ಅಮೃತ ಮಾತೆಯ ಅಮರ ಪುತ್ರರ ಬಲಿದಾನ ಕಥನ!

ಮರೆವು ನಮಗಿರುವ ಒಳ್ಳೆಯ ಹಾಗೂ ಕೆಟ್ಟ ಗುಣ! ಕಹಿ ಘಟಕಗಳನ್ನು ಮರೆಯುವುದಾದರೆ ಅದು ಒಳ್ಳೆಯದೇ ಆದರೆ ಈ ದೇಶದ ಪರಂಪರೆ, ಇತಿಹಾಸ, ಘನತೆ , ಶ್ರೇಷ್ಠತೆಗಳನ್ನು ಮರೆತರೆ ಮರೆವು ಕೆಟ್ಟದ್ದು ಅಲ್ಲವೆ? ಯುದ್ಧದಂತಹ ವೀರಗಾಥೆಗಳನ್ನು ಮರೆಯುವುದಾದರೆ ಅದಕ್ಕಿಂತ ಖೇದಕರ ಸಂಗತಿ ಏನಿದೆ?

ಯುದ್ಧವೆಂದರೆ ಕೇವಲ ಎರಡು ರಾಷ್ಟ್ರಗಳ ನಡುವಿನ ಕಿತ್ತಾಟವಲ್ಲ ಅಥವಾ ಸೈನಿಕರು ದಾಳಿಮಾಡಿ ಎದುರಾಳಿಗಳನ್ನು ನಾಶ ಮಾಡುವುದೆಂದಲ್ಲ. ಅದೊಂದು ಭಾವನಾತ್ಮಕ ವಿಚಾರ. ಅದಕ್ಕೆ ಬಹು ದೀರ್ಘಕಾಲದ ತಯಾರಿಬೇಕು. ಸರ್ಕಾರವೊಂದು ಸಾಕಷ್ಟು ಮುನ್ನೆಚ್ಚರಿಕೆ ತೆಗೆಕೊಂಡು ತನ್ನ ರಾಷ್ಟ್ರವನ್ನು ಮಾನಸಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸನ್ನದ್ಧಗೋಳಿಸಿಕೊಳ್ಳಬೇಕು. ಸಂಬಂಧಪಟ್ಟ ಎಲ್ಲ ಇಲಾಖೆಗಳು ಪೂರಕವಾಗಿ ಕೆಲಸ ಮಾಡಲಾರಂಭಿಸಬೇಕು. ಅಲ್ಲದೆ ಜಗತ್ತಿನ ರಾಷ್ಟ್ರಗಳಿಗೆ ಯುದ್ಧದ ಅವಶ್ಯಕತೆಗಯನ್ನು ಮನಗಾಣಿಸಬೇಕು.! ಹೀಗೆ ಮೇಲಿನ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿ ರಾಷ್ಟ್ರಕ್ಕಾಗಿ ರಣಾಂಗಣದಲ್ಲಿ ಹೋರಾಡಿ ಮಡಿದ ವೀರ ಯೋಧರು ಜಯಿಸಿದ ಕಾರ್ಗಿಲ್ ವಿಜಯದ ಕಥನವನ್ನು ಒಮ್ಮೆ ಮೆಲುಕು ಹಾಕೋಣ.

