ಡಾ. ಬಿ.ವಿ. ವಸಂತಕುಮಾರ್, ಲೇಖಕ ಹಾಗೂ ಸಂಶೋಧಕ

(ಉತ್ಥಾನ ಮಾಸಪತ್ರಿಕೆಯ ಫೆಬ್ರವರಿ 2026ರ ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನ)

ಹೌದು ನಾನು ಭೂಮ್ತಾಯಿ. ನಾನು ಭಾರತಮಾತೆ. ನಾನು ಕರ್ನಾಟಕ ಮಾತೆ. ನಾನು ನೀನು ನಿಂತ ನೆಲ, ಕುಂತ ನೆಲ, ನಿಮ್ಮವ್ವ ತನ್ನ ಹೊಟ್ಟೆಯಲ್ಲಿ ಒಂಬತ್ತು ತಿಂಗಳು ಒಂಬತ್ತು ದಿನ ಹೊತ್ಕಂಡ್ರೆ ನಾನು ನೀನ್ ಅವ್ವನ್ ಹೊಟ್ಟೇಲಿಂದ ಹೊರಬಂದ ದಿನದಿಂದ ಹಿಡಿದು ನೀನ್ ಮಣ್ಣೊಳಗೆ ಮಣ್ಣಾಗೋವರ್ಗೂ ಹೊತ್ತಿರ್ತೀನಿ. ಕಂದಾ ಒಸಿ ನನ್ನ್ ಮಾತ್ಕೇಳು. ನನ್ನ ಕತಿ ವ್ಯತಿ ನನ್ನ ಮಾತ್ನಾಗೈತಿ. ನಾನು ಸಿಂಧೂ ನದಿ ತಟದಲ್ಲಿ ಆಡತಿದ್ದೆ ಬೆಳೀತಿದ್ದೆ ಗಾಳಿ ಮಳೆ ಬೆಳಕು ಮಕ್ಕಳು ಮರಿ ಎಲ್ಲಾ ಎಲ್ಲಾ ಚಂದಾಕೇ ಇದ್ವು. ಆ ಸಿಂಧೂಬಯಲ್ನಾಗ ನನ್ನ ಮಾತೃದೇವ್ತೇ ಅಂದ್ರು, ಆ ಜಂಬೂದ್ವೀಪದಾಗ ಆದಿಶಕ್ತಿ ಅಂದ್ರು, ಹಿಮಾಲಯದಾಗ ಪಾರ್ವತಿ ಅಂದ್ರು, ಹಿಂದೂ ಮಹಾಸಾಗರದ ದಡದಲ್ಲಿ ಕನ್ಯಾಕುಮಾರಿ ಅಂತಂದ್ರು.

