– ಡಾ. ಸುಧಾಕರ ಹೊಸಳ್ಳಿ,ಬರಹಗಾರರು,ಸಂವಿಧಾನ ತಜ್ಞರು

ಅಂದು ಡಿಸೆಂಬರ್ 17, 1946 ಭಾರತಕ್ಕೊಂದು ಸ್ವಂತ ಸಂವಿಧಾನ ರಚನೆ ಮಾಡುವ ಪ್ರಧಾನ ಸಭೆಯೊಂದರಲ್ಲಿ ಮಾತನಾಡಲು ತನಗೆ ಮೊದಲ ಅವಕಾಶ ದೊರಕಿದ್ದನ್ನು, ಅತ್ಯಂತ ಗೌರವ ಭಾವದಿಂದ ಸ್ವೀಕಾರ ಮಾಡಿ, ಅವಕಾಶಕ್ಕೆ ಧನ್ಯವಾದ ತಿಳಿಸಿ, ಬಾಬಾ ಸಾಹೇಬ್ ಅಂಬೇಡ್ಕರರು ಆಡಿದ ಮಾತು, ಕೊಟ್ಟ ಸಲಹೆ, ಸೂಚಿತ ಚೌಕಟ್ಟು, ಒಟ್ಟು ಸಂವಿಧಾನದ ಆಶಯ ಭಾರತೀಯತೆಯೇ ಆಗಿರಬೇಕು ಎಂಬುದನ್ನು ದೃಢಪಡಿಸುತ್ತದೆ.

ದಿನಾಂಕ 13 ಡಿಸೆಂಬರ್ 1946 ರಂದು ಭಾರತದ ಸಂವಿಧಾನ ಹೇಗಿರಬೇಕು? ಎಂಬ ಗಣರಾಜ್ಯ ನಿರ್ಣಯವನ್ನು ಮಂಡಿಸುವ ಅವಕಾಶ ಪಡೆದಿದ್ದ ನೆಹರುರವರು ಸೂಚಿಸಲ್ಪಟ್ಟ ಚೌಕಟ್ಟನ್ನು, ಅಂಬೇಡ್ಕರರು ದೃಢ ನಿಲುವಿನ ಮುಖಾಂತರ ತಿರಸ್ಕಾರ ಮಾಡುತ್ತಾರೆ. ತುಂಬಾ ಸಂಭಾವಿತರಾದ ಅಂಬೇಡ್ಕರರು “ಪ್ರಖ್ಯಾತ ಸಮಾಜವಾದಿ ಪಂಡಿತ್ ಜವಾಹರಲಾಲ್ ನೆಹರು ಅಂಥವರಿಂದ ಬಂದ ಈ ನಿರ್ಣಯವು ಅವಿವಾದಾತ್ಮಕವಾದರೂ ನನ್ನ ಮನಸ್ಸಿಗೆ ಬಹಳ ನಿರಾಶದಾಯಕವಾಗಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳಲೇಬೇಕು” ಎಂದು ನೇರವಾಗಿ ಮತ್ತು ಕಠೋರವಾಗಿ ನುಡಿದದ್ದು, ನೆಹರು ನಿರ್ದೇಶನದ ಸಂವಿಧಾನ ರಚನೆ ಅಪ್ರಸ್ತುತ ಮತ್ತು ಅಭಾರತೀಯತೆಯಿಂದ ಕೂಡಿತ್ತು ಎಂಬುದನ್ನು ಸಾದೃಶ್ಯಗೊಳಿಸುತ್ತದೆ.

