ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಕ್ರಿಯಾತ್ಮಕ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸ್ವತಂತ್ರ ಭಾರತದ ಉಪ ಪ್ರಧಾನಮಂತ್ರಿಯಾಗಿ, ಗೃಹಮಂತ್ರಿ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಭಾರತ ಸ್ವಾತಂತ್ರ್ಯವನ್ನು ಪಡೆದ ಸಂದರ್ಭದಲ್ಲಿ ಇದ್ದ 550ಕ್ಕೂ ಹೆಚ್ಚು ಪ್ರಾಂತ್ಯಗಳನ್ನು ಒಗ್ಗೂಡಿಸಿದ ಶ್ರೇಷ್ಠ ರಾಜತಾಂತ್ರಿಕ. ಇಂದು ಅವರ ಪುಣ್ಮಸ್ಮರಣೆ  

ಆರಂಭಿಕ ಜೀವನ

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅಕ್ಟೋಬರ್ 31, 1875ರಂದು ಗುಜರಾತಿನ ನಾಡಿಯಾಡ್ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಹೆಸರು ಝವೇರಭಾಯ್ ಪಟೇಲ್ ಹಾಗೂ ತಾಯಿ ಲಾಡಬಾಯಿ. ಸರ್ದಾರರ ತಂದೆ ಅವರು ಝಾನ್ಸಿ ರಾಣಿಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು. ಅವರ ತಾಯಿ ಆಧ್ಯಾತ್ಮದ ಕಡೆಗೆ ಒಲವು ತೋರಿದವರು. ‘ಸರ್ದಾರ್’ ಎಂಬ ಬಿರುದು ನಂತರದ ದಿನಗಳಲ್ಲಿ ಅವರಿಗೆ ದೊರೆಯಿತಾದರೂ ಆ ಬಿರುದಿಗೆ ತಕ್ಕಂತ ಧೈರ್ಯಶಾಲಿ ವ್ಯಕ್ತಿತ್ವ ಪಟೇಲ್ ಅವರಿಗೆ ಬಾಲ್ಯದಿಂದಲೇ ರೂಪುಗೊಂಡಿತ್ತು.

ಮೆಟ್ರಿಕ್ಯುಲೇಷನ್ ಮುಗಿದ ನಂತರ ಸರ್ದಾರ್ ಪಟೇಲ್ ಅವರು ಕಾನೂನು ಅಧ್ಯಯನ ನಡೆಸಿದದರು, ನಂತರ ಬ್ಯಾರಿಸ್ಟರ್ ಆಗಲು ಇಂಗ್ಲೆಂಡಿಗೆ ಪ್ರಯಾಣಿಸಿದರು. ನಂತರ ಭಾರತಕ್ಕೆ ಮರಳಿದ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ವಕೀಲ ವೃತ್ತಿಯನ್ನು ಮುಂದುವರಿಸಿದ್ದರು.

 ಭಾರತದ ಸ್ವಾತಂತ್ರ್ಯ ಚಳುವಳಿಗೆ ಸರ್ದಾರ್ ಕೊಡುಗೆ

ಅಕ್ಟೋಬರ್ 1917ರಲ್ಲಿ ಮಹಾತ್ಮ ಗಾಂಧಿಯವರೊಂದಿಗಿನ ಭೇಟಿಯು ಅವರನ್ನು ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಹತ್ತಿರ ತಂದಿತು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. 1920ರಲ್ಲಿ ಗುಜರಾತ್ ಪ್ರದೇಶ ಕಾಂಗ್ರೆಸ್ ಕಮಿಟಿಯಾಗಿ ಬದಲಾವಣೆಗೊಂಡಿತು. ಅದರ ಅಧ್ಯಕ್ಷರಾಗಿ ಪಟೇಲ್ ನೇಮಕಗೊಂಡರು. ಬ್ರಿಟಿಷರ ದೌರ್ಜನ್ಯಗಳ ವಿರುದ್ಧ ಗುಜರಾತ್ ನಲ್ಲಿ ಸತ್ಯಾಗ್ರಹಗಳನ್ನು ಪ್ರಾರಂಭಿಸಿದರು.

