ರಂಗಭೂಮಿ ಎನ್ನುವುದು ಕೇವಲ ಕಲ್ಪನೆಗಳ ಲೋಕವಲ್ಲ; ಅದು ಸಮಾಜದ ಜಾಗೃತಿ ಮತ್ತು ಇತಿಹಾಸದ ಪುನರುತ್ಥಾನದ ಪ್ರಬಲ ಮಾಧ್ಯಮ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆಯಾಗಿ ನೂರು ವರ್ಷಗಳು ತುಂಬುತ್ತಿರುವ ಈ ಭವ್ಯ ‘ಸಂಘ ಶತಾಬ್ದಿ’ಯ ಪವಿತ್ರ ಸಂದರ್ಭದಲ್ಲಿ, ಈ ಮಾತನ್ನು ಅಕ್ಷರಶಃ ಸತ್ಯವಾಗಿಸಿದ ಅಪೂರ್ವ ರಂಗಪ್ರಯೋಗವೊಂದಕ್ಕೆ ಸಾಕ್ಷಿಯಾಗುವ ಮೂಲಕ, ಬೆಂಗಳೂರಿನ ಸಾಂಸ್ಕೃತಿಕ ಇತಿಹಾಸದಲ್ಲಿ 2026ರ ಜೂನ್ 6 ಮತ್ತು 7ರ ಸಾಯಂಕಾಲಗಳು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದಾಗಿದ್ದವು. ನಾಗಪುರದ ಪ್ರಸಿದ್ಧ ‘ನಾದಬ್ರಹ್ಮ ಸಂಸ್ಥೆ’ ಪ್ರಸ್ತುತಪಡಿಸಿದ ‘ಯುಗಪ್ರವರ್ತಕ ಡಾ. ಹೆಡಗೇವಾರ್’ ಹಿಂದಿ ನಾಟಕವನ್ನು ಸತತ ಎರಡು ಪ್ರದರ್ಶನಗಳಲ್ಲಿ (ಯಲಹಂಕದ ಅಂಬೇಡ್ಕರ್ ಭವನ ಮತ್ತು ಕಾಡುಬೀಸನಹಳ್ಳಿಯ ನ್ಯೂ ಹೊರೈಜನ್ ಕಾಲೇಜು ಆವರಣ) ಸಾಕ್ಷೀಕರಿಸುವ ಸೌಭಾಗ್ಯ ನನ್ನದಾಗಿತ್ತು.

ಈ ರಂಗಪ್ರಯೋಗ ಕೇವಲ ನಾಟಕವಾಗಿರದೆ, ಶತಮಾನದ ಸಂಘದ ಗಂಗೋತ್ರಿಯ ಉಗಮವನ್ನು ಮತ್ತು ಡಾಕ್ಟರ್ ಜೀ ಅವರ ನಿಃಸ್ವಾರ್ಥ ಬದುಕನ್ನು ಕಣ್ಣೆದುರು ತಂದಿಟ್ಟ ದಿವ್ಯದರ್ಶನವಾಗಿತ್ತು. ಭಾಷೆಯ ಗಡಿಗಳನ್ನು ಮೀರಿ ಕನ್ನಡಿಗರ ಹೃದಯ ಮರುಗುವಂತೆ ಮಾಡಿದ ಈ ನಾಟಕದ ವೈಚಾರಿಕ ಹರಿವು ಪ್ರತಿಯೊಬ್ಬರಲ್ಲೂ ರಾಷ್ಟ್ರಭಕ್ತಿಯ ಹೊಸ ಚೈತನ್ಯವನ್ನು ತುಂಬಿತು.

