– ಶ್ರೀಕಂಠ ಬಾಳಗಂಚಿ, ಬರಹಗಾರರು, ಅಖಿಲ ಸಾಹಿತ್ಯ ಪರಿಷತ್

ಸೇವೆ ಎನ್ನುವುದು ನಮ್ಮ ಭಾರತೀಯರಿಗೆ ಹೊಸ ಕಲ್ಪನೆಯೇನಲ್ಲ. ನಮ್ಮ ಇತಿಹಾಸದ ಪುಟಗಳನ್ನು ತೆರೆದು ನೋಡಿದಲ್ಲಿ, ಅದೆಷ್ಟೋ ಮಹಾಪುರುಷರು ಸಮಾಜದ ದೀನರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟು ಕೊನೆ ಉಸಿರಿನ ತನಕ ಪರೋಪಕಾರದಲ್ಲಿಯೇ ತೊಡಗಿದ್ದನ್ನ ನೋಡಬಹುದಾಗಿದೆ. ಮಹರ್ಷಿ ವ್ಯಾಸಂತೂ ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ ಎಂಬುದನ್ನು ಒತ್ತಿ ಒತ್ತಿ ಹೇಳಿದ್ದಾರೆ. ಇಂತಹ ಮಹಾಪುರುಷರನ್ನೇ ಆದರ್ಶವನ್ನಾಗಿ ಸ್ವೀಕರಿಸಿ ತನ್ನ ಜೀವಮಾನದುದ್ದಕ್ಕೂ ಚರೈವೇತಿ ಚರೈವೇತಿ ಎನ್ನುತ್ತಾ ಮುಂದುವರಿಯಿರಿ, ಮುಂದುವರೆಯುತ್ತಲೇ ಇರಿ ಮತ್ತು ಜೀವನದಲ್ಲಿ ಎಂದಿಗೂ ಚಲಿಸುವುದನ್ನು ನಿಲ್ಲಿಸಬೇಡಿ. ಎಂತಹ ಕಠಿಣ ಸಂದರ್ಭಗಳನ್ನೂ ಸಮರ್ಥವಾಗಿ ಎದುರಿಸಿ ಮುಂದುವರಿಯಬೇಕು ಎಂಬ ಧ್ಯೇಯ ಮಂತ್ರದಂತೆಯೇ ಬದುಕಿದ್ದ 56 ವರ್ಷಗಳನ್ನೂ ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂದು ಸಮಾಜ ಸೇವೆಗಾಗಿ ಮುಡುಪಾಗಿಟ್ಟಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು, ಹಿಂದುಸೇವಾ ಪ್ರತಿಷ್ಠಾನದ ಸಂಸ್ಥಾಪಕರಾಗಿದ್ದಂತಹ ಶ್ರೀ ಅಜಿತ್ ಕುಮಾರ್ ಜೈನ್ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕರು.

