ವಿಜಯ ಕರ್ನಾಟಕದಲ್ಲಿ ಪ್ರಕಟಿತ ಲೇಖನ

ನಮ್ಮ ಭಾರತದ ಇತಿಹಾಸವು ಕಳೆದ ಸುಮಾರು ಒಂದೂವರೆ ಸಾವಿರ ವರ್ಷಗಳ ಕಾಲ ಆಕ್ರಮಣಕಾರಿಗಳೊಡನೆ ನಡೆದ ಸಂಘರ್ಷದ ಇತಿಹಾಸವಾಗಿದೆ. ಪ್ರಾರಂಭದಲ್ಲಿ ಸಂಪತ್ತನ್ನು ಲೂಟಿ ಮಾಡುವ ಉದ್ದೇಶದಿಂದ ಆಕ್ರಮಣಗಳು ನಡೆದರೆ, ಕೆಲವೊಮ್ಮೆ ರಾಜ್ಯವಿಸ್ತಾರದ ಉದ್ದೇಶದಿಂದ (ಅಲೆಕ್ಸಾಂಡರ್‍‌ನ ಆಕ್ರಮಣದಂತೆ) ಆಕ್ರಮಣಗಳು ನಡೆಯುತ್ತಿದ್ದವು. ಆದರೆ, ಇಸ್ಲಾಮಿನ ಹೆಸರಿನಲ್ಲಿ ಪಶ್ಚಿಮದಿಂದ ನಡೆದ ಆಕ್ರಮಣಗಳು ಈ ಸಮಾಜವನ್ನು ಸಂಪೂರ್ಣ ನಾಶ ಮಾಡುವ ಉದ್ದೇಶದಿಂದ ಮತ್ತು ಸಮಾಜವನ್ನು ಒಡೆಯುವ ಉದ್ದೇಶದಿಂದ ನಡೆದವು. ದೇಶ ಹಾಗೂ ಸಮಾಜವನ್ನು ಸತ್ತ್ವಹೀನಗೊಳಿಸಲು, ಅಲ್ಲಿನ ಧಾರ್ಮಿಕ ಸ್ಥಳಗಳನ್ನು ನಾಶಗೊಳಿಸುವುದು ಅವರಿಗೆ ಅನಿವಾರ್ಯವಾಗಿತ್ತು. ಈ ಉದ್ದೇಶದಿಂದಲೇ ವಿದೇಶೀ ಆಕ್ರಮಣಕಾರರು ಭಾರತದಲ್ಲಿ ಮಂದಿರಗಳನ್ನು ನಾಶಗೊಳಿಸಿದರು. ಅದು ಕೇವಲ ಒಂದೆರಡು ಸಲವಲ್ಲ, ಅನೇಕ ಬಾರಿ ನಾಶಗೊಳಿಸಿದರು. ಭಾರತೀಯ ಸಮಾಜವನ್ನು ಸತ್ತ್ವಹೀನಗೊಳಿಸಿ, ದುರ್ಬಲರಾದ ಭಾರತೀಯರನ್ನು ಯಾವುದೇ ಅಡೆತಡೆಯಿಲ್ಲದೆ ಶಾಶ್ವತವಾಗಿ ಆಳುವುದು ಅವರ ಉದ್ದೇಶವಾಗಿತ್ತು.


ಅಯೋಧ್ಯೆಯ ಶ್ರೀರಾಮ ಮಂದಿರವನ್ನು ವಿಧ್ವಂಸಗೊಳಿಸಿದ್ದೂ ಈ ಮನೋಭಾವದಿಂದಲೇ ಮತ್ತು ಈ ಉದ್ದೇಶದಿಂದಲೇ. ಆಕ್ರಮಣಕಾರಿಗಳ ಈ ನೀತಿಯು ಕೇವಲ ಅಯೋಧ್ಯೆಯ ಅಥವಾ ಯಾವುದೋ ಒಂದು ಮಂದಿರಕ್ಕೆ ಸೀಮಿತವಾಗಿರಲಿಲ್ಲ, ಅದು ಇಡೀ ಜಗತ್ತಿಗೇ ಅನ್ವಯಿಸಿದ ಯುದ್ಧತಂತ್ರವಾಗಿತ್ತು.