ಇಲ್ಲಿಯವರೆಗೆ ನಾವು ಸ್ವಯಂಸೇವಕರು, ಪೂಜನೀಯ ಡಾಕ್ಟರ್ ಜೀ ಅವರ ಬಗ್ಗೆ ಸಂಘದ ಸಾಹಿತ್ಯದಲ್ಲಿ ಓದಿದ್ದೆವು, ಹಿರಿಯರ ಬೌದ್ಧಿಕ್‌ಗಳಲ್ಲಿ ಕೇಳಿ ಧನ್ಯರಾಗಿದ್ದೆವು. ಆದರೆ ಆ ಶ್ರದ್ಧಾಪೂರ್ವಕ ಕಲ್ಪನೆಗಳಿಗೆ ರಂಗದ ಮೇಲೆ ದಿವ್ಯ ಚೈತನ್ಯ ಸಿಕ್ಕಿತ್ತು. ನಾದಬ್ರಹ್ಮ ಸಂಸ್ಥೆಯ ಹಿರಿಯ ನಟ ಶ್ರೀ ಸತೀಶ್ ಖೇಕಾಲೆ ಅವರು ಡಾಕ್ಟರ್ ಜೀ ಪಾತ್ರಕ್ಕೆ ಜೀವ ತುಂಬಿದ ಪರಿ ಹೇಗಿತ್ತೆಂದರೆ, ಸ್ವಯಂ ಡಾ. ಹೆಡಗೇವಾರ್ ಅವರೇ ಸ್ವರ್ಗದಿಂದ ಧರೆಗಿಳಿದು ಬಂದು ನಮಗೆ ಸಾಕ್ಷಾತ್ ದರ್ಶನ ನೀಡಿದ ಅನುಭೂತಿಯಾಯಿತು! ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆಯಾಗಿಸಿದ ಮತ್ತು ವೈಚಾರಿಕ ಮಂಥನ ನಡೆಸಿದ ಈ ರಂಗಪ್ರಯೋಗವು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಪರಮಪೂಜನೀಯ ಡಾ. ಕೇಶವ ಬಲಿರಾಮ್ ಹೆಡಗೇವಾರ್ ರವರ ತಪೋಮಯ ಜೀವನದ ತಲ್ಲಣಗಳನ್ನು ಪ್ರೇಕ್ಷಕರ ಎದುರು ಅತ್ಯಂತ ಮಾರ್ಮಿಕವಾಗಿ ಅನಾವರಣಗೊಳಿಸಿತು.ಆ ತಪೋಮಯ ಪ್ರಯಾಣದ ಆರಂಭವಾಗಿ ನಾಟಕದ ಮೊದಲ ದೃಶ್ಯವೇ ಪ್ರೇಕ್ಷಕರನ್ನು ಇತಿಹಾಸದ ರಹಸ್ಯ ಕಾಲಘಟ್ಟಕ್ಕೆ ಕರೆದೊಯ್ಯುತ್ತದೆ. ಕೋಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಯುವಕ ಕೇಶವರಾವ್ ಹೆಡಗೇವಾರ್, ಬ್ರಿಟಿಷರ ಕಣ್ಣಿಗೆ ಮಣ್ಣೆರಚಿ ಕ್ರಾಂತಿಕಾರಿಗಳ ಸಂಘಟನೆಯಾದ ‘ಅನುಶೀಲನ ಸಮಿತಿ’ಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರೋಮಾಂಚಕ ಸನ್ನಿವೇಶದೊಂದಿಗೆ ನಾಟಕ ತೆರೆದುಕೊಳ್ಳುತ್ತದೆ. ಅಂದಿನ ದಿನಗಳಲ್ಲಿ ಬ್ರಿಟಿಷ್ ಗುಪ್ತಚರ ಇಲಾಖೆಯ ತೀಕ್ಷ್ಣ ನಿಗಾದಿಂದ ತಪ್ಪಿಸಿಕೊಳ್ಳಲು ಅವರಿಗೆ ನೀಡಲಾಗಿದ್ದ ರಹಸ್ಯ ನಾಮವೇ ‘ಕೋಕೇನ್’.

ರಂಗದ ಮೇಲೆ ಮೂಡಿಬರುವ ಈ ಆರಂಭಿಕ ದೃಶ್ಯ ತೀವ್ರವಾದ ಭಾವುಕತೆಯಿಂದ ಕೂಡಿದೆ. ತಮ್ಮ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಹೋರಾಡುತ್ತಿದ್ದ ಸಹ ಕ್ರಾಂತಿಕಾರಿ ಯೊಬ್ಬರ ಅಕಾಲಿಕ ಬಲಿದಾನದ ಸುದ್ದಿ ಕೇಳಿ ಯುವ ಹೆಡಗೇವಾರ್ ತೀವ್ರವಾಗಿ ನೊಂದುಕೊಳ್ಳುವ, ಆತಂಕ ಮತ್ತು ತಲ್ಲಣಕ್ಕೆ ಒಳಗಾಗುವ ದೃಶ್ಯವನ್ನು ಕಲಾವಿದರು ಅತ್ಯಂತ ಮಾರ್ಮಿಕವಾಗಿ ಅಭಿನಯಿಸಿದ್ದಾರೆ. ಆದರೆ, ಒಡನಾಡಿಯ ನಿಧನದಿಂದ ಧೃತಿಗೆಡದ ‘ಕೋಕೇನ್’ (ಡಾ. ಹೆಡಗೇವಾರ್), ಆ ತೀವ್ರ ದುಃಖವನ್ನೇ ಬ್ರಿಟಿಷರ ವಿರುದ್ಧದ ಜ್ವಾಲಾಮುಖಿ ಆಕ್ರೋಶವನ್ನಾಗಿ ಮಾರ್ಪಡಿಸಿಕೊಳ್ಳುತ್ತಾರೆ. ಈ ದೃಶ್ಯವು ನಾಟಕದ ಮುಂದಿನ ಭವ್ಯ ಕಥಾವಸ್ತುವಿಗೆ ಮತ್ತು ಅವರ ಅಪ್ರತಿಮ ದೇಶಭಕ್ತಿಗೆ ಅತ್ಯಂತ ಶಕ್ತಿಶಾಲಿ ಮುನ್ನುಡಿಯನ್ನಿಡುತ್ತದೆ.