ajitjji

ಮೂಲತಃ ಅಜಿತರು ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದ ಈಗಿನ ಚಿಕ್ಕಬಳ್ಳಾಪುರದ ಜಿಲ್ಲೆಯ ವ್ಯಾಪ್ತಿಗೆ ಬರುವ ಗುಡಿಬಂಡೆಯವರು. ಅಲ್ಲಿನ ಶ್ರೀ ಬ್ರಹ್ಮ ಸುರಯ್ಯ ಮತ್ತು ಶ್ರೀಮತಿ. ಪುಟ್ಟ ತಾಯಮ್ಮ ದಂಪತಿಗಳಿಗೆ 27ನೇ ಆಗಸ್ಟ್ 1934 ರಂದು ಜನಿಸಿದರು. ನೋಡಲು ಅತ್ಯಂತ ಕೆಂಪಗೆ, ಎತ್ತರವಾಗಿ ಮತ್ತು ಒಂದು ರೀತಿಯ ಬೆಕ್ಕಿನ ಕಣ್ಣುಗಳನ್ನು ಹೊಂದಿದ್ದ ಅಜಿತ್ ಯಾರನ್ನೇ ಆಗಲೇ ಕ್ಷಣ ಮಾತ್ರದಲ್ಲಿ ಸ್ನೇಹಿತರನ್ನಾಗಿ ಮಾಡಿಕೊಂಡು ತನ್ನ ಮಾತನ್ನು ಕೇಳುವಂತೆ ಮಾಡಿಕೊಳ್ಳುವ ಛಾತಿ ಇತ್ತು. ಚಿಕ್ಕಂದಿನಿಂದಲೂ ಓದಿನಲ್ಲಿ ಬಹಳ ಚುರುಕಾಗಿದ್ದ ಅಜಿತರಿಗೆ ಬಾಲ್ಯದಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕವಾಗಿದ್ದ ಕಾರಣ, ನಾಡು ನುಡಿ ಮತ್ತು ಧರ್ಮಗಳ ಸಂಸ್ಕಾರ ಮತ್ತು ಸಂಸ್ಕೃತಿಗಳ ಮೇಲೆ ಅಪಾರವಾದ ಶ್ರದ್ಧೆ ಮತ್ತು  ದೇಶಭಕ್ತಿಯನ್ನು ಮೈಗೂಡಿಸಿಕೊಂಡಿದ್ದರು.. ಅಂದಿನ ಅವಿಭಜಿತ ಕೋಲಾರ ಜಿಲ್ಲೆಗೆ ಅತ್ಯಂತ ಹೆಚ್ಚಿನ ಅಂಕಗಳೊಂದಿಗೆ PUC ಮುಗಿಸಿ ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೊದಲಿಗೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಗೆ ಸೇರಿಕೊಂಡು ಅದನ್ನು ಚಿನ್ನದ ಪದಕದೊಂದಿಗೆ ಮುಗಿಸಿದ ನಂತರ ಮತ್ತೆ ಅದೇ ಕಾಲೇಜಿನಲ್ಲೇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನೂ ಸಹಾ ಚಿನ್ನದ ಪದಕದೊಂದಿಗೇ ಮುಗಿಸಿ, ಹೀಗೆ ಎರೆಡೆರೆಡು ಇಂಜೀನಿಯರಿಂಗ್ ಪದವಿಗಳನ್ನು ಚಿನ್ನದ ಪದಕದೊಂದಿಗೆ ಗಳಿಸಿದ ವಿಶೇಷವಾದ ಕೀರ್ತಿಗೆ ಭಾಜನರಾದದ್ದು ವಿಶೇಷವಾಗಿದೆ.

ಎರೆಡೆರಡು ಇಂಜೀನಿಯರಿಂಗ್ ಪದವಿಯನ್ನು ಪಡೆದ ಅತ್ಯಂತ ಬುದ್ಧಿವಂತ ಯುವಕವನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಅನೇಕ ಕಂಪನಿಗಳು ತಾಮುಂದು ನಾಮುಂದು ಎಂದು ಮುಂದೆ ಬಂದರೂ ಅಜಿತರಿಗೆ ಲೌಕಿಕದಲ್ಲಿ ಆಸೆ ಇಲ್ಲದೇ, ಅವರು ಸಮಾಜ ಸೇವೆಯ ಮೂಲಕ ದೇಶಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳುವ ಸಲುವಾಗಿ ಸಂಘದ ಪೂರ್ಣಾವಧಿ ಪ್ರಚಾರಕರಾಗಿ ನಿಯುಕ್ತಿಗೊಂಡರು. ಅದೇ ಸಮಯದಲ್ಲೇ, ಅದಾಗಲೇ ಯೋಗ ಶಿಕ್ಷಣದಲ್ಲಿ ಪ್ರಖ್ಯಾತರಾಗಿದ್ದ ದಿ. ಬಿ.ಕೆ.ಎಸ್. ಐಯ್ಯಂಗಾರರ ಪರಿಚಯವಾಗಿ ಅವರ ವಿನೂತನ ಯೋಗ ಪ್ರಯೋಗಳಿಗೆ ಮಾರು ಹೋಗಿ ಶ್ರೀ. ಪಟ್ಟಾಭಿ ಜೋಯಿಸ್ ಅವರ ಮಾರ್ಗದರ್ಶನದಲ್ಲಿ ಯೋಗದಲ್ಲಿ ಹೆಚ್ಚಿನ ಅಭ್ಯಾಸವನ್ನು ವನ್ನು ಮಾಡಿದರು. ಸಾಮಾನ್ಯವಾಗಿ ಚಿಕ್ಕ ವಯಸ್ಸಿನಿಂದಲೂ ಯೋಗಭ್ಯಾಸ ಮಾಡಿದಲ್ಲಿ ಮಾತ್ರವೇ ಸುಲಭವಾಗಿ ದೇಹವನ್ನು ದಂಡಿಸಬಹುದು ಎನ್ನುವುದು ಎಲ್ಲರ ನಂಬಿಕೆ. ಆದರೆ ಅಜಿತರು ಅದಕ್ಕೆ ತದ್ವಿರುದ್ಧವಾಗಿ ತಮ್ಮ 28ನೇ ವಯಸ್ಸಿನಲ್ಲಿ ಯೋಗಾಭ್ಯಾಸವನ್ನು ಆರಂಭಿಸಿ, ಇಷ್ಟ ಪಟ್ಟು ಕಷ್ಟದಿಂದ ಮತ್ತು ಕಠಿಣ ಪರಿಶ್ರಮದ ಮೂಲಕ ನಿರಂತರವಾಗಿ ಯೋಗಭ್ಯಾಸದಲ್ಲಿ ತೊಡಗಿಕೊಂಡು ನೋಡ ನೋಡುತ್ತಿದ್ದಂತೆಯೇ ಶ್ರೇಷ್ಠ ಯೋಗ ಪ್ರವೀಣರಾಗಿದ್ದಲ್ಲದೇ ಪತಂಜಲಿ ಯೋಗದ ಕುರಿತಾದ ಪುಸ್ತಕಗಳನ್ನು ಬರೆಯುವಷ್ಟು ಅನುಭವಗಳನ್ನು ಗಳಿಸಿಕೊಂಡರು.

