ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ನಿಲುಮೆ ಬಳಗ ಮತ್ತು ಜೈಭಾರ್ಗವ ಬಳಗದ ವತಿಯಿಂದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರು ಬರೆದಿರುವ ಯಹೂದಿ ಪುಸ್ತಕ ಬಿಡುಗಡೆ ಸಮಾರಂಭವು ನಡೆಯಿತು.
ಸುವರ್ಣ ನ್ಯೂಸ್ನ ಪತ್ರಕರ್ತರಾದ ಅಜಿತ್ ಹನುಮಕ್ಕನವರ ಅವರು ಪುಸ್ತಕವನ್ನು ಪರಿಚಯಿಸುತ್ತಾ
” ಈ ಪುಸ್ತಕವನ್ನು ಓದುತ್ತಾ ಇಸ್ರೇಲ್, ಯಹೂದಿ, ಸಂಘರ್ಷ ಎಲ್ಲವೂ ನೆನಪಾಯಿತು.”೧ ಸ್ಕ್ವೇರ್ ಫೂಟ್, ಒಂದು ಡಾಲರ್,ಒಂದು ಲೀಟರ್ ನೀರು” ಇದು ಅವರ ಕೃಷಿಯ ಸೂತ್ರವಾಗಿತ್ತು.ಕೃಷಿ,ವಿಜ್ಞಾನ, ತಂತ್ರಜ್ಞಾನ ಎಷ್ಟೆಲ್ಲ ಇದ್ದರೂ ಆ ದೇಶಕ್ಕೆ ಭದ್ರತೆಯಿರಲಿಲ್ಲ. ಇಸ್ರೇಲ್ ಅನ್ನುವ ದೇಶ ಒಂದು ಜಗತ್ತಿನ ಭೂಪಟದಲ್ಲಿ ಇದೆ ಎಂದರೆ ಅದೊಂದು ಪವಾಡ. ಈ ಪುಸ್ತಕ ನಮಗೇಕೆ ಮುಖ್ಯ ಎಂದರೆ ಅವರು ಮಾಡಿದ Fight for existence ನಮಗೂ ಶುರುವಾಗಬಹುದು. ಅವರ ಸಂಘರ್ಷದ ಇತಿಹಾಸವನ್ನು ನಾವು ತಿಳಿಯಬೇಕು, ಮುಂದಿನ ತಲೆಮಾರಿಗೆ ತಿಳಿಸಬೇಕು. ನಾಳೆ ಒಂದು ದಿನ ಜೀವನ್ಮರಣದ ಪ್ರಶ್ನೆ ಬಂದಾಗ ಇಸ್ರೇಲ್ ಗೆದ್ದ ಕಥೆ ನಮಗೆ ಪ್ರೇರಣೆ ಕೊಡಬೇಕು.ದೇಶ ಅಂತ ಬಂದಾಗ ಒಗ್ಗಟ್ಟಾಗಿ ಇದ್ದು ಬೇರೆಯ ಅಭಿಪ್ರಾಯ ಭೇದಗಳ ಇದ್ದರೂ ಚಿಂತೆಯಿಲ್ಲ ಎನ್ನುವುದನ್ನು ಅವರಿಂದ ನಾವು ಕಲಿಯಬೇಕು. ಮೊಸಾದ್ನ ಆಪರೇಷನ್ನಿನ ಕಥೆಗಳು ಈ ಯಹೂದಿ ಪುಸ್ತಕದಲ್ಲಿದೆ.ಪ್ರಪಂಚದ ಯಾವುದೇ ಯಹೂದಿಯ ಮೇಲೆ ದಾಳಿ ಮಾಡಿದರೆ ಅದು ಇಸ್ರೇಲ್ನ ಮೇಲೆ ಯುದ್ಧ ಘೋಷಿಸಿದಂತೆ ಎಂಬ ಛಾತಿ ಬೆಳೆಸಿಕೊಂಡಿದೆ ಇಸ್ರೇಲ್.ಅದರ ಕುರಿತಾದ ವಿಚಾರ ತಿಳಿಯಬೇಕಾದ ಅಗತ್ಯವಿದೆ.ಒಬ್ಬ ವ್ಯಕ್ತಿಯಾಗಿ, ಒಂದು ದೇಶವಾಗಿ ಯೋಚಿಸಲು ಹೊಸ ಹೊಳಹು ನೀಡುವ ಪುಸ್ತಕ ಇದು. ಇಂತಹ ಪುಸ್ತಕಕ್ಕೆ ಶ್ರೀಕಾಂತ ಶೆಟ್ಟರಿಗೆ ಧನ್ಯವಾದಗಳು”ಎಂದರು.