ಆ ಮುನ್ನುಡಿಯ ಮುಂದುವರಿದ ಭಾಗವಾಗಿ ಮೂಡಿಬರುವ ಮುಂದಿನ ದೃಶ್ಯಗಳು, ಡಾಕ್ಟರ್ ಜೀ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಅಪ್ರತಿಮ ನಾಯಕರಾದ ಶ್ರೀ ಅರವಿಂದ ಘೋಷ್, ಲೋಕಮಾನ್ಯ ಬಾಲಗಂಗಾಧರ ತಿಲಕ್ ಮತ್ತು ಸ್ವಾತಂತ್ರ್ಯವೀರ ವಿನಾಯಕ ದಾಮೋದರ್ ಸಾವರ್ಕರ್ ಅವರೊಂದಿಗೆ ನಡೆಸಿದ ಭೇಟಿ ಹಾಗೂ ಮಹತ್ವದ ಸಮಾಲೋಚನೆಗಳನ್ನು ಅತ್ಯಂತ ಪ್ರಭಾವಶಾಲಿಯಾಗಿ ಅನಾವರಣಗೊಳಿಸುತ್ತವೆ. ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ನಡೆದ ಈ ಭೇಟಿಗಳು ದೇಶದ ಭವಿಷ್ಯವನ್ನು ಹೇಗೆ ರೂಪಿಸಿದವು ಎಂಬುದನ್ನು ನಾಟಕವು ಅದ್ಭುತವಾಗಿ ಚಿತ್ರಿಸಿದೆ. ವಿಶೇಷವಾಗಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮನಸ್ಸಿನಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ಕ್ರಾಂತಿಯ ಕಿಡಿ ಮೂಡಲು ಡಾಕ್ಟರ್ ಜೀ ಅವರೊಂದಿಗಿನ ಭೇಟಿಯೂ ಒಂದು ಪ್ರಮುಖ ಪ್ರೇರಣೆಯಾಗಿತ್ತು ಎಂಬ ಇತಿಹಾಸದ ಅಪರೂಪದ ಪ್ರಸಂಗವನ್ನು ಲೇಖಕರಾದ ಶ್ರೀ ಅಜಯ್ ಪ್ರಧಾನ್ ಅವರು ರಂಗದ ಮೇಲೆ ಪ್ರಮುಖವಾಗಿ ಪ್ರಸ್ತಾಪಿಸಿರುವುದು ಶ್ಲಾಘನೀಯ.

ಭಾರತದ ಆ ಅಪ್ರತಿಮ ನಾಯಕರ ಚಿಂತನೆಗಳು ಮತ್ತು ಆಲೋಚನೆಗಳು ಡಾಕ್ಟರ್ ಜೀ ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ಕೇವಲ ಬ್ರಿಟಿಷರನ್ನು ದೇಶದಿಂದ ಓಡಿಸುವುದಷ್ಟೇ ಅಂತಿಮ ಗುರಿಯಾಗಬಾರದು; ಭವಿಷ್ಯದಲ್ಲಿ ಭಾರತ ಮತ್ತೆ ಎಂದಿಗೂ ಪರಕೀಯರ ಗುಲಾಮಗಿರಿಯ ಪಾಶಕ್ಕೆ ಸಿಲುಕಬಾರದೆಂದರೆ ಮೊದಲು ನಮ್ಮ ದೇಶ, ಹಿಂದೂ ಸಮಾಜ ಮತ್ತು ಇಲ್ಲಿನ ಭವ್ಯ ಸಂಸ್ಕೃತಿಯನ್ನು ರಕ್ಷಿಸುವುದು, ಬೆಳೆಸುವುದು ಅತ್ಯಂತ ಅನಿವಾರ್ಯ ಎಂಬುದನ್ನು ಅವರು ದೃಢವಾಗಿ ಮನಗಾಣುತ್ತಾರೆ. ಇದು ಸಾಧ್ಯವಾಗುವುದು ಹಿಂದೂ ಸಮಾಜವು ಸುಸಂಘಟಿತ ಹಾಗೂ ಶಿಸ್ತುಬದ್ಧವಾದಾಗ ಮಾತ್ರ ಎಂಬ ಸತ್ಯ ಅವರಿಗೆ ಅರಿವಾಗುತ್ತದೆ. ಇದಕ್ಕಾಗಿ ಕೇವಲ ತಕ್ಷಣದ ಲಾಭ-ನಷ್ಟದ ರಾಜಕೀಯದಂತೆ ಮೂಗಿನ ನೇರಕ್ಕೆ ಯೋಚಿಸದೆ, ಒಂದು ದಶಕಕ್ಕೂ ಹೆಚ್ಚು ಕಾಲ ಸುದೀರ್ಘ ಯೋಚನೆ ಹಾಗೂ ತಾರ್ಕಿಕ ಮೌಲ್ಯಮಾಪನ ನಡೆಸುತ್ತಾರೆ. ಈ ಮಹಾಮಂಥನದ ಫಲವಾಗಿಯೇ, ಅವರು ಭಾರತದ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಎತ್ತಿಹಿಡಿಯುವ ಒಂದು ವಿಶಿಷ್ಟ “ಹಿಂದೂ ರಾಷ್ಟ್ರೀಯ ಸಂಘಟನೆ”ಯನ್ನು ಹುಟ್ಟುಹಾಕಲು ನಿರ್ಧರಿಸುತ್ತಾರೆ.

