಮಾಜಿ ಲೋಕಸಭಾ ಸ್ಪೀಕರ್ ಶ್ರೀ ರಬಿ ರಾಯ್, ಹಾಗೂ ಕೇರಳದ ಕಮ್ಮ್ಯುನಿಸ್ಟರ ಹಿಂಸಾಚಾರಕ್ಕೆ ಬಲಿಯಾದ ಅಮಾಯಕ ಬಂಧುಗಳ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 

ಮಾರ್ಚ್ 24, 2017                                                                            ವಿ ನಾಗರಾಜ

ಬೆಂಗಳೂರು.                                                               ಕ್ಷೇತ್ರೀಯ ಸಂಘಚಾಲಕ, ಆರ್‌ಎಸ್‍ಎಸ್

ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೆಸ್ಸೆಸ್ ಪ್ರಾಂತ ಸಹಕಾರ್ಯವಾಹ ಮ ಪಟ್ಟಾಭಿರಾಮ ಮಾತನಾಡಿದರು.

 

Leave a Reply

Your email address will not be published.

This site uses Akismet to reduce spam. Learn how your comment data is processed.