ನಂತರದ ದಿನಗಳಲ್ಲಿ ಆಯುರ್ವೇದ, ಅಲೋಪತಿ, ಯುನಾನಿ ಯಂತೆಯೇ ಜರ್ಮನಿ ಮೂಲದ ಹೋಮಿಯೋಪತಿ ಎಂಬ ಸರಳವಾದರೂ, ಪರಿಣಾಮಕಾರಿಯಾದ ವೈದ್ಯಕೀಯ ಪದ್ದತಿಯನ್ನು ಡಾ. ಕೃಷ್ಣಮೂರ್ತಿಯವರ ಮೂಲಕ ಪರಿಚಿತವಾಗಿ ಅದರಲ್ಲಿಯೂ ವಿಶೇಷವಾದ ಆಸಕ್ತಿ ವಹಿಸಿ ಅದನ್ನೂ ಸಹಾ ಅಭ್ಯಾಸಿಸಿ ಹೋಮಿಯೋಪತಿಯಲ್ಲೂ ಪ್ರಾವೀಣ್ಯತೆಯನ್ನು ಪಡೆದುಕೊಂಡಿದ್ದಲ್ಲದೇ, ಇದರ ಜೊತೆ ಜೊತೆಯಲ್ಲೇ, ಅವರು ಸೈಕಾಲಜಿ, ಅಕೌಂಟೆನ್ಸಿ, ಅನ್ಯಾಟಮಿ ಮುಂತಾದ ವಿಭಾಗಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಎಲ್ಲವನ್ನು ಅಧ್ಯಯನ ಮಾಡಿ ಒಂದು ರೀತಿಯಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಅಜಿತರಿಗೆ ಗೊತ್ತಿಲ್ಲದ ವಿದ್ಯೆಯಿಲ್ಲಾ ಎನ್ನುವಷ್ಟು ಪ್ರಖ್ಯಾತಿಯನ್ನು ಪಡೆದರು.

RSS_image

ಅದುವರೆವಿಗೂ ಸಂಘ ಎಂದರೆ ಕೇವಲ ಕೆಲವು ಹುಡುಗರು ಒಂದು ಘಂಟೆಯ ಕಾಲ ಮೈದಾನದಲ್ಲಿ ಕೇಸರಿ ಧ್ವಜದ ಮುಂದೆ ಆಟ, ಯೋಗ, ಹಾಡು, ಶ್ಲೋಕ ಮತ್ತು ಅಮೃತವಚನಗಳನ್ನು ಹೇಳಿಕೊಳ್ಳುತ್ತಾ, ವರ್ಷಕ್ಕೊಮೆಯೋ ಇಲ್ಲವೇ ಎರಡು ಬಾರಿ ಗಣವೇಷಧಾರಿಗಳಾಗಿ ಘೋಷ್ ನೊಂದಿಗೆ ಪಧಸಂಚಲನ ಮಾಡುತ್ತಾ, ದೇಶದಲ್ಲಿ ಎಲ್ಲಿಯಾದರೂ ಪ್ರಕೃತಿ ವಿಕೋಪದಿಂದ ಹಾನಿಗಳುಂಟಾದಾಗ ಸರ್ಕಾರಕ್ಕೂ ಮೊದಲು ಸಂಘದ ಸ್ವಯಂಸೇವಕರು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದದ್ದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಸಂಘ ಇವಿಷ್ಟಕ್ಕೇ ಕಾರ್ಯಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳದೇ, ಹೆಚ್ಚು ಸಮಾಜಮುಖಿಯಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ ತಲುಪಬೇಕು ಎಂದು ಕಲ್ಪನೆ ಅನೇಕರದಾಗಿತ್ತಾದರೂ, ಆ ರೀತಿಯಾಗಿ ತಲುಪಲು ಹೇಗೆ ಎಂಬ ಯಕ್ಷ ಪ್ರಶ್ನೆಯಾಗಿತ್ತು.