ಗಣರಾಜ್ಯ ನಿರ್ಣಯದ ಮಂಡನೆಯ ಸಂದರ್ಭದಲ್ಲಿ ನೆಹರುರವರು ಈ ದೇಶದ ಸಂವಿಧಾನ ರಚನಾ ಸಭೆಯ ಜನನದಲ್ಲಿ ಬ್ರಿಟಿಷ್ ಸಂಸತ್ತಿನ ಕೈವಾಡವಿದೆ ಭಾರತ ಸಂವಿಧಾನವು ಬ್ರಿಟಿಷ್ ಸಂಸತ್ತು ನಿರ್ದೇಶಿಸಿದ ನಿಯಮಗಳ ಆಚೆಗೆ ಏನನ್ನು ಒಳಗೊಂಡಿರುವುದಿಲ್ಲ ಎಂದು ಘೋಷಿಸಿದರೆ, ಸಂವಿಧಾನದ ನಿರ್ಮಾತೃ, ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ಈ ದೇಶದ ಸಂವಿಧಾನ ರಚನಾ ಸಭೆಯು ತನ್ನ ರಚನೆಗೆ ಮುಂಚಿತವಾಗಿಯೇ ಬ್ರಿಟನ್ ಸಂಸತ್ತಿನ ಸರ್ವಾಧಿಕಾರವನ್ನು ತಿರಸ್ಕರಿಸಿದೆ. ನನ್ನನ್ನು ಒಳಗೊಂಡಂತೆ ಈ ಸಭೆಯ ಯಾವುದೇ ಸದಸ್ಯರು ಬ್ರಿಟನ್ ಸಂಸತ್ತಿನ ನಿರ್ದೇಶನಗಳನ್ನು ಸಂವಿಧಾನದ ಭಾಗವನ್ನಾಗಿ ಮಾಡಲು ಒಪ್ಪುವುದಿಲ್ಲ ಎಂದು ಘೋಷಿಸುತ್ತಾರೆ.

ಅಂದರೆ ಅಂಬೇಡ್ಕರರಿಗೆ ನಮಗಾಗಿ ರಚನೆಯಾಗುವ ಸಂವಿಧಾನ ಭಾರತೀಯತೆಯ ಹೊರತಾಗಿ ಇರಲೇಬಾರದೆಂಬ ಸ್ಪಷ್ಟ ಗುರಿ ಇತ್ತು ಎನ್ನುವುದಕ್ಕೆ ಸದರಿ ಹೇಳಿಕೆ ಬಹುದೊಡ್ಡ ನಿರ್ದರ್ಶನವಾಗುತ್ತದೆ. ಅಂತೆಯೇ, ಈ ಮಹಾನ್ ದೇಶದ ಸಾಮಾಜಿಕ ,ರಾಜಕೀಯ ಮತ್ತು ಆರ್ಥಿಕ ಸಂರಚನೆಯ ಅಂತಿಮ ಸ್ವರೂಪ ಮತ್ತು ದೂರದೃಷ್ಟಿಯ ವಿಕಾಸವನ್ನು ಕುರಿತು ಈಗ ನನ್ನ ಮನಸ್ಸಿನಲ್ಲಿ ಕಿಂಚಿತ್ತಾದರೂ ಸಂಶಯವಿಲ್ಲ. ಇಂದು ನಾವು ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಹೋಳಾಗಿದ್ದೇವೆ ಎಂದು ನಾನು ಬಲ್ಲೆ, ಈ ಎಲ್ಲಾ ಸಂಗತಿಗಳು ಇದ್ದರೂ, ನಾನು ನಂಬುವುದೇನೆಂದರೆ ಸಮಯ ಮತ್ತು ಸನ್ನಿವೇಶವು ಅವಕಾಶ ನೀಡಿದರೆ ಈ ದೇಶವು ಒಂದಾಗುವುದನ್ನು ಜಗತ್ತಿನ ಯಾವುದೇ ಶಕ್ತಿಯು ತಡೆಯಲಾರದು. ನಮ್ಮೆಲ್ಲ ಜಾತಿ ಮತಗಳ ನಡುವೆಯೂ ನಾವು ಯಾವುದೋ ಒಂದು ರೂಪದಲ್ಲಿ ಸಂಯುಕ್ತ ಜನಾಂಗವಾಗುತ್ತೇವೆ ಎನ್ನುವುದರಲ್ಲಿ ನನಗೆ ಕಿಂಚಿತ್ತು ಅನಿಶ್ಚಿತತೆ ಇಲ್ಲ”ಎಂದು ಸ್ಪಷ್ಟಪಡಿಸುತ್ತಾರೆ.