ಭಾರತೀಯ ರಾಜರು ಎಂದೂ ಯಾರ ಮೇಲೂ ಆಕ್ರಮಣ ನಡೆಸಲಿಲ್ಲ, ಆದರೆ ಜಗತ್ತಿನ ವಿವಿಧ ದೇಶಗಳ ರಾಜರುಗಳು ತಮ್ಮ ಸಾಮ್ರಾಜ್ಯದ ವಿಸ್ತರಣೆಗಾಗಿ ಆಕ್ರಮಣಕಾರಿಗಳಾಗಿ ಈ ರೀತಿಯ ದುಷ್ಕೃತ್ಯಗಳನ್ನು ನಡೆಸಿದ್ದಾರೆ. ಆದರೆ ಅವರು ಭಾರತದಲ್ಲಿ ಉದ್ದೇಶಿಸಿದಂತಹ ಪರಿಣಾಮಗಳನ್ನು ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ತದ್ವಿರುದ್ಧವಾಗಿ, ಭಾರತೀಯ ಸಮಾಜದ ಶ್ರದ್ಧೆ, ನಿಷ್ಠೆ ಮತ್ತು ಮನೋಬಲಗಳು ಎಂದಿಗೂ ಕಡಿಮೆಯಾಗಲಿಲ್ಲ, ಸಮಾಜವು ತಲೆಬಾಗಲಿಲ್ಲ, ಅವರ ಪ್ರತಿರೋಧದ ಸಂಘರ್ಷ ನಿರಂತರವಾಗಿ ಮುಂದುವರೆಯಿತು. ಹೀಗಾಗಿಯೇ, ಜನ್ಮಸ್ಥಳವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಅಲ್ಲಿ ಮಂದಿರವನ್ನು ಪುನರ್ನಿರ್ಮಿಸಲು ನಿರಂತರ ಪ್ರಯತ್ನಗಳು ನಡೆದವು. ಆ ಗುರಿಯ ಸಾಧನೆಗಾಗಿ ಅನೇಕ ಯುದ್ಧಗಳು, ಸಂಘರ್ಷ ಮತ್ತು ಬಲಿದಾನಗಳು ನಡೆದವು. ಮತ್ತು ರಾಮಜನ್ಮಭೂಮಿಯ ಕುರಿತ ವಿಚಾರ ಹಿಂದುಗಳ ಮನದಲ್ಲಿ ಗಟ್ಟಿಯಾಯಿತು.