ಆ ಐತಿಹಾಸಿಕ ನಿರ್ಧಾರದ ಫಲಶ್ರುತಿಯೇ 1925ರ ಸೆಪ್ಟೆಂಬರ್ 27ರ ವಿಜಯದಶಮಿಯ ಪವಿತ್ರ ದಿನದಂದು ಜಗತ್ತಿನ ಕಣ್ಣೆದುರು ಅನಾವರಣಗೊಳ್ಳುತ್ತದೆ. ನಾಗಪುರದ ಮೋಹಿತೆವಾಡದ ಮೈದಾನದಲ್ಲಿ ಡಾಕ್ಟರ್ ಜೀ ಅವರು ಕೆಲವೇ ಕೆಲವು ಯುವಕರನ್ನು ಸೇರಿಸಿ ಸಂಘದ ಸ್ಥಾಪನೆ ಮಾಡುವ ದೃಶ್ಯ, ನಾಟಕದಲ್ಲಿ ಹಂತ ಹಂತವಾಗಿ ವಿಕಸನಗೊಳ್ಳುವ ಪರಿ ಅದ್ಭುತವಾಗಿದೆ. ಆರಂಭದಲ್ಲಿ ಈ ಸಂಘಟನೆಗೆ ಯಾವುದೇ ಹೆಸರಿರಲಿಲ್ಲ. ನಂತರ 1926ರ ಏಪ್ರಿಲ್ 17ರಂದು, ರಾಮನವಮಿಯ ಶುಭ ಸಂದರ್ಭದ ಸನಿಹದಲ್ಲಿ ನಡೆದ ಸುದೀರ್ಘ ಚರ್ಚೆಯ ಬಳಿಕವೇ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ (RSS) ಎಂಬ ಹೆಸರನ್ನು ಅಧಿಕೃತವಾಗಿ ನಿಶ್ಚಿತಗೊಳಿಸಲಾಗುತ್ತದೆ ಎಂಬ ಇತಿಹಾಸದ ಮೈಲಿಗಲ್ಲನ್ನು ನಾಟಕದಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ.

ವ್ಯಕ್ತಿಪೂಜೆಯಿಂದ ಸಂಘಟನೆಗಳು ದಾರಿ ತಪ್ಪಬಹುದು ಮತ್ತು ತತ್ವಗಳೇ ಶಾಶ್ವತ ಎಂಬುದನ್ನು ಆಳವಾಗಿ ಅರಿತಿದ್ದ ಡಾಕ್ಟರ್ ಜೀ, ತಾವೇ ಸ್ವತಃ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರೂ ತಮ್ಮನ್ನು ಗುರು ಎಂದು ಘೋಷಿಸಿಕೊಳ್ಳಲಿಲ್ಲ. ಬದಲಿಗೆ, ಭಾರತದ ಭವ್ಯ ಇತಿಹಾಸ, ತ್ಯಾಗ ಮತ್ತು ಸಮರ್ಪಣೆಯ ಪರಮ ಸಂಕೇತವಾದ ‘ಭಗವಾಧ್ವಜ’ವನ್ನೇ ಸಂಘದ ಸರ್ವೋಚ್ಚ ಗುರುವಾಗಿ ಪ್ರತಿಷ್ಠಾಪಿಸಿದ ದೂರದೃಷ್ಟಿಯ ದೃಶ್ಯ ಪ್ರೇಕ್ಷಕರಲ್ಲಿ ಭಕ್ತಿಭಾವ ಮೂಡಿಸುತ್ತದೆ.

ದಿನನಿತ್ಯದ ‘ಶಾಖೆ’, ಸಂಘ ಕಾರ್ಯಗಳ ಕುರಿತು ಆಳವಾಗಿ ಚರ್ಚಿಸಿ, ಯೋಜನೆ ರೂಪಿಸಿ, ಅವುಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ದಾರಿ ತೋರುವ ‘ಬೈಠಕ್’, ಹಾಗೂ ಸ್ವಯಂಸೇವಕರಿಗೆ ಅಗತ್ಯವಾದ ಜ್ಞಾನ, ಕೌಶಲ್ಯಗಳನ್ನು ಧಾರೆ ಎರೆದು ಅವರನ್ನು ಸಂಘಕಾರ್ಯಕ್ಕೆ ಸಂಪೂರ್ಣವಾಗಿ ಸಜ್ಜುಗೊಳಿಸುವ ವಿಶಿಷ್ಟ ತರಬೇತಿಯ ‘ವರ್ಗ’ಗಳ ಮೂಲಕ ಪರಸ್ಪರ ಪ್ರೀತಿ-ವಿಶ್ವಾಸ ಬೆಸೆಯುವ ಕಾರ್ಯಪದ್ಧತಿ, ಪ್ರಾರ್ಥನೆ ಹಾಗೂ ಭಗವಾಧ್ವಜದ ಸಮ್ಮುಖದಲ್ಲಿ ಶಿಸ್ತಿನ ಸಿಪಾಯಿಗಳನ್ನು ನಿರ್ಮಿಸುವ ಆ ಭವ್ಯ ಪ್ರಕ್ರಿಯೆಯನ್ನು ನಾಟಕವು ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸಿದೆ. ಡಾಕ್ಟರ್ ಜೀ ಅವರು ತಮ್ಮ ಜೀವಿತಾವಧಿಯ ಕೊನೆಯ 15 ವರ್ಷಗಳಲ್ಲಿ ಹಾಕಿಕೊಟ್ಟ ಈ ಭದ್ರವಾದ ಬುನಾದಿಯೇ, ಇಂದು ಒಂದು ‘ಯುಗ’ವನ್ನು (ನೂರು ವರ್ಷಗಳನ್ನು) ದಾಟಿಯೂ ಜಗತ್ತಿನ ಅತಿ ದೊಡ್ಡ ಸ್ವಯಂಸೇವಾ ಸಂಘಟನೆಯಾಗಿ ಅಖಂಡವಾಗಿ ಬೆಳೆದು ನಿಲ್ಲಲು ಕಾರಣ ಎಂಬುದನ್ನು ನಾಟಕವು ತಾರ್ಕಿಕವಾಗಿ ನಿರೂಪಿಸುತ್ತದೆ.