ಇಂತಹ ಸ್ಪಷ್ಟತೆ ಹೊಂದಿದ್ದ ಅಂಬೇಡ್ಕರರು, ಸಂವಿಧಾನದ ಒಳಗೆ ಪಾಶ್ಚಿಮಾತ್ಯರ ನೆರಳು ತಾಗಲು ತಡೆಗೋಡೆಯಾಗಿದ್ದರೂ ಎಂಬುದು ಸಾರ್ವತ್ರಿಕ ಸತ್ಯ. ಪಾಶ್ಚಿಮಾತ್ಯ ಮೋಹ ಮತ್ತು ಬೇನೆಗೆ ಸಿಲುಕಿದ್ದ ನೆಹರು ಮತ್ತು ಅವರ ಸಹಚರರ ಅದೆಷ್ಟೇ ಹೋರಾಟಗಳಿದ್ದರೂ, ಅದನ್ನು ಸಾಂಖ್ಯಿಕವಾಗಿ, ಅವಲೋಕನದ ಮೂಲಕ ಎದುರಿಸಿ ಭಾರತೀಯತೆಯನ್ನು ಸಂವಿಧಾನದ ಆತ್ಮವನ್ನಾಗಿಸಿದರು. ಈ ನೆಲದ ಮೇಲೆ ಅಂಬೇಡ್ಕರರಿಗೆ ಇದ್ದ ಒಲವು, ಆತ್ಮಾಭಿಮಾನ ಅದಾವಮಟ್ಟದ್ದು ಎಂದರೆ? ಸಂವಿಧಾನ ರಚನಾ ಸಭೆಯಲ್ಲಿ ನಿಂತು ರಾಷ್ಟ್ರದ ಗ್ರಂಥವ್ಯಗಳನ್ನು ನಿರ್ಧಾರ ಮಾಡಬೇಕಾದರೆ ಜನರ, ನಾಯಕರ ಮತ್ತು ಪಕ್ಷಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು, ದೇಶದ ಗ್ರಂಥವ್ಯವನ್ನು ಗುರುತಿಸುವಾಗ ಎಲ್ಲದಕ್ಕೂ ದೇಶವನ್ನೇ ಅಗ್ರಗಣ್ಯವಾಗಿ ತೆಗೆದುಕೊಳ್ಳಬೇಕು ಎಂದು ಘೋಷಿಸಿದ್ದರು.

ಕಾಂಗ್ರೆಸ್ನ ಕೆಟಿಷಾ ಎರಡೆರಡು ಬಾರಿ ಜಾತ್ಯಾತೀತತೆ ಅಥವಾ ಸೆಕ್ಯುಲರಿಸಂ ಎಂಬುದು ಸಂವಿಧಾನದ ಭಾಗವಾಗಬೇಕು ಎಂದು ತಿದ್ದುಪಡಿ ಮಂಡಿಸಿದಾಗಲೂ, ಅಂಬೇಡ್ಕರರು
ಕಡಾಖಂಡಿತವಾಗಿ ಅದನ್ನು ತಿರಸ್ಕರಿಸಿದ್ದರು.
ಆ ಸಂದರ್ಭದಲ್ಲಿ ಮಾತನಾಡುತ್ತಾ ,”ಸೆಕ್ಯುಲರಿಸಂ ಎಂಬುದು ಪಾಶ್ಚಿಮಾತ್ಯ ಚಿಂತನೆಯಾಗಿದ್ದು ಅದು ಈ ನೆಲದ ಗುಣಕ್ಕೆ ಹೊಂದುವುದಿಲ್ಲ ಸೆಕ್ಯುಲರಿಸಂ ಎಂಬುದು ಭಾರತ ಮತ್ತು ಸಂವಿಧಾನ ಎರಡನ್ನು ಶಿಥಿಲಗೊಳಿಸುತ್ತದೆ “ಎಂದಿದ್ದರು.