1857ರಲ್ಲಿ ವಿದೇಶೀಯರಾದ ಬ್ರಿಟಿಷರ ವಿರುದ್ಧ ಯುದ್ಧದ ಯೋಜನೆಗಳು ಪ್ರಾರಂಭವಾದವು. ಆ ಸಂದರ್ಭದಲ್ಲಿ ಹಿಂದುಗಳು ಮತ್ತು ಮುಸಲ್ಮಾನರು ಒಟ್ಟಾಗಿ ಅವರ ವಿರುದ್ಧ ಹೋರಾಡಲು ನಿರ್ಧರಿಸಿದರು ಮತ್ತು ಆ ನಿಟ್ಟಿನಲ್ಲಿ ಪರಸ್ಪರ ಮಾತುಕತೆಗಳು ನಡೆದವು. ಆ ಸಮಯದಲ್ಲಿ ಮುಸಲ್ಮಾನರು ಗೋಹತ್ಯೆ ನಿಷೇಧ ಹಾಗೂ ಶ್ರೀರಾಮ ಜನ್ಮಭೂಮಿ ವಿಮೋಚನೆ ವಿಚಾರದಲ್ಲಿ ಹಿಂದುಗಳೊಡನೆ ರಾಜಿಯಾಗಲು ಸಿದ್ಧರಾಗಿದ್ದರು. ಬಹದ್ದೂರ್ ಷಾ ಜಾಫರ್ ಅವರು ತಮ್ಮ ಶಪಥಪತ್ರದಲ್ಲಿ ಗೋಹತ್ಯೆ ನಿಷೇಧವನ್ನು ಸಹ ಸೇರಿಸಿದ್ದಾರೆ. ಹೀಗಾಗಿಯೇ ಎರಡೂ ಸಮಾಜಗಳು ಒಗ್ಗಟ್ಟಿನಿಂದ ಹೋರಾಡಲು ಸಾಧ್ಯವಾಗಿದ್ದು. ಆ ಯುದ್ಧದಲ್ಲಿ ಭಾರತೀಯರು ಶೌರ್ಯವನ್ನು ತೋರಿಸಿದರೂ, ದುರದೃಷ್ಟವಶಾತ್ ಈ ಯುದ್ಧದಲ್ಲಿ ಸೋಲಬೇಕಾಯಿತು ಮತ್ತು ಭಾರತಕ್ಕೆ ಸ್ವಾತಂತ್ರ್ಯ ಸಿಗಲಿಲ್ಲ. ಬ್ರಿಟಿಷ್ ಆಳ್ವಿಕೆಯು ಅಡೆತಡೆಯಿಲ್ಲದೆ ಉಳಿಯಿತು. ಆದರೆ, ರಾಮಮಂದಿರಕ್ಕಾಗಿ ಹೋರಾಟ ಮಾತ್ರ ನಿಲ್ಲಲಿಲ್ಲ.
ಬ್ರಿಟಿಷರು ಹಿಂದು-ಮುಸಲ್ಮಾನರ ವಿರುದ್ಧ ಅದಾಗಲೇ ಉಪಯೋಗಿಸುತ್ತಿದ್ದ “ಒಡೆದು ಆಳುವ” ನೀತಿಯು 1857 ರ ನಂತರ ಮತ್ತಷ್ಟು ಮುನ್ನೆಲೆಗೆ ಬಂದಿತು. ಭಾರತೀಯರ ಒಗ್ಗಟ್ಟನ್ನು ಮುರಿಯಲು ಬ್ರಿಟಿಷರು ಹೋರಾಟದ ನಾಯಕರನ್ನು ಅಯೋಧ್ಯೆಯಲ್ಲಿ ಗಲ್ಲಿಗೇರಿಸಿದರು ಮತ್ತು ರಾಮಜನ್ಮಭೂಮಿಯ ವಿಮೋಚನೆಯ ಪ್ರಶ್ನೆ ಪರಿಹಾರವಾಗದೆ ಹಾಗೆಯೇ ಉಳಿಯಿತು. ರಾಮಮಂದಿರಕ್ಕಾಗಿ ಹೋರಾಟ ಮುಂದುವರೆಯಿತು.


1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸೋಮನಾಥ ಮಂದಿರದ ಜೀರ್ಣೋದ್ಧಾರವು ಸರ್ವಾನುಮತದಿಂದ ನಡೆದಾಗ, ಈ ರೀತಿಯ ಮಂದಿರಗಳ ಬಗ್ಗೆ ಚರ್ಚೆ ಆರಂಭವಾಯಿತು. ರಾಮಜನ್ಮಭೂಮಿಯ ವಿಮೋಚನೆಗೆ ಸಂಬಂಧಿಸಿದಂತೆ ಇಂತಹ ಎಲ್ಲ ಒಮ್ಮತಗಳನ್ನು ಪರಿಗಣಿಸಬಹುದಿತ್ತು, ಆದರೆ ರಾಜಕೀಯದ ದಿಕ್ಕು ಬದಲಾಯಿತು. ಸ್ವಾರ್ಥ ರಾಜಕಾರಣದ ಸ್ವರೂಪಗಳಾದ ಭೇದಭಾವ ಮತ್ತು ತುಷ್ಟೀಕರಣಗಳು ಹೆಚ್ಚು ಪ್ರಚಲಿತವಾದವು ಮತ್ತು ರಾಮಮಂದಿರದ ಪ್ರಶ್ನೆ ಹಾಗೆಯೇ ಉಳಿಯಿತು. ಸರಕಾರಗಳು ಈ ವಿಚಾರದಲ್ಲಿ ಹಿಂದೂ ಸಮಾಜದ ಆಶಯ ಮತ್ತು ಭಾವನೆಗಳನ್ನು ಪರಿಗಣಿಸಲೇ ಇಲ್ಲ. ಅದರ ಬದಲು, ಸಮಾಜವು ಕೈಗೊಂಡ ಪ್ರಯತ್ನಗಳನ್ನೇ ಹತ್ತಿಕ್ಕಲು ಪ್ರಯತ್ನಿಸಿದವು. ಸ್ವಾತಂತ್ರ್ಯಪೂರ್ವದಿಂದಲೇ ಇದಕ್ಕೆ ಸಂಬಂಧಿಸಿದ ಕಾನೂನು ಹೋರಾಟವೂ ಪ್ರಾರಂಭವಾಗಿತ್ತು ಮತ್ತು ಸ್ವಾತಂತ್ರ್ಯಾನಂತರವೂ ಅದು ಮುಂದುವರೆಯಿತು. ರಾಮಜನ್ಮಭೂಮಿಯ ವಿಮೋಚನೆಗಾಗಿ 1980ರ ದಶಕದಲ್ಲಿ ಜನಾಂದೋಲನವು ಪ್ರಾರಂಭವಾಯಿತು ಮತ್ತು ಮೂವತ್ತು ವರ್ಷಗಳ ಕಾಲ ಮುಂದುವರೆಯಿತು.


