ಇಂದು ಜಯಂತಿ

ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿ ಅವರು ಭಾರತೀಯ ಆಧ್ಯಾತ್ಮಿಕ ಪರಂಪರೆಯ ಪ್ರಮುಖ ಸಂತರು. ಸಿದ್ದಗಂಗಾ ಮಠದ ಮಠಾಧಿಪತಿಗಳಾಗಿದ್ದವರು. ಸ್ವಾಮೀಜಿಗಳು ಬಡ ಕುಟುಂಬದ ಮಕ್ಕಳ ಬಾಳಿಗೆ ದಾರಿದೀಪವಾಗಿದ್ದರು. ತ್ರಿವಿಧ ದಾಸೋಹಿ ಎಂದೇ ಭಕ್ತರ ಮನದಲ್ಲಿ ಉಳಿದುಕೊಂಡಿರುವ ಸ್ವಾಮೀಜಿಯವರ  ಜಯಂತಿ ಇಂದು.


ಪರಿಚಯ
ಶಿವಕುಮಾರ ಸ್ವಾಮೀಜಿ ಏಪ್ರಿಲ್‌ 1, 1908 ರಂದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಹೋಬಳಿ ವೀರಾಪುರ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಹೊನ್ನಪ್ಪ ಮತ್ತು ತಾಯಿ ಗಂಗಮ್ಮ. ಇವರು ಪ್ರಾಥಮಿಕ ಶಿಕ್ಷಣವನ್ನು ವೀರಾಪುರ ಎಂಬಲ್ಲಿ ಮುಗಿಸಿದರು.ನಂತರ ಅವರು ಪ್ರೌಢಶಿಕ್ಷಣವನ್ನು ತುಮಕೂರಿನ ಸರ್ಕಾರಿ ಶಾಲೆಯಲ್ಲಿ ಮುಗಿಸಿದರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದರು. ಶ್ರೀಗಳು ಆಂಗ್ಲಭಾಷೆ ಮತ್ತು ಸಂಸ್ಕೃತ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು.

ತಮ್ಮ ವಿದ್ಯಾಭ್ಯಾಸದೊಂದ ಸಮಯದಲ್ಲಿ ಶಿವಕುಮಾರ ಸ್ವಾಮೀಜಿಗಳು ಸಿದ್ದಗಂಗಾ ಮಠದ ಒಡನಾಟದಲ್ಲಿದ್ದರು. ಹಿರಿಯ ಗುರುಗಳಾದ ಶ್ರೀ ಉದ್ಧಾನ ಸ್ವಾಮೀಜಿ ಹಾಗೂ ಆಗ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಸಂಗ ಶಿವಣ್ಣನವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. 1930 ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾದರು. ಆಗ ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣನರನ್ನು ಉದ್ಧಾನ ಸ್ವಾಮೀಜಿಗಳು ಎಲ್ಲರ ಸಮ್ಮುಖದಲ್ಲಿ ಮಠದ ಉತ್ತರಾಧಿಕಾರಿ ಎಂದು ಘೋಷಿಸಿದರು. ನಂತರ  ಸನ್ಯಾಸತ್ವ ಸ್ವೀಕಾರದ ಸ್ವಾಮೀಜಿ ವಿದ್ಯಾಭ್ಯಾಸ ಮುಗಿಸಿ ಸಿದ್ದಗಂಗಾ ಮಠಕ್ಕೆ ವಾಪಸ್‌ ಆದರು. ಅಂದಿನಿಂದ ತಮ್ಮ ಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಶ್ರಮವಹಿಸಿದ್ದರು. ಉದ್ಧಾನ ಶಿವಯೋಗಿಗಳು ಶಿವೈಕ್ಯರಾದಾಗ ಮಠದ ಸಕಲ ಆಡಳಿತ, ಮಠದ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಯೋಗ ಕ್ಷೇಮದ ಜವಾಬ್ದಾರಿಯೂ ಶಿವಕುಮಾರ ಸ್ವಾಮೀಜಿ ವಹಿಸಿದ್ದರು.

ಸಾಮಾಜಿಕ ಕಾರ್ಯಗಳು


ಶಿವಕುಮಾರ ಸ್ವಾಮೀಜಿ ಅವರು ಶಿಕ್ಷಣ ಮತ್ತು ತರಬೇತಿಗಾಗಿ ಒಟ್ಟು 132 ಸಂಸ್ಥೆಗಳನ್ನು ಸ್ಥಾಪಿಸಿದರು. ಅವರು ಸಂಸ್ಕೃತದ ಸಾಂಪ್ರದಾಯಿಕ ಕಲಿಕೆಯಲ್ಲಿ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದರು ಶ್ರೀ ಸಿದ್ಧಗಂಗಾ ಮಠವು ಒಂದು ವಿಶಿಷ್ಟ ಗುರುಕುಲವಾಗಿದ್ದು, 10,000 ಕ್ಕೂ ಹೆಚ್ಚು ಬಡ ಮಕ್ಕಳಿಗೆ ಯಾವುದೇ ಜಾತಿ, ಧರ್ಮದ ತಾರತಮ್ಯವಿಲ್ಲದೆ ಉಚಿತ ಆಹಾರ ಮತ್ತು ಆಶ್ರಯದೊಂದಿಗೆ ಶಿಕ್ಷಣವನ್ನು ನೀಡುತ್ತಿದೆ. ಮಠವು ವಿವಿಧ ಸ್ಥಳಗಳಲ್ಲಿ ಅಂಧರ ಶಾಲೆಗಳನ್ನು ಸಹ ನಡೆಸುತ್ತಿದೆ. ಜೊತೆಗೆ 100 ಕ್ಕೂ ಹೆಚ್ಚು ಅಂಧ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಹಾಸ್ಟೆಲ್ ಸೌಲಭ್ಯಗಳೊಂದಿಗೆ ಆಹಾರವನ್ನು ನೀಡಲಾಗುತ್ತದೆ.


ಪ್ರಶಸ್ತಿ
1965 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ. ಶ್ರೀಗಳ ಸಮಾಜ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2015ರಲ್ಲಿ ಭಾರತ ಸರ್ಕಾರದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.
ಶಿವಕುಮಾರ ಸ್ವಾಮೀಜಿಗಳು ಜನವರಿ 21, 2019 ರಂದು ತಮ್ಮ 111 ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.