ಹುಬ್ಬಳ್ಳಿ: ಭಾರತ ದೇಶ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಮುಂದೆ ಸಾಗುತ್ತಿದ್ದು, ಭಾರತೀಯತೆ ವಿಚಾರ ಹಾಗೂ ಸಂಸ್ಕಾರವನ್ನು ದೇಶದ ಜನತೆ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿಯ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾ ಭನವನದಲ್ಲಿ ವಿಕ್ರಮ ಕನ್ನಡ ವಾರ ಪತ್ರಿಕೆ ಕಿತ್ತೂರು ಕರ್ನಾಟಕ ಕಾಫಿಟೇಬಲ್ ಪುಸ್ತಕ ಅನಾವರಣ ಸಮಾರಂಭದಲ್ಲಿ ಮಾತನಾಡಿದರು.

ಭಾರತದ ವಿಚಾರ ಧಾರೆಗಳನ್ನು ಇಡೀ ಜಗತ್ತು ಸ್ವೀಕರಿಸುವುದರ ಜೊತೆಗೆ ಅನುಸರಿಸುತ್ತಿರುವುದು ಹೆಮ್ಮೆಯ ಸಂಗತಿ. ಯೋಗ, ಭಾರತೀಯ ಕುಟುಂಬ ಪದ್ಧತಿ ಅಧ್ಯಯನ ಮಾಡಲು ವಿದೇಶಿಯರು ಇಲ್ಲಿಗೆ ಬರುತ್ತಿದ್ದಾರೆ ಎಂದರು.

ದೇಶದಲ್ಲಿ ಅನೇಕ ಸಂಗತಿಗಳು ಬದಲಾಗಿವೆ. ಜನರು ಸಹ ಭಾರತೀಯ ವಿಚಾರಗಳನ್ನು ಒಪ್ಪಿಕೊಂಡು ಸಕ್ರಿಯರಾಗಿ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ. ಸರ್ಕಾರ ಜನರ ಅಭಿವೃದ್ಧಿ ಕಾರ್ಯ ಮಾಡಿದರೆ ವಿಕ್ರಮ ಪತ್ರಿಕೆ ಲೇಖನ, ವರದಿ ಹಾಗೂ ಹಲವಾರು ವಿಚಾರ ಸಾರುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.

ದೇಶದ ಹಲವಾರು ವಿಚಾರಧಾರೆಗಳು ಹೆಚ್ಚು ಪ್ರಚಾರ ಮಾಡಲು ಎಲ್ಲ ಮೂಲಗಳ ಅನುಸರಿಸಬೇಕಿದೆ. ಇದರಿಂದ ೨೧ ನೇ ಶತಮಾದಲ್ಲಿ ಭಾರತ ಅಷ್ಟೇ ಅಲ್ಲ ಇಡೀ ವಿಶ್ವವೂ ಸಮೃದ್ಧವಾಗಿರಲು ಸಹ ಅನುಕೂಲವಾಗುತ್ತದೆ. ಭಾರತೀಯ ವಿಚಾರ ಹೆಚ್ಚು ಪ್ರಚಾರವಾಗಲು ವಿಕ್ರಮದಂತಹ ಪತ್ರಿಕೆಗಳು ಹೆಚ್ಚಾಗಬೇಕು ಎಂದು ಹೇಳಿದರು.