1949ರಲ್ಲಿ ರಾಮಜನ್ಮಭೂಮಿಯಲ್ಲಿ ಭಗವಾನ್ ಶ್ರೀ ರಾಮಚಂದ್ರನ ವಿಗ್ರಹವು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಯಿತು. 1986ರಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಮಂದಿರದ ಬೀಗವನ್ನು ತೆರೆಯಲಾಯಿತು. ಅದಾದ ನಂತರದಲ್ಲಿ ಹಲವು ಅಭಿಯಾನಗಳ ಮೂಲಕ ಮತ್ತು ಕರಸೇವೆಗಳ ಮೂಲಕ ಹಿಂದೂ ಸಮಾಜದ ಹೋರಾಟವು ಸತತವಾಗಿ ಮುಂದುವರೆಯಿತು. 2010ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಸ್ಪಷ್ಟವಾದ ತೀರ್ಪನ್ನು ನೀಡಿತ್ತು. ಆದಷ್ಟು ಬೇಗ ಅಂತಿಮ ನಿರ್ಧಾರದ ಮೂಲಕ ಸಮಸ್ಯೆ ಬಗೆಹರಿಸಲು ಮತ್ತಷ್ಟು ಪ್ರಯತ್ನಗಳನ್ನು ಜಾರಿಯಲ್ಲಿಡಬೇಕಾಗಿತ್ತು. 134 ವರ್ಷಗಳ ಕಾನೂನು ಹೋರಾಟದ ನಂತರ 9 ನವೆಂಬರ್ 2019 ರಂದು ಸರ್ವೋಚ್ಚ ನ್ಯಾಯಾಲಯವು ಸತ್ಯ ಮತ್ತು ವಾಸ್ತವಗಳನ್ನು ಪರಿಶೀಲಿಸಿದ ನಂತರ ಸಮತೋಲಿತ ತೀರ್ಪನ್ನು ನೀಡಿತು. ಈ ತೀರ್ಪಿನಲ್ಲಿ ಎರಡೂ ಪಕ್ಷಗಳ ಭಾವನೆಗಳು ಮತ್ತು ವಾಸ್ತವಗಳನ್ನು ಪರಿಗಣಿಸಲಾಗಿದೆ. ನ್ಯಾಯಾಲಯದಲ್ಲಿ ಎಲ್ಲ ಕಕ್ಷಿದಾರರ ವಾದ ಆಲಿಸಿದ ಬಳಿಕ ಈ ತೀರ್ಪು ನೀಡಲಾಗಿದೆ. ಈ ತೀರ್ಪಿನಂತೆ, ಮಂದಿರವನ್ನು ನಿರ್ಮಿಸಲು ವಿಶ್ವಸ್ತರ ಮಂಡಳಿಯನ್ನು ಸ್ಥಾಪಿಸಲಾಯಿತು. ಮಂದಿರದ ಭೂಮಿಪೂಜೆಯು 5 ಆಗಸ್ಟ್ 2020 ರಂದು ನಡೆಯಿತು ಮತ್ತು ಇದೀಗ ಯುಗಾಬ್ದ 5125 ಪುಷ್ಯ ಮಾಸ ಶುಕ್ಲ ಪಕ್ಷ ದ್ವಾದಶಿಯಂದು (22 ಜನವರಿ 2024), ಶ್ರೀ ಬಾಲರಾಮನ ಮೂರ್ತಿಯ ಪ್ರತಿಷ್ಠಾಪನಾ ಸಮಾರಂಭವನ್ನು ಆಯೋಜಿಸಲಾಗಿದೆ.