ಭಾರತ ಅಣ್ವಸ್ತ್ರ ಪ್ರಯೋಗಿಸಿ 15 ದಿನಗಳಲ್ಲಿ ಪಾಕಿಸ್ತಾನ ಕೂಡಾ ಅಣು ಪರೀಕ್ಷೆ ನಡೆಸಿತ್ತು. ಪರಿಣಾಮ ಜಗತ್ತಿನ ರಾಷ್ಟ್ರಗಳು ಭಾರತ ಮತ್ತು ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದವು. ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಗಳೆಂಬಂತೆ ಬೇರೆಯಾಗಿದ್ದವರು ಸೇರುವ ಸಮಯ ಬಂದಿತ್ತು. ಭಾರತ ಹಿರಿಯಣ್ಣನಾಗಿ ಪಾಕಿಸ್ತಾನವನ್ನು ತಬ್ಬಿಕೊಳ್ಳಲು, ಸ್ನೇಹದ ಮಾತುಗಳನ್ನಾಡಲು ಕೈ ಚಾಚಿತು. ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 1999ರ ಫೆಬ್ರವರಿ 20ನೇ ತಾರೀಖು ಭಾರತದಿಂದ ಪಾಕಿಸ್ತಾನದತ್ತ ಬಸ್ಸೊಂದನ್ನು ಹೊರಡಿಸಿದರು. ಇತಿಹಾಸದ ಪುಟಕ್ಕೆ ಹೊಸ ದಾಖಲೆ ಸೇರಿಸುವ ಸಂತಸ. ಇನ್ನುಮುಂದೆ ನಾವಿಬ್ಬರೂ ವೈರಿಗಳಲ್ಲ! ಬಸ್ಸು-ರೈಲುಗಳ ಮೂಲಕ ಸಂಬಂಧ ಬೆಸೆಯಲಿರುವ ಹಳೆಯ ಗೆಳೆಯರು! ಅಖಂಡ ಭಾರತ ಮಾತೆಯ ಅಮೃತ ಪುತ್ರರು! ಪೂರ್ವಜರ ಪ್ರಮಾದಗಳನ್ನು ತಿದ್ದುವ ಪ್ರಜ್ಞಾವಂತ ಋಷಿ ಸಂತಾನರು ಎಂದು ಒಳಗೊಳಗೆ ಬೀಗಲಾರಂಭಿಸಿದ್ದರು (ಆದರೆ ವಾಸ್ತವ ಬೇರೆಯೇ ಇತ್ತು). ಸ್ವತಃ ಅಟಲ್‌ಜೀ ಎಲ್ಲ ಒತ್ತಡಗಳನ್ನು ಮೀರಿ ಪಾಕಿಸ್ತಾನಕ್ಕೆ ಹೊರಟರಷ್ಟೇ ಅಲ್ಲ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿ, ಶಿಮ್ಲಾ ಒಪ್ಪಂದಕ್ಕೆ ಬದ್ಧರಾಗುವಂತೆ ಮತ್ತು ಜಮ್ಮು-ಕಾಶ್ಮೀರದ ಸಮಸ್ಯೆಗಳನ್ನು ತಮ್ಮೊಳಗೆ ಬಗೆಹರಿಸಿಕೊಳ್ಳುವಂತೆ ಭರವಸೆಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡರು.

ಪಾಕಿಸ್ತಾನ ನರಿ ಬುದ್ಧಿಯ ರಾಷ್ಟ್ರ. ಅಲ್ಲಿ ಈ ಕೊಟ್ಟ ಮಾತುಗಳಿಗಾಗಲಿ, ಇಟ್ಟ ಭರವಸೆಗಳಿಗಾಗಲಿ ಬೆಲೆ ಇಲ್ಲ. ಧರ್ಮಾಂಧತೆಯೆ ತುಂಬಿದ ಆ ದೇಶ ಎಂದೂ ತನ್ನ ಮೂಲ ಮನೋಧರ್ಮದ ಗುಣ ಬಿಡದು. ಹೀಗಾಗಿಯೇ ಇತ್ತ “ಜಂಟಲ್‌ ಮನ್” ಒಪ್ಪಂದದ ಕರಾರುಗಳನ್ನು ಮರೆತು ಲಾಹೋರ್ ಘೋಷಣೆಗೆ ಅಂಕಿತ ಬಿದ್ದ ಐದೇ ವಾರಗಳಲ್ಲಿ ಅಂದರೆ 1999 ಮಾರ್ಚ್ 28ರ ವೇಳೆಗೆ ಕಾರ್ಗಿಲ್ ಬೆಟ್ಟಗಳತ್ತ ಪಾಕಿಸ್ತಾನಿ ಸೇನೆ ದಾಳಿಗೆಂದು ಕಾಲಿಟ್ಟಿತ್ತು. ಪಾಕಿಸ್ತಾನ ಭಾರತದೊಂದಿಗೆ 1948, 1965, 1971ರ ಮೂರು ನೇರ ಯುದ್ಧಗಳಲ್ಲಿ ಸೋಲುಂಡಮೇಲೆ ಈ ಬಾರಿ ಛದ್ಮಯುದ್ಧದ ಮಾರ್ಗಹಿಡಿಯಿತು. ಪಾಕೀ ಸೈನ್ಯ ಹಾಗೂ ಐಎಸ್‌ಐಗಳು ಸಮರ್ಥ ಯೋಜನೆಗಳನ್ನು ರೂಪಿಸಿದ್ದವು. ಯೋಜನೆಯಂತೆ ಭಾರತದ ಸೇನೆಯ ದಿಕ್ಕು ತಪ್ಪಿಸಲು ಪಾಕ್ ಆಕ್ರಮಿತ ಜಿಲ್ಲೆಗಳಾದ ಅಜೌರಿ, ಪೂಂಚ್, ಗಂದರ್‌ಬಾಲ್, ಅನಂತನಾಗ್‌ಗಳಲ್ಲಿ ಭಯೋತ್ಪಾದಕ ಕೃತ್ಯ ಮಿತಿ ಮೀರಿತು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಫರ್ವೇಜ್ ಮುಷರ್ರಫ್ ತಡಮಾಡಲಿಲ್ಲ ‘ಆಪರೇಷನ್ ಬಿದ್ರ್’ಗೆ ಚಾಲನೆ ನೀಡಿದರು. ಶತ್ರುಗಳಿಗೆ ತಿಳಿಯುವ ಮುನ್ನ ಎತ್ತರದ ಗುಡ್ಡಗಳನ್ನು ವಶಪಡಿಸಿಕೊಳ್ಳುವುದೇ ಈ ಯೋಜನೆಯ ಗುರಿಯಾಗಿತ್ತು. ಮೇ 8ರ ಹೊತ್ತಿಗೆ ಪಾಕೀಗಳು ಗುಡ್ಡಗಳನ್ನು ಆಕ್ರಮಿಸಿ ಬಂಕರುಗಳಲ್ಲಿ ಕುಳಿತುಬಿಟ್ಟರು. ಮರುದಿನ ಸೇನಾ ಠಾಣ್ಯಕ್ಕೆ ದನಗಾಯಿಗಳು ಸುದ್ಧಿ ತಲುಪಿಸಿದರು.

