ಅಶ್ವತ್ಥ ನಾರಾಯಣ (ಅ.ನಾ.)

ಗುಬ್ಬಿಯ ಮರಿಯೇ ಗುಬ್ಬಿಯ ಮರಿಯೇ
ಚಿಂವ್ ಚಿಂವ್ ಎನ್ನುತ ಹಾರುತ ಬಂದಿಹೆ
ತಿನ್ನಲು ಕಾಳನು ಕೊಡುವೆನು ಬಾಬಾ
ನಿನ್ನಯ ಉಲಿಯದು ತಂದಿದೆ ತೋಷವನು||
ಪುಟ್ಟದು ಮನೆಯನು ಕಟ್ಟಿಸಿ ಬಿಡುವೆನು
ಮೆತ್ತನೆ ಹುಲ್ಲನು ಒಳಗಡೆ ಹಾಸುವೆ
ಮಲಗಲು ನೆರವನು ನೀಡುವೆ ಗುಬ್ಬಿಯೆ
ಊಟದ ಸಮಯಕೆ ಧಾನ್ಯವ ಹಾಕುವೆನು||
ನಗರದ ಹೆಚ್ಚಿನ ಶಬ್ದವ ಕೇಳುತ
ಭಯವನು ಹೊಂದುತ ಪಟ್ಟಣ ತೊರೆದೆಯ
ಊರಿನ ಆಚೆಗೆ ಹೊರಟೇ ಹೋದೆಯ?
ನಿನ್ನಯ ರಾಗವ ಕೇಳುವ ಆಸೆಯಿದೆ||
ಜಂಗಮವಾಣಿಯ ಅಲೆಗಳ ಹೊಡೆತಕೆ
ನಿನ್ನಯ ಬದುಕಿಗೆ ಬಂದಿತೆ ತ್ರಾಸವು?
ನಮ್ಮಯ ಸ್ವಾರ್ಥಕೆ ಬಲಿಪಶು ಆದೆಯ?
ನಿನಗೂ ಜೀವನ ನಡೆಸುವ ಹಕ್ಕುಇದೆ||
ಸೂಕ್ಷ್ಮದ ಬುದ್ಧಿಯು ನಿನ್ನಲಿ ತುಂಬಿದೆ
ಹಾರುವ ಭಂಗಿಯು ರೋಚಕ ಕಂಡಿದೆ
ಎಲ್ಲರ ಮನಸನು ತಣಿಸುವ ಗುಬ್ಬಿಯೆ
ಅಂಗಳದಲ್ಲಿಯೆ ವಾಸಿಸು ಮುದದಿಂದ||