ನಿರ್ದೇಶಕರಾದ ಶ್ರೀ ಸುಬೋಧ್ ಸಹಸ್ರಬುದ್ಧೆ ಅವರ ರಂಗಕಲ್ಪನೆ ಅತ್ಯಂತ ಉನ್ನತ ಮಟ್ಟದ್ದಾಗಿದೆ. ನಾಟಕದ ನಡುವೆ ಪ್ರೇರಣೆಯ ರೂಪದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರಸಂಗವನ್ನು ತಂದಿರುವುದು ಮತ್ತು ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸಲು ಕೃಷ್ಣ-ಅರ್ಜುನರ ಸಂವಾದವನ್ನು ಜೋಡಿಸಿರುವುದು ನಿರ್ದೇಶನದ ವಿಶಿಷ್ಟ ಚಾತುರ್ಯವಾಗಿದೆ. ಇಡೀ ನಾದಬ್ರಹ್ಮ ತಂಡದ ಪ್ರಕಾರ, ಈ ರಂಗಪ್ರಯೋಗ ಕೇವಲ ಅವರ ವೈಯಕ್ತಿಕ ಸಾಧನೆಯಲ್ಲ, ಬದಲಿಗೆ ಡಾಕ್ಟರ್ ಜೀ ಅವರ ಒಟ್ಟಾರೆ ತಪಸ್ಸಿನ ಪ್ರೇರಣೆಯಿಂದ ನಡೆದ ಒಂದು ‘ಈಶ್ವರೀಯ ಕಾರ್ಯ’ವಾಗಿದೆ. ಇಂದಿನ ಯುವ ಪೀಳಿಗೆಗೆ ನಮ್ಮ ಸಾಂಸ್ಕೃತಿಕ ಬೇರುಗಳನ್ನು ಹೆಮ್ಮೆಯಿಂದ ಪರಿಚಯಿಸಲು ಈ ನಾಟಕ ಅತ್ಯಂತ ಪ್ರಸ್ತುತವಾಗಿದೆ.

ನಾಟಕದ ಪ್ರಥಮಾರ್ಧವು ಸಂಘದ ಸ್ಥಾಪನೆಯ ಭವ್ಯ ಇತಿಹಾಸವನ್ನು ತೆರೆದಿಟ್ಟರೆ, ದ್ವಿತೀಯಾರ್ಧದಲ್ಲಿ ಮಾಧವ ಸದಾಶಿವ ಗೋಲವಲ್ಕರ್ (ಶ್ರೀ ಗುರೂಜಿ) ಅವರ ಪ್ರವೇಶ ಪ್ರೇಕ್ಷಕರಲ್ಲಿ ಹೊಸ ಕುತೂಹಲ ಮತ್ತು ರೋಮಾಂಚನವನ್ನು ಹುಟ್ಟುಹಾಕುತ್ತದೆ. ಆಧ್ಯಾತ್ಮದ ಕಡೆಗೆ ತೀವ್ರ ಒಲವು ಹೊಂದಿದ್ದ, ರಾಮಕೃಷ್ಣ ಮಿಷನ್‌ನ ಸನ್ಯಾಸತ್ವದತ್ತ ಆಕರ್ಷಿತರಾಗಿದ್ದ ಶ್ರೀ ಗುರೂಜಿಯವರ ಅದ್ಭುತ ತೇಜಸ್ಸು ಮತ್ತು ಅಪ್ರತಿಮ ಪ್ರತಿಭೆಯನ್ನು ಡಾಕ್ಟರ್ ಜೀ ಗುರುತಿಸುವ ದೃಶ್ಯ ನಾಟಕಕ್ಕೆ ಹೊಸ ತಿರುವು ನೀಡುತ್ತದೆ.

ಡಾಕ್ಟರ್ ಜೀ ಅವರು ಶ್ರೀ ಗುರೂಜಿಯವರನ್ನು ಭೇಟಿಯಾಗಿ, ಅವರ ಜ್ಞಾನ ಮತ್ತು ಚಿಂತನೆಗಳನ್ನು ರಾಷ್ಟ್ರಕಾರ್ಯದತ್ತ ತಿರುಗಿಸುವ ವೈಚಾರಿಕ ಸಂಭಾಷಣೆಗಳ ದೃಶ್ಯ ರಂಗಭೂಮಿಯ ದೃಷ್ಟಿಯಿಂದ ಅತ್ಯಂತ ಉನ್ನತ ಮಟ್ಟದ್ದಾಗಿದೆ. ಕೇವಲ ವೈಯಕ್ತಿಕ ಮೋಕ್ಷಕ್ಕಾಗಿ ತಪಸ್ಸು ಮಾಡುವುದಕ್ಕಿಂತ, ನೊಂದಿರುವ ಇಡೀ ಸಮಾಜದ ಮುಕ್ತಿಗಾಗಿ ಕಾಯಕ ಮಾಡುವುದೇ ನಿಜವಾದ ಆಧ್ಯಾತ್ಮ ಮತ್ತು ದೈವಕಾರ್ಯ ಎಂಬುದನ್ನು ಡಾಕ್ಟರ್ ಜೀ ಅವರು ಶ್ರೀ ಗುರೂಜಿಯವರಿಗೆ ಮನವರಿಕೆ ಮಾಡಿಕೊಡುವ ಪರಿ ಅನನ್ಯ. ಈ ಇಬ್ಬರು ಮಹಾನ್ ಚೇತನಗಳ ನಡುವಿನ ಅಪೂರ್ವ ಬಾಂಧವ್ಯ ಮತ್ತು ಕೊನೆಗೆ ಶ್ರೀ ಗುರೂಜಿಯವರು ಡಾಕ್ಟರ್ ಜೀ ಅವರ ಮಾತಿಗೆ ಒಪ್ಪಿ ತಮ್ಮ ಇಡೀ ಜೀವನವನ್ನು ಸಂಘ ಕಾರ್ಯಕ್ಕಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಭಾವುಕ ಸನ್ನಿವೇಶವು ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತದೆ.