ಮರುದುನವೇ ಸೇನೆ ಜಾಟ್ ರೆಜಿಮೆಂಟ್‌ನ ಕ್ಯಾಪ್ಟನ್ ಸೌರಭ್ ಕಾಲಿಯಾರನ್ನು ಕಳುಹಿಸಿತು‌ 6 ಜನರ ತಂಡದೊಂದಿಗೆ ‘ಭಜರಂಗ್’ ಪೋಸ್ಟಿನತ್ತ ಹೊರಟರು, ಶತ್ರುಗಳಿರುವುದು ಖಾತ್ರಿಯಾಗಿ ತಂಡ ಕದನಕ್ಕಿಳಿಯಿತು. ಶತ್ರುಗಳ ಸಂಖ್ಯೆಯನ್ನು ಅಂದಾಜಿಸಲು ಎಡವಿದ್ದ ತಂಡ ಜಿಹಾದಿ ಸೈನಿಕರ ಬಂಧನದಲ್ಲಿ ಸೆರೆ ಸಿಕ್ಕಿ, ಚಿತ್ರವಿಚಿತ್ರವಾಗಿ ಅವರಿಂದ ಹಿಂಸಿಸೆಗೊಳಗಾಗಿ 22ದಿನಗಳ ಸೆರೆಯ ನಂತರ ಕೊಲ್ಲಲ್ಪಟ್ಟರು.

ಮೇ 24ರಂದು ಇದು ವ್ಯವಸ್ಥಿತ ದಾಳಿ ಎಂದರಿತ ಸೇನೆ ಪ್ರಧಾನಿ, ರಕ್ಷಣಾ ಸಚಿವರು, ವಿದೇಶಾಂಗ ಸಚಿವರು, ಐಬಿ, ರಾಗಳು ಮತ್ತು ಮೂರೂ ಸೇನೆಯ ಮುಖ್ಯಸ್ಥರುಗಳನ್ನು ಸೇರಿಸಿ ಮಹತ್ವದ ಸಭೆ ನಡೆಸಿತು. ಭಾರತ ಸೇನೆಯ ಜನರಲ್ ಮಲಿಕ್ “ಸೇನೆಯ ಮೂರೂ ವಿಭಾಗಗಳು ಜೊತೆಗೂಡಿ ದಾಳಿಗೈದರೆ ಮಾತ್ರ ಪರಿಹಾರ. ಅನುಮತಿ ಕೊಡಿ” ಎಂದು ಪ್ರಧಾನಿಗೆ ತಾಕೀತು ಮಾಡಿದರು. ಅನುಮತಿ ದೊರೆತ ನಂತರ ಕೊನೆಯಲ್ಲಿ ಎದ್ದುನಿಂತು ನಿಶ್ಚಿತ ಗೆಲುವಿನ ಭರವಸೆಯಿಂದ ಇಡೀಯ ಹೋರಾಟವನ್ನು ‘ಆಪರೇಷನ್ ವಿಜಯ್’ ಎಂದು ಕರೆದರು.