ಹಾಗಾಗಿ ,ಇದನ್ನು ನಾನು ಸಂವಿಧಾನದ ಒಳ ಬಿಡುವುದಿಲ್ಲ ಎನ್ನುವ ಮುಖಾಂತರ ತಿದ್ದುಪಡಿಯನ್ನು ಹಿಮ್ಮುಖವಾಗಿಸಿದರು. ಜೊತೆಜೊತೆಗೆ ಅತಿಯಾದ ಸಮಾಜವಾದದ ಅಪಾಯವನ್ನು ಕೂಡ ಸಭೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟರು. ಭಾರತ ಹೊಸದಾಗಿ ರಚನೆ ಮಾಡಿಕೊಳ್ಳುವ ಸಂವಿಧಾನದಲ್ಲಿ ಅವಲೋಕನದ ಮೂಲಕ ವಿಶ್ವದ ಇತರ ದೇಶಗಳ ಸಂವಿಧಾನಗಳಲ್ಲಿನ ಕೆಲವು ಅಂಶಗಳನ್ನು ಎರವಲು ಪಡೆದದ್ದು ವಾಸ್ತವವಾದರೂ, ಸಂವಿಧಾನವು ಈ ನೆಲದ ಗುಣವನ್ನು ಮೀರಿ ನಿಲ್ಲಲು ಅವಕಾಶ ಕಲ್ಪಿಸಲೇ ಇಲ್ಲ. ಒಟ್ಟು ಸಂವಿಧಾನದ ಅತ್ಯಂತ ಪ್ರಮುಖ ಭಾಗವಾದ ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಮೂರನೇ ಭಾಗ ಈ ನೆಲದ ಅಸ್ಮಿತೆ, ಆರಾಧ್ಯ ಶ್ರೀರಾಮಚಂದ್ರರ ಭಾವಚಿತ್ರವನ್ನು ಮೂಲ ಸಂವಿಧಾನದಲ್ಲಿ ಜೋಡಿಸುವ ಮುಖಾಂತರ ಪ್ರಜೆಗಳಿಗೆ ಸರ್ಕಾರ ನೀಡುವ ಹಕ್ಕುಗಳು ರಾಮನು ನೀಡುತ್ತಿದ್ದ ಹಕ್ಕುಗಳಂತೆ ಇರಬೇಕೆಂಬ ನಿಲುವನ್ನು ಕಾನೂನಿನ ಒಳಗೆ ಶಾಶ್ವತಗೊಳಿಸಿದ್ದರು.

ಮುಂದುವರೆದು, ಸಂವಿಧಾನದ ನಾಲ್ಕನೇ ಭಾಗದಲ್ಲಿ ಭಗವದ್ಗೀತೆಯನ್ನು ಬೋಧಿಸುತ್ತಿರುವ ಕೃಷ್ಣರ ಚಿತ್ರವನ್ನು ದಾಖಲಿಸುವ ಮುಖೇನ ನೆಲಮೂಲದ ಸಂಸ್ಕೃತಿಯು ಸಂವಿಧಾನದ ಆಶಯ ಆಗಬೇಕೆಂಬ ಜಾಗೃತಿಯನ್ನು ಹಾಗೂ ಜಾಣ್ಮೆಯನ್ನು ಮೆರೆದಿದ್ದರು. ಗೋ ಹತ್ಯೆ ನಿಷೇಧ, ಪ್ರಾಚೀನ ಸ್ಮಾರಕಗಳ ರಕ್ಷಣೆ, ಏಕರೂಪ ನಾಗರಿಕ ಸಂಹಿತೆ, ಪಾನ ನಿಷೇಧ, ಮಕ್ಕಳು ಮತ್ತು ಮಹಿಳೆಯರಿಗೆ ಗೌರವ ನೀಡುವುದು ,ಅಂತರಾಷ್ಟ್ರೀಯ ಶಾಂತಿ ಕಾಪಾಡುವಿಕೆಗೆ ಒತ್ತು, ಸ್ವಾಭಾವಿಕ ನ್ಯಾಯಕ್ಕೆ ಮನ್ನಣೆ, ಧಾರ್ಮಿಕ ಹಕ್ಕು, ಮೂಲಭೂತ ಹಕ್ಕುಗಳು ,ಇಂತಹ ಅನೇಕ ನೈತಿಕ ಮೌಲ್ಯದ ಸಂಗತಿಗಳನ್ನು ಸಂವಿಧಾನದ ಅಂತರ್ಗತವಾಗಿಸಿರುವುದು ಭಾರತೀಯತೆಯ ದ್ಯೋತಕವೇ ಆಗಿದೆ.