ರಾಷ್ಟ್ರಕಾರ್ಯದ ಈ ನಿರಂತರ ಪ್ರವಾಸ, ಸರಿಯಾದ ನಿದ್ರೆ ಹಾಗೂ ಆಹಾರವಿಲ್ಲದ ಕಠಿಣ ದಿನಚರಿಯಿಂದಾಗಿ ಡಾಕ್ಟರ್ ಜೀ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋಗುತ್ತದೆ. ತೀವ್ರವಾದ ಜ್ವರ ಹಾಗೂ ಅತಿಯಾದ ದೈಹಿಕ ಅಸ್ವಸ್ಥತೆಯಿಂದ ಅವರು ಹಾಸಿಗೆ ಹಿಡಿದಿದ್ದರೂ, ಅವರ ಮನಸ್ಸು ಮಾತ್ರ ಪ್ರತಿಕ್ಷಣವೂ ಸಂಘದ ಯೋಚನೆಯಲ್ಲೇ ಮುಳುಗಿರುತ್ತದೆ.

ಇದೇ ಸಂದರ್ಭದಲ್ಲಿ, ಜೂನ್ 1940ರ ಆ ದಿನಗಳಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮತ್ತೊಬ್ಬ ಧ್ರುವತಾರೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಡಾಕ್ಟರ್ ಜೀ ಅವರನ್ನು ನಾಗಪುರದಲ್ಲಿ ಭೇಟಿ ಮಾಡಲು ಬರುವ ದೃಶ್ಯ ನಾಟಕದ ಅತ್ಯಂತ ಪ್ರಮುಖ ಹಾಗೂ ಹೃದಯಸ್ಪರ್ಶಿ ಆಕರ್ಷಣೆಗಳಲ್ಲೊಂದು. ತೀವ್ರ ಜ್ವರದಿಂದ ದಣಿದು ಮಲಗಿರುವ ಡಾಕ್ಟರ್ ಜೀ ಅವರ ವಿಶ್ರಾಂತಿಗೆ ಕಿಂಚಿತ್ತೂ ಧಕ್ಕೆ ತರಬಾರದೆಂದು ಭಾವಿಸುವ ನೇತಾಜಿ, ಹಾಸಿಗೆಯ ಹತ್ತಿರ ಹೋಗದೆ ಸ್ವಲ್ಪ ದೂರದಲ್ಲೇ ಮೌನವಾಗಿ ನಿಲ್ಲುತ್ತಾರೆ. ಅವರ ನಿದ್ರೆಗೆ ಭಂಗ ತರದೇ, ಅಲ್ಲಿಯೇ ಇದ್ದ ಶ್ರೀ ಗುರೂಜಿಯವರೊಂದಿಗೆ ಅತ್ಯಂತ ಗಂಭೀರ ಹಾಗೂ ಗೌರವಪೂರ್ವಕ ಧ್ವನಿಯಲ್ಲಿ ಸಂಭಾಷಣೆ ನಡೆಸುತ್ತಾರೆ. ಡಾಕ್ಟರ್ ಜೀ ಅವರು ರಾಷ್ಟ್ರ ಜಾಗೃತಿಗಾಗಿ ಮಾಡಿದ ಅಪ್ರತಿಮ ತಪಸ್ಸನ್ನು ಮತ್ತು ಆ ದಿವ್ಯ ಕಾರ್ಯ ಇಂದು ದೇಶಾದ್ಯಂತ ನೀಡುತ್ತಿರುವ ಭವ್ಯ ಫಲಿತಾಂಶಗಳನ್ನು ಕೃತಜ್ಞತೆಯಿಂದ ಶ್ರೀ ಗುರೂಜಿಯವರ ಬಳಿ ಪ್ರಸ್ತಾಪಿಸುತ್ತಾರೆ. ದೇಶದ ಆ ಮಹಾನ್ ಚೇತನ ಬೇಗ ಗುಣಮುಖರಾಗಲಿ ಎಂದು ಹಾರೈಸಿ, ತೀವ್ರ ಗೌರವದೊಂದಿಗೆ ದೂರದಿಂದಲೇ ಮೂಕ ಪ್ರಣಾಮ ಸಲ್ಲಿಸಿ ನೇತಾಜಿ ಅಲ್ಲಿಂದ ಹೊರಡುವ ಆ ನಿಶ್ಯಬ್ದ ಮತ್ತು ಪ್ರಭಾವಶಾಲಿ ದೃಶ್ಯ, ಇತಿಹಾಸದ ಅತ್ಯಂತ ಅಪರೂಪದ ಹಾಗೂ ಭಾವುಕ ಕ್ಷಣವನ್ನು ಪ್ರೇಕ್ಷಕರ ಕಣ್ಣೆದುರು ಮರುಸೃಷ್ಟಿಸುತ್ತದೆ.