ಧಾರ್ಮಿಕ ದೃಷ್ಟಿಯಿಂದ ಶ್ರೀರಾಮ ಸಮಾಜದ ಬಹುಸಂಖ್ಯಾತರ ಆರಾಧ್ಯದೈವವಾಗಿದ್ದು, ಶ್ರೀರಾಮಚಂದ್ರನ ಬದುಕು ಇಂದಿಗೂ ಇಡೀ ಸಮಾಜ ಒಪ್ಪಿಕೊಂಡಿರುವ ಆದರ್ಶ. ಹೀಗಾಗಿ, ಸಣ್ಣಪುಟ್ಟ ವಿವಾದಗಳನ್ನಿಟ್ಟುಕೊಂಡು ಎದ್ದಿರುವ ಪರ-ವಿರೋಧಗಳನ್ನು ಕೂಡಲೇ ಅಂತ್ಯಗೊಳಿಸಬೇಕು. ಈ ಸಮಯದಲ್ಲಿ ಹುಟ್ಟಿರುವ ಕಹಿ ಭಾವನೆಗಳೂ ಕೊನೆಯಾಗಬೇಕು. ಸಮಾಜದ ಪ್ರಜ್ಞಾವಂತರು ವಿವಾದ ಸಂಪೂರ್ಣವಾಗಿ ಕೊನೆಗೊಳ್ಳುವಂತೆ ನೋಡಿಕೊಳ್ಳಬೇಕು. ಅಯೋಧ್ಯೆ ಎಂದರೆ ‘ಯುದ್ಧ ಇಲ್ಲದ ಸ್ಥಳ’, ‘ಸಂಘರ್ಷಮುಕ್ತ ಸ್ಥಳ’. ಆದ್ದರಿಂದ, ಇಡೀ ದೇಶದಲ್ಲಿ ಅಯೋಧ್ಯೆಯ ಮಂದಿರದ ಪುನರ್ನಿರ್ಮಾಣದ ವಿಚಾರವೇ ಎಲ್ಲರ ಮನಸ್ಸಿನಲ್ಲಿರುವುದು ಇಂದಿನ ಅಗತ್ಯವಾಗಿದೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಸಂದರ್ಭವು ರಾಷ್ಟ್ರೀಯ ಸ್ವಾಭಿಮಾನದ ಪುನರುಜ್ಜೀವನದ ಪ್ರತೀಕವಾಗಿದೆ. ಶ್ರೀರಾಮನ ಚಾರಿತ್ರ್ಯದ ಹಿಂದಿನ ಜೀವನದೃಷ್ಟಿಯನ್ನು ಆಧುನಿಕ ಭಾರತೀಯ ಸಮಾಜವು ಅಂಗೀಕರಿಸುತ್ತಿರುವುದರ ಸಂಕೇತವಾಗಿದೆ. ಶ್ರೀರಾಮನನ್ನು ಮಂದಿರದಲ್ಲಿ ‘ಪತ್ರಂ ಪುಷ್ಪಂ ಫಲಂ ತೋಯಂ’ (ಎಲೆ, ಹೂವು, ಹಣ್ಣು ಮತ್ತು ನೀರನ್ನು ಉಪಯೋಗಿಸಿ) ವಿಧಾನದಿಂದ ಪೂಜಿಸಲಾಗುತ್ತದೆ ಮತ್ತು ಅದೇ ಸಮಯದಲ್ಲಿ ನಮ್ಮ ಮನಮಂದಿರದಲ್ಲಿ ಶ್ರೀರಾಮನ ಚಿತ್ರವನ್ನು ಸ್ಥಾಪಿಸಿಕೊಂಡು, ಅದರ ಬೆಳಕಿನಲ್ಲಿ ಆದರ್ಶ ನಡವಳಿಕೆಯನ್ನು ನಮ್ಮದಾಗಿಸಿಕೊಳ್ಳುವ ಮೂಲಕ ಶ್ರೀರಾಮನ ಪೂಜೆಯನ್ನು ಮಾಡಬೇಕು. ಏಕೆಂದರೆ, “ಶಿವೋ ಭೂತ್ವಾ ಶಿವಂ ಭಜೇತ್; ರಾಮೋ ಭೂತ್ವಾ ರಾಮಮ್ ಭಜೇತ್” (ಶಿವವನ್ನು ಪೂಜಿಸಲು ಶಿವನೇ ಆಗಬೇಕು; ರಾಮನನ್ನು ಪೂಜಿಸಲು ರಾಮನೇ ಆಗಬೇಕು). ಇದನ್ನೇ ನಿಜವಾದ ಪೂಜೆ ಎಂದು ಕರೆಯಲಾಗುತ್ತದೆ.
ಈ ದೃಷ್ಟಿಯಿಂದ ವಿಚಾರ ಮಾಡಿದಾಗ, ಭಾರತೀಯ ಸಂಸ್ಕೃತಿಯ ಸಾಮಾಜಿಕ ಸ್ವರೂಪದ ಪ್ರಕಾರ “ಮಾತೃವತ್ ಪರದಾರೇಷು ಪರದ್ರವ್ಯೇಷು ಲೋಷ್ಟವತ್| ಆತ್ಮವತ್ ಸರ್ವಭೂತೇಷು, ಯಃ ಪಶ್ಯತಿ ಸ ಪಂಡಿತಃ||” (ಪರಸ್ತ್ರೀಯರನ್ನು ತಾಯಿಯಂತೆ ಕಾಣುವ, ಬೇರೆಯವರ ಸಂಪತ್ತನ್ನು ಮಣ್ಣಿನಂತೆ ಕಾಣುವ ಮತ್ತು ಇತರ ಎಲ್ಲರನ್ನೂ ತನ್ನಂತೆಯೇ ಕಾಣುವವನೇ ನಿಜವಾದ ಪಂಡಿತ). ಈ ರೀತಿಯಲ್ಲಿ ನಾವೂ ಶ್ರೀರಾಮನ ಆದರ್ಶವನ್ನು ಪಾಲಿಸಬೇಕು.
ಶ್ರೀರಾಮನ ಗುಣಗಳಾದ ಸತ್ಯಸಂಧತೆ, ಬಲ ಹಾಗೂ ಪರಾಕ್ರಮಗಳ ಜೊತೆಗೆ ಕ್ಷಮೆ, ಪ್ರಾಮಾಣಿಕತೆ ಹಾಗೂ ನಮ್ರತೆ, ಎಲ್ಲರೊಂದಿಗೆ ವ್ಯವಹರಿಸುವಲ್ಲಿ ಸಹಾನುಭೂತಿ, ಹೃದಯವಂತಿಕೆ ಮತ್ತು ಕರ್ತವ್ಯಪಾಲನೆಯಲ್ಲಿ ಸ್ವಂತದ ಮಟ್ಟಿಗೆ ಕಠೋರತೆ, ಇತ್ಯಾದಿಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮತ್ತು ತಮ್ಮ ಕುಟುಂಬಗಳಲ್ಲಿ ಅನುಸರಿಸುವಂತೆ ಆಗಬೇಕು. ಪ್ರಾಮಾಣಿಕತೆ, ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಪ್ರತಿಯೊಬ್ಬರ ಜೀವನದಲ್ಲೂ ಈ ಗುಣಗಳನ್ನು ತರಲು ಪ್ರಯತ್ನಿಸಬೇಕು.


