ಮಾತೃಭೂಮಿಯ ಕುರಿತಾದ ಆಳವಾದ ಶ್ರದ್ಧೆ ಒಡಮೂಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣನವರು ಅಭಿಪ್ರಾಯಿಸಿದರು. ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ‘ರಾಷ್ಟ್ರ ತಪಸ್ವಿ – ಶ್ರೀ ಗುರೂಜಿ’ ಪುಸ್ತಕವನ್ನು ಜಯನಗರದ ‘ಯುವಪಥ’ದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

“‘ಗಾಡಿ ಮೇರಾ ಘರ್ ಹೆ ಕೆಹಕರ್ ಜಿಸನೇ ಕೀ ಸಂಚಾರ್ ತಪಸ್ಯಾ’ಎಂಬುದು ಗುರೂಜಿ ಜೀವನದ ಸಾರವಾಗಿದೆ ಎನ್ನಬಹುದು ಎಂದಿದ್ದಾರೆ ರಂಗಾಹರಿಯವರು. ಗುರೂಜಿಯವರ ಗಾಥೆಯನ್ನು ಬರೆದ ರಂಗಾಹರಿಯವರೂ ಅಂಥದ್ದೇ ತಪಸ್ವಿಗಳು. 80ರ ವಯಸ್ಸಿನಲ್ಲೂ ಈ ಪುಸ್ತಕವನ್ನು ನಮಗೆಲ್ಲರಿಗೂ ನೀಡಿದ ಪ್ರೇರಣಾ ಸ್ರೋತ ನಮ್ಮ ನಡುವೆಯ ಚಂದ್ರಶೇಖರ ಭಂಡಾರಿಗಳು.ಮೂವರು ತಪಸ್ವಿಗಳ ಸಂಗಮ ಈ ಪುಸ್ತಕ.” ಎಂದರು.

ಅವರು ಮುಂದುವರೆದು “ಇಲ್ಲಿ ವ್ಯಕ್ತಿಯ ವೈಭವೀಕರಣವಿಲ್ಲ, ವ್ಯಕ್ತಿತ್ವದ ಅನಾವರಣಗೊಳಿಸಿದ್ದಾರೆ. ಸಂಘದಲ್ಲಿ ವ್ಯಕ್ತಿಪೂಜೆಯೂ ಇಲ್ಲ ವ್ಯಕ್ತಿತ್ವದ ಹನನವೂ ಇಲ್ಲ. ಮಾತೃಭೂಮಿಯ ಕುರಿತಾಗಿ ಆಳವಾದ ಶ್ರದ್ಧೆ ಒಡಮೂಡಬೇಕು, ವ್ಯಕ್ತಿಗತ ಶ್ರದ್ಧೆಯಲ್ಲ, ಭಾರತವೇ ನಮ್ಮ ಗುರು, ಭಾರತದ ಪ್ರತೀಕ ಭಗವಾಧ್ವಜ ನಮ್ಮ ಮುಂದೆ ಇದೆ‌ ಎಂದದ್ದು ಹೆಡ್ಗೇವಾರ್. ಅವರ ವಾರಸಿಕೆಯನ್ನು ಮುಂದುವರೆಸಿದವರು ಗುರೂಜಿ ” ಎಂದರು.

ಮುಖ್ಯ‌ಅತಿಥಿಯಾಗಿ ಆಗಮಿಸಿದ್ದ ವಿಶ್ವವಾಣಿಯ ಸಂಪಾದಕರಾದ ವಿಶ್ವೇಶ್ವರ್ ಭಟ್ ಅವರು ಮಾತನಾಡುತ್ತಾ “ನಮ್ಮನ್ನ ಪ್ರಭಾವಿಸಿದಂತಹ ವ್ಯಕ್ತಿತ್ವಗಳ ಪರಿಚಯ ಹಿಂದೆಂದಿಗಿಂತಲೂ ಇಂದು ಬಹಳ ಅಗತ್ಯವಿದೆ‌.ನಮ್ಮ ದೇಶದಲ್ಲಿ ಆರ್‌ಎಸ್‌ಎಸ್‌ನಷ್ಟು ಟೀಕೆಗೆ ಒಳಗಾದ ಮತ್ತೊಂದು ಸಂಘಟನೆಯಿಲ್ಲ. ಅದು ತನ್ನ ಕೆಲಸವನ್ನ ತಾನು ಮಾಡುತ್ತಲೇ ಇರುತ್ತದೆ.ಅದಕ್ಕೆ ಗಟ್ಟಿಯಾದ ಸೈದ್ಧಾಂತಿಕ ಭೂಮಿಕೆಯನ್ನು ಹಾಕಿಕೊಟ್ಟವರು ಶ್ರೀ ಗುರೂಜಿ” ಎಂದರು.

ಇದೇ ಸಂದರ್ಭದಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಆಶೀರ್ವಚನ ನೀಡುತ್ತಾ “ಸಮಾಜ ಜೀವನದ ಅನೇಕ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರವಿದೆ, ವಿರೋಧಿಗಳ ಎಲ್ಲ ಸುಳ್ಳು ಸುದ್ದಿಗಳಾಚೆ ಸತ್ಯಕ್ಕೆ ಜಯವಿದೆ‌.ಇತ್ತೀಚೆಗೆ ಗುರೂಜಿಯವರ ಪುಣ್ಯಸ್ಮರಣೆಯಂದು ಸಾಮಾಜಿಕ ಜಾಲತಾಣದಲ್ಲಿ ಗುರೂಜಿಯವರು ದಲಿತ ಮೀಸಲಾತಿಯನ್ನು ವಿರೋಧಿಸಿದ್ದರು ಎಂಬ ಸುದ್ದಿ ಹರಿದಾಡತೊಡಗಿತು, ಆದರೆ ಈ ಪುಸ್ತಕ ಓದುತ್ತಾ ಗುರೂಜಿಯವರು ಎಲ್ಲ ನಿಲುವುಗಳು ಸ್ಪಷ್ಟವಾಗಿವೆ. ಸ್ವಂತಕ್ಕಿಂತ ಸಮಾಜಕ್ಕೆ ಅರ್ಪಿಸಿಕೊಂಡ ಗುರೂಜಿಯವರಿಗೆ ಭಾರತವೇ ಮನೆಯಾಗಿತ್ತು” ಎಂದರು.

ಕೃತಿಯ ಅನುವಾದಕರಾದ ಶ್ರೀಯುತ ಚಂದ್ರಶೇಖರ ಭಂಡಾರಿಯವರನ್ನು ಸನ್ಮಾನಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀಮುಕುಂದ ಅವರು, ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿಯವರು,ರಾಷ್ಟ್ರೋತ್ಥಾನ ದ ಅಧ್ಯಕ್ಷರಾದ ಎಂ.ಪಿ.ಕುಮಾರ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.