Dr. Mohan Bhagwat, Sarsanghachalak, RSS

ಸೆಪ್ಟೆಂಬರ್ ೧೮ರಂದು ‘ಹಿಂದುತ್ವದ ವಿಚಾರ – ಸಂಘದ ಪ್ರಯತ್ನ’ ದ ಕುರಿತಾಗಿ ಸರಸಂಘಚಾಲಕ ಡಾ. ಮೋಹನ್ ಭಾಗವತರ ಭಾಷಣ

ಸಂಘದ-ಸಂಘ ಸ್ಥಾಪಕರ ಕುರಿತು ನಿನ್ನೆ (ಸೆ.17) ತಿಳಿದುಕೊಂಡೆವು. ಸಂಘ ಶಿಕ್ಷಣವನ್ನು ಪಡೆದ ಒಬ್ಬ ಸ್ವಯಂಸೇವಕ ತನ್ನ ಸುತ್ತಲಿನ ಸಮಾಜದಲ್ಲಿ ಪರಿವರ್ತನೆಯನ್ನು ತರುತ್ತಾನೆ. ಸಂಘ ಯಾರ ಮೇಲೂ ಸಹ ತನ್ನ ಸಂಘಟನೆಗೆ ಸೇರಿಕೊಳ್ಳಲೇಬೇಕು ಎಂದು ಒತ್ತಡ ಹೇರುವುದಿಲ್ಲ. ಸಂಘ ವ್ಯಕ್ತಿ ನಿರ್ಮಾಣದ ಕಾರ್ಯವನ್ನು ಮಾಡುತ್ತದೆ, ಸ್ವಯಂ ಸೇವಕ ಸಂಘದಿಂದ ಪಡೆದ ವಿವೇಕದಿಂದ ಸಮಾಜದಲ್ಲಿ, ತನ್ನ ಕಾರ್ಯಕ್ಷೇತ್ರದಲ್ಲಿ ಬದಲಾವಣೆ ತರುತ್ತಾನೆ. ಸ್ವಯಂಸೇವಕರು ಎಂದಿಗೂ ಸುಮ್ಮನೆ ಕೂರುವವರಲ್ಲ, ಯಾವುದಾದರೊಂದು ಸಮಾಜಮುಖೀ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಈ ರೀತಿ ಸ್ವಯಂಸೇವಕರು ಅನೇಕ ಸಾಮಾಜಿಕ ಸಂಘಟನೆಗಳನ್ನು ಆರಂಭಿಸಿದ್ದಾರೆ, ಇವು ಸಮಾಜದ ಎಲ್ಲಾ ವರ್ಗಗಳಿಗೂ ಆಸರೆಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಎಲ್ಲಾ ಸಂಸ್ಥೆಗಳು ಸ್ವತಂತ್ರ ಸಂಘಟನೆಗಳೇ, ಸಂಘ ಇವುಗಳ ಮೇಲೆ ಯಾವುದೇ ನಿಯಂತ್ರಣ ಹೊಂದಿಲ್ಲ. ಯಾವುದಾದರೂ ವ್ಯಕ್ತಿ ಪ್ರಾಮಾಣಿಕತೆಯಿಂದ ಉತ್ತಮ ಕೆಲಸವನ್ನು ಮಾಡುತ್ತಿದ್ದಾನೆಂದರೆ, ಅವನು ವೈಚಾರಿಕ ವಿರೋಧಿಯಾದರೂ ಸ್ವಯಂಸೇವಕರು ಅವನ ಕಾರ್ಯಕ್ಕೆ ಹೆಗಲು ನೀಡುತ್ತಾರೆ.

ಸಂಘಕ್ಕೆ ರಾಜಕೀಯ ಆಕಾಂಕ್ಷೆಗಳಿವೆಯೆ? ಎಂದು ಹಲವರು ಪದೇ ಪದೇ ಪ್ರಶ್ನಿಸುತ್ತಾರೆ. ಇದು ಸತ್ಯಕ್ಕೆ ದೂರವಾದ ಮಾತು. ಸಮಾಜವನ್ನು ಜೋಡಿಸುವುದಷ್ಟೇ ಸಂಘದ ಉದ್ದೇಶ. ಸಂಘವು ಎಂದಿಗೂ ಚುನಾವಣಾ ರಾಜಕಾರಣದಲ್ಲಿ ತೊಡಗಿಸಿಕೊಂಡಿಲ್ಲ, ತೊಡಗಿಸಿಕೊಳ್ಳುವುದು ಇಲ್ಲ. ಡಾಕ್ಟರ್‌ಜಿ ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದವರು. ಒಮ್ಮೆ ಸರ್ಕಾರವು ರಾಷ್ಟ್ರೀಯತೆಯ ಮನೋಭಾವನೆಯುಳ್ಳ ಕಾಲೇಜಿನ ವಿದ್ಯಾರ್ಥಿಗಳಿಗೆ ಡಿಗ್ರಿ ಪ್ರಮಾಣ ಪತ್ರವನ್ನು ನಿರಾಕರಿಸುವ ಕಾನೂನೊಂದನ್ನು ಕಲ್ಕತ್ತೆಯಲ್ಲಿ ತರಲು ಮುಂದಾಯಿತು. ಇದರ ವಿರುದ್ಧ ಡಾಕ್ಟರ್ ಜಿ ಒಂದು ತಂತ್ರ ರೂಪಿಸಿ ನಗರದ ಪ್ರಮುಖರ ಸಹಾಯದೊಂದಿಗೆ ಈ ಕಾನೂನು ತಂದರೆ ಮತ್ತಷ್ಟು ಜನಾಂದೋಲನವನ್ನು ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ಬ್ರಿಟಿಷರಿಗೆ ರವಾನಿಸಿದರು, ಪರಿಣಾಮ ಆ ಮಸೂದೆ ಅಂಗೀಕಾರಗೊಳ್ಳಲಿಲ್ಲ.