ಅನಾರೋಗ್ಯದ ಆ ಕಠಿಣ ದಿನಗಳ ನಡುವೆಯೂ ಮೂಡಿಬರುವ ನಾಟಕದ ಅತ್ಯಂತ ಭಾವುಕ ಮತ್ತು ಅತಿ ಹೆಚ್ಚು ಪ್ರೇರಣಾದಾಯಕ ದೃಶ್ಯವೆಂದರೆ, ಅದು 1940ರ ನಾಗಪುರದ ಸಂಘ ಶಿಕ್ಷಾ ವರ್ಗದಲ್ಲಿ ಡಾಕ್ಟರ್ ಜೀ ಅವರು ನೀಡಿದ ಕೊನೆಯ ಐತಿಹಾಸಿಕ ‘ಬೌದ್ಧಿಕ್’ . ತೀವ್ರ ಅಸ್ವಸ್ಥತೆಯ ಕಾರಣದಿಂದಾಗಿ ರಂಗದ ಮೇಲೆ ಅವರಿಗೆ ಸರಿಯಾಗಿ ಎದ್ದು ನಿಲ್ಲಲೂ ಸಾಧ್ಯವಿರುವುದಿಲ್ಲ. ಆದರೂ ತಮ್ಮೆದುರು ಇರುವ ಶಿಸ್ತಿನ ಸ್ವಯಂಸೇವಕರನ್ನು ಕಂಡೊಡನೆ, ತಮ್ಮೆಲ್ಲಾ ದೈಹಿಕ ನೋವನ್ನು ಮರೆತು ಸಿಂಹಗರ್ಜನೆ ಮಾಡುವ ಅವರ ಆ ಪ್ರಖರ ಧ್ವನಿ ಇಡೀ ರಂಗಮಂದಿರವನ್ನೇ ಒಂದು ಕ್ಷಣ ಮೌನವಾಗಿಸಿ, ನಿಶ್ಯಬ್ದಗೊಳಿಸುತ್ತದೆ.

ನನಗೆ ನಿಮ್ಮ ಕಣ್ಣೆದುರು ಇಡೀ ಹಿಂದುಸ್ಥಾನದ ಭವ್ಯ ವೈಭವದ ದರ್ಶನವಾಗುತ್ತಿದೆ. ಸಂಘ ಕಾರ್ಯವು ಕೇವಲ ನಿತ್ಯದ ಶಾಖೆಗೆ ಮಾತ್ರ ಸೀಮಿತವಾಗಬಾರದು; ನಮ್ಮಲ್ಲಿ ಯಾರೊಬ್ಬರೂ ಎಂದಿಗೂ ‘ನಾನು ಹಿಂದೆ ಸ್ವಯಂಸೇವಕನಾಗಿದ್ದೆ’ ಎಂದು ಭೂತಕಾಲದಲ್ಲಿ ಮಾತನಾಡಬಾರದು. ಬದಲಿಗೆ, ನಮ್ಮ ಜೀವನದ ಕೊನೆಯ ಉಸಿರಿರುವವರೆಗೂ ನಾವು  ಸ್ವಯಂಸೇವಕರಾಗಿಯೇ ರಾಷ್ಟ್ರಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಅವರು ಗದ್ಗದಿತ ಕಂಠದಿಂದ ನೀಡುವ ಆ ಅಂತಿಮ ಸಂದೇಶ, ಕೇವಲ ರಂಗದ ಮೇಲಿದ್ದ ಸ್ವಯಂಸೇವಕರಿಗಷ್ಟೇ ಅಲ್ಲ, ಇಡೀ ಪ್ರದರ್ಶನವನ್ನು ಉಸಿರು ಬಿಗಿಹಿಡಿದು ವೀಕ್ಷಿಸುತ್ತಿದ್ದ ನಮ್ಮಂತಹ ಪ್ರತಿಯೊಬ್ಬ ಪ್ರೇಕ್ಷಕನ ನರನಾಡಿಗಳಲ್ಲೂ ಅಭೂತಪೂರ್ವ ವಿದ್ಯುತ್ ಸಂಚಲನ ಉಂಟುಮಾಡುತ್ತದೆ.