ನಾನು ನಿಮ್ಮ ಅವ್ವ. ನೀವೆಲ್ಲರೂ ನನ್ನ ಮಕ್ಕಳು. ನಿಮ್ಮ ಅಪ್ಪನ್ನ ಪಶುಪತಿ ಅಂತ ಕರೀತಿದ್ರು. ನಮ್ಮನೆ ಹೆಸರು ಬೆಂಕಿ ಬೆಳಕು. ಕಷ್ಟ ನಷ್ಟ ಎಲ್ಲಾನೂ ಕಂಡೀನಿ. ಏನ್ಮಾಡೋದು ಮಗಾ ನಾನ್ ಹಡ್ದ್ ಮಕ್ಕಳೇ ನನ್ನ ಸರಿಯಾಗಿ ನೋಡ್ಕಣ್ಣಿಲ್ಲ. ಇವಿವೇ ಕಿತ್ತಾಡುವಾಗ ಅದ್ಯಾರೋ ಅಲೆಗ್ಜಾಂಡ್ರೀ ಅಂತ ಬಂದ ನಿಮ್ಮ ದೊಡಪ್ಪ ಅಂಬಿ ಅನ್ನೋ ಅಂಬೀರನ ತಲೆ ನೆಟ್ಗಿರ್ಲಿಲ್ಲ. ನಿಮ್ಮಪ್ಪನ್ಮೇಲಿನ ಕ್ವಾಪಕ್ಕೆ ಶತ್ರುಗೇನೇ ಮಿತ್ರ ಆದ. ಹ್ಞಾ ನಾನೂ ವಸೀ ಯೋಳ್ನಿಲ್ಲಾ ಮಗೀಗ್ಹೇಳ್ದಂಗೆ ಏಳ್ದೇ ನೋಡ್ಲೇ ತಾಯ್ಗಂಡಾಗ್ಬೇಡ್ಲೇ ನನ್ನ ಹಾಲ್ಕುಡ್ದ್ ಬೆಳ್ದೀ ಅಂದೆ. ಕೇಳ್ನಿಲ್ಲ. ಇದೇಸಿಯರ ಕೂಡೆ ಸೇರ್ಕಂಡು ನಿಮ್ಮಪ್ಪನಾದ ಪುರೂರವನನ್ನೇ ನುಂಗಿ ನೀರ್ಕುಡಿಯಾಕ್ ನೋಡ್ದಾ. ನಿಮ್ಮಪ್ಪ ಬಾರೀ ಧೀರ ಸೂರಾಧಿಸೂರ. ಅಲೆಗ್ಸಾಂಡ್ರೀ ಸೈತ ಅಂಬೀರನ್ನು ಸೋಲ್ಸದಾ ಅವನ್ಗೆ ಚಂದ್ರಗುಪ್ತ ಜೋಡಿಯಾದ. ಅದೇ ಆ ಚಾಣಾಕ್ಯ ಅನ್ನೋ ಮೇಷ್ಟ್ರು ಇದ್ದಾಬುದ್ದಿಕೊಟ್ಟು ಕೈಯಿಡ್ದು ನಡ್ಸ್ದಾ. ಆ ಪುಣ್ಯಾತ್ಮ ಇಲ್ದೇ ಹೋಗಿದ್ರೇ ಆವತ್ತೇ ನಾನು ಏನಾಗ್ತಿದ್ನೋ ಕಾಣೆ. ಆವತ್ನಿಂದ ಆ ನನ್ನ ಚಾಣಕ್ಯನ್ನ ನಾನು ಹಣೇ ಮ್ಯಾಲಿನ್ ಕುಂಕ್ಮಾ ಮಾಡಿ ಇಟ್ಗಂಡೀನಿ. ಚಂದ್ರಗುಪ್ತ ಮೌರ್ಯ ನನ್ನ ಕೈಯ್ಯಾಗಿನ ತ್ರಿಶೂಲ ಆದ. ಆ ನಿನ್ನಪ್ಪ ಸಿಂಹಪ್ಪ ಆದ. ನನ್ನನ್ನ ಹೊತ್ತು ತಿರ್ಗಸ್ತಾನೆ. ಜನ ನನ್ನ ಕಂಡು ಕಾಳಿಮಾತೆ ಅಂತ ದೂರ್ದಿಂದ ನಿಂತು ಕೈಮುಗೀತಾರೆ.

ಬಾ ಕುಂತ್ಕಾ. ನಾನು ನಿಮ್ಮ ಅನಾದಿ ಕಾಲದ ಅಜ್ಜಿ ಮಾತಂಗಿ. ಅನಂತಕಾಲದ ಅವ್ವಾ ಭೂಮ್ತಾಯಿ ಭಾರತ್ಮಾತೆ. ಬಾ ಕಂದಾ ಅಂಬೀರ ದೇಶದ್ರೋಹಿ ತಾಯ್ಗಂಡ ಮತ್ತೆ ಮತ್ತೆ ಹುಟ್ಟಿಬತ್ತಾನೇ ಅವ್ನೇ. ಅವ್ನು ನನ್ನ ವೈರಿಗಳ್ಕೂಡೆ ಸ್ನೇಹ ಮಾಡ್ಕೊಂಡು ನನ್ನ ಗುಡ್ಸಿ ಗುಂಡಾರ ಮಾಡ್ಬೇಕು ಬರ್ಬಾದ್ ಮಾಡ್ಬೇಕು ಅಂತಾ ಬರ್ತಾನೇ ಇರ್ತಾನೆ. ನಾನೂ ಬ್ಯಾಡ ಮಗಾ ತಾಯ್ಗಂಡ ಆಗ್ಬ್ಯಾಡ ಮಗಾ ದುರ್ಯೋಧನ ದುಸಾಸನ ರಾವ್ಣ ಎಲ್ಲಾ ಏನಾದ್ರು ಅಂತ ಒಸಿ ತಿಳ್ಕಾ ಮಗ ಅಂದ್ರೂ ಕೇಳವಲ್ಲ.