HSP

ಇದೇ ಪ್ರಶ್ನೆಯು ಅಜಿತ್ ಅವರ ಮನಸ್ಸಿನಲ್ಲೂ ಮೂಡಿದ್ದೇ ತಡಾ ತಮ್ಮ ಆಲೋಚನೆಯನ್ನು ಕಾರ್ಯರೂಪಕ್ಕೆ ತರಲು ಮುನ್ನುಗ್ಗಿದ ಅಜಿತ್ 1980ರಲ್ಲಿ ಬೆಂಗಳೂರಿನಲ್ಲಿ ಹಿಂದೂ ಸೇವಾ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಸಂಘ ಪರಿವಾರದ ಅಂಗ ಸಂಸ್ಥೆಯನ್ನಾಗಿ ಸ್ಥಾಪಿಸಿದ್ದಲ್ಲದೇ ಅದರ ಸಂಸ್ಥಾಪಕ ನಿರ್ದೇಶಕರ ಜವಾಬ್ಧಾರಿಯನ್ನು ವಹಿಸಿಕೊಂಡರು. ಲೋಕಹಿತಂ ಮಮ ಕರಣೀಯಂ (ಸಮಾಜಕ್ಕೆ ಹಿತವಾಗುವ ಕೆಲಸವನ್ನು ಮಾಡಬೇಕು) ಎಂಬ ಧ್ಯೇಯ ವಾಕ್ಯದೊಂದಿಗೆ ಸೇವೆಯೆಂಬುದು ಒಂದು ಆಂದೋಲನವಾಗಿ, ಅದಕ್ಕಾಗಿ ಹೆಚ್ಚು ಹೆಚ್ಚು ಜನರು ಸೇವಾ ಕಾರ್ಯದಲ್ಲಿ ತೊಡಗಬೇಕು, ಮಂತ್ರವಾಗಬೇಕು ಎಂಬ ಆಶಯದೊಂದಿಗೆ ಆರಂಭವಾದ ಪ್ರತಿಷ್ಠಾನ ಇಂದು ರಾಜ್ಯಾದ್ಯಂತ ಸುಮಾರು 800ಕ್ಕೂ ಹೆಚ್ಚು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಅನೇಕ ಸೇವಾ ಚಟುವಟಿಕೆಗಳಿಗೆ ಸಹಾಯ ಸಹಕಾರ ನೀಡುತ್ತಿದ್ದು ಅಂದು ಶ್ರೀ ಅಜಿತರು ನೆಟ್ಟ ಸಸಿ, ಇಂದು ಅವರು ಊಹಿಸಿದ್ದಕ್ಕಿಂತಲೂ ಹೆಮ್ಮರವಾಗಿ ಬೆಳೆದು ನಿಂತಿರುವುದು ನಿಜಕ್ಕೂ ಅಜಿತರ ದೂರದೃಷ್ಟಿಗೆ ಸಾಕ್ಷಿಯಾಗಿದೆ.