ದೇಶದ ಪ್ರಧಾನಿ, ರಾಷ್ಟ್ರಪತಿಗಳು ಸ್ವಯಂಸೇವಕರು ಹಾಗಾಗಿ ಸರ್ಕಾರವನ್ನು ನಾಗಪುರ ನಿಯಂತ್ರಿಸುತ್ತದೆ ಎಂಬ ಆರೋಪವಿದೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಆ ನಾಯಕರು ಅವರ ಕಾರ್ಯಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಸ್ವತಂತ್ರರು ಹಾಗೂ ಸಮರ್ಥರು. ಸಂಘವು ಯಾವುದೇ ರಾಜಕೀಯ ವ್ಯಕ್ತಿ ಅಥವಾ ಪಕ್ಷದ ಮೇಲೆ ನಿಯಂತ್ರಣ ಹೊಂದಿಲ್ಲ. ಒಬ್ಬ ಸ್ವಯಂಸೇವಕ ತನ್ನ ಸ್ವಂತ ವಿವೇಕದಿಂದ ಕಾರ್ಯನಿರ್ವಹಿಸುತ್ತಾನೆ. ಅವನ ದೈನಂದಿನ ಜೀವನದ ಮೇಲೆ ಸಂಘ ಯಾವುದೇ ನಿಯಂತ್ರಣ ಹೊಂದಿರುವುದಿಲ್ಲ. ಸಂಘಶಿಕ್ಷಣವನ್ನು ಪಡೆದು ವಿವಿಧ ಕಾರ್ಯ ಕ್ಷೇತ್ರದಲ್ಲಿ ಕಾರ್ಯೋನ್ಮುಖವಾಗಿರುವ ಸ್ವಯಂಸೇವಕರಿಗೆ ಸಂಘದೊಂದಿಗೆ ಸಂಪರ್ಕದಲ್ಲಿರಲು ಹಾಗೂ ಅವರ ಕಾರ್ಯಕ್ಷೇತ್ರದಲ್ಲಿ ಸಂಘದ ವತಿಯಿಂದ ಯಾವುದಾದರೂ ಸಲಹೆಗಳು ಬೇಕಾಗಿದ್ದರೆ ಅದನ್ನು ಒದಗಿಸಲು ಸಮನ್ವಯ ಬೈಠಕ್ ನಡೆಯುತ್ತದೆ. ಅದು ಒಂದು ವಿಚಾರ ವಿನಿಮಯ ವೇದಿಕೆ ಅಷ್ಟೆ, ಯಾವುದೇ ನಿಯಂತ್ರಣ ಕಾರ್ಯಗಾರವಲ್ಲ.

ನಮ್ಮ ಸಮಾಜವೂ ಸ್ತ್ರೀಯರನ್ನು ಶಕ್ತಿ, ಜಗದಂಬಾ ಮುಂತಾದ ದೇವಿ ಸ್ವರೂಪಳಾಗಿ ಪೂಜಿಸುತ್ತದೆ. ಆದರೆ ವಾಸ್ತವದಲ್ಲಿ  ಮಹಿಳೆಯರ ಪರಿಸ್ಥಿತಿ ಬಹಳ ಶೋಚನೀಯವಾಗಿದೆ. ಮಹಿಳೆಯರನ್ನು ಸಮಾಜದ ಅವಿಭಾಜ್ಯ ಅಂಗವನ್ನಾಗಿ ಪರಿಗಣಿಸಿ ಪ್ರತಿಯೊಂದು ವಿಚಾರಗಳಲ್ಲೂ ಅವರಿಗೆ ಸಮಾನ ಸಹಭಾಗಿತ್ವ ನೀಡಬೇಕು ಎಂಬುದು ಸಂಘದ ಸ್ಪಷ್ಟ ನಿಲುವು. ಇದು ಅಸಹಾಯಕ ಮಹಿಳೆಯರನ್ನು ಉದ್ಧಾರ ಮಾಡುವ ಕಾರ್ಯವೆಂದು ನಾವು ಎಂದಿಗೂ ಪರಿಗಣಿಸಬಾರದು. ಅವರಿಗೆ ಇನ್ನೂ ಅಧಿಕ ಸ್ವಾತಂತ್ರ ್ಯ ನೀಡಿ ಸಶಕ್ತ ಪ್ರಬುದ್ಧರನ್ನಾಗಿ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಇದಕ್ಕಾಗಿ ಸ್ವಗೃಹದಿಂದ ಆರಂಭಿಸಿ ಸಮಾಜದ ಎಲ್ಲಾ ವಿಭಾಗಗಳಲ್ಲೂ ಮಾತೃಶಕ್ತಿಯ ಜಾಗರಣಾ ಕಾರ್ಯವಾಗಬೇಕೆಂಬುವುದು ಸಂಘದ ಅಪೇಕ್ಷೆ.