ಅದೇ ದಾಯಾದಿ ಜಗಳ ಮಾಬಾರತ. ಅವಯ್ಯ ದೋಣ ಒಟ್ಟೆ ಹೊರ್ಕಳ್ಳಾಕ್ ಬಂದಿದ್ದ್ ದೊಣೆ ಅಂಬೋ ಮೇಷ್ಟ್ರು ಪಾಪ ಕರ್ಣನ್ ತೋರ್ಸಿ ನೀನ್ ಸೂತ, ನೀನ್ ಸೂತ, ನಾನ್ ಬಾಮಣ ನಾನ್ ಬಾಮಣ ಅಂದ ನೋಡು, ಈ ಮಾತ್ಕೇಳೀ, ಕೆಳೀ, ನನ್ಗೆನೇ ಕಿವಿ ತೂತ್ ಬಿದ್ದಾವೆ, ಎದೆ ಒಡ್ದೋಗದೆ, ಇನ್ನು ಆ ಮಗೀನ ಕರ್ಣನ್ ಪಾಡು ಯೋಳಕಾಗಲ್ಲ ಬಿಡು. ಆದ್ರೂ ಆ ನನ್ನ ಕಂದ ನನ್ನ ತಮ್ಮಂದ್ರನ್ನ ಸಾಯ್ಸಲ್ಲ ಅಂತ ಅವ್ವ ಕುಂತಿಗೆ ಮಾತು ಕೊಟ್ಟ. ಕುಳ್ಳುಬಳ್ಳಿ ಸೋದರಿಕೆ ಅಂದ್ರೆ ಇದೇ ಅಲ್ವಾ?ಅಂತದೇ ಮಾತ್ನ ಮೊನ್ ಮೊನ್ನೆ ನನ್ ಕಳ್ಳಿನ್ ಕುಡಿ ಭೀಮರಾವ್ ಅಂಬೇಡ್ಕರ್ರೂ ಹೇಳಿದ್ರು, ಸಂವಿದಾನನ ಕೊಟ್ರು. ದೇಶಾನೇ ಮೊದ್ಲೂ ಅಂದ್ರು. ಎಲ್ಲಾ ಹಿಂದೂಗಳು ಒಂದಾಗ್ಬೇಕು ಅಂದ್ರು. ನನ್ನ್ ಚಿನ್ನಪ್ಪ ಆ ಮಾತ್ಮಾ ಗಾಂಧೀಯಪ್ಪ ಹಿಂದೂ ಮುಸ್ಲಿಂ ಎಲ್ರೂ ಒಟ್ಟಿಗೆ ಇರ್ರಪ್ಪ ಅಂದ್ರು. ಆದ್ರೇನ್ ಮಾಡಾದು ನೆಲ್ದ್ ಮ್ಯಾಲೀನ ಆಸ್ಗೋ ಅವರ ಅಧಿಕಾರದ್ ಹುಚ್ಚೋ ನನ್ನ ತುಂಡ್ಮಾಡಿ ಎಲ್ಡ್ ಬಾಗ ಮಾಡ್ಕಂಡ್ರು. ರಾತ್ರಿಲೇ ಎಲ್ನೋಡಿದ್ರೂ ಹೆಣ ರಕ್ತ ರೈಲು ನದಿ ಹರ್ದಂಗ ಹರ್ದ್ವು.

