ಬೆಂಗಳೂರು: ಹಿಂದು ಧರ್ಮದ ಶಾಸ್ತ್ರದಲ್ಲಿ ಅಸ್ಪೃಶ್ಯತೆಗೆ ಮಾನ್ಯತೆ ಇಲ್ಲ. ಆದರೆ ವ್ಯವಹಾರದಲ್ಲಿದೆ. ಹಿಂದು ಧರ್ಮದಲ್ಲಿ ಮಾತ್ರವಲ್ಲ, ಎಲ್ಲಾ ಇತರೆ ಮತಪಂಥಗಳಲ್ಲೂ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಆದರೆ ಅಸ್ಪಶ್ಯತೆಯ ಚರ್ಚೆ ಹಿಂದು ಧರ್ಮದ ಕೇಂದ್ರಿತವಾಗಿ ಮಾತ್ರ ಏಕೆ ನಡೆಯುತ್ತಿದೆ? ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲ ಹಾಗೂ ಲೇಖಕ ಶ್ರೀಧರ್ ಪ್ರಭು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರ ವತಿಯಿಂದ ರಾಜಾಜಿನಗರದ 6ನೇ ಬ್ಲಾಕ್ ನ ಎಸ್ ಜೆ ಆರ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾದ ‘ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೀಸಲಾತಿ ಎನ್ನುವುದು ಭ್ರಾತೃತ್ವದ ವಿಷಯ. ಸಾಂವಿಧಾನಿಕವಾಗಿಯೂ ಅದಕ್ಕೆ ಮಾನ್ಯತೆ ದೊರೆತಿದೆ. ಆದರೆ ಹಸಿವು, ಬಡತನ, ಅಸ್ಪಶ್ಯತೆ, ಒಳ ಮೀಸಲಾತಿ/ ಪ್ರಾತಿನಿಧ್ಯ ಸರಿಯಾಗಿ ಸಿಗದೆ ಇರುವವರು ಮತಾಂತರವಾಗುವ ನಿದರ್ಶನಗಳನ್ನೂ ಕಾಣುತ್ತಿದ್ದೇವೆ ಎಂದು ನುಡಿದರು.

ಅಸ್ಪೃಷ್ಯತೆ ತಪ್ಪಲ್ಲದಿದ್ದರೆ, ಇನ್ನಾವುದೂ ತಪ್ಪಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಹೇಳಿದ್ದರು. ಅಸ್ಪೃಶ್ಯತೆ ಎಂಬ ರೋಗವನ್ನು ಅಮೂಲಾಗ್ರವಾಗಿ ಪರಿಹರಿಸಬೇಕು. ಶ್ರೇಷ್ಠತೆಯ ವ್ಯಸನವನ್ನು ಬಿಟ್ಟು ಸಮಾಜವಾಗಿ ಒಂದಾಗಬೇಕಿದೆ ಎಂದರು.


ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಉತ್ತರ ವಿಭಾಗದ ಸಂಘಚಾಲಕ ದ್ವಾರಕನಾಥ, ಸಹ ಸಂಘಚಾಲಕ ಡಾ.ಎಂ.ಜಯಪ್ಪ ಉಪಸ್ಥಿತರಿದ್ದರು.