ಭಾರತೀಯ ಪ್ರಜೆಯಾಗಲು ನಿಗದಿ ಮಾಡಿದ ನಿಯಮ ಕೂಡ ಭಾರತೀಯತೆಯನ್ನು ಅನುಸರಿಸುತ್ತದೆ. ಉದಾಹರಣೆಗೆ, ಯಾವುದೇ ವ್ಯಕ್ತಿ ಭಾರತೀಯ ಪೌರನಾಗಲು ಈ ನೆಲದಲ್ಲಿ ಒಂದಿಷ್ಟು ವರ್ಷ ವಾಸವಾಗಿರಬೇಕು, ಈ ಮಣ್ಣಿನ ಗುಣ ಅವನನ್ನು ಹೊಕ್ಕ ಮೇಲೆ ಅವನಿಗೆ ಕಾನೂನಿನ ಮಾನ್ಯತೆ ನೀಡಲು ಸಾಧ್ಯ ಎಂಬುದನ್ನು ನಿಯಮವಾಗಿಸಿರುವುದು, ಅಂಬೇಡ್ಕರರು ಸಂವಿಧಾನ ರಚನೆಯಲ್ಲಿ ಸಕಾಲಿಕವಾಗಿ ಮತ್ತು ಮುಂಬರುವ ದಿನಗಳಲ್ಲೂ ಭಾರತೀಯತೆ ಉಳಿಯಬೇಕು ಎಂಬ ಬದ್ಧತೆಗೆ ಅನುಗುಣವಾಗಿದ್ದರು ಅನ್ನುವುದನ್ನು ಪರಿಚಯ ಮಾಡಿಸುತ್ತದೆ.

ಸಂವಿಧಾನದ 20, 21ನೇ ವಿಧಿಗಳಲ್ಲಿ ಅಳವಡಿಸಿರುವ ವೈಯಕ್ತಿಕ ಮತ್ತು ಜೀವಿಸುವ ಹಕ್ಕು ಜಗತ್ತಿಗೆ ನಾಗರೀಕತೆಯನ್ನು ಕೊಟ್ಟ ಭಾರತೀಯತೆಯ ತಿರುಳೇ ಆಗಿವೆ. ನ್ಯಾಯ ವಿಭಾಗದಲ್ಲಿ ಜೋಡಿಸಿರುವ ಸಹಜ ನ್ಯಾಯದ ಪರಿಕಲ್ಪನೆಯ ಕೂಡ ಈ ಮಣ್ಣಿನದ್ದೇ. ಒಟ್ಟಾರೆ ಸಂವಿಧಾನದ 395 ವಿಧಿಗಳು ಎಂಟು ಅನುಸೂಚಿಗಳು 22 ಭಾಗಗಳು ಭಾರತೀಯತೆಯನ್ನು ಒಳಗೊಳ್ಳುವಂತೆ ಮಾಡಲು ಶ್ಯಾಮಾಪ್ರಸಾದ್ ಮುಖರ್ಜಿ, ಕೆ ವಿ ಕಾಮತ್ ಮುಂತಾದವರು ಪರಿಶ್ರಮಿಸಿದರೂ ಇದರ ಅಗ್ರ ಪಾಲು ಅಂಬೇಡ್ಕರನ್ನೇ ಅವಲಂಬಿಸಿದೆ.

(ಡಾ.ಸುಧಾಕರ ಹೊಸಳ್ಳಿಯವರು ಅತ್ಯಂತ ಸೃಜನಶೀಲ ಬರಹಗಾರರು. ಸಂವಿಧಾನದ ಕುರಿತಾಗಿ, ಅದರ ರಚನೆಯ ಕುರಿತಾಗಿ ಅತ್ಯಂತ ಆಳವಾದ ಅಧ್ಯಯನವನ್ನು ಮಾಡಿರುವ ಇವರು ಅಂಬೇಡ್ಕರ್‌ವಾದಿಯೂ ಹೌದು. ಇವರು ಬರೆದ ‘ಅವಿತಿಟ್ಟ ಅಂಬೇಡ್ಕರ್’ ಪುಸ್ತಕವು ಬೌದ್ಧಿಕ ವಲಯದಲ್ಲಿ ಅಂಬೇಡ್ಕರ್ ಅವರ ನಿಜ ವಿಚಾರಗಳ ಕುರಿತು ಮರುಚರ್ಚೆ ಹುಟ್ಟು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದರೆ ಅತಿಶಯೋಕ್ತಿಯಲ್ಲ.)

Leave a Reply

Your email address will not be published.

This site uses Akismet to reduce spam. Learn how your comment data is processed.