ಟೇಮು ಏಟಾತೋ ನಾ ಕಾಣೆ. ಎಲ್ಲಾರೂ ಕೂಡಿ ಇಧಾನಸೌದ ಕಟ್ಕಂಡ್ರು, ಸಂಸತ್ ಭವನ ಮಾಡ್ಕಂಡ್ರು, ಆ ಪಾಕಿಸ್ತಾನ ಮಾಡ್ಕಂಡ್ ಮುಂಡೆಗಂಡ್ರು ಸೀಳ್ನಾಯಿ ತರ ಕಾಲ್ಕೆರ್ದು ಜಗಳಕ್ಕೆ ಬರ್ತಾವೆ. ಇವುನ್ನೆಲ್ಲಾ ನಾನೇ ಹಡದ್ನಾ ಅಂತ ನನ್ಗೇ ಒಮ್ಮೊಮ್ಮೆ ಅನುಮಾನ ಬತ್ತದೆ.
ಕಾಲ ಬಾಳನೇ ಕೆಟ್ಟೋಯ್ತು ಮಗಾ. ಆ ಹೆಗಡೆವಾರಪ್ಪ ಅನ್ನೋನೊಬ್ಬ ನನ್ನೊಟ್ಟೇಲಿ ಉಟ್ದೇ ಓಗಿದ್ರೆ ಅದೆಂತದೋ ಸಂಗ ಅಂತ ಮಾಡ್ದಿದ್ರೆ ಹಣೇ ಮ್ಯಾಲಿನ್ ಕುಂಕ್ಮಾ ಇರ್ತಿರ್ಲಿಲ್ಲ, ಈಟೊತ್ಗೆ ನಾನೂ ನೀನೂ ಯಾವ್ದಾದ್ರೂ ಕೆರೆನೋ ಬಾವೀನೋ ನೋಡ್ಕಾ ಬೇಕಾಗಿತ್ತು. ನಾನೊಂದು ಮಾತ್ ಹೇಳ್ತೀನಿ ಎದೆಯಾಗೆ ನೆಪ್ಪಿಟ್ಕಾ, ನೋಡು ಯಾವತ್ತೂ ಜಾತಿಗೀತೀ ಮಾಡ್ಬ್ಯಾಡ, ನೀವ್ ನೀವೇ ಆ ಜಾತಿ ಈ ಜಾತಿ ಅಂತ ಹಂದಿ ನಾಯಿ ತರ ಕಚ್ಚಾಡ್ಬ್ಯಾಡ್ರೋ. ನೀವು ನೀವು ಅಣ್ತಮ್ಮಂದ್ರು ಆಗಿ ಒಗ್ಗಟ್ಟಾಗಿರಿ. ಆ ಗಾಂಧಿಯಪ್ಪ ಅಂಬೇಡ್ಕರಪ್ಪ ಪೂಣಾದಾಗ ಒಪ್ಪಂದ ಮಾಡ್ಕೊಂಡು ಹಿಂದೂಗುಳು ಒಂದಾಗಿ ಚಂದಾಗಿ ಹುಣ್ಣಿಮಿ ತಿಂಗಳ ಬೆಳಕಿನಂಗ ಇರ್ಬೇಕೋ. ಹಚ್ಕೊಟ್ಟು ಕೆಡ್ಸೋ ಹರಾಮಿ ಮಂದಿ ಬಾಳ ಅದಾರೋ ಅದ್ಕಾ ಮೈಮ್ಯಾಲ ಎಚ್ಚರಿರಲಿ.

