ಇಂದು ಪುಣ್ಯತಿಥಿ
ಲೇಖನ: ಕು. ಧನ್ಯಾ ಗೌಡ, ಶೇಷಾದ್ರಿಪುರಂ ಪದವಿ ಕಾಲೇಜು, ಮೈಸೂರು
ಸಾವಿತ್ರಿ ಬಾಯಿ ಫುಲೆ ಅವರು ಭಾರತದ ಮಹಾನ್ ಸಮಾಜ ಸುಧಾರಕಿ ಮತ್ತು ಮಹಿಳಾ ಶಿಕ್ಷಣದ ಪಥಪ್ರದರ್ಶಕಿ. ಅವರು 1831ರ ಜನವರಿ 3 ರಂದು ಮಹಾರಾಷ್ಟ್ರದ ನೈಗಾಂವ್ ನಲ್ಲಿ ಜನಿಸಿದರು. ಆ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ಪಡೆಯಲು ಅವಕಾಶ ಬಹಳ ಕಡಿಮೆ ಇತ್ತು. ಸಮಾಜದಲ್ಲಿ ಮಹಿಳೆಯರು ಮನೆ ಕೆಲಸಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂಬ ತಪ್ಪು ಕಲ್ಪನೆ ಇತ್ತು. ಆದರೆ ಸಾವಿತ್ರಿಬಾಯಿ ಫುಲೆ ಅವರು ಈ ಅನ್ಯಾಯದ ವಿರುದ್ಧ ಹೋರಾಡಿ ಮಹಿಳಾ ಶಿಕ್ಷಣಕ್ಕೆ ಹೊಸದಾರಿ ತೆರೆದರು.
ಸಾವಿತ್ರಿಬಾಯಿ ಫುಲೆ ಅವರು ಪತಿ ಜ್ಯೋತಿಭಾ ಫುಲೆ ಅವರು ಕೂಡ ಸಮಾಜ ಸುಧಾರಕರಾಗಿದ್ದರು. ಅವರ ಪ್ರೋತ್ಸಾಹದಿಂದ ಸಾವಿತ್ರಿಬಾಯಿ ಅವರು ಶಿಕ್ಷಣ ಪಡೆದರು. ನಂತರ ಇಬ್ಬರೂ ಸೇರಿ 1848ರಲ್ಲಿ ಪುಣೆಯಲ್ಲಿ ಬಾಲಕಿಯರಿಗಾಗಿ ಭಾರತದ ಮೊದಲ ಶಾಲೆಯನ್ನು ಆರಂಭಿಸಿದರು. ಈ ಕಾರ್ಯ ಕಾಲದಲ್ಲಿ ಬಹಳ ಧೈರ್ಯದ ಕೆಲಸವಾಗಿತ್ತು. ಕೆಲವರು ಮಹಿಳೆಯರಿಗೆ ಶಿಕ್ಷಣ ನೀಡುವುದನ್ನು ವಿರೋಧಿಸಿದರು. ಅವರು ಶಾಲೆಗೆ ಹೋಗುವಾಗ ಜನರು ಅವರ ಮೇಲೆ ಕಲ್ಲು ಮತ್ತು ಸಗಣಿಯನ್ನು ಎಸೆಯುತ್ತಿದ್ದರು. ಆದರೂ ಅವರು ಧೃತಿಗೆಡದೆ ತಮ್ಮ ಸೇವೆಯನ್ನು ಮುಂದುವರೆಸಿದರು.
ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣ ಮಾತ್ರವಲ್ಲ ಸಮಾಜದಲ್ಲಿ ಇರುವ ಜಾತಿ ಬೇಧ ಮತ್ತು ಅಸಮಾನತೆಗಳ ವಿರುದ್ಧವೂ ಹೋರಾಡಿದರು. ಅವರು ವಿಧವೆಯರ ಪುನರ್ವಿವಾಹವನ್ನು ಬೆಂಬಲಿಸಿದರು. ಅನಾಥ ಮಕ್ಕಳಿಗೆ ಆಶ್ರಯ ನೀಡಿದರು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು ಇರಬೇಕು ಎನ್ನುವುದನ್ನು ಅವರು ಸಾರಿದರು.
ಸಾವಿತ್ರಿಬಾಯಿ ಅವರು ಕವಯತ್ರಿಯಾಗಿಯೂ ಪ್ರಸಿದ್ಧರಾಗಿದ್ದರು. ಅವರ ಕವನಗಳು ಸಮಾಜದ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದವು. ಅವರ ಪ್ರಮುಖ ಕೃತಿಗಳಲ್ಲಿ ಕಾವ್ಯಫುಲೆ ಮತ್ತು ಭವನ್ ಕಾಶಿ ಸುಬೋಧ ರತ್ನಾಕರ್ ಕೃತಿಗಳು ಪ್ರಸಿದ್ಧವಾಗಿವೆ.
ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಪ್ರಮುಖ ಮಾರ್ಗವೆಂದು ಅವರು ನಂಬಿದ್ದರು. 1897ರಲ್ಲಿ ಪ್ಲೇಗ್ ರೋಗಿಗಳ ಸೇವೆ ಮಾಡುವಾಗ ಅವರಿಗೂ ಸೋಂಕು ತಗುಲಿ 10 ಮಾರ್ಚ್ 1897ರಂದು ನಿಧನರಾದರು. ಅವರ ಜೀವನವು ಸಮಾಜ ಸೇವೆ, ಧೈರ್ಯ ಮತ್ತು ಸಮಾನತೆಯ ಸಂಕೇತವಾಗಿದೆ. ಸಾವಿತ್ರಿಬಾಯಿ ಫುಲೆ ಅವರು ಭಾರತದ ಇತಿಹಾಸದಲ್ಲಿ ಸದಾ ಸ್ಮರಿಸಬೇಕಾದ ಮಹಾನ್ ಮಹಿಳೆ.