ಸ್ವಯಂಸೇವಕರ ಮನೆಯ ತಾಯಂದಿರು ಹಾಗೂ ಭಗಿನಿಯರು ಸ್ವಯಂಸೇವಕರಷ್ಟೆ ಉತ್ಸಾಹದಿಂದ ಸಂಘ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ ಎಂಬುದು ಇಲ್ಲಿ ಗಮನಿಸಬೇಕಾದ ವಿಶೇಷ ಅಂಶ.

ಹಿಂದುತ್ವ ಸಂಘದ ಅಸ್ಮಿತೆ. ಇದು ಸಂಘ ನಿರ್ಮಿಸಿದ್ದಲ್ಲ , ಅನಾದಿ ಕಾಲದಿಂದಲೂ ಈ ದೇಶದ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಅಂಶ. ವಿವಿಧತೆಯಲ್ಲಿ  ಏಕತೆ, ಸಮನ್ವಯ, ತ್ಯಾಗ, ನಿಯಮ, ಕೃತಜ್ಞತೆ, ಸತ್ಯ ಎಂಬ ಮೌಲ್ಯಗಳ ಸಂಕೀರ್ಣವೇ ಹಿಂದುತ್ವದ ಆಧಾರ. ಹೊರ ಜಗತ್ತಿನ ವಿಜ್ಞಾನ ಸಾಧನೆಯ ಜೊತೆಜೊತೆಗೆ ಆಧ್ಯಾತ್ಮಿಕ ಅಂತರ್ಮುಖಿ ಸಾಧನೆಯೂ ಸಹ ಇಲ್ಲಿ ಅವಿಚ್ಛಿನ್ನವಾಗಿ ನಡೆದುಕೊಂಡು. ‘ನೀನು ನನ್ನ ಮಾರ್ಗದರ್ಶನದಂತೆ ನಡೆದರೆ ನಿನಗೂ ನಾನು ನಿತ್ಯವೂ ಕಾಣುವ ದೇವರನ್ನು ತೋರಿಸುತ್ತೇನೆ’ ಎಂದು ತಮ್ಮ ಶಿಷ್ಯ ವಿವೇಕಾನಂದರಿಗೆ ಜ್ಞಾನ ದೀವಟಿಗೆಯನ್ನು ತೋರಿದ ರಾಮಕೃಷ್ಣ ಪರಮಹಂಸರಂತಹ ಅನೇಕ ಮಹಾತ್ಮರು ಇಂದಿಗೂ ನಮ್ಮ ದೇಶದಲ್ಲಿ ಕಾಣಸಿಗುತ್ತಾರೆ.

ತನ್ನ ಸಂಪ್ರದಾಯವನ್ನು ನೈಜ ಶ್ರದ್ಧೆಯಿಂದ ಪಾಲಿಸುವುದು ಮತ್ತು ಇತರರ ಪದ್ಧತಿಗಳನ್ನು ಆಧರಿಸಿ ಗೌರವಿಸುವುದು ಹಿಂದುತ್ವದ ವೈಶಿಷ್ಟತೆ. ಈ ವಿಶಾಲ ವಿಚಾರಧಾರೆಯನ್ನು ಹಿಂದೂ, ಸನಾತನ ಧರ್ಮ, ಧಮ್ಮ, ಇಂಡಿಕ್‌ಐಡಿಯಾಲಜಿ, ಭಾರತೀಯತೆ ಮುಂತಾದ ಸಮಾನಾರ್ಥಕ ಹೆಸರುಗಳಿಂದ ಸಂಬೋಧಿಸಲಾಗುತ್ತದೆ. ಧರ್ಮ ಎಂಬ ವಿಶೇಷ ಪರಿಕಲ್ಪನೆ ಭಾರತದ ಕೊಡುಗೆ, ಪಾಶ್ಚಿಮಾತ್ಯರ ರಿಲಿಜನ್ ಎಂಬ ಚಿಂತನೆಗೂ ಇದಕ್ಕೂ ಯಾವುದೇ ಹೋಲಿಕೆ ಅಥವಾ ಸಮಾನತೆ ಇಲ್ಲ. Religion ಎಂಬ ಪದ ಒಂದು ನಿರ್ದಿಷ್ಟ ಜನಾಂಗ, ಸ್ಥಳ, ಗ್ರಂಥ ಹಾಗೂ ಪದ್ಧತಿಗಳನ್ನು ಅವಲಂಬಿಸುತ್ತದೆ. ಆದರೆ ಜಾತಿ ಮತ ಪಂಥಗಳ ಎಲ್ಲೆ ಮೀರಿದ ವಿಶ್ವಮಾನವತೆಯನ್ನು ಹಿಂದುತ್ವ ಸಾರುತ್ತದೆ.

