ಅಂದು 2019ರ ಕಾರ್ತಿಕ ವಿಷ್ಣು ದೀಪೋತ್ಸವ.. ಬೆಂಗಳೂರಿನ ಶ್ರೀಪತಿಜೀ ತಮ್ಮ ಜೊತೆ ಒಬ್ಬ ಹಿರಿಯರನ್ನು ನಮ್ಮೂರಿಗೆ ಕರೆದುಕೊಂಡು ಬರುವವರಿದ್ದರು. ಬಂದವರೋ ಶತಾಯುಷ್ಯಕ್ಕೆ ಅತ್ಯಂತ ಸಮೀಪವಿದ್ದವರು. ನಮ್ಮ ಜಿಲ್ಲೆಯ ಅಧ್ಯಕ್ಷರಾದರೋ ನಮ್ಮ ಚಿಕ್ಕಮಗಳೂರಿನ ಸಮೀಪದ ಸಖರಾಯಪಟ್ಟಣದಲ್ಲಿರುವವರು. ಹಿರಿಯರ ಪ್ರವಾಸ ನಿಶ್ಚಯವಾಗಿದ್ದು ಚಿಕ್ಕಮಗಳೂರೆಡೆಗೆ. ಅಧ್ಯಕ್ಷರು ಇಲ್ಲಿಗೆ ಬರಲು ಊರದೇವರು ಶ್ರೀರಂಗನಾಥನ ಕಾರ್ತಿಕ ದೀಪೋತ್ಸವ, ಬರಲಾಗುವುದಿಲ್ಲ ಏನು ಮಾಡುವುದೆಂದು ಚಡಪಡಿಸುತ್ತಿರುವಾಗ ಬೀರೂರಿಂದ ಹಿರಿಯರನ್ನು ಕರೆತರುವ ದಾರಿಯಲ್ಲೇ ಸಖರಾಯಪಟ್ಟಣ ಇರುವುದರಿಂದ ಪೂಜೆ ಮುಗಿಸೇ ಬರುವುದೆಂದು ನಿಶ್ಚಯ ಮಾಡಿಬಿಟ್ಟರು ನಮ್ಮ ಹಿರಿಯರು. ಅಯ್ಯೋ... ಇಷ್ಟು ಸರಳವಾಗಿ ಎಲ್ಲವೂ ಪರಿಹಾರವಾಯ್ತಲ್ಲಾ, ಸದ್ಯ!! ನಮಗೂ ಹೂವಿನ ಜತೆ ನಾರಿನಂತೆ ವಿಷ್ಣು ದೀಪೋತ್ಸವ ಸಿಗುವಂತಾಯ್ತಲ್ಲಾಂತ ಮನಸು ಅರಳಿತು. ನಾವೆಲ್ಲಾ ಸಖರಾಯಪಟ್ಟಣಕ್ಕೇ ಹೋಗಿ ಅವರ ಜೊತೆ ಗಂಟೆಗಟ್ಟಲೇ ಸಮಯ ಇರುವಂತಾದದ್ದೇ ನಮ್ಮ ಸೌಭಾಗ್ಯ.ಅಬ್ಬಾ! ಅದೆಂತಾ ಸರಳತೆ ವಿನಯ, ಪ್ರೀತಿತುಂಬಿದ ಮಾತುಕತೆ. ಅವರೇ ನಮ್ಮ ಕಲಾಲಾಂದ್ರ ಶ್ರೀ ಯೋಗೀಂದ್ರಜೀ. ಸಂಸ್ಕಾರಭಾರತೀ ಸಂಸ್ಥಾಪಕರೂ, ರಾ.ಸ್ವ.ಸಂಘದ ಹಿರಿಯ ಪ್ರಚಾರಕರೂ ಆಗಿದ್ದ ಮಾನ್ಯರು. ಪದ್ಮಶ್ರೀ ಪುರಸ್ಕೃತ ಶ್ರೀ ಯೋಗೇಂದ್ರಜೀ ಬಾಬಾ.