ಸಂಘದ ಪ್ರಚಾರಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ವಿವಿಧ ಸ್ಥಳಗಳಲ್ಲಿ ಸಂಘದ ಕಾರ್ಯ ಕ್ಷೇತ್ರದ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಅಹಿರ್ನಿಶಿಯಾಗಿ ಸೇವೆ ಸಲ್ಲಿಸುವುದು ಎಲ್ಲರ ತಿಳಿದಿರುವ ವಿಷಯವಾಗಿದ್ದರೆ, ಹಿಂದೂಸೇವಾ ಪ್ರತಿಷ್ಠಾನದಲ್ಲಿ ಆ ರೀತಿಯ ಸೇವಾಕರ್ತರನ್ನು ಸೇವಾವ್ರತಿಗಳು ಎಂಬ ವಿಶಿಷ್ಟ ಕಲ್ಪನೆಯಡಿಯಲ್ಲಿ ಯಾವುದೇ ಪ್ರತಿಫಲಾಕ್ಷೆಯಿಲ್ಲದೇ, ಕನಿಷ್ಠ ಮೂರು ವರ್ಷ ಸಮಾಜದ ಸೇವೆಗಾಗಿಯೇ ಸಮಯ ಮೀಸಲಿಡಲು ಸಿದ್ಧವಿರುವ ಯುವಕ ಯುವತಿಯರನ್ನು ಆರಿಸಿ ಅವರಿಗೆ 40 ದಿನಗಳ ತರಬೇತಿಯನ್ನು ನೀಡಿ, ಅವರನ್ನು ವಿವಿಧ ಊರುಗಳಿಗೆ ಕಳುಹಿಸಿ ಅಲ್ಲಿನ ಸೇವಾ ಚಟುವಟಿಕೆಗಳನ್ನು ನಡೆಸುವಂತೆ ಪ್ರೇರೇಪಿಸಿದರು. ಹೀಗೆ ಸೇವೆಯೆಂಬ ಯಜ್ಞದಲ್ಲಿ ಸಮಿದೆಯಿಂದ ಉರಿಯುವ ಎನ್ನುವ ಧ್ಯೇಯದಡಿಯಲ್ಲಿ, ಸಮಾಜ ಸೇವೆಯನ್ನೇ ತಮ್ಮ ವ್ರತವಾಗಿ ಸ್ವೀಕರಿಸಿದ ಸೇವಾವ್ರತಿಗಳೇ ಪ್ರತಿಷ್ಠಾನದ ಬೆನ್ನೆಲುಗಾಗಿ. ಕಳೆದ 40 ವರ್ಷಗಳಲ್ಲಿ ಸುಮಾರು 5000 ಕ್ಕೂ ಹೆಚ್ಚು ಸೇವಾವ್ರತಿಗಳಿಗೆ ಪ್ರತಿಷ್ಠಾನದಿಂದ ತರಭೇತಿ ಪಡೆದಿದ್ದರೆ, ಪ್ರಸ್ತುತ 250ಕ್ಕೂ ಹೆಚ್ಚು ಸೇವಾವ್ರತಿಗಳು ರಾಜ್ಯಾದ್ಯಂತ ವಿವಿಧ ಸೇವಾಕಾರ್ಯಗಳಲ್ಲಿ ತೊಡಗಿದ್ದಾರೆ.

pratistana

ಈ ರೀತಿಯ ಸೇವಾವ್ರತಿಗಳ ಕಾರ್ಯಕ್ಷೇತ್ರಗಳು ವೈವಿಧ್ಯಮಯವಾಗಿದ್ದು, ಸಮಗ್ರ ಶಿಶುಶಿಕ್ಷಣ, ಮಾತೃ ಮಂಡಳಿ, ಸಂಸ್ಕೃತ, ಯೋಗ ಶಿಕ್ಷಣ, ಗ್ರಾಮಾಭಿವೃದ್ಧಿ, ಪರಿಸರ ಸಂರಕ್ಷಣೆ, ಬೀದಿ ಮಕ್ಕಳ ಪುನರ್ವಸತಿ, ವ್ಯಾಸಂಗ ಕೇಂದ್ರ, ಬುದ್ಧಿಮಾಂದ್ಯ ಮಕ್ಕಳ ಶಿಕ್ಷಣ, ವೃತ್ತಿ ತರಬೇತಿ, ಆಪ್ತಸಲಹೆ, ಹಿಂದು ಜೀವನ ಶಿಕ್ಷಣ, ಯುವಜನರನ್ನು ಸೇವೆಯಲ್ಲಿ ತೊಡಗಿಸುವುದು, ವಿದ್ಯಾನಿಧಿ – ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತರಭೇತಿ ನೀಡುತ್ತಿರುವುದಲ್ಲದೇ, ಅನೇಕ ವಿನೂತನ ಸಾಮಾಜಿಕ ಪ್ರಯೋಗಗಳೊಂದಿಗೆ ಶ್ರೇಷ್ಠ ಸಮಾಜ ಸೇವಕರನ್ನಾಗಿಸುತ್ತಿರುವುದಲ್ಲದೇ ಅನೇಕರಿಗೆ ಸ್ವಾಭಿಮಾನಿಗಳಾಗಿ ಸ್ವತಂತ್ರವಾಗಿ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುವಂತೆ ಧೈರ್ಯ ಮತ್ತು ಸ್ಥೈರ್ಯವನ್ನು ತುಂಬುವುದರ ಜೊತೆಗೆ ಅದಕ್ಕೆ ಪೂರಕವಾಗಿ ಇರುವ ಸರ್ಕಾರೀ ಸವಲುತ್ತುಗಳು/ಯೋಜನೆಗಳನ್ನು ವಿವರಿಸಿ ಅದರ ಮೂಲಕ ಸ್ವಾವಲಂಭಿಯಾಗಿ ಸ್ವಂತ ಉದ್ಯಮ ಸ್ಥಾಪಿಸುವುದಲ್ಲದೇ ಅದರ ಮೂಲಕ ಇನ್ನೂ ಹತ್ತಾರು ಜನರಿಗೆ ಉದ್ಯೋಗವನ್ನು ಕೊಡುವಂತಾಗುತ್ತಿರುವುದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ.