ಬಾಬಾಸಾಹೇಬರು ಹಿಂದೂ ಕೋಡ್ ಬಿಲ್ನ ಕುರಿತಾಗಿ ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆಯ ವೇಳೆಯಲ್ಲಿ ತಮ್ಮ ನಿಲುವಿಗೆ ಅಸಮ್ಮತಿ ಸೂಚಿಸಿದವರಿಗೆ ‘ಧರ್ಮವೆಂದರೆ ಏನೆಂದು ತಿಳಿದಿದ್ದೀರಿ? ಮೌಲ್ಯಗಳು ಹಾಗೂ ಕೋಡ್ ಎರಡೂ ಒಂದೇ ಅಲ್ಲ. ಕೋಡ್ ಕಾಲಕ್ಕೆ ಬದಲಾಗುತ್ತದೆ. ಆದರೆ ಮೌಲ್ಯಗಳು ಬದಲಾಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ‘ಎಲ್ಲರ ಹಿತದಲ್ಲಿ ನನ್ನ ಹಿತ, ನನ್ನ ಹಿತದಲ್ಲಿ ಎಲ್ಲರ ಹಿತ’ ಎಂಬ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವ ಪರಿಕಲ್ಪನೆ ಹಿಂದೂ ಧರ್ಮದ್ದು. ಹಿಂದುತ್ವ ವಿಶ್ವದ ಧರ್ಮ, ಇದರ ಉಗಮ ಸ್ಥಳ ಭಾರತ. ಹಿಂದುತ್ವ ಎಲ್ಲಾ ಪದ್ಧತಿಗಳನ್ನು ಸತ್ಯ ಎಂದು ಮಾನ್ಯ ಮಾಡುತ್ತದೆ. ಪಾಲ್ ಬ್ರಂಟನ್ ರಮಣಮಹರ್ಷಿಗಳ ಬಳಿ ಬಂದು ‘ನಾನು ನನ್ನ ಕ್ರೈಸ್ತ ಮತ ಬಿಟ್ಟು ನಿಮ್ಮ ಸಂಪ್ರದಾಯಕ್ಕೆ ಮತಾಂತರ ಹೊಂದುತ್ತೇನೆ’ ಎಂದಾಗ, ರಮಣರು ‘ನೀನು ಒಬ್ಬ ಕ್ರೈಸ್ತ, ಇನ್ನೂ ಉತ್ತಮ ಕ್ರೈಸ್ತನಾಗುವುದಕ್ಕೆ ಪ್ರಯತ್ನಪಡು’ ಎಂದು ಹೇಳುತ್ತಾರೆ. ಈ ಘಟನೆ ಹಿಂದುತ್ವದ ಸರ್ವಮತ ಸಹಿಷ್ಣುತೆಗೆ ಹಿಡಿದ ಕೈಗನ್ನಡಿ. ಭಾಷೆ, ಸಂಸ್ಕೃತಿ, ಆಚರಣೆ ಮುಂತಾದ ವೈವಿಧ್ಯತೆಗಳನ್ನು ಹೊಂದಿರುವ ಈ ದೇಶವನ್ನು ಬೆಸೆದಿರುವುದು ಇದೇ ಮೌಲ್ಯಾಧಾರಿತ ಹಿಂದೂ ಧರ್ಮ.