“ರೇಖಾ ಇಧರ್ ಆವೋ..ಇನ್ ಸಬ್ ಕಾ ಏಕ್ ಎಕ್ ಕರ್ಕೆ ಸಬ್ಕಾ ಪರಿಚಯ್ ಕರವಾದೋ…”ಎಂದು ಎಲ್ಲರ ಪರಿಚಯ ಮತ್ತು ಅವರವರ ಕುಟುಂಬದಲ್ಲಿ ಯಾರ್ಯಾರಿದ್ದಾರೆ, ಏನೇನು ಮಾಡ್ತಾರೆ ಎಲ್ಲಾ ಹೇಳಬೇಕೆಂದು ಹೇಳಿ ತಿಳಿದುಕೊಂಡರು . “ಬಾಪ್ ರೇ ಬಾಪ್ ಸಬಕಾ ಪರಿಚಯ್ ಅಚ್ಛಾ ಕಿಯಾ.. “ಎಂದು ಖುಷಿಪಟ್ಟವರು.ಇದು ಸಂಘಟನೆಯ ಒಂದು ಪಾಠ. ನಮಗೆಲ್ಲಾ ಕೇವಲ ವ್ಯಕ್ತಿ ಗೊತ್ತಿದ್ದರೆ ಸಾಲದು ,ಅವರ ವ್ಯಕ್ತಿತ್ವ, ಕುಟುಂಬ ಎಲ್ಲಾ ತಿಳಿದಿರಬೇಕಾದ್ದು ನಮ್ಮ ಜವಾಬ್ದಾರಿ ಎಂದು ಅಂದು ಸ್ಥೂಲವಾಗಿ ತಿಳಿಸಿಕೊಟ್ಟ ಮಹನೀಯರು.


ಭಗವಂತನ ಸನ್ನಿಧಾನದಲ್ಲಿ ನಾವೆಲ್ಲರೂ ಚಿಕ್ಕವರೇ ಅಂತ ರಂಗನಾಥನ ದೇವಸ್ಥಾನದಲ್ಲಿ ಸತತ ಎರಡೂವರೆ ಗಂಟೆ ಕಾಲ ತಮ್ಮ ಏರು ವಯಸ್ಸಿನಲ್ಲಿಯೂ ದೇವಳದ ನವರಂಗ ಮಂಟಪದ ಕಲ್ಲಿನ ಮೇಲೆ ಚಾಪೆ ಹರಡಿ ಕುಳಿತು ಅಭಿಷೇಕ,ಪೂಜೆ ಮಂಗಳಾರತಿ ನಂತರವೇ ಎದ್ದದ್ದು ಅವರು .ಎಷ್ಟು ವಿನಯ, ಭಕ್ತಿ . ಏರಿದವನು ಚಿಕ್ಕವನಿರಬೇಕೆಂಬ ಮಾತನ್ನು ನಮಗೆಲ್ಲಾ ತಾವೂ ನಡೆದು ತೋರಿಸಿಕೊಟ್ಟವರು ಬಾಬಾಜೀ..

ಮತ್ತೆ ಬಂದದ್ದು ನಮ್ಮ ಮನೆಗೆ. ಮನೆ ತುಂಬಾ ನಮ್ಮ ಕಾರ್ಯಕರ್ತರು. ವಿದ್ಯಾರ್ಥಿ ಪರಿಷತ್ತಿನ ನಮ್ಮ ಹುಡುಗರು. ಊಟಕ್ಕೆ ಕುಳಿತಾಗ ಹೊಸದಾಗಿ ಬಂದಿದ್ದ ತಾಲ್ಲೂಕು ಪ್ರಚಾರಕರಾಗಿದ್ದ ಜನಾರ್ದನನ್ನು ಪಕ್ಕದಲ್ಲೇ ಕರೆದು ಕೂಡಿಸಿಕೊಂಡು ಅವನಿಗೂ ಸಂಘದ ಕಾರ್ಯಪದ್ದತಿಯ ಪಾಠ ಮಾಡಿದವರು ಬಾಬಾಜೀ. ಮತ್ತವನ ಜೊತೆ ಸಂಘ ಕಾರ್ಯಾಲಯಕ್ಕೂ ಹೋಗಿ ಒಂದಷ್ಟು ಹೊತ್ತು ಅಲ್ಲಿದ್ದವರ ಜೊತೆ ಕಾಲಕಳೆದು ಅನುಭವದಬುತ್ತಿಯನ್ನು ಕೂಡಿಸಿ ಕೊಟ್ಟು ಬಂದವರು ಬಾಬಾಜಿ .