ಇದೀಗ ಮೂರು ಯಶಸ್ವಿ ಯುದ್ಧಗಳ ನಂತರ ಭಾರತಕ್ಕೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿತ್ತು. ಸೌರಬ್ ಆದಿಯಾಗೆ ಅನೇಕ ತನ್ನದೇ ಸೈನಿಕರ ಮಾರಣಹೋಮಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಅವಕಾಶ ಒದಗಿತ್ತು. ಯುದ್ಧ ಬಹಳ ಜೋರಾಗಿಯೇ ಶುರುವಾಯಿತು, ದಾಳಿ-ಪ್ರತಿದಾಳಿಗಳು ನಡೆದವು. ವಿಮಾನಗಳ ವೇಗದ ಹಾರಾಟ, ಹೆಲಿಕಾಪ್ಟರ್‌ಗಳ ಭರ್ಜರಿ ಸದ್ಧು, ಮದ್ದು-ಗುಂಡುಗಳ ಅಬ್ಬರದ ಸಿಡಿತ, ರಾಷ್ಟ್ರಕ್ಕಾಗಿ ಪ್ರಾಣಕೊಡುವ ಸೈನಿಕನ ತುಡಿತ ಎಲ್ಲವೂ ಜೋರಾಗಿಯೇ ಸಾಗಿತ್ತು. ಮೊದಮೊದಲು ಸ್ವಲ್ಪ ನಷ್ಟ ಅನುಭವಿಸಿದ ಭಾರತೀಯ ಸೇನೆ ಸಜ್ಜನರ ಸೋಗಿನ ವ್ಯಾಘ್ರ ಪಾಕಿಗಳನ್ನು ಬಗ್ಗುಬಡೆದು ತೋಲೋಲಿಂಗ್, ಟೈಗರ್ ಹಿಲ್, ಪಾಯಿಂಟ್ 5140, 4700, 5100, ಲೋನ್ ಹಿಲ್ ಮತ್ತು ಥ್ರೀ ಪಿಂಪಲ್ಸ್‌ಗಳನ್ನು ಸೇರಿದಂತೆ ಹಲವಾರು ಪ್ರದೇಶಗಳನ್ನು ಜುಲೈ 15ರ ಹೊತ್ತಿಗೆ ಅವರ ಕಪಿಮುಷ್ಠಿಯಿಂದ ವಶಪಡಿಸಿಕೊಂಡಿತು. ಸುಮಾರು 527 ಯೋಧರ ಬಲಿದಾನದ ಬಳಿಕ 1999ರ ಜುಲೈ 26ಕ್ಕೆ ಕಾರ್ಯಾಚರಣೆ ನಿಲ್ಲಿಸಿ “ಆಪರೇಷನ್ ವಿಜಯ್”ನ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತುಪಡಿಸಿತ್ತು. ಪಾಕಿಸ್ತಾನ ತೀವ್ರ ಮುಖಭಂಗಕ್ಕೆ ಒಳಗಾತಿತಲ್ಲದೆ ಬೆನ್ನಿಗೆ ಚೂರಿಹಾಕುವ ರಾಷ್ಟ್ರ ಎಂದು ಜಗತ್ತಿಗೆ ತಿಳಿಯಿತು.

ಕ್ಯಾಪ್ಟನ್ ಸೌರಭ್ ಕಾಲಿಯಾ, ಕ್ಯಾಪ್ಟನ್ ವಿಕ್ರಂ ಬಾತ್ರಾ, ಗ್ರೇನೇಡಿಯರ್ ಯೋಗೇಂದರ್ ಸಿಂಗ್ ಯಾದವ್, ಕ್ಯಾಪ್ಟನ್ ಅಮೋಲ್ ಕಾಲಿಯಾ, ರಾಜೇಶ್ ಅಧಿಕಾರಿ, ಅಜಯ್ ಅಹುಜಾ, ಮೇಜರ್ ವಿವೇಕ್ ಗುಪ್ತಾ,ಕೆಂಗುರುಸೆ,ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಸೇರಿದಂತೆ ಸಾವಿರಾರು ತರುಣ ಯೋಧರ ಸಾಹಸ ಮತ್ತು ತ್ಯಾಗದ ಪ್ರತೀಕವಾಗಿ ಗೆಲುವು ಪ್ರಾಪ್ತವಾಯಿತು. ಸತ್ಯ, ಧರ್ಮ, ನಿಸ್ವಾರ್ಥ, ಕರ್ತವ್ಯ ಬದ್ಧತೆ, ತ್ಯಾಗ, ಶೌರ್ಯಗಳಲ್ಲಿ ಭಾರತೀಯ ಸೈನಿಕರಿಗೆ ಸರಿಸಮ ಮತ್ತಾರೂ ಇಲ್ಲ. ಆತ ಆಧ್ಯಾತ್ಮಿಕವಾಗಿ ಬೆಳೆದಿದ್ದಾನೆ. ಮಾನಸಿಕವಾಗಿ ಗಟ್ಟಿಯಾಗಿದ್ದಾನೆ. ದೈಹಿಕವಾಗಿ ಬಲಾಢ್ಯನೂ, ಚುರುಕೂ ಆಗಿದ್ದಾನೆ. ಸೂಕ್ತ ನಾಯಕನ ನೇತೃತ್ವದಲ್ಲಿ ಅವನು ಅದ್ಭುತವಾದ ಕೊಡುಗೆಗಳನ್ನು ಕೊಡಬಲ್ಲ! ಎಂಬುದು ಜಗತ್ತಿನೆದುರು ಮತ್ತೆ ಸಾಬೀತಾಯಿತು. ಅಂತಹ ಸಾವಿರ ಸಾವಿರ ಯೋಧರ ಬಲಿದಾನವನ್ನು ನಾವಿಂದು ಸ್ಮರಿಸಿಕೊಳ್ಳಬೇಕಿದೆ. ನಾವು ಈ ಬಲಿದಾನದ ಕಥನಗಳನ್ನು ಮರೆತದ್ದೇ ಆದರೆ ಅದು ರಾಷ್ಟ್ರಕ್ಕೆ ಮಾಡುವ ಮೋಸ ಎಂಬುದು ನನ್ನ ಅಭಿಪ್ರಾಯ.