ಭಾರತೀಯರು ಎಂದಿಗೂ ಬೇರೆ ದೇಶಗಳ ಮೇಲೆ ದಂಡೆತ್ತಿ ಹೋಗಲಿಲ್ಲ, ಅನ್ಯರ ಸಂಪತ್ತನ್ನು ಕೊಳ್ಳೆ ಹೊಡೆಯಲಿಲ್ಲ. ಹೋದ ಕಡೆಗಳಲ್ಲೆಲ್ಲಾ ಜ್ಞಾನ ಸದ್ಭಾವನೆಗಳ ಕಂಪನ್ನು ಬೀರಿದರು. ಇಂದಿಗೂ ಅನೇಕ ದೇಶಗಳಲ್ಲಿ ಹಿಂದುತ್ವದ ಪ್ರಭಾವವನ್ನು ದೇಗುಲ, ಮೂರ್ತಿಗಳು ಮುಂತಾದ ರೂಪದಲ್ಲಿ ಕಾಣುತ್ತೇವೆ. ಇವುಗಳನ್ನು ಅಲ್ಲಿಯ ಜನ ಬಹಳ ಅಭಿಮಾನದಿಂದ ಕಾಣುತ್ತಾರೆ. ಇದಕ್ಕೆ ಆ ದೇಶದ ಜನಗಳ ಮೇಲೆ ನಮ್ಮ ಪೂರ್ವಜರು ಬೀರಿದ ನಿಸ್ವಾರ್ಥ ವಿಶಾಲ ಮನೋಭಾವನೆಯೇ ಕಾರಣ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ.

 ಬಾಬಾ ಸಾಹೇಬರು ಸ್ವಾತಂತ್ರ್ಯ ಹಾಗೂ ಸಮಾನತೆ ಎರಡನ್ನೂ ಒಟ್ಟಿಗೆ ತರುವುದು ಸಾಹಸದ ಕೆಲಸ, ಇವೆರಡನ್ನೂ ಒಟ್ಟಿಗೆ ಜಾರಿಗೊಳಿಸಬೇಕೆಂದರೆ ಜನರ ಮಧ್ಯೆ ಬಂಧು ಭಾವದ ಬಂಧವಿರಬೇಕು. ಈ ಬಂಧುಭಾವವೇ ನಿಜವಾದ ಧರ್ಮ ಎಂದು ನಂಬಿದ್ದರು. ಈ ಬಂಧು ಭಾವದ ಆಧಾರ ಎರಡು ಅಂಶಗಳು-

 1) ನಮ್ಮ ಪೂರ್ವಜರೆಲ್ಲರು ಸಮಾನರು ಹಾಗೂ

2) ನಾವೆಲ್ಲರೂ ತಾಯಿ ಭಾರತಿಯ ಪುತ್ರರು.

ಬಾಬಾ ಸಾಹೇಬರು ವರ್ಣಿಸಿದ ಬಂಧುಭಾವ ಬೇರೆಯಲ್ಲ ಹಿಂದುತ್ವ ಬೇರೆಯಲ್ಲ. ಹೀಗಾಗಿ ಭಾರತೀಯರೆಲ್ಲರೂ ಹಿಂದುಗಳೇ. ಈ ಮಾತನ್ನು ಕೆಲವರು ಹೆಮ್ಮೆಯಿಂದ ಒಪ್ಪಿಕೊಳ್ಳುತ್ತಾರೆ, ಒಂದಿಷ್ಟು ಜನ ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳಲು ಹಿಂಜರಿಯುತ್ತಾರೆ, ಮತ್ತೊಂದಿಷ್ಟು ಜನ ತಾವು ಹಿಂದುಗಳು ಎಂಬುದನ್ನೇ ಮರೆತುಬಿಟ್ಟಿದ್ದಾರೆ ಅಥವಾ ಮರೆಸಲಾಗಿದೆ. ಹೇಗೆ ಪರೀಕ್ಷೆಯಲ್ಲಿ ಸರಳವಾದ ಪ್ರಶ್ನೆಗಳನ್ನು ಮೊದಲು ಉತ್ತರಿಸಿ ನಂತರ ಕಠಿಣ ಪ್ರಶ್ನೆಗಳತ್ತ ಮುಖ ಮಾಡುತ್ತೇವೆಯೋ ಅದೇ ರೀತಿಯಲ್ಲಿ ಮೊದಲ ಗುಂಪಿನ ಜನರನ್ನು ಸಂಘಟಿಸಲಾಗುತ್ತಿದೆ. ಈ ಸಂಘಟನಾ ಕಾರ್ಯ ಉಳಿದವರ ವಿರುದ್ಧವಾಗಿ ಅಲ್ಲ, ಉಳಿದವರಿಗೋಸ್ಕರವಾಗಿ. ನಮಗೆ ಯಾವ ಶತ್ರುಗಳೂ ಇಲ್ಲ, ನಮ್ಮನ್ನು ಶತ್ರುಗಳಂತೆ ಕಾಣುವವರನ್ನು ಸಹ ಜೊತೆಗೂಡಿಸಿಕೊಂಡು ಹೋಗುವ ಇರಾದೆ ನಮ್ಮದು. ಇದೇ ವಾಸ್ತವದಲ್ಲಿ ಹಿಂದುತ್ವ.

ಭಾರತೀಯರಿಂದಲೇ ದೇಶಕ್ಕೋಸ್ಕರವಾಗಿ ರಚಿತವಾದ ಸಂವಿಧಾನವನ್ನು ಸಂಘ ಸಂಪೂರ್ಣವಾಗಿ ಗೌರವಿಸಿ ಪಾಲಿಸುತ್ತದೆ. ಭಾರತದ ಸಂವಿಧಾನದ ಪ್ರಿಯಾಂಬಲ್ನ ಅಂತ್ಯದಲ್ಲಿ ‘And to promote among them all fraternity, assuring the dignity of the individual and the unity and integrity of the nation’ ಎಂದಿದೆ.