ನಾನು ಉಳದ್ರಾ ನೀನೂ ಉಳಿತೀ, ಇವನೂ ಉಳೀತಾನ, ಅವನೂ ಉಳೀತಾನ. ಇಲ್ಲಾ ಅಂದ್ರಾ ಅವನೂ ಇರಲ್ಲ, ಇವನೂ ಇರಲ್ಲ, ನೀನೂ ಇರಲ್ಲ. ನಿಮ್ಮ ಹೊಲ ಮನಿಯಾಗ ಇದೆಸಿ ಮಂದಿ ಇರ್ತಾರೆ ಆಗ ಲಬೋ ಲಬೋ ಅಂತ ಬಾಯ್ಬಡ್ಕಾ. ರಾಮ ಕೃಷ್ಣ ಶಿವ ಬುದ್ಧ ಬಸವ ಗಾಂಧಿ ಅಂತ ಮುಗಿಲ್ನೋಡ್ತಾ ಇರು. ಅತ್ಲಾ ಕಡಿಂದ ಕತ್ತಿ ಇಡ್ಕಂಡು ರಾವಳಾಸುರ ಬಂದಂಗ ಘಜ್ನಿ ಘೋರಿ ಬಾಬರ್ರ ಚಂಗೇಜ್ ಖಾನ ತುಘಲಕ್ಕ ಎಲ್ಲಾರೂ ಬರ್ತಾರ ಜೊತೆಗೆ ಟ್ರಂಪೂ, ಮುನೀರು, ಚೀನೀರು, ಎಲ್ಲಾ ವೈರಿಗಳ್ನೂ ಕರ್ಕಂಡು ಒಳಗ ಬಂದು ನಿನ್ನಾ ಹೊರಗ ಕಳಸ್ತಾರ. ಭವತೀ ಭಿಕ್ಷಾಂದೇಹಿ ಅಂತ ಬಿಕ್ಸಾ ಮಾಡ್ಕೋತಾ, ಗೋವಿಂದಾ ಗೋವಿಂದ ಅಂದ ಶಂಕ ಬೌವನಾಸಿ ಜಾಂಗಟಿ ಬಡ್ಕಂಡು ಊರೂರು ತಿರ್ಗು. ಜನ ನಿನ್ನ ಬ್ಯಾವರ್ಸಿ ಅಂತ ಕರೀತಾರೆ ಜರೀತಾರೆ. ಮಗಾ ಈ ಮಣ್ಣು ಈ ನೀರು ಈ ಬೆಂಕಿ ಈ ಗಾಳಿ ಈ ಆಕಾಶ ಎಲ್ಲಾ ಕೊಟ್ಟೀನಿ ನಿನಗಾ ನನ್ನನ್ನೇ ಕೊಟ್ಟೀನಿ, ಯಾಕಂದ್ರ ನೀ ದೇಶಭಕ್ತ ಆಗ್ತೀಯಾ ಅವ್ವನರಿಣ ಅಪ್ಪನರಿಣ ದೇವರರಿಣ ತೀರಸ್ತೀಯ ಅಂತ ನಂಬೀನಿ. ನಾನೂ ನಿನ್ಕೂಡೇ ದಿನ ಆರ್ ಎಸ್ ಎಸ್ ಶಾಖೇಲೀ ನಿಂತ್ಕೋಂಡು ನೀ ಹಾಡೋ ಹಾಡು-ಹ್ಞಾ ನೆನಪಾತು ನೀ ಹೀಂಗಾ ಹೇಳ್ತಿದ್ದೆ –

ನಮಸ್ತೇ ಸದಾ ವತ್ಸಲೇ ಮಾತೃಭೂಮೇ |
ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್ ||
ಮಹಾಮಂಗಲೇ ಪುಣ್ಯಭೂಮೇ ತ್ವದರ್ಥೇ
ಪತತ್ವೇಷ ಕಾಯೋ ನಮಸ್ತೇ ನಮಸ್ತೇ ||೧||
ಪ್ರಭೋ ಶಕ್ತಿಮನ್ ಹಿಂದುರಾಷ್ಟ್ರಾಂಗಭೂತಾ
ಇಮೇ ಸಾದರಂ ತ್ವಾಂ ನಮಾಮೋವಯಮ್ |
ತ್ವದೀಯಾಯ ಕಾರ್ಯಾಯ ಬದ್ಧಾ ಕಟೀಯಮ್
ಶುಭಾಮಾಶಿಷಂ ದೇಹಿ ತತ್ಪೂರ್ತಯೇ ||
ಅಜಯ್ಯಾಂ ಚ ವಿಶ್ವಸ್ಯ ದೇಹೀಶ ಶಕ್ತಿಮ್
ಸುಶೀಲಂ ಜಗದ್ಯೇನ ನಮ್ರಂ ಭವೇತ್ |
ಶ್ರುತಂ ಚೈವ ಯತ್ ಕಂಟಕಾಕೀರ್ಣಮಾರ್ಗಮ್
ಸ್ವಯಂ ಸ್ವೀಕೃತಂ ನಃ ಸುಗಂ ಕಾರಯೇತ್ ||೨||
ಸಮುತ್ಕರ್ಷನನಿಃಶ್ರೇಯಸಸ್ಯೈಕಮುಗ್ರಮ್
ಪರಂ ಸಾಧನಂ ನಾಮ ವೀರವ್ರತಮ್ |
ತದಂತಃ ಸ್ಫುರತ್ವಕ್ಷಯಾ ಧ್ಯೇಯನಿಷ್ಠಾ
ಹೃದಂತಃ ಪ್ರಜಾಗರ್ತು ತೀವ್ರಾನಿಶಮ್ ||
ವಿಜೇತ್ರಿ ಚ ನಃ ಸಂಹತಾ ಕಾರ್ಯಶಕ್ತಿರ್
ವಿಧಾಯಾಸ್ಯ ಧರ್ಮಸ್ಯ ಸಂರಕ್ಷಣಮ್ |
ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಮ್
ಸಮರ್ಥಾ ಭವತ್ವಾಶಿಷಾ ತೇ ಭೃಶಮ್ ||೩||
|| ಭಾರತ್ ಮಾತಾ ಕಿ ಜಯ್ ||

