ಸಮರ್ಥ ಭಾರತ ಸಂಸ್ಥೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಸರಕಾರ್ಯವಾಹರಾದ ಆದರಣಿಯ ಶ್ರೀ.ದತ್ತಾತ್ರೇಯ ಹೊಸಬಾಳೆರವರ ಮಾತುಗಳ ಸಂಕ್ಷಿಪ್ತ ರೂಪ. ಶ್ರೀ ದತ್ತಾಜಿ ಅವರ ಪೂರ್ಣ ಭಾಷಣವನ್ನು ಇಲ್ಲಿ ನೋಡಬಹುದಾಗಿದೆ

ಮೇ-17, ಬೆಂಗಳೂರು: ಆನ್ ಲೈನ್ ಸಂವಾದ ಕಾರ್ಯಕ್ರಮದಲ್ಲಿ ಅವರು ‘ಆತ್ಮನಿರ್ಭರ ಭಾರತ’ ವಿಷಯವಾಗಿ ಫೇಸ್ಬುಕ್ ಲೈವ್ ಮೂಲಕ ಸಾಹಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಮಾತನಾಡಿದರು.

“ಪ್ರಧಾನಮಂತ್ರಿಗಳು ಇತ್ತೀಚಿಗೆ ದೇಶದ ಜನರೊಂದಿಗೆ ಮಾತನಾಡುತ್ತಾ, ಉಲ್ಲೇಖಿಸಿರುವ ‘ಆತ್ಮನಿರ್ಭರತೆ’, ನಮ್ಮೊಳಗಿನ ಚೈತನ್ಯವನ್ನು ಜಾಗೃತಗೊಳಿಸುವಂಥದ್ದು. ನಾವು ನಮ್ಮವರಿಗೆ, ಮನೆಗೆ, ಸಮಾಜಕ್ಕೆ ಭಾರವಾಗದಂತೆ, ಭರ ಅಂದರೆ ತುಂಬಿಕೊಡುವದು ಎಂದರ್ಥದಂತೆ ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚುವ ಸ್ವಾವಲಂಭಿ, ಸ್ವಾಭಿಮಾನಿ ಭಾರತದ ಪರಿಕಲ್ಪನೆಯೇ ಆತ್ಮನಿರ್ಭರಭಾರತ ಎಂದು ನುಡಿದರು. ಪುರುಷ ಸೂಕ್ತದಲ್ಲಿ ಹೇಳಿರುವಂತೆ ಇಡೀ ದೇಶವೇ ಒಗ್ಗಟ್ಟಾಗಿ ರಾಷ್ಟ್ರ ಪುರುಷನ ರೀತಿಯಲ್ಲಿ ಎದ್ದು ನಿಲ್ಲಬೇಕು. ಭಾಷಣದಲ್ಲಿ ಪ್ರಧಾನಮಂತಿಗಳು ಮನುಸ್ಮೃತಿಯ “ಸರ್ವಂ ಆತ್ಮವಶಂ ಸುಖಂ” ಎಂಬ ವಾಕ್ಯವೊಂದನ್ನು ಉಲ್ಲೇಖಿಸಿದ್ದು ಅತ್ಯಂತ ಸಮಯೋಚಿತವಾಗಿತ್ತು ಎಂದು ಶ್ರೀ ದತ್ತಾತ್ರೇಯ ಹೊಸಬಾಳೆ ನುಡಿದರು.