ಆ ವಿದ್ಯುತ್ ಸಂಚಲನದ ಬೆನ್ನಲ್ಲೇ ಮೂಡಿಬರುವ ನಾಟಕದ ಮಹಾ ಮುಕ್ತಾಯವು ಪ್ರತಿಯೊಬ್ಬ ಪ್ರೇಕ್ಷಕನ ಹೃದಯವನ್ನು ಭಾರವಾಗಿಸುತ್ತದೆ, ಜೊತೆಗೆ ಇಡೀ ಸಭಾಂಗಣ ನಿಲ್ಲದ ಕರತಾಡನಕ್ಕೆ ಸಾಕ್ಷಿಯಾಗುವಂತೆ ಮಾಡುತ್ತದೆ. 1940ರ ಜೂನ್ 21ರಂದು ಡಾಕ್ಟರ್ ಜೀ ಅವರ ಮಹಾನಿರ್ವಾಣದ ಕೊನೆಯ ಕ್ಷಣಗಳು ಹತ್ತಿರ ಬಂದಾಗ, ರಂಗದ ಮೇಲಿನ ವಾತಾವರಣ ಅತ್ಯಂತ ಗಂಭೀರವಾಗುತ್ತದೆ. ಸಾವು ಕಣ್ಣೆದುರು ಬಂದು ನಿಂತಿದ್ದರೂ, ದೈಹಿಕ ಪ್ರಜ್ಞೆ ತಪ್ಪುತ್ತಿದ್ದರೂ ಅವರ ಒಳಮನಸ್ಸು ನಿರಂತರವಾಗಿ ಜಪಿಸುತ್ತಿದ್ದದ್ದು ಮಾತ್ರ ತಾಯ್ನಾಡಿನ ಪರಮ ಪವಿತ್ರ ಮಂತ್ರವನ್ನೇ. ತಮ್ಮ ಕೊನೆಯ ಉಸಿರನ್ನು ಎಳೆಯುವ ಮುನ್ನ ಡಾಕ್ಟರ್ ಜೀ ಅವರು ಅತ್ಯಂತ ಗಂಭೀರ ಹಾಗೂ ಭಕ್ತಿಪೂರ್ವಕವಾಗಿ ಉಚ್ಚರಿಸುವ ಆ ಅಂತಿಮ ಮಹಾಶಬ್ದಗಳು: “ಹಿಂದೂ ರಾಷ್ಟ್ರ”, “ಭಾರತ್ ಮಾತಾ” ಮತ್ತು “ವಂದೇ ಮಾತರಂ!”

ಕೇವಲ ಈ ಅಪೂರ್ವ ರಂಗಪ್ರಯೋಗವನ್ನು ನೋಡಿ ಕ್ಷಣಿಕವಾಗಿ ಆನಂದಿಸುವುದಷ್ಟೇ ನಮ್ಮ ಧೇಯವಾಗಬಾರದು. ಈ ಭವ್ಯ ಇತಿಹಾಸಕ್ಕೆ ಸಾಕ್ಷಿಯಾದ ನಾವು, ಡಾಕ್ಟರ್ ಜೀ ಅವರು ಹಾಕಿಕೊಟ್ಟ ಸಂಘದ ಆ ದಿವ್ಯ ಕಾರ್ಯಪದ್ಧತಿಯನ್ನು ನಮ್ಮ ಜೀವನದಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಳ್ಳಬೇಕಿದೆ. ಪ್ರತಿಯೊಬ್ಬ ಸ್ವಯಂಸೇವಕನೂ ಡಾಕ್ಟರ್ ಜೀ ಅವರಂತೆಯೇ ರಾಷ್ಟ್ರೀಯತೆಯ ದೃಷ್ಟಿಯಿಂದ ಯೋಚಿಸುವ, ಅವರಂತೆಯೇ ನಿಃಸ್ವಾರ್ಥವಾಗಿ ದೇಶಕ್ಕಾಗಿ ಬದುಕುವ ಮತ್ತು ಕೊನೆಯವರೆಗೂ ಸಂಘಕಾರ್ಯದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳುವ ಮೂಲಕವೇ ಆ ಯುಗಪುರುಷನಿಗೆ ನಿಜವಾದ ಶ್ರದ್ಧಾಂಜಲಿ ಅರ್ಪಿಸಬೇಕಿದೆ.

ಈ ಜಾಗೃತಿಯ ಶಬ್ದಗಳೊಂದಿಗೆ ರಂಗದ ಮೇಲೆ ದೀಪಗಳು ಆರಿ, ತೆರೆ ಬೀಳುತ್ತಿದ್ದಂತೆ ಇಡೀ ಅಂಬೇಡ್ಕರ್ ಭವನ ಮತ್ತು ನ್ಯೂ ಹೊರೈಜನ್ ಆವರಣವು ಒಮ್ಮೆಲೇ ನಿಲ್ಲದ ಕರತಾಡನ ಹಾಗೂ ‘ಭಾರತ್ ಮಾತಾ ಕೀ ಜೈ’ ಎನ್ನುವ ಘೋಷಣೆಗಳಿಂದ ಮೊಳಗಿಹೋಯಿತು! ‘ಯುಗಪ್ರವರ್ತಕ’ ಎನ್ನುವ ಶೀರ್ಷಿಕೆಗೆ ನಾಗಪುರದ ಆ ಧೀಮಂತ ಕಲಾವಿದರು ರಂಗದ ಮೇಲೆ ಸಂಪೂರ್ಣ ನ್ಯಾಯ ಒದಗಿಸಿದ್ದರು. ಡಾಕ್ಟರ್ ಜೀ ಅವರು ದೈಹಿಕವಾಗಿ ಮರೆಯಾಗಿದ್ದರೂ, ಅವರು ಬಿತ್ತಿದ ಆ ಪ್ರಖರ ರಾಷ್ಟ್ರಚಿಂತನೆಯ ರಂಗರೂಪ ಇಂದಿಗೂ, ಮುಂದಿಗೂ ದೇಶದ ಕೋಟ್ಯಂತರ ಸ್ವಯಂಸೇವಾ ರೂಪದ ಕಾರ್ಯಕರ್ತರಲ್ಲಿ ಸದಾ ಜೀವಂತವಾಗಿರುತ್ತದೆ ಎಂಬುದನ್ನು ಈ ನಾಟಕ ಪ್ರತಿಯೊಬ್ಬರ ಮನದ ಆಳಕ್ಕೆ ತಲುಪಿಸಿತು

Leave a Reply

Your email address will not be published.

This site uses Akismet to reduce spam. Learn how your comment data is processed.