ಅಲ್ಲದೆ, ರಾಷ್ಟ್ರೀಯ ಜೀವನವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಮಾಜಿಕ ಜೀವನದಲ್ಲಿ ಅನುಶಾಸನವನ್ನು ಕಾಪಾಡಿಕೊಳ್ಳಬೇಕು. ಶ್ರೀರಾಮ-ಲಕ್ಷ್ಮಣರು ತಮ್ಮ 14 ವರ್ಷಗಳ ವನವಾಸವನ್ನು ಪೂರ್ಣಗೊಳಿಸಿದ್ದು ಮತ್ತು ಬಲಿಷ್ಠ ರಾವಣನೊಂದಿಗೆ ಯಶಸ್ವಿ ಹೋರಾಟವನ್ನು ಮಾಡಿದ್ದು ಅದೇ ಅನುಶಾಸನದ ಬಲದಿಂದ ಎನ್ನುವುದು ನಮಗೆಲ್ಲರಿಗೂ ತಿಳಿದೇ ಇದೆ. ಶ್ರೀರಾಮನ ಚಾರಿತ್ರ್ಯದ ಮೂಲಕ ಪ್ರತಿಬಿಂಬಿತವಾಗುವ ನ್ಯಾಯ, ಕರುಣೆ, ಸದ್ಭಾವ, ನಿಷ್ಪಕ್ಷಪಾತ ದೃಷ್ಟಿ, ಸಾಮಾಜಿಕ ಸಾಮರಸ್ಯದೊಂದಿಗೆ ಸಮಾನತೆ ಮೊದಲಾದ ಸಾಮಾಜಿಕ ಮೌಲ್ಯಗಳು ಸಮಾಜದೆಲ್ಲೆಡೆ ಮತ್ತೊಮ್ಮೆ ವ್ಯಾಪಿಸಬೇಕು. ಶೋಷಣೆಯಿಂದ ಮುಕ್ತವಾದ, ಸಮಾನ ನ್ಯಾಯವನ್ನು ಆಧರಿಸಿರುವ, ಬಲದ ಜೊತೆಜೊತೆಗೆ ಕರುಣೆಯಿಂದಲೂ ಕೂಡಿರುವ ಧೈರ್ಯವಂತ ಸಮಾಜವು ನಿರ್ಮಾಣಗೊಳ್ಳಬೇಕು. ಇದೇ ಶ್ರೀರಾಮನ ಪೂಜೆಯಾಗಲಿದೆ.