ಅಂತ ನೀ ಮೈಮರ್ತು ರಾಗ್ವಾಗಿ ಹಾಡೋವಾಗ ನಾ ಕೇಳ್ತಾ ಕೇಳ್ತಾ ಶಾಂಭವಿ ಆಗ್ತೀನಿ. ನಿನ್ನಂಥ ಕೋಟಿ ಕೋಟಿ ಮಕ್ಕಳು ನನ್ನ ಹೊಟ್ಯಾಗ ಮತ್ತ ಮತ್ತ ಹುಟ್ಟಿ ಬರ್ತಾರ. ಅಂಜ್ ಬ್ಯಾಡ ಅಳಕ್ ಬ್ಯಾಡ ಯಾವ್ ರಾವಣ ಧುರ್ಯೋಧನ ಅಲೆಗ್ಸಾಂಡ್ರೀ ಘೋರಿಗೂ ಹೆದ್ರಬ್ಯಾಡ. ಎಲ್ಲಾರಿಗೂ ಅವರವರ ಘೋರಿಗೆ ನಾನು ಜಾಗ ಮಾಡೀನಿ. ಧರ್ಮ ಅಧರ್ಮದ, ರಣರಂಗ ಮುಂಗಾರ ಮಳೀ ಮುಂದ ಬರೋ ಗುಡುಗು ಸಿಡ್ಲು ಇದ್ದಾಂಗ ಪಾಂಚಜನ್ಯ ಕೊಟ್ಟೀನಿ ನೀನೂದ್ತಾ ಇರು. ಮುಂಗಾರ ಮಳೀ, ಅಮೃತದ ಮಳೀ ಬಂದಾಬತ್ತಾದ. ಸಮುದ್ರ ಮಂತನ ಮಾಡುವಾಗ್ಲೇ ಅಲ್ವಾ ಬೂಮಿ ಲಕ್ಸ್ಮಿ ಐರ್ವಾವತ ಆನಿ ಅಮೃತ ವಿಷ ಎಲ್ಲಾ ಉಟ್ಟಿದ್ದು. ಹ್ಞಾ ಹಾಲಾಹಲಾನೂ ಬರ್ತದಾ ಕುಡಿಯಾಕ ನನ್ನೊಡೆಯ ನಂಜುಂಡ ಅದೇ ಆ ನೀಲಕಂಠ ನಿನ್ನೊಳಗಾ ಇರ್ತಾನೆ ಮಗಾ, ಅದೋ ಬಂದೇ ಬಿಟ್ಟ ನೋಡು ಆ ಕಿಟ್ಟಪ್ಪ. ತಂದೇ ಬಿಟ್ಟ ನೋಡು ತೇರ್ನ ಸುಮ್ನೆ ಹತ್ತಿ ಕುಂತ್ಕ ಧರ್ಮ ಉಳ್ಸೋ ಕೆಲ್ಸಾ ಅಧರ್ಮ ಅಳ್ಸೋ ಕೆಲ್ಸಾ ಎಲ್ಲಾ ಅವ್ನೇ ಆ ಕಿಷ್ಣ ಪರಮಾತ್ಮಾನೇ ಮಾಡ್ತಾನೆ. ಸುಳ್ಳಲ್ಲ.