ಸ್ವತಃ ಶ್ರೇಷ್ಠತಮ ಚಿತ್ರಕಲಾವಿದರಾಗಿದ್ದು ಸತತ 76ವರ್ಷಗಳ ತಪಸ್ವೀ ಪ್ರಚಾರಕ ಜೀವನ ,ದಣಿವರಿಯದ ನಿರಂತರ ಪ್ರವಾಸದಧ್ವರ್ಯರು ಬಾಬಾಜಿ.ತಮ್ಮ ಅವಿರತ ಪ್ರವಾಸದಲ್ಲಿ ಎದುರಾಗುತ್ತಲಿದ್ದ ಪ್ರತೀ ವ್ಯಕ್ತಿಯ ವ್ಯಕ್ತಿಗತ ಪರಿಚಯವನ್ನು, ಒಂದಷ್ಟು ವರ್ಷಗಳ ನಂತರ ಸಿಕ್ಕಾಗಲೂ ಅವರ ಹೆಸರಿಡಿದು ಮಾತನಾಡಿಸಿ ಆ ಊರಿನ ಕಾರ್ಯಕರ್ತರೆಲ್ಲರ ನೆನಪು ಮಾಡಿಕೊಂಡು ವಿಚಾರಿಸಿಕೊಳ್ಳುವ ಅಗಾಧ ನೆನಪಿನ ಶಕ್ತಿಬಾಬಾಜೀಯವರ ವೈಶಿಷ್ಟ್ಯಗಳಲ್ಲೊಂದು.

ಬಾಬಾಜೀಯವರ ಸರಳ ಜೀವನ ದೇಶ-ಕಲಾಬಂಧುಗಳೆಲ್ಲರಿಗೆ ನಿರಂತರ ಸ್ಫೂರ್ತಿಯ ಸೆಲೆ ..

ನಮ್ಮಲ್ಲಿ ಅವರು ಇದ್ದದ್ದು ಎರಡೂವರೆ ದಿನಗಳಾದರೂ ತಿಂಗಳಾನುಗಟ್ಟಲೆ ಅವರ ಬಗ್ಗೆಯೇ ನಮ್ಮ ಚರ್ಚೆ- ಮಾತುಕತೆ…

ಪ್ರಾತಃಸ್ಮರಣೀಯರಾದ ಬಾಬಾ ಯೋಗೇಂದ್ರಜೀಯವರು
ಜೇಷ್ಠ ಮಾಸದ ಏಕಾದಶಿಯಂದು ತಮ್ಮ 99ನೇ ವಯಸ್ಸಿನಲ್ಲಿ ದೇಹತ್ಯಾಗಮಾಡುವ ಮೂಲಕ ನಮ್ಮನ್ನೆಲ್ಲಾ ಅಳಿಸಿ ಹೋದ ಕಲಾಕುಲತಿಲಕರು ಪೂಜ್ಯ ಬಾಬಾಜೀ ಅವರು.ಅಳಿದಿದ್ದು ಅವರ ಕಾಯಮಾತ್ರ ಎಂಬ ಭಾವದಲ್ಲಿ ಇಹಯಾತ್ರೆ ಮುಗಿಸಿ ಪರಂಧಾಮವನ್ನೈದಿದ ಅವರ ದಿವ್ಯ ಚೇತನಕ್ಕಿದೋ ಶತ ಶತ ನಮನಗಳು.

-ರೇಖಾ ಪ್ರೇಮ್‌ಕುಮಾರ್, ಮಾತೃಶಕ್ತಿ ಪ್ರಮುಖ್,ಸಂಸ್ಕಾರ ಭಾರತಿ,

Leave a Reply

Your email address will not be published.

This site uses Akismet to reduce spam. Learn how your comment data is processed.