ಕೋರೋನಾ ಮಹಾಮಾರಿಯ ಸಂದರ್ಭದಲ್ಲಿ ದೇಶದ ನಾಯಕತ್ವ, ಜನರು, ಸಂಘಟನೆಗಳು, ಸಮಾಜ ಹೀಗೆ ಇಡೀ ದೇಶವೇ ಒಂದಾಗಿ, ವಿದೇಶಗಳಿಗೆ ಔಷಧದ ನೆರವನ್ನು ನೀಡಿ, ಆತ್ಮನಿರ್ಭರತೆ ನಿಟ್ಟಿನಲ್ಲಿ ಅನೇಕ ವಿಕ್ರಮಗಳನ್ನು ಸಾಧಿಸಿದ್ದೇವೆ. ದೇಶದ ಪ್ರತಿಯೊಬ್ಬರು ಅನ್ನ, ತರಕಾರಿ, ಹಣ್ಣು, ಹಾಲು ಪಡೆಯುವಂತಹ ಅನ್ನದ ಭದ್ರತೆ, ವೈದ್ಯಕೀಯ ಭದ್ರತೆ ಸಿಗುವಂತಾಗಬೇಕು. ಭಾರತದ ಹಿಂದಿನ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ ಅವರು ಹೇಳಿರುವಂತೆ ಭಾರತ ವಿದ್ಯುತ್ ಉತ್ಪಾದನೆ, ರಕ್ಷಣೆಯ ಹಿತದೃಷ್ಟಿಯಿಂದ ಸೈನ್ಯದ ಬೆಳವಣಿಗೆ ಮತ್ತು ಮುಂದಿನ ಭವಿಷ್ಯಕ್ಕಾಗಿ ಮಟೇರಿಯಲ್ ಸೈನ್ಸನಲ್ಲಿ ಸ್ವಾವಲಂಭನೆ ಸಾಧಿಸಬೇಕು. ಇವುಗಳ ಜೊತೆಗೆ ಆತ್ಮನಿರ್ಭರತೆಗೆ ಅಡ್ಡಿಯಾಗಿರುವಂತಹ ಬ್ರಿಟಿಷರಿಂದ ಬಳುವಳಿಯಾಗಿ ಬಂದಿರುವ ನಮ್ಮಲ್ಲಿರುವ ಪದ್ಧತಿಗಳು ಮತ್ತು ಸಂಸ್ಥೆಗಳಲ್ಲಿ ಅಪಾರವಾದ ಅತ್ಯವಶ್ಯವಾಗಿ ದೇಶಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ಬದಲಾವಣೆ ಆಗಬೇಕಾಗಿದೆ ಎಂದು ಅವರು ಹೇಳಿದರು.

ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದರೂ ಕೋರೋನಾ ಸಂದರ್ಭದಲ್ಲಿ ನಮ್ಮ ಪೋಲಿಸರು, ವೈದ್ಯರು, ಸ್ವಚ್ಛತಾ ಕಾರ್ಮಿಕರು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ, ರಾಷ್ಟ್ರದ ಹಿತದೃಷ್ಟಿಯಿಂದ ಈ ತರಹದ ಕಾರ್ಯಗಳು ಸರ್ವಕಾಲಕ್ಕೂ ನಡೆದುಕೊಂಡು ಹೋಗುವಂತೆ ಪರಿಶ್ರಮದಿಂದ ದೇಶ ಕಟ್ಟಲು ಪಣ ತೊಡಬೇಕಾಗಿದೆ.

ಅರವಿಂದರ ಮಾತುಗಳನ್ನು ಸ್ಮರಿಸುತ್ತಾ, ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು, ಸಂತರು, ಋಷಿಮುನಿಗಳು, ವಿದ್ವಾಂಸರು, ಪಂಡಿತರು, ದಿಗ್ಗಜರು ಬರೆದಿರುವ ಗ್ರಂಥಗಳ ಜ್ಞಾನದ ಭಂಡಾರ ನಮ್ಮಲ್ಲಿದೆ, ಆದರೇ ಅದು ಇಂದಿನ ಕಾಲಮಾನಕ್ಕೆ ತಕ್ಕಂತೆ ಯುಗಾನುಕೂಲವಾಗಿ ಅದರ ಮೇಲೆ ಅಧ್ಯಯನ ಸಂಶೋಧನೆಗಳು ಆಗಿ, ಹೊಸ ಜ್ಞಾನದ ಉದಯವಾಗಬೇಕು, ವಿವೇಕಾನಂದರ ಮಾತುಗಳನ್ನು ಪ್ರಸ್ತಾಪಿಸುತ್ತಾ ನಮ್ಮ ದೇಶದ ಸಂಶೋಧನೆಗಳನ್ನು ಹಳಿಯುವ, ನಿಂದಿಸುವ ಭಾವ, ವಿರೋಧಾಭಾಸಗಳಿಂದ ದೇಶ ಮೇಲೇಳುವಂತಾಗಬೇಕು ಮತ್ತು ಯಾವುದೇ ಒಳ್ಳೆಯ ಕೆಲಸಗಳನ್ನು ಬೆಂಬಲಿಸುವದು ಅವಶ್ಯಕವಾಗಿದೆ, ಈ ಎಲ್ಲಾ ಸಂಗತಿಗಳು ದೇಶ ಸ್ವಾವಲಂಭಿಯಾಗಿ, ಆತ್ಮನಿರ್ಭರ ವಾಗಿರುವಂತೆ ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು.

ವರದಿ: ಪರಪ್ಪ ಶಾನವಾಡ

Leave a Reply

Your email address will not be published.

This site uses Akismet to reduce spam. Learn how your comment data is processed.