ಈ ಸಾಲುಗಳನ್ನು ಸ್ವತಹ ಬಾಬಾ ಸಾಹೇಬರೆ ಅನೇಕ ಬಾರಿ, ಅನೇಕ ಸನ್ನಿವೇಶಗಳಲ್ಲಿ ಒತ್ತಿ ಒತ್ತಿ ಹೇಳಿದ್ದಾರೆ. ಸಂಸತ್ತಿನಲ್ಲಿ ಪರವಿರೋಧ ನಿಲುವುಗಳು ಇದ್ದರೂ ಅವುಗಳನ್ನು ನೀಡಿದ ಬಂಧುಭಾವನೆ ಏಕತೆ ನಮ್ಮಲ್ಲಿರಬೇಕು ಎಂಬುದು ಅವರ ನಿಲುವಾಗಿತ್ತು. ಈ ರೀತಿಯ ಬಂಧುಭಾವನೆಯನ್ನು ನಾವು ಹಿಂದುತ್ವವೆಂದು ಕರೆಯುತ್ತೇವೆ, ಆದ್ದರಿಂದ ನಮ್ಮದು ಹಿಂದೂ ರಾಷ್ಟ್ರ. ಹಿಂದೂ ರಾಷ್ಟ್ರ ಎಂದ ಮಾತ್ರಕ್ಕೆ ಇಲ್ಲಿ ಮುಸಲ್ಮಾನರಿಗೆ ಜಾಗವಿಲ್ಲವೆಂದು ಅಲ್ಲ, ಹಾಗೇನಾದರೂ ನಾವು ಮುಸಲ್ಮಾನರನ್ನು ನಿರಾಕರಿಸಿದರೆ ಅದು ನಿಜವಾದ ಹಿಂದುತ್ವವಾಗುವುದಿಲ್ಲ. ಎಲ್ಲ ಮತಗಳಿಗೂ ಸಮಾನ ಅವಕಾಶ ನೀಡುವುದೇ ಹಿಂದುತ್ವದ ಮುಖ್ಯ ಉದ್ದೇಶ.

ಸರ್ ಸೈಯದ್ ಅಹಮದ್ ಖಾನರು ಬ್ಯಾರಿಸ್ಟರ್ ಪದವಿ ಮುಗಿಸಿದಾಗ ಲಾಹೋರಿನ ಸಮಾಜದವರು ಖಾನ್ ಮೊದಲ ಮುಸಲ್ಮಾನ್ ಬ್ಯಾರಿಸ್ಟರ್ ಆದ ಕಾರಣ ಅವರಿಗೊಂದು ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ತಮಗೆ ಮಾತನಾಡಲು ಅವಕಾಶ ಸಿಕ್ಕಾಗ ಖಾನರು ‘ನೀವು ನನ್ನನ್ನು ನಿಮ್ಮವನೆಂದು ಭಾವಿಸಲಿಲ್ಲ, ಮುಸಲ್ಮಾನ್ ಎಂದು ಪ್ರತ್ಯೇಕರಿಸಿದಿರಿ. ನಾನೇನು ಭಾರತ ಮಾತೆಯ ಪುತ್ರನಲ್ಲವೇ? ನಮ್ಮ ಪೂಜಾ ಪದ್ಧತಿಗಳು ಬದಲಾಗಿರಬಹುದು, ಆದರೆ ನಾವೆಲ್ಲರೂ ಒಂದೇ’ ಎಂದು ಹೇಳಿದ್ದರು. ಖಾನರ ವಿಚಾರಧಾರೆಯನ್ನು ನಾವು ಮತ್ತೆ ಜಾಗೃತಗೊಳಿಸಬೇಕಾಗಿದೆ. ಸಂವಿಧಾನವನ್ನು ಸಂಘ ಪೂರ್ಣವಾಗಿ ಗೌರವಿಸುತ್ತದೆ, ಸಂವಿಧಾನದ ವಿರುದ್ಧ ಸಂಘ ನಡೆದುಕೊಂಡ ಒಂದೇ ಒಂದು ಉದಾಹರಣೆ ಇಲ್ಲ.

ಸಂಘಕ್ಕೆ ಮಾತ್ರ ಭಾರತವನ್ನು ಉದ್ಧರಿಸುವ ಶಕ್ತಿ ಇದೆ ಎಂಬ ಭ್ರಮೆಯಲ್ಲಿ ನಾವಿಲ್ಲ. ಒಂದು ದೇಶದ ಉನ್ನತಿ ಒಬ್ಬ ವ್ಯಕ್ತಿ ಅಥವಾ ಸಂಘಟನೆಯ ಮೇಲೆ ಆಧಾರಿತವಾಗಿರುವುದಿಲ್ಲ. ಅದು ಆ ದೇಶದ ಜನರ ಇಚ್ಛಾಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.