nele

ಬೀದಿಮಕ್ಕಳ ಬಗ್ಗೆ ಅಜಿತರಿಗಿದ್ದ ಕಾಳಜಿ ಅಪಾರ ಹಾಗಾಗಿಯೇ ಅವರ ನೇತೃತ್ವದಲ್ಲಿ ಬೀದಿ ಮಕ್ಕಳಿಗೆಂದೇ ಆರಂಭವಾದ ಪುನರ್ವಸತಿ ಕೇಂದ್ರ ನೆಲೆ ಸದ್ಯಕ್ಕೆ ಬೆಂಗಳೂರಿನಲ್ಲೇ 6 ಕಡೆಗಳಲ್ಲಿದ್ದು, ಅಗತ್ಯವಿದ್ದ ಮಕ್ಕಳಿಗೆ ಉಚಿತ ಊಟ, ವಸತಿ, ಶಿಕ್ಷಣವಲ್ಲದೇ ಉತ್ತಮ ಸಂಸ್ಕಾರ ನೀಡುವ ಕೆಲಸವೂ ಇಲ್ಲಿ ನಡೆಯುತ್ತಿದೆ. ಇನ್ನು ಶಿವಮೊಗ್ಗ ಮತ್ತು ಮೈಸೂರುಗಳಲ್ಲಿಯೂ ನೆಲೆ ಕೇಂದ್ರಗಳು ನಡೆಯುತ್ತಿದ್ದು, ಒಟ್ಟಾರೆ ಸುಮಾರು 200ಕ್ಕೂ ಹೆಚ್ಚು ಮಕ್ಕಳು ನೆಲೆಯಲ್ಲಿ ತಮ್ಮ ನೆಲೆಯನ್ನು ಕಂಡು ಕೊಂಡಿದ್ದಾರೆ. ಅದೇ ರೀತಿಯಲ್ಲಿ ಬುದ್ಧಿಮಾಂದ್ಯ ಮಕ್ಕಳಿಗಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಆರಂಭವಾದ ಅರುಣಚೇತನ ಶಾಲೆಯಲ್ಲಿ ಕಲಿತ ಹಲವು ಮಕ್ಕಳು ಇಂದು ಬೇರೆ ಬೇರೆ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿದ್ದರೆ, ಅಲ್ಲಿನ ವೃತ್ತಿ ತರಬೇತಿ ಕೇಂದ್ರದಲ್ಲಿ ಸೋಪಿನ ಪುಡಿ, ಚಾಕ್ ಪೀಸ್, ಫಿನಾಯಿಲ್, ಮೇಣದ ಬತ್ತಿ, ಮ್ಯಾಟ್‌ಗಳು, ಪೇಪರ್ ಬ್ಯಾಗ್, ಫರ್ನಿಚರ್ ತಯಾರಿಕೆ ಮಾಡುವುದನ್ನು ಕಲಿತ ಅನೇಕ ಮಕ್ಕಳು ಸ್ವಾವಲಂಬನೆಯ ದಾರಿಯಲ್ಲಿ ಮುನ್ನಡೆಯು ಮೂಲಕ ತಮ್ಮ ಪೋಷಕರಿಗೆ ಆರ್ಥಿಕ ಹೊಣೆಯನ್ನು ತಪ್ಪಿಸಿರುವುದು ಅಭಿನಂದನಾರ್ಹವಾಗಿದೆ.

ಇನ್ನು ಸ್ವತಃ ಯೋಗ ಪ್ರವೀಣರಾಗಿದ್ದ ಅಜಿತರ ನೆನಪಿನಲ್ಲಿಯೇ ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ಪ್ರತಿಷ್ಠಾನದ ವತಿಯಿಂದಲೇ ಸೇವಾವ್ರತಿಯರು ಯೋಗ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಬೆಂಗಳೂರಿನ ಯೋಗಶ್ರೀ ಯೋಗ ಕೇಂದ್ರ 6 ತಂಡಗಳಲ್ಲಿ ಯೋಗ ಶಿಕ್ಷಣ ನೀಡುತ್ತಿದ್ದು, ಪ್ರತಿವರ್ಷವೂ ಸಾವಿರಾರು ಜನರು ಇದರ ಸದುಯೋಗ ಪಡೆದುಕೊಂಡು ಸಧೃಢವಾದ ಆರೋಗ್ಯವನ್ನು ಪಡೆಯುತ್ತಿರುವುದು ಗಮನಾರ್ಹವಾಗಿದೆ.