ಮಹಾಭಾರತದ ಯುದ್ಧ ಸುರು ಆಗೋ ಮೊದ್ಲೇ ಅವ್ನು ನಡೂ ಮದ್ಯೆ ನಿಂತು ಅದೆಂತದೋ ಗೀತೆ ಅಂತ ಅದ್ನೇನೋ ಯೋಳ್ಲಿಲ್ವಾ ಎಲ್ಲಾರೂ ಉಟ್ಟಿರೋದು ನನ್ನಿಂದ್ಲೇ ಎಲ್ಲಾರೂ ಬದುಕ್ತಿರೋದು ನನ್ನಿಂದ್ಲೇ, ನಾ ಕೊಟ್ಟ ಪಾತ್ರ ಮಾಡ್ತಿರೋದು ಡೈಲಾಗ್ ಒಡೀತಿರೋದು ನನ್ನಿಂದ್ಲೇ, ಕಡೆಗೆ ಸತ್ತು ವೈಕುಂಠ ಸೇರೋದೂ ನನ್ನಿಂದ್ಲೇ, ಅಂತ ಏನೇನೋ ಮಾತ ಯೋಳಾದ್ನಾ ನಾನೂ ಕೇಳ್ಸಕಂಡಿದ್ದೇ, ನೀನೂ ಕೇಳ್ಸ್ಕಾ. ಅಗಾ ಆ ಕಡಿಂದ ದುಸಾಸನ ಕನ್ನಡಮ್ಮನ್ ಕೂದ್ಲನ್ನ ಸಿರೀನ ಎಳೀತವ್ನೇ ನೋಡು, ನೀ ನಡೀ ನಾ ಬೀಮನ್ ಗದೆ ತರ್ತೀನಿ ಅಂತ ಆವಮ್ಮ ಮಾಯವಾದ್ಲು.
ಕಣ್ಬಿಟ್ರೆ ಗುಡಿ ಒಳಗೆ ಗುರೂಜಿ ಹೇಳ್ಕೊಡ್ತಿದ್ದ –

ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ದುರ್ಗಾ ಪಾರಾಯಣ ಕೇಳ್ಸತಿತ್ತು.
ನಡುಮನಿಯಾಗ ನೋಡಿದ್ರಾ ಅವ್ವ ಅಜ್ಜಿ ಕೂಡಿ ಬೀಸೆಕಲ್ ಮುಂದೆ ಕುಂತು ರಾಗಿಬೀಸ್ತಾ ಬೀಸ್ತಾ ಬೀಸ್ತಾ…. ಬಳೀ ಶಬ್ದದ ಕೂಡೆ…..

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ
ಎಳ್ಳು ಜೀರಿಗಿ ಬೆಳೀವಂತ ಭೂಮ್ತಾಯ್ನ
ಎದ್ದೊಂದು ಘಳಿಗೆ ನೆನದೇನ
ಎಂದು ರಾಗವಾಗಿ ಹಾಡ್ತಿದ್ರು.

ಸ್ನಾನ ಮಾಡಿ ತಿಂಡಿ ತಿಂದು ಕಾಲೇಜಿಗೆ ಹೊರಟೆ
ನಾನಳಿವೆ ನೀನಳಿವೆ ನಮ್ಮೆಲುಬುಗಳ ಮೇಲೆ ಮೂಡುವುದು ನೋಡು ನವಭಾರತದ ಲೀಲೆ ಎಂದೋ ಓದಿದ ಕುವೆಂಪು ಅವರ ಕವಿತೆ ನೆನಪಾಯಿತು. ದೇಶ ಮೊದಲು ಅಂತ ಎದೆ ಹೇಳಿತು.

1 thought on “ನಾನು ಭೂಮ್ತಾಯಿ ಭಾರತ್ಮಾತೆ ಮಾತಾಡ್ತೀನಿ

  1. ಗುರುಗಳೇ,
    ಬಲೇ ಪಸಂದಾಗೈತೆ ನಮ್ಮ ಭಾರತಮ್ಮನ ಕತೆ.
    ಹಿಂಗೆ ಈ ಅಮ್ಮಯ್ಯವನ ದೊಡ್ಡ ಕತೆನಾ ನಮಕೆ ಇನ್ನಷ್ಟು ಇನ್ನಷ್ಟು ಬುಡಿಸಿ ಏಳಿ.
    ಶಿವ, ನಿಮ್ಮನ್ನು ಚೆನ್ನಾಗಿಟ್ಟಿರಲಿ ಶಿವಾ ….

Leave a Reply

Your email address will not be published.

This site uses Akismet to reduce spam. Learn how your comment data is processed.