ಉದಾಹರಣೆಗೆ, ಎರಡನೆಯ ವಿಶ್ವ ಯುದ್ಧದಲ್ಲಿ ತತ್ತರಿಸಿ ಹೋಗಿದ್ದ ಜಪಾನ್ ಪುಟಿದೆೆದ್ದ ರೀತಿ ನಿಜಕ್ಕೂ ಆಶ್ಚರ್ಯಕರ. ಇದರ ಕುರಿತಾಗಿ ಇಬ್ಬರು ಸಮಾಜಶಾಸ್ತ್ರಜ್ಞರು ಮತ್ತು ಇಬ್ಬರು ಅರ್ಥಶಾಸ್ತ್ರಜ್ಞರು The Incredible Japanese ಎಂಬ ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕದ ಕಡೆಯಲ್ಲಿ ನೀಡಿರುವ ಐದು ಅಂಶಗಳು ಜಪಾನಿನ ಯಶಸ್ಸಿನ ಮಂತ್ರವಾಗಿವೆ. ಅವುಗಳು ಹೀಗಿವೆ-

1) ಜಪಾನಿನ ಜನರು ಅನುಶಾಸಿತರು.

2) ಒಬ್ಬ ಜಪಾನಿ ಎಂದಿಗೂ ತನ್ನ ಹಿತವನ್ನಷ್ಟೇ ಚಿಂತಿಸುವುದಿಲ್ಲ, ಬದಲಾಗಿ ತನ್ನ ಜನಾಂಗದ ಒಟ್ಟು ಹಿತವನ್ನು ಬಯಸುತ್ತಾನೆ.

3) ತಮ್ಮ ದೇಶಕ್ಕಾಗಿ ಯಾವುದೇ ರೀತಿಯ ಸಾಹಸಕ್ಕೆ ಧುಮುಕಲು ಅವರು ಸದಾ ಸಿದ್ಧ ಹಸ್ತರು.

4) ತಮ್ಮ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಅವರು ಸಿದ್ಧರಿರುತ್ತಾರೆ.

5) ತಮ್ಮ ದೇಶದ ಎಲ್ಲಾ ಕಾರ್ಯಗಳು ಉತ್ಕೃಷ್ಟವಾಗಿರಬೇಕೆಂದು ಅವರು ಶ್ರಮ ವಹಿಸುತ್ತಾರೆ.

ನಾವೂ ಈ ರೀತಿಯ ಸಂಸ್ಕಾರಗಳನ್ನು ವೃದ್ಧಿಸಿಕೊಳ್ಳುವ ಅಗತ್ಯವಿದೆ.

ನಮಗೆ ಸಾಮರ್ಥ್ಯಸಂಪನ್ನ ದೇಶ ನಿರ್ಮಾಣದ ಅಗತ್ಯವಿದೆ. ಈ ಸಾಮರ್ಥ್ಯ ಮತ್ತೊಬ್ಬರನ್ನು ಹಳಿಯಲು ಸಾಧನವಾಗಬಾರದು. ಸತ್ಯದ ಹಿಂದೆ ಒಂದು ಶಕ್ತಿ ಇದ್ದರಷ್ಟೇ ಕಾರ್ಯ ಸಫಲತೆಯನ್ನು ಸಾಧಿಸಬಹುದು. ಕೆಲ ದಿನಗಳ ಹಿಂದೆ ಅಮೆರಿಕಾದ ಚಿಕಾಗೋದಲ್ಲಿ ಭಾಷಣ ಮಾಡುವ ಪ್ರಸಂಗ ಬಂದಿತ್ತು, ಅಲ್ಲಿ ನಾನು ‘My dear brothers and sisters of America’ ಎಂದು ಭಾಷಣವನ್ನು ಆರಂಭಿಸಿದ್ದರೆ ಸ್ವಾಮಿ ವಿವೇಕಾನಂದರಿಗೆ ಸಿಕ್ಕ ಕರತಾಡನದ ಒಂದಿಷ್ಟು ಭಾಗವು ಸಿಗುತ್ತಿರಲಿಲ್ಲ! ಕಾರಣ ಆ ಮಾತುಗಳು ವಿವೇಕಾನಂದರದ್ದು ಮತ್ತವರ ಹಿಂದಿದ್ದ ರಾಮಕೃಷ್ಣ ಪರಮಹಂಸರೆಂಬ ಚೇತನದ್ದು. ಆದ್ದರಿಂದ ನಮ್ಮ ದೇಶ ಎಲ್ಲಾ ರೀತಿಯ ಸಾಮರ್ಥ್ಯವನ್ನು ವಿಶ್ವ ಕಲ್ಯಾಣದ ಕಾರ್ಯಕ್ಕಾಗಿ ಹೊಂದಬೇಕಾಗಿದೆ.ಇದಕ್ಕಾಗಿ ವಿವಿಧತೆ ಎಂಬ ಹಲವಾರು ಪುಷ್ಪಗಳಿಂದ ಪೋಣಿಸಲ್ಪಟ್ಟ ಮತ್ತು ಹಿಂದುತ್ವವೆಂಬ ದಾರದಿಂದ ಜೋಡಿಸಲ್ಪಟ್ಟ ಹಾರವನ್ನು ತಾಯಿ ಭಾರತಿಗೆ ಸಮರ್ಪಿಸಬೇಕಾಗಿದೆ.