ಇನ್ನು 1920ರಲ್ಲಿ ಸರ್ದಾರ್ ಪಟೇಲ್ ಅವರು ಗಾಂಧೀಜಿ ಅವರ ಅಸಹಕಾರ ಚಳುವಳಿಗೆ ಸೇರಿದ್ದರು. ಹಾಗೆ 3,00,000 ಸದಸ್ಯರನ್ನು ಅಸಹಕಾರ ಚಳುವಳಿಗೆ ಜೋಡಿಸಲು ಪಶ್ಚಿಮ ಭಾರತದಾದ್ಯಂತ ಪ್ರಯಾಣಿಸಿದರು. ಅವರು ಪಕ್ಷದ ನಿಧಿಗಾಗಿ 1.5 ಮಿಲಿಯನ್‌ಗಿಂತಲೂ ಹೆಚ್ಚು ಹಣವನ್ನು ಸಂಗ್ರಹಿಸಿದರು

ಭಾರತೀಯ ಧ್ವಜವನ್ನು ಹಾರಿಸುವುದನ್ನು ನಿಷೇಧಿಸುವ ಬ್ರಿಟಿಷ್ ಕಾನೂನು ಇತ್ತು. ಮಹಾತ್ಮ ಗಾಂಧೀಜಿ ಜೈಲಿನಲ್ಲಿದ್ದಾಗ 1923ರಲ್ಲಿ ಬ್ರಿಟಿಷರ ಕಾನೂನಿಗೆ ವಿರುದ್ಧವಾಗಿ ಸರ್ದಾರ್ ಪಟೇಲ್ ಅವರು ನಾಗಪುರದಲ್ಲಿ ಸತ್ಯಾಗ್ರಹ ಚಳುವಳಿ ಉಸ್ತುವಾರಿ ವಹಿಸಿಕೊಂಡಿದ್ದರು.  1928ರಲ್ಲಿ ಬಾರ್ಡೋಲಿ ಸತ್ಯಾಗ್ರಹ ನಡೆಸಿದ್ದು, ಅಲ್ಲಿ ಅವರಿಗೆ ಅವರ ನಾಯಕತ್ವದ ಕಾರಣಕ್ಕೆ ಸರ್ದಾರ್ ಎಂಬ ಬಿರುದು ನೀಡಲಾಯಿತು.

ಸ್ವಾತಂತ್ರ್ಯ ಹೋರಾಟದ ಜೊತೆಜೊತೆಗೆ ಸಾಮಾಜಿಕ ಪರಿವರ್ತನೆಯಲ್ಲೂ ಶ್ರಮಿಸಿದ ನಾಯಕ ಸರ್ದಾರ್ ಪಟೇಲರು. ಮದ್ಯಪಾನ ನಿಷೇಧ, ಅಸ್ಪೃಶ್ಯತೆ, ಜಾತಿ ತಾರತಮ್ಯದ ವಿರುದ್ಧ ಹೋರಾಟ, ಗುಜರಾತ್ ಮತ್ತು ಹೊರಗೆ ಮಹಿಳಾ ಶೋಷಣೆಯ ವಿಮೋಚನೆಗಾಗಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.

ಇನ್ನು ಭಾರತ ಸ್ವಾತಂತ್ರ್ಯ ಚಳುವಳಿ ಸಮಯದಲ್ಲಿ ಜನರನ್ನು ಒಟ್ಟುಗೂಡಿಸುವಲ್ಲಿ ಸರ್ದಾರ್ ಪಟೇಲ್ ಅವರ ಪಾತ್ರ ಪ್ರಮುಖವಾಗಿತ್ತು.  ಈ ವೇಳೆ ಸರ್ದಾರ ವಲ್ಲಭಭಾಯಿ ಪಟೇಲ್ ಅನೇಕ ಬಾರಿ ಜೈಲು ಸೇರಿದ್ದರು. ಬ್ರಿಟಿಷರನ್ನು ಭಾರತದಿಂದ  ಹೊರಹಾಕುವುದು ಅವರ ಉದ್ದೇಶವಾಗಿತ್ತು.

