ಬೆಂಗಳೂರು, 15 ಜನವರಿ, 2024 : ಭಾರತೀಯರಾದ ನಾವು ಭಾರತದ ಮಣ್ಣಿನಲ್ಲಿ ಬದುಕಿದ್ದೇವೆ, ಆದರೆ ಸ್ವಾಮಿ ವಿವೇಕಾನಂದರು ಭಾರತದ ಆತ್ಮದಲ್ಲಿ ಜೀವಿಸಿದ್ದರು. ಧರ್ಮ ಮತ್ತು ಆಧ್ಯಾತ್ಮ ಭಾರತದ ಆತ್ಮ ಎಂದು ಅವರು ತಿಳಿಸಿದ್ದರು. ಧರ್ಮ ಮತ್ತು ಆಧ್ಯಾತ್ಮವನ್ನು ಆಧಾರವಾಗಿಟ್ಟುಕೊಂಡು ಮಾಡುವ ನಮ್ಮ ಪ್ರತಿಯೊಂದು ಕಾರ್ಯ ಗುರಿಯೆಡೆಗೆ ಸಾಗುತ್ತದೆ, ಇಲ್ಲದಿದ್ದರೆ ಈ ರಾಷ್ಟ್ರ ದಿಕ್ಕು ತಪ್ಪಿದ ಹಡಗಿನಂತಾಗುತ್ತದೆ ಎಂದು ವಿವೇಕಾನಂದರು ಸಾರಿದ್ದರು ಎಂದು ದಿಶಾಭಾರತ್ ಸಂಸ್ಥೆಯ ಸಂಯೋಜಕ ಪ್ರಮೋದ್ ನಟರಾಜ್ ತಿಳಿಸಿದರು.

ಸಮರ್ಥ ಭಾರತ ವತಿಯಿಂದ ನಡೆಯುತ್ತಿರುವ ‘ಬಿ ಗುಡ್ ಡು ಗುಡ್’ ಅಭಿಯಾನದ ಆನ್ ಲೈನ್ ಉಪನ್ಯಾಸ ಸರಣಿಯ ನಾಲ್ಕನೆ ದಿನ ಅವರು ಮಾತನಾಡಿದರು.

ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ ಅವರನ್ನು ರಾಷ್ಟ್ರದ ಆಸ್ತಿಯನ್ನಾಗಿ ಮಾಡಿ ಎನ್ನುವ ಮಾತಿದೆ. ಸ್ವಾಮಿ ವಿವೇಕಾನಂದರು ತಾವು ಅಂದುಕೊಂಡ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಭಾರತದ ಸ್ವತ್ವವನ್ನು ಜಗತ್ತಿಗೆ ಪರಿಚಯಿಸಿದವರು. ಹಾಗಾಗಿ ವಿಶ್ವಧರ್ಮ ಸಮ್ಮೇಳನದಲ್ಲಿ ಅವರಿಗೆ ದೊರೆತ ಜಯ ಭಾರತದ ದಿಗ್ವಿಜಯವೆನಿಸಿತು. ನೈಜ ವಿಶ್ವಧರ್ಮದ ಕಲ್ಪನೆಯನ್ನು ನೀಡುವ ಮೂಲಕ ವಿವೇಕಾನಂದರು ವಿಶ್ವಕ್ಕೆ ಅತ್ಯಮೂಲ್ಯ ಸಂಪತ್ತಾದರು ಎಂದರು.

ವಿಶ್ವಧರ್ಮವನ್ನು ಪರಿಪಾಲಿಸುವುದೆಂದರೆ ಜೀವನದಲ್ಲಿ ಯೋಗವನ್ನು ಅಭ್ಯಾಸ ಮಾಡುವುದು ಎನ್ನುವುದನ್ನು ಸ್ವಾಮಿ ವಿವೇಕಾನಂದರು ತಿಳಿಸುತ್ತಾರೆ. ಕರ್ಮಯೋಗ ತಿಳಿಸುವ ಮೌಲ್ಯಗಳನ್ನು, ಭಕ್ತಿಯೋಗ ತಿಳಿಸುವ ಭಾವನೆಗಳನ್ನು, ರಾಜಯೋಗ ನೀಡುವ ಶಕ್ತಿಯನ್ನು, ಜ್ಞಾನಯೋಗ ಒಳಗೊಂಡಿರುವ ಆತ್ಮಜ್ಞಾನವನ್ನು ಸಮನ್ವಯಗೊಳಿಸಿ ಬದುಕುವುದೇ ವಿಶ್ವಧರ್ಮ ಎನ್ನುವುದನ್ನು ಸ್ವಾಮಿ ವಿವೇಕಾನಂದರು ಅತ್ಯಂತ ಸರಳವಾಗಿ ತಿಳಿಸಿದ್ದರು. ಇದು ಇಂದಿನ ಜಗತ್ತಿಗೆ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.

ವಿವೇಕಾನಂದರ ತತ್ತ್ವವನ್ನು ಅರಿತುಕೊಂಡಾಗ ಯುವಕರು ಯಾರು ಎನ್ನುವುದು ಸ್ಪಷ್ಟವಾಗುತ್ತದೆ. ಸಮಾಜದಿಂದ ಸ್ವಲ್ಪವನ್ನು ಪಡೆದು ಹೆಚ್ಚನ್ನು ಹಿಂದಿರುಗಿಸುವವನು ಯುವಕರು ಎನ್ನುವುದನ್ನು ಸ್ವಾಮೀಜಿ ಸ್ವತಃ ಬದುಕಿ ತೋರಿಸಿದ್ದಾರೆ. ರಾಷ್ಟ್ರದ ಕುರಿತು ಸದಾ ಯೋಚಿಸುತ್ತಿದ್ದ ಅವರು ನಮ್ಮ ರಾಷ್ಟ್ರದ ಶಕ್ತಿ, ದೌರ್ಬಲ್ಯ, ಅವಕಾಶಗಳು ಮತ್ತು ಸವಾಲುಗಳನ್ನು ಅರಿತಿದ್ದರು. ಹಾಗಾಗಿ ಜಗತ್ತಿಗೆ ಭಾರತದ ಶಕ್ತಿಯ ಪರಿಚಯ ಮಾಡಿದರು, ಉತ್ತಿಷ್ಠತ ಜಾಗೃತ ಎನ್ನುತ್ತ ಭಾರತದ ದೌರ್ಬಲ್ಯದ ನಿವಾರಣೆಗೆ ಶ್ರಮಿಸಿದರು, ನಮಗಿರುವ ಅವಕಾಶಗಳನ್ನು ಅರಿತು ಆಯಾ ಕ್ಷೇತ್ರಗಳಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ಮಾರ್ಗದರ್ಶನ ಮಾಡಿದರು ಮತ್ತು ನಮ್ಮ ರಾಷ್ಟ್ರಕ್ಕಿರುವ ಸವಾಲುಗಳನ್ನು ಮುಂದಿನ ಮಿಂಚಿನಂತಹ ಯುವಪೀಳಿಗೆ ನಿವಾರಿಸುತ್ತದೆ ಎನ್ನುವ ಆತ್ಮವಿಶ್ವಾಸವನ್ನು ಹೊಂದಿದ್ದರು ಎಂದು ತಿಳಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.