ಪುಸ್ತಕದ ಲೇಖಕರಾದ ಶ್ರೀಕಾಂತ್ ಶೆಟ್ಟಿಯವರು ಮಾತನಾಡಿ, “ಹೆಚ್.ವಾಸುಕಿ ಎನ್ನುವವರು ಇಸ್ರೇಲಿನ ಬಗೆಗೆ ಲೇಖನ ಬರೆಯುತ್ತಿದ್ದರು.ಓದುವಾಗ ಈ ರೀತಿಯದ್ದೇಕೆ ಭಾರತಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಯೋಚನೆ ಮಾಡಿದೆ. ಅವರು ಮಾಡಿದ ಸಾಹಸಗಳು ಹೇಗೆ ದೇಶವನ್ನು ಕಟ್ಟುವಾಗ ತಮ್ಮ ಎಲ್ಲವನ್ನು ಧಾರೆಯೆರೆದು ಸಂಘರ್ಷ ನಡೆಸಿದರು, ದೇಶದ ಅಗತ್ಯ ಬಂದಾಗ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟ ಅವರ ನಿಲುವು ನಿಜಕ್ಕೂ ಶ್ಲಾಘನೀಯ. ಅವರು ಅವರ ಹಿಬ್ರೂ ಭಾಷೆಯನ್ನ ಮೇಲೆತ್ತಿಕೊಂಡ ಬಗೆಯನ್ನ ನಾವು ನಿಜಕ್ಕು ಸಂಸ್ಕೃತ ಭಾಷೆಯ ಪುನರುತ್ಥಾನಕ್ಕೆ ಪ್ರೇರಣೆ ಪಡೆದುಕೊಳ್ಳಬೇಕು” ಎಂದರು.
ನಂತರ ಮಾತನಾಡಿದ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ವಿ.ನಾಗರಾಜ ಅವರು ಮಾತನಾಡಿ ಸ್ವದೇಶ ಮತ್ತು ಸ್ವಧರ್ಮದ ಉಳಿವಿನ ವಿಚಾರ ಬಂದಾಗ ಇಸ್ರೇಲಿಗರು ತಮ್ಮ ದೇಶವನ್ನು ಸಮರ್ಥಿಸಿಕೊಳ್ಳುವ ರೀತಿ ನಿಜಕ್ಕೂ ಸ್ಮರಣಾರ್ಹ.ಇಸ್ರೇಲ್ನ ನಿರ್ಮಾಣದಲ್ಲಿ ಭಾರತ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದೆ.ಹೈಫಾದ ಲಿಬರೇಶನ್ಗೆ ಭಾರತದ ಕೊಡುಗೆ ಅಪಾರ. ಇಸ್ರೇಲಿಗರು ಈಗಲೂ ಅದನ್ನು ತಮ್ಮ ಪಠ್ಯಗಳಲ್ಲಿ ಮಕ್ಕಳಿಗೆ ಹೇಳುತ್ತಾರೆ ಎಂದರು.
ವಿಂಗ್ ಕಮಾಂಡರ್ ಸುದರ್ಸನ್, ಹಿರಿಯ ಪತ್ರಕರ್ತರಾದ ದು.ಗು.ಲಕ್ಷ್ಮಣ,ಸಾಮಾಜಿಕ ಕಾರ್ಯಕರ್ತರಾದ ಶ್ರೀ ವಾದಿರಾಜ್, ರಾಜೇಶ್ ಪದ್ಮಾರ್, ನಿಲುಮೆ ಬಳಗದ ರಾಕೇಶ್ ಶೆಟ್ಟಿ,ಜೈಭಾರ್ಗವ ಬಳಗದ ಅಜಿತ್ ಕಿರಾಡಿ ಉಪಸ್ಥಿತರಿದ್ದರು.
ಅಜಿತ್ ಶೆಟ್ಟಿ ಹೆರಂಜೆ ನಿರೂಪಿಸಿ,ವಸಂತ್ ಗಿಳಿಯಾರ್ ಸ್ವಾಗತಿಸಿದರು