ಅಹಂಕಾರ, ಸ್ವಾರ್ಥ ಮತ್ತು ಭೇದಭಾವದಿಂದಾಗಿ ಈ ಪ್ರಪಂಚವು ವಿನಾಶದ ಉನ್ಮಾದದಲ್ಲಿದೆ ಮತ್ತು ಅಂತ್ಯವಿಲ್ಲದ ವಿಪತ್ತುಗಳನ್ನು ತನ್ನ ಮೇಲೆ ತಂದುಕೊಳ್ಳುತ್ತಿದೆ. ಸದ್ಭಾವ, ಏಕತೆ, ಪ್ರಗತಿ ಮತ್ತು ಶಾಂತಿಯ ಮಾರ್ಗವನ್ನು ತೋರಿಸುವ ಜಗದಭಿರಾಮವಾದ ಭಾರತವನ್ನು ಪುನರ್ನಿರ್ಮಿಸುವ ಸರ್ವಕಲ್ಯಾಣಕಾರಿಯಾದ ಹಾಗೂ ‘ಸರ್ವೇಷಾಂ ಅವಿರೋಧಿ’ಯಾದ ಅಭಿಯಾನವು ಜನ್ಮಭೂಮಿಗೆ ಶ್ರೀ ಬಾಲರಾಮನ ಪ್ರವೇಶ ಮತ್ತು ಆತನ ಪ್ರಾಣಪ್ರತಿಷ್ಠೆಯೊಂದಿಗೆ ಪ್ರಾರಂಭವಾಗಲಿದೆ. ನಾವು ಈ ಅಭಿಯಾನದ ಸಕ್ರಿಯ ಕಾರ್ಯಾನ್ವಯಕಾರರು. ನಾವೆಲ್ಲರೂ ಜನವರಿ 22ರ ಭಕ್ತಿಮಯ ಉತ್ಸವದ ಈ ಶುಭಸಂದರ್ಭದಲ್ಲಿ, ಮಂದಿರದ ಪುನರ್ನಿರ್ಮಾಣದ ಜೊತೆಜೊತೆಗೆ, ಭಾರತ ಹಾಗೂ ಆ ಮೂಲಕ ಇಡೀ ವಿಶ್ವದ ಪುನರ್ನಿರ್ಮಾಣವನ್ನು ಪೂರ್ಣಗೊಳಿಸಲು ನಾವೆಲ್ಲರೂ ಸಂಕಲ್ಪ ಮಾಡಿದ್ದೇವೆ. ಬನ್ನಿ, ಈ ಭಾವನೆಯೊಂದಿಗೆ ಮುಂದೆ ಸಾಗೋಣ.
ಜಯ್ ಶ್ರೀರಾಮ್

ಲೇಖಕರು: ಡಾ. ಮೋಹನ್ ಭಾಗವತ್
(ಸರಸಂಘಚಾಲಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ)
(ಮೂಲ ಮರಾಠಿಯಿಂದ ಅನುವಾದ)

21-01-2024

Leave a Reply

Your email address will not be published.

This site uses Akismet to reduce spam. Learn how your comment data is processed.