‘ಶಾಂತಿಯ ಹೊತ್ತಲ್ಲಿ ಮಗ ತಂದೆಯ ಶವಕ್ಕೆ ಅಂತ್ಯಸಂಸ್ಕಾರ ಮಾಡಿದರೆ, ಯುದ್ಧದ ಹೊತ್ತಲ್ಲಿ ತಂದೆಯೇ ಮಗನ ಚಿತೆಗೆ ಕೊಳ್ಳಿ ಇಡುತ್ತಾನೆ’. ಎಂದು ಕೇಳಿದ್ದೆ‌. ಕಾರ್ಗಿಲ್ ಯುದ್ಧ ಇಂತಹ ಅನೇಕ ಘಟನಾವಳಿಗಳಿಗೆ ಸಾಕ್ಷಿಯಾಯಿತು. ಅದು ಪಾಕಿಸ್ತಾನದಡೆಯಿಂದ ಅನಿರೀಕ್ಷಿತ ದಾಳಿ, ಆದರೆ ನಮ್ಮೆಡೆಯಿಂದ ನಿರೀಕ್ಷಿತ ಪ್ರತ್ಯುತ್ತರ. ಈ ಗೆಲುವಿನ ಶ್ರೇಯಸ್ಸೆಲ್ಲ ಹೋರಾಡಿದ, ಮಡಿದ ಭಾರತ ಮಾತೆಯ ಅಮರ ಪುತ್ರರಿಗೆ ಸಲ್ಲಬೇಕು. ರಾಷ್ಟ್ರಕ್ಕಾಗಿ ಸಾಯುವ ಅವಕಾಶ ಬಲು ಕಡಿಮೆ ಆದರೂ ಅದನ್ನು ಪಡೆದವ ಧನ್ಯ. ಅಂತಹ ಪುಣ್ಯಾತ್ಮರಾಗುವ ಅವಕಾಶವನ್ನು ‘ಅಗ್ನಿಪಥ’ ಮೂಲಕ ಭಾರತ ಸರ್ಕಾರ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಯಾರೆಲ್ಲಾ ಅರ್ಹರು ಈ ಅವಕಾಶಕ್ಕಾಗಿ ಕಾಯುತ್ತಿರುವಿರೊ, ಅವರೆಲ್ಲಾ ಇಂದೇ ನೋಂದಾಯಿಸಿಕೊಂಡು ಭರತ ಖಂಡದ ಭಾಗ್ಯವಾಗಿ. ರಾಷ್ಟ್ರಕ್ಕಾಗಿ ಬದುಕುವ ಅಥವಾ ಮಡಿಯುವ ಪುಟ್ಟ ಅವಕಾಶವನ್ನೂ ಕಳೆದುಕೊಳ್ಳದಿರಿ‌. ಇದುವೆ ನೀವು ಹುತಾತ್ಮರಿಗೆ ಕೊಡುವ ಬಹುದೊಡ್ಡ ಗೌರವ.

-ಕಿರಣಕುಮಾರ ವಿವೇಕವಂಶಿ

Leave a Reply

Your email address will not be published.

This site uses Akismet to reduce spam. Learn how your comment data is processed.