ಭಾರತ ದೇಶ ಹೇಗೆ ೭೫ ವರ್ಷ ಏಳು ಬೀಳು ಕಂಡ ಹಾಗೇ ಅದರಂತೆ ವಿಕ್ರಮ ಪತ್ರಿಕೆ ಸಹ ಏಳು ಬೀಳು ಕಂಡಿದೆ. ಯಾವ ಪತ್ರಿಕೆಯೂ ಇಷ್ಟು ವರ್ಷ ಸತತವಾಗಿ ನಡೆದಿಲ್ಲ. ಸ್ವಾತಂತ್ರ್ಯ ನಂತರ ವಿಚಾರ ಒಪ್ಪದ ಸಂದರ್ಭದಲ್ಲಿ, ಹಿಂಸಾತ್ಮಕವಾಗಿ ವಿರೋಧ ಮಾಡುವ ಕಾಲದಲ್ಲಿ ಸಹ ಪತ್ರಿಕೆ ತನ್ನ ತನವನ್ನು ಉಳಿಸಿಕೊಂಡು ಬಂದಿದೆ. ರಾಜಕೀಯ, ಧರ್ಮ ಹಾಗೂ ಮೂಲಭೂತ ಚಿಂತನೆ ಬಗ್ಗೆ ಲೇಖನಗಳು ದೇಶ ಜನರ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದೆಲ್ಲದರ ಪರಿಣಾಮ ಜಗತ್ತು ಭಾರತ ಕಡೆ ನೋಡುವಂತಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಂಘಟನಾ ಮಂತ್ರಿ ಶಂಕರಾನಂದ ಇಡೀ ಜಗತ್ತು ಭಾರತವನ್ನು ಭಾರತವಾಗಿ ನೋಡುವ ಇಚ್ಛೆ ಹೊಂದಿದೆ. ಇದು ಸಕಾರಗೊಳ್ಳಲು ಹಿಡಿಯಷ್ಟು ಜನರಿಂದ ಮಾತ್ರ ಸಾಧ್ಯವಿಲ್ಲ. ಸಾಮಾನ್ಯ ಜನರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯೋಗದಾನ ನೀಡಬೇಕು. ಸ್ವ್ವಾನತೆಯಿಂದ ಸ್ವಾತಂತ್ರ್ಯದೆಡೆಗೆ ಸಾಗುವ ಕಾಲಘಟ್ಟದಲ್ಲಿದ್ದೇವೆ. ವಿರೋಧಗಳನ್ನು ಲೆಕ್ಕಿಸದೆ ನೀತಿ ರೂಪಿಸಿ ಭಾರತ ಭಾರತವನ್ನಾಗಿ ಕಟ್ಟಬೇಕಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾಂತ ಸಹಸಂಘಚಾಲಕ ಅರವಿಂದರಾವ ದೇಶಪಾಂಡೆ, ವಿಕ್ರಮ ನಡೆದು ಬಂದ ದಾರಿ ತಪಸ್ಸಿನಂತಿದೆ. ಮಾನವ, ಆರ್ಥಿಕ ಶಕ್ತಿ ಇಲ್ಲದ ಸಮಯದಲ್ಲಿ ಕಷ್ಟದಿಂದ ಪತ್ರಿಕೆ ನಡೆಸಿಕೊಂಡು ಬರಲಾಗಿದೆ. ಇನ್ನೂ ಅದೇ ಛಲದಿಂದ ನಡೆಯುತ್ತಿದೆ. ಉಜ್ವಲ ರಾಷ್ಟ್ರೀಯ ವಿಚಾರ ನಾಡಿಗೆ ಕೊಟ್ಟಿದೆ ಎಂದು ಹೇಳಿದರು.

ಇತಿಹಾಸ ತಜ್ಞ ಲಕ್ಷ್ಮೇಶ ಹೆಗಡೆ ಪ್ರಾಸ್ತಾವಿಕ ನುಡಿಯಲ್ಲಿ, ಭಾರತೀಯ ರಾಷ್ಟ್ರೀಯತೆ ಮೂಲ ಮಂತ್ರವಾಗಿಸಿಕೊಂಡು ೭೫ ವರ್ಷದಿಂದ ಉತ್ತಮ ಕಾರ್ಯ ಮಾಡುತ್ತಿದೆ. ಇಷ್ಟೆಲ್ಲ ವಿಶೇಷ ಅವಧಾನ ಹೊಂದಿ ವರ್ಷದಿಂದ ವರ್ಷಕ್ಕೆ ಹೊಸತನ ಮೂಡಿಸುತ್ತಿದೆ. ಈಗಾಗಲೇ ವಿಕ್ರಮದ ಐದು ಕಾಫಿಟೇಬಲ್ ಪುಸ್ತಕ ಲೋಕಾರ್ಪಣೆಗೊಂಡು ಮನೆ ಮನ ತಲುಪಿದೆ ಎಂದರು.

ರಾ.ಸ್ವ.ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ಸಂಸದ ಈರಣ್ಣ ಕಡಾಡಿ, ಶ್ರೀಧರ ನಾಡಗೀರ, ಶಾಸಕರಾದ ಸಿ.ಸಿ. ಪಾಟೀಲ್, ಮಹೇಶ ಟೆಂಗಿನಕಾಯಿ, ಎಮ್. ಆರ್. ಪಾಟೀಲ್, ವಿಕ್ರಮ ಪತ್ರಿಕೆಯ ಪ.ರಾ. ಕೃಷ್ಣಮೂರ್ತಿ, ನ. ನಾಗರಾಜ, ಸು. ನಾಗರಾಜ, ಡಾ. ಲಕ್ಷ್ಮೀಶ ಹೆಗಡೆ, ವಿಠ್ಠಲದಾಸ್ ಕಾಮತ, ಸತೀಶ ಆಚಾರ್ಯ, ದಿವ್ಯ ಹೆಗಡೆ, ಸತೀಶ ಮುತ್ತಗಿ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.