ಕ್ರೀಡೆ ನಮ್ಮೆಲ್ಲರನ್ನೂ ಒಟ್ಟುಗೂಡಿಸುವ ವಿಶೇಷವಾದ ಮಾಧ್ಯಮ.  ಒಬ್ಬ ವ್ಯಕ್ತಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡುವಲ್ಲಿ ಕ್ರೀಡೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.  ನಮ್ಮನ್ನು  ಕ್ರೀಯಾಶೀಲರನ್ನಾಗಿಸುತ್ತದೆ. ಹಾಗಾಗಿ ಯುವಕರನ್ನು ಮತ್ತು ಶಾಲಾ ಮಕ್ಕಳನ್ನು ಕ್ರೀಡೆಯತ್ತಾ ಆಕರ್ಷಿತರನ್ನಾಗಿ ಮಾಡಲು ಪ್ರತಿ ವರ್ಷ ಏಪ್ರಿಲ್‌ 6 ಕ್ಕೆ ಅಂತರರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ.

ಇತಿಹಾಸ
ಶಿಕ್ಷಣ, ಮಾನವ ಅಭಿವೃದ್ಧಿ, ಆರೋಗ್ಯಕರ ಜೀವನಶೈಲಿ ಮತ್ತು ಶಾಂತಿಯುತ ಜಗತ್ತಿಗೆ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳ ಕೊಡುಗೆ ಅಪಾರ. ಈ ಕೊಡುಗೆಗಳನ್ನು ಗಮನಿಸಿ ಗುರುತಿಸುವ ಸಲುವಾಗಿ  ಏಪ್ರಿಲ್‌ 6, 2013 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಭಿವೃದ್ಧಿ ಮತ್ತು ಶಾಂತಿಗಾಗಿ ಅಂತರರಾಷ್ಟ್ರೀಯ ಕ್ರೀಡಾ ದಿನವೆಂದು ಘೋಷಿಸಿತು. ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ದೈಹಿಕ ಚಟುವಟಿಕೆಯನ್ನು ಉತ್ತೇಜಿಸಲು ಪ್ರತಿವರ್ಷ ಕ್ರೀಡಾ ದಿನವನ್ನು ಆಚರಿಸುವಂತೆ ಸದಸ್ಯ ರಾಷ್ಟ್ರಗಳಿಗೆ ತಿಳಿಸಿತು. ಹೀಗಾಗಿ ಅಂದಿನಿಂದ ಪ್ರತಿ ವರ್ಷ ಭಾರತದಲ್ಲೂ ಅಂತರರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ.

ಈ ದಿನವನ್ನು ಅಳವಡಿಸಿಕೊಳ್ಳುವುದು ಮಾನವ ಹಕ್ಕುಗಳ ಪ್ರಗತಿ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಕ್ರೀಡೆಯು ಬೀರಬಹುದಾದ ಸಕಾರಾತ್ಮಕ ಪ್ರಭಾವವನ್ನು ಸೂಚಿಸುತ್ತದೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಒಲಿಂಪಿಕ್ಸ್, ಕಾಮನ್ ವೆಲ್ತ್ ಮುಂತಾದ ಕ್ರೀಡಾಕೂಟಗಳಿಗೆ ಸಿದ್ಧರಾಗಲು ಪ್ರಾದೇಶಿಕ ಮಟ್ಟದಲ್ಲಿ ಕ್ರೀಡಾಪಟುಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಅಂತರರಾಷ್ಟ್ರೀಯ ಕ್ರೀಡಾ ದಿನವು ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಒಗ್ಗಟ್ಟು ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವಲ್ಲಿಯೂ ಕ್ರೀಡೆಗಳ ಪಾತ್ರವನ್ನು ಗುರುತಿಸುವ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಮಹತ್ವ
ಕ್ರೀಡೆ ವ್ಯಕ್ತಿಯ ಉತ್ತಮ ಆರೋಗ್ಯ ಮತ್ತು ರೋಗ ನಿರೋಧಕತೆ, ಸಾಮಾಜಿಕ ಏಕೀಕರಣ, ಲಿಂಗ ಸಮಾನತೆ, ಆರ್ಥಿಕ ಅಭಿವೃದ್ಧಿ, ಅಂತರಾಷ್ಟ್ರೀಯ ಸಹಕಾರ, ಸಹೋದರತ್ವ ಮತ್ತು ಶಾಂತಿ ಇವುಗಳ ಮೇಲೂ ಮಹತ್ವದ ಪ್ರಭಾವವನ್ನು ಬೀರುತ್ತವೆ. ಕ್ರೀಡೆಗಳಲ್ಲಿ ಭಾಗವಹಿಸಲು ಮತ್ತು ಹೆಚ್ಚು ಸಕಾರಾತ್ಮಕ ಜಗತ್ತನ್ನು ಸೃಷ್ಟಿಸಲು ಕೆಲಸ ಮಾಡಲು ಅಸಂಖ್ಯಾತ ಜನರನ್ನು ಪ್ರೇರೇಪಿಸುತ್ತದೆ. ಕ್ರೀಡೆಗಳ ಮೂಲಕ ವ್ಯಕ್ತಿಗಳು ಪ್ರಮುಖ ಜೀವನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬಹುದು, ಸಂಬಂಧಗಳನ್ನು ವೃದ್ಧಿಸಬಹುದು ಮತ್ತು ಸಮಾಜಕ್ಕೆ ಅರ್ಥಪೂರ್ಣ ರೀತಿಯಲ್ಲಿ ಕೊಡುಗೆ ನೀಡಬಹುದು. ದೇಶದಲ್ಲಿನ ದೃಢವಾದ ಕ್ರೀಡಾ ಸಂಸ್ಕೃತಿಯು ಅಭಿವೃದ್ಧಿಗೆ ವೇಗವರ್ಧಕವಾಗಿಯೂ ಕಾರ್ಯನಿರ್ವಹಿಸುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.