 ಮಹಾತ್ಮಾ ಗಾಂಧಿಯವರು ಏಳು ಸಾಮಾಜಿಕ ಪಾಪಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ – ಶ್ರಮವಿಲ್ಲದ ಸಂಪತ್ತು, ಆತ್ಮಸಾಕ್ಷಿಯಿಲ್ಲದ ಸುಖ, ಶೀಲವಿಲ್ಲದ ಜ್ಞಾನ, ನೀತಿ ಇಲ್ಲದ ವಾಣಿಜ್ಯ, ಮಾನವತೆ ಇಲ್ಲದ ವಿಜ್ಞಾನ,  ತ್ಯಾಗ ಇಲ್ಲದ ಮತಾಚರಣೆ,  ನೀತಿರಹಿತ ರಾಜಕಾರಣ. ಸ್ವಾತಂತ್ರ್ಯದ ಫಲಗಳು ಈ ಸಾಮಾಜಿಕ ಪಾಪಗಳನ್ನು ಕಳೆದುಕೊಳ್ಳದೇ ಸಿಗಲಾರದು. ಸಂಘವು ಈ ಕಾರ್ಯವನ್ನು ಪ್ರಾರಂಭಿಸಲು ಎಲ್ಲರನ್ನೂ ಆಹ್ವಾನಿಸುತ್ತದೆ. 

ಈ ಏಳು ಪಾಪಗಳಿಂದ ಸಂಪೂರ್ಣವಾಗಿ ಮುಕ್ತಿ ಹೊಂದಿದ ದಿನವೇ ನಮಗೆ ಪೂರ್ಣ ಸ್ವಾತಂತ್ರ್ಯ ಸಿಕ್ಕಂತೆ. ಈ ಎಲ್ಲಾ ಹುಳುಕುಗಳು ನಮ್ಮ ಮನಸ್ಸಿನಲ್ಲಿಯೇ ಇರುವ ಕಾರಣ ಮನುಷ್ಯನ ಮನಸ್ಸಿನಿಂದ ಇವುಗಳನ್ನು ಹೋಗಲಾಡಿಸಲು ವ್ಯಕ್ತಿ ನಿರ್ಮಾಣ ಅತ್ಯಗತ್ಯ. ಆಧುನಿಕ ಜಗತ್ತಿನಲ್ಲಿ ಯಾರಾದರೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರೆ ಎಲ್ಲರೂ ಅವರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಾರೆ, ಅದು ಸಹಜ. ಆದರೆ ಕೆಲವರು ಈ ಅನುಮಾನವನ್ನು ಪುಷ್ಟೀಕರಿಸಿ ನಮ್ಮ ವಿರುದ್ಧ ಜನರ ಭಾವನೆ ಮೂಡುವಂತೆ  ಕೆಲಸ ಮಾಡುತ್ತಿದ್ದಾರೆ. ಆದಕಾರಣದಿಂದ ಹಲವರ ಮನಸ್ಸಿನಲ್ಲಿ ಸಂಘದ ಕುರಿತಾದ ಪ್ರಶ್ನೆಗಳು ಗೊಂದಲಗಳಿಗೆ ಪರಿಹಾರ ನೀಡಲೆಂದೇ ಈ ಪ್ರಮುಖರ ಸಭೆಯನ್ನು ಕರೆಯಲಾಗಿದೆ.

ಮೊದಲನೆಯ ದಿನದ ಉಪನ್ಯಾಸಕ್ಕಾಗಿ ಇಲ್ಲಿ ನೋಡಿ

ಮೂರನೆಯ ದಿನದ ಉಪನ್ಯಾಸಕ್ಕಾಗಿ ಇಲ್ಲಿ ನೋಡಿ
ಸಂಪೂರ್ಣ ಕಾರ್ಯಕ್ರಮದ ವಿಡಿಯೋಗಾಗಿ ಇಲ್ಲಿ ನೋಡಿ

ಕೃಪೆ : ವಿಕ್ರಮ ವಾರಪತ್ರಿಕೆ

Mohan Bhagwat addressing on ‘Future of Bharat’ lecture series at New Delhi

Leave a Reply

Your email address will not be published.

This site uses Akismet to reduce spam. Learn how your comment data is processed.