ಭಾರತದ ಸ್ವಾತಂತ್ರ್ಯದ ನಂತರದ ಜೀವನ

ಸ್ವಾತಂತ್ರ್ಯದ ನಂತರ ಭಾರತದ ಮೊದಲ ಗೃಹ ಸಚಿವರಾಗಿ ಉಪಪ್ರಧಾನಿಯೂ ಆಗಿ ನೇಮಕಗೊಂಡಿದ್ದರು. ಅಲ್ಲದೇ ಏಕಕಾಲದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್ ಇನ್ ಚೀಫ್  ಆಗಿಯೂ  ಆಯ್ಕೆಗೊಂಡಿದ್ದರು.ಭಾರತದ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 550ಕ್ಕೂ ಹೆಚ್ಚು ಪ್ರಾಂತ್ಯಗಳನ್ನು ಕೇವಲ ಒಂದೂವರೆ ತಿಂಗಳ ಸಮಯದಲ್ಲಿ ಒಗ್ಗೂಡಿಸುವಲ್ಲಿ ಅವರ ಧೀಮಂತ ವ್ಯಕ್ತಿತ್ವ ಗುರುತರವಾದ ಕಾರ್ಯನಿರ್ವಹಿಸಿತ್ತು. ಕಾಶ್ಮೀರ, ಜುನಾಗಢ, ಹೈದರಾಬಾದ್ ಪ್ರಾಂತ್ಯಗಳು ಒಪ್ಪದಿದ್ದಾಗ ಅವುಗಳನ್ನು ಭಾರತದ ಭಾಗವಾಗಿಸುವಲ್ಲಿ ಸರ್ದಾರ್ ಪಟೇಲರ ನಾಯಕತ್ವ ಗಮನಾರ್ಹವಾದದ್ದು.

ಸರ್ದಾರ್ ವಲ್ಲಭಭಾಯ್ ಪಟೇಲ್ ವಿಶೇಷತೆಗಳು

ಪಟೇಲ್ ಅವರ ಸಂಸ್ಮರಣೆಯ ಸಲುವಾಗಿ ಕೇಂದ್ರ ಸರ್ಕಾರವು 2014ರಲ್ಲಿ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿವಸ್ ಎಂದು ಘೋಷಿಸಿತ್ತು. ಇನ್ನು ಅಕ್ಟೋಬರ್ 31, 2018 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನರ್ಮದಾ ನದಿಯ ದಡದಲ್ಲಿ ಸರ್ದಾರ ಪಟೇಲ್ ಏಕತಾ ಪ್ರತಿಮೆಯನ್ನು ಉದ್ಘಾಟಿಸಿದರು. ಸುಮಾರು 182 ಮೀಟರ್ ಎತ್ತರವಿರುವ ಪ್ರತಿಮೆ ಇದಾಗಿದ್ದು, ಇದು ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಗೌರವ – ಪ್ರಶಸ್ತಿಗಳು:

ತಮ್ಮ ನಾಯಕತ್ವದ ಶೈಲಿಯ ಕಾರಣಕ್ಕೆ ಗುಜರಾತಿನ ಜನರಿಂದ ಗೌರವಾರ್ಥ ‘ಸರ್ದಾರ್’ ಎಂಬ ಬಿರುದು ಪಡೆದರು. ಭಾರತದಲ್ಲಿದ್ದ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ‘ಉಕ್ಕಿನ ಮನುಷ್ಯ’ ಎಂದೇ ಕರೆಯಲ್ಪಡುತ್ತಾರೆ. ರತ್ನದಂತಹ ವ್ಯಕ್ತಿತ್ವವನ್ನು ಒಳಗೊಂಡಿದ್ದ ಸರ್ದಾರ್ ಪಟೇಲರು ಈ ರಾಷ್ಟ್ರಕ್ಕಾಗಿ ನೀಡಿದ ಕೊಡುಗೆಯ ಕಾರಣಕ್ಕೆ 1991 ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

1950ರ ಡಿಸೆಂಬರ್ 15 ರಂದು ಮುಂಬೈನಲ್ಲಿ ಸರ್ದಾರ ವಲ್ಲಭಬಾಯಿ ಪಟೇಲ್ ಅವರು ನಿಧನರಾದರು. ಪಟೇಲ್ ಅವರು ನಿಸ್ವಾರ್ಥ ನಾಯಕರಾಗಿದ್ದು, ಅವರಿಗೆ ರಾ಼ಷ್ಟ್ರದ ಹಿತಾಸಕ್ತಿ ಪ್ರಥಮ ಆದ್ಯತೆಯಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಏಕ ಮನಸ್ಸಿನ ಭಕ್ತಿಯಿಂದ ಭಾರತದ ಭವಿಷ್ಯವನ್ನು ಸುಂದರವಾಗಿ ರೂಪಿಸಲು ಶ್ರಮವಹಿಸಿದವರು. ಪಟೇಲರ ನಾಯಕತ್ವ, ದೂರದೃಷ್ಟಿ, ರಾಷ್ಟ್ರಮೊದಲು ಎಂಬ ಭಾವನೇ ಪ್ರತಿ ಪ್ರಜೆಗೂ ಆದರ್ಶ.

Leave a Reply

Your email address will not be published.

This site uses Akismet to reduce spam. Learn how your comment data is processed.