YFS

ಯುವಜನರನ್ನು ಸೇವಾಕಾರ್ಯದಲ್ಲಿ ತೊಡಗಿಸುವ ಉದ್ದೇಶವನ್ನಿಟ್ಟುಕೊಂಡಿರುವ ಯೂತ್ ಫಾರ್ ಸೇವಾ ಇಂದು 4000ಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿದ್ದು. ಪ್ರತಿ ವರ್ಷ ಬಡ ಮಕ್ಕಳಿಗೆ ಸ್ಕೂಲ್ ಕಿಟ್ (ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ಲು, ಚೀಲ) ವಿತರಣೆ ಮಾಡುತ್ತಿದೆಯಲ್ಲದೇ, ಆರ್ಥಿಕ ಸೌಲಭ್ಯವಿಲ್ಲದೇ ಶಿಕ್ಷಣದಿಂದ ವಂಚಿತರಾಗುತ್ತಿರುವಂತಹ ಬಡ ಮಕ್ಕಳನ್ನು ಗುರುತಿಸಿ ಅವರ ಶಿಕ್ಷಣದ ಖರ್ಚನ್ನು ದಾನಿಗಳ ಸಹಾಯದಿಂದ ಭರಿಸುವ ಮೂಲಕ ಸಾವಿರಾರು ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸುವಂತೆ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಆ ಮಕ್ಕಳಿಗೂ ಉತ್ತಮವಾದ ಸೌಲಭ್ಯಗಳನ್ನು ಒದಗಿಸಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ.

ಹೀಗೆ ಅಜಿತರ ದೂರದೃಷ್ಟಿಯಿಂದ ಕಟ್ಟಿಕೊಂಡಿದ್ದ ಕನಸುಗಳೆಲ್ಲವೂ ಒಂದೊಂದಾಗಿ ನನಸಾಗುತ್ತಿರುವ ಸಮಯದಲ್ಲೇ, ಸಂಘದ ಪ್ರಾಂತ ಪ್ರಚಾರಕರಾಗಿ ಸೇವೆಸಲ್ಲಿಸುತ್ತಿದ್ದ ಅಜಿತ್ ಕುಮಾರ್ ಅವರು ಡಿಸೆಂಬರ್ 08, 1990 ರಂದು ತುಮಕೂರಿನಲ್ಲಿ ಭೈಠಕ್ ಮುಗಿಸಿಕೊಂಡು ತಡರಾತ್ರಿಯಲ್ಲಿ ತಮ್ಮ ನಾಲ್ವರು ಸ್ನೇಹಿತರೊಂದಿಗೆ ಕಾರಿನಲ್ಲಿ ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ನಡೆದ ಕಾರು ಅಪಘಾತದಲ್ಲಿ ತಮ್ಮ 56ನೇ ವಯಸ್ಸಿನಲ್ಲಿ ನಿಧನರಾಗುವ ಮೂಲಕ ಸಮಾಜ ಸೇವೆಯ ಅದ್ಭುತ ಹರಿಕಾರನೊಬ್ಬನನ್ನು ಕಳೆದುಕೊಳ್ಳುವಂತಾಗುತ್ತದೆ.

ajith_Seva_din

ಅಜಿತರ ಗೌರವಾರ್ಥ, ಪ್ರತಿಷ್ಠಾನದ ಅಂದಿನ ಕುಲಪತಿಗಳಾಗಿದ್ದ ಪೂಜ್ಯ ಶ್ರೀ. ಶ್ರೀ. ವಿಶ್ವೇಶತೀರ್ಥ ಸ್ವಾಮೀಜಿ ಅವರು ಅಜಿತರು ನಿಧನರಾದ ಮಾರ್ಗಶಿರ ಬಹುಳ ಬಿದಿಗೆಯಂದು ಸೇವಾ ದಿನ ಎಂದು ಆಚರಿಸಲು ಕರೆ ನೀಡಿದರು. ಇದರ ಭಾಗವಾಗಿ ಅಂದು ಅಜಿತರ ವಿಶಿಷ್ಟ ಶೈಲಿಯ ಕಾರ್ಯನಿರ್ವಹಣೆಯಾದ ಎಲ್ಲರಿಗೂ ಕಾಳಜಿ, ಎಲ್ಲದಲ್ಲಿಯೂ ಬಾಂಧವ್ಯ ಎಂಬ ತತ್ವವನ್ನು ಮತ್ತೊಮ್ಮೆ ನೆನೆಯುತ್ತಾ ಅವರ ಕಾರ್ಯಚಟುವಟಿಕೆಗಳು ಮತ್ತು ಆದರ್ಶಗಳನ್ನು ಇಂದಿನ ಸೇವಾವೃತ್ತಿಗಳಿಗೆ ಪರಿಚಯಮಾಡಿಕೊಡುವ ಮೂಲಕ ಸೇವಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳಲು ಪ್ರೇರಣೆ ನೀಡುವಂತೆ ಮಾಡುತ್ತಾರೆ. ಅದಲ್ಲದೇ ವಿವಿಧ ಕ್ಷೇತ್ರಗಳು ಮತ್ತು ಸಂಸ್ಥೆಗಳಲ್ಲಿನ ಸೇವಾ ಮನೋಭಾವದ ವ್ಯಕ್ತಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ ಅವರನ್ನು ಸನ್ಮಾನಿಸುವುದಲ್ಲದೇ, ವಿವಿಧ ಯೋಜನೆ ಮತ್ತು ವಿವಿಧ ಸೇವಾ ಚಟುವಟಿಕೆಗಳನ್ನು ಆಯೋಜಿಸುತ್ತಾರೆ, ಇನ್ನು ಅವರ ಹುಟ್ಟೂರು ಗುಡಿಬಂಡೆಯ ಗ್ರಾಮಸ್ಥರೂ ಸಹಾ ಪ್ರತೀ ವರ್ಷವೂ ಅಜಿತರ ನೆನಪಿನಲ್ಲಿ ಡಿಸಂಬರ್ ಮಾಸದಲ್ಲಿ ಸೇವಾದಿನಂದಂದೇ ಅದ್ದೂರಿಯಾಗಿ ಗ್ರಾಮೋತ್ಸವವನ್ನೂ ಆಚರಿಸುವ ಮೂಲಕ ಅಜಿತರ ನೆನಪನ್ನು ಇನ್ನೂ ಹಚ್ಚ ಹಸಿರಾಗಿಡುತ್ತಿರುವುದು ಶ್ಲಾಘನೀಯವಾಗಿದೆ.

ajkum

ಅಜಿತರು ಯೋಚನಾ ಮತ್ತು ಯೋಜನಾ ಶೈಲಿ ಅವರು ಮಾಡುತ್ತಿದ್ದ ಕೆಲಸಗಳ ವೇಗವನ್ನು ಕಂಡು ಅವರ ಹಿತೈಷಿಗಳು ಅವರನ್ನು ಆಗಾಗ್ಗೆ ಅವಸರದಲ್ಲಿರುವ ಸಂತ ಎಂದೇ ಕರೆಯುತ್ತಿದ್ದರು. ಎಲ್ಲಾ ಕೆಲಸಗಳನ್ನು ಅವಸರದಲ್ಲೇ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದ ಅಜಿತರು ತಮ್ಮ ಜೀವನದಲ್ಲು ಅವಸವಸರದಲ್ಲೇ ಎಲ್ಲರನ್ನೂ ಬಿಟ್ಟು ಹೋಗಿ 30 ವರ್ಷಗಳು ಕಳೆದರೂ, ಇಂದಿಗೂ ಅವರು ಕಟ್ಟಿ ಹೋದ ಸಂಘಟನೆಗಳ ಮೂಲಕ ಜೀವಂತವಾಗಿರುವ ಕಾರಣದಿಂದಲೇ ಅವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

ಹಿಂದೂಸೇವಾ ಪ್ರತಿಷ್ಠಾನ ಮತ್ತು ಅಜಿತರ ಬಗ್ಗೆ ಹೆಚ್ಚು ತಿಳಿಯಲು ಬಯಸುವವರು ಈ ವಿಳಾಸವನ್ನು ಸಂಪರ್ಕಿಸ ಬಹುದಾಗಿದೆ
ಹಿಂದು ಸೇವಾ ಪ್ರತಿಷ್ಠಾನ,
ಅಜಿತ ಶ್ರೀ, 8/28, ಬಸವನಗುಡಿ ರಸ್ತೆ, ಬೆಂಗಳೂರು – 560004
ದೂರವಾಣಿ 080-2660 8926, 94803 16628, 94803 16629

(ಲೇಖಕರು ಹವ್ಯಾಸಿ ಬರಹಗಾರರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಸಕ್ರಿಯ ಕಾರ್ಯಕರ್ತರು ಇವರ ಮತ್ತಷ್ಟು ಲೇಖನಗಳು https://enantheeri.com/ ಇಲ್ಲಿ ಓದುಗರು ಓದಬಹುದಾಗಿದೆ)

Leave a Reply

Your email address will not be published.

This site uses Akismet to reduce spam. Learn how your comment data is processed.